ಅರಿವಿನ ಬೆಳಕ ಬೀರುವ ಕಾರ್ಯ

ಚಿಂತನ - 0 Comment
Issue Date : 25.09.2014

ಅರಿವು ಅಮೃತ, ಅದನ್ನು ಪಾನ ಮಾಡಿದವರಿಗೆ ಖಂಡಿತ ಸಾವಿಲ್ಲ. ಅವರೆಲ್ಲ ಅಮರರು. ಆದ್ದರಿಂದಲೇ ಅರಿವಿನ ಬೆಳಕಿನಿಂದ ಎಲ್ಲರ ಬಾಳಿಗೂ ಬೆಳಕಾದ ವೇದವ್ಯಾಸರಂತಹ ಋಷಿವರ್ಯರ, ಅವರೇ ಸಾಕ್ಷಿಯಾಗಿ ನಿಂತು (ಒಳಿತನ್ನೇ ಬಯಸುವ ಪ್ರಜ್ಞೆ – ಒಳಿತನ್ನೇ ಆಚರಿಸುವ ಪ್ರಜ್ಞೆ ಗೆ ಬದುಕನ್ನೇ ಸಾಕ್ಷಿ ಆಗಿಸಿದವರು- ತಾವು ಸುರಕ್ಷಿತ ದೂರದಲ್ಲಿ ನಿಂತು ಹೆರವರನ್ನು ಆಳಕ್ಕೆ ತಳ್ಳಿ ಬಿಡುವ ಆಧುನಿಕ ‘ಸಾಕ್ಷಿ ಪ್ರಜ್ಞೆ’ಗಳಂತಲ್ಲ ಇವರು) ಸಾಮಾನ್ಯರಿಗಾಗಿ ತಿಳಿವಿನ ಕಂದೀಲು ವೇದ- ಪುರಾಣಗಳ ಮೂಲಕ ಸತ್ಯ ಇತಿಹಾಸವನ್ನು ತೆರೆದಿಟ್ಟು ಆ ಬೆಳಕಿನಲ್ಲಿ ಬೆಳಕಾಗಿ ಮೂಡಿ ಬಂದ ರಾಮ-ಕೃಷ್ಣ ಮುಂತಾದ ಮಹಾಮಹಿಮರು ಇಂದು ನಮಗೆ ಅಗೋಚರರು. ಆದರೂ ಅವರು ಮಾತು – ಕೃತಿಗಳ ಮೂಲಕ ಇಂದಿಗೂ ನಮ್ಮೊಡನೆಯೇ ಇರುವರು ತಾನೇ?

ಈ ಸಂಗತಿಯನ್ನು ಭಾವಿಸಿಕೊಂಡರೆ ಮಾತ್ರ ಬದುಕು ಬಂಗಾರ. ಇಲ್ಲದಿರೆ ಊಹಿಸಲೂ ಅಸಾಧ್ಯ. ಇದನ್ನೆಲ್ಲ ಅರಿತವರ ಕರ್ತವ್ಯ ಎಂದರೆ ಪಾಪ ಲೇಪವಿಲ್ಲದ ಬದುಕು ತಮ್ಮದು ಆದರೆ ಸಾಲದು.
ತಮ್ಮೊಡನೆ ಇರುವ ಇತರರೂ ಹಾಗೆ ಇರಬೇಕು ಎಂದು ಬಯಸುವುದು. ಹಾಗೆಂದೇ ಅವರು ತಾವು ತಿಳಿದುದನ್ನು ತಿಳಿಯದವರಿಗೆ (ತಿಳಿಯುವ ಹಂಬಲ ಇರುವವರಿಗೆ) ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೇ ತಿಳಿಸುವುದು ಕರ್ತವ್ಯವೆಂದು ಬಗೆದು ತಿಳಿಸಲು ಮುಂದಾದರು.

ತಮ್ಮ ಬದುಕನ್ನು ದೀಪದ ಬತ್ತಿ ತಾನು ಉರಿದು ಹೆರವರಿಗೆ ಬೆಳಕು ಕೊಡುವಂತೆ ತಾವು ಸ್ವತಃ ಬೆಂದು ಪಕ್ವವಾಗಿ ಹಾಯ್ದು ಬರುವಾಗ ಹಲವು ಪ್ರಯೋಗಗಳಿಗೆ ಒಡ್ಡಿಕೊಂಡರು. ಇದು ಕಷ್ಟದ ಹಾದಿ ಎಂದು ತಿಳಿದೇ ಈ ಸಾಹಸಕ್ಕೆ ಕೈ ಹಾಕಿದರು ಅವರು. ಈ ಯಾತ್ರೆಯಲ್ಲಿ ತಮಗೆ ಬಂದ ಅನುಭವಗಳನ್ನೆಲ್ಲ ದಾಖಲಿಸುತ್ತಾ ಹೋದರು. ಅವೇ ಸ್ಮೃತಿ – ಶಾಸ್ತ್ರಗಳಾಗಿ ಹೊರಹೊಮ್ಮಿದವು. ಯಾವುದೋ ಒಬ್ಬರ ಅನುಭವ ಇವಲ್ಲ. ಹಲವು ಪ್ರಯೋಗಶೀಲರ ಬದುಕಿನ ಅನುಭವಗಳ ಸಾರ, ಇಷ್ಟಾದ ಮೇಲೂ ನಮ್ಮ ಬಳಿ ವಿವೇಕ ಎಂಬುದು ಇದ್ದೇ ಇದೆಯಲ್ಲ!

ಶಾಸ್ತ್ರ ಎಂಬ ಪದ ಹುಟ್ಟಿದ್ದೇ ‘ಶಸ್’- ವಿದೀಯತೇ ಎಂಬುದರಿಂದ. ಇದು ಪ್ರಭು ಸಂಹಿತೆ. ಹೀಗೆ ಮಾಡೆಂದು ನಮಗೆ ಅಧಿಕಾರ ವಾಣಿಯಿಂದ ಹೇಳುತ್ತದೆ. ಈ ಮಾತಿನ ಹಿಂದೆ ‘ಅನುಭವ’ ಇದೆಯಲ್ಲ, ಅದೂ ಒಬ್ಬರದ್ದೇ ಅಲ್ಲ, ಅದೆಷ್ಟೋ ಜನ ಸಾಧಕರ ಶುದ್ಧ ಅನುಭವ!

ಹಾಗೆಂದೇ ಗೀತಾಚಾರ್ಯನೂ ಸಹ ಯಾರು ಶಾಸ್ತ್ರದ ಮಾತನ್ನು ಮೀರಿ ಮನ ಬಂದಂತೆ ನಡೆದುಕೊಳ್ಳುವನೋ ಆತನಿಗೆ ಇಹದ ಭುಕ್ತಿಯಿಲ್ಲ, ಪರದ ಮುಕ್ತಿಯಿಲ್ಲ ಎಂದಿದ್ದಾನೆ.

ಆದ್ದರಿಂದ ಯಾವುದು ಹೇಯ- ಯಾವುದು ಉಪಾದೇಯ, ಯಾವುದನ್ನು ಯಾವಾಗ ಹೇಗೆ ಮಾಡಬೇಕು- ಮಾಡಬಾರದು ಮಾಡಿದರೆ ಏನು ಹಾನಿ, ಅರಿಯದೆ ಮಾಡಿದರೆ ಉಂಟಾಗುವ ದೋಷವನ್ನು ಪರಿಮಾರ್ಜನೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನೇ ಶಾಸ್ತ್ರಗಳು ಹೇಳುತ್ತವೆ. ಹಾಗೆಂದೇ ‘ತಸ್ಮಾಚ್ಛಾಸ್ತ್ರಂ ಪ್ರಮಾಣಂ’ – ಶಾಸ್ತ್ರವೇ ಪ್ರಮಾಣ ಎಂಬ ಮಾತು ಬಂದಿದೆ.

ತಮ್ಮ ಬದುಕಿನ ಅನುಭವವನ್ನು ಅರಿಯದವರಿಗೆ ತಿಳಿಸಿ ಹೇಳುವುದರಿಂದ ಮಾತ್ರ ಜ್ಞಾನ ಸ್ವರೂಪಿಯಾದ ಭಗವಂತನ ಅನುಗ್ರಹ ಆದೀತು ಎಂಬ ಸೂತ್ರ ಈ ಹಿನ್ನೆಲೆಯಲ್ಲಿಯೇ ಬಂದಿದೆ (ಅರಿವಿನ ಹಂಬಲವಿದ್ದವರಿಗೆ ಮಾತ್ರ ಇದು ದಾರಿ.)

-ಶ್ರೀನಿಧಿ

   

Leave a Reply