ಚರೈವೇತಿ! ಚರೈವೇತಿ!!

ಪಂಡಿತ್.ದೀನದಯಾಳ್ ಲೇಖನಗಳು - 0 Comment
Issue Date : 28.10.2014

 

(1967ರ ಡಿಸೆಂಬರ್‍ನಲ್ಲಿ ನಡೆದ ಕಲ್ಲಿಕೋಟೆಯ ಅಧಿವೇಶನದ ನಿಮಿತ್ತ ಜನಸಂಘದ ಕೇಂದ್ರ ಕಾರ್ಯಾಲಯವು ಪ್ರಕಟಿಸಿದ ಸ್ಮರಣಿಕೆ ‘ಜನದೀಪ’ಕ್ಕೆ  ಪಂಡಿತಜಿ  ಬರೆದ ಸಂಪಾದಕೀಯ.)

ಮಹಾಚುನಾವಣೆಗಳ ನಂತರ ದೇಶದ ರಾಜಕೀಯದ ದಿಕ್ಕು ಬದಲಾಗಿದೆ. ಕಾಂಗ್ರೆಸ್ಸಿನ ಯುಗ ಕೊನೆಗೊಂಡಿದೆ. ಹೊಸ ಹೊಸ ಯುಗ ಉದಯಿಸುತ್ತಲಿದೆ.  ಅದಕ್ಕಾಗಿ ಹೊಸ ವಿಚಾರ, ಹೊಸ ನೀತಿ ಮತ್ತು ಹೊಸ ನೇತೃತ್ವ ಬೇಕಾಗಿದೆ.  ಹಳೆಯ ಪೀಳಿಗೆ ತನ್ನ ಕೆಲಸ ಮುಗಿಸಿದೆ. ಈಗ ಹೊಸ ಪೀಳಿಗೆ ಮುಂದೆ ಬರಬೇಕಾಗಿದೆ.

ಇಂದಿನ ರಾಜಕಾರಣವೆಂದರೆ  ಎರಡು ಯುಗಗಳ ನಡುವಿನ  ಸಂಧಿಕಾಲದ ರಾಜಕಾರಣ. ಅದು ಕೇವಲ ಸಂಕ್ರಮಣ ಕಾಲದ ತಾತ್ಕಾಲಿಕ ವ್ಯವಸ್ಥೆ. ಇದನ್ನು ‘ಸ್ಥಾಯೀ’ಯೆಂದು  ತಿಳಿಯುವ ತಪ್ಪನ್ನು ಮಾಡದಿರಿ ಮತ್ತು ಅದನ್ನು  ಭಾವೀ ರಾಜನೀತಿಯ ಸ್ವರೂಪವೆಂದೂ ತಿಳಿಯಬೇಡಿ.

ಭೂತಕಾಲ ಒಂದು  ಸತ್ಯವಾಗಿದೆ, ವರ್ತಮಾನವು ಅಸ್ಥಿರವಾಗಿದೆ ಮತ್ತು ಭವಿಷ್ಯವಾದರೋ ಅಜ್ಞಾತ. ಅಜ್ಞಾತದ ಬಗ್ಗೆ ಕೆಲವರಿಗೆ ಭಯವಿದೆ,  ಆದುದರಿಂದ ಅವರು ವರ್ತಮಾನಕ್ಕೇ ಅಂಟಿಕೊಳ್ಳಲು ಇಚ್ಛಿಸುತ್ತಾರೆ ಅಥವಾ ಹಿಂದಿನ ಸ್ಥಿತಿಯನ್ನು  ಮರಳಿ ತರಲು ಇಚ್ಛಿಸುತ್ತಾರೆ. ಪ್ರಕೃತಿಯ ನಿಯಮ ಹಾಗೂ ಕಾಲದ ಚಲನೆಗೆ ವಿರುದ್ಧವಾಗಿ ಕೆಲಸ ಮಾಡುವವರು ಯಶಸ್ವಿಯಾಗಲಾರರು.

ಭವಿಷ್ಯದ ಬಗ್ಗೆ ಹೆದರದಿರಿ, ಅದರ ಬದಲು  ಅದರ ನಿರ್ಮಾಣದಲ್ಲಿ ಆಸಕ್ತಿ ತಾಳಿರಿ. ಹೃದಯದಲ್ಲಿ ಅಂಕಿತಗೊಳಿಸಿರುವ  ಸ್ವಪ್ನಗಳನ್ನು  ಸಾಕಾರಗೊಳಿಸಿರಿ, ಕಲ್ಪನೆಯನ್ನು  ಕೃತಿರೂಪದಲ್ಲಿಳಿಸಿರಿ. ಯೋಜನೆಯನ್ನು ಯುಕ್ತಿಯಿಂದ ಪೂರ್ಣಗೊಳಿಸಿರಿ. ಕೃತಯುಗವನ್ನು  ನಿರ್ಮಾಣ ಮಾಡಬೇಕೆಂದಿದ್ದರೆ, ಈ ಆರ್ಷವಚನವನ್ನು ನೆನಪಿನಲ್ಲಿಡಿ:

ಕಲಿಃ ಶಯಾನೋ ಭವತಿ

ಸಂಜಿಹಾನಸ್ತು ದ್ವಾಪರಃ|

ಉತ್ತಿಷ್ಠಂಸ್ತ್ರೇತಾಮಾಪ್ನೋತಿ

ಕೃತಂ ಸಂಪದ್ಯತೇ ಚರನ್‍ ||

ಚರೈವೇತಿ, ಚರೈವೇತಿ ||

“ಮಲಗಿದ್ದವರು ಕಲಿಯುಗದವರು, ಹಾಸಿಗೆಯನ್ನು  ತ್ಯಜಿಸುವವರು  ದ್ವಾಪರಯುಗದವರು, ಎದ್ದು ನಿಲ್ಲುವವನು ತ್ರೇತಾಯುಗವನ್ನು ನಿರ್ಮಿಸುವನು, ಮುನ್ನಡೆಯುವವನು ಕೃತಯುಗವನ್ನು ತರುವನು. ಆದುದರಿಂದಲೇ ಮುನ್ನಡೆಯಿರಿ, ಮುನ್ನಡೆಯಿರಿ”

ವಾದಗಳ ವಿವಾದದಲ್ಲಿ  ಸಿಲುಕುವ ಅಗತ್ಯವಿಲ್ಲ. ತಮ್ಮ ಅಂತಃಕರಣ ಪ್ರವೃತ್ತಿಯನ್ನೇ ಪ್ರಮಾಣವೆಂದು ತಿಳಿದು ನಡೆಯಿರಿ. ಅದೇ ಧರ್ಮ. ಅದರೊಳಗಿಂದಲೇ ತಪಸ್ಸಿನ  ಪ್ರೇರಣೆ ಸಿಗುವುದು ಮತ್ತು ಕಾರ್ಯಕ್ಕೆ ದಿಕ್ಕೂ ಲಭಿಸುವುದು.

ಯಾವ ಪ್ರವೃತ್ತಿ ಮತ್ತು ಅರ್ಥವ್ಯವಸ್ಥೆ, ಯಾವ ರಾಜನೀತಿ ಮತ್ತು ಅರ್ಥನೀತಿ, ಯಾವ  ಸಾಮಾಜಿಕ ನಿಯಮ ಮತ್ತು ಶಿಕ್ಷಣ ಪದ್ಧತಿಗಳು ನಮ್ಮನ್ನು ಕರ್ಮವಿಹೀನ, ಸೋಮಾರಿ ಮತ್ತು ನಿದ್ರಾಳುವಾಗಿ ಮಾಡುವವೋ ಅವು ಕಲಿಯುಗದವುಗಳಾಗಿವೆ.  ಅವುಗಳನ್ನು  ಬದಲಾಯಿಸಬೇಕು. ಕೃತಯುಗದ ಉದ್ಘೋಷ-ಚರೈವೇತಿ !

ಆದುದರಿಂದ  ರಾಜ ಮತ್ತು ಪ್ರಜೆ, ಬಂಡವಾಳಪತಿ ಮತ್ತು ಶ್ರಮಿಕ, ಧನಪತಿ ಮತ್ತು ಬಡವ – ಎಲ್ಲರೂ ಶ್ರಮದ ಸಾಧನೆಗೆ ತೊಡಗಬೇಕಾದೀತು. ಶ್ರಮದಿಂದ ದೂರಗೊಳಿಸುವ  ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಂರಕ್ಷಣೆಗಳನ್ನು  ಕೊನೆಗೊಳಿಸಬೇಕಾದೀತು. ಶ್ರಮಕ್ಕಾಗಿ  ಸ್ಫುರಿಸುತ್ತಿರುವ ಬಾಹುಗಳಿಗೆ  ಕೆಲಸವನ್ನು  ಕೊಡಬೇಕಾದೀತು.  ರಾಷ್ಟ್ರವ್ಯಾಪಿ ಶ್ರಮವಿರುವಲ್ಲಿ ಬಡತನ ಮತ್ತು ವಿಷಮತೆ ನಿಲ್ಲದು. ಎಲ್ಲಿ ಸಮತೆ  ಮತ್ತು ಸಂಪನ್ನತೆ ಇವೆಯೋ ಅಲ್ಲಿ  ಸತ್ಯ ಇದೆ ಮತ್ತು ಅದೇ ಶಿವ  ಹಾಗೂ ಸುಂದರವೂ ಆಗಿದೆ.  ಹೊಸ ಯುಗವು ಶ್ರಮಯುಗ ಆದಾಗಲೇ, ಅದು ಕೃತಯುಗ ಆದೀತು. ನಮ್ಮಲ್ಲಿ  ಪ್ರತಿಯೊಬ್ಬರೂ ಈ ಯುಗದ ನಿರ್ಮಾಣಕ್ಕೆ ತೊಡಗಬೇಕು, ಇದನ್ನೇ ಇಚ್ಛಿಸಲಾಗಿದೆ.

ವ್ಯಾಮೋಹದ ಯುಗ ಮುಗಿಯಿತು. ಮೋಹನಿದ್ರೆಯು ಕೊನೆಗೊಂಡು ಜಾಗರಣದ ಯುಗ ಉದಯವಾಗಿದೆ. ಇಂದಿನ ಅಲ್ಲೋಲ-ಕಲ್ಲೋಲ ಇದರದೇ ಲಕ್ಷಣವಾಗಿದೆ. ಕೆಲವರು ಮೆಲ್ಲಗೆ  ಬೆನ್ನು ತಟ್ಟಿ ಅಥವಾ ಅಫೀಮನ್ನು ತಿನ್ನಿಸಿ ಪುನಃ ಇದ್ದಲೇ ಮಲಗಿಸಲು ಇಚ್ಛಿಸುತ್ತಾರೆ.  ಅವರ ಬಗ್ಗೆ ಜಾಗರೂಕರಾಗಿರಿ. ಈಗ  ನಾವು ಕಣ್ಣುತೆರೆದು ಎದ್ದುನಿಲ್ಲಬೇಕಾಗಿದೆ.  ಮತ್ತು ಮುನ್ನಡೆಯುವ  ಸಿದ್ಧತೆ ಮಾಡಬೇಕಾಗಿದೆ. ಯಾವ ದಿಕ್ಕಿನಲ್ಲಿ  ಹೋಗಬೇಕೆಂಬುದನ್ನು  ನಾವು ಯೋಚಿಸಬೇಕಾದೀತು. ಇದುವರೆಗೆ ಜನತೆಯನ್ನು  ಜಾಗೃತಗೊಳಿಸಿದ ಮತ್ತು ಈಗ ಅವರನ್ನು  ಮುನ್ನಡೆಯಲು  ಪ್ರೇರೇಪಿಸುತ್ತಿರುವ ಅನೇಕ ಪಕ್ಷಗಳು ಮತ್ತು ಶಕ್ತಿಗಳು ದೇಶದಲ್ಲಿ ಕಾರ್ಯಮಗ್ನವಾಗಿವೆ. ಅವುಗಳ ಸಿದ್ಧಾಂತ, ನೀತಿಗಳು ಮತ್ತು ಕಾರ್ಯಕ್ರಮಗಳು ನಮಗೆ ಹಿಡಿಸವು. ಅವು ದೇಶಕ್ಕೆ ಹಿತಕಾರಿಯೆನಿಸಲಾರವು. ಜೀವನದ ಸತ್ಯವು ಹೆಚ್ಚು ಪ್ರಭಾವಿಯಾಗಿದೆ.  ವಿಕೃತಿಯ ಮೇಲೆ ಪ್ರಕೃತಿಯ ಮತ್ತು ಪ್ರಕೃತಿಯ ಮೇಲೆ ಸಂಸ್ಕೃತಿಯ  ವಿಜಯವು ಸುನಿಶ್ಚಿತ. ಭಾರತದ ಮಣ್ಣಿನ ಭರವಸೆ ನನಗಿದೆ.

ದಾರಿಯ ಬಗ್ಗೆ ಹೆದರಿಸಿ, ಮುನ್ನಡೆಯದಿರಲು ಸಲಹೆ ಮಾಡುವವರ ಮಾತನ್ನು ಕೇಳಬೇಡಿ. ತಪ್ಪು ದಾರಿಯಲ್ಲಾದರೂ ನಡೆಯಿರಿ, ಏನೂ ನಷ್ಟವಾಗದು. ಆದರೆ   ನಡೆಯುವ ಶಕ್ತಿಯೇ ಹಾಳಾಗಿ ಹೋಗುತ್ತಿದ್ದರೆ, ಕುಂಟರಾಗಿ ಉಳಿಯುವಿರಿ. ನಮಗಾದರೋ ನಮ್ಮ ದಾರಿಯನ್ನು  ನಾವೇ ಮಾಡಿಕೊಂಡು ನಡೆಯಬೇಕಾಗಿದೆ; ಯಾವ ದಿಕ್ಕಿನಲ್ಲಿ ನಾವು ನಡೆಯುವೆವೋ ಅದೇ ದಾರಿಯಾಗುವುದು.

–       ದೀನದಯಾಳ ಉಪಾಧ್ಯಾಯ

   

Leave a Reply