‘ಅಮೃತ ರಂಗಧಾರೆ’ – ರಂಗ ಸಮಾಗಮ: ನಾಟಕೋತ್ಸವ

ಜಿಲ್ಲೆಗಳು - 0 Comment
Issue Date : 11.08.2014

‘ಕಲೆ ವಿಲಾಸಕ್ಕಲ್ಲ, ವಿಕಾಸಕ್ಕಾಗಿ’ ಎಂಬ ಧ್ಯೇಯವಾಕ್ಯದೊಂದಿಗೆ ರಂಗಭೂಮಿಯ ಉನ್ನತಿಗೆ ನಿರಂತರ ದುಡಿಯುತ್ತಿರುವ ಸಂಸ್ಥೆ ಬಳ್ಳಾರಿಯ ‘ರಂಗತೋರಣ’.

‘ರಂಗತೋರಣ’ವು ಜೂನ್ 12, 13., 14 ಮತ್ತು 15ರಂದು ನಾಲ್ಕು ದಿನಗಳ ಕಾಲ ರಂಗಭೂಮಿ ಅನಭಿಷಕ್ತ ದಿಗ್ಗಜರಾದ ನಾಡೋಜ ಬೆಳಗಲ್ಲು ವೀರಣ್ಣ ಹಾಗೂ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್ ಅವರಿಗೆ 75 ವರ್ಷಗಳು ತುಂಬಿದ ನಿಮಿತ್ಯ ಅವರ ರಂಗಬದುಕನ್ನು ಮೆಲುಕು ಹಾಕುವ ಸುಸಂದರ್ಭವನ್ನು ಒದಗಿಸಿತು. ‘ಅಮೃತ ರಂಗಧಾರೆ’ ಎನ್ನುವ ರಂಗಾಭಿನಂದನೆ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಅಚ್ಚುಕಟ್ಟಾಗಿ ಸಂಘಟಿಸಿ ರಂಗಾಸಕ್ತರ ಗಮನವನ್ನು ಸೆಳೆಯಿತು.

ಬೆಳಗಲ್ಲು ವೀರಣ್ಣ ಜಾನಪದ ರಂಗ-ಕಾಯಕ, ಸುಭದ್ರಮ್ಮ ಮನ್ಸೂರ್ ಅವರ ರಂಗ ಬದುಕನ್ನು ಕುರಿತು ವಿಚಾರ ಸಂಕಿರಣವಲ್ಲದೆ, ಅವರ ರಂಗ ಬದುಕಿನ ಅಪರೂಪದ ಛಾಯಾಚಿತ್ರಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

‘ಅಮೃತ ರಂಗಧಾರೆ’ ಕಾರ್ಯಕ್ರಮವನ್ನು ಖ್ಯಾತ ರಂಗಕರ್ಮಿ ಡಾ. ಬಿ.ವಿ. ರಾಜಾರಾಂ ಉದ್ಘಾಟಿಸಿದರು. ದೇಶದಾದ್ಯಂತ ಪ್ರಸಿದ್ಧಿಯಾಗಿರುವ ತೊಗಲು ಗೊಂಬೆಯಾಟ, ರಂಗಭೂಮಿ ಕಲೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಈ ಇಬ್ಬರೂ ಕಲಾವಿದರ ಸೇವೆ ಸ್ಮರಣೀಯ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಮತ್ತೋರ್ವ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ, ಬಳ್ಳಾರಿ ಜಿಲ್ಲೆಯ ಕುಗ್ರಾಮವೊಂದರ ಶಿಳ್ಳೆಕ್ಯಾತ ಜಾತಿಗೆ ಸೇರಿದ ಅದ್ಭುತ ಕಲಾ ಪ್ರತಿಭೆ ಬೆಳಗಲ್ಲು ವೀರಣ್ಣ ಯಕ್ಷಗಾನಕ್ಕೆ ಡಾ. ಶಿವರಾಮ ಕಾರಂತರು ನೀಡಿರುವ ಕಾಣಿಕೆಗೆ ಕರಾವಳಿಯ ಜನ ಅವರನ್ನು ವಿಖ್ಯಾತರನ್ನಾಗಿಸಿದರು. ಆದರೆ ತೊಗಲುಗೊಂಬೆಯಾಟಕ್ಕೆ ವಿಶಿಷ್ಟ ಕಾಣಿಕೆ ನೀಡಿರುವ ಬೆಳಗಲ್ಲು ವೀರಣ್ಣನವರನ್ನು ಇಲ್ಲಿನ ರಾಜಕಾರಣಿಗಳು, ಲೇಖಕರು, ಪತ್ರಕರ್ತರು ಬೆಳೆಸದೇ ಹೋದರು. ಆದರೂ ಅವರು ತಮ್ಮ ಪಾಡಿಗೆ ತಾವು ಸಾಧನೆ ಮಾಡಿದರು. ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ಪದ್ಮಶ್ರೀ’ಗೆ ಆರ್ಹರಾಗಿರುವ ಬೆಳಗಲ್ಲು ವೀರಣ್ಣನವರಿಗೆ ಈ ಪ್ರಶಸ್ತಿ ದೊರೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜನಪದ ತಜ್ಞ ರಂಗಾರೆಡ್ಡಿ ಕೋಡಿರಾಂಪುರ, ಸಾಹಿತಿ ಮತ್ಯುಂಜಯ ರುಮಾಲೆ, ರಂಗ ನಿರ್ದೇಶಕ ವೈ.ರಾಘವೇಂದ್ರರಾವ್, ರಂಗ ದಿಗ್ಗಜರಾದ ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರು, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್ ರಂಗ ತೋರಣದ ಪ್ರಭುದೇವ ಕಪ್ಪಗಲ್ಲು ಉಪಸ್ಥಿತರಿದ್ದರು.
‘ಸುಭದ್ರಮ್ಮ ಮನ್ಸೂರ್’ ಕುರಿತು ‘ವಿಚಾರ ತೋರಣ’ ಕಾರ್ಯಕ್ರಮದಲ್ಲಿ ಕೆ.ಬಿ.ಆರ್ ಡ್ರಾಮಾ ಕಂಪನಿ ಮಾಲೀಕ ಹಾಗೂ ಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್ ಮಾತನಾಡಿ, ಬಳ್ಳಾರಿಯ ರಂಗ ಇತಿಹಾಸವನ್ನು ಅಜರಾಮರಗೊಳಿಸಿದ ಸುಭದ್ರಮ್ಮ ಮನ್ಸೂರರು ಅನರ್ಘ್ಯ ಕಲಾರತ್ನ. ಅವರ ಅಪಾರ ಜೀವನಾನುಭವ ಮುಂದಿನ ಪೀಳಿಗೆಗೆ ದಾರಿ ದೀಪವಾಗಬೇಕು. ‘ಪ್ರೇಕ್ಷಕ’ ಪ್ರಬುದ್ಧ. ಪ್ರೇಕ್ಷಕರ ಆಯ್ಕೆ ಎಂದೂ ಸುಳ್ಳಾಗದು. ‘ಬೆಟ್ಟದಾ ಮೇಲೊಂದು ಮನೆಯ ಮಾಡಿ…’ ಎಂಬ ಸುಭದ್ರಮ್ಮನವರ ವಚನ ಗಾಯನ ಇಂದಿಗೂ ಎಲ್ಲರನ್ನು ಮೋಡಿ ಮಾಡಿದೆ, ಬದುಕಿನುದ್ದಕ್ಕೂ ಬಂದ ಕಷ್ಟ ಕಾರ್ಪಣ್ಯಗಳನ್ನು ಮೀರಿ ಸಂಗೀತ-ಸಾಹಿತ್ಯ ಎರಡರಲ್ಲೂ ಸಾಧನೆ ಗೈದು ಕಲಾವಿದೆಯಾಗಿ ರೂಪಗೊಂಡವರು ಸುಭದ್ರಮ್ಮನವರು ಎಂದು ಶ್ಲಾಘಿಸಿದರು. ಶಾಯಿರಿ ಕವಿ ಇಟಿಗಿ ಈರಣ್ಣ, ಹಿರಿಯ ರಂಗಕಲಾವಿದ ಕೋಗಳಿ ಪಂಪಣ್ಣ, ಕಂದಗಲ್ಲು ಹನುಮಂತರಾಯರ ಮೊಮ್ಮಗ ಪ್ರಹ್ಲಾದ ದೇಸಾಯಿ, ಡಾ.ಕೆ.ನಾಗರತ್ನಮ್ಮ, ರಂಗತೋರಣದ ಆರ್. ಭೀಮಸೇನ ಮತ್ತು ಅಪಾರ ರಂಗಾಸಕ್ತರಿದ್ದರು.


‘ರಂಗ ಸಂವಾದ’ದಲ್ಲಿ ಸುಭದ್ರಮ್ಮ ಮನ್ಸೂರ್ ತಮ್ಮ ರಂಗಭೂಮಿಯ ಅನುಭವ ಹಂಚಿಕೊಂಡರು. 12 ವರ್ಷವಿದ್ದಾಗ ಸಂಗೀತ ಕಲಿಯುವ ಆಸಕ್ತಿಯಿಂದ ತೆರಳಿ ನಾಟಕ ಕಂಪನಿಯಲ್ಲಿ ಸೇರಿ ಬಣ್ಣ ಹಚ್ಚಿಕೊಂಡೆ, ಲಿಂಗರಾಜ್ ಮನ್ಸೂರ್ ಬಾಳ ಸಂಗಾತಿಯಾದರು. ಹಿರಣ್ಣಯ್ಯ, ಏಣಗಿ ಬಾಳಪ್ಪ ಇತರೆ ಕಂಪನಿಗಳಲ್ಲಿ ಪಾತ್ರ ಮಾಡಿದೆ. ಬಡತನ ನಿವಾರಣೆಯಾಗದೆ ಒಮ್ಮಿಮ್ಮೆ ತಿಂಗಳಿನ 28 ದಿನ ಕರ್ನಾಟಕ-ಆಂಧ್ರದ ಗಡಿ ಭಾಗದ ಹಳ್ಳಿಗಳಲ್ಲಿ ಒಂದೊಂದು ಊರಿಗೆ ತೆರಳಿ ನಾಟಕ ಆಡಿದೆ. ಸಮಯ ಸಾಲದೆ ಬಸ್‌ನಲ್ಲೇ ನಿದ್ದೆ ಮಾಡುತ್ತಿದ್ದೆ ಎಂದವರು ರಂಗಭೂಮಿಯ ಆಗಿನ ಸಂದರ್ಭವನ್ನು ನೆನಪಿಸಿಕೊಂಡರು. ನನಗೆ ಆಧುನಿಕ ರಂಗಭೂಮಿ ತೃಪ್ತಿ ನೀಡಲಿಲ್ಲ. ಗ್ರಾಮೀಣ ರಂಗ ಕಲಾವಿದರಿಗೆ ನೆರವಾಗಲು ಅಭಿನಯ ಮುಂದುವರೆಸಿದೆ. ‘ರಕ್ತರಾತ್ರಿ’, ‘ಹೇಮರೆಡ್ಡಿ ಮಲ್ಲಮ್ಮ’ ನಾಟಕಗಳು ಅಪಾರ ಖ್ಯಾತಿ ತಂದು ಕೊಟ್ಟವೆಂದು ಸ್ಮರಿಸಿದರು. ಪತ್ರಕರ್ತರಾದ ಗುಡಿಹಳ್ಳಿನಾಗರಾಜ್ ಸಂವಾದ ನಡೆಸಿಕೊಟ್ಟರು.

ಬೆಳಗಾವಿ ರಾಣಿ ಚನ್ನಮ್ಮ ವಿ.ವಿ.ಯ ಡಾ. ರಾಜಪ್ಪ ದಳವಾಯಿ ನಾಡೋಜ ಬೆಳಗಲ್ಲು ವೀರಣ್ಣನವರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ರಂಗಾನುಭವ ಹಂಚಿಕೊಂಡ ಬೆಳಗಲ್ಲು ವೀರಣ್ಣ ನಾಟಕದ ಹುಚ್ಚಿನಿಂದಾಗಿ ಅನೇಕ ಕಷ್ಟಗಳು ಎದುರಾದವು, ತೊಗಲು ಗೊಂಬೆಯಾಟವನ್ನು ಕೈ ಹಿಡಿದ ಬಳಿಕ ಒಂದಷ್ಟು ಆರ್ಥಿಕ ಸಮಸ್ಯೆ ತಿಳಿಯಾಯಿತು. ಎರಡೊತ್ತು ಊಟಕ್ಕೆ ಪರದಾಡುವ ಸ್ಥಿತಿಯಲ್ಲೂ ನಾಟಕದ ಗುಂಗಿನಿಂದ ಹೊರ ಬರಲಾಗಲಿಲ್ಲ. ಇತ್ತೀಚೆಗೆ ನನ್ನನ್ನು ಶಕುನಿ ಪಾತ್ರದಲ್ಲಿಯೇ ಹೆಚ್ಚು ಗುರುತಿಸಿರುತ್ತಾರೆ. ಆದರೆ ನಾನು ಶಕುನಿ ಪಾತ್ರಕ್ಕಿಂತಲೂ ಟಿಪ್ಪುಸುಲ್ತಾನ್ ನಾಟಕದಲ್ಲಿ ಮೀರ್ ಸಾದಿಕ್‌ನ ಪಾತ್ರದಿಂದ ಹೆಚ್ಚು ಖ್ಯಾತಿ ಪಡೆದಿದ್ದೆ. ಅನೇಕ ಪಾತ್ರಗಳು ಹಳ್ಳಿಗಾಡಿನ ನನ್ನಂಥ ಕಲಾವಿದನನ್ನು ಗುರುತಿಸಲು ಸಾಧ್ಯವಾಯಿತು ಎಂದರು. ನನ್ನ ತೊಗಲು ಗೊಂಬೆಯ ಹಿಂದಿನ ಅದಮ್ಯಶಕ್ತಿ ವೈ. ರಾಘವೇಂದ್ರರಾವ್. ಅವರು ಸಾಹಿತ್ಯದ ರೂಪಕಗಳನ್ನು ನೀಡದೇ ಹೋಗಿದ್ದರೆ ನನ್ನ ಗೊಂಬೆಗಳಿಗೆ ಶಕ್ತಿಯೇ ಬರುತ್ತಿರಲಿಲ್ಲ. ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಲು ಸಾಧ್ಯವಿರಲಿಲ್ಲ. ರಂಗಭೂಮಿಯ ಬದುಕು ತೃಪ್ತಿ ನೀಡಿದೆ ಎಂದು ಮನದಿಂಗಿತ ಬಿಚ್ಚಿಟ್ಟರು. ರಂಗ ದಿಗ್ಗಜರಾದ ನಾಡೋಜ ಬೆಳಗಲ್ಲು ವೀರಣ್ಣ, ನಾಡೋಜ ಡಾ ಸುಭದ್ರಮ್ಮ ಮನ್ಸೂರ್ ಅವರಿಗೆ ಬಳ್ಳಾರಿಯ ಸಮಸ್ತರ ಪರವಾಗಿ ರಂಗತೋರಣವು ‘ಅಮೃತ ರಂಗಧಾರೆ’ಯ ರಂಗಾಭಿನಂದನೆಯನ್ನು ಸಲ್ಲಿಸಿತು. ಸಮಾರೋಪ ಸಮಾರಂಭದಲ್ಲಿ ಕನ್ನಡ ವಿ.ವಿ. ಕುಲಪತಿ ಡಾ.ಹೀ.ಚಿ. ಬೋರಲಿಂಗಯ್ಯ, ‘ನಾವು ಸಣ್ಣ ಪೆಟ್ಟಿಗೆಗೆ (ಟಿವಿ) ಮೊರೆ ಹೋಗಿ ನಮ್ಮ ಸಂಸ್ಕೃತಿ ಮರೆತಿದ್ದೇವೆ. ಮಹಿಳೆಯರು, ಮಕ್ಕಳು ಟಿವಿ ವೀಕ್ಷಣೆಗೆ ಒಗ್ಗಿಕೊಂಡಿದ್ದಾರೆ. ಇವರಿಂದಾಗಿ ಜನಪದ ಕಲೆಗಳು ಅಳಿವಿನಂಚಿಗೆ ತಳ್ಳಲ್ಪಟ್ಟಿವೆ. ರಂಗ ಕಲೆ ನೇಪಥ್ಯಕ್ಕೆ ಸರಿಯುತ್ತಿವೆ’ ಎಂದು ವಿಷಾದಿಸಿದರು. ಡಾ. ಎಸ್.ಜೆ.ವಿ. ಮಹಿಪಾಲ್, ಗುಡಿಹಳ್ಳಿ ನಾಗರಾಜ್, ಕನ್ನಡ ವಿ.ವಿ. ಬುಡಕಟ್ಟು ಅಧ್ಯಯನದ ಮುಖ್ಯಸ್ಥ ಕೆ.ಎಂ. ಮೇತ್ರಿ, ರಂಗ ತೋರಣ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ, ಅಡವಿಸ್ವಾಮಿ ಉಪಸ್ಥಿತರಿದ್ದರು.

ರಂಗತೋರಣದ ನಾಲ್ಕು ದಿನಗಳ ಸಾಂಸ್ಕೃತಿಕ ಸಂಜೆ ರಂಗು ರಂಗಾಗಿತ್ತು. ‘ರಕ್ತ ರಾತ್ರಿ’ ನಾಟಕ, ಮಹಾತ್ಮಗಾಂಧಿತೊಗಲು ಗೊಂಬೆಯಾಟ, ಹೇಮರೆಡ್ಡಿ ಮಲ್ಲಮ್ಮ ನಾಟಕ, ರಾಜೇಂದ್ರ ಕಾರಂತ ರಚನೆ ನಿರ್ದೇಶನದ ‘ಸಂಜೆ ಹಾಡು’ ನಾಟಕಗಳು ಬಳ್ಳಾರಿಯ ರಂಗ ಪ್ರೇಕ್ಷಕರನ್ನು ಅಮೃತ ರಂಗಧಾರೆಯಲ್ಲಿ ಮೀಯಿಸಿದವು. ನೂರಾರು ರಂಗಾಭಿಮಾನಿಗಳು ತುದಿಗಾಲಲ್ಲಿ ನಿಂತು ಕಾರ್ಯಕ್ರಮ ವೀಕ್ಷಿಸಿದ್ದು, ರಂಗ ತೋರಣದ ರಂಗ ಕ್ರಿಯಾಶೀಲತೆಯ ಸಮರ್ಥ ಸಂಘಟನೆಗೆ ಸಾಕ್ಷಿಯಾದಂತಿತ್ತು.

ವರದಿ: ಸಿದ್ಧರಾಮ ಕಲ್ಮಠ, ಬಳ್ಳಾರಿ

   

Leave a Reply