ಬಂಗಾರಪೇಟೆ: ಅರ್ಥಪೂರ್ಣ ಆಜಾದ್ ಜನ್ಮೋತ್ಸವ

ಜಿಲ್ಲೆಗಳು - 0 Comment
Issue Date : 04.08.2014

ಬಂಗಾರಪೇಟೆ:  ಕೋಲಾರ ಜಿಲ್ಲೆ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ 82 ವರ್ಷದ ರಘುರಾಮ ರೆಡ್ಡಿ ಅವರ ನೇತೃತ್ವದಲ್ಲಿ ಆಜಾದ್‌ರ 109ನೆಯ ಜನ್ಮೋತ್ಸವವನ್ನು ಎರಡು ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜು. 22ರಂದು ಕುಂಬಾರಪಾಳ್ಯದ ಐವತ್ತು ಯುವಕರು ವೀರಾಂಜನೇಯ ದೇವಸ್ಥಾನದಲ್ಲಿ ಸೇರಿ ಬಜರಂಗದಳದ ಶಾಖೆಯನ್ನು ಪ್ರಾರಂಭಿಸಿದರು. ಆಜಾದ್ ಜನ್ಮದಿನದ ಪ್ರಯುಕ್ತ ಎಪ್ಪತ್ತು ಬೇವು, ಮಾವು, ನೇರಳೆ, ಸಂಪಿಗೆ ಸಸಿಗಳನ್ನು ಕುಂಬಾರ ಪಾಳ್ಯದ ರಸ್ತೆ ಬದಿಗಳಲ್ಲಿ ಹಾಗೂ ವೀರಾಂಜನೇಯ ದೇವಸ್ಥಾನದ ಸುತ್ತಮುತ್ತ ನೆಡಲಾಯಿತು. ಸ್ಥಳೀಯ ಯುವ ಮುಖಂಡ ಸೋಮಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಸಾಹಿತಿ, ಪತ್ರಕರ್ತ, ಅ. ಭಾ. ಸಾಹಿತ್ಯ ಪರಿಷತ್ ಬೆಂಗಳೂರು ಮಹಾನಗರದ ಅಧ್ಯಕ್ಷ ಡಾ. ಬಾಬು ಕೃಷ್ಣಮೂರ್ತಿ ಅವರು ನಮ್ಮ ಯುವಕರಿಗೆ ವೀರಾಂಜನೇಯ ಸ್ವಾಮಿ ಆದರ್ಶವಾಗಬೇಕೆಂದೂ ಸಮಾಜ ಹಾಗೂ ಹೆಣ್ಣು ಮಕ್ಕಳ ರಕ್ಷಣೆ, ಚಾರಿತ್ರ್ಯವರ್ಧನೆ ಮುಂತಾದ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ಬಂಗಾರಪೇಟೆ ಹಿರಿಯ ಹಿಂದೂ ಮುಖಂಡ ರಘುರಾಮರೆಡ್ಡಿ ಅವರು ಯುವಕರು ಧೈರ್ಯಶಾಲಿಗಳೂ ರಾಷ್ಟ್ರಭಕ್ತರೂ ಚಾರಿತ್ರ್ಯಸಂಪನ್ನರೂ ಆಗಬೇಕೆಂದು ಕರೆ ನೀಡಿದರು.

ಅಂದು ಸಂಜೆ ಆಜಾದ್ ಜನ್ಮದಿನದ ಪ್ರಯುಕ್ತ ಗೀತಾ ಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲಿಗೆ ಖ್ಯಾತ ನೃತ್ಯ ಗುರು ಕೆ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ದೇಶಭಕ್ತಿ ಗೀತೆಯ ನೃತ್ಯರೂಪಕ ಪ್ರಸ್ತುತಪಡಿಸಲಾಯಿತು. ಅನಂತರ ರಘುರಾಮರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಯಿ ಮನೆ ಸಂಚಾಲಕರಾದ ದೊ. ಕೇಶವಮೂರ್ತಿ ಅವರು ಆಜಾದ್ ಮತ್ತು ಅಜೇಯ ಕೃತಿ ಬಗ್ಗೆ ಉದ್ಬೋಧಕ ಭಾಷಣ ಮಾಡಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ಬಾಬು ಕೃಷ್ಣಮೂರ್ತಿ ಅವರು ಬಂಗಾರಪೇಟೆಯಲ್ಲಿ ದಕ್ಷಿಣ ಭಾರತದ ಮೊಟ್ಟಮೊದಲ ಏಳು ಅಡಿ ಎತ್ತರದ ಆಜಾದ್ ಪುತ್ಥಳಿಯು ಕೇವಲ ರಘುರಾಮರೆಡ್ಡಿ ಹಾಗೂ ಅವರ ಸೋದರಳಿಯ ಜನಾರ್ದನರೆಡ್ಡಿ ಅವರ ಸಂಕಲ್ಪ ಮತ್ತು ಪರಿಶ್ರಮದಿಂದ ಸಾಧ್ಯವಾಯಿತೆಂದರು. ಅನಂತರ ಬೆಂಗಳೂರು ಫ್ರೇಜರ್ ಟೌನ್ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ.ವಿ. ಕೃಷ್ಣಪ್ಪನವರು ಆಜಾದರ ಜೀವನಾಧಾರಿತ ಹರಿಕಥೆಯನ್ನು ರಸವತ್ತಾಗಿ ಮಾಡಿ ದರು.

ಅದೇ ಸಭೆಯಲ್ಲಿ ಬಂಗಾರಪೇಟೆ ಪುರಸಭಾ ಅಧ್ಯಕ್ಷೆಯಾದ ಶ್ರೀಮತಿ ಗಂಗಮ್ಮನವರು ಹುತಾತ್ಮನ ಗುಣಗಾನ ಮಾಡಿ ಆಜಾದ್ ಪಾರ್ಕ್ ಪಕ್ಕದಲ್ಲಿರುವ ಖಾಲಿ ನಿವೇಶನವನ್ನು ಆಜಾದ್ ಪಾರ್ಕ್ ಸಮಿತಿಗೆ ನೀಡಲಾಗುವುದೆಂದು ಘೋಷಿಸಿದರು.


ಜುಲೈ 23 ಆಜಾದರ ಜನ್ಮದಿನ! ಶಾಲಾ ಮಕ್ಕಳು ನೂರಾರು ರಾಷ್ಟ್ರಧ್ವಜಗಳನ್ನು ಹಿಡಿದು ಭಾರತ ಮಾತೆ ಮತ್ತು ಹುತಾತ್ಮರಿಗೆ ಜಯಕಾರ ಹಾಕುತ್ತಾ ಶಾಂತಿನಗರದಲ್ಲಿ ಕಳೆದ ವರ್ಷ ಜುಲೈ 23ರಂದು ಪ್ರತಿಷ್ಠಾಪಿಸಲಾದ ಚಿನ್ನದ ಬಣ್ಣದ ಭವ್ಯ ಆಜಾದರ ಮೂರ್ತಿ ಇರುವ ಆಜಾದ್ ಪಾರ್ಕ್‌ಗೆ ಮೆರವಣಿಗೆಯಲ್ಲಿ ಬಂದರು. ಆ ವೇಳೆಗೆ ಬೆಂಗಳೂರಿನಿಂದ ಆಗಮಿಸಿದ್ದ ರಾಷ್ಟ್ರಧ್ವಜ ಸಮಿತಿಯ ಹಿರಿಯರೂ ಹಾಗೂ ಬಂಗಾರಪೇಟೆ ನಾಗರಿಕರು ನೂರಾರು ಸಂಖ್ಯೆಯಲ್ಲಿ ಪುತ್ಥಳಿಯ ಬಳಿ ನೆರೆದಿದ್ದರು. ಆಜಾದರ ಪುತ್ಥಳಿಗೆ ಆಳುದ್ದುದ ಗುಲಾಬಿ ಮಾಲೆಯನ್ನು ಜನಾರ್ದನ ರೆಡ್ಡಿ ಅವರು ಹಾಕಿದ ಅನಂತರ ಕಾರ್ಯಕ್ರಮ ಪ್ರಾರಂಭವಾಯಿತು. ಡಾ. ಬಾಬು ಕೃಷ್ಣಮೂರ್ತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ 88 ವರ್ಷದ ತಿರುಮಲೆ ಶ್ರೀರಂಗಾಚಾರ್ಯರು ರಾಷ್ಟ್ರಧ್ವಜಾರೋಹಣ ಮಾಡಿದರು.

ಪ್ರೌಢಶಾಲಾ ವಿದ್ಯಾರ್ಥಿನಿಯರು ಉತ್ಸಾಹದಿಂದ, ಶಿಸ್ತಿನಿಂದ ಸಭೆ, ಮೆರವಣಿಗೆಗಳಲ್ಲಿ ಭಾಗವಹಿಸಿ ಅವರಿಗೆ ನೀಡಲಾದ ರಾಷ್ಟ್ರಧ್ವಜಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಆಜಾದ್ ಜನ್ಮದಿನ ಮುಂತಾದ ಸಂದರ್ಭಗಳಲ್ಲಿ ತಮ್ಮ ತಮ್ಮ ಮನೆಗಳ ಮೇಲೆ ಹಾರಿಸುವುದಾಗಿ ಪ್ರತಿಜ್ಞೆ ಮಾಡಿದರು. ಎರಡು ದಿನಗಳ ಕಾಲ ಬಂಗಾರಪೇಟೆಯನ್ನು ಆವರಿಸಿದ ಹುತಾತ್ಮ ಆಜಾದರ ನೆನಪು ಅಲ್ಲಿನ ನಿವಾಸಿಗಳಲ್ಲಿ ದೇಶಭಕ್ತಿಯನ್ನು ಉದ್ದೀಪಿಸಿತು.

  • ವರದಿ: ಮುಡಿಯನೂರು ರಾಮಕೃಷ್ಣ ಶ್ರೌತಿ
   

Leave a Reply