ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಟ್ಟು ಮತ್ತು ಬೆಳವಣಿಗೆ

ಚಿಕ್ಕಮಂಗಳೂರು - 0 Comment
Issue Date : 06.02.2014

ಚಿಕ್ಕಮಗಳೂರಿನ ಸಮರ್ಪಣಾ ಟ್ರಸ್ಟ್‌ನ (ರಿ) ಸಮಾಜ ಹಿತ ಸಾಧಿಸಲೆಂದೇ ನಿರ್ಮಾಣವಾಗಿರುವ ಸಂಸ್ಥೆ . ಈಗ ಅದು ನಿರ್ಮಿಸಿರುವ ಹೊಸ ಕಟ್ಟಡ ಸಮಾಜ ಕಾರ್ಯಕ್ಕಾಗಿ ಎದ್ದುನಿಂತಿದೆ. ಈ ಕಾರ್ಯಾಲಯ ಜನಸಂಘಟನೆ, ಜನಶಿಕ್ಷಣ, ಜನಸಂಸ್ಕಾರಗಳಿಗೆ ಮೀಸಲು. ಜೊತೆಗೆ ಜಲಸಂರಕ್ಷಣೆ, ಪರಿಸರ ನೈರ್ಮಲ್ಯ, ಸ್ವದೇಶಿ ಜಾಗರಣಗಳಂತಹ ಚಟುವಟಿಕೆಗಳು, ವಿದ್ಯಾಭ್ಯಾಸ ನಿರತರಿಗೆ ನೆಲೆ….ಹೀಗೆ ಹತ್ತು ಹಲವು ಚಟುವಟಕೆಗಳಿಗೆ ಇದು ಆಸರೆಯಾಗಲಿದೆ. ಕರ್ನಾಟಕದ ಎಲ್ಲೆಡೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳು ಬೇರೆ ಬೇರೆಯವರಿಂದ ಪ್ರಾರಂಭವಾದವು. ಅದೇ ರೀತಿ ಚಿಕ್ಕಮಗಳೂರಿನಲ್ಲಿ ಶಾಖೆ ಆರಂಭವಾಗಿದ್ದು ಬೆಂಗಳೂರಿನ ಎಸ್.ಕೃಷ್ಣಯ್ಯನವರಿಂದ. 1945ರಲ್ಲಿ ಸಂಘದ ಶಾಖೆ ಆರಂಭಿಸಲೆಂದೇ ಅವರು ಅಲ್ಲಿ ಒಂದು ವರ್ಷಕಾಲ ಪ್ರಚಾರಕರಾಗಿದ್ದರು. ಈಗ ಅವರು ಇಲ್ಲ. ಚುರುಕುಮಾತು, ಸ್ನೇಹಶೀಲ ನಡೆ, ತರ್ಕಬದ್ಧ ಮಾತು….ಇಂತಹ ಗುಣಗಳಿಂದ ಅವರು ಎಲ್ಲರನ್ನೂ ಸೆಳೆಯುತ್ತಿದ್ದರು. ವಕೀಲಿ ವೃತ್ತಿ ಹಿಡಿದ ಅವರು ಅನಂತರ ಹೈಕೋರ್ಟಿನ ಯಶಸ್ವಿ ವಕೀಲರಾದರು. ಭಾರತೀಯ ಮಜದೂರ್ ಸಂಘದ ಪ್ರಾಂತ ಅಧ್ಯಕ್ಷರಾಗಿದ್ದರು. ಬೆಂಗಳೂರಿನ ಹಿರಿಯ ಸ್ವಯಂಸೇವಕರಿಗೆ ಕೃಷ್ಣಯ್ಯನವರ ವ್ಯಕ್ತಿತ್ವ ಸದಾ ಮೆಲುಕು ಹಾಕುವಂತಹದು.

ಶಾಖೆ ಪ್ರಾರಂಭವಾದಾಗ ಚಿಕ್ಕಮಗಳೂರಿನ ಎಲ್ಲಾ ವಿದ್ಯಾರ್ಥಿಗಳೂ, ಯುವಕರೂ ಅಲ್ಲಿಗೆ ಬರುತ್ತಿದ್ದರು. ಆಗ ಶಾಖೆಗೆ ಬರುವವರಿಗೆ ಅದೇನೋ ಉತ್ಸಾಹ. ಆಗ ಶಾಖೆಗೆ ಬಂದವರಲ್ಲಿ ಗಡಿಯಾರದ ಅಂಗಡಿ ಮಾಲೀಕರಾದ ಶೆಣೈ ಅವರೂ, ರಘುರಾಮ್, ರಾಮಸ್ವಾಮಿ, ಶಂಕರನಾರಾಯಣ ಪ್ರಮುಖರು. ಅನಂತರ ಸಂಘಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದವರು ಎ.ಆರ್. ಶತ್ರುಘ್ನ ಅವರು. ಪ್ರಚಾರಕರಾಗಿ ಕೆಲಸ ಮಾಡಿ, ಅನಂತರ ನಿವೃತ್ತಿ ಹೊಂದಿದ ಬೆಳವಾಡಿಯ ತಿಪ್ಪೇಸ್ವಾಮಿ (ಖ್ಯಾತ ಹೋಮಿಯೋ ತಜ್ಞ ಡಾ.ಬಿ.ಟಿ.ರುದ್ರೇಶ್ ಅವರ ತಂದೆ) ಇವರೆಲ್ಲರೂ ಸದಾ ಸ್ಮರಣೀಯರು. ಇಡೀ ಜಿಲ್ಲೆಯಲ್ಲಿ ಸಂಘದ ಪ್ರಭಾವ ಹರಡಲು ಅರ್ಹನಿಶಿ ದುಡಿದವರಂದೆರೆ ಬಿ.ಎಸ್. ವಿಠ್ಠಲರಾವ್, ಅಣ್ಣಪ್ಪ ಮತ್ತು ಶಂಕರನಾರಾಯಣ್. ಈಗ ಅವರ್ಯಾರೂ ಇಲ್ಲ.

1956ರವರೆಗೆ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಇವೆರಡೂ ಸೇರಿ ಸಂಘದ ಶಿವಮೊಗ್ಗ ಜಿಲ್ಲೆ ಆಗಿತ್ತು. ಅನಂತರ ಈ ವ್ಯವಸ್ಥೆ ಬದಲಾಗಿ ಚಿಕ್ಕಮಗಳೂರು, ಕಡೂರು, ಮೂಡಿಗೆರೆ ತಾಲ್ಲೂಕುಗಳನ್ನು ಹೊಸತಾಗಿ ರಚಿತವಾದ ಹಾಸನ ಜಿಲ್ಲೆಗೆ ಸೇರಿಸಲಾಯಿತು. ಶೃಂಗೇರಿ, ಕೊಪ್ಪ, ತರೀಕೆರೆ ಶಿವಮೊಗ್ಗ ಜಿಲ್ಲೆಗೆ ಸೇರಿಸಲ್ಪಟ್ಟವು. ಮೂಡಿಗೆರೆ, ಕಡೂರಿನಲ್ಲಿ ರಾತ್ರಿ ಶಾಖೆ, ಚಿಕ್ಕಮಗಳೂರಿನಲ್ಲಿ ಸಾಯಂ ಶಾಖೆ. ಶಾಖೆಗೆ ಬರುತ್ತಿದ್ದವರಲ್ಲಿ ಹೈಸ್ಕೂಲು ವಿದ್ಯಾರ್ಥಿಗಳೇ ಜಾಸ್ತಿ. ಆಗಿನ ಸರಕಾರ್ಯವಾಹ ಏಕನಾಥ ರಾನಡೆಯವರು ತಮ್ಮ ಯೋಜನೆಯಂತೆ ಚಿಕ್ಕಮಗಳೂರು ಶಾಖೆಗೂ ಭೇಟಿ ನೀಡಿದ್ದರು. ಶೃಂಗೇರಿ ತಾಲ್ಲೂಕಂತೂ ಪ್ರಭಾವೀ ಶಾಖಾ ಸ್ಥಾನವೇ ಆಗಿತ್ತು. ಕೊಪ್ಪ, ತರೀಕೆರೆ, ನರಸಿಂಹರಾಜಪುರ ಮಲೆನಾಡಿನ ಸೆರಗಿನಲ್ಲೇ ಇದ್ದವು. ಅಲ್ಲಿ ಕೃಷಿಕರೇ ಹೆಚ್ಚಾಗಿ ಸಂಘದ ಕಾರ್ಯಕರ್ತರು. ಕೆಲವು ವರ್ಷಗಳ ನಂತರ ಚಿಕ್ಕಮಗಳೂರು ಸಂಘದ ಸ್ವತಂತ್ರ ಜಿಲ್ಲೆಯಾಯಿತು. ಕಳೆದ 25ವರ್ಷಗಳಿಂದ ಸಂಘಕಾರ್ಯದ ಬೆಳವಣಿಗೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಮುಂಚೂಣಿಯಲ್ಲೇ ಇದೆ. ಪ್ರಾಂತ ಮಟ್ಟದ ಕಾರ್ಯಕರ್ತರ ಶಿಬಿರ, ವರ್ಗ, ಬೈಠಖ್‌ಗಳು ಇಲ್ಲಿ ಸಾಕಷ್ಟು ನಡೆದಿವೆ. ಪ.ಪೂ.ಸರಸಂಘಚಾಲಕ್ ಬಾಳಾಸಾಹೇಬ್ ದೇವರಸರು ಚಿಕ್ಕಮಗಳೂರಿಗೆ ಬಂದಿದ್ದರು. ಇದುವರೆಗೆ ಸ್ವಂತದ್ದೇ ಆದ ಕಾರ್ಯಾಲಯ ಇರಲಿಲ್ಲ. ಈಗ ಅದು ಸ್ವಂತ ಕಾರ್ಯಾಲಯ ಹೊಂದುವಂತಾಗಿರುವುದು ಸಂತಸದ ಸಂಗತಿ.

ಹರಿಹರಪುರದ ತುಂಗಾತೀರದಲ್ಲಿರುವ ಪ್ರಭೋಧಿನಿ ಗುರುಕುಲ ಸಂಘ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಚೀನ ಪರಂಪರೆಯ ಶಿಕ್ಷಣಕ್ಕೆ ಒತ್ತುಕೊಟ್ಟಿರುವದರ ಹೆಗ್ಗುರುತಾಗಿ ಎದ್ದು ನಿಂತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಂಘ ಕಾರ್ಯಕರ್ತರಿಗೂ ಗುರುಕುಲವಾಸದ ಅನುಭವ ಪಡೆಯಲು ಪ್ರಶಸ್ತ ತಾಣ.

ಚಿಕ್ಕಮಗಳೂರು ಜಿಲ್ಲೆ  ಸಂಘ ಹಾಗೂಸಂಘ ಪರಿವಾರದ ಕ್ಷೇತ್ರಗಳಿಗೆ ಸಾಕಷ್ಟು  ಕೊಡುಗೆ ನೀಡಿದೆ. ಅನೇಕರು ಇಲ್ಲಿಂದ ಪ್ರಚಾರಕರಾಗಿ ಹೊರಟು ಸಂಘದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅರ್ಹನಿಶಿ ಶ್ರಮಿಸಿದ್ದಾರೆ. ಈಗಲೂ ಆ ರೀತಿ ಕೆಲಸ ಮಾಡುತ್ತಿರುವ ಪ್ರಚಾರಕರೆಂದರೆ ಜನಸೇವಾದ ನಿರ್ಮಲ್ ಕುಮಾರ್, ಸುರೇಶ್, ಶ್ರೀಧರ್ ಸಾಗರ್, ರತೀಶ್ ಕುಮಾರ್, ಶ್ರೀಪಾದ ಭಟ್, ನಾಗೇಂದ್ರ, ಚಂದ್ರಬಾಬು, ಭೈರಪ್ಪ, ಎಂ.ನಾಗರಾಜ್, ಜಗದೀಶ್, ಸೀತರಾಮ ಕೆದಿಲಾಯ, ರಘುಪತಿ ಭಟ್, ಹನುಮೇಗೌಡ… ಹೀಗೆ ಅನೇಕರು ಈ ಜಿಲ್ಲೆಯಲ್ಲಿ ಸಂಘಕಾರ್ಯ ನಿರ್ವಹಿಸಿದರು. ಸಂಘಚಾಲಕರಾಗಿದ್ದ ಕೆ.ಆರ್. ಶತ್ರುಘ್ನ ಈಗ ಬೆಂಗಳೂರಿನ್ಲಲಿ ನೆಲೆಸಿದ್ದಾರೆ. ಜಿಲ್ಲಾ ಕಾರ್ಯವಾಹರಾಗಿದ್ದ ಮಾಜಿಕೊಪ್ಪ ದಕ್ಷಿಣಾಮೂರ್ತಿ ಈಗ ಊರಿನಲ್ಲೇ ನೆಲೆಸಿದ್ದಾರೆ.

   

Leave a Reply