ಹನಿಹನಿಗೂಡಿದರೆ ಹಳ್ಳ

ಗ್ರಾಮೀಣ - 0 Comment
Issue Date : 03.12.2013

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮುಕ್ತಿ ಹರಿಹರಪುರ ಗ್ರಾಮದಲ್ಲಿ ಕೃಷಿಯನ್ನೇ ಅವಲಂಬಿಸಿರುವ ಹೆಚ್ಚಿನ ಜನ ಸರ್ಕಾರದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನಗಳಿಗೆ ಆಕರ್ಷಣೆಗೊಳಗಾಗದೆ ಸುತ್ತಲಿನ 25 ಹಳ್ಳಿಗಳು ಒಟ್ಟುಗೂಡಿ ತಮ್ಮ ಶಕ್ತ್ಯಾನುಸಾರ ಸ್ವಯಂ ಗ್ರಾಮೀಣಾಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ.  ತಾವು ಉಳಿಸಿರುವ ಒಂದು ರೂಪಾಯಿಗಳಿಂದಲೇ ಅಭಿವೃದ್ಧಿ ಕೈಗೊಂಡು, ವಿವಿದೋದ್ದೇಶ ಸಹಕಾರಿ ಸಂಘ ಸ್ಥಾಪಿಸಿ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ.

ಹನಿಹನಿಗೂಡಿದರೆ ಹಳ್ಳ ಎಂಬ ಗಾದೆಯನ್ನು ಸಾಬೀತುಪಡಿಸಿ ತೋರಿಸಿರುವ ಈ ಗ್ರಾಮದ ಜನತೆ ದಿನಂಪ್ರತಿ ತಾವು ದುಡಿದಿದ್ದರಲ್ಲಿ ಒಂದು ರೂಪಾಯಿ ಉಳಿತಾಯದ ಹಣದಲ್ಲಿ ರಂಗಮಂದಿರ ನಿರ್ಮಿಸಿದ್ದಾರೆ. ಗ್ರಾಮಸ್ಥರೇ  ಗಾರೆ ಕೆಲಸ, ಪೇಂಟಿಂಗ್, ಮರದ ಕೆಲಸ ಕಬ್ಬಿಣದ ಕೆಲಸ ಮಾಡಿ ರಂಗಮಂದಿರ ನಿರ್ಮಾಣಮಾಡಿದ್ದಾರೆ.  ಆಧುನಿಕ ಭರಾಟೆಯಲ್ಲಿ ಅವಸಾನದ ಹಾದಿ ಹಿಡಿದಿರುವ ಕಂಸಾಳೆ, ಭೂತಕೋಲ, ಯಕ್ಷಗಾನ, ತಾಳಮದ್ದಲೆ, ಜಾನಪದ ನೃತ್ಯಗಳಿಗೆ ಈ ರಂಗಮಂದಿರ  ವೇದಿಕೆಯಾಗಿದೆ.

ಉಳಿತಾಯ ಹಣದಿಂದ ಗ್ರಂಥಾಲಯ ಸಹ ಸ್ಥಾಪನೆಗೊಂಡಿದ್ದು, ಇದರಿಂದ ಗ್ರಾಮದ ಮಕ್ಕಳಲ್ಲಿ   ಓದುವ ಹವ್ಯಾಸ ಬೆಳೆಸುವಂತಾಗಿದೆ. ಇಲ್ಲಿ ಹಲವು ಪ್ರಸಿದ್ಧ ಲೇಖಕರ ಕೃತಿಗಳಲ್ಲದೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಪುಸ್ತಕಗಳು ಲಭ್ಯವಿದೆ.  ಬಡ ವಿದ್ಯಾರ್ಥಿಗಳಿಗೆ ಅನಾಥಾಶ್ರಮಗಳಿಗೆ ಇದೇ ಉಳಿತಾಯದ ಹಣದಲ್ಲಿ ಧನಸಾಹಯ ನೀಡಲಾಗುತ್ತಿದೆ.  ಸಂಘದ ಸದಸ್ಯರು ಅನಾರೋಗ್ಯ, ಅಪಘಾತಗಳಿಗೀಡಾದರೂ ಇದೇ ಹಣದಲ್ಲಿ ಸಹಾಯ ನೀಡಲಾಗುವುದು.  ಗ್ರಾಮದ ಬಸ್ ನಿಲ್ದಾಣ, ಚರಂಡಿ, ರಸ್ತೆ ದುರಸ್ತಿಗಾಗಿಯೂ ಇದೇ ಹಣವನ್ನು ವಿನಿಯೋಗಿಸಿ ಗ್ರಾಮದ ಅಭಿವೃದ್ಧಿ ಮಾಡಿದ್ದಾರೆ ಗ್ರಾಮಸ್ಥರು.

ಸಂಘ ಪ್ರಾರಂಭಗೊಂಡಾಗಿನಿಂದಲೂ ಇಡೀ ಗ್ರಾಮದ ವಾಸಿಗಳು ಒಂದೇ ಕುಟುಂಬದವರಂತೆ ವಾಸಿಸುತ್ತಿದ್ದು, ಯಾವುದೇ ಸಮಸ್ಯೆಯನ್ನು ವಿಚಾರ ಮಿನಿಮಯ ಮಾಡಿಕೊಳ್ಳುವ ಮೂಲಕ ಬಗೆಹರಿಸಿಕೊಳ್ಳುತ್ತಿದ್ದಾರೆ.

   

Leave a Reply