2018ಕ್ಕೆ ಕರ್ನಾಟಕ ಬಯಲು ಬಹಿರ್ದೆಸೆಮುಕ್ತ : ಎಚ್.ಕೆ. ಪಾಟೀಲ್‍

ಬೆಂಗಳೂರು - 0 Comment
Issue Date : 26.11.2014

ಬೆಂಗಳೂರು: 2018ರ ಅಂತ್ಯಕ್ಕೆ ಕರ್ನಾಟಕ ಬಯಲು ಬಹಿರ್ದೆಸೆಮುಕ್ತವಾಗಲಿದೆ. 2015ರ ಜನವರಿ 26ರಂದು ಉಡುಪಿಯನ್ನು ಬಯಲು ಬಹಿರ್ದೆಸೆಮುಕ್ತ ಜಿಲ್ಲೆಯಾಗಿ ಘೋಷಿಸಲಾಗುವುದು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ನ. 19ರಂದು ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ, ಸಿಡಿಎಲ್ ಫೌಂಡೇಷನ್ ಮತ್ತು ಯುನಿಸೆಫ್ ಆಯೋಜಿಸಿದ್ದ ‘ವಿಶ್ವ ಶೌಚಾಯಲ ದಿನಾಚರಣೆ ಮತ್ತು ಮಾಧ್ಯಮ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
ಎಲ್ಲರೂ ಶೌಚಾಲಯದ ಬಗ್ಗೆ ಮಾತ್ರ ಗಮನಹರಿಸಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಬಚ್ಚಲ ಮನೆ ಇಲ್ಲದೆ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ಕಡೆ ರಾತ್ರಿ ಹೊತ್ತು ಚಕ್ಕಡಿ ಸುತ್ತ ಬಟ್ಟೆ ಮರೆ ಮಾಡಿ ಅದನ್ನೇ ಬಚ್ಚಲು ಮನೆಯಾಗಿ ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ವರ್ಷ ಸ್ನಾನಗೃಹ ಸಹಿತ ಶೌಚಾಲಯ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ ಎಂದರು. ಇದಕ್ಕಾಗಿ ಮುಂದಿನ ಬಜೆಟ್‌ನಲ್ಲಿ ‘ಗೌರವ ಯೋಜನೆ’ಯಡಿ ಸ್ನಾನಗೃಹ ನಿರ್ಮಾಣಕ್ಕೆ 1 ಲಕ್ಷ 50 ಸಾವಿರ ಮತ್ತು ಸಾರ್ವಜನಿಕ ಶೌಚಾಲಯ ಸಂಕೀರ್ಣ ನಿರ್ಮಿಸಲು 20 ಲಕ್ಷದವರೆಗೆ ಅನುದಾನ ಘೋಷಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಿಡಿಎಲ್ ಫೌಂಡೇಷನ್ ನಿರ್ದೇಶಕಿ ಶಾಂಗೋನ್‌ದಾಸ್ ಗುಪ್ತಾ, ಸಿಡಿಎಲ್ ಉಪನಿರ್ದೇಶಕಿ ಹೇಮಾಪ್ರಸನ್ನ, ಯುನಿಸೆಫ್ ಮುಖ್ಯಸ್ಥೆ ರೂತ್‌ಲಾಸ್ಕನೋ ಲಿನೋ, ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್, ಹಿರಿಯ ಪತ್ರಕರ್ತರಾದ ದು.ಗು. ಲಕ್ಷ್ಮಣ, ಈಶ್ವರ ದೈತೋಟ ಉಪಸ್ಥಿತರಿದ್ದರು. ಮಾಧ್ಯಮಗಳು ಸ್ವಚ್ಛ ಭಾರತ ನಿರ್ಮಾಣ ಯೋಜನೆಗೆ ಹೇಗೆ ಸಹಕರಿಸಬಹುದೆಂದು ಕಾರ್ಯಕ್ರಮದಲ್ಲಿ ಮಾತನಾಡಿದ ದು.ಗು.ಲಕ್ಷ್ಮಣ ಹಾಗೂ ಈಶ್ವರ ದೈತೋಟ ಅವರು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದರು.

   

Leave a Reply