ಚಿನ್ನದ ಹಬ್ಬಕ್ಕೆ ಸೈ ಗೋವಿಂದ ಪೈ

ಕರ್ನಾಟಕ - 0 Comment
Issue Date : 06.10.2014

ಭಾರತವನುಳಿಸುತ್ತಾ ನನಗೆ ಜೀವತೆತ್ತ
ಭಾರತವೆ ನನ್ನುಸಿರು, ನನ್ನೊಗೆದ ಬಸಿರು
ಭಾರತವೆ ಧನಧಾನ್ಯ, ಭಾರತವೆ ಮನೆಮಾನ್ಯ
ಭಾರತವೆ ದೇವರೆನ್ನ ಸಂಸ್ಕಾರವು
ಭಾರತಾಂಬೆಯ ಶಕ್ತಿ ನನಗಾತ್ಮಶಕ್ತಿ.
– ಗೋವಿಂದ ಪೈ

ಹೀಗೆಂದು ಭಾರತಮಾತೆಯನ್ನು ಪ್ರಶಂಸಿಸಿರುವವರು ಮಂಜೇಶ್ವರ ಗೋವಿಂದ ಪೈ. ಇವರು ಕನ್ನಡ ಸಾಹಿತ್ಯದ ಮಹಾ ಮೇಧಾವಿ, ಅವರ ಸಾಹಿತ್ಯ ಸೃಷ್ಟಿ ಅಗಾಧವಾದುದು. ಕವಿತೆ, ನಾಟಕ, ಖಂಡಕಾವ್ಯ, ಪ್ರಬಂಧ ಮೊದಲಾದ ಸಾಹಿತ್ಯ ಪ್ರಾಕಾರಗಳಲ್ಲಿ ಅವರು ಸಿದ್ಧಹಸ್ತರು.

ಅವರ ಜನನ 1884. 1964ರಲ್ಲಿ ಮರಣ. ತಂದೆ ತಿಮ್ಮಪ್ಪಯ್ಯ, ತಾಯಿ – ದೇವಕಿಯಮ್ಮ. ಅವರನ್ನು 50ವರ್ಷಗಳ ನಂತರ ನೆನಪಿಸಿಕೊಳ್ಳುವ ಲೇಖನವಿದು.
ದೇಶ ಮತ್ತು ಧರ್ಮದ ರಕ್ಷಣೆ ಪ್ರತಿಯೊಬ್ಬ ಮಾನವನ ಕರ್ತವ್ಯ. ಪೈರವರಲ್ಲಿ ಅಖಿಲ ಭಾರತ ಭಾವನೆಯು ಅಖಂಡವಾಗಿದ್ದಿತು. ಭರತ ಖಂಡವು ಅನೇಕ ವರ್ಷಗಳವರೆಗೆ ದಾಸ್ಯದಲ್ಲಿದ್ದಿತಷ್ಟೆ. ಈ ದಾರುಣ ಜೀವನವನ್ನು ಸ್ಮರಿಸಿದಾಗ ಗೋವಿಂದ ಪೈ ಅವರ ಅಂತರಂಗ ತಳಮಳಗೊಳ್ಳುತ್ತಿದ್ದಿತು. ದಾಸ್ಯದ ಬದುಕು ಎಷ್ಟು ಅಸಹನೀಯವಾದುದು? ಅದಕ್ಕಾಗಿ ಮೇಲಿನ ಪದ್ಯ ಬರೆದರು.
ಕವಿ ರವೀಂದ್ರರ ‘ದೇವಿ ಭುವನ ಮನಮೋಹಿನಿ’ ಕವಿತೆಯನ್ನು ಭಾರತಲಕ್ಷ್ಮಿ ಹೆಸರಿನಿಂದ ಅನುವಾದ ಮಾಡಿದ್ದರು. ಅದೇ ಭಾರತಿಯಿಂದ ಪ್ರೇರಿತರಾಗಿ ಅವರು ಅನುವಾದಿಸಿದ ಕವನವೆಂದರೆ ಮಹಮ್ಮದ ಇಕ್ಬಾಲ್ ವಿರಚಿತ ಹಿಂದೂಸ್ಥಾನ್ ಹಮಾರ ಅರ್ಥಾತ್ ‘‘ ನಮ್ಮವಳೀ ಭಾರತ ಜನನಿ’’.

ಕವಿಗೆ ಸ್ಫೂರ್ತಿ ನೀಡುವ ನಾನಾ ಪ್ರೆರಕ ಶಕ್ತಿಗಳಲ್ಲಿ ತಾನು ಬದುಕಿ ಬಾಳುವ ನಾಡಿನ ಒಲವು ಸಾಕಷ್ಟು ಗಮನಾರ್ಹವಾದದ್ದು. ತಾವು ವಾಸ ಮಾಡುತ್ತಿದ್ದ ತಮ್ಮ ಪೂರ್ವಿಕರ ನಾಡಾದ ತುಳು ದೇಶವನ್ನು ಕುರಿತು ‘‘ ಜಯ ಜಯ ತೌಳವ ತಾಯೇ, ಮಣಿವೆ, ತಂದೆ ತಾಯಂದರ ತಾಯೆ ತಾಯೆ ಭಾರ್ಗವನಂದು ಬಿಸುಡೆ ಕೊಡಲಿಯ ನೀ ಕಡಲೊಡೆದಡೆಯಂ ಮೂಡಿ ಭಾರತ ಮಾತೆ ತೊಡೆಯೊಳೊಡಗೂಡಿಸೆ’’
ಹೀಗೆ ಪುರಾಣ ಪ್ರಸಿದ್ಧವಾದ ಸ್ಥಳ ಮಹಾತ್ಮೆಯಿಂದ ತುಳುದೇಶವನ್ನು ವರ್ಣಿಸುತ್ತಾರೆ.
ಕನ್ನಡ ನಾಡಿನ ಭಾಷೆಯಿಂದ ಕನ್ನಡಾಂಬೆಯನ್ನು ಕುರಿತು ಬರೆದಂತಹ ಹಾಡು, ಕನ್ನಡ ಮಾತೆಗೆ ಧನ್ಯತೆಯನ್ನು ಸೂಚಿಸಿ ಬರೆದಂತಹ ಹಾಡು.
ತಾಯೆ ಬಾರ, ಮೊಗವತೋರ, ಕನ್ನಡಿಗರ ಮಾತೆಯೆ
ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ
ನಮ್ಮ ತಪ್ಪನೆನಿತೋ ತಾಳ್ವೆ ನೀನೇ ಕಣಾ ನಮ್ಮ ಬಾಳ್ವೆ
ನಿನ್ನ ಮರೆಯಲಮ್ಮೆವು, ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮೆವು

‘ಯಶೋದೆಯ ಜೋಗುಳ’ ಎಂಬ ಕವಿತೆಯಲ್ಲಿ ಕಂಡು ಬರುವ ಶ್ರೀ ಕೃಷ್ಣ ಪರಮಾತ್ಮನ ಲೀಲಾ ಪ್ರಸಂಗಗಳು ಅದ್ಭುತವವೆನಿಸಿ ಚಿತ್ತಾಕರ್ಷಕವಾಗಿವೆ. ಯಶೋದೆ ಕೃಷ್ಣನಿಗೆ ಸಾಕುತಾಯಿಯಾಗಿದ್ದರೂ ಮಾತೃವಾತ್ಸಲ್ಯದ ಧಾರೆಯನ್ನೇ ಎರೆದಿದ್ದಾಳೆ. ಅವನ ಬಾಲಲೀಲೆಗೆ ಮನಸೋತಿದ್ದಾಳೆ. ಈ ಕವನಗಳಲ್ಲಿ ಹಿಂದಿ ಭಕ್ತ ಕವಿ ಸೂರದಾಸನ ಪ್ರಭಾವ, ಛಾಯೆಯನ್ನು ಕಾಣುತ್ತೇವೆ, ‘ಹಾಡಿ ತೂಗುವೆ ಕಂದ ಜೋಗುಳಿಸಿ ನಿನ್ನ’ ಎಂದು ಆರಂಭವಾಗುವ ಈ ಕವಿತೆಯಲ್ಲಿ ಶ್ರೀ ಕೃಷ್ಣನ ಲೀಲೆಯನ್ನು ವಿವರಿಸಿದ್ದಾರೆ.

ಗೋವಿಂದ ಪೈರವರ ಶೈಲಿಯ ಬಿಗಿ, ಬೀಸು, ಹಾಸು, ಸರ್ವರಿಗೂ ವಿದಿತವಾಗಿದೆ. ಅವರು ಇತರ ಕವಿಗಳಿಗಿಂತ ಭಿನ್ನವಾಗಿ ನಿಲ್ಲುವುದು ಇಲ್ಲಿಯೆ. ಆದರೆ ಮೇಲುನೋಟಕ್ಕೆ ಕಾಣುವ ಈ ಕಾಠಿಣ್ಯವನ್ನು ಭೇದಿಸಿ ಮುಂದೆ ನಡೆದರೆ ಕವಿಯ ವಾಕ್ಪರಿಣಿತಿಯ ಆಳ, ವ್ಯಾಪ್ತಿಗಳ ಅರಿವಾಗುತ್ತದೆ.

ಬುದ್ಧನ ಕಾಲದ ಮಾತಂಗಿ ಎಂಬ ಕವನ ಅಸ್ಪೃಶ್ಯ ಬಾಲೆಯೊಬ್ಬಳ ಜೀವನೋದ್ಧಾರವನ್ನು ಕುರಿತುದಾಗಿದೆ. ಬುದ್ಧನ ಶಿಷ್ಯನಾದ ಆನಂದನು ಬಾಯಾರಿದಾಗ ಹೀನಕುಲದ ಮಾತಂಗಿಯೊಬ್ಬಳು ಅವನಿಗೆ ನೀರೆರೆದು ಅವನ ಬಾಯಾರಿಕೆಯನ್ನು ತಣಿಸಿದಳು. ಆನಂದನು ಸುಂದರಾಂಗ. ಅವನನ್ನು ಮೋಹಿಸಿ ಪರವಶಳಾದಳು. ಅವನು ಗಮಿಸಿದ ದಿಕ್ಕನ್ನೇ ಕುರಿತು ಹೊರಟು ಆನಂದನ ಗುರುವಾದ ಬುದ್ಧನನ್ನೇ ಭೇಟಿಯಾಗಿ ತನ್ನ ಮನದಾಶೆಯನ್ನು ತೋಡಿಕೊಂಡಳು. ಆಗ ಬುದ್ಧನು ಮಾತಂಗಿಗೆ ಬುದ್ಧಿ ಮಾತನ್ನು ಹೇಳಿದನು.
ತೊರೆಯದಿರು ಧರ್ಮವಂ, ಮರೆಯದಿರು ನೀತಿಯಾ,
ಇಂದ್ರಿಯವಗೆಲ್ಲು, ನೀನತಂದ್ರತೆಯ ತಾಳು,
ಮಗಳೆ ನೀನೆಲ್ಲರಿಗೆ ಸಲ್ಲಿಸಾ ಪ್ರೀತಿಯಂ
ಗದ್ದುಗೆಯ ರಾಣಿಗಿದೋ ಮೇಲೆನಿಸಿ ಬಾಳು॥

ಮತ್ತೊಂದು ಕವಿತೆಯಾದ ‘ವಾಸವದತ್ತೆ’ಯಲ್ಲಿ ವೇಶ್ಯೋದ್ಧಾರದ ಗುರಿಯಿದೆ. ವಾಸವದತ್ತೆಯೆಂಬ ಆಸ್ಥಾನ ನರ್ತಕಿಯು ಬುದ್ಧನ ಪರಮ ಶಿಷ್ಯನಾದ ಉಪಗುಪ್ತನೆಂಬ ಭಿಕ್ಷುವಿಗೆ ಮನ ಸೋಲುವಳು. ಅವನನ್ನು ಸೇವಿಸುವುದಕ್ಕಾಗಿ ಪರಿಪರಿಯಿಂದ ಬೇಡಿಕೊಂಡರೂ ಉಪಗುಪ್ತನು ಒಪ್ಪದೆ ‘‘ಸಕಾಲದಲ್ಲಿ ಬರುವೆನು’’ ಎಂದು ಹೇಳಿ ಹೊರಟು ಹೋಗುವನು. ಕಾಲಚಕ್ರ ಮಾಗಿತು, ಇದಾದ ಎಷ್ಟೋ ವರ್ಷಗಳಾದ ನಂತರ ವಾಸವದತ್ತೆಗೆ ಪ್ರಾಯವಾಗಿ, ರೂಪ ಅಡಗಿ, ಕೊಲೆಯ ಅಪರಾಧಕ್ಕೆ ಸಿಕ್ಕಿ ನಲುಗಿ, ಮಾರಿ ಬೇನೆಗೆ ತುತ್ತಾಗಿ ಮೈಯೆಲ್ಲಾ ವ್ರಣವಾಗಿ ಕುರುಡಿಯಾಗಿ ತತ್ತರಿಸುತ್ತಿದ್ದ ಕಾಲಕ್ಕೆ ಅದೇ ಉಪಗುಪ್ತನು ವಿಷಯವನ್ನು ತಿಳಿದು ಬಂದು ಚಂದನವನ್ನು ಅವಳ ಹುಣ್ಣುಗಳಿಗೆ ಲೇಪಿಸಿ ಔಷಧಿಗಳಿಂದ ಉಪಚರಿಸಿದನು. ಅವಳಿಗೆ ಬಾಧೆಯು ಶಮನವಾಗಿ ಎಷ್ಟೋ ಹಾಯೆನಿಸಿತು. ಉಪಕೃತಳಾದ ಅವಳು ನೀನಾರೆಂದು ಉಪಗುಪ್ತವನ್ನು ಕೇಳಲು ‘‘ತಂಗೀ ನಾನು ಉಪಗುಪ್ತ, ಸಕಾಲದಲ್ಲಿ ಬರುತ್ತೇನೆಂದು ನಿನಗೆ ವಚನವಿತ್ತಿರಲಿಲ್ಲವೇ? ಮರೆತೆಯಾ?’’ ಎಂದು ನೆನಪಿಸಿದನು. ಆಗ ಅವಳ ಕುರುಡುಗಣ್ಣುಗಳಿಂದಲೂ ಎರಡು ಹನಿ ನೀರಿಳಿಯಿತು.

ಕವಿಯ ಅನುಕಂಪ ಅಪಾರವಾದುದು. ‘‘ಅಂದಿನಿಂದಾಕೆ ನಕ್ಕಿಲ್ಲ ಅತ್ತಿಲ್ಲ, ಎಂಬ ಕವನದಲ್ಲಿ ಗಂಡ ಮತ್ತು ಮೂರು ಮಕ್ಕಳನ್ನು ಒಂದೇ ತಿಂಗಳಲ್ಲಿ ಒಟ್ಟಿಗೆ ಕಳೆದುಕೊಂಡ ಸ್ತ್ರೀಯ ದಾರುಣ ಚಿತ್ರವಿದೆ.
‘ತೆಂಕಾಫ್ರಿಕಾದ ಹಳ್ಳಿ’ ಎಂಬ ಪದ್ಯದಲ್ಲಿ ಒಂದು ಹಳ್ಳಿಯಲ್ಲಿ ಓರ್ವ ಮುದುಕಿ ಮರಣೋನ್ಮಖಿಯಾದಾಗ ಪಾದ್ರಿಯೊಬ್ಬನು ಅವಳನ್ನು ಸಂತೈಸಲು ಅಲ್ಲಿಗೆ ಬರುತ್ತಾನೆ. ಆಗ ಆಕೆ ಸಂಭ್ರಮದಿಂದ ಆ ಪಾದ್ರಿಯನ್ನು ಕಂಡು ಆಶ್ಚರ್ಯ ಚಕಿತಳಾಗಿ ನನ್ನ ಮರಣ ಕಾಲದಲ್ಲಿ ನಿನ್ನ ಕಳುಹಿಸಿದವರಾರು? ಎನ್ನಲು ಅಲ್ಲಿಯೇ ತೂಗು ಹಾಕಿದ್ದ ಚಿತ್ರವನ್ನು ತೋರಿಸಿ ‘‘ಇದರಲ್ಲಿ ಕಾಣುವ ಈ ಯುವಕನು ಕಳುಹಿಸಿದನು’’ ಎನ್ನಲು ಆ ಮುದುಕಿ ‘‘ಆ ಯುವಕ ನನ್ನ ಮಗ, ಸತ್ತು ಹೋಗಿ ಆಗಲೇ ವರ್ಷವಾಯಿತಲ್ಲಾ ’’ಎಂದಳು ದಿಗ್ಭ್ರಮೆಯಿಂದ. ಪಾದ್ರಿಯು ಹೇಳಿದನು ‘‘ಇದೇ ದೇವರ ಕೃಪೆ ಎಂಬುದು’’ ಎಂದನು.

ಒಬ್ಬಳು ಗವಳಿಗಿತ್ತಿ ಹಾಲಿನ ಕೊಡವನ್ನೆತ್ತಿಕೊಂಡು ದಡಕೆ ಬಂದಳು. ಅವಳು ಹಾಲಿಗೆ ತುಂಬಾ ನೀರನ್ನು ಬೆರೆಸಿ ಮಾರುತ್ತಿದ್ದಳು. ದೋಣಿಯಲ್ಲಿ ಕುಳಿತು ಹೊಳೆ ದಾಟುತ್ತಿದ್ದಾಗ ಅವಳ ಕಿವಿಯ ಒಂದು ವಾಲೆ ಕಳಚಿ ನೀರಲ್ಲಿ ಬಿತ್ತು. ಅದಕ್ಕೆ ಆಕೆ ನಾನಾ ವಿಧದಲ್ಲಿ ಮರುಗುತ್ತಿದ್ದಾಗ ಸಹ ಪ್ರಯಾಣಿಕನೊಬ್ಬನು ಹೇಳಿದ – ನೀರಿಗಾಯ್ತು ನೀರುಪಾಲು, ಉಳಿದುದೆಲ್ಲಾ ಹಾಲು ಪಾಲು. ಈ ಸತ್ಯವನ್ನು ನಾವು ‘ಪಾಲುಮಾರಿಕೆ’ ಎಂಬ ಕವನದಲ್ಲಿ ಕಾಣುತ್ತೇವೆ.
ಗೋವಿಂದ ಪೈಗಳು ತಮ್ಮ ಪ್ರವಾಸದಲ್ಲಿ ಬೇಲೂರನ್ನು ನೋಡಿದ್ದರು. ಶಿಲ್ಪಕಲಾ ಚಾತುರ್ಯಕ್ಕೆ ಮಾರು ಹೋಗಿದ್ದರು. ಅಲ್ಲಿ ಕಲ್ಲೊಳಗೆ ಕಡೆಯಲಾದ ಹೆಂಗಸೊಬ್ಬಳ ಸೀರೆಯನ್ನು ಎಳೆಯುವ ಮಂಗ ಹಾಗೂ ಇನ್ನೊಂದು ಕಡೆ ಚೇಳು ಕಂಡರು. ‘‘ಮಂಗ ಇಂತೇಕೋ ನೀನವಳ ಸೀರೆಯ ಸುಗಿವಿ? ಎಂದು ಕೇಳಿದರು. ಅಂದಿನಿಂದ ಇಂದಿನವರೆಗೆ ಈ ಚೇಳಿನ, ಯುವತಿಯ ಒಂದು ದಿನ ಹೆಚ್ಚಿಲ್ಲ’’ ಎಂದು ವರ್ಣನೆ ಮಾಡಿರುವರು. ಈ ರೀತಿಯ ಸರಸವಾದ ಭಾವ ಲಹರಿಯನ್ನೊಳಗೊಂಡ ಇಂತಹ ಪದ್ಯಗಳನ್ನು ಪೈರವರ ಕವನ ಸಂಗ್ರಹದಲ್ಲಿ ಕಾಣಬಹುದು.
ಗೋವಿಂದ ಪೈರವರ ಪತ್ನಿಯ ಮರಣವು ಅವರನ್ನು ಅಧೀರರನ್ನಾಗಿಸಿತು. ‘‘ನಾನು ಮನ ನೊಂದಾಗ ಆ ನೋವನ್ನು ಮರೆಯಲೆಂದೇ ಕವಿತೆ ಬರೆಯುತ್ತೇನೆ’’ಎಂದು ಪೈಯವರೇ ಹೇಳಿದ್ದರು. ಅವರ ಪತ್ನಿ ಜೀವಂತವಿರುವಾಗ ‘ಸಾಕು’ ಎಂಬ ನೆಮ್ಮದಿಯ ನೆಲೆಯನ್ನು ಸೂಸುವ ಪದ್ಯವನ್ನು ಬರೆದಿದ್ದಾರೆ. ಅದು ಹೀಗಿದೆ.
ಬಾರ ಬಾಳ್ವೆಯ ದೇವಿ
ನನ್ನುಪಾಸನೆ ಗೋವಿ
ಪ್ರೇಮದ ಮನೋನಯನಮಂ ತೆರೆದೆ ಸಾಕು
ಎಣೆಯ ರೆಕ್ಕೆಗಳಂತೆ ಹರೆಯ ಕೊಂಬುಗಳಂತೆ
ನಾವೊಂದು ಬದುಕನಿಬ್ಬರು ಬದುಕೆ, ಸಾಕು!
ಹೀಗೆ ಕೂಡಿ ಬಾಳಬೇಕು, ಕೂಡಿಯೇ ಸಾಯಬೇಕು ಅಷ್ಟು ಮಾತ್ರಾ ಸಾಕು ಎಂದು ಅಪೇಕ್ಷಿಸಿದ್ದ ಪೈಯವರಿಗೆ ವಿಧಿ ಬೇರೆಯದನ್ನೇ ಬಗೆಯಿತು. ಅವರ ಹೆಂಡತಿಯ ಹೆಸರು ಕೃಷ್ಣಾ ಬಾಯಿ. ಅವಳ ನೆನಪಿನಲ್ಲೊಂದು ಕವನ-
ವಿಧಿಯ ಮೇಲೆ ಪೈರವರಿಗೆ ಅಪಾರ ಬೇಸರ
ಸುಮ್ಮನೇಕೆನ್ನನಲೆ ವಿಧಿಯೆ ಕಾಡಿಸುವೇ?
ಬೇಡಿದುದ ಕೊಡೆ, ಬೇಡದನಾಯ್ದು ಕೊಡುವಿ
ಕೃಷ್ಣೆ ಇಲ್ಲದ ‘ಇಂದು’ ನನಗೆ ಬೇಕಿಲ್ಲ
ಆಕೆ ಕಾಣದ ‘ನಾಳೆ’ ಅದರ ಹಂಬಲ ನನಗಿಲ್ಲ
ಅವಳು ಇದ್ದ ನಿನ್ನೆಯ ನೆನಹು ಮಾತ್ರಾ ಬೇಕು
ಕೊಡುವುದಾದರೆ ಅವಳ ಸ್ಮೃತಿಯೊಂದನು ಉಳಿಸು
ಅವರು ಹೆಂಡತಿಯೊಡನೆ ಬಾಳಿದ ಮಧುರ ನೆನಪೊಂದನ್ನು ಈ ಕವನದಲ್ಲಿ ಕೊಟ್ಟಿದ್ದಾರೆ. ನೆನಪುಗಳ ಮೂಲಕ ತಮ್ಮ ಪತ್ನಿಯ ಪ್ರೇಮವು ಅದೆಷ್ಟು ಆಳವಾಗಿತ್ತೆಂಬುದನ್ನು ಅರಿತರು. ಅವಳ ತ್ಯಾಗ, ಅರ್ಪಣಾ ಭಾವವನ್ನು ಮೆಚ್ಚಿ ಕೊಂಡರು.
ಬದುಕು ಎನ್ನುವ ಸಂತೆಗೆ ಇವರ ಪತ್ನಿ ಇವರಿಗಿಂತ ತಡವಾಗಿ ಬಂದಳಂತೆ. ಆದರೆ ತಮಗಿಂತ ಮೊದಲೇ ಸಂತೆಯ ವ್ಯಾಪಾರವನ್ನು ಮುಗಿಸಿಕೊಂಡು ಹೊರಟು ಹೋದಳಂತೆ. ಇನ್ನು ತಡಮಾಡಿದರೆ ಮಡದಿ ನೊಂದು ಬೇಸರಿಸಳೇ? ಎನ್ನುವ ಯೋಚನೆ ಮೂಡಿತು. ಹೀಗೆ ಹಿಂತಿರುಗಿ ಹೋಗಲು ಕಡವಿಗೆ ಬಂದಾಗ ದೋಣಿಯಲ್ಲಿ ಕರೆತಂದ ಅಂಬಿಗನೆ ಇಲ್ಲ. ಕರೆದೊಯ್ಯಲು ಆತ ಯಾವಾಗ ಬರುವನೋ ತಿಳಿಯದು. ‘ ಈ ಕಡವಿನಲ್ಲಿ’ ಎಂಬ ಪದ್ಯದಲ್ಲಿ ಸಂತೆ, ದೋಣಿ, ಅಂಬಿಗ ಮೊದಲಾದುವನ್ನು ಜಗತ್ತು, ಜೀವನ, ಯಮ ಅಥವಾ ಸಾವು ಎಂಬ ಸಂಕೇತಗಳನ್ನು ಅರ್ಥಪೂರ್ಣವಾಗಿ ಬಳಸಿದ್ದಾರೆ. ತಮ್ಮ ಐಹಿಕ ಪ್ರೇಮವನ್ನು ದೈವೀಕ ಪ್ರೇಮವನ್ನಾಗಿ ಮಾರ್ಪಡಿಸಿಕೊಂಡ ವ್ಯಕ್ತಿತ್ವ ಹಾಗೂ ಅದನ್ನು ಒಡಮೂಡಿಸಿದ ಕವಿತ್ವ ಇವೆರಡೂ ಅಪೂರ್ವವಾದುವುಗಳೇ ಸೈ.
ದೇಶಭಕ್ತಿಯನ್ನು ಬೆಳೆಸಿಕೊಳ್ಳುವುದರಲ್ಲಿ ಗಂಡಸರಿಗೆ ಹೆಂಗಸರಿಗೆ ಪ್ರಚೋದನೆ ನೀಡಬೇಕು, ಬೆಂಬಲಿಸಬೇಕು ಎನ್ನುವುದು ಪೈಯವರ ಮತ. ದೇಶ ಮತ್ತು ಧರ್ಮದ ರಕ್ಷಣೆ ಪ್ರತಿಯೊಬ್ಬ ಮಾನವನ ಕರ್ತವ್ಯ. ಅದನ್ನು ತಪ್ಪಿದ ಸೈನಿಕನೊಬ್ಬನ ಹೆಂಡತಿಯು ಗಂಡನ ಹೇಡಿತನದ ಪ್ರಾಯಶ್ಚಿತ್ತಕ್ಕೆಂದು ಕನಲಿ ಮನೆ ಬಿಟ್ಟು ಹೊರಟು ಹೋದಳು. ದಾರಿಯಲ್ಲಿ ಓರ್ವ ಅನಾಥಸ್ತ್ರೀಯ ಬಲಾತ್ಕಾರವೆಸಗುತ್ತಿದ್ದ ವಿಧಿರ್ಮಿಯನ್ನು ಕೊಂದು ಕೊನೆಗೆ ತನ್ನ ಅಸುವನ್ನು ನೀಗಿಕೊಂಡಳು. ಹೀಗೆ ಗಂಡಸಿನ ಹೇಡಿತನದ ಪಾಪಕ್ಕೆ ಇವಳು ತನ್ನ ಪ್ರಾಣವನ್ನೇ ತೆತ್ತಳು.
ಗೋವಿಂದ ಪೈ ಸುಮಾರು 37 ಭಾಷೆಗಳ ಪರಿಣಿತರು. ಸಂಸ್ಕೃತ, ಪಾಳಿ, ಪಾರ್ಸಿ, ಹೀಬ್ರೂ, ಬಂಗಾಳಿ, ಮರಾಠಿ, ಜಪಾನ್, ಜರ್ಮನ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಭಾಷೆಗಳ ಒಡನಾಟ, ಒಡೆತನವಿದ್ದಿತು. ಕಾವ್ಯ, ನಾಟಕ, ಅನುವಾದಗಳ ಸೃಷ್ಟಿ ಇವರ ಸಾಹಿತ್ಯ ಹೊಲದ ಬದುವಾದರೆ, ತುಳುನಾಡಿನ ಚಾರಿತ್ರಿಕ ಸಂಶೋಧನೆ, ರಾಜ ಮಹಾರಾಜರುಗಳ ಆಳ್ವಿಕೆ, ಕವಿ, ಕಾಲ, ದೇಶದ ಕೃತಿನಿರ್ಣಯಕ್ಕೆ ಇವರ ಲೇಖನಗಳು ಆಧಾರ ಗ್ರಂಥಗಳಾಗಿವೆ. ಸುಮಾರು 12 ತತ್ವಜ್ಞಾನ-ಧರ್ಮ, 153 ಹಳಗನ್ನಡದ ಸಂಶೋಧನಾ ಬಿಡಿ ಲೇಖನಗಳು, 18 ಹೊಸಗನ್ನಡದ ಕವಿಕಾವ್ಯ ತುಲನಾತ್ಮಕ ಪ್ರಬಂಧಗಳು, ಸುಮಾರು 100ಕ್ಕೂ ಹೆಚ್ಚಿನ ಚಿಕ್ಕ ದೊಡ್ಡ ಕವಿತೆಗಳ ಸರಮಾಲೆಯನ್ನೇ ಕನ್ನಡಮ್ಮನ ಪದದಲ್ಲಿ ಸುರಿದಿದ್ದಾರೆ.
ಗೋಲ್ಗಥಾ, ಗಿಳಿವಿಂಡು, ನಂದಾದೀಪ, ಹೆಬ್ಬೆರಳು, ಚಿತ್ರಭಾನು, ದೀವಿಗೆ, ಇವುಗಳು ಅವರ ಕೃತಿಗಳ ಆಕರ್ಷಕ ಶೀರ್ಷಿಕೆಗಳು. ಹೊರಗಿನ ಹೊದಿಕೆ(ಕಣಕ) ಒಳಗಿನ ಹೂರಣ ಎರಡೂ ಕಡುಸಿಹಿಯ ಕಜ್ಜಾಯ. ಮಣಿ ದರ್ಪಣದಿಂದ ಛಂದೋಬುಧಿಯವರೆಗಿನವರೆಗೆ ಸಂಗ್ರಹಿಸಿದ ವ್ಯಾಕರಣ ಸೂತ್ರಗಳು ಅನೇಕ.
ಒಟ್ಟಿನಲ್ಲಿ ಗೋವಿಂದ ಪೈಯವರ ಕವಿತೆಗಳಲ್ಲಿ ಮಾನವನ ಕಣ್ತೆರೆಸುವ ಸಂದರ್ಭಗಳಿವೆ. ಒಂದೊಂದು ಕವಿತೆಗಳಲ್ಲೂ ಒಂದೊಂದು ರೀತಿಯ ಲಾಲಿತ್ಯವಿದೆ. ಅವರ ಕವನಗಳು ಮಾನವನ ಅಂತರಂಗ ಕದವನ್ನು ತಟ್ಟುವುದರಲ್ಲಿ ಯಶಸ್ವಿಯಾಗಿದೆ. ಹಲವು ಕಾಲ ಬಾಳಿ ಬದುಕುವ ಉತ್ತಮ ಸಾಹಿತ್ಯದ ಸತ್ವವಿದೆ. ಈಗಿನ ಯಾಂತ್ರಿಕತೆಯ ದಿನಚರಿಯಲ್ಲಿ ಶಾಂತಿ, ನೆಮ್ಮದಿ, ಪಡೆಯಬೇಕೆಂದರೆ ಇಂತಹ ಕವನಗಳನ್ನು ಆವಾಹಿಸಿಕೊಳ್ಳುವುದರಿಂದಲೇ ಸಾಧ್ಯ.

ಪೈಯವರ ಸಾಹಿತ್ಯ ಸೃಷ್ಟಿ ಅಗಾಧವಾದುದು. ಕವಿತೆ, ಖಂಡಕಾವ್ಯ, ಪ್ರಬಂಧ, ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಅವರು ಸಿದ್ಧಹಸ್ತರು. ಸಾಹಿತ್ಯ ಮತ್ತು ಇತಿಹಾಸ ಸಂಬಂಧವಾದ ಸಂಶೋಧನೆಯಲ್ಲಂತೂ ಅವರು ಅದ್ವಿತೀಯರು.
ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ
ಸತ್ರದಲಿ ನೇಮದಿಂದಿರಲಿಕೆಡೆಯುಂಟು,
ರಾತ್ರಿಯಾಯಿತು ಹೊರಡೆನೆ ತೆರಳಿದೊಡೆ, ಪಾರು
ಪತ್ಯದವ ಮೆಚ್ಚುವನು- ಮಂಕುತಿಮ್ಮ.
ಡಿ.ವಿ.ಜಿ.ಯವರ ನುಡಿಮುತ್ತು ಇವರ ಜೀವನದ ಸಾರ್ಥಕತೆಯನ್ನು ಬಿಂಬಿಸುತ್ತದೆ. ಸಾಧನೆಯೇ ಜೀವನದ ಗುರಿಯಾಗಿರಬೇಕು.
ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಗೋವಿಂದ ಪೈಗಳ ಕೃತಿಗಳನ್ನು ಸಂಶೋಧನಾ ಕೇಂದ್ರದಲ್ಲಿ ಸಂಗ್ರಹಿಸಿಡಲಾಗಿದೆ.
ಪೈಯವರ ವಿಶೇಷತೆಗಳು: 1899ರಲ್ಲಿ ಅಂದರೆ 16ನೆಯ ವಯಸ್ಸಿನಲ್ಲೇ ಮಂಗಳೂರಿನ ‘ಸುವಾಸಿನಿ’ ಪತ್ರಿಕೆಯಲ್ಲಿ ಬರೆಯಲು ಆರಂಭಿಸಿದರು. ಪ್ರಾಸರಹಿತ ಬರವಣಿಗೆಯನ್ನು ಮೆಚ್ಚುತ್ತಿದ್ದರು.
2. ಪತ್ನಿ ಲಕ್ಷ್ಮಿದೇವಿಯ ಸಾವು 1927ರಲ್ಲಿ ಸಂಭವಿಸಿದಾಗ ನಿರಾಶೆಯಲ್ಲೇ ಆಶೆಯನ್ನು ಮೂಡಿಸಿಕೊಂಡು ಹೀಗೆ ಹೇಳಿಕೊಂಡರು. ‘‘ಲಕ್ಷ್ಮಿಯು ನನ್ನನ್ನು ಸಂಪೂರ್ಣವಾಗಿ ಸರಸ್ವತಿಯ ಮಡಿಲಿಗೆ ಹಾಕಿದಳು. ಇದರಿಂದಾಗಿ ಸರಸ್ವತಿಯ ಮಡಿಲು ಇವರ 12 ತತ್ವ, ಧರ್ಮ, 153 ಹಳಗನ್ನಡ, 18 ಹೊಸಗನ್ನಡ, 100 ಚಿಕ್ಕದೊಡ್ಡ ಕವಿತೆಗಳಿಂದ ತುಂಬಿತು.
3. ರಾಷ್ಟ್ರವು ದಾಸ್ಯ ಶೃಂಖಲೆಯಲ್ಲಿರುವಾಗ ನಾನು ಹಾರ, ಶಾಲು ಹಾಕಿಸಿಕೊಂಡು ಮೆರೆಯಲೆ? ಹೀಗೆಂದು ಹೇಳಿ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ನಿರಾಕರಿಸಿದರು.
4. ಬಹುಮಾನ, ಪ್ರಶಸ್ತಿಗಳ ಬಗ್ಗೆ ಎಣೆ ಇಲ್ಲದ ತಿರಸ್ಕಾರ.
5. ಉಡುಪಿನಲ್ಲಿ ಅತ್ಯಂತ ಸರಳ ಜೀವಿ.
6. ನೇರಳೇ ಬಣ್ಣದ ಶಾಯಿಯಲ್ಲೇ ಬರೆಯುವ ಅಭ್ಯಾಸ. ಚಿತ್ತಿಲ್ಲದ ಸ್ಫುಟ, ಸುಂದರ ಬರವಣಿಗೆ.
7. ಅವರ ಪುಟ್ಟ ಮನೆಯಲ್ಲಿ ಪುಸ್ತಕಗಳೇ ಗೋಡೆಯನ್ನು ನಿಲ್ಲಿಸಿದ್ದವೋ ಅಥವಾ ಗೋಡೆಗಳೇ ಪುಸ್ತಕಗಳನ್ನು ನಿಲ್ಲಿಸಿದ್ದವೋ ಗೊತ್ತಿಲ್ಲ.
8. ಬೆಳ್ಳಿ ಮೀಸೆ, ಶುಭ್ರ ವಸನ, ಮಗುವಿನ ನಗು ಇವರ ಚಹರೆ,
ಒಂದೊಂದು ಕವಿತೆಯನ್ನೂ ಓದಿ ರಸಾಸ್ವಾದನೆ ಮಾಡಿದರೆ ನಾವು ಕವಿಗೆ ಕೃತಜ್ಞತೆಯನ್ನು ಸಲ್ಲಿಸಿದಂತಾಗುವುದು. ಕವಿಯ ಋಣಕ್ಕೆ ಸಹೃದಯರ ರಸಗ್ರಹಣ ಕಾಣಿಕೆಯೊಂದೇ ಸಮುಚಿತವಾದ ಕಾಣಿಕೆಯಲ್ಲದೆ ಬೇರಾವ ಪ್ರಶಸ್ತಿಗೂ ಅವನು ಒಪ್ಪನು.
ಅರಸರ್ ಕುಡುವಾ ಕಾರ್ತಸ್ವರ ಕಂಕಣ ಮಿಕ್ಕೆ
ಸರಸರಾ ಸ್ವಾದಿಸಿ ಸುರಿಸುವ ಕಂಕಣವು ಕವಿಗೆ ಕಂಕಣಮಲ್ತೆ?
(ಕಂಕಣದ ದ್ವಂದ್ವಾರ್ಥ: ಕಂಕಣ – ಚಿನ್ನದ ಕಡಗ. ಕಂಕಣ,- ಕಣ್ಣಿನ ಕಣ – ಕಣ್ಣೀರು.)

ಎಂಭತ್ತು ವರ್ಷಗಳ ತುಂಬು ಜೀವನ ನಡೆಸಿದ ಪೈ ಅವರು ಮರಣಿಸಿ 50 ವರ್ಷಗಳಾದವು.

  • ಶಾರದಾ ಶಾಮಣ್ಣ
   

Leave a Reply