ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ

ಚಿಂತನ - 0 Comment
Issue Date : 28.07.2014

‘ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು’ ಎನ್ನುವ ಮಾತನ್ನು ಪುರಂದರದಾಸರು ತಮ್ಮ ಕೀರ್ತನೆಯೊಂದರಲ್ಲಿ ಹೇಳಿದ್ದಾರೆ. ತಿಳಿಗೇಡಿಗಳು ಮತ್ತು ತಿಳಿದವರ ನಡುವಿನ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ದಾಸವರೇಣ್ಯರ ನುಡಿ ಸತ್ಯವೆನ್ನುವುದು ಮನವರಿಕೆಯಾಗುತ್ತದೆ.
ಅಜ್ಞಾನಿಗಳೆಂದರೆ ಯಾವುದೇ ವಿಷಯದ ಕುರಿತು ಅರಿವು ಇಲ್ಲದವರು. ತಿಳಿಗೇಡಿಗಳಾಗಿ ಇರುವುದಲ್ಲದೆ, ತಮಗೇನೂ ಗೊತ್ತಿಲ್ಲವೆಂಬ ಸಂಗತಿ ಕೂಡ ಅವರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಅನೇಕ ವಿಷಯಗಳ ಬಗೆಗೆ ಅವರು ತಪ್ಪು ಮಾಹಿತಿ ನೀಡಿ ಇತರರ ದಾರಿ ತಪ್ಪಿಸುವ ಸಾಧ್ಯತೆ ಧಾರಾಳವಾಗಿದೆ. ಆದ್ದರಿಂದ ಇಂತಹ ವ್ಯಕ್ತಿಗಳ ಜತೆ ಅತಿಯಾದ ಸ್ನೇಹ ಮಾಡಿದರೆ ಯಾವ ಪ್ರಯೋಜನವೂ ಆಗದು. ಮಾತ್ರವಲ್ಲ, ಅವರ ಮಾತುಗಳನ್ನು (ಸ್ನೇಹಿತರಾದ್ದರಿಂದ) ಸತ್ಯವೆಂದೇ ನಂಬಿ ತೊಂದರೆಗೀಡಾಗುವ ಸಂಭವವೂ ಇದೆ.

ಅಜ್ಞಾನಿಗಳು ವಿವಿಧ ಸಂದರ್ಭಗಳಲ್ಲಿ ವೌನವಾಗಿ ಕುಳಿತರೆ ತೊಂದರೆಯೇನೂ ಆಗದು. ಗೊತ್ತಿಲ್ಲದ ವಿಷಯದ ಕುರಿತು ಮಾತಾಡಲು ಹೋಗದೆ ‘ಕ್ಷಮಿಸಿ, ಈ ವಿಚಾರದಲ್ಲಿ ನಾನು ಅಜ್ಞಾನಿ’ ಎಂದು ಹೇಳಿದರೆ ಅವರ ಸ್ನೇಹಿತರಾದವರು ಬೇರೆಡೆ ತಿಳಿವಳಿಕೆ ಉಳ್ಳವರನ್ನು ಹುಡುಕಿಕೊಂಡು ಹೋದಾರು. ಆದರೆ ಈ ತಿಳಿಗೇಡಿಗಳಿಗೆ ಸುಮ್ಮನಿರುವ ಅಭ್ಯಾಸವೇ ಇಲ್ಲ. ಬೇರೆಯವರು ಮಾತಾಡುವಾಗ ಮಧ್ಯೆ ಮಧ್ಯೆ ಬಾಯಿ ಹಾಕುವುದು, ತಮಗೆ ಗೊತ್ತಿಲ್ಲದ ವಿಷಯಗಳ ಬಗೆಗೂ ಅಧಿಕೃತ ವಕ್ತಾರರರಂತೆ ಮೂಗು ತೂರಿಸುವುದು ಅವರ ಜಾಯಮಾನ. ಅವರು ಹಾಗೆ ಮಾಡಿದಾಗ ಗೆಳೆಯರಾದವರು ಅವರಾಡಿದ ನುಡಿಗಳನ್ನು ತಳ್ಳಿ ಹಾಕುವಂತಿಲ್ಲ. ಇದು ಅಪಾಯಕ್ಕೆ ದಾರಿ.
ಆದರೆ ಸುಜ್ಞಾನಿಗಳು ಹಾಗಲ್ಲ. ಅವರಿಗೆ ನಾನಾ ವಿಷಯಗಳ ಕುರಿತು, ಅದರಲ್ಲೂ ಮನುಷ್ಯ ಜೀವನಕ್ಕೆ ಅತ್ಯಗತ್ಯವಾದ ವಿಚಾರಗಳ ಬಗೆಗೆ ಆಳವಾದ ತಿಳಿವಳಿಕೆ ಇರುತ್ತದೆ. ಹಾಗಾಗಿ ಅವರಾಡುವ ಮಾತುಗಳು ಸತ್ಯವಾಗಿಯೂ ಪಥ್ಯವಾಗಿಯೂ ಇರುತ್ತವೆ.

ಜ್ಞಾನಿಗಳನ್ನು ಪೌಷ್ಠಿಕವಾದ ಹಣ್ಣುಗಳಿಂದ ಕೂಡಿದ ವೃಕ್ಷಕ್ಕೆ ಹೋಲಿಸಬಹುದು. ಫಲಭರಿತ ಮರಕ್ಕೆ ಯಾರಾದರೂ ಕಲ್ಲೆಸೆದರೂ ಅದು ಕೋಪಿಸಿಕೊಳ್ಳುವುದಿಲ್ಲ. ಹಣ್ಣುಗಳನ್ನು ಉದಾರವಾಗಿ ಕೆಳಗೆ ಬೀಳಿಸುತ್ತದೆ. ಅವು ರಸಭರಿತವೂ ರುಚಿಕರವೂ ಆಗಿರುತ್ತದೆ. ಹಾಗೆಯೇ ಪರಮ ವಿದ್ವಾಂಸರೊಂದಿಗೆ ಯಾರಾದರೂ ಜೋರಾಗಿ ಜಗಳವಾಡಿದರೂ ಕೂಡ ಅವರು ಪ್ರತಿವಾದದ ಮೂಲಕ ವಾದಿಯ ಅರಿವನ್ನು ಹೆಚ್ಚಿಸುವ ಮಾತುಗಳನ್ನೇ ಆಡುವರಲ್ಲದೆ ಕೆಡು ನುಡಿಗಳನ್ನೋ ದುರ್ವಚನಗಳನ್ನೋ ಆಡುವುದಿಲ್ಲ.
ಆದ್ದರಿಂದ ಏನೂ ತಿಳಿಯದ ಹುಂಬರೊಂದಿಗೆ ಸ್ನೇಹ ಮಾಡುವ ಬದಲು ಚೆನ್ನಾಗಿ ತಿಳಿದ ವಿದ್ವಾಂಸರ ಜತೆಗೆ ವೈರ ಕಟ್ಟಿಕೊಂಡರೂ ಆದೀತು ಎನ್ನುವುದನ್ನು ದಾಸರು ತಿಳಿಸಿದ್ದಾರೆ.

  • ಅರ್ತಿಕಜೆ
   

Leave a Reply