ಅಮೃತಸರದ ಕರೆ

ಯಾದವ್ ರಾವ್ ಜೋಷಿ - 0 Comment
Issue Date : 10.10.2014

ಇತ್ತೀಚೆಗೆ ನಾನು ಪಂಜಾಬನ್ನು ಸಂದರ್ಶಿಸಿದಾಗ ಕೆಲವು ದೃಶ್ಯಗಳು ನನ್ನ ಗಮನವನ್ನು ಸೆಳೆದು ವಿಚಾರಕ್ಕೊಳಪಡಿಸಿದವು. ಅವು ನನ್ನೊಡನೆ ಮೌನವಾಗಿ, ಆದರೆ ಸಮರ್ಥವಾಣಿಯಿಂದ ಮಾತನಾಡಿದುವು.

ಅಮೃತಸರದಲ್ಲಿರುವ ‘ಜಾಲಿಯನ್ ವಾಲಾ ಬಾಗ್’ ನನ್ನ ತಿರುಗಾಟದಲ್ಲಿ ನನ್ನ ಗಮನವನ್ನು ಸೆಳೆದು ನಿಲ್ಲಿಸುವುದರಲ್ಲಿ ಪ್ರಥಮವಾಗಿತ್ತು. ಅಲ್ಲಿ ನಿಂತೊಡನೆ, 1919ರ ರಕ್ತ ಹೆಪ್ಪು ಗಟ್ಟಿಸುವ ದೃಶ್ಯಗಳು ತಮ್ಮ ನಗ್ನ ಭಯದಿಂದ ನನ್ನ ಮನ ಚಕ್ಷುಗಳ ಎದುರು ನೃತ್ಯವಾಡಲು ಪ್ರಾರಂಭಿಸಿದುವು. ಓರ್ವ ಸಾಮಾನ್ಯ ತುಚ್ಛವ್ಯಕ್ತಿ ಡಾಯರ್, ದೂರದ ದೇಶ ಒಂದರಿಂದ ಬಂದು, ಸಹಸ್ರಾವಧಿ ಕುರಿಗಳೋಪಾದಿಯಲ್ಲಿ ನಮ್ಮ ಸ್ವಂತ ಎಲುಬು – ರಕ್ತಗಳನ್ನು ತುಂಡರಿಸುತ್ತಿದ್ದಾನೆ! ತನ್ನ ನಿರಪರಾಧಿ ಮಕ್ಕಳ ರಕ್ತದಿಂದ ಭೂಮತೆಯು ಒದ್ದೆಯಾಗಿ ಕೆಂಪಾಗಿದ್ದಾಳೆ. ತಮ್ಮ ಸ್ವಂತ ದೇಶದ ರಸ್ತೆಗಳಲ್ಲೇ ಈ ಭೂಮಾತೆಯ ಮಕ್ಕಳು ಹುಳುಗಳಂತೆ ಹರಿದಾಡುವಂತೆ ಮಾಡಲಾಗುತ್ತದೆ. ನಮ್ಮ ರಾಷ್ಟ್ರ ಗೌರವದ ಆ ಬಲಿವೇದಿಕೆಯನ್ನಗಲುತ್ತ ನನ್ನ ಶರೀರವು ಮುನ್ನಡೆದಂತೆ ನನ್ನ ಹೃದಯವು ಅಪಮಾನದಿಂದುರಿಯಿತು. ಮಾತ್ರವಲ್ಲ, ನನ್ನ ಹೃದಯದ ಮೂಲೆಯೊಂದರಿಂದ ಪ್ರಶ್ನೆಯೊಂದು ಎದ್ದಿತು. ‘‘ಇದು ಹೇಗೆ ಆಯಿತು…… ?’’
ದೃಶ್ಯವು ಪಲ್ಲಟಿಸಿತು. ಆ ಸ್ಥಳವು ಅಮೃತಸರದಿಂದ ಕೇವಲ 18 ಮೈಲಿ ದೂರದ್ಲಲಿದೆ. ಕಣ್ಣು ನೋಡುವಷ್ಟೂ ದೂರದವರೆಗೆ ವಿಶಾಲವಾದ ಭೂಮಿಯು ನನ್ನ ಮುಂದೆ ಚಾಚಿತ್ತು. ಪಂಜಾಬಿನ ಧೂಳಿಯ ಸ್ಪರ್ಶವು ನನ್ನ ಜೀವನದ ಸವಿಸ್ವಪ್ನಗಳಲ್ಲೊಂದಾಗಿತ್ತು. ನನ್ನಲ್ಲಿ ವಿದ್ಯುತ್ ಪ್ರಕಾಶವಾದಂತೆ ನನಗನಿಸಿತು. ಬೇಸಗೆಯ ಮೃದು ತಂಗಾಳಿಯು ವೈದಿಕ ಋಷಿಗಳ ದೈವೀ ಮಂತ್ರ ಘೋಷಣೆಯನ್ನು ನನ್ನ ಕಿವಿಗಳಲ್ಲಿ ಉಸುರಿಸಿತು. ಮರಗಳು ಮತ್ತು ಪಕ್ಷಿಗಳು ನಮ್ಮ ಪ್ರಾಚೀನ ಸಂಸ್ಕೃತಿಯ ಜೋಗುಳ ಹಾಡನ್ನು ಹಾಡಿದುವು. ಕಲ್ಲುಗಳು ಮತ್ತು ಸರೋವರಗಳು ನಮ್ಮ ಶೌರ‌್ಯದ ವೀರಗಾನದಿಂದ ಪ್ರತಿಧ್ವನಿಸಿದುವು. ಗುರುಗೋವಿಂದರ ಎಳೆಹಸುಳೆಗಳ ದಿವ್ಯವದನಗಳು ಪ್ರಕಾಶಮಾನವಾಗಿ ತಮ್ಮ ಪವಿತ್ರ ಸಮಾಧಿಗಳಿಂದ ಎದ್ದು ನಿಂತವು… ಒಮ್ಮಿಂದೊಮ್ಮೆಗೇ ನನ್ನ ಮಿತ್ರನ ಸ್ವರದ ಕರ್ಕಶ ಘಾತವು ನನ್ನನ್ನು ವಾಸ್ತವಿಕತೆಗೆ ಎಚ್ಚರಿಸಿತು. ‘‘ಇದು ನಮ್ಮ ಗಡಿ ಅದರ ಆ ಕಡೆ ಪಾಕಿಸ್ತಾನ’’ ನಂಬಲಾಗದ ಕಣ್ಣುಗಳಿಂದ ನಾನು ದಿಟ್ಟಿಸಿದೆ. ಆ ಶಬ್ದಗಳಿಂದ ನನ್ನ ಹೃದಯವು ಅಗ್ನಿಯಲ್ಲಿ ಸುಡುವಂತೆ ಭಾಸವಾಯಿತು. ‘‘ಇಲ್ಲ! ಅದು ಆಗಲು ಸಾಧ್ಯವಿಲ್ಲ’’! ದಂಗೆ ಎದ್ದಂತೆಯೇ ನನ್ನ ಇಡೀ ಆತ್ಮವೇ ಕೂಗಿತು. ಆದರೆ ಅಲ್ಲಿ ನಿಂತಿರುವ ಒಬ್ಬ ಪಾಕಿಸ್ತಾನದ ರಕ್ಷಕನ ದೃಶ್ಯವುಪುನಃ ಅದೇ ಪ್ರಶ್ನೆಯನ್ನು ಮುಂದಿಟ್ಟಿತು – ‘‘ಇದು ಹೇಗೆ ಆಯಿತು?’’

ಉತ್ತರ
ಆ ಪ್ರಶ್ನೆಯು ಇನ್ನೂ ನನ್ನ ಧಮನಿಯಲ್ಲಿ ಬಡಿದೇಳುತ್ತಿದ್ದಂತೆಯೇ ನಾನು ಅಮೃತಸರಕ್ಕೆ ಬಂದೆ. ವೈಭವಯುಕ್ತವಾದ ಸ್ವರ್ಣಮಂದಿರವು ನಮ್ಮ ಮಹಾನ್ ಕೇಶಧಾರಿ (ಸಿಖ್ಖ) ಗುರುಗಳ ಸ್ಫೂರ್ತಿಯ ಪವಿತ್ರ ಝರಿಗಳಲ್ಲಿ ಸ್ನಾನ ಮಾಡಲು ನನ್ನನ್ನು ಕರೆಯಿತು. ಆದರೆ. ಹಾಯ್! ನಾನು ಒಳಗೆ ಪ್ರವೇಶಿಸುತ್ತಲೇ, ನನ್ನ ಮಿತ್ರನಿಗೆ ಇಂದಿನ ವಿಚಿತ್ರ ಕಥೆಯೊಂದನ್ನು ಹೇಳಲಿಕ್ಕಿತ್ತು. ರಾಮ, ಕೃಷ್ಣ ಮತ್ತು ಶಿವರ ದಿವ್ಯ ಮೂರ್ತಿಗಳು ಇನ್ನು ಮುಂದೆ ಆ ದೇವಾಲಯದಲ್ಲಿ ಸ್ಥಳವನ್ನು ಕಾಣದಾದುವು. ರಾಮಾಯಣ ಮತ್ತು ಭಗವದ್ಗೀತೆಯ ಪವಿತ್ರ ಪಠನಗಳು ನಿಲ್ಲಿಸಲ್ಪಟ್ಟವೆ. ಕೇಶಧಾರಿಗಳಲ್ಲದವರು ಪ್ರತಿದಿನ ಬೆಳಗ್ಗೆ ಪವಿತ್ರ ಕೆರೆಯಲ್ಲಿ ಸ್ನಾನ ಮಾಡಿ ಆದರಣೀಯ ‘ಗ್ರಂಥಸಾಹಿಬ್’ ದ ಎದುರು ವಿನಮ್ರವಾಗಿ ನಮಸ್ಕರಿಸಲು ಅಲ್ಲಿಗೆ ಹೋಗುತ್ತಿರುವುದನ್ನು ಬಹುಮಟ್ಟಿಗೆ ನಿಲ್ಲಿಸಿದ್ದಾರೆ. ಅವರ ಪವಿತ್ರ ಸ್ಥಳಗಳಿಗೆ ಅವರು ಶೀಘ್ರಾತಿಶೀಘ್ರ ಪರಕೀಯರಾಗುತ್ತಿದ್ದಾರೆ. ಇದಕ್ಕೆ ಆಹ್ವಾನವೆಂಬಂತೆ ಹತ್ತಿರವೇ ಅದರಂತೆಯೇ ಇನ್ನೊಂದು, ಕೇಶಧಾರಿಯಲ್ಲದವರಿಗಾಗಿರುವ ಮಂದಿರ – ದುರ್ಗಿಯಾನಾ ಮಂದಿರ – ನಿರ್ಮಾಣವಾಗಿ ನಿಂತಿವೆ. ಈ ಹೊಸ ಪವಿತ್ರ ಸ್ಥಳವನ್ನು ಕೇಶಧಾರಿಗಳು ಕಣ್ಣೆತ್ತಿ ನೋಡುವುದೂ ಸಹ ಇಲ್ಲ. ‘ಸುವರ್ಣ ಮಂದಿರ’ ಮತ್ತು ‘ದುರ್ಗಿಯಾನಾ ಮಂದಿರ!’ ಅಲ್ಲಿಂದ ಹೆಜ್ಜೆಗಳನ್ನು ಹಿಂತೆಗೆಯುತ್ತಲೇ ನಮ್ಮ ರಾಷ್ಟ್ರದ ಹೃದಯದ ಒಡೆದ ಎರಡು ತುಂಡುಗಳ ಸಮಾಧಿಯಾಗುವುದನ್ನು ನೋಡಿದ ವಿಚಿತ್ರ ಭಾವನೆಯೊಂದು ನನ್ನೊಳಗೆ ನುಸುಳಿತು.

ಭೂತಕಾಲದ ಸಾಕ್ಷಿ

ಮೊದಲನೇ ಎರಡು ಘಟನೆಗಳು ಮುಂದಿರಿಸಿದ ಪ್ರಶ್ನೆಯು ಮೂರನೆಯದರಿಂದ ಬಗೆಹರಿಸಲ್ಪಟ್ಟಿತು. ಮಿಂಚಿನಂತೆ ನಮ್ಮ ರಾಷ್ಟ್ರೀಯ ಅಧಃಪತನದ ಸಂಪೂರ್ಣ ಇತಿಹಾಸವೇ ಕಣ್ಣೆದುರು ಬಂದು ನಿಂತಿತು. ಶತಮಾನಗಳಿಂದಲೂ ಘಟನೆಗಳ ಸಹಸ್ರ ನಾಲಗೆಗಳಿಂದ ಚರಿತ್ರೆಯು ಆದೇ ಒಂದು ಸತ್ಯವನ್ನುಚ್ಚರಿಸಿದೆ. ಮೊದಲು, ನಮ್ಮ ರಾಷ್ಟ್ರದ ಹೃದಯವು ಒಡೆಯಿತು. ನಂತರ ದೇಶವು ತುಂಡುಗಳಾಗಿ ಮುರಿದು ಬಿದ್ದಿತು. ನಮ್ಮ ರಾಷ್ಟ್ರೀಯ ಧೃಡಭಾವನೆಯು ಇಲ್ಲವಾಯಿತು, ಮತ್ತು ಆಗ ದೇಶವು ಒಡೆದುಬಿದ್ದಿತು! ನಮ್ಮ ಜನಾಂಗದ ಪ್ರತಿಯೊಬ್ಬನ ನರನಾಡಿನಲ್ಲಿ ಬಡಿಯುವ ಸಂಘಟಿತ ರಾಷ್ಟ್ರೀಯ ಜೀವನವು ಒಡೆದು ಹೋಯಿತು ಮತ್ತು ರಾಷ್ಟ್ರವು ಕೆಲವೇ ಕ್ರೂರ ಆಕ್ರಮಣಗಾರರ ಸಂಪೂರ್ಣ ಗುಲಾಮವಾಯಿತು. ಸೊಕ್ಕಿನಿಂದ ಒಬ್ಬ ಘೋರಿಯು ಪೃಥ್ವೀರಾಜನ ಕಣ್ಣುಗಳನ್ನು ಕಿತ್ತೊಗೆಯಲು ಸಾಧ್ಯವಾಯಿತು, ಘಜನಿಯು ನಮ್ಮ ಮಹಾನ್ ಸೋಮನಾಥವನ್ನು ಧೂಳುಪಾಲು ಮಾಡಲು ಸಮರ್ಥವೆನಿಸಿದ, ಒಬ್ಬ ತಾತ್ಯಾಟೋಪೆ ಮತ್ತು ಒಬ್ಬ ಧಿಂಗ್ರರು ದೇಶದ್ರೋಹಿ ಎಂದು ಘಾಸಿಗೆ ಕೊಡಲ್ಪಡುವಂತಾದರು, ಮತ್ತು ಒಂದು ಜಾಲಿಯಾನ್ ವಾಲಾ ಬಾಗ್ ನಿರ್ಮಿಸಲು ಸಾಧ್ಯವೆನಿಸಿತು! ಗಾಂಧಾರವು ಅಫಗಾನಿಸ್ತಾನವಾಗಲು ಸಾಧ್ಯವಾಯಿತು. ಮತ್ತು ಪಂಜಾಬ್, ಸಿಂಧ್ ಮತ್ತು ಬಂಗಾಲಗಳು ಪಾಕಿಸ್ತಾನವಾಗಲು ಸಾಧ್ಯವಾಯಿತು……

ವರ್ತಮಾನದ ಕಥೆ

ಈ ವಿಚಾರ ತರಂಗಗಳು ಮುಂದುವರಿದು ಇಂದಿನ ಭೀಕರ ಪರಿಸ್ಥಿತಿಯನ್ನು ಚಿತ್ರಸತೊಡಗಿದವು. ‘ಸ್ವರ್ಣ ಮಂದಿರ’ ಮತ್ತು ‘ದುರ್ಗಿಯಾನಾ’! ಕಳೆದ ಹತ್ತು ವರ್ಷಗಳ ಹಿಂದಿನ ಭಯಂಕರ ಘಟನೆಗಳು ಈಗಾಗಲೇ ಮೃತಚರಿತ್ರೆಯಾಗಿಬಿಟ್ಟಿವೆ. ಅಮೃತಸರದಲ್ಲಿಯೇ ಪ್ರತಿಯೊಂದು ಕಲ್ಲು, ಕಟ್ಟಡಗಳ ಮೇಲಿನ ಆಳವಾದ ಘಾಯದ ಕುರುಹು ಕೂಡಾ ಒಂದೊಂದು ರಕ್ತರಂಜಿತ ಕತೆಯನ್ನು ಪೇಳಲಿಕ್ಕಿದೆ, ಒಂದೊಂದು ಚಾರಿತ್ರಿಕ ಪಾಠವನ್ನು ಕಲಿಸಲಿಕ್ಕಿದೆ.
ಪ್ರಥಮವಾಗಿ ನಮ್ಮ ಹೃದಯದಲ್ಲಿ ನಾವು 1947ರ ಹೋರಾಟದಲ್ಲಿ ಸೋತುಹೋಗಿದ್ದೆವು. ವಿಭಜನೆಯ ದುರಂತವು ಕೇವಲ ಅದನ್ನನುಸರಿಸಿತು. ರಾಷ್ಟ್ರವನ್ನು ಮೊದಲು ನಮ್ಮ ಹೃದಯಗಳಿಂದ ಕಿತ್ತೊಗೆದಿದ್ದೆವು. ಗಡಿಗಳು ಅನಂತರ ಕೈ ಬಿಟ್ಟವು. ನಮ್ಮ ಮುಖಂಡರು ತಮ್ಮ ಹೃದಯದಲ್ಲಿ ಮೊದಲು ವಿಭಜನೆಯನ್ನೊಪ್ಪಿದ್ದರು ಮತ್ತು ಸ್ವಸಂತೋಷದಿಂದ ಒಪ್ಪಿಗೆಯ ಮುದ್ರೆಯನ್ನೊತ್ತಿದರು. ಮೇಲಾಗಿ ಅವರು ವಿಭಜನಾದಿನವಾದ 1947ರ ಆಗಸ್ಟ್ 15ರಂದು ಸಂತೋಷ ಕೂಡ ಪಟ್ಟರು. ಆಗಸ್ಟ್ 15 ಸಮಾರಂಭವು ಇಂದಿಗೂ ಮುಂದುವರೆದಿದೆ. ಪರಿಣಾಮವಾಗಿ ಇಂದಿನವರೆಗಿನ ಅನಂತರದ ಆಧುನಿಕ ಬೆಳವಣಿಗೆಯು ಆಗಿದೆ.
ನಮ್ಮ ಸಿಂಧಿ ಬಂಧುಗಳು ತಮ್ಮ ಈಗಿನ ವಾಸಸ್ಥಾನವನ್ನೇ ಸಿಂಧೂ ನಗರ ಎಂದು ಕರೆಯುವುದರಲ್ಲಿ ಸಮಾಧಾನ ಹೊಂದಿದ್ದಾರೆ. ಪ್ರಾಯಶಃ ಸಿಂಧ್‌ನಲ್ಲಿದ್ದಕ್ಕಿಂತಲೂ ಇಲ್ಲಿ ಅವರ ವ್ಯಾಪಾರವು ಹೆಚ್ಚು ಯಶಸ್ವಿಯಾಗಿ ನಡೆಯುವುದೆಂಬ ಸಂತೋಷದಲ್ಲಿ ಅವರಿರಬಹುದು! ಪಂಜಾಬ್ ಮತ್ತು ಬಂಗಾಳಗಳು ನಮ್ಮ ಹೃದಯದಿಂದ ಅಳಿಸಲಾಗಿವೆ. ಹಿಂದೂರಾಷ್ಟ್ರದ ಜೀವನಸ್ರೋತವಾಗಿರುವ ಆ ಸಿಂಧು, ಇನ್ನು ತನ್ನ ದಿವ್ಯಸ್ಫೂರ್ತಿಯಿಂದ ನಮ್ಮ ಆತ್ಮವನ್ನು ಪುನಶ್ಚೇತನಗೊಳಿಸಲಾರದು. ಕೇವಲ ಕೆಲವೇ ದಶಕಕಗಳ ಹಿಂದೆ ರಾವೀ ತಟದಲ್ಲಿ ನಿಂತು ಸಂಪೂರ್ಣ ಸ್ವಾತಂತ್ರ್ಯದ ಪ್ರತಿಜ್ಞೆಯನ್ನು ಘೋಷಿಸಿದ ವ್ಯಕ್ತಿಗಳು ಇನ್ನು ಆ ಸ್ಥಳವನ್ನು ತಮ್ಮದೆಂದು ಉಚ್ಚರಿಸಲು ಧೈರ್ಯತಾಳದವರಾಗಿದ್ದಾರೆ. ಪಾಕಿಸ್ತಾನವು ನಮ್ಮ ಹೃದಯದಲ್ಲಿ ಒಂದು ನಿರ್ಧರಿತ ಸತ್ಯವಾಗಿ ಪರಿಣಮಿಸಿದೆ. ನಮ್ಮ ಆತ್ಮವೇ ತನ್ನ ಬಾಹುಗಳನ್ನು ತನ್ನದೆಂದು ಭಾವಿಸಲು ಸಹ ನಿರಾಕರಿಸುತ್ತದೆ. ‘ಅಖಂಡ ಭಾರತ’ವು ಇಂದಿನ ಆಧುನಿಕ ‘ಸೆಕ್ಯೂಲರಿಸಂ’ ಮತದಲ್ಲಿ ಶಾಪವಾಗಿ ಪರಿಣಮಿಸಿದೆ ! ಅದು ‘ಜಾತೀಯ’ , ‘ಯುದ್ಧಖೋರ’ ಮತ್ತು ಇನ್ನೇನಲ್ಲ? ಭಾರತ ಮಾತೆಯ ಅಖಂಡ ದಿವ್ಯ ಮೂರ್ತಿಯನ್ನು ಚಿತ್ರಿಸುವುದೇ? ಯಾರ ತುಟಿಗಳು ‘ಭಾರತ ಮಾತಾಕೀ ಜೈ’ ಮತ್ತು ‘ವಂದೇ ಮಾತರಂ’ ಮಂತ್ರಗಳನ್ನುಚ್ಚರಿಸಿದುವೋ ಆ ವ್ಯಕ್ತಿಗಳಿಗೇ ಒಂದು ಗಂಡಾಂತರದ ಕಲ್ಪನೆಯಾಗಿಬಿಟ್ಟಿದೆ! ‘ಹೌದು, ಅದು ನಮ್ಮ ವಿಧಿಯಲ್ಲಿತ್ತು, ನಮ್ಮ ಕರ್ಮ. ನಾವೇನೂ ಮಾಡಲಾಗಲಿಲ್ಲ. ಈಗ ಈ ಪ್ರಶ್ನೆಯು ಶಾಶ್ವತವಾಗಿ ಮುಚ್ಚಿಡಲಾಗಿದೆ. ನಾವು ಅದನ್ನು ಮರೆಯೋಣ‘. ಜನರು ಶಾಂತವಾದ ತೀರ್ಪಿನಂತೆ ಹೇಳುತ್ತಾರೆ. ನಮ್ಮ ಮಹಾ ಪ್ರಧಾನಿಗಳ ಶಬ್ದಗಳಲ್ಲಿಯೇ ಅವರೂ ‘ಪುನಃ ಏಕೀಕರಣದ ಬಗ್ಗೆ ವಿಚಾರಮಾಡುವುದು ವಿಲಕ್ಷಣ ಮೂರ್ಖತನ’ ಎಂದು ಪುನರುಚ್ಚರಿಸುತ್ತಾರೆ (ಜೊತೆಗೆ ಇದೇ ಮಾತನ್ನು ನಮ್ಮ ಪ್ರಧಾನಿಗಳು ವಿಭಜನೆಯ ಮೊದಲು ಪಾಕಿಸ್ತಾನದ ತತ್ವದ ಬಗ್ಗೆ ಮಾತನಾಡುವಾಗಲೆಲ್ಲಾ ತಪ್ಪದೆ ಉಪಯೋಗಿಸುತ್ತಿದ್ದರು.)

ಭವಿಷ್ಯಕ್ಕಾಗಿ ಒಂದು ದೀಪಸ್ತಂಭ

ಸರಿ, ಅದು ಕೊನೆಯ ಉತ್ತರವೇ? ಅದೊಂದೇ ಉತ್ತರವೇ? ಬೇರಾವುದೂ ಇಲ್ಲವೇ?….. ಇದೆ.
20ನೇ ಶತಮಾನದಲ್ಲಿ ಇಸ್ರೇಲಿನ ಪ್ರಕಾಶಮಾನವಾದ ಉದಾಹರಣೆಯೇ ಅದು. ಈಗ 20 ಶತಮಾನಗಳ ಹಿಂದೆ ಜ್ಯೂ ತನ್ನ ರಾಷ್ಟ್ರೀಯ ಮಾತೃಭೂಮಿಯನ್ನು ಕಳಕೊಂಡಿದ್ದನು. ಆ ದೇಶದ ಒಂದೇ ಒಂದು ಮಗು ಕೂಡ ತನ್ನ ಮಾತೃಭೂಮಿಯ ಸ್ವತಂತ್ರ ಗಾಳಿಯನ್ನು ಉಸಿರಾಡಲಾರದಾಗಿತ್ತು. ಆಗ ಒಂದು ಜನಾಂಗ, ಸಂಖ್ಯೆಯಲ್ಲಿ ಚಿಕ್ಕದು, ಜಗತ್ತಿನ ನಾಲ್ಕು ಮೂಲೆಗಳಲ್ಲಿ ಹರಿದು ಹಂಚಾಗಿಬಿಟ್ಟಿತ್ತು. ತಮ್ಮ ದೇಶವನ್ನು ಪುನಃ ಪಡೆಯುವ ಆಸೆಯ ನೆರಳೂ ಸಹ ಇಲ್ಲದೆ ಶತಮಾನಗಳ ಮೇಲೆ ಶತಮಾನಗಳು ಉರುಳಿದುವು. ಆದರೆ ಇಂದು ನೋಡಿರಿ!
‘ಜ್ಯೂ’ ತನ್ನ ಪುರಾತನ ಮಾತೃಭೂಮಿಯಲ್ಲೇ ಪುನಃ ಒಂದು ರಾಷ್ಟ್ರವಾಗಿ, ಸಚೇತನವಾಗಿ ಸವಾಲ್ ಹಾಕಿ ನಿಂತಿದ್ದಾನೆ! ಚಮತ್ಕಾರವೆಂದೆನಿಸಿದರೂ, ಅದರ ಗೂಢವು ಆ ಸಾಮಾನ್ಯ ಐತಿಹಾಸಿಕ ಸತ್ಯದಲ್ಲೇ ಅಡಗಿದೆ. ತಮಗಿಂತ ಬಲಿಷ್ಠ ಪಾಶವೀ ಶಕ್ತಿಗಳಿಗೆ ಅವರ ದೇಶವು ಸೋತು ಹೋಗಿತ್ತೆಂಬುದು ನಿಜ. ಆದರೆ ಅವರ ಹೃದಯವು ಒಂದಾಗಿತ್ತು. ಅವರ ಸೈನ್ಯಗಳು ನಾಶಗೊಳಿಸಲ್ಪಟ್ಟವು, ಆದರೆ ಅವರ ದೃಢ ಸಂಕಲ್ಪನ್ನು ಸೋಲಿಸಲಾಗಲಿಲ್ಲ. ತಂದೆಯಿಂದ ಮಗನಿಗೆ, ತಾಯಿಯಿಂದ ಮಗುವಿಗೆ, ತಮ್ಮ ಮಾತೃಭೂಮಿಯನ್ನು ಪುನಃ ವಶಪಡಿಸಿಕೊಳ್ಳುವ ಉಗ್ರ ಸಂಕಲ್ಪವನ್ನು ಜಾಜ್ವಲ್ಯವಾಗಿ ಬೆಳಗಿಡಲಾಯಿತು. ಅವನು ಹೋದಲ್ಲೆಲ್ಲವೂ ಹಿಂಸಿಸಲ್ಪಟ್ಟನು. ದೇಶದೇಶಾಂತರಕ್ಕೆ ಓಡಿಸಲ್ಪಟ್ಟನು. ಆದರೆ ತನ್ನ ಸ್ವಂತ ಪ್ರಯತ್ನ ಮತ್ತು ಬುದ್ಧಿವಂತಿಕೆಯ ಬಲದಿಂದ ಹೋದ ಕಡೆಗಳಲ್ಲೆಲ್ಲಾ ತನಗಾಗಿ ಒಂದು ಸ್ಥಾನವನ್ನು ನಿರ್ಮಿಸಿಕೊಂಡನು. ಸಂಕಷ್ಟದ ಕಾಲದಲ್ಲಾಗಲೀ, ಸಂಪನ್ನತೆಯಲ್ಲಾಗಲೀ ಅವನೆಲ್ಲೇ ಇರಲಿ, ತನ್ನ ಜೀವನದಲ್ಲಿ ಸಫಲಗೊಳಿಸಲು ಒಂದೇ ಕನಸು, ತನ್ನ ಮುಂದಿನ ಪೀಳಿಗೆಗೆ ಕೈ ಎತ್ತಿಕೊಡಲು ಒಂದೇ ಸಂಪತ್ತು ‘ಜ್ಯೂ’ ತನ್ನ ಹೃದಯದಲ್ಲಿ ತಾಳಿದ್ದನು. ಅವನ ಮೇಧಾ ಶಕ್ತಿ, ಐಶ್ವರ್ಯ ಮತ್ತು ಪ್ರಭಾವ ಎಲ್ಲವೂ – ಪಿತೃ ಭೂಮಿಯನ್ನು ಸ್ವತಂತ್ರಗೊಳಿಸುವ – ಆ ಉಜ್ವಲ ಧ್ಯೇಯಕ್ಕಾಗಿ ಮೀಸಲಾಗಿತ್ತು. ಅತ್ಯಾಶ್ಚರ್ಯ ! ಇಂದು ಅವನು ತನ್ನ ಕನಸನ್ನು ಸಾಕಾರಗೊಳಿಸಿದ್ದಾನೆ.
ಎಷ್ಟು ವ್ಯಥೆಯ, ಅಪಮಾನದ ವಿಪರೀತ ಉದಾಹರಣೆಯಾಗಿದೆ, ಕೇವಲ ಹತ್ತು ವರ್ಷಗಳ ಅತ್ಯಲ್ಪ ಅವಧಿಯ ನಮ್ಮದೇ ಕಥೆ!

ಇತಿಹಾಸವು ಸಂಕೇತಿಸುತ್ತಿದೆ
ಈಗ ಸಂದೇಶವು ಸ್ಪಷ್ಟವಾಗಿದೆ. ಇತಿಹಾಸವು ತನ್ನ ತೀಕ್ಷ್ಣವಾದ ಮತ್ತು ಪ್ರವಾದಿಯ ವಾಣಿಯಿಂದ ನಮಗೆ ಕರೆಕೊಡುತ್ತದೆ – ‘‘ನೀವು ನಿಮ್ಮ ಹೃದಯದಲ್ಲಿ ನಿಮ್ಮ ಮಾತೆಯ ಮೂರ್ತಿಯನ್ನು ನಷ್ಟಗೊಳಿಸಿದಿರಿ. ಪರಿಣಾಮವಾಗಿ ಬಾಹುಗಳು ವಿಂಗಡಿಸಿ ಬಿದ್ದುವು. ಚರಿತ್ರೆಯ ಮಾರ್ಗವನ್ನು ವಿರುದ್ಧ ದಿಕ್ಕಿಗೆ ಬದಲಾಯಿಸಬೇಕಾಗಿದ್ದರೆ, ಮೊದಲು ನಿಮ್ಮ ಹೃದಯದಲ್ಲಿ ಅವಳ ಸಂಪೂರ್ಣ ದಿವ್ಯ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸಿರಿ. ನಿಮ್ಮ ರಾಷ್ಟ್ರೀಯ ಭವಿಷ್ಯದಲ್ಲಿರುವ ಉಜ್ವಲ ಶ್ರದ್ಧೆಯನ್ನು ಪುನಃ ಹೊತ್ತಿಸಿರಿ.
ಆ ಭವ್ಯ ಜ್ವಾಲೆಯು ಸಂಪೂರ್ಣ ದೇಶದ ಪ್ರತಿಯೊಂದು ಗುಡಿಸಲು – ಪ್ರಾಸಾದವನ್ನು ಹಳ್ಳಿ – ಪಟ್ಟಣವನ್ನು ಆವರಿಸಲಿ. ಇನ್ನೊಮ್ಮೆ ನಿಮ್ಮ ಅಜೇಯವಾದ ರಾಷ್ಟ್ರೀಯ ಸಂಕಲ್ಪದ ಸುಪ್ತ ಸಿಂಹವನ್ನೆಚ್ಚರಿಸಿರಿ. ಈ ಭೂಮಿಯ ಪ್ರತಿಯೊಂದು ಮಗುವಿನ ನಾಡಿಗಳಲ್ಲಿಯೂ ಏಕಸ್ವರದಿಂದ ಮಿಡಿಯುವ ಸುಸಂಘಟಿತ ಸಂಕಲ್ಪವನ್ನು ಹೃದಯದಲ್ಲಿ ನಿರ್ಮಿಸಿರಿ. ಎಲ್ಲ ಸ್ವಾರ್ಥವನ್ನೂ, ಜನರನ್ನು ವಿಂಗಡಿಸುವ ಮೇಲಿನ ಬೇಧಭಾವಗಳನ್ನೂ ಸುಡುವ ಉಜ್ವಲ ಸಂಕಲ್ಪವನ್ನು ಬೆಳಗಿಸಿರಿ. ವಿಶ್ರಾಂತಿ ಅಥವಾ ಸೋಲನ್ನರಿಯದ ಜಯಿಷ್ಣುವಾದ ಸಂಕಲ್ಪವನ್ನು ಕಟ್ಟಿರಿ. ಆಗ ನಿಮ್ಮ ಪಥದಲ್ಲಿ ಅಡ್ಡ ನಿಲ್ಲಬಲ್ಲ ಶಕ್ತಿಯು ತ್ರಿಲೋಕಗಳಲ್ಲಿಯೂ ಇಲ್ಲ’’.
ಕೇವಲ ಎರಡೇ ಶತಮಾನಗಳ ಹಿಂದೆ, ದಕ್ಷಿಣದಿಂದ ಉತ್ತರದವರೆಗೂ 800 ವರ್ಷಗಳಿಂದ ಇದ್ದ ಮುಸ್ಲಿಂ ಕಪಿಮುಷ್ಟಿಯನ್ನು ಅಪ್ಪಳಿಸಿ ಹರಿದೊಗೆದು, ವಿಜಯಶಾಲಿಯಾದ ಭಗವಾಧ್ವಜವು ಸಿಂಧುವನ್ನು ದಾಟಿ ಕಾಬೂಲಿನ ಮೇಲೆ ಗೌರವದಿಂದ ಹಾರಾಡಲಿಲ್ಲವೇ? ಒಮ್ಮೆ ಹೃದಯದಲ್ಲಿ ನಿಶ್ಚಯವನ್ನು ಧರಿಸಿದಿರೆಂದರೆ ಭವ್ಯ ಹಿಂದೂ ಶಕ್ತಿಯ ವಿಜಯಶಾಲಿ ಪ್ರಗತಿಯ ಮಾರ್ಗದಲ್ಲಿ ನೂರು ಪಾಕಿಸ್ತಾನಗಳೂ ನಿಲ್ಲಲಾರವು. ಅದಿಲ್ಲದಿದ್ದರೆ ಇನ್ನು ನೂರು ಪಾಕಿಸ್ತಾನಗಳು ಇದೇ ನಮ್ಮ ಹಿಂದೂ ಭೂಮಿಯಲ್ಲಿ ಹುಟ್ಟುವುವು.

ವಿಜಯದಶಮಿಯ ಸಂದೇಶ
ಕೆಲವು ಜನರು ಯೋಜನೆಯನ್ನು ಅಪೇಕ್ಷಿಸುತ್ತಾರೆ. ಎಷ್ಟು ನಿಷ್ಕ್ರಿಯ ಮತ್ತು ಅರ್ಥಶೂನ್ಯ ವಿಚಾರವಿದು! ನಾವು ಬೀಜದ ಮತ್ತು ಅದರ ಪೂರ್ಣ ಬೆಳವಣಿಗೆಯ ಆರೈಕೆಯನ್ನು ಮಾಡೋಣ. ಅದು ಸಾಕಾಗುತ್ತದೆ.ಯಾವ ಕೊಂಬೆಯಲ್ಲಿ, ಯಾವ ದಿನ ಹೂ ಅರಳಬೇಕೆಂಬುದು ಅದರೊಳಗಿನ ಸತ್ವಕ್ಕೆ ಚೆನ್ನಾಗಿ ತಿಳಿದಿದೆ . ಬಾಲಕ ಕೃಷ್ಣನನ್ನು ನಾವು ಚೆನ್ನಾಗಿ ಸಾಕೋಣ. ಅವನು ಬೆಳೆಯಲಿ. ದೈವೀ ರಾಜ್ಯವನ್ನು ಹೇಗೆ ಪ್ರಸ್ಥಾಪಿಸಬೇಕೆಂದು ಅವನಿಗೆ ಚೆನ್ನಾಗಿ ಗೊತ್ತು. ಹೃದಯ, ಸಂಕಲ್ಪಗಳನ್ನು ಪುನಶ್ಚೇತನಗೊಳಿಸಲು ಅದು ಒಂದೇ ಯೋಜನೆ, ಏಕಮೇವ ಮಾರ್ಗ. ಒಮ್ಮೆ ಆ ಮಾರ್ಗದಲ್ಲಿ ಮುನ್ನಡೆದೆವೆಂದರೆ ವಿಜಯಶ್ರೀಯು ನೆರಳಿನಂತೆ ಹಿಂಬಾಲಿಸಿ ಬರುವಳು. ರಾವಣನ ಮೇಲಿನ ಶ್ರೀರಾಮನ ವಿಜಯದಿಂದಲೂ ಪ್ರಾರಂಭಿಸಿ, ‘ವಿಜಯದಶಮಿ’ಯ ಈ ಅಮರ ಪರಂಪರೆಯು ‘ರಾಷ್ಟ್ರವು ಅದರ ಮಕ್ಕಳ ಹೃದಯದಲ್ಲಿ ಬಾಳಿದೆ’ ಎಂಬ ಸತ್ಯವನ್ನು ಪ್ರಕಾಶಿಸುವ ಇನ್ನೊಂದು ಸಾಕ್ಷಿ ಮಾತ್ರವಾಗಿದೆ.

1957

   

Leave a Reply