ಚಿಕ್ಕಮಗಳೂರು ರಾಷ್ಟ್ರೀಯ ಸ್ವಯಂಸೇವಕ ಸಂಘ

ಚಿಕ್ಕಮಂಗಳೂರು - 0 Comment
Issue Date : 06.02.2014

ಸಂಚಾರೀ ಪ್ರಾಥಮಿಕ ಶಿಕ್ಷಾವರ್ಗ
70 ರ ದಶಕದಲ್ಲಿ ಚಿಕ್ಕಮಗಳೂರಿನಲ್ಲಿ ಸಂಚಾರೀ ಪ್ರಾಥಮಿಕ ಶಿಕ್ಷಾವರ್ಗಕ್ಕೆ ಮುನ್ನುಡಿ ಬರೆಯಲಾಯಿತು. ಇಂತಹ ವರ್ಗದಲ್ಲಿ ಪ್ರತಿದಿನ ಬೆಳಿಗ್ಗೆ ಸಂಘಸ್ಥಾನದ ನಂತರ ಉಪಾಹಾರ ಮುಗಿಸಿ 6 ಶಿಕ್ಷಾರ್ಥಿಗಳ ವಿವಿಧ ತಂಡಗಳು, ಆ ತಂಡಗಳಿಗೆ ನಿಶ್ಚಿತ ಚರ್ಚಾ ವಿಷಯಗಳನ್ನು ಕೊಟ್ಟು ಮುಂದಿನ ನಿಗದಿತ ಗ್ರಾಮಕ್ಕೆ ನಡೆದುಕೊಂಡು ಹೋಗುವುದು. ಹೋಗುತ್ತಾ ಚರ್ಚಾ ವಿಷಯಗಳನ್ನು ಕುರಿತು ಚರ್ಚೆ ನಡೆಸಬೇಕು. ಆ ಗ್ರಾಮ ತಲುಪಿದ ನಂತರ ವರ್ಗದ ಮುಂದಿನ ಅವಧಿಗಳು ಹಾಗೂ ಸಂಜೆ ಬೌದ್ಧಿಕ ವರ್ಗ. ಈ ವರ್ಗದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶವಿತ್ತು. ರಾತ್ರಿ ಅದೇ ಗ್ರಾಮದಲ್ಲಿ ಉಳಿದು ಬೆಳಿಗ್ಗೆ ಸಂಘಸ್ಥಾನದ ಬಳಿಕ ಇನ್ನೊಂದು ಗ್ರಾಮಕ್ಕೆ ಸಂಚಾರ. ಹೀಗೆ 7 ದಿನಗಳ ಕಾಲ ಇಂತಹದೇ ನಿರಂತರ ಕಾರ್ಯಕ್ರಮ.

ಗುರುಪೀಠಗಳ ಸಹಯೋಗ
ಸಂಘ ಕಾರ್ಯದ ಬೆಳವಣಿಗೆಗೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಮಠ ಮಾನ್ಯಗಳ ಸಹಕಾರ ಹಾಗೂ ಕೊಡುಗೆ ಪ್ರಶಂಸಾರ್ಹ. ಶೃಂಗೇರಿಯ ಶಾರದಾ ಪೀಠ, ಬಾಳೆಹೊನ್ನೂರು ರಂಭಾಪುರಿ ಮಠ, ಹರಿಹರಪುರ ಮಠ, ಆದಿಚುಂಚನಗಿರಿ ಮಠಗಳು ಸಂಘ ಪರಿವಾರದ ವಿವಿಧ ಚಟುವಟಿಕೆಗಳಿಗೆ ತಮ್ಮ ಸಹಕಾರ, ಸಹಯೋಗ ನೀಡುತ್ತಾ ಬಂದಿದೆ. ಶೃಂಗೇರಿ ಮಠ ಹಿಂದೂ ಸೇವಾ ಪ್ರತಿಷ್ಠಾನದ ಸೇವಾವ್ರತಿಗಳ ನಿರ್ವಹಣೆಗೆ ಆರ್ಥಿಕ ಸಹಕಾರ ನೀಡಿದ್ದರೆ, ರಂಭಾಪುರಿ ಮಠ ಸಂಘದ ವಿವಿಧ ಶಿಬಿರಗಳಿಗೆ ಸ್ಥಳಾವಕಾಶ, ಮತ್ತಿತರ ಸೌಲಭ್ಯಗಳನ್ನು ಒದಗಿಸಿ ಸಹಕರಿಸಿದೆ. ಹರಿಹರಪುರ ಮಠವು ಪ್ರಬೋಧಿನಿ ಗುರುಕುಲ ನಿರ್ವಹಣೆಯಲ್ಲಿ ಯೋಗದಾನ ನೀಡಿದೆ. ಶೃಂಗೇರಿ ಮಠದ ಆವರಣದಲ್ಲಿ ಬಹಳ ಹಿಂದೆ ಸಂಘ ಶಿಕ್ಷಾವರ್ಗ ಕೂಡ ನಡೆದಿತ್ತು. ಆಗಿನ ಜಗದ್ಗುರುಗಳು ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ್ದರು. ಆದಿಚುಂಚನಗಿರಿಯ ಹಿಂದಿನ ಹಿರಿಯ ಶ್ರೀಗಳು ಸಂಘದ ವಿವಿಧ ಸಮಾರಂಭಗಳ ಸಾನ್ನಿಧ್ಯವಹಿಸಿ ಆಶೀರ್ವದಿಸಿದ್ದರು.

‘ಆತ್ಮಾಹುತಿ’ ಕೃತಿ ಅರಳಿದ್ದು ಇಲ್ಲಿ
ಸ್ವಾತಂತ್ರ್ಯವೀರ ಸಾವರ್ಕರ್ ಕುರಿತು ಕನ್ನಡದಲ್ಲಿ ಒಂದು ಶ್ರೇಷ್ಠ ಕೃತಿ ರಚಿಸಬೇಕೆಂಬುದು ರಾಷ್ಟ್ರೋತ್ಥಾನ ಪರಿಷತ್ತಿನ ನಿರ್ಧಾರವಾಗಿತ್ತು. ಅಂತಹ ಕೃತಿ ರಚನೆಗೆ ತಕ್ಷಣ ಪರಿಷತ್‌ಗೆ ಸಿಕ್ಕ ಲೇಖಕ ಕವಿ ಶಿವರಾಮು. ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ ಈ ಕೃತಿ ಬರೆಯಲು ಸಾಧ್ಯವಿಲ್ಲವೆನಿಸಿ, ಶಿವರಾಮು ಅವರನ್ನು ಕೊಪ್ಪ ತಾಲ್ಲೂಕಿನ ಮಾಚಿ ಕೊಪ್ಪ ದಕ್ಷಿಣಾಮೂರ್ತಿಯವರ ಮನೆಗೆ ಕರೆತರಲಾಯಿತು. ಆಗ ಮಳೆಗಾಲ. ದಿನವಿಡೀ ಧೋ ಎಂದು ಸುರಿಯುವ ಮಳೆ. ಅದರ ನಡುವೆಯೇ ಶಿವರಾಮು ಮಲೆನಾಡಿನ ಆ ಮನೆಯಲ್ಲಿ ಕುಳಿತು ಸಾವರ್ಕರ್ ಕೃತಿ ರಚಿಸಿದರು. ಕೆಲವು ದಿನ ಕೊಪ್ಪ ಪಿ.ಎ. ಶ್ರೀನಿವಾಸ ರಾವ್ ಅವರ ಮನೆಯಲ್ಲೂ ಕುಳಿತು ಬರೆದಿದ್ದಿದೆ. ಶಿವರಾಮು ಅವರನ್ನು ಮಾಚಿ ಕೊಪ್ಪಕ್ಕೆ ಕರೆತಂದವರು ಶಿವಮೊಗ್ಗ ಜಿಲ್ಲಾ ಪ್ರಚಾರಕ್ ಆಗಿದ್ದ ಜಡೆ ಚಂದ್ರಶೇಖರ್. ಹೀಗೆ, ಈಗ ಅತ್ಯಂತ ಜನಪ್ರಿಯ ಕೃತಿಯೆನಿಸಿರುವ ಆತ್ಮಾಹುತಿ ಅರಳಿದ್ದು ಮಲೆನಾಡಿನ ಮಡಿಲಲ್ಲಿ.

ಹಿರಿಯ ಸ್ವಯಂಸೇವಕರ ಅನುಭವಗಳು

 ಶ್ರೀ ರಾಮಸ್ವಾಮಿ

ಚಿಕ್ಕಮಗಳೂರಿನಲ್ಲಿ 1946ರಲ್ಲಿ ಸಂಘವು ಪ್ರವೇಶವಾಯ್ತು. ಗೋವಾ ಮುಕ್ತಿ ಚಳುವಳಿ ಪಾಲ್ಗೊಂಡು ಬಂದ ಶ್ರೀ ಹೆಚ್.ಬಿ. ಶಂಕರನಾರಾಯಣರು ಶಾಖಾರಂಭ ಮಾಡಿದರು. ಪ್ರಾರಂಭದಲ್ಲಿದ್ದ ಕೆಲವು ಸ್ವಯಂಸೇವಕರು ವಿ.ಆರ್. ಶೆಣೈ, ದೇವರಾಜ್, ಜಿ.ಎಸ್. ರಾಮಸ್ವಾಮಿ, ದೋಬಿ ಕಿಟ್ಟಿ, ಸುಂದರ್, ಸೀತಾರಮ್ ಮತ್ತಿತರರು. ಮುಂದಿನ ದಿನಗಳಲ್ಲಿ ಬೇಲೂರು ರಸ್ತೆಯ ಶಾಲೆ, ಬಸವನಳ್ಳಿ ಶಾಲಾ ಮೈದಾನಗಳಿಗೆ ವಿಸ್ತರಿಸಿತು.

ಕಾರ್ಯಾಲಯ

ಜಯಂತಿ ಕಾಫೀ ವರ್ಕ್ಸ್ ನ ಹಿಂಭಾಗದಲ್ಲಿ 50 ರೂ. ಬಾಡಿಗೆ ನೀಡಿ ಕಾರ್ಯಾಲಯ ಮಾಡಲಾಯಿತು. ನಂತರದ ದಿನಗಳಲ್ಲಿ ವೈಶೈ ಹಾಸ್ಟೆಲ್ ಕೊಠಡಿ, ರಾಘವೇಂದ್ರ ಸ್ವಾಮಿ ಮಠದ ಎದುರಿನ ಆನಂದರಾಯರ ಮನೆ, ಬೆಲ್ಟ್ ರಸ್ತೆಯ ವೆಂಕಟೇಶ ಕೃಪ ಕಟ್ಟಡಗಳಿಗೆ ಸ್ಥಳಾಂತರಗೊಂಡು ಇದೀಗ ಸಾಯಿ ಮಧುವನದಲ್ಲಿ ಸಮರ್ಪಣಾ ಹೆಸರಿನಲ್ಲಿ ಸಿದ್ಧಗೊಂಡು ನಿಂತಿದೆ.

ಘೋಷ್
1969ರಲ್ಲಿಯೇ ಘೋಷ್ ಮೊಳಗತೊಡಗಿತು. ರೂ. 500 ಗಳನ್ನು ಖರ್ಚು ಮಾಡಿ ವಾದ್ಯಗಳನ್ನು ತಂದೆವು. ಮೊದಲ ಘೋಷ್ ಪ್ರಮುಖ್ ಶ್ರೀ ಶ್ರೀಧರ್ ಜತೆಯಲ್ಲಿ ಪುರುಷೋತ್ತಮ, ಗೋಪಾಲಕೃಷ್ಣ, ರವೀಂದ್ರ ಕುಡ್ವ, ತ್ರಿವಿಕ್ರಮ್, ಗೋಪಾಲ್ ಇತ್ಯಾದಿ ವಾದಕರು ತಯಾರಾಗ ತೊಡಗಿದರು. ಶ್ರೀ ಸುಬ್ಬು ಶ್ರೀನಿವಾಸ ಅವರು ಅನೇಕ ದಿನಗಳು ನಮ್ಮಾಡನಿದ್ದು ಶಿಕ್ಷಣ ನೀಡಿದ್ದಾರೆ.

ಶ್ರೀ ಗುರೂಜಿಯವರ ಪ್ರವಾಸ : 1919ನೇ ಇಸವಿಯಲ್ಲಿ ಈಗಿನ ಸುಭಾಷ್‌ಚಂದ್ರ ಬೋಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜನೀಯ ಗುರೂಜಿಯವರು ಮಾರ್ಗದರ್ಶನ ಮಾಡಿದ್ದರು. ಅಧ್ಯಕ್ಷತೆಯನ್ನು ಗಣ್ಯರಾದ ಎಂ.ಆರ್. ಸಿದ್ದಗೌಡರು ವಹಿಸಿದ್ದರು. ಅಂದು ಸದಾನಂದ ಭಕ್ತರು ಹಾಡಿದ್ದ ‘ರಾಷ್ಟ್ರ ದೇವಗೆ ಪ್ರಾಣದೀವಿಗೆ ’ ಇಂದು ನನ್ನ ಕಿವಿಯಲ್ಲಿ ಮೊಳಗುತ್ತಿದೆ. ವಿಶೇಷ ಸಂಪರ್ಕ ಮಾಡಿ ವಿದ್ಯಾರ್ಥಿಗಳಷ್ಟೇ ಅಲ್ಲದೆ ಸಮಾಜದ ಎಲ್ಲ ವೃತ್ತಿಗಳವರನ್ನೂ ಸಂಪರ್ಕಿಸಿ ಪಾಲ್ಗೊಳ್ಳುವಂತೆ ಮಾಡಲಾಯಿತು. ವಿಠಲಾಚಾರ್‌ರ ನೇತೃತ್ವದಲ್ಲಿ ಭವ್ಯವಾದ ಕೋಟೆಯ ರೂಪದಲ್ಲಿ ನಿರ್ಮಿಸಿದ್ದ ವೇದಿಕೆ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

 

ಚಿಕ್ಕಮಗಳೂರಿನಲ್ಲಿ ಪ್ರಚಾರಕರಾಗಿದ್ದ ಸೀತರಾಮ ಕೆದಿಲಾಯ ಅವರ ನೆನಪಿನ ಬುತ್ತಿಯಿಂದ………..

  •  ಸಂಘಕಾರ್ಯದ ಬೆಳವಣಿಗೆಯಲ್ಲಿ ಇದೊಂದು ಪ್ರಯೋಗ ಭೂಮಿ. ಮಲೆನಾಡು, ಬಯಲುಸೀಮೆಯ ಸುಂದರ ಸಮನ್ವಯ ಜೀವನಾನುಭವ ಇಲ್ಲಿಯದು.
  •  ಮೂಡಿಗೆರೆ ತಾಲ್ಲೂಕಿನಲ್ಲಿ ಹೊ.ಭೈರಪ್ಪ ಪ್ರಚಾರಕರಾಗಿದ್ದಾಗ ಹತ್ತಾರು ಶಾಲೆಗಳನ್ನು ಸಂಪರ್ಕಿಸಿ, ಕತೆ-ಹಾಡುಗಳನ್ನು ಕಲಿಸಿ, ಆಟವಾಡಿಸಿ, ಸಾಹಿತ್ಯ ಮಾರಾಟಮಾಡಿ ಸುತ್ತಲಿನ ಹಳ್ಳಿಗಳಲ್ಲಿ ಶಾಖಾ ವಿಸ್ತಾರ ಮಾಡಿದ್ದರು. 
  • ಶೃಂಗೇರಿ ತಾಲ್ಲೂಕಿನ ಗ್ರಾಮಗಳಲ್ಲಿ ಆಯ್ದ ತರುಣರಿಗೆ ಸಂಚಾರೀ ಪ್ರಾಥಮಿಕ ಶಿಕ್ಷಾ ವರ್ಗದ ಮೂಲಕ ಪ್ರತ್ಯಕ್ಷ ಕ್ಷೇತ್ರ ಶಿಕ್ಷಣ ಕೊಡಲಾಗಿತ್ತು. ಹಳ್ಳಿಯ ಜನರಿಗೂ ಸಂಘದ ಆತ್ಮೀಯತೆ ಅರಿವಾಗಿ ಶಾಖೆ ನಡೆಸಲು ಆಹ್ವಾನ ಬರುತ್ತಿತ್ತು. 
  •  ಕಳಸದ ಸುಬ್ರಾಯ ಪ್ರಭುಗಳು ಜಿಲ್ಲಾ ಸಂಘಚಾಲಕರಾಗಿದ್ದರು. ಅವರು ಪಂಚಾಯಿತಿ ಅಧ್ಯಕ್ಷರೂ ಆಗಿದ್ದುದರಿಂದ ಸುತ್ತಲಿನ ಕಾಫೀ ಪ್ಲಾಂಟರ್‌ಗಳೂ, ಮಾಜಿ ಸಂಸದರೂ ಸೇರಿದಂತೆ ಅನೇಕ ಪ್ರಭಾವೀ ವ್ಯಕ್ತಿಗಳನ್ನು ಸಂಘಕಾರ್ಯಕ್ಕೆ ಜೋಡಿಸುವಲ್ಲಿ ಯಶಸ್ವಿಯಾಗಿದ್ದರು.
  • ಚಿಕ್ಕಮಗಳೂರಿನಲ್ಲಿ ಬ್ಯಾಂಕ್ ಅಧಿಕಾರಿಗಳಾಗಿದ್ದ ಸದಾಶಿವ ಭಟ್, ರವಿನಾಥ ಕುಡ್ವ, ವೆಂಕಟೇಶ ಸಾಗರ್, ಲಕ್ಷ್ಮಣ ಮಲ್ಯ, ಅಚ್ಯುತ ಪೈ ಮೊದಲಾದವರು ಬ್ಯಾಂಕ್ ಅವಧಿಗೆ ಮುನ್ನ, ಅನಂತರ ದಿನವಿಡೀ ಶಾಖಾ ಕಾರ್ಯಕ್ಕಾಗಿ ಓಡಾಡುತ್ತಿದ್ದರು. ಹೀಗಾಗಿ ಸಂಪರ್ಕದ ಜಾಲ ಬಲವಾಗಿದ್ದು ಪರಿಣಾಮಕಾರಿಯಾಗಿತ್ತು.
  • ಸಂಘದ ಮನೆಗಳು ಪ್ರಚಾರಕರು ಹಾಗೂ ಕಾರ್ಯಕರ್ತರನ್ನು ಸ್ವಂತ ಮಕ್ಕಳಂತೆ ಕಂಡು ಅವರಿಗೆ ಊಟೋಪಚಾರದ ಜೊತೆಗೆ ಧೈರ್ಯ ವಿಶ್ವಾಸ ತುಂಬುತ್ತಿದ್ದರು. * ಹರಿಹರಪುರದಲ್ಲಿ ಆರಂಭವಾದ ವೇದಶಿಕ್ಷಣ ಶಿಬಿರ ಸಾಮರಸ್ಯದ ದಿಕ್ಕಿನಲ್ಲಿ ಒಂದು ಬಲವಾದ ಹೆಜ್ಜೆ. ಈಗ ಪ್ರಬೋಧಿನಿಗಳು ಗುರುಕುಲವಾಗಿ ಪ್ರಾಚೀನ – ಆರ್ವಾಚೀನ ವಿದ್ಯೆಯ ಜೊತೆಗೆ ಸಾಮಾಜಿಕ ಕಳಕಳಿಯುಳ್ಳ ಜ್ಞಾನಯೋಧರನ್ನು ನಿರ್ಮಿಸುತ್ತಿದೆ. * ಅಂದು ವಿಭಾಗಪ್ರಚಾರಕರಾಗಿದ್ದ ನ.ಕೃಷ್ಣಪ್ಪ ನವರು ಮಲೆನಾಡಿನ ಸಂಸ್ಕೃತಿಯಾದ ಹರಟೆ, ಅನೌಪಚಾರಿಕತೆಗೆ ಒತ್ತುನೀಡಬೇಕೆಂದಿದ್ದರು. ತಡರಾತ್ರಿಯವರೆಗೂ ಒಟ್ಟಾಗಿ ಖುಷಿಯಾಗಿ ಮಾತುಕತೆಯಲ್ಲಿ ತೊಡಗಿದ್ದು ಬೆಳಿಗ್ಗೆ ಮತ್ತೆ ಎದ್ದು ಒಟ್ಟಾಗಿ ಓಡಾಡಿದ್ದರು ಪರಿಣಾಮವಾಗಿ ಸಂಬಂಧಗಳು ಬೆಸೆದವು. ಶಾಖೆಗಳೂ ನಳನಳಿಸುತ್ತಾ ಮೇಲೆದ್ದವು.

 

ವನವಾಸಿ ಕಲ್ಯಾಣದ ಪ್ರಕಲ್ಪ ಪ್ರಮುಖ್ ಶ್ರೀಪಾದ್ ಹೇಳುತ್ತಾರೆ……
ಈ ಜಿಲ್ಲೆಯ ಜಿಲ್ಲಾಪ್ರಚಾರಕನಾಗಿ ಸಾಕಷ್ಟು ಹೊಸ ಹೊಸ ಸಂಗತಿ ಕಲಿತೆ. ಗ್ರಾಮಾಂತರ ಪ್ರದೇಶದಲ್ಲಿ, ಪ್ಲಾಂಟರ್‌ಗಳ ಮನೆಯಲ್ಲಿ ಸಂಘ ಸಂಸ್ಕಾರದ ಪರಿಣಾಮವಾಗಿ ಎಲ್ಲರನ್ನೂ ತಮ್ಮವರಂತೆ ಕಾಣುವ ಸಾಮರಸ್ಯದ ಭಾವ ಅನುಭವಕ್ಕೆ ಬಂತು.
ಪೂರ್ಣಚಂದ್ರ ತೇಜಸ್ವಿಯಂತಹ ಸಂಘ ವಿರೋಧಿಯನ್ನೂ ತಮ್ಮ ನಡೆನುಡಿ, ಆತ್ಮೀಯತೆ ಮೂಲಕ ಸಂಘವಿಚಾರದ ಬಳಿಗೆ ತಂದ ಮೂಡಿಗೆರೆ ದಯಾನಂದ ನಾಯಕರು ತಮ್ಮ ಇಳಿವಯಸ್ಸಿನಲ್ಲೂ ಯುವಕರನ್ನು ನಾಚಿಸುವಂತೆ ಸಕ್ರಿಯರಾಗಿದ್ದರು. ಪ್ರಚಾರಕರಾಗಿದ್ದ ಜಡೆ ಚಂದ್ರಶೇಖರ್ ಅವರು ಮಲೆನಾಡಿನ ಮೂಲೆ ಮೂಲೆಯ ಹಳ್ಳಿಗಳಿಂದ ಆಯ್ದ ವಿದ್ಯಾರ್ಥಿಗಳೆಡೆ ಗಮನಹರಿಸಿ, ಅವರನ್ನು ಕಾರ್ಯಕರ್ತರನ್ನಾಗಿ ರೂಪಿಸಿದರು. ಮಾಚಿ ಕೊಪ್ಪದ ದಕ್ಷಿಣಾಮೂರ್ತಿಯವರ ಹಾಸ್ಯ, ಅನೌಪಚಾರಿಕತೆ, ಮನೆಯನ್ನು ಮರೆತು ಸಂಘಕಾರ್ಯದಲ್ಲಿ ತೊಡಗುವಿಕೆ-ಎಲ್ಲರಿಗೂ ಮಾದರಿಯಾಗಿತ್ತು.

 

ಮೂಡಿಗೆರೆಯಲ್ಲಿ ಮೂರು ವರ್ಷಗಳ ಮೆಲುಕು

ಹೊ.ಭೈರಪ್ಪ

ಅದು 1973ರ ಸಮಯ. ನಾನು ಮೊದಲು ಸಂಘದ ಪ್ರಚಾರಕನಾಗಿ ಕಾಲಿಟ್ಟಿದ್ದು ಮೂಡಿಗೆರೆ ತಾಲ್ಲೂಕಿಗೆ. ದಟ್ಟ ಮಲೆನಾಡಿನ, ಹಸಿರು ಹೊದ್ದ ಕಾನನ ಪರ್ವತಗಳ ಪ್ರದೇಶದಲ್ಲಿ ಸಂಘ ಕಾರ್ಯವನ್ನು ಕಟ್ಟಿ ಬೆಳೆಸಬೇಕಾಗಿತ್ತು. ಆದರೆ ಸಂಘದ ಪರಿಚಯ ಗ್ರಾಮಾಂತರ ಪ್ರದೇಶಗಳಲ್ಲಿ ಅಷ್ಟಾಗಿ ಯಾರಿಗೂ ಇರಲಿಲ್ಲ. ಹೀಗಾಗಿ ಅವರಿಗೆ ಹಾಡು, ಆಟ, ದೇಶಭಕ್ತರ ಕಥೆ ಹೇಳುತ್ತಾ ನಿಧಾನವಾಗಿ ಶಾಖೆಗೆ ಕರೆತರಬೇಕಾಗಿತ್ತು. ಆಗ ಸಂಘಚಾಲಕರಾಗಿದ್ದ ದಯಾನಂದ ನಾಯಕ್, ತಾಲ್ಲೂಕು ಕಾರ್ಯವಾಹರಾಗಿದ್ದ ನರಸಿಂಹಮೂರ್ತಿ, ಜಿಲ್ಲಾ ಸಂಘಚಾಲಕರಾಗಿದ್ದ ಸುಬ್ರಾಯ ಪ್ರಭುಗಳು ಮೊದಲಾದವರು ನಮಗೆಲ್ಲ ಸಂಘ ಕಾರ್ಯಕ್ಕೆ ಪ್ರೇರಣೆಯಾಗಿದ್ದರು. ಹೊಸ ಊರುಗಳಲ್ಲಿ ಶಾಖೆ ಮಾಡಲೆಂದು ತೆರಳಿದಾಗ ಅಲ್ಲಿರುವ ಹದಿಹರೆಯದ ಹುಡುಗರು ಹೆದರಿ ಮರ ಏರಿ ಕುಳಿತು ಬಿಡುತ್ತಿದ್ದರು. ಸಂಘವೆಂದರೆ ಅವರಿಗೆಲ್ಲ ಅದೇನೋ ಭಯ. ಅವರನ್ನು ಪ್ರೀತಿಯಿಂದ ಮಾತನಾಡಿಸಿ ಮರದಿಂದ ಇಳಿಸಿ ಅನಂತರ ಆಟ ಆಡಿಸಿ, ಹಾಡು ಹೇಳಿಕೊಟ್ಟು – ಹೀಗೆ ಅವರನ್ನು ಅನುನಯಿಸಿ ನಿಧಾನವಾಗಿ ಶಾಖೆ ಮಾಡಬೇಕಾಯಿತು. ಅನೇಕ ಕಡೆ ದಕ್ಷತಾ ವರ್ಗಗಳನ್ನು ನಡೆಸಿ ಶಾಖೆಗೆ ಭದ್ರ ಅಡಿಪಾಯ ಹಾಕಲಾಯಿತು. ಗೋಣಿಬೀಡು, ಅಮ್ಮಿನಕುಡಿಗೆ, ಜಾವಳಿ, ಬಾಳೆಹೊಳೆ, ಮಾಕೋನಹಳ್ಳಿ, ಕೊಟ್ಟಿಗೆಹಾರ, ಬಣಕಲ್ಲು ಮೊದಲಾದೆಡೆ ಕ್ರಮೇಣ ಶಾಖೆಗಳು ಆರಂಭವಾಗಿ ಯುವಕರು ಅದರಲ್ಲಿ ಪಾಲ್ಗೊಂಡರು.

ಒಂದೆರಡು ಅನುಭವಗಳು ಈಗಲೂ ನೆನಪಿನಂಗಳದಲ್ಲಿ ಬಂದು ಕುಣಿಯುತ್ತವೆ. ಮುನ್ನೂರುಪಾಲು ಎಂಬ ಊರಿನಲ್ಲೊಂದು ದಕ್ಷತಾ ವರ್ಗ. ಅದು ನಡೆದಿದ್ದು ಅಲ್ಲಿನ ಒಬ್ಬ ಸಂಪ್ರದಾಯಸ್ಥರ ದೊಡ್ಡ ಮನೆಯಲ್ಲಿ. ಅಲ್ಲಿ ಎಲ್ಲರೂ ಊಟಕ್ಕೆ ಕುಳಿತಾಗ ಧರಿಸಿದ್ದ ಅಂಗಿ ತೆಗೆಯಬೇಕೆಂದರು. ಎಲ್ಲರೂ ತೆಗೆದರು. ನಾನು ಮಾತ್ರ ತೆಗೆಯಲಿಲ್ಲ. ಆ ಮನೆಯ ಅಜ್ಜಿ ನನ್ನ ಬಳಿ ಬಂದು ನೀನೂ ಅಂಗಿ ತೆಗೆಯಬೇಕು ಎಂದರು. ಅದರಂತೆ ನಾನು ಅಂಗಿ ತೆಗೆದೆ. ನಿನ್ನ ಜನಿವಾರವೆಲ್ಲಿ? ಆ ಅಜ್ಜಿಯ ಪ್ರಶ್ನೆ. ನಾನು ಜನಿವಾರ ಹಾಕಿಲ್ಲ ಎಂದೆ. ಹಾಗಿದ್ದರೆ ನೀನು ಇಲ್ಲಿ ಊಟ ಮಾಡುವಂತಿಲ್ಲ ಎಂದರು. ನಾನು ತಣ್ಣಗೆ ಮನೆಯ ಹೊರಗೆ ಬಂದು ಕುಳಿತು ಅಲ್ಲೇ ಊಟ ಮಾಡಿದೆ.

ಮರುದಿನ ಬೆಳಿಗ್ಗೆ ಎಲ್ಲರೂ ಪ್ರಾತಃಸ್ಮರಣೆ ಶ್ಲೋಕಗಳನ್ನು ಒಟ್ಟಾಗಿ ಹೇಳಿದ್ದನ್ನು ಆ ಅಜ್ಜಿ ಗಮನಿಸಿದ್ದರು. ಅನಂತರ ಬೆಳಗಿನ ತಿಂಡಿಗೆ ಎಲ್ಲರೂ ಒಳಗೆ ಕುಳಿತಾಗ ನಾನು ಮಾತ್ರ ಹೊರಗೆ ಕುಳಿತಿದ್ದೆ. ಆಗ ಆ ಅಜ್ಜಿ ನನ್ನ ಬಳಿ ಬಂದು, ಇಲ್ಲೇಕೆ ಕುಳಿತಿದ್ದೀಯಾ? ಎಲ್ಲರ ಜೊತೆಯಲ್ಲಿ ಒಳಗೇ ಕುಳಿತುಕೋ ಎಂದರು. ಇಲ್ಲ, ಅಲ್ಲಿ ಕುಳಿತುಕೊಳ್ಳಬಾರದೆಂದು ನಿನ್ನೆ ನೀವೇ ಹೇಳಿದ್ದಿರಲ್ಲ ಎಂದೆ. ಹಾಗೇನೂ ಇಲ್ಲ. ನೀವೆಲ್ಲ ಬೆಳಿಗ್ಗೆ ಶ್ಲೋಕ ಹೇಳಿದ್ದನ್ನು ಕೇಳಿಸಿಕೊಂಡೆ. ಶ್ಲೋಕಗಳನ್ನು ಸ್ಪಷ್ಟವಾಗಿ ಹೇಳಬೇಕಾದರೆ ನೀವೆಲ್ಲ ಉತ್ತಮ ಕುಲದವರೇ ಇರಬೇಕು ಎಂದುಕೊಂಡೆ ಎಂದರು ಅಜ್ಜಿ. ಅದಾದ ಮೇಲೆ ಆ ಮನೆಯಲ್ಲಿ ಎಲ್ಲರಿಗೂ ಒಟ್ಟಿಗೇ ಊಟ. ಸಂಘ ಆ ಮನೆಯಲ್ಲಿ ಶ್ಲೋಕ ಹೇಳುವುದರ ಮೂಲಕ ಉತ್ತಮ ಪರಿವರ್ತನೆ ತಂದಿತ್ತು.

ಇನ್ನೊಂದು ಘಟನೆ. ಒಮ್ಮೆ ಕೊಟ್ಟಿಗೆಹಾರ ಸಮೀಪದ ಪರ್ವತ ಹತ್ತುವ ಕಾರ್ಯಕ್ರಮ. ಎಲ್ಲರೂ ಪರ್ವತ ಹತ್ತಿ, ಅಲ್ಲೆಲ್ಲ ಓಡಾಡಿ ಇನ್ನೇನು ಕೆಳಗಿಳಿಯಬೇಕೆನ್ನುವಷ್ಟರಲ್ಲಿ ಪರ್ವತದ ಮೂಲೆಯಲ್ಲಿ ಏನೋ ಪ್ರಕಾಶಮಾನವಾಗಿ ಹೊಳೆಯುತ್ತಿದ್ದುದು ಕಂಡುಬಂತು. ಎಲ್ಲರಿಗೂ ಕುತೂಹಲ. ಸಮೀಪ ಹೋಗಿ ನೋಡಿದರೆ ಅಲ್ಲಿ ಪಂಚಲೋಹದ ಒಂದೆರಡು ವಿಗ್ರಹಗಳು ಥಳಥಳಿಸುತ್ತ ಹೊಳೆಯುತ್ತಿವೆ. ನಮಗೆಲ್ಲ ಆಶ್ಚರ್ಯ. ಇದನ್ನೇನು ಮಾಡುವುದು? ಊರಿಗೆ ಕೊಂಡು ಹೋಗುವುದೇ ಅಥವಾ ಇಲ್ಲೇ ಬಿಡುವುದೇ? ಹಲವು ಪ್ರಶ್ನೆಗಳು. ಕೊನೆಗೆ ಊರಿನ ಹಿರಿಯರ ಬಳಿ ವಿಚಾರಿಸಿ ಇದನ್ನು ತೆಗೆದುಕೊಂಡು ಹೋಗುವುದೆಂದು ನಿರ್ಧರಿಸಿ ಕೆಳಗಿಳಿದು ಬಂದೆವು. ಊರಿನ ಹಿರಿಯರು ಆ ವಿಗ್ರಹಗಳಿಗೆ ಸೂಕ್ತ ದೇಗುಲ ನಿರ್ಮಿಸುವುದಾಗಿ ಭರವಸೆ ನೀಡಿದ ಬಳಿಕ ಮತ್ತೆ ಪರ್ವತ ಹತ್ತಿ ಆ ವಿಗ್ರಹಗಳನ್ನು ಕೆಳಗೆ ತಂದೆವು. ಆಮೇಲೆ ವಿಗ್ರಹಗಳಿಗೆ ಪೂಜೆ, ಪುನಸ್ಕಾರ, ಅನಂತರ ಒಂದು ದೇವಸ್ಥಾನವೂ ನಿರ್ಮಾಣವಾಯಿತು. ಆಮೇಲೆ ಆ ದೇವಸ್ಥಾನ ಶಾಖೆಯೂ ಸೇರಿದಂತೆ ಎಲ್ಲ ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಯಿತು. ಊರಿನ ಜನರೂ ಆಸಕ್ತಿಯಿಂದ ಸಂಘದತ್ತ ಆಕರ್ಷಿತರಾದರು. ಸಂಘ ಕಾರ್ಯ ವಿಸ್ತಾರಕ್ಕೆ ಹೀಗೆ ಪಂಚಲೋಹದ ವಿಗ್ರಹಗಳೂ ನೆರವಾಗಿದ್ದು ಕಾಕತಾಳೀಯ!

   

Leave a Reply