ಆಗಮ

ಚಿಂತನ - 0 Comment
Issue Date : 07.08.2014

‘ಅಸಮಂತಾತ್ ಗಮಯತಿ ಇತಿ ಆಗಮಃ’ – ಎಂಬುದು ಆಗಮ ಶಬ್ದದ ನಿಷ್ಪತ್ತಿ. ಸರ್ವವ್ಯಾಪಿ – ಸರ್ವಸ್ಪರ್ಶಿ – ಸರ್ವಶಕ್ತ ಎನಿಸಿದ ‘ಪರಮಾತ್ಮ ತತ್ತ್ವ’ದ ವಿಚಾರವನ್ನು ಅನುಷ್ಠಾನಕ್ಕೆ ತರಲು ಯೋಗ್ಯ ಮಾತ್ರವಲ್ಲ ಅನುಕೂಲವೂ ಆದ ವಿಚಾರಧಾರೆ ಇದು. ಆಗಮ ಎಂದರೆ ಬಂದದ್ದು, ಹಿಂದಿನಿಂದ ಬಂದದ್ದು. ಪರಂಪರೆಯಿಂದ ಬಂದದ್ದು ಎಂಬುದು ಸ್ಥೂಲಾರ್ಥ.

ನಂಬಿಕೆಗೆ ವಿಶ್ವಾಸಕ್ಕೆ ಯೋಗ್ಯ – ಆಪ್ತ ವ್ಯಕ್ತಿಯು ತಾನು ‘ಸಾಧನೆ’ಯಿಂದ ಸಾಕ್ಷಾತ್ಕಾರ ಮಾಡಿಕೊಂಡ ‘ಸತ್ಯ’ವನ್ನು ‘ಪ್ರಕಟಿಸುವನು’ ಇದು ವೇದ ಸತ್ಯ – ಜ್ಞಾನ. ಇದನ್ನು ಆಲಿಸಿದವನ ಮನದಲ್ಲಿ ಮೂಡಿದ ಭಾವ ಆಗಮ ಪ್ರಮಾಣ ಎಂದು ಯೋಗ ಶಾಸ್ತ್ರದ ವರ್ಣನೆ. ತರ್ಕದಿಂದ ವಿರೋಧಿಸಲಾಗದ ಮಾತ್ರವಲ್ಲ ವಿರೋಧಿಸಬಾರದ ಸತ್ಯ ಇದು. ಗುರು ಶಿಷ್ಯ ಪರಂಪರೆಯಿಂದ ಪರಂಪರಾಗತವಾಗಿ ಹರಿದು ಬಂದಿದೆ. ಸದಾ ಸರ್ವದಾ ಹರಿಯುತ್ತಲೇ ಇರುವ ತ್ರಿಕಾಲಾತೀತವಾದ ಈ ಸತ್ಯ ಸರ್ವರ ಉದ್ಧಾರಕ ಶಕ್ತಿ.

ಸ್ವತಃ ಭಗವಂತನ ಮುಖದಿಂದಲೇ ಬಂದ ಈ ಸತ್ಯ ಆಗಮಶಾಸ್ತ್ರ ಎನಿಸಿದೆ. ವೇದ ಉಪನಿಷತ್ತು ಮತ್ತು ಶಾಸ್ತ್ರಗಳಲ್ಲಿ ವಿವರಿಸಿರುವ ಆಧ್ಯಾತ್ಮಿಕ ಧಾರ್ಮಿಕ ಸತ್ಯಗಳನ್ನು ನಮ್ಮ ನಿಜ ಬದುಕಿನಲ್ಲಿ ಅನುಷ್ಠಾನದ ಮೂಲಕ ಸಾಧಿಸುವ ದಾರಿಗಳನ್ನು ಹೇಳುವುದು ಇದರ ಮೂಲ ಉದ್ದೇಶ.

ಸಕಲ ಗುಣ ಪರಿಪೂರ್ಣ, ಸಕಲ ಶಕ್ತಿ ಸೌಭಾಗ್ಯ ಸಂಪನ್ನ ಹಾಗೂ ಸಕಲ ಸುಖೋಪಭೋಗದ ಅಧಿಪತಿಯಾದ ಭಗವಂತನನ್ನು ಉಪಾಸನೆ ಮಾಡಬೇಕಲ್ಲವೇ? ಇದಿಷ್ಟೂ ನಮ್ಮ ತೃಪ್ತಿಗಾಗಿ ಮಾತ್ರ. ಏಕೆಂದರೆ ಅವನಿಗೆ ಯಾವುದೂ ಬೇಡ. ಎಲ್ಲವೂ ಅವನೇ! ಎಲ್ಲವೂ ಅವನೊಳಗೇ ಇದೆ. ಅವನ ಆಣತಿಯಿಲ್ಲದೇ ಏನೂ ನಡೆಯದು. ಹಾಗೆಂದಾಕ್ಷಣ ಕೆಟ್ಟದ್ದು ಆಗುತ್ತದಲ್ಲ ಅದೂ ಆತನ ಆಣತಿಯೇ ಎಂದು ಕುಹಕದ ಪ್ರಶ್ನೆ ಕೇಳುವವರಿಗೆ ಉತ್ತರ ಬೆಟ್ಟದ ತಪ್ಪಲಿನಲ್ಲಿ ನಿಂತು ನಾವು ಆಡಿದ ಮಾತಿನಂತೆಯೇ ಪ್ರತಿಧ್ವನಿ ಬರುವುದಲ್ಲವೇ ಎಂಬುದಾಗಿದೆ. ಒಂದು ರೀತಿಯಲ್ಲಿ ಆತ ದರ್ಪಣ – ಕನ್ನಡಿ. ನಮ್ಮ ಪ್ರತಿಬಿಂಬವೇ ಅಲ್ಲಿ ಕಾಣುವುದು.

ಹಾಗೆಂದೇ ನಾವು ಭಗವಂತನಿಗೆ ರೂಪಗುಣಗಳನ್ನು ಆರೋಪಿಸಿದ್ದೇವೆ. (ಆತ ಗುಣಾತೀತ ರೂಪರಹಿತ ಸ್ವರೂಪ!) ಆತನ ಪೂಜೆ – ಆರಾಧನೆಯ ಅರ್ಚನೆ – ಉತ್ಸವ, ಆಲಯ ನಿರ್ಮಿತಿ – ಪ್ರತಿಷ್ಠೆ ಇತ್ಯಾದಿ ಸಂಬಂಧಿನಿಯಮ ವಿಧಿವಿಧಾನ ಆಚಾರಗಳ ವಿವರ ಈ ಆಗಮಗಳಲ್ಲಿದೆ.

ಸಂಗೀತ, ಶಿಲ್ಪ, ನೃತ್ಯ, ಚಿತ್ರ, ಸಾಮುದ್ರಿಕ, ವೈದ್ಯ, ಅಶ್ವ ಪರೀಕ್ಷೆಗಳೂ ಆಗಮದಲ್ಲಿರುವುದು ವಿಶೇಷ.

ಈ ಆಗಮಗಳ ಪಠ್ಯವನ್ನು ಜಗತ್ತು, ಜೀವನ ಆತ್ಮ ಇತ್ಯಾದಿ ತತ್ತ್ವವಿಚಾರದ ಜ್ಞಾನ, ಜೀವನ ಮೋಕ್ಷ ಸಾಧನೆಯ ಶಿಕ್ಷಣ ನೀಡುವ ಯೋಗ, ಆಲಯ, ವಿಗ್ರಹಶಿಲ್ಪ, ಪೂಜೆ ಇತ್ಯಾದಿ ತಿಳಿವಿನ ಕ್ರಿಯೆ, ಇವುಗಳ ಅನುಷ್ಠಾನ ವಿಧಿವಿಧಾನ ತಿಳಿಸುವ ಚರ್ಯೆ – ಎಂದು ನಾಲ್ಕು ವಿಭಾಗ ಮಾಡಬಹುದು.

ಶೈವ, ವೈಷ್ಣವ, ಶಾಕ್ತ ಎಂದು ಆಗಮಗಳಲ್ಲಿ ಮೂರು ಪ್ರಮುಖ ವಿಭಾಗಗಳಿವೆ. ಆಗಮ ಎಂಬುದನ್ನು ರುದ್ರಯಾಮಲವು ಆಗತಃ ಶಿವಕ್ತ್ರೇಭ್ಯೋ ಗತಂ ಚ ಗಿರಿಜಾವನೇ ಮತಂ ಶ್ರೀವಾಸುದೇವಸ್ಯ ತಸ್ಮಾದಾಗಮ ಉಚ್ಯತೇ’ ಎಂದು ವರ್ಣಿಸಿದೆ. ಆಗತಃ, ಗತಂ, ಮತಂ ಎಂಬ ಪದಗಳ ಮೊದಲ ಮೂರು ಅಕ್ಷರ ಆಗಮ.

  • ಶ್ರೀನಿಧಿ
   

Leave a Reply