ಅವರು ಹೀಗಿದ್ದರು – 9

ಚಂದ್ರಶೇಖರ ಭಂಡಾರಿ - 0 Comment
Issue Date : 04.02.2014

ಅರಕಲಿ ನಾರಾಯಣ

‘ಮಿಸ್ಟರ್ ನಾರಾಯಣ್, ಒಂದ್ನಿಮಿಷ. ನೀವು ಆರೆಸ್ಸೆಸ್‌ನವರೇನ್ರಿ?’
‘ಹೌದ್ಸರ್’
‘ಸರಿ ಮತ್ತೆ. ನನ್ನ ಅಂದಾಜು ಕರೆಕ್ಟಾಯ್ತು.’
‘ಯಾಕ್ಸರ್? ಏನಂದಾಜು?’
‘ನೋಡಿ, ಇದನ್ನೇ ನಾನು ತುಂಬ ದಿನದಿಂದ ನಿಮ್ಮನ್ನು ಕೇಳ್ಬೇಕೆಂದಿದ್ದೆ. ನೀವು ಒಮ್ಮೆಯೂ ಹೇಳಿದ್ದ ಸಮಯದಲ್ಲಿ ತಪ್ಪಿಲ್ಲ. ನಿಮ್ಮ ಕೆಲಸದ ರೀತಿ, ನಿಮ್ಮ ರಿಪೋರ್ಟು, ನಿಮ್ಮ ಅಕೌಂಟ್ಸ್ ಎಲ್ಲವನ್ನೂ ಅಬ್ಸರ್ವ್ ಮಾಡ್ತಾ ಇದ್ದೆ. ನನಗನಿಸ್ತಿತ್ತು. ನೀವು ಆರೆಸ್ಸೆಸ್‌ನವರೇ ಇರ್ಬೇಕು ಎಂದು. ನನ್ನ ಊಹೆ ಸರಿಯಾಯ್ತು. ಅದಕ್ಕಾಗಿ ಮಾತು ಕೇಳ್ದೆ.’
ಈ ಸಂವಾದ (ಇದೇ ಶಬ್ದಗಳೆಂದಲ್ಲ. ಆದರೆ ಸುಮಾರಾಗಿ ಇದೇ ರೀತೀ ನಡೆದಿದ್ದುದು ಸುಮಾರು ಐದು ದಶಕಗಳ ಹಿಂದೆ. ಇದರಲ್ಲಿ ಮೊದಲು ಪ್ರಶ್ನಿಸಿದವರು ತುಸು ಕಾಲ ಕರ್ನಾಟಕದ ಮುಖ್ಯಮಂತ್ರಿ, ಸಂಸದರು, ಕೇಂದ್ರದ ರೈಲು ಮಂತ್ರಿ ಸಹ ಆಗಿದ್ದ ಕೆಂಗಲ್ ಹನುಮಂತಯ್ಯನವರು; ಉತ್ತರಿಸುತ್ತಿದ್ದವರು ಹಲವು ವರ್ಷಗಳ ಕಾಲ ಸಂಘದ ಕರ್ನಾಟಕ ಪ್ರಾಂತ ಕಾರ್ಯವಾಹರಾಗಿದ್ದ (ಈ ಸಂವಾದ ನಡೆದಾಗ ಅಲ್ಲ) – ಸಾಮಾನ್ಯವಾಗಿ ‘ಅರಕಲಿ’ ಎಂದೇ ಸುಪರಿಚಿತರಾಗಿದ್ದ – ಶ್ರೀ ಅರಕಲಿ ನಾರಾಯಣ ಅವರು. ಸಂವಾದ ನಡೆದ ಸಂದರ್ಭ : ಅರವತ್ತರ ದಶಕದಲ್ಲಿ ಸ್ವಾಮಿ ವಿವೇಕಾನಂದ ಜನ್ಮಶತಮಾನೋತ್ಸವ ಮತ್ತು ಶಿಲಾಸ್ಮಾರಕ ರಚನೆಗೆ ಸಂಬಂಧಿಸಿ ಸಂಘದ ವತಿಯಿಂದ ಕೈಗೊಳ್ಳಲಾಗಿದ್ದ ಅಭಿಯಾನದ್ದು. ತತ್ಸಂಬಂಧಿತ ಪ್ರಾಂತೀಯ ಸಮಿತಿಗೆ ಅಧ್ಯಕ್ಷರಾಗಿದ್ದವರು. ಕೆಂಗಲ್ ಹನುಮಂತಯ್ಯ ಅವರು ಮತ್ತು ಸಂಘಟನಾ ಕಾರ್ಯದರ್ಶಿಯಾಗಿದ್ದವರು ಅರಕಲಿ ಅವರು. ಒಮ್ಮೆ ಸಮಿತಿಯ ಕಾರ್ಯನಿಮಿತ್ತ ಅಧ್ಯಕ್ಷರನ್ನು ಕಾಣಲು ಹೋಗಿದ್ದ ಅವರ ಕೆಲಸ ಮುಗಿಸಿ ಹೊರಟು ನಿಂತಾಗ ಅವರನ್ನು ತಡೆದು ನಿಲ್ಲಿಸಿ ಹನುಮಂತಯ್ಯನವರು ನಡೆಸಿದ್ದ ಸಂವಾದ ಮೇಲಿನದು.
ಅರಕಲಿ ಅವರ ವಿಶೇಷತೆ ಇದ್ದುದು ಇದರಲ್ಲಿ. ಅವರು ತಾನು ಸಂಪರ್ಕಿಸಿದವರೆಲ್ಲರಿಗೆ ಸಂಘವನ್ನು ಪರಿಚಯಿಸುತ್ತಿದ್ದುದು ತಮ್ಮ ಮಾತು ಮತ್ತು ಕೆಲಸದ ರೀತಿ ಇವುಗಳ ಮೂಲಕ. ಹನುಮಂತಯ್ಯನವರು ಅಂತಹರಲ್ಲಿ ಒಬ್ಬರು.
ಅರಕಲಿಯವರ ಕೆಲಸದ ಶೈಲಿಯಿಂದ ಪ್ರಭಾವಿತರಾದ ಕೆಂಗಲ್ ಅವರು ಒಮ್ಮೆ ನಾರಾಯಣ ಅವರೊಂದಿಗೆ ‘ಕೇಶವಕೃಪಾ’ಗೆ ಬಂದಿದ್ದುದೂ ಉಂಟು. ಅಲ್ಲಿನ ಹಾಲ್, ಭಂಡಾರ, ಆಗ ಅಲ್ಲಿದ್ದ ಹಿರಿಯ ಕಾರ್ಯಕರ್ತರ ಪರಿಚಯ ಇತ್ಯಾದಿ ಆದ ಮೇಲೆ ಹನುಮಂತಯ್ಯನವರ ಬಾಯಿಂದ ಬಂದ ಉದ್ಗಾರ : ‘‘Everything spick and spam’’ (ಎಲ್ಲವೂ ಠಾಕುಠೀಕು, ಅಚ್ಚುಕಟ್ಟು). ಅರಕಲಿಯವರು ಕೆಂಗಲ್ ಅವರಿಗೆ ಸಂಘವನ್ನು ಪರಿಚಯಿಸಿ, ಪ್ರಭಾವಿತಗೊಳಿಸಿದ ಮೋಡಿ ಇದು.
ಒಂದು ಮಧ್ಯಮ ವರ್ಗದ ಮನೆತನದಲ್ಲಿ ಜನಿಸಿದ ಅರಕಲಿಯವರು ಕಿಶೋರರಾಗಿದ್ದಾಗಿನಿಂದಲೂ ಸ್ವಯಂಸೇವಕರು. ಪದವಿ ಪ್ರಾಪ್ತಿಯ ನಂತರ ಕನ್ನಡದ ಸುವಿಖ್ಯಾತ ಸಾಪ್ತಾಹಿಕ ‘ಪ್ರಜಾಮತ’ದ ಕಚೇರಿಯಲ್ಲಿ ನೌಕರಿಯಲ್ಲಿದ್ದರು. ಮುಂದೆ ಸಂಘದ ಅಪೇಕ್ಷೆಯಂತೆ ಈ ನೌಕರಿಗೆ ರಾಜೀನಾಮೆಯಿತ್ತು ‘ವಿಕ್ರಮ’ ಸಾಪ್ತಾಹಿಕದ ನಿರ್ವಾಹಕರಾದರು. ಅವರಿಂದಾಗಿ ‘ವಿಕ್ರಮ’ಕ್ಕೆ ಆನೆಬಲ ಬಂದಂತಾಯಿತು. ವಿಕ್ರಮದ ಮಾರಾಟಗಾರರು, ಓದುಗರು ಮತ್ತು ಪ್ರಸಾರ ಸಂಖ್ಯೆಯಲ್ಲಿ ಹೆಚ್ಚಳ, ಅದರ ಕಚೇರಿ ಮತ್ತು ಕೇಸರಿ ಮುದ್ರಣಾಲಯದ ಸಿಬ್ಬಂದಿ ವರ್ಗದ ನಡುವೆ ಅನ್ಯೋನ್ಯತೆ, ಜಾಹೀರಾತುದಾರರ ಸಂಖ್ಯಾವೃದ್ಧಿ, ಪತ್ರಿಕೆಯ ಆರ್ಥಿಕತೆ ಇತ್ಯಾದಿ ಎಲ್ಲವನ್ನು ತಮ್ಮ ವ್ಯಾಪಕ ಸಂಪರ್ಕ ಮತ್ತು ಆತ್ಮೀಯ ವ್ಯವಹಾರದ ಮೂಲಕ ಸುವ್ಯವಸ್ಥಿತಗೊಳಿಸುವುದರಲ್ಲಿ (stream line) ಅರಕಲಿಯವರ ಪಾತ್ರ ಗಣನೀಯವಾದುದು.
ಸಂಪರ್ಕ ಕುಶಲತೆ ಅರಕಲಿಯವರಲ್ಲಿದ್ದ ವಿಶೇಷ ಗುಣ. ಬೆಂಗಳೂರಲ್ಲಿ ಪ್ರತಿಷ್ಠಿತ ನಾಗರಿಕತು ಮತ್ತು ನಿಕಟವರ್ತಿ ಸಂಘ ಹಿತೈಷಿಗಳದೇ ಒಂದು ಪ್ರತ್ಯೇಕ ಶ್ರೀಗುರುಪೂಜಾ ಉತ್ಸವ ಹಲವು ವರ್ಷಗಳಿಂದ ರೂಢಿಯಲ್ಲಿದ್ದ ಕಾರ್ಯಕ್ರಮ. ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದವರಲ್ಲಿ – ಕೆನರಾ ಬ್ಯಾಂಕ್‌ನ ಹಿರಿಯ ಅಧಿಕಾರಿ ದಾಮೋದರ ಪೈ, ಗಣ್ಯ ವರ್ತಕರಾದ ಯಾದಾಳಂ ಗಂಗಾಧರ ಶ್ರೇಷ್ಠಿ ಮೊದಲಾದವರು ಅವರಲ್ಲಿ ಹೆಸರಿಸಬಹುದಾದ ಒಬ್ಬಿಬ್ಬರು – ಪ್ರತಿವರ್ಷ ಅದಕ್ಕಾಗಿ ಶ್ರದ್ಧೆಯಿಂದ ಕಾದುಕೊಂಡಿದ್ದು ತಪ್ಪದೆ ಅದರಲ್ಲಿರುತ್ತಿದ್ದುದು ಅರಕಲಿಯವರ ಸಂಪರ್ಕದ ಕಾರಣದಿಂದಾಗಿ. ಈ ಉತ್ಸವಗಳಲ್ಲಿ ಕೇಂದ್ರ ಸರ್ಕಾರದ ನಿವೃತ್ತ ಗೃಹಕಾರ್ಯದರ್ಶಿ ವಿ.ಪಿ.ಮೆನನ್ (ಭಾರತದ ಮೊದಲ ಗೃಹಮಂತ್ರಿ ಸರದಾರ ಪಟೇಲರ ನಿಕಟವರ್ತಿಗಳಾಗಿದ್ದು ಅಂದಿನ ಆರು ನೂರರಷ್ಟು ಸಂಸ್ಥಾನಗಳನ್ನು ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಹಿರಿಯ ಸರ್ಕಾರಿ ಅಧಿಕಾರಿ) ಕೋಕಾ ಸುಬ್ಬರಾವ್ (ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು) ಮೊದಲಾದವರು ಅಧ್ಯಕ್ಷತೆ ವಹಿಸಿದ್ದುಂಟು. ಅರಕಲಿಯವರ ಸಂಪರ್ಕದ ಅಸಾಧಾರಣ ಪ್ರೌಢಿಮೆಗೆ ಪ್ರತಿವರ್ಷದ ಈ ಉತ್ಸವ ಸಾಕ್ಷಿ ಹೇಳುವಂತಿರುತ್ತಿತ್ತು.
ತಮಗೆ ಒಪ್ಪಿಸಲಾದ ಕೆಲಸ ಯಾವುದೇ ಇರಲಿ, ಅದು ಯಶಸ್ವಿಯಾಗಿ ನೆರವೇರಿದಂತೆಯೇ ಎಂಬ ಭರವಸೆಯಿರಿಸಿಕೊಳ್ಳಬಹುದಾದ ಕಾರ್ಯಕುಶಲತೆ ಅವರದು. ತಮ್ಮ ಖಾಸಗಿಯಾದ ಹಲವು ರೀತಿಯ ಕೆಲಸಗಳಿಗಾಗಿ ತಮ್ಮೂರಿನ ಸಂಘದ ಪ್ರಮುಖರಿಂದ ಪರಿಚಯ ಪತ್ರ ಸಹಿತ ಕೇಶವ ಕೃಪಾಗೆ ಅನೇಕರು ಬರುವುದಿದೆ. ಬೆಂಗಳೂರಲ್ಲಿ ಅವರ ಅಂತಹ ಎಲ್ಲ ಕೆಲಸಗಳನ್ನು ನೆರವೇರಿಸಲು ಸಂಬಂಧಪಟ್ಟ ವ್ಯಕ್ತಿಗಳ ಭೇಟಿ, ಇನ್ನಿತರ ಅಗತ್ಯಗಳ ಏರ್ಪಾಡು ಮಾಡಿಸಿ, ಅವರು ನಿರಾಳ ಮನದಿಂದ ಕೆಲಸ ಪೂರೈಸಿದ ತೃಪ್ತಿಯೊಂದಿಗೆ ವಾಪಸ್ ಹೋಗುವಂತೆ ಮಾಡುತ್ತಿದ್ದವರು ಅರಕಲಿಯವರು. ಕೆಲವೊಮ್ಮೆ ಕಾರಣಾಂತರದಿಂದ ಯಾವುದೇ ಕೆಲಸ ಕೈಗೂಡದಿದ್ದಲ್ಲಿ – ಅಪರೂಪವಾಗಿ ಆ ರೀತಿ ಆಗುತ್ತಿದ್ದುದು ಇಲ್ಲವೆಂದಲ್ಲ – ಬಂದವರು ಕನಿಷ್ಠ ಪಕ್ಷ ಮಾಡಬಹುದಾದ ಪ್ರಯತ್ನವಂತೂ ಎಲ್ಲ ಆಗಿದೆ ಎಂಬ ಸಮಾಧಾನದಿಂದಲೇ ಹೋಗುತ್ತಿದ್ದರು. ತುಂಬ ನಿರೀಕ್ಷೆಯಿರಿಸಿ ದೂರದಿಂದ ಕೇಶವಕೃಪಾಗೆ ಬಂದವರು ನಿರಾಶರಾಗಿ ಹೋಗಬಾರದು ಎಂಬ ಕಾಳಜಿ ಅರಕಲಿಯವರದಾಗಿರುತ್ತಿತ್ತು.
ಆದರೆ ದೇಶದ ಇತರ ಅನೇಕ ಕೇಂದ್ರಗಳಲ್ಲಿ – ಕಾರಣಗಳೇನೇ ಇರಬಹುದು – ಇದೇ ವಿಧದ ಅನುಭವ ಎಲ್ಲರದಾಗಿರುತ್ತಿರಲಿಲ್ಲ. ಅಲ್ಲಿ ತಮಗೆ ಸರಿಯಾದ ಸಹಕಾರ, ಸ್ಪಂದನ ಸಿಗಲಿಲ್ಲ ಎಂಬ ಅನಿಸಿಕೆ ಹೋದವರ ಮನದಲ್ಲಿ ಉಳಿಯುತ್ತಿತ್ತು. ಒಮ್ಮೆ ಇದು ಪ.ಪೂ. ಶ್ರೀಗುರೂಜಿಯವರ ಮುಂದೆ ಅನೌಪಚಾರಿಕ ಮಾತುಕತೆಯಲ್ಲಿ ಪ್ರಸ್ತಾಪವಾಯ್ತು. ಆಗ ಶ್ರೀಗುರೂಜಿಯವರಿಂದ ಸಹಜವಾಗಿಯೇ ಬಂದ ಪ್ರತಿಕ್ರಿಯೆ : ‘ನಿಜ, ಎಲ್ಲ ಕಡೆಗಳಲ್ಲಿ ಅರಕಲಿ ನಾರಾಯಣ ಇಲ್ಲವಲ್ಲ.’ ಅವರ ಈ ಉದ್ಗಾರವೇ ಅರಕಲಿಯವರ ಕಾರ್ಯಶೈಲಿಗೆ ಹಿಡಿದ ಕನ್ನಡಿ ಎನ್ನಬಹುದಲ್ಲವೇ?
1982ರಲ್ಲಿ ಕರ್ನಾಟಕದ ಬೃಹತ್ ಸಂಘ ಶಿಬಿರ ‘ಹಿಂದು ಸಂಗಮ’ ಯೋಜಿತವಾಗಿದ್ದುದು ಸರ್ವವಿದಿತ. ಅದನ್ನು ನಡೆಸಲು ಯೋಗ್ಯವಾದ ಸ್ಥಾನ ಬೆಂಗಳೂರಿನ ಅರಮನೆ ಮೈದಾನ ಎಂಬುದು ಹಿರಿಯ ಕಾರ್ಯಕರ್ತರೆಲ್ಲರ ಒಮ್ಮತದ ಅಭಿಪ್ರಾಯವಾಗಿತ್ತು. ಆದರೆ ಅದಕ್ಕಾಗಿ ಅನುಮತಿ ಪಡೆಯುವುದು ಸುಲಭದ ಕೆಲಸವಾಗಿರಲಿಲ್ಲ. ಅಲ್ಲಿ ಬೃಹತ್ ಸಮಾವೇಶವೊಂದನ್ನು ನಡೆಸಲು ಯೋಜನೆಯಾಗಿದ್ದುದು ಅದೇ ಮೊದಲ ಬಾರಿ. ಅದುವರೆಗೆ ಯಾರೂ ಆ ಜಾಗವನ್ನು ಬಳಸಿಯೇ ಇರಲಿಲ್ಲ. ಅನೇಕರ ಸಹಮಾಲಕತ್ವಕ್ಕೆ ಸೇರಿದ ಪ್ರದೇಶ ಅದು. ಹತ್ತಾರು ವಿಧದ ಒಳಸುಳಿಗಳು ಕೆಲಸ ಮಾಡುತ್ತಿದ್ದ ಕಗ್ಗಂಟು ಅದರಲ್ಲಿದ್ದವು. ಆದರೆ ಅನುಮತಿ ಪಡೆಯುವ ಸವಾಲನ್ನು ಅರಕಲಿಯವರು ಸ್ವೀಕರಿಸಿದರು. ಅದಕ್ಕಾಗಿ ಅವರು ಮಾಡಿದ್ದ ಓಡಾಟ, ಪಟ್ಟು ಹಿಡಿದು ಸಾಧಿಸಿದ್ದ ಸಂಪರ್ಕ, ಮಾತಿನ ವರಸೆ ಇವೆಲ್ಲ ಒಂದು ಪ್ರತ್ಯೇಜವಾದ ರಸವತ್ತಾದ ಕತೆಯೇ ಆದೀತು. ಕೊನೆಗೂ ಅವರು ಲಿಖಿತ ಅನುಮತಿ ಪಡೆಯುವುದರಲ್ಲಿ ಯಶಸ್ವಿಯಾದರಷ್ಟೇ ಅಲ್ಲ, ಆ ಮಾಲಿಕರಿಂದಲೇ ‘ಹಿಂದು ಸಂಗಮ’ಕ್ಕಾಗಿ ಸಾಕಷ್ಟು ದೊಡ್ಡ ಮೊತ್ತದ ದೇಣಿಗೆ ಸಹ ಗಿಟ್ಟಿಸಿಕೊಳ್ಳುವುದರಲ್ಲೂ ಸಫಲರಾದರು.
ಈ ಶಿಬಿರಕ್ಕೆ ಶಿವಮೊಗ್ಗ ವಿಭಾಗದಿಂದ ಬರುವ ಸ್ವಯಂಸೇವಕರಿಗಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ಸಹ ಮಂಡಿಸಲ್ಪಟ್ಟಿತ್ತು. ಆಗ ರೈಲು ಮಂತ್ರಿಯಾಗಿದ್ದವರಿಗೆ ಸಂಘದ ಬಗ್ಗೆ ಒಲವು ಇರಲಿಲ್ಲವೆಂದಲ್ಲ. ಆದರೆ ಅದಕ್ಕೆ ಅವಕಾಶ ನೀಡಿದಲ್ಲಿ ತಮ್ಮ ಸ್ವಪಕ್ಷದಲ್ಲಿನ ರಾಜಕೀಯ ವೈರಿಗಳಿಗೆ ತಮ್ಮ ವಿರುದ್ಧ ಪ್ರಯೋಗಿಸಲು ಒಂದು ಅಸ್ತ್ರ ತಾವೇ ಒದಗಿಸಿದಂತಾದೀತು ಎಂಬ ಭೀತಿ ಕಾಡುತ್ತಿತ್ತು. ಈ ಕೆಲಸದಲ್ಲೂ ಅರಕಲಿಯವರು ತಮ್ಮ ಮಾತಿನ ಚಾಕಚಕ್ಯತೆಯಿಂದ ರೈಲುಮಂತ್ರಿ ಅವರನ್ನು ಒಪ್ಪಿಸಿದರು. ಶಿಖರದ ಸಲುವಾಗಿ ಶಿವಮೊಗ್ಗದಿಂದ ವಿಶೇಷ ರೈಲಿನ ವ್ಯವಸ್ಥೆ ಸಹ ಆಯ್ತು.
ನಾವು ಮಾಡುವ ಕೆಲಸಗಳಲ್ಲಿ ‘ಸ್ವಾಮಿ ಕಾರ್ಯ’ ಮತ್ತು ‘ಸ್ವಕಾರ್ಯ’ ಎಂಬ ಎರಡು ವಿಧದವು ಇರುವುದು ಎಲ್ಲರಿಗೂ ಗೊತ್ತು. ಇವುಗಳಿಗೆ ಸಂಬಂಧಿಸಿದಂತೆ ಅರಕಲಿಯವರ ಚಿಂತನೆ ಉದ್ಭೋದಕವಾದುದು.
ಬೆಂಗಳೂರಲ್ಲಿ ಭಾರೀ ಪ್ರಮಾಣದ ಸಭೆ ಸಮಾರಂಭಗಳಿಗಾಗಿ ಜಮಖಾನ, ಕುರ್ಚಿ, ಪಾತ್ರೆ, ವೇದಿಕೆ, ಶಾಮಿಯಾನ ಇತ್ಯಾದಿ ಬಾಡಿಗೆಗೆ ಒದಗಿಸುವ ಒಂದು ಸುಪರಿಚಿತ ವ್ಯಾಪಾರಿ ಸಂಸ್ಥೆಯಿದೆ. ಸಾಮಾನ್ಯವಾಗಿ ಸಂಘದ ಅಂತಹ ಕಾರ್ಯಕ್ರಮಗಳಿಗಾಗಿ ಅರಕಲಿಯವರು ಅವರಿಂದಲೇ ಅವೆಲ್ಲವನ್ನು ತರುತ್ತಿದ್ದರು. ಕಾರ್ಯಕ್ರಮದ ನಂತರ ಬಿಲ್ ಪಾವತಿ ಮಾಡುವಾಗ, ಪ್ರತಿಬಾರಿ ಒಂದಿಷ್ಟು ಗಣನೀಯ ಪ್ರಮಾಣದಲ್ಲಿ ‘ಸೋಡಿ’ ಬಿಡುವಂತೆ ಮಾಡುವುದು ಸಹ ಅರಕಲಿಯವರು ಅನುಸರಿಸುತ್ತಿದ್ದ ರೀತಿ. ಸಂಘದ ಹಿತೈಷಿಗಳಾಗಿದ್ದ ಆ ಉದ್ಯಮಿಗೂ ಅದು ಗೊತ್ತಿದ್ದ ಸಂಗತಿಯೇ. ಸಂಘದ ಬಗ್ಗೆ ಇದ್ದ ಮೆಚ್ಚುಗೆ, ಅರಕಲಿಯವರ ಬಗ್ಗೆ ಇದ್ದ ಗೌರವ ಇತ್ಯಾದಿ ಹಿನ್ನೆಲೆಯಲ್ಲಿ ಅವರು ಸಹ ಸಹರ್ಷವಾಗಿ ಅಂತಹ ‘ಸೋಡಿ’ಗೆ ಹೂಂಗುಡುತ್ತಿದ್ದರು.
ಆದರೆ ಒಮ್ಮೆ ಯಾವುದೋ ಪ್ರಸಂಗದಲ್ಲಿ ಅರಕಲಿಯವರು ಬಿಲ್ ಮೊತ್ತದ ಪೂರಾ ಪಾವತಿ ಮಾಡಿದರು. ವಾಸ್ತವಿಕವಾಗಿ ಒಂದಿಷ್ಟು ಸೋಡಿಗೆ ಆಗ ಮಾನಸಿಕವಾಗಿ ಸಿದ್ಧರಾಗಿದ್ದ ಆ ಉದ್ಯಮಿಗೆ ಇದು ಅಚ್ಚರಿ ನೀಡಿತು. ಅವರು ‘ಅರೆ, ಇದೇನು, ಬಿಲ್ ಪೂರಾ ಪಾವತಿ ಮಾಡಿದಿರಲ್ಲ’ ಎಂದು ತಾವೇ ಪ್ರಶ್ನಿಸಿದರು. ಆಗ ಅರಕಲಿಯವರು, ‘‘ಹೌದು, ಈ ಬಾರಿ ನಾನು ಇವೆಲ್ಲವನ್ನು ಕೊಂಡೊಯ್ದಿದ್ದುದು ನಮ್ಮ ಮನೆಯ ಸಮಾರಂಭಕ್ಕಾಗಿ. ಹಾಗಾಗಿ ಬಿಲ್ ಪೂರಾ ಪಾವತಿ ಮಾಡಬೇಕಾದುದು ನನ್ನ ಕರ್ತವ್ಯವಲ್ಲವೇ?’’ ಎಂದರು.
ಅರಕಲಿಯವರ ವಿಶೇಷ ದೃಷ್ಟಿ ಗುರುತಿಸಬೇಕಾದುದು ಇಲ್ಲಿ. ಸಾಮಾನ್ಯವಾಗಿ ನೌಕರರಾಗಿರುವವರು ತಮ್ಮ ಕಂಪನಿಗೆ ಅಥವಾ ಸರ್ಕಾರಿ ನೌಕರರಾಗಿದ್ದಲ್ಲಿ ತಮ್ಮ ಇಲಾಖೆಗೆ ಸಲ್ಲಿಸಬೇಕಾದ ಬಿನ್‌ಅನ್ನು ಒಂದಿಷ್ಟು ಹೆಚ್ಚು ಹಾಕಿಸಿ, ಅದರಲ್ಲೂ ಒಳವ್ಯವಹಾರ ನಡೆಸಿ ಒಂದಿಷ್ಟು ಪಾಲು ‘ನಿಮಗೆ-ನಮಗೆ’ ಎಂಬಂತೆ ಹಂಚಿಕೊಳ್ಳುವುದು ಮಾಮೂಲಿ ಮತ್ತು ಸ್ವಂತಕ್ಕೆ ಸಂಬಂಧಿಸಿದ ಬಿಲ್‌ನಲ್ಲಿ ಅತಿ ಹೆಚ್ಚಿನ ಕಡಿತಕ್ಕಾಗಿ ಪ್ರಯತ್ನಿಸುವುದು ರೂಢಿ (ಕಂಪನಿಯ / ಇಲಾಖೆಯ ಖರ್ಚಿನಲ್ಲಿ ತಮ್ಮ ಸ್ವಂತದ ಬಿಲ್ ಸಹ ಸೇರಿಸುವುದು ಅಪರೂಪವೇನಲ್ಲ) ಆದರೆ ಅರಕಲಿಯವರು ಯೋಚಿಸುತ್ತಿದ್ದ ರೀತಿಯೇ ಬೇರೆ. ಸಂಘದ ಕೆಲಸ ಎಂದರೆ ಸಮಾಜದ ಕೆಲಸ. ಅದರೊಂದಿಗೆ ವ್ಯವಹರಿಸುವಾಗ ಯಾರೇ ಇರಲಿ ಕೇವಲ ಲಾಭದ್ದಷ್ಟೇ ವಿಚಾರ ಮಾಡದೆ, ಒಂದಿಷ್ಟು ಸೋಡಿಗಾಗ ಸಹರ್ಷ ಸಿದ್ಧರಿರಬೇಕು. ಆದರೆ ಸ್ವಂತದ ಬಿಲ್ ವಿಚಾರದಲ್ಲಿ ಸಂಘದ ಬಗ್ಗೆ ಸಮಾಜದಲ್ಲಿರುವ ಸದ್ಭಾವನೆಯ (good will) ದುರ್ಲಾಭ ಪಡೆಯಲೂ ಬಾರದು. ಸ್ವಾಮಿ ಕಾರ್ಯ (ಇಲ್ಲಿ ಸಂಘಕಾರ್ಯ)ದಲ್ಲಿ ಮಹತ್ವ ಲಾಭಕ್ಕಲ್ಲ, ಉದಾರತೆಗೆ. ಆದರೆ ಸ್ವಕಾರ್ಯದಲ್ಲಿ ಸಂಘಕಾರ್ಯದ ಸದ್ಭಾವನೆಯ ದುರುಪಯೋಗವಾಗಬಾರದು – ಇದು ನಮ್ಮ ಕಾರ್ಯನೀತಿಯಾಗಬೇಕೆಂಬ ಆದರ್ಶ ಅವರದಾಗಿತ್ತು.
ಬೆಂಗಳೂರಿನ ಹಣಕಾಸು ವ್ಯವಹಾರದ (Finance) ಸಂಸ್ಥೆಯೊಂದು ತನ್ನ ನಿರ್ದೇಶಕರ ಮಂಡಲಿಯಲ್ಲಿ ಸದಸ್ಯರಾಗಿ ಸೇರಿಕೊಳ್ಳುವಂತೆ ಅರಕಲಿಯವರನ್ನು ವಿನಂತಿಸಿತ್ತು. ಈ ವಿನಂತಿಗೆ ಒಪ್ಪಿಕೊಳ್ಳುವಂತೆ ಸಂಘದ ಪ್ರಮುಖರು ಸಹ ಅವರಿಗೆ ತಿಳಿಸಿದ್ದರು. ಆದರೆ ನಿರ್ದೇಶಕ ಮಂಡಲಿಯ ಸದಸ್ಯರಾಗಲು ಅಗತ್ಯವಿರುವ ಪಾಲು ಬಂಡವಾಳ ಹಾಕುವಷ್ಟು ಆರ್ಥಿಕ ಅನುಕೂಲತೆ ಅರಕಲಿಯವರಿಗಿರಲಿಲ್ಲ. ಹೀಗಾಗಿ ಅವರು ಬೇರೆಯವರಿಂದ ಸಾಲ ಪಡೆದು ಅಗತ್ಯದ ಪಾಲು ಬಂಡವಾಳ ಹಾಕಿ ನಿರ್ದೇಶಕರಾದರು.
ಮಂಡಲಿಯ ಸದಸ್ಯರಾದ ಮೇಲೆ ಆಗಾಗ ನಡೆಯುವ ನಿರ್ದೇಶಕರ ಬೈಠಕ್‌ನಲ್ಲಿ ಪಾಲ್ಗೊಂಡಾಗ ಭತ್ಯದ ರೂಪದಲ್ಲಿ ಒಂದಿಷ್ಟು ಹಣ ಅವರಿಗೆ ಸಿಗಲಾರಭಿಸಿತು. ಅದರಿಂದ ಅವರು ಮೊದಲು ಬಡ್ಡಿಸಹಿತ ತಮ್ಮ ಸಾಲದ ಮರುಪಾವತಿ ಮಾಡಿದರು. ತದ ನಂತರ ದೊರೆಯುತ್ತಿದ್ದ ಭತ್ಯದ ಹಣವನ್ನೆಲ್ಲ ಸ್ವಂತಕ್ಕಾಗಿ ಬಳಸದೆ ‘ಸತ್ಕಾರ್ಯನಿಧಿ’ ಎಂಬ ಟ್ರಸ್ಟ್ ಸ್ಥಾಪಿಸಿ ಅದರ ಖಾತೆಯಲ್ಲಿ ಜಮಾ ಮಾಡಲಾರಂಭಿಸಿದರು. ನಿರ್ದೇಶಕರ ಭತ್ಯದ ರೂಪದಲ್ಲಿ ಲಭಿಸುವ ಹಣ ತನಗೆ ವೃತ್ತಿಯಿಂದ ಸಂಪಾದನೆಯಾಗಿ ಬಂದುದಲ್ಲ. ಅದೇನಿದ್ದರೂ ಸಮಾಜ ತನಗೆ ನೀಡಿದ ಹೆಚ್ಚುವರಿ ಕೊಡುಗೆ ಮಾತ್ರ. ಅದನ್ನು ಸ್ವಂತಕ್ಕೆ ಬಳಸಬಾರದು. ಬದಲಾಗಿ ಅದನ್ನಿನ್ನಷ್ಟು ಹೆಚ್ಚಿಸಿ ಸಮಾಜಕ್ಕೆ ಮರುಪಾವತಿ ಮಾಡಬೇಕಾದುದೇ ತನ್ನ ಕರ್ತವ್ಯ – ಹೀಗಿತ್ತು ಅವರ ಮನೋಧರ್ಮ.
‘ಸತ್ಕಾರ್ಯ ನಿಧಿ’ಯನ್ನು ಅವರು ವಿನಿಯೋಗಿಸುತ್ತಿದ್ದುದು – ನಿಕಟವಾಗಿ ತಿಳಿದವರು ಹೇಳುವಂತೆ ಕೆಲವು ಲಕ್ಷ ರೂಪಾಯಿಗಳಾದರೂ ಆಗಿರಬಹುದು – ಪ್ರಾಕೃತಿಕ ವಿಕೋಪ ಪೀಡಿತರಿಗೆ ಮತ್ತು ಇನ್ನಿತರ ರೀತಿಯ ಸಾಮಾಜಿಕ ಕಾರ್ಯಗಳಿಗೆ ನೆರವು ನೀಡಲು ಮಾತ್ರ. ಬದುಕಿನ ಕೊನೆಯ ದಿನಗಳಲ್ಲಿ ಕ್ಯಾನ್ಸರ್ ಪೀಡಿತರಾಗಿದ್ದು, ಸ್ವಪರಿವಾರದ ಆರ್ಥಿಕ ಸ್ಥಿತಿ ಗಂಭೀರವಾಗಿದ್ದಾಗ, ಹಲವು ಮೂಲಗಳಿಂದ ಅವರಿಗೆ ಅಯಾಚಿತವಾಗಿ ನೆರವು ನೀಡಲು ವ್ಯವಸ್ಥೆಯಾಗಿದ್ದರೂ ಅವರದನ್ನು ವಿನಮ್ರವಾಗಿ ಸಮಾಜ ಕಾರ್ಯಕ್ಕಾಗಿಯೇ ಮರಳಿಸುತ್ತಿದ್ದರು.
ಇಂದು ಸಮಾಜವನ್ನು ದೋಚಿ, ಬಾಚಿ ಬದುಕುವ ಭಂಡರೇ ಸರ್ವತ್ರ ವಿಜೃಂಭಿಸುತ್ತಿರಬೇಕಾದಲ್ಲಿ, ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಬದುಕುವುದರಲ್ಲೆ ಸಾರ್ಥಕತೆ ಕಂಡಂತಹ ಅಪರೂಪದ ಸ್ವನಾಮಧನ್ಯರು ಅರಕಲಿಯವರು. ಅವರು ನಮ್ಮ ನಡುವೆ ಇದ್ದರೆಂಬುದೇ ನಮಗೊಂದು ಹೆಮ್ಮೆಯ ಸಂಗತಿ.

– ಚಂದ್ರಶೇಖರ ಭಂಡಾರಿ

   

Leave a Reply