ಭಾರತೀಯ ಸಂಸ್ಕೃತಿ- ರಾಜಧರ್ಮ ಸ್ವರೂಪ

ಭಾರತ ; ಲೇಖನಗಳು - 0 Comment
Issue Date : 17.10.2014

(ಭಾರತೀಯ ಸಂಸ್ಕೃತಿಯು ರಾಜಧರ್ಮವು ಉದಾತ್ತ ಮನೋವೈಶಾಲ್ಯವನ್ನು  ಸೂಚಿಸಿದೆ.  ರಾಜನಿಂದ ಅಧಿಕಾರವು ಪ್ರಜೆಗಳ ಕೈಗೆ ಬಂದೊಡನೆ ಪ್ರಜಾಸತ್ತೆಯು ಆಚರಣೆಗೆ  ಬಂತೆಂದು ಹೇಳಲಾಗುವುದಿಲ್ಲ. ಪ್ರಾಚೀನ ಭಾರತದಲ್ಲಿಯೂ ರಾಜರು ಪ್ರಜಾಪ್ರೇಮದ  ಮೇಲೆಯೇ ಅಧಿಕಾರಾರೂಢರಾಗಿ ಕರ್ತವ್ಯವನ್ನು  ಪಾಲಿಸುತ್ತಿದ್ದರು. ಭಾರತೀಯ ರಾಜಧರ್ಮ ಸೂತ್ರವೇ ಪ್ರಜಾಸತ್ತಾತ್ಮಕವಾಗಿದೆ. ಈ ಶ್ರೇಷ್ಠ ಸಿದ್ಧಾಂತವು ಜಗತ್ತಿನ  ಯಾವ ರಾಷ್ಟ್ರದಲ್ಲಿಯೂ ಇಲ್ಲದೆ, ಭಾರತದಲ್ಲಿ ಆದರ್ಶ ರಾಜಧರ್ಮ ಪಾಲಿಸಲ್ಪಟ್ಟ ಸಜೀವ  ಉದಾಹರಣೆಗಳನ್ನು  ಪ್ರಸಿದ್ಧ ಸಾಹಿತಿಗಳೂ, ಮೈಸೂರು ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರ ಇಲಾಖೆಯ ಡೈರೆಕ್ಟರರೂ ಆಗಿರುವ  ಶ್ರೀ ಸಿ. ಕೆ. ವೆಂಕಟರಾಮಯ್ಯನವರು ರಾಜಧರ್ಮಸೂತ್ರದ ಸುಲಲಿತ ವಿವರಣೆಯೊಂದಿಗೆ  ಕೊಟ್ಟಿರುವರು.)

ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಲ್ಲಿ ಪ್ರಜಾಸುಖವನ್ನೇ  ಹೆಚ್ಚಾಗಿ ಗಮನದಲ್ಲಿಟ್ಟುಕೊಂಡು ವೃದ್ಧಿಯಾಯಿತು.  ಒಟ್ಟು ಸಮಾಜದ ಹಿತಸಾಧನೆಗೆ  ಸಾಧಕವಾದ ಅನೇಕ ಉದಾತ್ತ ತತ್ತ್ವಗಳು ಅದರ ಹಾಸುಹೊಕ್ಕುಗಳಾಗಿದ್ದವು.  ಸ್ವದೇಶದ  ಹಿತಸಾಧನೆಗಿಂತ  ಹೆಚ್ಚಾಗಿ ಇಡೀ ವಿಶ್ವದ ಹಿತಸಾಧನೆಯ ಧ್ಯೇಯವನ್ನು  ಸಾರಿ ಯಥಾಶಕ್ತಿಯಾಗಿ ಅದನ್ನು ಕಾರ್ಯತಃ ಆಚರಣೆಯಲ್ಲಿ ತಂದು ತೋರಿಸಿದ ದೇಶವು ಭಾರತವೊಂದೇ. ಇಂದು ನಾಗರಿಕತೆಯ ಜಯಭೇರಿಯು  ಮೊಳಗುತ್ತಿರುವ   ಈ ಇಪ್ಪತ್ತನೆಯ ಶತಮಾನದಲ್ಲಿ ಅಂತರರಾಷ್ಟ್ರೀಯ ಹಿತಸಾಧನೆಯು ತಮ್ಮ ಗುರಿಯೆಂದು ಘೋಷಿಸುತ್ತಿರುವ  ಪ್ರಬಲ ರಾಷ್ಟ್ರಗಳ ಮನಸ್ಸನ್ನು ಮಿಡಿಯುತ್ತಿರುವುದು ಆ ದೊಡ್ಡ ಗುರಿಗಿಂತ  ಹೆಚ್ಚಾಗಿ  ಸ್ವದೇಶದ ಹಿತಸಾಧನೆಯು  ಮಾತ್ರವೇ. ಕೇವಲ ಸ್ವದೇಶದ ಹಿತಸಾಧನೆಯೊಂದೇ ಅವುಗಳ ಧ್ಯೇಯವಾಗಿದ್ದರೆ ತಪ್ಪೇನೂ ಆಗುತ್ತಿರಲಿಲ್ಲ. ಇತರ ರಾಷ್ಟ್ರಗಳನ್ನು  ನೆಗ್ಗುವುದಕ್ಕೂ ಸಿದ್ಧವಾಗಿ ಸ್ವದೇಶದ ಹಿತವನ್ನು  ಸಾಧಿಸಲು ಅವು ಸಿದ್ಧವಾಗಿರುವುದೀಗ ಪ್ರಬಲವಾದ ದೋಷ. ಈ ದೃಷ್ಟಿಯಿಂದ ನೋಡಿದರೆ, ಒಟ್ಟು ವಿಶ್ವದ ಯೋಗಕ್ಷೇಮವು ರಾಷ್ಟ್ರದ ಉದಾತ್ತ ಧ್ಯೇಯವಾಗಬೇಕೆಂದು ಸಾರಿದ ಭಾರತೀಯ ಸಂಸ್ಕೃತಿಯ ಮಾದರಿಯು ಬಹಳ ಶ್ರೇಷ್ಠವಾದುದೆಂಬುದು ಸ್ಪಷ್ಟವಾಗಿಯೇ ಇದೆ.  ರಾಜಧರ್ಮವನ್ನು  ಉದ್ಘೋಷಿಸುವುದರಲ್ಲಿ ಕೂಡ  ಭಾರತೀಯ ಸಂಸ್ಕೃತಿಯು ಅದೇ ಬಗೆಯ  ಹಿರಿಮೆಯನ್ನೂ ಹೃದಯ ವೈಶಾಲ್ಯವನ್ನೂ ತೋರಿಸಿತು.

 

ಕೇವಲ ಅಧಿಕಾರ ಬಂದೊಡನೆ ಮುಗಿಯಲಿಲ್ಲ

ಪ್ರಜಾಸರ್ಕಾರವು ಏರ್ಪಟ್ಟಿರುವ ಇಂದಿನ ಸ್ವಾತಂತ್ರ್ಯ ಯುಗದಲ್ಲಿ ಹಿಂದಿನ ರಾಜಧರ್ಮದ ಸುದ್ದಿಯೇಕೆಂದು ತೋರಿದರೆ ತಪ್ಪಿಲ್ಲ; ಹಾಗೆ ತೋರುವುದು ಸಹಜವೇ. ರಾಜ ಮಹಾರಾಜರುಗಳಿಂದ ಆಡಳಿತ ನಡೆಯುತ್ತಿದ್ದುದು ತಪ್ಪಿ ಪ್ರಜಾ ಸರ್ಕಾರಗಳು ಏರ್ಪಟ್ಟಿರುವುದೇನೋ ನಿಜವೇ. ಆದರೆ  ರಾಜ್ಯಾಡಳಿತ ನಡೆಯುವುದು ತಪ್ಪಿಯೂ ಇಲ್ಲ; ತಪ್ಪುವಂತೆಯೂ ಇಲ್ಲ. ಅಧಿಕಾರವೇನೋ ರಾಜರ ಕೈಯಿಂದ  ಪ್ರಜೆಗಳ ವಶಕ್ಕೆ ಬಂದಿದೆ.  ಆದರೆ ಅದರೊಡನೆ ರಾಜರುಗಳ ಮೇಲಿದ್ದ ಹೊಣೆಗಾರಿಕೆಯೂ ಪ್ರಜೆಗಳ ಮೇಲೆ ಬಿದ್ದಿದೆ. ರಾಜರುಗಳಲ್ಲಿದ್ದ ಶ್ರೇಷ್ಠ ಗುಣಗಳನ್ನು  ಪ್ರಜೆಗಳು ಪ್ರಯತ್ನಪೂರ್ವಕವಾಗಿ ಪರಿಸ್ಫುಟಗೊಳಿಸಿ ವೃದ್ಧಿಪಡಿಸಿಕೊಂಡಲ್ಲದೆ ಪ್ರಜೆಗಳ ಕೈಗೆ  ಅಧಿಕಾರ  ಸೂತ್ರಗಳು ಬಂದಿರುವಷ್ಟರಿಂದ ಮಾತ್ರವೇ ಪ್ರಜಾಸರ್ಕಾರ ವ್ಯವಸ್ಥೆಯು  ಪ್ರಜಾಸತ್ತೆಯು(Democracy)  ಖಂಡಿತವಾಗಿಯೂ ಪೂರ್ಣ ಯಶಸ್ವಿಯಾಗಲಾರದು; ಪ್ರಜೆಗಳ ಸುಖ ಸಂತೋಷಗಳಿಗೆ ಸಾಧಕವಾಗಲಾರದು; ನಿಜವಾದ ಸ್ವಾತಂತ್ರ್ಯ ಸಿದ್ಧಿಗೆ ಅದೆಂದಿಗೂ ಸುವರ್ಣದ್ವಾರವಾಗಲಾರದು. ಇದಕ್ಕೆ ಒಂದೇ  ಒಂದು ಸಣ್ಣ ನಿದರ್ಶನವನ್ನು ತೆಗೆದುಕೊಳ್ಳೋಣ; ಹಿಂದೆ ರಾಜರು ಸಾಹಿತ್ಯ ಮತ್ತು ಲಲಿತಕಲೆಗಳ ಸವಿಯನ್ನು  ಅನುಭವಿಸುವ  ಸಾಮರ್ಥ್ಯವನ್ನು ಎಷ್ಟರಮಟ್ಟಿಗೆ  ಪಡೆದಿರುತ್ತಿದ್ದರೋ ಅಷ್ಟರ ಮಟ್ಟಿಗೆ  ಪ್ರಜೆಗಳೂ ಅದನ್ನು ಪಡೆಯದೆ ಹೋದ ಮೇಲೆ   ಜನಾಂಗದ ಹಿತಸಾಧನೆಯು  ಪೂರ್ಣತೆ  ಹೊಂದುವ ಬಗೆ ಹೇಗೆ? ಸಂಪದಭಿವೃದ್ಧಿಯೊಂದು  ಸಾಂಗವಾಗಿ ನಡೆದ ಮಾತ್ರಕ್ಕೇ ಜನಾಂಗದ  ಹಿತಸಾಧನೆಯು ಪೂರ್ಣವಾದಂತಲ್ಲ. ಒಂದು ಜನಾಂಗದ  ಜೀವಕಳೆಯನ್ನು  ಕಾಣುವುದೇ ಆ ಜನಾಂಗದ ಸಾಹಿತ್ಯ ಮತ್ತು ಲಲಿತಕಲೆಗಳ  ದೇವಾಲಯದಲ್ಲಿ,  ಸಾಹಿತ್ಯ ಮತ್ತು ಕಲೆಗಳೇ ಆ ಜನಾಂಗದ  ಸಂಸ್ಕೃತಿಯ ಸಿರಿಬೀಡುಗಳು.  ರಾಜರುಗಳಿಂದ ಅವಕ್ಕೆ ದೊರೆಯುತ್ತಿದ್ದ  ಪ್ರೋತ್ಸಾಹವು ಪ್ರಜೆಗಳಿಂದ  ದೊರೆಯುವಂತಾಗದಿದ್ದರೆ, ಜನಾಂಗದ  ಹಿತಸಾಧನೆಯು  ಪೂರ್ಣತೆ ಹೊಂದುವುದಾದರೂ ಹೇಗೆ?

 ರಾಜಧರ್ಮ ಸೂತ್ರ

ಹಿಂದೆ, ರಾಜನನ್ನು ಕೂಡ ಚುನಾಯಿಸುವ  ಹಕ್ಕು ಪ್ರಜೆಗಳದು. ವೇದಗಳ ಕಾಲದಲ್ಲಿ ಆ ಹಕ್ಕು ನಡೆದು ಬಂದು ರಾಮಾಯಣದ ಕಾಲಕ್ಕೆ ರಾಜತ್ವವು ವಂಶಪಾರಂಪರ್ಯವಾಗಿ ನಡೆದುಬರುವಂತಾಯಿತು. ಆದಾಗ್ಗೂ, ಪಟ್ಟಕ್ಕೆ ಬರಬೇಕಾದವನನ್ನು  ತಮ್ಮ ರಾಜನಾಗಿ ನಡೆಸಿಕೊಳ್ಳಲು ಪ್ರಜಾವರ್ಗದವರು ಸಮ್ಮತಿಸಬೇಕಾಗಿದ್ದಿತು. ಆ ರೀತಿ ಪ್ರಜಾವರ್ಗದವರು ಸಮ್ಮತಿಸಿದವರಿಗೆ  ಪಟ್ಟವಾದ  ಮೇಲೆ ಅವರು  ಪ್ರಜೆಗಳು ಮೆಚ್ಚುವಂತೆ ರಾಜ್ಯಭಾರ ಮಾಡಬೇಕಾಗಿದ್ದಿತು. ಅಷ್ಟೇ ಅಲ್ಲ, ಪ್ರಜೆಗಳಿಂದ  ಚುನಾವಣೆಯಾದ ಅಥವಾ ಪ್ರಜೆಗಳ ಸಮ್ಮತಿಯಿಂದ  ಪಟ್ಟಕ್ಕೆಬಂದ ರಾಜರು ರಾಜಧರ್ಮವನ್ನು ಅಲಕ್ಷ್ಯ ಮಾಡಿ ಕರ್ತವ್ಯಭ್ರಷ್ಟರಾದರೆ , ಹುಚ್ಚುನಾಯಿಗಳನ್ನು  ಬಡಿದುಹಾಕಿ ಕೊಲ್ಲುವಂತೆ  ಪ್ರಜೆಗಳು ಅವರನ್ನು  ಕೊಲ್ಲಬಹುದೆಂದು ಪ್ರಾಚೀನ ಗ್ರಂಥಗಳಲ್ಲಿ  ಹೇಳಿದೆ. ರಾಜ ಶಬ್ದವು ಸಾರ್ಥಕವಾಗಬೇಕಾದರೆ  ಪ್ರಜಾರಂಗದಿಂದ. * ಪಟ್ಟಾಭಿಷೇಕ ಸಮಯದಲ್ಲಿ, “ಮನಸಾಕರ್ಮಣಾವಾಚಾ ನಾನು ರಾಜ್ಯವನ್ನು  ದೇವರೆಂದು ಭಾವಿಸಿ ವರ್ತಿಸುತ್ತೇನೆ. ಧರ್ಮಕ್ಕೂ, ನೀತಿಗೂ ಚ್ಯುತಿಬಾರದಂತೆ  ರಾಜ್ಯಭಾರವನ್ನು  ನಿರ್ವಹಿಸುತ್ತೇನೆ.” ಮುಂತಾದವು ರಾಜನು ನುಡಿಯಬೇಕಾಗಿದ್ದ ಪ್ರತಿಜ್ಞಾ ವಚನಗಳು; ನೀತಿಧರ್ಮ ವಿರೋಧವಾಗಿ  “ನನ್ನ ಮನಸ್ಸಿಗೆ  ತೋರಿದಂತೆ ಯಾವಾಗಲೂ ವರ್ತಿಸುವುದಿಲ್ಲ”+ ಎಂಬ ವಾಕ್ಯವಂತೂ ಆ ಪ್ರತಿಜ್ಞಾ ವಾಕ್ಯಗಳಲ್ಲಿ ಬಹಳ ಮುಖ್ಯವಾದುದು. ಧರ್ಮಪರಾಯಣತೆಯೇ ಭಾರತೀಯ ಸಂಸ್ಕೃತಿಯ ಜೀವಸ್ವರ . ರಾಜನು ಧರ್ಮರಕ್ಷಕ. +ರಾಜನು  ಎಲ್ಲಕ್ಕಿಂತಲೂ ಮೊದಲು ಯೋಚಿಸಬೇಕಾದುದು ಧರ್ಮದ ವಿಚಾರವನ್ನೇ. = ರಾಜನು  ಯುಗಸ್ವರೂಪ.  ರಾಜನು  ಹೇಗೆ  ವರ್ತಿಸಿದರೆ  ಹಾಗೆ ಕಾಲವೂ  ಪರಿಣಾಮಗೊಳ್ಳುತ್ತದೆ. “ಕೃತಯುಗ, ತ್ರೇತಾಯುಗ, ದ್ವಾಪರಯುಗ  ಮತ್ತು ಕಲಿಯುಗ ವೆಂಬವುಗಳು ರಾಜನ ವರ್ತನೆಯನ್ನನುಸರಿಸಿ ಅವನಿಗೆ  ಅಧೀನವೆನಿಸಿರುತ್ತವೆ. ರಾಜನಿಗೇ ಯುಗವೆಂದು ಹೆಸರು.” “ಈ ಭಾವನೆಗಳು ನಮ್ಮ ದೇಶದ  ಉದಾತ್ತ  ಭಾವನೆಗಳು ಇಂದಿಗೂ-ಎಂದೆಂದಿಗೂ  ಸ್ಫೂರ್ತಿದಾಯಕವೆನಿಸಿ ಮಾರ್ಗದರ್ಶಕ ವಾಗಿರುತ್ತವೆ.” “ರಾಜಾ ಕಾಲಸ್ಯ ಕಾರಣಮ್  ” ಎಂಬುದಂತೂ ಸುಪ್ರಸಿದ್ಧವಾದ ರಾಜಧರ್ಮಸೂತ್ರ. ಕೃತಯುಗದಲ್ಲಿ  ಧರ್ಮಪರಾಯಣತೆಯು ಪೂರ್ಣವಾಗಿದ್ದು, ತ್ರೇತಾಯುಗದಲ್ಲಿ ಮುಕ್ಕಾಲು ಭಾಗವೂ, ದ್ವಾಪರದಲ್ಲಿ  ಅರ್ಧಭಾಗವೂ, ಕಲಿಯುಗದಲ್ಲಿ ಕಾಲುಭಾಗ ಮಾತ್ರವೂ ಇರುವುದೆಂಬುದು ಹಿಂದಿನವರ ಭಾವನೆ.  ಧರ್ಮವೆಂಬ ಧೇನುವು ಕೃತಯುಗದಲ್ಲಿ ನಾಲ್ಕು ಕಾಲುಗಳ ಮೇಲೂ, ತ್ರೇತಾಯುಗದಲ್ಲಿ ಮೂರು ಕಾಲುಗಳ ಮೇಲೂ ದ್ವಾಪರ ಯುಗದಲ್ಲಿ  ಎರಡು ಕಾಲುಗಳ  ಮೇಲೂ  ಕಲಿಯುಗದಲ್ಲಿ ಒಂದು ಕಾಲಿನ ಮೇಲೂ  ನಿಂತಿರುವುದೆಂದು  ಸೂಚಿತವಾಗಿರುವುದಕ್ಕೆ ಇದೇ ಕಾರಣ.  ರಾಜನು ಧರ್ಮಾಚರಣೆಯನ್ನು  ಯಾವ ಪ್ರಮಾಣದಲ್ಲಿ  ಅಳವಡಿಸಿದರೆ , ಅದಕ್ಕನುಗುಣವಾಗಿ  ಆ ಕಾಲವು ಕೃತಯುಗದಂತೆ, ತ್ರೇತಾಯುಗದಂತೆ , ದ್ವಾಪರಯುಗದಂತೆ  ಅಥವಾ ಕಲಿಯುಗದಂತೆ ಪರಿಣಮಿಸುವುದೆಂಬುವುದು “ರಾಜಾ ಕಾಲಸ್ಯ ಕಾರಣಮ್‍” ಎಂಬುದರ ಆಶಯ. ಅದೆಷ್ಟು ಘನತರವಾದ ಆಶಯವೆಂಬುದನ್ನು ಹೇಳಬೇಕಾದ ಅಗತ್ಯವೇ ಇಲ್ಲ.  ಸರಿಯಾದ  ರೀತಿಯಲ್ಲಿ ಪ್ರಜಾಪಾಲನ ಮಾಡಿ ರಾಜಧರ್ಮವನ್ನು  ನೆರವೇರಿಸಿದರೆ  ಸಾವಿರ ಅಶ್ವಮೇಧಗಳ ಫಲಪ್ರಾಪ್ತಿಯು  ಅದೊಂದರಿಂದಲೇ ಬರುತ್ತದೆಂಬುದು ಮಹಾಭಾರತದ  ವಚನ.  ತಂದೆಯ ಮನೆಯಲ್ಲಿ  ಮಕ್ಕಳಿಗೆ ದೊರೆಯುವ ಪೋಷಣೆಯು  ಯಾವ ರಾಜನ ಪ್ರಜೆಗಳಿಗೆ  ಅವನಿಂದ ದೊರೆಯುವುದೋ, ತಂದೆಯ ಮನೆಯಲ್ಲಿ  ಮಕ್ಕಳು ನಿರಾತಂಕವಾಗಿರುವರೋ, ಯಾವ ರಾಜನ ಪ್ರಜೆಗಳು ನಿರಾತಂಕನಾಗಿರುವರೋ ಅವನ ರಾಜ್ಯಭಾರವು ಸಾರ್ಥಕ; ಅವನೇ ರಾಜನೆಂಬ  ಹೆಸರಿಗೆ ಪಾತ್ರ – ಎಂಬುದು ಮಹಾಭಾರತದ  ಶಾಂತಿಪರ್ವದಲ್ಲಿ  ಹೇಳಿರುವ ಭೀಷ್ಮಾಚಾರ್ಯರ  ಉಪದೇಶ; ಪ್ರಜಾರಂಜನವೇ ರಾಜಧರ್ಮ” ++ ಎಂಬುದು ಮಹಾಭಾರತದಲ್ಲಿರುವ ಉಪದೇಶವಾಣಿ; ಪ್ರಜೆಗಳು ತಮ್ಮ ತಮ್ಮ ಮನೆಗಳ ಬಾಗಿಲುಗಳನ್ನು  ತೆರೆದು ನಿದ್ರಿಸಿದರೂ  ಅವರಿಗೆ  ಯಾವ  ಭಯವೂ ಇರದಷ್ಟು ಮಟ್ಟಿಗೆ  ಸುರಕ್ಷಿತವಾಗಿರುವಂತೆ ವ್ಯವಸ್ಥೆ ಮಾಡುವುದೂ ರಾಜಧರ್ಮಕ್ಕೆ ಸೇರಿದುದೆಂಬುದು ಆಗಿನ ಆಶಯ ದುರ್ಯೋಧನನು ಪಾಂಡವರಿಗೆ  ಕೇಡನ್ನೆಣಿಸಿದುದು ನಿಜ.  ಆದರೆ ಅವನು  ಹಿಂಸಿಸುತ್ತಿರಲಿಲ್ಲ. ರಾಜಧರ್ಮವನ್ನು  ಅನುಸರಿಸಿಯೇ ಪ್ರಭುತ್ವ ಮಾಡುತ್ತಿದ್ದನು. ಶಂತನು ಮುಂತಾದವರಂತೆ  ಅವನೂ ರಾಜ್ಯಭಾರ ಮಾಡಿ ಪ್ರಜೆಗಳನ್ನು  ಮಕ್ಕಳಂತೆ  ಪೋಷಿಸಿದನು.  ಪ್ರಜೆಗಳ ಯೋಗಕ್ಷೇಮ ಸಾಧನೆಯೇ * ರಾಜನ ಅವಶ್ಯ ಕರ್ತವ್ಯ.  ಭೀಷ್ಮಾಚಾರ್ಯರು “ಕುರುಶ‍್ರೇಷ್ಠನಾದ ಯುಧಿಷ್ಠಿರ ! ಗರ್ಭಿಣಿಯು ತನಗೆ ಪ್ರಿಯವಾದುದನ್ನು  ಮನಬಂದಂತೆ ಆಚರಿಸದೆ ತನ್ನ ಗರ್ಭದಲ್ಲಿರುವ  ಮಗುವಿನ ಹಿತಕ್ಕೆ  ಮಾತ್ರವೇ ಗಮನ ಕೊಟ್ಟು ನೋಡಿಕೊಳ್ಳುವಂತೆ ರಾಜನೂ ವರ್ತಿಸಬೇಕು.  ಅವನು ಸರ್ವದಾ ಧರ್ಮಾನುವರ್ತಿಯಾಗಿ ತನಗೆ ಪ್ರಿಯವಾದುದನ್ನಾಚರಿಸದೆ, ಪ್ರಜೆಗಳ ಹಿತಸಾಧನೆಗೆ  ಏನೇನು  ಅವಶ್ಯವೋ  ಅದಕ್ಕೆ ಮಾತ್ರವೇ ಗಮನಕೊಟ್ಟು ಪ್ರಜೆಗಳನ್ನು ಕಾಪಾಡಬೇಕು.” + ಎಂದು ಹೇಳಿರುವುದಂತೂ ಮನೋಜ್ಞವಾಗಿದೆ.  ಸತ್ಯರಕ್ಷಣೆ, ವ್ಯವಹಾರದಲ್ಲಿ  ಆರ್ಜವ- ಇವೂ ರಾಜಧರ್ಮದಲ್ಲಿ ಸೇರಿವೆಯೆಂಬುದೂ ಮಹಾಭಾರತದಲ್ಲಿ ಸೂಚಿತವಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಂತೂ, “ರಾಜನ ಸುಖವು ಪ್ರಜೆಗಳ ಸುಖದಲ್ಲೇ ; ಪ್ರಜೆಗಳಿಗೆ  ಪ್ರಿಯವಾದುದೇ  ರಾಜನ ಹಿತ;  (ಅದನ್ನು  ಬಿಟ್ಟು) ರಾಜನಿಗೆ  ಆತ್ಮಪ್ರಿಯವಾದುದೆಂದಿಗೂ (ಎಂದರೆ, ರಾಜನಿಗೆ  ಮಾತ್ರವೇ ಪ್ರಿಯವಾದುದೆಂದಿಗೂ) ಆತನ ಹಿತಕ್ಕೆ ಸಾಧಕವಲ್ಲ. ಆದ ಕಾರಣ, ರಾಜನು ನಿರಂತರವೂ ಸಂಪದಭಿವೃದ್ಧಿ ಮಾಡಿ ಆರ್ಥಿಕೋನ್ನತಿಯನ್ನು ಸಾಧಿಸುವುದರಲ್ಲೇ ನಿರತನಾಗಿರಬೇಕು. ಉದ್ಯಮಶೀಲತೆಯಿಂದ ಶ್ರಮಿಸುವುದೇ ಅರ್ಥವ್ಯಾಪ್ತಿಗೆ  ಮೂಲ.  ಉದ್ಯಮಶೀಲತೆಗೆ  ವ್ಯತಿರಿಕ್ತವಾದ ಅಲಸತನವೇ  ವಿನಾಶಕ್ಕೆ ದಾರಿ” * ಎಂದು ಸೂಚಿತವಾಗಿದೆ. ಆದಾಗ್ಯೂ, ಅರ್ಥಕ್ಕಿಂತಲೂ ಧರ್ಮವು ಶ್ರೇಷ್ಠವೆಂಬುದೇ ಕೌಟಿಲ್ಯನ ಭಾವನೆ. ರಾಜನು  ಧರ್ಮಪ್ರವರ್ತಕನೆಂದು ಆತನು ಕಂಠೋಕ್ತವಾಗಿ ಹೇಳಿದ್ದಾನೆ.  ಪ್ರಜೆಗಳ ಸೇವೆಗಾಗಿ  ಬ್ರಹ್ಮನು ರಾಜನನ್ನು ಸೃಷ್ಟಿಸಿದ್ದಾನೆಂದು ಶುಕ್ರನೀತಿಯಲ್ಲಿ ಸ್ಪಷ್ಟವಾಗಿ ಸೂಚಿತವಾಗಿದೆ.  “ರಾಜನಿರುವುದು ಧರ್ಮರಕ್ಷಣೆಗೋಸ್ಕರವಾಗಿ”- ಎಂಬುದು ಕೌಟಿಲ್ಯನ ನಿರೂಪಣೆ. ಅಷ್ಟೇ ಅಲ್ಲ, ರಾಜನು  ವೇತವನ್ನು ಪಡೆಯುವ  ಪ್ರಜಾಸೇವಕನೆಂಬುದೂ ಕೌಟಿಲ್ಯನ  ಅಭಿಪ್ರಾಯ. ರಾಜನು  ಕಾರ್ಯಸಾಮರ್ಥ್ಯವನ್ನೂ, ಪುರುಷಸಾಮರ್ಥ್ಯನ್ನೂ, ಇಂದ್ರಿಯ ಜಯವನ್ನು  ಪಡೆದು ಧರ್ಮದಿಂದ ಪ್ರಜಾಪಾಲನ ಮಾಡಬೇಕೆಂಬುದು ಕೌಟಿಲ್ಯನ ಆಶಯ. ರಾಜನು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ- ಎಂಬ ಶತ್ರು ಷಡ್ವರ್ಗ ತ್ಯಾಗ ಮಾಡಿ ಸಾಂಕುಶ ಪ್ರಭುತ್ವ  ಮಾಡಬೇಕೇ  ಹೊರತು ನಿರಂಕುಶ ಪ್ರಭುತ್ವಕ್ಕೆಂದಿಗೂ ಕೈಹಾಕಕೂಡದೆಂಬುದು ಕೌಟಿಲ್ಯನ ಸ್ಪಷ್ಟವಾದ ಸೂಚನೆ. ಅನೇಕ ಗ್ರಂಥಗಳಲ್ಲಿ ರಾಜಧರ್ಮವು ನಿರೂಪಿತವಾಗಿದೆ. ಅದನ್ನು ಕುರಿತು ಒಂದು ಗ್ರಂಥವನ್ನೇ ಬರೆಯಬಹುದಾದಷ್ಟು ವಿಷಯಗಳಿವೆ.  ಆದಾಗ್ಯೂ, ಈ ಲೇಖನದಲ್ಲಿ  ಇದುವರೆಗೆ ಸೂಚಿತವಾಗಿರುವ ಅಂಶಗಳಿಂದ  ರಾಜಧರ್ಮದ ಸ್ವರೂಪವೇನೆಂಬುದು ಸ್ವಲ್ಪಮಟ್ಟಿಗೆ ವ್ಯಕ್ತವಾಗದಿರದು.

ಆದರ್ಶ ರಾಜಧರ್ಮ-ಉದಾಹರಣೆ

ರಾಜಧರ್ಮವು ಗ್ರಂಥಗಳಲ್ಲಿ ಪ್ರತಿಪಾದಿತವಾಗಿರುವಷ್ಟರಿಂದಲೇ ನಾವು ತೃಪ್ತಿಹೊಂದಬೇಕಾದ ಪ್ರಸಂಗವೇನೂ ಇಲ್ಲ. ರಾಜಧರ್ಮದ ಉದಾತ್ತ ತತ್ತ್ವಗಳನ್ನು  ಕಾರ್ಯತಃ ಆಚರಣೆಗೆ

ರಾಜಧರ್ಮವು ಗ್ರಂಥಗಳಲ್ಲಿ ಪ್ರತಿಪಾದಿತವಾಗಿರುವಷ್ಟರಿಂದಲೇ ನಾವು ತೃಪ್ತಿಹೊಂದಬೇಕಾದ  ಪ್ರಸಂಗವೇನೂ ಇಲ್ಲ.  ರಾಜಧರ್ಮದ ಉದಾತ್ತ ತತ್ತ್ವಗಳನ್ನು  ಕಾರ್ಯತಃ ಆಚರಣೆಗೆ ತಂದು  ಪ್ರಜೆಗಳ ಸುಖ ಸಂಪತ್ತುಗಳನ್ನೂ, ಪ್ರಜೆಗಳ  ಜ್ಞಾನಭಂಡಾರವನ್ನೂ, ನಾಡಿನ ಸಾಹಿತ್ಯ ಸಂಸ್ಕೃತಿಗಳನ್ನೂ ವೃದ್ಧಿಗೊಳಿಸಿ ಧನ್ಯರಾದ ಅನೇಕ ರಾಜರೂ ಚಕ್ರವರ್ತಿಗಳೂ ಕೀರ್ತಿಕಾಯರಾಗಿ ಭಾರತದ ಇತಿಹಾಸದಲ್ಲಿ ಬೆಳಗುತ್ತಿದ್ದಾರೆ. ಉದಾಹರಣೆಗಾಗಿ  ಕೌಶಾಂಬಿಯ  ಒಡೆಯನಾಗಿದ್ದ ಉದಯನನು ರಾಜಧರ್ಮವನ್ನು  ಆಸ್ಥೆಯಿಂದ ಪಾಲಿಸಿದುದರಿಂದ ಅದರ  ಸತ್ಪರಿಣಾಮವಾಗಿ ಪ್ರಜೆಗಳೆಲ್ಲರೂ  ಆತನನ್ನು  ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿ, ಅವನಿಗಾಗಿ ಮಡಿಯಲೂ ಸಿದ್ಧವಾಗಿದ್ದರೆಂಬುದನ್ನು ಈ ಸಂದರ್ಭದಲ್ಲಿ ಸೂಚಿಸಬಹುದಾಗಿದೆ.  ಅವನೆಷ್ಟು ಸಾಂಕುಶ ರೀತಿಯಲ್ಲಿ ವರ್ತಿಸಿ, ಜನಾನುರಾಗವನ್ನು ಎಷ್ಟು ಮಟ್ಟಿಗೆ ಗಳಿಸಿರಬೇಕೆಂಬುದು ಇದರಿಂದ ವ್ಯಕ್ತವಾಗುತ್ತದೆ.  ರಾಜಧರ್ಮದ ನಿಯಮಗಳ ಮೇರೆಗೆ ನಿರಂಕುಶವಾಗಿ ನಡೆಯಲು ರಾಜನಿಗೆ  ಅಥವಾ ಚಕ್ರವರ್ತಿಗೆ ಆಸ್ಪದವೇ ಇರಲಿಲ್ಲ. ಆತನು ರಾಜಧರ್ಮವನ್ನು ಪಾಲಿಸಿ, ಪ್ರಜೆಗಳ ಸುಖವೇ ತನ್ನ ಸುಖ, ಪ್ರಜೆಗಳಿಗೆ  ಪ್ರಿಯವಾದುದೇ ತನ್ನ ಹಿತ, ಪ್ರಜೆಗಳ ಹಿತವೇ ತನ್ನ ಹಿತ  ಎಂಬ ಭಾವನೆಯಿಂದ ಕೂಡಿ ವರ್ತಿಸಬೇಕಾಗಿದ್ದಿತು.  ದುಷ್ಟರಾದ ರಾಜರೂ ಇದ್ದರು. ಆದರೆ ಅವರ ದೌರ್ಜನ್ಯವು ಹೆಚ್ಚು ಕಾಲ ಸಾಗುತ್ತಿರಲಿಲ್ಲ.  ಧರ್ಮಶ್ರದ್ಧೆಯಿಂದ ಮತ್ತು ಕರ್ತವ್ಯನಿಷ್ಠೆಯಿಂದ  ಕೂಡಿ,  ಪ್ರಜಾರಂಜನ  ಪರಾಯಣರಾಗಿದ್ದ ರಾಜರೂ ಚಕ್ರವರ್ತಿಗಳೂ ಅನೇಕರಿದ್ದರು. ಅವರ ಪ್ರಯತ್ನದಿಂದ ಮತ್ತು ಪ್ರಜೆಗಳ ಸಹಕಾರದಿಂದ  ಭಾಗ್ಯಾಭಿವೃದ್ಧಿಯೂ ವಿದ್ಯಾಭಿವೃದ್ಧಿಯೂ ಅಮಿತವಾಗಿ ಸಾಗಿದವು.  ವ್ಯವಸಾಯ ಕೈಗಾರಿಕೆಗಳು ವಿಶೇಷವಾಗಿ ವೃದ್ಧಿಹೊಂದಿದವು; ವ್ಯಾಪಾರ ವಾಣಿಜ್ಯಗಳು ಅಪರಿಮಿತವಾಗಿ  ಹೆಚ್ಚಿ ವಿದೇಶಗಳಿಂದ ಕೂಡ ಭಾರತಕ್ಕೆ ಹೊನ್ನು ಹೊಳೆಯು ಹರಿಯುವಂತಾಯಿತು; ಭಾರತವು ಸಂಪತ್ತಿನ ನೆಲೆಯೆನಿಸಿ  ಮತ್ತು ಜ್ಞಾನದ ಆಗರವೆನಿಸಿ ಬೆಳಗಿತು. ಅಶೋಕ ಚಕ್ರವರ್ತಿಯಂತೂ ರಾಜ ಧರ್ಮದ ಮತ್ತು ಪ್ರಜಾವಾತ್ಸಲ್ಯದ   ಪ್ರತೀಕದಂತಿದ್ದನು. ಪರ ರಾಜ್ಯಗಳಲ್ಲಿ ಕೂಡ ವೈದ್ಯಶಾಲೆ ಮುಂತಾದ  ಪ್ರಜಾ ಸೌಕರ್ಯಗಳನ್ನು ಅವನು ಕಲ್ಪಿಸಿದ್ದನು.  ಅದಕ್ಕಾಗಿ ಯಾವ ಕಾಲದವರು  ಮತ್ತು ಯಾವ ಜನಾಂಗದವರು ಬೇಕಾದರೂ  ಹೆಮ್ಮೆಪಡಬಹುದಾಗಿದೆ. ಅಶೋಕ ಚಕ್ರವರ್ತಿಯ ಹೆಸರು ಧ್ರುವತಾರೆಯಂತೆ  ಎಂದೆಂದಿಗೂ ಶೋಭಿಸುತ್ತದೆಂದೂ, ಪ್ರಪಂಚದ ಇತರ ರಾಜರುಗಳಲ್ಲಿ  ಮತ್ತು ಚಕ್ರವರ್ತಿಗಳಲ್ಲಿ  ಮತ್ತಾರ ಹೆಸರನ್ನೂ  ಜನತೆಯು  ನೆನಪಿನಲ್ಲಿಟ್ಟಿರುವುದಿಲ್ಲವೆಂದೂ ಪ್ರಪಂಚದ ಪ್ರಸಿದ್ಧ ಲೇಖಕರಲ್ಲೊಬ್ಬರಾದ  ಶ್ರೀ ಎಚ್‍. ಜಿ.  ವೇಲ್ಸ್ ಅವರು ಬರೆದಿರುವುದು ಭಾರತದ ಹೆಮ್ಮೆ.  ಗಣರಾಜ್ಯಗಳೂ ರಾಜಧರ್ಮದ  ಉದಾತ್ತ ನಿಯಮಗಳನ್ನು  ಅನುಸರಿಸಿ ಪ್ರಜೆಗಳ ಹಿತವನ್ನು  ಸಾಧಿಸುತ್ತಿದ್ದವು. ಶ್ರೇಷ್ಠವರ್ಗದ ಗಣರಾಜ್ಯವೆಂದು  ಪ್ರಸಿದ್ಧವಾಗಿರುವ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಮತ್ತು ಸಾಂಕುಶ ಪ್ರಭುತ್ವದಲ್ಲಿ ಪ್ರಜಾ ಸರ್ಕಾರವೇರ್ಪಟ್ಟು ಪ್ರಸಿದ್ಧವಾಗಿರುವ ಇಂಗ್ಲೆಂಡಿನಲ್ಲಿ ಮರಣದಂಡನೆಯನ್ನು  ಇನ್ನೂ ತೆಗೆದುಹಾಕಿಲ್ಲ (ಅದನ್ನು ತೆಗೆದುಹಾಕಬೇಕೆಂಬ ಪ್ರಯತ್ನವೇನೋ ನಡೆಯುತ್ತಿದೆ.) ಹೀಗಿರುವಲ್ಲಿ ಹರ್ಷವರ್ಧನ ಚಕ್ರವರ್ತಿಯು ಮರಣದಂಡನೆಯನ್ನು ತೆಗೆದುಹಾಕಿದ್ದುದು ಮಾತ್ರವೇ ಅಲ್ಲದೆ, ನರಹತ್ಯ ಮುಂತಾದ  ಘೋರವಾದ ಅಪರಾಧಗಳನ್ನು ಮಾಡಿದವರನ್ನು  ಬಂಧನದಲ್ಲಿಟ್ಟು  ಅವರು ಸನ್ಮಾರ್ಗವನನ್ನುಸರಿಸುವಂತೆ  ಶಿಕ್ಷಣ ಕೊಟ್ಟು ಅವರಿಂದ ಸಮಾಜಕ್ಕೆ ಕೇಡಾಗಲಾರದೆಂಬ  ನಂಬಿಕೆಯುಂಟಾದೊಡನೆಯೇ ಅವರನ್ನು ಬಂಧನದಿಂದ ಬಿಡುಗಡೆ ಮಾಡುವ ವ್ಯವಸ್ಥೆಯನ್ನು  ಏರ್ಪಡಿಸಿದ್ದುದಕ್ಕಾಗಿ  ಹೆಮ್ಮೆಪಡುವುದು ತಪ್ಪಾದೀತೆ?

 ಭಾರತದಲ್ಲಿ ಇಂದು ಗಣರಾಜ್ಯವು ಏರ್ಪಟ್ಟು ಒಟ್ಟು ಭಾರತವೇ ಒಂದು ಆಡಳಿತಕ್ಕೊಳಪಟ್ಟಿರುವುದು ದೊಡ್ಡದೊಂದು ಸುಯೋಗ.  ಹಿಂದೆಂದೂ ಭಾರತವು ಹೀಗೆ  ಒಂದು ಆಡಳಿತ ವ್ಯವಸ್ಥೆಗೊಳಪಟ್ಟಿರಲಿಲ್ಲ.

 ಭಾರತದ ಸಮುನ್ನತಿಗಾಗಿ

 ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು  ಗಳಿಸಿಕೊಟ್ಟವರು ಮಹಾತ್ಮಾ ಗಾಂಧಿಯವರ ಅಧಿಷ್ಠಾತೃತ್ವದಲ್ಲಿ ತ್ಯಾಗಬುದ್ಧಿಯಿಂದ  ಶ್ರಮಿಸಿದ ನಾಯಕರು. ರಾಷ್ಟ್ರ ಪಿತಾಮಹರೆಂದು ಪ್ರಸಿದ್ಧರಾದ ಮಹಾತ್ಮಾ ಗಾಂಧಿಯವರು ತಮ್ಮ ಸದ್ಗುಣಗಳನ್ನೂ ತಮ್ಮ ಸಂಸ್ಕೃತಿಯನ್ನೂ ವೃದ್ಧಿಪಡಿಸಿಕೊಂಡುದಕ್ಕೆ ಪ್ರಾಚೀನ ಧರ್ಮಗ್ರಂಥಗಳೂ, ಇತರ ದೇಶಗಳ ಧರ್ಮಗ್ರಂಥಗಳೂ ಕಾರಣವಾದವು. ಆದುದರಿಂದ ಆಡಳಿತಸೂತ್ರಗಳು ರಾಜ ಮಹಾರಾಜರುಗಳಿಂದ ಪ್ರಜೆಗಳ ಕೈಸೇರಿರುವ  ಈಗಿನ ಸನ್ನಿವೇಶದಲ್ಲಿ ಕೂಡ ರಾಜಧರ್ಮದ ‍ಶ್ರೇಷ್ಠ ತತ್ತ್ವಗಳನ್ನು  ಪ್ರಜೆಗಳು ಮನನ ಮಾಡಿ ವಿಶೇಷ ರೀತಿಯಲ್ಲಿ ಪ್ರಯೋಜನ ಪಡೆಯಬಹುದಾಗಿದೆ. ಅದರ ಜೊತೆಗೆ,  ಎಲ್ಲಿಂದ ಬೆಳಕು ಬಂದರೂ- ಎಂದರೆ, ಯಾವ  ದೇಶದಿಂದ ಮತ್ತು ಯಾವ  ಜನಾಂಗದಿಂದ ಬೆಳಕು ಬಂದರೂ ಅದನ್ನು ಸ್ವಾಗತಿಸಿ ಅದರಿಂದ  ಪ್ರಯೋಜನ ಪಡೆಯಬಹುದಾಗಿದೆ.  ಹಾಗೆ ಮಾಡುವುದೇ ವಿವೇಕ. ಜನಸಾಮಾನ್ಯರ  ಧರ್ಮಶ್ರದ್ಧೆಯೂ ಕರ್ತವ್ಯನಿಷ್ಠೆಯೂ, ಸತ್ಯಪ್ರೇಮವೂ, ತ್ಯಾಗಬುದ್ಧಿಯೂ, ಜ್ಞಾನಸಂಪತ್ತೂ, ನ್ಯಾಯ ಪಕ್ಷಪಾತವೂ ಎಷ್ಟೆಷ್ಟು ಉಚ್ಚ ಹಂತಕ್ಕೇರಿದರೆ, ದೇಶದ  ತೂಕವೂ ಸಂಸ್ಕೃತಿಯ ಮಟ್ಟವೂ ಅಷ್ಟಷ್ಟು ಹೆಚ್ಚುತ್ತವೆ.

“ರಾಜಾ ಪ್ರಕೃತಿ ರಂಜನಾತ್” ಎಂಬುದು ಇದಕ್ಕೆ ಸಾಕ್ಷಿ.

+”ಸ್ವವಶೋ ನ ಕದಾಚನ”

* “ಧರ್ಮಸ್ಯ ಗೋಪ್ತಾ”

= “ಧರ್ಮಃಪ್ರಾಣೇವ ಚಿನ್ತ್ಯೋ”

“ಕೃತಂ ತ್ರೇತಾ ದ್ವಾಪರಶ್ಚ ಭರತರ್ಷಭ|

ರಾಜಾವೃತಾನಿ ಸರ್ವಾಣಿ ರಾಜೈವ  ಯುಗ ಉಚ್ಯತೇ||”

++”ಲೋಕರಂಜನಮೇವಾತ್ರ ರಾಜ್ಞೋ ಧರ್ಮಃ”

-“ಯೋಗಕ್ಷೇಮಾನುಸಂಧಾನಮ್”

+ಯಥಾ ಹಿ ಗರ್ಭಿಣೀ ಹಿತ್ವಾ ಸ್ವಂ ಪ್ರಿಯಂ ಮನಸೋನುಗಂ |

ಗರ್ಭಸ್ಯ ಹಿತಮಾದತ್ತೇ ತಥಾ ರಾಜ್ಞೋಪ್ಯಸಂಶಯಮ್||

ವರ್ತಿತವ್ಯಂ ಕುರುಶ್ರೇಷ್ಠ ನಿತ್ಯಂ ಧರ್ಮಾನುವರ್ತಿನಾ |

ಸ್ವಂ ಪ್ರಿಯಂ ಸಮಭಿತ್ಯಜ್ಯ ಯದ್ಯಲ್ಲೋಕಹಿತಂ ಭವೇತ್||

+ಪ್ರಜಾಸುಖೇ ಸುಖಂ ರಾಜ್ಞಃ

ಪ್ರಜಾನಾಂ ಚ ಹಿತೇ ಹಿತಮ್‍|

ನಾತ್ಮಪ್ರಿಯಂ ಹಿತಂ ರಾಜ್ಞಃ

ಪ್ರಜಾನಾ ತು ಪ್ರಿಯಂ ಹಿತಮ್ ||

ತಸ್ಮಾನ್ನಿತ್ಯೋತ್ಥಿತೋ ರತ

ಕುರ್ಯಾದರ್ಥಾನುಶಾಸನಮ್ |

ಅರ್ಥಸ್ಯ ಮೂಲಮುತ್ಥಾನಮ್

ಅನರ್ಥಸ್ಯ ವಿಪರ್ಯಯಃ||”

*“ಧರ್ಮಾಯ ರಾಜಾಭವತಿ”

 

  •   ಶ್ರೀ ಸಿ. ಕೆ. ವೆಂಕಟರಾಮಯ್ಯ
   

Leave a Reply