ಭಾರತದ ಭಾವೈಕ್ಯ ಮತ್ತು ರಾಷ್ಟ್ರೈಕ್ಯದ ರಾಜಮಾರ್ಗ

ಯಾದವ್ ರಾವ್ ಜೋಷಿ - 0 Comment
Issue Date : 12.10.2014

ಬ್ರಿಟಿಷರು ಒಮ್ಮೆ ಭಾರತದಿಂದ ನಿರ್ಗಮಿಸಿ ಇಲ್ಲಿಯ ರಾಜ್ಯವು ಸ್ವಕೀಯರ ಕೈಯಲ್ಲಿ ಬಂದಿತೆಂದರೆ, ರಾಷ್ಟ್ರದ ಎಲ್ಲ ಸಮಸ್ಯೆಗಳು ಮುಗಿಯುವುವು ಮತ್ತು ಸುಖೀ, ಸಮೃದ್ಧ ಮತ್ತು ಸಂತುಷ್ಟ ಭಾರತ ದರ್ಶನವು ತಾನಾಗಿಯೆ ಆಗುವುದೆಂಬ ಕಲ್ಪನೆ, ಪರಕೀಯರ ರಾಜ್ಯವನ್ನು ಭಾರತದಿಂದ ಕಿತ್ತೊಗೆಯಲು ಹೋರಾಟ ನಡೆದಿರುವಾಗ ಲೋಕ ನೇತೃತ್ವದ ಭಾರವನ್ನು ವಹಿಸಿದವರದಾಗಿತ್ತು. ದೇಶದಲ್ಲಿ ಎಲ್ಲವೂ ಇದೆ. ಆದರೆ ಪರರಾಜ್ಯದಿಂದಾಗಿ ಯಾವುದರ ವಿಕಾಸವೂ ಅಶಕ್ಯವಾಗಿದೆ. ಒಮ್ಮೆ ರಾಜಸತ್ತೆ ಕೈಗೆ ಬಂದರೆ ಎಲ್ಲರಿಗೂ ಸ್ವಮನಸ್ಸಿನಂತೆ ವಿಕಾಸ ಮಾಡಲು ಅವಕಾಶ ಸಿಗುವುದು ಮತ್ತು ಭೌತಿಕ ಸುಖ ಸಂಪತ್ತನ್ನು ನಿರ್ಮಿಸಲು ರಾಜಸತ್ತೆಗೆ ಯಶಸ್ಸೂ ಲಭಿಸೀತು (ಮತ್ತು ಅದು ಬಂದೇ ಬರುವುದೆಂಬ ಬಗ್ಗೆ ಸಂಶಯಕ್ಕೆ ಕಾರಣವೇ ಇರಲಿಲ್ಲ). ಏಕೆಂದರೆ ಭಾರತಭೂಮಿಯು ಸುವರ್ಣ ಭೂಮಿಯಾಗಿತ್ತು ಮತ್ತು ಈಗಲೂ ಇದೆ. ಪರಕೀಯರು ಲೂಟಿಮಾಡಿದ್ದರಿಂದ ಅದಕ್ಕೆ ಬಂದೊದಗಿದ ಸಂಕಷ್ಟಗಳು ಪರರಾಜ್ಯವು ನಷ್ಟವಾದೊಡನೆಯೇ ತಾನಾಗಿ ದೂರವಾಗುವುದು ಮತ್ತು ನಿರಾಯಾಸವಾಗಿ ಭೌತಿಕ ಸುಖ ಸಮೃದ್ಧಿಯು ಪ್ರಾಪ್ತವಾಗುವುದು. ನೋಡು ನೋಡುತ್ತಿರುವಂತೆಯೇ ಹಿಂದುಸ್ಥಾನವು ಜಗತ್ತಿನ ರಾಷ್ಟ್ರಮಾಲಿಕೆಯಲ್ಲಿ ಒಂದು ಶ್ರೇಷ್ಠ ರಾಷ್ಟ್ರವಾಗಿ ಗೌರವದ ಸ್ಥಾನವನ್ನು ಪಡೆಯುವುದು. 

ಹೆಸರಿಗೆ ಮಾತ್ರ ಸ್ವಾತಂತ್ರ್ಯ
ದ್ವಿತೀಯ ಮಹಾಯುದ್ಧ ಮುಗಿದ ನಂತರ ಇಂಗ್ಲಿಷರ ಸಾಮರ್ಥ್ಯವು ಕುಂದಿತು. ದುರ್ಬಲ ಸ್ಥಿತಿಯಲ್ಲಿ ಸಾಮ್ರಾಜ್ಯವನ್ನಾಳುವ ಭಾರವನ್ನು ಹೊರಲು ಅಸಾಧ್ಯವೆಂದೂ ಯುದ್ಧದಿಂದಾಗಿ ಅಸ್ತವ್ಯಸ್ತಗೊಂಡ ತಮ್ಮ ಪರಿಸ್ಥಿತಿಯನ್ನೇ ಮೊದಲು ಸರಿಪಡಿಸುವುದು ಯುಕ್ತವೆಂದೂ ಅಲ್ಲಿಯ ವಿಚಾರವಂತರು ನಿರ್ಧರಿಸಿ ಅದಕ್ಕನುಗುಣವಾಗಿ ಬ್ರಹ್ಮದೇಶ ಮತ್ತು ಲಂಕೆಯಿಂದ ಇಂಗ್ಲಿಷರು ಕಾಲ್ತೆಗೆದರು. ನಮ್ಮ ಈ ರಾಷ್ಟ್ರವನ್ನು ಸಾಧ್ಯವಾದಷ್ಟೂ ದುರ್ಬಲವಾಗಿಡುವ ಉದ್ದೇಶದಿಂದ ದೇಶದ ವಿಭಜನೆ ಮಾಡಿ ಇಂಗ್ಲಿಷರು ಇಲ್ಲಿಂದಲೂ ಬಾಹ್ಯರೂಪದಲ್ಲಿ ಕಾಲ್ತೆಗೆದರು ಮತ್ತು ರಾಜಸತ್ತೆಯು ನಮ್ಮ ಕೈಗೆ ಬಂದಿತು.

ಸ್ವಾರ್ಥದ ಉದಯ
ಎಲ್ಲ ನೇತಾವರ್ಗಕ್ಕೀಗ ಆನಂದವಾಯಿತು, ದೀಪೋತ್ಸವಗಳು ಆಚರಿಸಲ್ಪಟ್ಟವು. ಈಗ ಸುಖೀ, ಸಮೃದ್ಧ ಮತ್ತು ಸಂತುಷ್ಟ ಭಾರತದ ಸ್ವಪ್ನ ಸಾಕಾರವಾಗುವುದೆಂದು ಎಲ್ಲರಿಗೂ ಅನಿಸಿತು! ಏಕೆಂದರೆ ಈಗ ಯಾವ ಅಡ್ಡಿಯೂ ಈ ಮಾರ್ಗದಲ್ಲಿ ಉಳಿದಿರಲಿಲ್ಲ! ದೊಡ್ಡ ದೊಡ್ಡ ಆಶ್ವಾಸನೆಗಳು ಕೊಡಲ್ಪಟ್ಟವು. ಭೌತಿಕ ಸುಖ ಸಮೃದ್ಧಿ ಸುಂದರ ಚಿತ್ರಗಳನ್ನು ಚಿತ್ರಿಸಲಾಯಿತು. ಇದರಿಂದ ಜನರ ಅಪೇಕ್ಷೆಗಳೂ ಬೆಳೆದವು. ಮತ್ತು ಪ್ರತಿಯೊಬ್ಬನೂ ತನ್ನ ಸುಖವನ್ನು ರೂಪಾಯಿ – ಆಣೆ- ಪೈಗಳಲ್ಲಿ ಲೆಕ್ಕ ಹಾಕಲು ಪ್ರಾರಂಭಿಸಿದನು. ಭೌತಿಕ ಸುಖಲಾಲಸೆಯ ವಿಚಾರವು ಪ್ರಖರವಾಗಿ ಮಂಡಿಸಿದ್ದರಿಂದ ಪ್ರತಿಯೊಬ್ಬನ ಸ್ವಾರ್ಥ ಭಾವನೆಯೂ ಜಾಗೃತವಾಯಿತು. ತಮ್ಮ ಶಾಸನವು ಪ್ರಸ್ಥಾಪಿಸಲ್ಪಟ್ಟ ನಂತರ ಸ್ವಾರ್ಥತ್ಯಾಗದ ಮಾತನ್ನಾಡುವುದು ಶುದ್ಧ ಮೂರ್ಖತನವೆಂಬ ಉದ್ಗಾರವು ದೊಡ್ಡ ದೊಡ್ಡ ವಿಚಾರವಂತರಿಂದ ಹೊರಬಂದಿತು ಮತ್ತು ಸ್ವಂತ ಜೀವನವನ್ನಷ್ಟೇ ಸುಖಮಯಗೊಳಿಸುವುದರಲ್ಲೇ ಪ್ರತಿಯೊಬ್ಬನೂ ತಲ್ಲೀನನಾದನು.
ಭೌತಿಕ ಸುಖತೃಷ್ಣೆಯು ಅದೆಷ್ಟು ಶಮನಗೊಳಿಸುವ ಪ್ರಯತ್ನ ಮಾಡಿದರೂ ಎಂದೂ ಶಮನಗೊಳ್ಳುವುದಿಲ್ಲವೆಂಬ ಈ ತ್ರಿಕಾಲಾಬಾಧಿತಸತ್ಯವು ಭಾರತೀಯರಾದ ನಮಗೆ ಅಪರಿಚಿತವಲ್ಲ. ಶಾಸನವು ಜನರಿಗೆ ಭೌತಿಕ ಸುಖಸಮೃದ್ಧಿಯ ಸ್ವಪ್ನಿಕಮಾಯೆಯಿಂದ ಅದೆಷ್ಟು ಸಂತುಷ್ಟಗೊಳಿಸಲೆತ್ನಿಸಿದರೂ ಕೊನೆಗೆ ಅಸಂತೋಷವು ಒಂದೇ ಸಮನೆ ಬೆಳೆಯುತ್ತಲೇ ಹೋಯಿತು. ಕಾಗದದ ಮೇಲೆ ಪ್ರಗತಿಯ ರಮ್ಯ ಚಿತ್ರಗಳನ್ನು ಚಿತ್ರಿಸಿದರೂ ಪ್ರತ್ಯಕ್ಷ ಜನಜೀವನದಲ್ಲಿ ಅತ್ಯಧಿಕ ಅಸಂತೋಷವು ಇಂದು ಮನೆಮಾಡಿಕೊಂಡಿದೆಯೆಂಬುದನ್ನು ಯಾರಿಂದಲೂ ಅಲ್ಲಗಳೆಯಲಾಗುವುದಿಲ್ಲ.

ತಲೆಕೆಳಗು ಆದರ್ಶಗಳು
‘ಬುಭುಕ್ಷಿತ: ಕಿಂ ನ ಕರೋತಿ ಪಾಪಂ’ ಎಂಬ ನ್ಯಾಯದಂತೆ ಸುಖದ ಮೃಗಜಲದ ಬೆನ್ನ ಹಿಂದೆ ಹೋಗುವ ಸಮಾಜಕ್ಕೆ ಸ್ವಾರ್ಥಸಾಧನೆಗಾಗಿ ಮನಸ್ಸಿಗೆ ತೋಚಿದ ಸಮಾಜಘಾತಕ ಕೃತ್ಯಗಳನ್ನೆಸಗಲು ಹಿಂದೆ – ಮುಂದೆ ನೋಡುವ ಭಯವೂ ಇಲ್ಲವಾಯಿತು. ಮತ್ತು ಇದರಿಂದಲೇ ಕಳ್ಳಸಂತೆ, ವಶೀಲಿ, ಭ್ರಷ್ಟಾಚಾರ, ಅಪ್ರಾಮಾಣಿಕತೆ ಮೊದಲಾದ ಸರ್ವಸಮಾಜ ವಿನಾಶಕ ಪ್ರವೃತ್ತಿಗಳು ಜನ್ಮತಾಳಿದುವು. ಜನತೆಯ ಮುಂದೆ ಆದರ್ಶವೆಂದು ನಿಲ್ಲುವ ಹೊಣೆ ಯಾರ ಮೇಲಿದೆಯೋ ಅವರಿಗೂ ಈ ಪಾಪದಿಂದ ಮುಕ್ತರಾಗಿರಲು ಸಾಧ್ಯವಾಗಲಿಲ್ಲ. ರಾಷ್ಟ್ರದ ಎದುರು ಚಾರಿತ್ರ್ಯ ಭ್ರಷ್ಟತೆಯ ಗಂಭೀರ ಸಮಸ್ಯೆಯು ಉಂಟಾಯಿತು.
ಎಲ್ಲ ದುರ್ಗುಣಗಳ ಕಾರಣವೆಂದರೆ ಆರ್ಥಿಕ ವಿಷಮತೆ ಮತ್ತು ದಾರಿದ್ರ್ಯವೆಂಬ ಸಮಾಜವಾದೀ ಮೊಹರಿನ ಸಿದ್ಧಾಂತವನ್ನು ರಾಷ್ಟ್ರದ ಮುಖಂಡರೆನಿಸುವವರು ಸ್ವೀಕರಿಸಿದ್ದರಿಂದ ಚಾರಿತ್ರ್ಯಭ್ರಷ್ಟತೆಯು ಹೆಚ್ಚಿದಂತೆಲ್ಲ ಅದರ ಪರಿಹಾರ ಯೋಜನೆಯೆಂದು ಹೆಚ್ಚು ಔದ್ಯೋಗಿಕರಣ (More Industrialisation), ಹೆಚ್ಚು ಕಾರ್ಖಾನೆಗಳನ್ನು ಭವ್ಯಪ್ರಮಾಣದಲ್ಲಿ ತೆರೆಯುವ ಪ್ರಚಂಡ ಪ್ರಯತ್ನಗಳು ಪ್ರಾರಂಭವಾದುವು. ಇಂತಹ ಕಾರ್ಖಾನೆಗಳನ್ನು ಆಧುನಿಕ ಮಂದಿರಗಳೆಂದೂ ಆಧುನಿಕ ಯಾತ್ರಾಸ್ಥಾನಗಳೆಂದೂ (Modern Temples and Modern Places of Piligrimage) ಹೇಳುವಷ್ಟು ಇದರ ಅಟ್ಟಹಾಸವೇರಿತು. ಪ್ರಾಚೀನ ನಿಷ್ಠೆಗಳನ್ನು ತೊಡೆದು ಹಾಕಿರಿ ಮತ್ತು ನೂತನ ಜೀವನದ ಮಾರ್ಗಕ್ರಮಣವನ್ನು ಪ್ರಾರಂಭಿಸಿರಿ ಎಂಬ ಆದೇಶವನ್ನೂ ಕೊಡಲಾಯಿತು.

ಭ್ರಷ್ಟಾಚಾರದ ಭಸ್ಮಾಸುರ
ಆದರೆ ವಿಧಿಯ ಯೋಜನೆ ಮಾತ್ರ ಬೇರೆಯೇ ಎಂದು ತೋರುತ್ತದೆ. ಆರ್ಥಿಕ ದಾಸ್ಯದ ಮುಕ್ತಿಯ (Freedom from economic slavery) ಬೊಬ್ಬಾಟವು ಕಳೆದ 14 ವರ್ಷಗಳಿಂದಲೂ ಒಂದೇ ಸಮನೆ ನಡೆಯುತ್ತಲೇ ಇದೆ. ಆದರೆ ಪ್ರತ್ಯಕ್ಷವಾಗಿ ಎರಡು ಬಾರಿ ಊಟ ಕೂಡಾ ಸಿಗುವುದು ಅನೇಕರಿಗೆ ಕಷ್ಟವಾಗಿದೆ. ಬೆಲೆ ಒಂದೇ ರೀತಿ ಏರುತ್ತಲೇ ಇದೆ ಮತ್ತು ನಾಳೆಯ ಜೀವನ ಹೇಗೆ ಸಾಗಿಸಲಿ ಎಂಬ ಯಕ್ಷಪ್ರಶ್ನೆಯು ಸಾಮಾನ್ಯ ಜನರೆದುರು ಬಾಯ್ತೆರೆದು ನಿಂತಿದೆ. ಲಕ್ಷಾವಧಿಜನರು ನಿರುದ್ಯೋಗದ ದಯನೀಯ ಜೀವನವನ್ನು ಕ
ಳೆಯುತ್ತಿದ್ದಾರೆ. ರಾಷ್ಟ್ರಜೀವನದಲ್ಲಿ ಶುಚಿತ್ವ, ಶುದ್ಧತೆ, ಸ್ವಾರ್ಥ ವಿಹೀನತೆಗಳು ನಿರ್ಮಾಣವಾಗುವ ಚಿಹ್ನೆಗಳಂತೂ ಕಾಣುವುದೇ ಇಲ್ಲ. ಆದರೆ ಬದಲಿಗೆ ಎಲ್ಲೆಲ್ಲೂ ಭ್ರಷ್ಟಾಚಾರ ಮಾತ್ರ ಹೆಚ್ಚುತ್ತಲೇ ನಡೆದಿದೆ. ಕಾರ್ಖಾನೆಯ ಮಾಲಿಕನು ಭ್ರಷ್ಟನು, ವ್ಯಾಪಾರಿಯು ಭ್ರಷ್ಟನು, ಮಜೂರರು ತಮ್ಮ ಸ್ವಾರ್ಥದಲ್ಲೇ ಮಗ್ನರು ಮತ್ತು ಶಾಸನವೂ ಭ್ರಷ್ಟ – ಹೀಗೆ ಈ ಭ್ರಷ್ಟಾಚಾರದ ಭಸ್ಮಾಸುರನು ರಾಷ್ಟ್ರಭಕ್ಷಕನಾಗುತ್ತ ಬೆಳೆಯುತ್ತಿದ್ದಾನೆ.

ಈ ಎರಡು ಮಹಾಸಂಕಟಗಳು
ನಮ್ಮ ಭದ್ರ ರಾಷ್ಟ್ರಪುರುಷರನ್ನು ಇತರ ಎಲ್ಲವುಗಳಿಗಿಂತ ಹೆಚ್ಚಾಗಿ ಕೊರೆಯುತ್ತಲಿರುವ ಯಾವುದಾದರೂ ಒಂದು ಸಂಗತಿಯಿದ್ದರೆ, ಅದು ನಮ್ಮ ಜನರು – ದೇಶದ ಅತಿ ಗಣ್ಯರೆನಿಸಿದವರೂ ಸಹ – ಯಾವುದೇ ರಾಷ್ಟ್ರಘಾತುಕ ಉದ್ದೇಶಕ್ಕಾಗಿ ತಮ್ಮನ್ನು ಒಂದು ನಿರ್ದಿಷ್ಟ ಬೆಲೆಗೆ ಮಾರಲು ಸಿದ್ಧವಾಗಿರುವ ಇಂದಿನ ಪರಿಸ್ಥಿತಿಗೆ ಕಾರಣವಾದ ತಥಾಕಥಿತ ಆರ್ಥೀಕ ಉನ್ನತಿಯ ‘ವಾದ’ಗಳಿಂದ ನಿರ್ಮಾಣಗೊಂಡು ಬೆಳೆಯುತ್ತಿರುವ ಸ್ವಾರ್ಥವೇ ಆಗಿದೆ. ದಿನಗಳು ಕಳೆಯುತ್ತಿರುವಂತೆ ಮತ್ತು ವಿಶೇಷವಾಗಿ ಚುನಾವಣೆಗಳು ಸಮೀಪಿಸುತ್ತಿರುವಂತೆ ಹೆಚ್ಚು ಪ್ರಬಲವಾಗುತ್ತಿರುವ ಎರಡನೇ ಸಂಗತಿಯೆಂದರೆ ಇಂದು ಅಧಿಕಾರದಲ್ಲಿರುವವರಿಂದ ನಮ್ಮ ರಾಜಕೀಯ ಜೀವನದಲ್ಲಿ ಆಗುತ್ತಿರುವ ಎಲ್ಲ ರಾಷ್ಟ್ರದ್ರೋಹಿ ಮತ್ತು ಒಡಕಿನ ಶಕ್ತಿಗಳ ಕೊನೆಯಿಲ್ಲದ ತುಷ್ಟೀಕರಣ!
ರಾಷ್ಟ್ರದ್ರೋಹಿಗಳಿಗೆ ರಾಜಪ್ರಶಸ್ತಿ, ರಾಜಾಶ್ರಯ
ನಮ್ಮ ಪಾಪಗಳಿಂದಲೇ ನಿರ್ಮಿಸಿದ ಪಾಕಿಸ್ತಾನವು ನಮ್ಮ ಗಡಿಪ್ರದೇಶಗಳಲ್ಲಿ ಆಕ್ರಮಣ ನಡೆಸುತ್ತಲೇ ಇರುವಾಗ ಅವರನ್ನು ಜೊತೆಗೂಡುವ ಇಲ್ಲಿಯ ಮುಸಲ್ಮಾನರು ವಿಭಜನೆಯ ನಂತರ ಕೆಲವು ದಿನ ಶಾಂತರಾಗಿದ್ದಂತೆ ಕಂಡುಬಂದರೂ, ಶಾಸನದ ನಾಡಿಯನ್ನು ತಿಳಿದು ಅವರು ಹಿಂದಿನ ತಮ್ಮ ರಾಷ್ಟ್ರದ್ರೋಹಿ ಕಾರಸ್ಥಾನಗಳನ್ನು ಪುನಃ ಪ್ರಾರಂಭಿಸಿದ್ದಾರೆ. ಆಗಸ್ಟ್ 15ರಂದು ಪ್ರಮುಖ ನಗರಗಳಲ್ಲಿ ತಪ್ಪದೆ ಪಾಕಿಸ್ತಾನಿ ಧ್ವಜವನ್ನು ಹಾರಿಸುವುದು, ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಯನ್ನು ಬಹಿರಂಗವಾಗಿ ಹಾಕುವುದು ಮಾತ್ರವಲ್ಲ ಭಾರತದ ರಾಜಧಾನಿಯಲ್ಲೇ ಅದೂ ನಡುಹಗಲಲ್ಲೇ ‘ನೆಹರೂ ಮುರ್ದಾಬಾದ್’ ಎಂದು ಬೊಬ್ಬೆ ಹಾಕುವುದು ಇತ್ಯಾದಿ ರಾಷ್ಟ್ರದ್ರೋಹಿ ಕೃತ್ಯಗಳು ಯಾರಿಗೆ ತಾನೇ ಗೊತ್ತಿಲ್ಲ? ರಾಜ್ಯಪಿಪಾಸೆಯಿಂದ ಕೇರಳದಲ್ಲಿ ಮುಸ್ಲಿಂ ಲೀಗಿನೊಡನೆ ಆಲಿಂಗನ ಮಾಡಿ ಅದಕ್ಕೆ ಪ್ರತಿಷ್ಠೆಯನ್ನು ಪ್ರದಾನ ಮಾಡಿದುದರ ಪರಿಣಾಮವೆಂದೇ ಇಂದು ಬಹುತೇಕ ಎಲ್ಲಾ ರಾಜ್ಯಗಳ್ಲಲೂ ಮುಸ್ಲಿಂಲೀಗಿನ ಕಾರ್ಯವು ಪ್ರಾರಂಭವಾಗಿ ಬರುವ ಚುನಾವಣೆಗಳಲ್ಲಿ ಅದು ಎಲ್ಲ ರಾಜ್ಯಗಳಲ್ಲೂ ಹೋರಾಡಲಿದೆಯೆಂದು ಘೋಷಿಸಲ್ಪಟ್ಟಿದೆ. ಮುಸ್ಲಿಮರ ಈ ಪ್ರತ್ಯೇಕವಾದಿ ಚಟುವಟಿಕೆಗಳಿಗೆ ಕಾಂಗ್ರೆಸ್ಸಿನ ಪ್ರಮುಖ ಪುಢಾರಿಗಳೇ ಮುಸ್ಲಿಂ ಸಮ್ಮೇಳನವನ್ನು ಆಶೀರ್ವದಿಸಿ ತೀವ್ರತೆಯನ್ನುಂಟುಮಾಡಿದ್ದಾರೆ.
ಚೀನಾ ಆಕ್ರಮಣಮಾಡಿ ಸಾವಿರಾರು ಮೈಲುಗಳ ನಮ್ಮ ಪ್ರದೇಶವನ್ನು ಕಬಳಿಸಿದರೂ ನಮ್ಮ ದೇಶದಲ್ಲೇ ಇರುವ, ಆದರೆ ಭಾರತವೇ ಚೀನಾದ ಮೇಲೆ ಆಕ್ರಮಣ ಮಾಡಿದೆಯೆಂದು ಡೋಲು ಬಡಿಯುತ್ತಿರುವ ರಾಷ್ಟ್ರದ್ರೋಹಿ ಪಕ್ಷ ಹಾಗೂ ಅದರ ಅನೇಕ ಅನುಯಾಯಿಗಳು ನಮ್ಮ ಈ ಭಾರತದಲ್ಲಿ ಇಂದು ಇದ್ದಾರೆ. ಇಷ್ಟಾದರೂ ನಮ್ಮ ಇಂದಿನ ಶಾಸಕರ ದೃಷ್ಟಿಯ್ಲಲಿ ಕಮ್ಯುನಿಸಂಗೆ ಗೌರವದ ಸ್ಥಾನವು ಮುಂದುವರಿಯುತ್ತಲೇ ಇದೆ!
ಮುಸಲ್ಮಾನರು ದಂಗೆಗಳನ್ನೆಬ್ಬಿಸಿ ತಮಗಾಗಿ ‘ಪಾಕಿಸ್ತಾನ’ವನ್ನು ನಿರ್ಮಿಸಿಕೊಂಡಿರುವಾಗ, ಸ್ವಲ್ಪ ಪುಂಡಾಟಿಕೆ ನಡೆಸಿದರೆ ತಮಗೂ ಒಂದು ‘ಸ್ಥಾನ’ ದೊರೆಯುವುದೆಂದು ಕ್ರೈಸ್ತರು ಭುಜಹಾರಿಸಿ ಕಳೆದನೇಕ ವರ್ಷಗಳಿಂದ ಪುಂಡಾಟಿಕೆ ನಡೆಸುತ್ತಲೇ ಇದ್ದಾರೆ. ಅದರ ಫಲವೂ ಅದರ ಮಡಿಲಲ್ಲೇ ಬಿತ್ತು! 3.5 ಲಕ್ಷ ಜನ ಸಂಖ್ಯೆಯ ನಾಗಾಸ್ಥಾನ ಅವರಿಗೆ ದೊರಕಿತು. ಇದನ್ನು ನೋಡುತ್ತಲೇ ಅಸ್ಸಾಮಿನ ಇತರ ವನವಾಸಿಗಳು ತಕ್ಷಣ ಪರ್ವತ ರಾಜ್ಯ (Hill State)ದ ಘೋಷಣೆ ಮಾಡಿದ್ದು ಅದಕ್ಕೂ ನಮ್ಮ ಸರ್ಕಾರವು ಮಾನ್ಯತೆ ಖಂಡಿತ ನೀಡುವುದಿಲ್ಲ ಎಂದು ಭರವಸೆಯಿಂದ ಹೇಳಲು ಬರುವುದಿಲ್ಲ.

ಈಗ ರಾಷ್ಟ್ರೈಕ್ಯದ ಕೂಗೇಕೆ?
ಸಿಖ್ಖರ ಪಂಜಾಬೀ ಸುಬಾದ ಬೇಡಿಕೆ, ಅಸ್ಸಾಮಿನಲ್ಲಾದ ದಂಗೆಗಳು, ವಿದರ್ಭದಲ್ಲಿ ನಡೆದ ಗೂಂಡಾಗಿರಿ ಪ್ರಾಂತ್ಯ ಪ್ರಾಂತ್ಯಗಳಲ್ಲಿ ಶಾಸನಾಧಿಷ್ಠಿತ ಪಕ್ಷದಲ್ಲೇ ಪ್ರಾಂತ್ಯ, ಜಾತಿ, ಭಾಷೆ ಮೊದಲಾದುವುಗಳ ಆಧಾರದ ಮೇಲೆ ನಡೆಯುತ್ತಿರುವ ಕ್ಷುದ್ರ ಕಲಹಗಳು ಮತ್ತು ಎಲ್ಲ ಕಡೆ ನಡೆದಿರುವ ಭ್ರಷ್ಟ ಜೀವನದ ನಗ್ನ ನೃತ್ಯ – ಇವೆಲ್ಲವನ್ನೂ ಬಿಟ್ಟು ಕೇವಲ ಆರ್ಥಿಕ ವಿಚಾರಕ್ಕೇ ಎಲ್ಲ ಮಹತ್ವವನ್ನು ನೀಡಿದರ ಫಲವಾಗಿ ಉಂಟಾದ ಅಧಿಕಾರ ಮತ್ತು ಇತರ ಲಾಭಗಳ ಸ್ವಾರ್ಥದ ತೀವ್ರತೆಯ ಪರಿಣಾಮವಾಗಿರುವ ಇವುಗಳನ್ನು ಕಂಡು ಈ ಮುಖಂಡವರ್ಗಕ್ಕೆ ಈಗ ಭಾವೈಕ್ಯದ (Emotional Integration) ಮತ್ತು ರಾಷ್ಟ್ರೈಕ್ಯದ (National Integration) ತೀವ್ರ ಅವಶ್ಯಕತೆಯ ಭಾಸವಾಗತೊಡಗಿದೆ. ಮಾತೃಭೂಮಿಯ ಅಪವಿತ್ರ ವಿಭಜನೆ, ಆಂಗ್ಲರು ಹೊರಟುಹೋದ ನಂತರವೂ ಗೋವಾದಲ್ಲಿ ನಡೆಯುತ್ತಿರುವ ಪೋರ್ಚುಗೀಸರ ಅನನ್ವಿತ ರಾಕ್ಷಸೀ ಅತ್ಯಾಚಾರ, ನೋಡು ನೋಡುತ್ತಿರುವಂತೆ ಬಲತ್ಕಾರದಿಂದ ಪಾಕಿಸ್ತಾನವು ಕಾಶ್ಮೀರದ ಮೇಲೆ ಧಾಳಿಮಾಡಿ ಅದರ ಒಂದು ದೊಡ್ಡ ಭಾಗವನ್ನು ವಶಪಡಿಸಿ ಅದರ ಮೇಲೆ ಪ್ರಸ್ಥಾಪಿಸಿದ ತನ್ನ ಶಾಸನ, ನಮ್ಮ ಸಾವಿರಾರು ಮೈಲು ಭೂಪ್ರದೇಶದ ಮೇಲೆ ಚೀನಾ ನಡೆಸಿದ ಅನ್ಯಾಯದ ಆಕ್ರಮಣ ಮತ್ತು ಇದೆಲ್ಲ ನಡೆಯುತ್ತಿರುವಾಗ ಶಾಂತಬ್ರಹ್ಮನ ಭೂಮಿಕೆಯನ್ನು ತಳೆಯುವ ನಮ್ಮ ಧುರೀಣರಿಗೆ ಆ ಎಲ್ಲ ಕಾಲಗಳಲ್ಲಿ ರಾಷ್ಟ್ರೈಕ್ಯ ಮತ್ತು ಭಾವೈಕ್ಯಗಳ ಅನುಕೂಲ ಮರೆವು ಅವರಿಗಾಯಿತು! ಆದರೆ ತಮ್ಮ ಕೃತಿಗಳೇ ನಿರ್ಮಿಸಿದ ಈ ಭಸ್ಮಾಸುರನು ಕೊನೆಗೆ ತಮಗೇ ಯಮನಾಗಿ ನಿಂತು, ತಾವು ಶಾಸನಭ್ರಷ್ಟರಾಗುವೆವು ಎಂಬ ಭೀತಿ ಮನಸ್ಸನ್ನು ಆವರಿಸಿದೊಡನೆಯೇ ಅವರ ಭಾವೈಕ್ಯ ಹಾಗೂ ರಾಷ್ಟ್ರೈಕ್ಯದ ಟೊಳ್ಳು ಕೂಗಿನ ಬುಡುಬುಡಿಕೆ ಪ್ರಾರಂಭವಾಯಿತು. ಚರ್ಚಾ ಕೂಟಗಳು, ವಿಚಾರ ಗೋಷ್ಠಿಗಳು, ವಿವಿಧ ಸಮಿತಿಗಳ ರಚನೆ, ಅವುಗಳ ವರದಿಗಳ ಪ್ರಕಟಣೆ, ವಿದ್ವಾಂಸರಿಗೆ ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳ ಮಂಡನೆ – ಎಲ್ಲವೂ ನಡೆಯುತ್ತಲೇ ಇದೆ. ಕಾನೂನುಗಳನ್ನು ರಚಿಸಿ ಅವಸರವಸರದಿಂದ ಅವುಗಳನ್ನು ಪಾಸುಮಾಡಲಾಗುತ್ತಿದೆ. ಭಾವೈಕ್ಯದ ಮತ್ತು ರಾಷ್ಟ್ರೈಕ್ಯದ ಗರ್ಜನೆಗಳಿಂದ ವಾತಾವರಣವೆಲ್ಲ ಪ್ರತಿಧ್ವನಿಸುತ್ತಿದೆಯೋ ಎಂಬಂತೆ ಭಾಸವಾಗುತ್ತಿದೆ !

ನಿರ್ಜೀವ ಘೋಷಣೆಗಳ ಅವಲಂಬನೆ
ಆದರೆ, ದುರ್ದೈವದಿಂದ ಇನ್ನೂ ವಿಶುದ್ಧ ಹಾಗೂ ಸತ್ಯಾಧಿಷ್ಠಿತ ವಿಚಾರ ಮಾಡಲು ನಾವು ಸಿದ್ಧರಿಲ್ಲ. ಇಂಗ್ಲಿಷರು ಹೊರಟುಹೋದರು; 14 ವರ್ಷಗಳು ಕಳೆದು ಹೋದವು. ಆರ್ಥಿಕ ಸಮೃದ್ಧಿಯ ಭವ್ಯಯೋಜನೆಗಳಾದುವು, ಆದರೆ ಅವುಗಳಿಂದ ರಾಷ್ಟ್ರೈಕ್ಯವಾಗಲೀ, ಭಾವೈಕ್ಯವಾಗಲೀ ಸಾಧಿಸಲಾಗಲಿಲ್ಲ. ಇದರ ಬದಲು ರಾಷ್ಟ್ರದ ಪತನವು ಅತಿ ದೊಡ್ಡ ಪ್ರಮಾಣದಲ್ಲಾಗುತ್ತಲಿದೆ ಎಂಬ ನಗ್ನ ಸತ್ಯವನ್ನರಿತು ಅದರಿಂದ ಯೋಗ್ಯ ಪಾಠವನ್ನು ಕಲಿಯುವ ಪ್ರಾಮಾಣಿಕತೆಯೂ ಇಲ್ಲ. ಅಸಫಲವಾದ ವಿಚಾರಗಳಿಗೇ ಅಂಟಿಕೊಂಡಿರುವ ಮೋಹವು ಇನ್ನೂ ದೂರವಾಗದು. ‘ಎಲ್ಲ ರೋಗಗಳಿಗೂ ಒಂದೇ ಔಷಧ’ ಎಂಬ ನಕಲಿ ವೈದ್ಯನ ಜಾಹೀರಾತಿನಂತೆ, ಪರಕೀಯ ಆಕ್ರಮಣವನ್ನು ದೂರಮಾಡುವ ಉಪಾಯ, ಆಂತರಿಕ ಕಲಹಗಳನ್ನು ನಷ್ಟಗೊಳಿಸುವ ಏಕಮೇವ ಮಾರ್ಗ ಮತ್ತು ಈ ಎಲ್ಲ ಸಮಸ್ಯೆಗಳಿಂದ ಮುಕ್ತರಾಗಲು ಇರುವ ಒಂದೇ ಮಾರ್ಗವೆಂದರೆ: ‘ತೃತೀಯ ಪಂಚವಾರ್ಷಿಕ ಯೋಜನೆ. ಇದನ್ನು ಯಶಸ್ವಿಗೊಳಿಸಿ ತನ್ಮೂಲಕ ರಾಷ್ಟ್ರದಲ್ಲಿ ಆರ್ಥಿಕ ಅಭಿವೃದ್ಧಿ ನಿರ್ಮಾಣ ಮಾಡಿರಿ’ ಎಂಬ ಈ ಒಂದೇ ಕಿವಿಕೊರೆಯುವ ಘೋಷಣೆಯ ಮೇಲೆಯೇ ಇಂದು ಇಡೀ ಮುಖಂಡವರ್ಗವು ಎಲ್ಲ ಮಹತ್ವವನ್ನೂ ಹೇರಿದೆ ! ಪ್ರತಿಯೊಂದು ಸಾರ್ವತ್ರಿಕ ಚುನಾವಣೆಯ ಮೊದಲು ತಪ್ಪದೆ ಉದ್ಘೋಷಿಸಿದ ಈ ಯೋಜನೆಗಳ ಬಗ್ಗೆ ಜನತೆಯಲ್ಲಿ ಯತ್ಕಿಂಚಿತವೂ ಉತ್ಸಾಹವಾಗಲೀ, ಆಸಕ್ತಿಯಾಗಲೀ ಇಲ್ಲವೆಂಬುದರ ದಾರುಣ ತಿಳಿವು ಅವರಿಗಿದೆ. ಆದರೂ ನಿರ್ಜೀವ ಘೋಷಣೆಗಳಿಗೆ ಪುನಃ ಪುನಃ ಜೀವದಾನ ಕೊಡುವ ಅಕಾರಣ ಉಪದ್ವ್ಯಾಪವು ಇಂದು ನಡೆದಿದೆ.

ಇದು ಕೇವಲ ಕುರುಡು ಪ್ರಯತ್ನ
ರಾಷ್ಟ್ರಹಿತಗಳನ್ನು ನಷ್ಟಗೊಳಿಸಲು ಕಟಿಬದ್ಧರಾಗಿರುವ ಮುಸಲ್ಮಾನ, ಕ್ರೈಸ್ತ ಹಾಗೂ ಕಮ್ಯೂನಿಷ್ಟ (ಅವರ ಗತೇತಿಹಾಸ ತಿಳಿದೂ ಸಹ) ತುಷ್ಟೀಕರಣದ ಹೀನ ಪ್ರಯತ್ನವು ಈಗ ನಡೆದಿದೆ ಚುನಾವಣೆಗಳಲ್ಲಿ ಮುಸಲ್ಮಾನರ ಮತಗಳು ಪಕ್ಷಕ್ಕೇ ಸಿಗಬೇಕೆಂಬ ಸ್ವಾರ್ಥದ ಇಚ್ಛೆಯಿಂದ ‘ಮುಸಲ್ಮಾನರಿಗೆ ಹೆಚ್ಚು ಸ್ಥಾನಗಳನ್ನು ಕೊಡಿ, ಅವರ ಮೇಲೆ ಅನ್ಯಾಯವಾಗುತ್ತಿದೆ’ ಎಂದು ನಮ್ಮ ಮಂತ್ರಿಗಳೇ ಮೊಸಳೆಯ ಕಣ್ಣೀರನ್ನು ಸುರಿಸುತ್ತಿದ್ದಾರೆ! ಹಿಂದುಗಳ ನೂರಾರು ದೇವಾಲಯಗಳನ್ನು ಉಧ್ವಸ್ತಗೊಳಿಸಿದ ಕ್ರೈಸ್ತರೊಡನೆ ಅದೇ ಕೇರಳದಲ್ಲಿ ಈ ಪೇಮಾಲಿಂಗನ ನಡೆದಿದೆ. ರಾಷ್ಟ್ರದ ಮೇಲೆ ಎಳ್ಳಷ್ಟೂ ಶ್ರದ್ಧೆಯಿರದ ಸಹಸ್ರಾವಧಿ ಕಮ್ಯೂನಿಷ್ಟರು ಇಂದು ಕಾಂಗ್ರೆಸ್ಸಿನಲ್ಲಿ ಸೇರುತ್ತಿದ್ದಾರೆ; ಇವರೆಲ್ಲರ ಭರವಸೆಯ ಮೇಲೆ ರಾಷ್ಟ್ರೈಕ್ಯ ಮತ್ತು ಭಾವೈಕ್ಯದ ಎತ್ತರದ ಕಾಲ್ಪನಿಕ ಮಹಲುಗಳನ್ನು ಕಟ್ಟುವ ಕುರುಡು ಪ್ರಯತ್ನ ನಡೆದಿದೆ.

ಭಾವೈಕ್ಯ ಆಗಬೇಕಾದರೆ…..
ಇಡೀ ರಾಷ್ಟ್ರವೇ ಈ ರೀತಿ ಅತ್ಯಂತಿಕ ಸಂಭ್ರಮಾವಸ್ಥೆಯಲ್ಲಿ ನುಚ್ಚು ನೂರಾಗಿ ಹೋಗಿದೆ. ಆರ್ಥಿಕ ಸುಖಸಮೃದ್ಧಿಯ ಆಕರ್ಷಕ ಟೊಳ್ಳುವಿಚಾರ ಅಥವಾ ರಾಷ್ಟ್ರವಿಘಾತಕ ಪ್ರವೃತ್ತಿಗಳ ಅನುನಯದಿಂದ ರಾಷ್ಟ್ರದಲ್ಲಿ ಭಾವೈಕ್ಯ, ರಾಷ್ಟ್ರೈಕ್ಯ, ನಿಸ್ವಾರ್ಥಬುದ್ಧಿ, ಚಾರಿತ್ರ್ಯಶುದ್ಧಿ, ಪ್ರಾಮಾಣಿಕತೆ ಇತ್ಯಾದಿ ಸದ್ಗುಣಗಳ ನಿರ್ಮಾಣವು ಆಗದು. ಈ ವಿಶುದ್ಧ ಗುಣಗಳ ಔಪಾಸನೆಯಾಗಬೇಕೆಂಬ ಪ್ರಾಮಾಣಿಕ ಇಚ್ಛೆಯಿದ್ದರೆ ಭೌತಿಕ ಸುಖಸಮೃದ್ಧಿಯ ನಿಷ್ಪಲ ಆವಾಹನದಿಂದೇನೂ ಉಪಯೋಗವಾಗದು. ಅದಕ್ಕಾಗಿ ಅಂತಃಕರಣದ ಭವ್ಯ ಮತ್ತು ಉದಾತ್ತ ಪ್ರವೃತ್ತಿಗಳನ್ನು ಆವಾಹನ ಮಾಡಬೇಕಾಗುತ್ತದೆ. ಜಗತ್ತಿನಲ್ಲಿ ಶರೀರಸುಖಕ್ಕಿಂತಲೂ ಮಂಗಲ ಮತ್ತು ಉಜ್ವಲ ಭಾವಭಾವನೆಗಳಿದ್ದು ಅವುಗಳಿಗಾಗಿ ಮಾನವನು ನಗನಗುತ್ತ ತನ್ನ ಪ್ರಿಯತಮ ಶರೀರದ ಬಲಿದಾನವನ್ನು ಸಹಜವಾಗಿ ಮಾಡಬಲ್ಲ ಮತ್ತು ಈ ಬಲಿದಾನ ಮಾಡುವಾಗ ಅವನಿಗೆ ದಿವ್ಯ ಆನಂದದ ಅನುಭೂತಿಯೂ ಉಂಟಾಗುತ್ತದೆ. ಈ ಉದಾತ್ತ ಆವಾಹನೆಯಿಂದಾಗಿ ಅವನ ಶರೀರದೊಳಗಿನ ಎಲ್ಲ ಸುಪ್ತಶಕ್ತಿಗಳು ಜಾಗೃತಗೊಳ್ಳುತ್ತವೆ; ಪ್ರಚಂಡ ಕರ್ತೃತ್ವದ ಮಹಾನ್ ಸ್ರೋತವು, ಸಂಕುಚಿತ, ಆಸುರೀ ಪ್ರವೃತ್ತಿಗಳನ್ನು ಅವನು ಒದ್ದು ಹಾರಿಸಿಬಿಡುತ್ತಾನೆ ಮತ್ತು ಜೀವನದಲ್ಲಿ ಎಲ್ಲೆಲ್ಲೂ ಶುಚಿತ್ವ, ಮಾಂಗಲ್ಯ ಮತ್ತು ವಿಶುದ್ಧತೆಗಳ ಸಾಮ್ರಾಜ್ಯವನ್ನು ಪ್ರಸ್ಥಾಪಿಸುತ್ತಾನೆ. ಕ್ರಾಂತಿಕಾರಕ ಪರಿವರ್ತನೆಯನ್ನುಂಟುಮಾಡುವ ಅದ್ಭುತ ಸಾಮರ್ಥ್ಯ ಈ ಉದಾತ್ತ ಹಾಗೂ ಭವ್ಯ ಆವಾಹನದಲ್ಲಿರುತ್ತದೆ. ರಾಷ್ಟ್ರದ ಸಮಗ್ರ ಬದಲಾವಣೆಯನ್ನು ಮಾಡಬಲ್ಲ ವಿರಾಟಶಕ್ತಿ ಈ ದಿವ್ಯತೆಯಿಂದಲೇ ಪ್ರತೀತಿಗೊಳ್ಳುತ್ತದೆ. ಕೇವಲ ಹೊಟ್ಟೆ ಉರಿಸುವ ಘೋಷಣೆಗಳಿಂದ ಮಾನವೀಜೀವನದ ಸುಪರಿವರ್ತನೆ ಮಾಡುವ ಹವ್ಯಾಸವನ್ನು ಇಟ್ಟುಕೊಳ್ಳುವುದು ಎಂದಿಗೂ ಸಾಧ್ಯವಿಲ್ಲದ ಮಾತು !

ಇಂಗ್ಲಂಡಿನ ಉದಾಹರಣೆ
ದ್ವಿತೀಯ ಮಹಾಯುದ್ಧದ ಪ್ರಾರಂಭದಲ್ಲಿ ಹಿಟ್ಲರನು ಮಾಡಿದ ಬಾಂಬ್ ಧಾಳಿಯಿಂದ ಇಡೀ ಇಂಗ್ಲಂಡ್ ರಾಷ್ಟ್ರ ವಿಧ್ವಸ್ತಗೊಳ್ಳುತ್ತಲಿತ್ತು. ಎಲ್ಲ ಕಡೆಗಳಲ್ಲೂ ಅದು ಹಿಮ್ಮೆಟ್ಟುತ್ತಲಿತ್ತು ಮತ್ತು ರಣಕ್ಷೇತ್ರದಲ್ಲಿ ಸರ್ವತ್ರ ಪರಾಜಯವೇ ಸಿಗುತ್ತಿತ್ತು. ಆದರೆ ಚರ್ಚಿಲ್ಲರು ಇಂಗ್ಲಂಡಿನ ಜನತೆಗೆ ಆಗ ಕೊಟ್ಟ ಆವಾಹನವು ಎಂದೂ ಹೊಟ್ಟೆ ಉರಿಯುವಂತಹುದಾಗಿರಲಿಲ್ಲ. ತಮ್ಮ ಈಸ್ಟರ್ ಸಂದೇಶದಲ್ಲಿ ಪ್ರಧಾನಿ ಚರ್ಚಿಲ್ಲರು ಸ್ಪಷ್ಟ ಘೋಷಣೆ ಮಾಡಿದರು – ‘‘ I don’t promise you Bread & Butter; tighten your belts, England is in danger, I promise you sweat,blood and tears ! ’’- ಎಂದು. ಅವರು ರೊಟ್ಟಿಯ ಆಸೆಯನ್ನು ತೋರಿಸಲಿಲ್ಲ, ಬದಲಾಗಿ ‘ಹಸಿವಿನಿಂದ ಒದ್ದಾಡುತ್ತಿರುವಿರಾದರೆ ಹೊಟ್ಟೆಯನ್ನೇ ಸಂಕುಚಿಸಿ’ ಎಂದೇ ಅವರ ಸಂದೇಶವಿತ್ತು. ‘ನಮ್ಮ ರಾಷ್ಟ್ರವು ಗಂಡಾಂತರದಲ್ಲಿದೆ ಆದುದರಿಂದ ಕೇವಲ ನಮ್ಮ ರಕ್ತ, ಕಣ್ಣೀರು ಮತ್ತು ಪರಿಶ್ರಮದ ಪ್ರತೀಕವಾಗಿ ಬೆವರು ಹನಿಗಳ ಆಶ್ವಾಸೆಯನ್ನು ಮಾತ್ರ ನಾನು ನಿಮಗೆ ಕೊಡಬಲ್ಲೆ’ ಎಂದು ಅವರು ಇಂಗ್ಲಂಡಿನ ಜನತೆಗೆ ಹೇಳಿದರು. ಆ ರಾಷ್ಟ್ರದಲ್ಲಿ ಅದೆಂತಹ ಚಮತ್ಕಾರವಾಯಿತು! ಇಂಗ್ಲಂಡಿನ ಎಲ್ಲ ಸುಪ್ತಶಕ್ತಿಗಳನ್ನು ಜಾಗೃತಗೊಳಿಸುವ ಸಾಮರ್ಥ್ಯ ಈ ತೇಜಸ್ವೀ ಆವಾಹನೆಯಲ್ಲಿತ್ತು. ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಅಲುಗಾಡಿ ಎಚ್ಚೆತ್ತು ಎದ್ದು ನಿಂತಿತು. ಇಂಗ್ಲಂಡು ವಿಜಯಶಾಲಿ ರಾಷ್ಟ್ರವೆಂದು ಜಗತ್ತಿನೆದುರು ಮಹದಭಿಮಾನದಿಂದ ಕುಣಿಯತೊಡಗಿತು! ದ್ವಿತೀಯ ಮಹಾಯುದ್ಧದಲ್ಲಿ ಸಂಪೂರ್ಣ ಉಧ್ವಸ್ತ ಹೊಂದಿದ ಜರ್ಮನಿ ಮತ್ತು ಜಪಾನುಗಳು ಇದೇ ತೇಜಸ್ವಿ ಆವಾಹನದಿಂದ ಅಲ್ಪಾವಧಿಯಲ್ಲೇ, ಯುದ್ಧೋತ್ತರ ಕಾಲದಲ್ಲಿ ಜಗತ್ತಿನ ಮಾರುಕಟ್ಟೆಯಲ್ಲಿ ಠಾಣ್ಯವೂರಿ ಭದ್ರವಾಗಿ ನಿಂತಿದ್ದಾರೆ ಮತ್ತು ನಮ್ಮಂತಹ ಭಿಕ್ಷುಕ ರಾಷ್ಟ್ರಕ್ಕೆ ಧನಭಿಕ್ಷೆಯನ್ನು ಹಾಕಲು ಸಮರ್ಥವಾಗಿವೆ! ಎರಡು ಸಹಸ್ರ ವರ್ಷಗಳ ನಂತರ ಪುನರುಜ್ಜೀವನ ಪಡೆದ ಇಸ್ರೇಲ್ ಕೂಡಾ ಇದೇ ಅಂತಃಪ್ರೇರಣೆಯಿಂದ, ಎಲ್ಲ ಕಡೆಗಳಿಂದಲೂ ಶತ್ರುವಿನಿಂದ ಆವರಿಸಲ್ಪಟ್ಟಿದರೂ ಸಹ, ಉನ್ನತಿ ಮತ್ತು ಪ್ರಗತಿಯ ಹೆಜ್ಜೆಗಳನ್ನು ಅತಿ ಶೀಘ್ರಗತಿಯಲ್ಲಿ ಮುಂದಿಡುತ್ತಲಿದೆ !!

ಈ ಸತ್ಯದ ಸಾಕ್ಷಾತ್ಕಾರವಿಲ್ಲ !
‘ಭೌತಿಕತೆಯ ದಾಸ’ರು ಎಂದು ನಾವು ಪಾಶ್ಚಾತ್ಯರ ಬಗ್ಗೆ ತುಚ್ಛವಾಗಿ ಉಲ್ಲೇಖಿಸುತ್ತೇವೆ. ಆದರೂ ಅಂತಹ ಚರ್ಚಿಲ್ಲರಿಗೂ ಈ ಉದಾತ್ತ ಆವಾಹನದ ಸಾಮರ್ಥ್ಯ ತಿಳಿಯಿತು, ಆದರೆ ದುರ್ದೈವದ ಸಂಗತಿಯೆಂದರೆ ಆಧ್ಯಾತ್ಮಿಕತೆಯ ವಂಶಿಕ ಹಕ್ಕನ್ನು ಪಡೆದ ನಮ್ಮ ರಾಷ್ಟ್ರದ ನೇತಾವರ್ಗಕ್ಕೆ ಮಾತ್ರ ಈ ಆವಾಹನದ ಮರ್ಮವು ಇನ್ನೂ ಅರಿವಾಗದು. England is in danger ಎಂದೊಡನೆಯೇ ಪ್ರತಿಯೊಬ್ಬ ಆಂಗ್ಲನೂ ಅಲುಗಾಡಿಸಲ್ಪಟ್ಟು ಎಚ್ಚೆತ್ತು ಎದ್ದು ನಿಲ್ಲುವನೆಂಬ ಆತ್ಮ ವಿಶ್ವಾಸ ಚರ್ಚಿಲ್ಲರಿಗಿತ್ತು; ಏಕೆಂದರೆ ಇಂಗ್ಲಂಡ್ ರಾಷ್ಟ್ರದ ಮೇಲಿನ ಉತ್ಕಟಶ್ರದ್ಧೆ ಮತ್ತು ಅಪಾರ ಭಕ್ತಿಗಳೇ ಆತನ ಸ್ಥಾಯಿ ಭಾವವಾಗಿದೆ. ಈ ಸ್ಥಾಯಿ ಭಾವವನ್ನು ಒಮ್ಮೆ ಆವಾಹನ ಮಾಡಿದರೆ ಇಂಗ್ಲಿಷರ ಆಂತರಿಕ ಮನಸ್ಸು ಈ ಆವಾಹನದೊಡನೆ ಸೇರಿಹೋಗಿ, ರಾಷ್ಟ್ರವು ಎದ್ದುನಿಂತು ಎಲ್ಲ ಸಂಕಟಗಳ ಮೇಲೆ ವಿಜಯವನ್ನು ಪ್ರಾಪ್ತಮಾಡಿಕೊಂಡು ಯಶಸ್ವಿಯಾಗುವುದು ಎಂದೂ ಅವನಿಗೆ ಗೊತ್ತಿತ್ತು. ಆದರೆ ಇಂದಿನ ನಮ್ಮ ನೇತೃತ್ವಕ್ಕೆ ಈ ಸತ್ಯದ ಸಾಕ್ಷಾತ್ಕರವು ಇನ್ನೂ ಆಗಲಿಲ್ಲ !

ರಾಷ್ಟ್ರೈಕ್ಯದ ಸ್ಪಂದನ ಇಲ್ಲಿದೆ
‘ಮಾತೃಭೂಮಿ’ – ಈ ಶಬ್ದದ ಕೇವಲ ಉಚ್ಚಾರವಾದೊಡನೆಯೇ ಯಾರ ಅಂತಃಕರಣಗಳು ಭಾವೋತ್ಕಟತೆಯಿಂದ ಪುಲಕಿತಗೊಳ್ಳುತ್ತವೆಯೋ, ಮಾತೃದೇವತೆಯ ಚರಣಗಳಲ್ಲಿ ನಮ್ಮ ಅಶ್ರುಗಳ ಪವಿತ್ರ ಭಾವಾಂಜಲಿಯನ್ನರ್ಪಿಸುವ ದಿವ್ಯಪ್ರೇರಣೆ ಯಾರ ಹೃದಯಗಳಲ್ಲಿ ನಿರ್ಮಾಣವಾಗುತ್ತದೋ, ಇಲ್ಲಿಯ ಧೂಳೀಕಣವನ್ನೂ ಶಿರಸಾವಂದ್ಯವೆಂದು ಗೌರವಿಸಿ ಮಾತೃಸ್ತವನ ಮಾಡುತ್ತಲೇ ಯಾರ ಕಂಠಗಳು ಸದ್ಗದಿತವಾಗುತ್ತವೆಯೋ, ಪ್ರತ್ಯಕ್ಷ ಫಾಸಿಕಂಭಧ ಮೇಲೆ ತೂಗುತ್ತಿರುವಾಗ ಸಹ ಮಾತೃಭೂಮಿಯ ಗರ್ಜನೆಯಿಂದ ಮತ್ತು ಜಯಜಯಕಾರದಿಂದ ಅಖಿಲ ವಿಶ್ವವನ್ನು ನಿನಾದಿಸುವ ಪ್ರಖರ ಮಹತ್ವಾಕಾಂಕ್ಷೆ ಯಾರನ್ನು ಪ್ರೋತ್ಸಾಹಿಸುತ್ತದೋ, ಸ್ವಂತ ಆಪತ್ತುಗಳ ಯತ್ಕಿಂಚಿತ್ತೂ ಯೋಚನೆ ಮಾಡದೆ ಈ ಭಾರತದಲ್ಲೇ ಶತಶತ ಜನ್ಮಗಳನ್ನು ಪಡೆಯುವೆವು ಮತ್ತು ದಿವ್ಯ ಮಾತೃಸೇವಾವ್ರತವನ್ನು ಅಖಂಡವಾಗಿ ನಡೆಸುವೆವು ಎಂಬ ದಿವ್ಯ ಸಂವೇದನೆಯು ಯಾರನ್ನು ಉತ್‌ಸ್ಫೂರ್ತಗೊಳಿಸುತ್ತದೋ, ಆ ಪವಿತ್ರ ಹೃದಯಗಳಲ್ಲೇ ಭಾವೈಕ್ಯದ ಮತ್ತು ರಾಷ್ಟ್ರೈಕ್ಯದ ಸ್ಪಂದನ ಮಿಡಿಯುತ್ತದೆ !
ಸಹಸ್ರಾವಧಿ ವರ್ಷಗಳಿಂದ ಈ ದಿವ್ಯ ಸ್ಪಂದನವು ಯಾರ ಹೃದಯಲ್ಲಿ ಮಿಡಿಯುತ್ತದೆ? ಈ ಅಖಂಡ ಪರಂಪರೆಯು ಯಾರದಾಗಿದೆ? ಯಾರ ರಕ್ತಬಿಂದುವಿನಲ್ಲಿ ಈ ಭಾವನೆಯು ತುಂಬಿಕೊಂಡಿದೆ ? ಮಾತೆಯ ಇಂತಹ ನೆಚ್ಚಿನ ಮಕ್ಕಳಾರು ? ಈ ಪ್ರಶ್ನೆಗಳ ಉತ್ತರವು ಬಹಳ ಸ್ಪಷ್ಟವಿದೆ. ಸಾಮಾನ್ಯ ಹಳ್ಳಿಯಲ್ಲಿರುವ ಓರ್ವ ಹಳ್ಳಿಗನೂ ಸಹ ಈ ಕೋಮಲ ಭಾವಸ್ಪಂದನದ ಅನುಭೂತಿ ಓರ್ವ ಹಿಂದುವಿನಲ್ಲಿ ಮಾತ್ರ ಆಗಲು ಸಾಧ್ಯವೆಂದು ಹೇಳುವನು. ಮಾತೃಭೂಮಿಯ ಆವಾಹನದೊಡನೆ ಕೇವಲ ಆತನ ಅಂತಃಕರಣದ ತಂತಿಯೇ ಧ್ವನಿಗೊಡಬಲ್ಲದು! ಅವನೇ ಆತ್ಮಯಜ್ಞಕ್ಕಾಗಿ ನಗುನಗುತ್ತ ಸಿದ್ಧನಾಗುತ್ತಾನೆ !

ಸತ್ಯ ನುಡಿಯುವ ಸಾಹಸವಿಲ್ಲ
ಆದರೆ ಈ ಸ್ಫಟಿಕಸದೃಶ ಸತ್ಯವನ್ನು ಎದೆತಟ್ಟಿ ಹೇಳುವ ಧೈರ್ಯ ಇಂದಿನ ನೇತೃತ್ವದಲ್ಲಿಲ್ಲ. ಡಾ. ಸಂಪೂರ್ಣಾನಂದರಂತಹ ಮುಖಂಡರಿಗೆ ಎಲ್ಲ ರೀತಿಯ ದುಃಸ್ಥಿತಿ ಸ್ಪಷ್ಟವಾಗಿ ಕಣ್ಣೆದುರೇ ಕಾಣುತಿದ್ದರೂ ‘ಮುಸಲ್ಮಾನರಿಗೆ ಹಿಂದುಸ್ಥಾನದ ಮೇಲೆ ಪ್ರೇಮವಿದೆಯೇ ?’ ಎಂಬ ಪ್ರಶ್ನೆಯನ್ನು ಕೇಳಬೇಕೆಂದು ಅನಿಸುತ್ತದೆ. ಎಲ್ಲಿಯವರೆಗೆ ಸತ್ಯವನ್ನು ಠಣಾಠಣ್ ಹೇಳುವ ಮತ್ತು ತದನುಸಾರ ನಿರ್ಭಯವಾಗಿ ವರ್ತಿಸುವ ಧೈರ್ಯ ಇಂದಿನ ನೇತಾಗಳಲ್ಲಿ ಉಂಟಾಗುವುದಿಲ್ಲವೋ, ಅಲ್ಲಿಯವರೆಗೆ ಅವರ ಭಾವೈಕ್ಯದ ಹುಚ್ಚು ಕಲ್ಪನೆ ಮತ್ತು ಆಕರ್ಷಕ ಯೋಜನೆಗಳೆಲ್ಲ ಮಣ್ಣುಪಾಲಾದಂತೆಯೇ ಎಂದು ಹೇಳಲು ಯಾವುದೇ ಭವಿಷ್ಯವಾದಿಯ ಅವಶ್ಯಕತೆ ಇಲ್ಲ !

ಇದೇ ಈ ಏಕಮೇವ ರಾಜಮಾರ್ಗ
‘ಸತ್ಯಂ ಶಿವಂ ಸುಂದರಂ’ – ಈ ತೇಜಸ್ವೀ ಹಿಂದುತ್ವ ಭಾವದ ಆವಾಹನವನ್ನು ನಾವು ಮಾಡೋಣ. ಈ ಆವಾಹನದಿಂದ ಹಿಂದೂರಾಷ್ಟ್ರದ ಸುಪ್ತಸಾಮರ್ಥ್ಯವು ಮೇರೆಮೀರಿ ಪ್ರಕಟವಾದೀತು; ರಾಷ್ಟ್ರದಲ್ಲಿ ಭಾವೈಕ್ಯ ಮತ್ತು ಏಕಾತ್ಮತೆಯು ಪ್ರಸ್ಥಾಪಿತವಾದೀತು; ಪರಸ್ಪರರೊಳಗಿನ ಅಂತಃಕಲಹಗಳು ಸಮಾಪ್ತಿಯಾದಾವು; ಭೌತಿಕ ಸುಖ ಸಂಪತ್ತಿನ ನಿರ್ಮಾಣಕ್ಕೆ ಯಾವ ಉತ್ಸಾಹ ಮತ್ತು ಪರಿಶ್ರಮದ ಅವಶ್ಯಕತೆಯಿದೆಯೋ ಅದನ್ನು ಮಾಡುವ ಪುಣ್ಯಪ್ರೇರಣೆಯೂ ಲಭಿಸೀತು; ಪ್ರಖರ ರಾಷ್ಟ್ರಭಕ್ತಿಯಿಂದ ತುಂಬಿತುಳುಕುವ ತೇಜಸ್ವೀ ರಾಷ್ಟ್ರವು ತನ್ನ ಬಲದ ಮೇಲೆಯೇ ಎದ್ದು ನಿಂತೀತು; ಎಂತಹ ಪ್ರಬಲ ಪರಕೀಯ ಶಕ್ತಿಯನ್ನೂ ಧೂಳೀಪಟಗೈಯುವ ಪ್ರಚಂಡ ಸಾಮರ್ಥ್ಯ ರಾಷ್ಟ್ರದಲ್ಲಿ ಉತ್ಪನ್ನವಾದೀತು; ಮೂರ್ಖ ತುಷ್ಟೀಕರಣವಾದದ ಕಾಲವು ಈಗ ಮುಗಿದುಹೋಯಿತು, ಈಗ ವಿಶುದ್ಧ ಹಾಗೂ ಪ್ರಬಲ ಶಕ್ತಿಯು ಜಾಗೃತವಾಗಿದೆ ಮತ್ತು ತಮ್ಮ ಹಿಂದಿನ ರಾಷ್ಟ್ರಘಾತಕ ದುಷ್ಕೃತ್ಯಗಳು ಇನ್ನು ನಡೆಯವು ಮತ್ತು ದುರ್ದೈವದಿಂದ ತಾವು ಅದೇ ರೀತಿ ಮುಂದುವರಿಸಿದರೆ ಕೊನೆಗೆ ಅದರಲ್ಲಿ ತಮ್ಮದೇ ವಿನಾಶ ಖಂಡಿತವೆಂದು ರಾಷ್ಟ್ರವಿಘಾತುಕ ಶಕ್ತಿಗಳಿಗೂ ತಾನಾಗಿ ತಿಳಿದೀತು ಮತ್ತು ಅವರು ನಮ್ಮ ಈ ರಾಷ್ಟ್ರದೊಡನೆ ಪ್ರಾಮಾಣಿಕವಾಗಿ ನಿಂತಾರು; ಇಡೀ ರಾಷ್ಟ್ರ ಸಂಕಟದಿಂದ ಮುಕ್ತವಾದೀತು ಮತ್ತು ಏಕಾತ್ಮ, ಅಖಂಡ, ಅಭೇದ್ಯ, ಸ್ವಾಭಿಮಾನಿ, ಚೈತನ್ಯಮಯ ಮತ್ತು ವಿಜಿಗೀಷುವಾಗಿರುವ ಭಾರತವು ಇನ್ನೊಮ್ಮೆ ‘ಕೃಣ್ವಂತೋ ವಿಶ್ವಮಾರ್ಯಂ’ – ಪೂರ್ವಜರ ಈ ದಿವ್ಯ ಸ್ವಪ್ನವನ್ನು ಸಾಕಾರಗೊಳಿಸಲು ಧೈರ್ಯದಿಂದ ಮುಂದೆ ನಡೆದೀತು – ಇದು ನಿಸ್ಸಂಶಯ ! ಇದೇ ಭಾವೈಕ್ಯದ ಮತ್ತು ರಾಷ್ಟ್ರೈಕ್ಯದ ಏಕಮೇವ ರಾಜಮಾರ್ಗ !

1961

   

Leave a Reply