ಚಿಂತನಕ್ಷಣ – 13

ಹೊ.ವೆ.ಶೇಷಾದ್ರಿ - 0 Comment
Issue Date : 20.07.2014

ಕಮ್ಯುನಿಸ್ಟರ ಧ‍ರ್ಮಸಂಕಟ  3

ಪ್ರ: ದೇಶ‍ದ ಆರ್ಥಿಕ ರಾಜನೈತಿಕ ಪರಿಸ್ಥಿತಿಯಲ್ಲಿ ಏರುಪೇರಾದಂತೆ ಸತ್ತಾಧಾರಿಗಳು ಬದಲಾಗುವುದು ಸ್ವಾಭಾವಿಕ. ಪ್ರಜಾತಂತ್ರೀಯ ದೇಶಗಳಲ್ಲೂ ಸಹ ಇದೇ ರೀತಿಯ ಸತ್ತಾಧಾರಿಗಳ ಪಕ್ಷಗಳ ಬದಲಾವಣೆಗಳು ಸಂಭವಿಸುವುದುಂಟು. ಆದರೆ ಕಮ್ಯುನಿಸ್ಟ್ ದೇಶಗಳಲ್ಲಿ ಆಗುತ್ತಿರುವ ಈ ಬದಲಾವಣೆಗೆ ಮಾತ್ರ ಇಷ್ಟೊಂದು ಮಹತ್ವ ಏಕೆ?

ಉ: ಪ್ರಜಾಪ್ರಭುತ್ವವಾದಿ ದೇಶಗಳಲ್ಲಿನ ಬದಲಾವಣೆ ಪ್ರಜಾಪ್ರಭುತ್ವದ ಸಿದ್ಧಾಂತ ಹಾಗೂ ಪದ್ಧತಿಗಳಿಗೇ ಅನುಸಾರವಾಗಿಯೇ ಜರಗುತ್ತದೆ. ಆದರೆ ಕಮ್ಯುನಿಸ್ಟ್ ದೇಶಗಳಲ್ಲಿನ ಸದ್ಯದ ಪರಿವರ್ತನೆಯು ಕಮ್ಯುನಿಸಂ ಸಿದ್ಧಾಂತದ ಬುಡಕ್ಕೇ ಕೊಡಲಿ ಹಾಕುವಂತಿದೆ.

ಪ್ರಶ್ನೆ : ಹೇಗೆ?

ಉ: ಕಮ್ಯುನಿಸಂ ಸಿದ್ಧಾಂತದ ಪ್ರಕಾರ, ಮನುಷ್ಯನ ಮನೋಧರ್ಮವು ರೂಪಿತವಾಗುವುದು ಅಲ್ಲಿನ ಆರ್ಥಿಕ ರಚನೆಯ ಆಧಾರದ ಮೇಲೆ. ಕಮ್ಯುನಿಸಂ ಸಿದ್ಧಾಂತದಂತೆ ಸ್ವಂತದ ಆಸ್ತಿ – ಪಾಸ್ತಿಯ ಹಕ್ಕು, ಸ್ವಂತ ವಾಗಿ  ಉದ್ಯೋಗ ನಡೆಸುವ ಹಕ್ಕು, ಸ್ವಂತವಾಗಿ ವ್ಯಾಪಾರ ನಡೆಸುವ ಅಥವಾ ಸಾಗುವಳಿ ಮಾಡುವ ಹಕ್ಕು, ಇವನ್ನೆಲ್ಲ ಒಮ್ಮೆ ನಿರ್ಮೂಲಮಾಡಿದ ನಂತರ ಜನಸಾಮಾನ್ಯರಲ್ಲಿ ಸರ್ವಸಮಾನತೆಯ ಮನೋಧರ್ಮ ತಾನಾಗಿ ಮೂಡುತ್ತದೆ; ಪರಸ್ಪರರಲ್ಲಿ ಅನ್ಯೋನ್ಯತೆ ಬೆಳೆಯುತ್ತದೆ; ಪ್ರತಿಯೊಬ್ಬನೂ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಷ್ಟರಲ್ಲೆ ಸಂತೃಪ್ತಿ ಕಾಣುವನು! ಆದರೆ ಸಮಾಜದ ಕಲ್ಯಾಣಕ್ಕಾಗಿ, ಅಭಿವೃದ್ಧಿಗಾಗಿ ಮಾತ್ರ ತನ್ನ ಶಕ್ತಿಯನ್ನೆಲ್ಲ ಸುರಿದು ಕೆಲಸ ಮಾಡುವನು.

ಇದು ಕಮ್ಯುನಿಸಂ ಸಿದ್ಧಾಂತದಂತೆ ಜನರ ಮನೋಧರ್ಮದಲ್ಲಿ ತೋರಿಬರಬೇಕಾಗಿದ್ದ ಬದಲಾವಣೆ. ಆದರೆ ಕಮ್ಯುನಿಸ್ಟ್ ಆಡಳಿತದಲ್ಲಿ  ಇದಕ್ಕೆ ತೀರ ವಿರುದ್ಧವಾದ ದಿಸೆಯಲ್ಲೇ ಜನರ ಮನೋಧರ್ಮ –ಅವರ ವ್ಯವಹಾರ ರೂಪುಗೊಳ್ಳುತ್ತಾ ಹೋಗಿದೆ. ಸರ್ವಸಮಾನತೆಯ ಜಾಗದಲ್ಲಿ ಮೇಲು – ಕೀಳು, ಉಳ್ಳವರು – ಇಲ್ಲದವರು, ಶೋಷಕರು – ಶೋಷಿತರು ಎನ್ನುವ ಹೊಸ ವರ್ಗಗಳು ಮೈತಳೆದಿದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿನ ಯಾವ ದೋಷಗಳನ್ನು ತೊಡೆದುಹಾಕಲೆಂದು ಕಮ್ಯುನಿಸಂ ಜನ್ಮತಳೆಯಿತೋ, ಅವೇ ದೋಷಗಳೇ ಮತ್ತೆ ಹಿಂಬಾಗಿಲಿನಿಂದ ಬೇರೊಂದು ಸೋಗಿನಲ್ಲಿ ಕಮ್ಯುನಿಸ್ಟ್ ಸಮಾಜಗಳನ್ನೂ ಕಿತ್ತು ತಿನ್ನುತ್ತವೆ. ಸಮಾಜಕ್ಕಾಗಿ ತನ್ನ ಶಕ್ತಿ ಸುರಿದು ದುಡಿಯುವ ಪ್ರವೃತ್ತಿಯ ಬದಲಿಗೆ, ಸ್ವಂತದ್ದಾದರೆ ದುಡಿಯುವುದು ದೇಶದ್ದಾದರೆ ಮೈಗಳ್ಳರಾಗುವುದು ಇದೇ ನಿಯಮವಾಗಿದೆ. ಕೃಷಿ ರಂಗದಲ್ಲೂ ಇದೇ ಕತೆ, ಉದ್ಯೋಗ ರಂಗದಲ್ಲೂ ಇದೇ ಪಾಡು. ಎಂದೇ ಕಮ್ಯುನಿಸ್ಟ್ ದೇಶಗಳಲ್ಲಿ  ಸರಕಾರೀಕರಣದ ಫಲವಾಗಿ  ಕೃಷಿ ಉತ್ಪನ್ನಗಳಿರಲಿ, ಕಾರ್ಖಾನೆ ಉತ್ಪನ್ನಗಳಿರಲಿ ಅಥವಾ ಅವುಗಳ ಗುಣಮಟ್ಟವಿರಲಿ – ಎಲ್ಲದರಲ್ಲೂ ಘೋರವಾದ ಕುಸಿತ ತೋರಿಬಂದಿದೆ. ಇದನ್ನು ತಡೆಗಟ್ಟ ಬೇಕಾದರೆ ಜನರಿಗೆ ಹೆಚ್ಚಿನ ಅಧಿಕಾರಗಳನ್ನು ನೀಡಿ ಸ್ವಪ್ರೇರಣೆಗೆ ಅವಕಾಶ ಸಿಗುವಂತಹ ಸುಧಾರಣೆಗಳನ್ನು ತರದೆ ವಿಧಿಯೇ ಇಲ್ಲವಾಗಿದೆ.

ಪ್ರ: ಅಂದು ಸ್ಟಾಲಿನ್‍ ಸ್ವಂತ ಉದ್ಯೋಗಸ್ಥರು – ರೈತರು-ಬುದ್ಧಿಜೀವಿಗಳು ಇಂತಹವರನ್ನೆಲ್ಲ ಕ್ರಾಂತಿ ಶತ್ರುಗಳೆಂದು ಘೋಷಿಸಿ ಅವರನ್ನು ನಿರ್ಮೂಲಗೊಳಿಸುವ ಕರಾಳ ಕ್ರಮ ಕೈಗೊಂಡಿದ್ದನೆಂದು ಕೇಳಿದ್ದೇವೆ. ಕಾರ್ಮಿಕರೇ ನಿಜವಾದ ಕ್ರಾಂತಿದೂತರೆಂದು ಬಣ್ಣಿಸಿ, ಅವರ ಹೆಸರಿನಲ್ಲಿ ತನ್ನ ಸರ್ವಾಧಿಕಾರವನ್ನು ಭದ್ರಗೊಳಿಸಿಕೊಂಡಿದ್ದನೆಂದೂ ಕೇಳಿದ್ದೇವೆ. ಆದರೆ ಈಗ ಗೊರ್ಬೆಚೆವ್‍ರು, ಯಾರನ್ನೂ ಅಂದು ಸ್ಟಾಲಿನ್ ನಿರ್ಮೂಲಗೊಳಿಸಲು ಹೊರಟ್ಟಿದ್ದನೋ ಅವರನ್ನು ಈಗ ಮುಂದಕ್ಕೆ ತರಲು ಎಣಿಸಿದ್ದಾರೆ, ಯಾರನ್ನು ಅಂದು ಸ್ಟಾಲಿನ್‍ ಮುಂದೆ ತಂದಿದ್ದನೋ ಅವರನ್ನು ಹಿಂದಕ್ಕೆ ತಳ್ಳುತ್ತಿದ್ದಾರೆ. ಈ ತಿರುವು ಮುರುವಿಗೆ ಕಾರಣ?

ಉ: ಏಕೆಂದರೆ ಯಾರನ್ನು ಅಂದು ಮುಂದೆ ತರಲಾಗಿತ್ತೊ ಅವರು ಅಧಿಕಾರದ ರುಚಿ ಕಂಡ ಹೊಸ ಶೋಷಕ ವರ್ಗವಾಗಿದ್ದಾರೆ. ಅವರ ಪ್ರಭಾವ – ಹಿಡಿತಗಳನ್ನು ತಗ್ಗಿಸದೆ ರಷ್ಯ ಮುಂದುವರೆಯುವ ಸ್ಥಿತಿಯಲ್ಲೆ ಇಲ್ಲ. ಮಾವೋ ಸಹ ಇದೇ ಮಾತನ್ನು ಹೇಳಿದ್ದ. ಇಂದಿನ ಕ್ರಾಂತಿದೂತರೇ ನಾಳಿನ ಕ್ರಾಂತಿ –ವಿರೋಧಿಗಳಾಗುತ್ತಾರೆ.  ಅಂತಹವರನ್ನು ನಿರ್ಮೂಲಗೊಳಿಸಲು ಇನ್ನೊಂದು ಕ್ರಾಂತಿ ಮಾಡಬೇಕಾಗುತ್ತದೆ. ಮತ್ತೆ ಅವರು ಸಹ ಕಾಲಕ್ರಮದಲ್ಲಿ ಕ್ರಾಂತಿವಿರೋಧಿಗಳಾಗುವರು. ಆಗ ಮಗದೊಂದು ಕ್ರಾಂತಿ ಅನಿವಾರ್ಯವಾಗುತ್ತದೆ. ಹೀಗೆ ‘ನಿರಂತರ ಕ್ರಾಂತಿ’ಯ ಸಿದ್ಧಾಂತವನ್ನೇ ಆತ ಮಂಡಿಸಿದ್ದ. ಆತ ಮಂಡಿಸಿದ ಸಿದ್ಧಾಂತಕ್ಕೆ ಸಾಕ್ಷಿಯಾಗಿ ಸ್ವತಃ ಆತನೇ ಚೀಣದ ಮರುಕ್ರಾಂತಿಗೆ ಆಹುತಿಯೂ ಆದ. ಇಂದು ರಷ್ಯದಲ್ಲಿ ಜರುಗುತ್ತಿರುವುದೂ ಇದೇ ಪ್ರಕ್ರಿಯೆ.

ಪ್ರ: ಇದರ ಅರ್ಥ-ಬರಬರುತ್ತಾ ಕಮ್ಯುನಿಸ್ಟ್ ದೇಶಗಳು ಪ್ರಜಾತಂತ್ರೀಯ ಪದ್ಧತಿಗೆ ಶರಣಾಗದೆ ವಿಧಿ ಇಲ್ಲ, ಆಗಲೇ ಅವು ಆಂತರಿಕ ದ್ವಂದ್ವ-ಕ್ರಾಂತಿಗಳಿಂದ ಮುಕ್ತವಾದಾವು ಎಂದು ಹೇಳಬಹುದೇ? ರಾಷ್ಟ್ರಗಳ ಅಂತಿಮ ಕಲ್ಯಾಣಕ್ಕೆ ಪ್ರಜಾತಂತ್ರೀಯ ವಿಧಾನದ ಹೊರತು ಬೇರೆ ಮಾರ್ಗವಿಲ್ಲ, ಎಂಬುದೇ ಇದರ ನಿಷ್ಕರ್ಷೆ?

ಉ: ಇವೆರಡು ಪದ್ಧತಿಗಳ ಪೈಕಿ  ಕಮ್ಯುನಿಸಂಗಿಂತ ಪ್ರಜಾತಂತ್ರೀಯ ಪದ್ಧತಿ ಸಾವಿರ ಪಾಲು ಮೇಲು ಎನ್ನುವ ಮಾತು ನಿಜ. ಆದರೆ ಇವೆರಡೂ ಪದ್ಧತಿಗಳಲ್ಲಿನ ಮೂಲಭೂತ ದೋಷ ಮಾತ್ರ ಒಂದೇ. ಇವೆರಡೂ ಪಾಶ್ಚಾತ್ಯ ಭೋಗವಾದಿ ಸಿದ್ಧಾಂತದ ಮೇಲೆ ನಿಂತಿದೆ.  ಅವುಗಳಲ್ಲಿ ಮಾನವೀಯ ಮೌಲ್ಯಗಳನ್ನು ಪೋಷಿಸುವ  ವ್ಯವಸ್ಥೆ ಸುತರಾಂ ಇಲ್ಲ. ಅಖಿಲ ಮಾನವ ಜನಾಂಗದ ಹಿತಕ್ಕಾಗಿ ಶ್ರಮಿಸುವ  ಗುಣ ಅದರಲ್ಲಿ ಇಲ್ಲ.  ಬೇರೆ ದೇಶಗಳನ್ನು ಸುಲಿದು ಅವುಗಳ ಮೇಲೆ ತಮ್ಮ ಸಾಮ್ರಾಜ್ಯ ಚಲಾಯಿಸಬೇಕೆಂಬ ಹಂಬಲ ಅವೆರಡು ಬಗೆಯ ಸರಕಾರಗಳಿಗೂ ತಪ್ಪಿದ್ದಲ್ಲ. ಏಕೆಂದರೆ, ಅರ್ಥ ಮತ್ತು ಕಾಮಗಳ ಚೌಕಟ್ಟಿನಲ್ಲಿ ಮಾತ್ರ ಬಂಧಿಯಾಗಿರುವ  ಪದ್ಧತಿಗಳು ಅವು. ಉಚ್ಚ ಮಾನವೀ ಮೌಲ್ಯಗಳ ಆಚಾರ –ಸಂಹಿತೆಯಾದ ಧರ್ಮದ ಅಂಕುಶಕ್ಕೆ ಅವೆರಡೂ ಮಾನವೀ ಪ್ರವೃತ್ತಿಗಳು ಒಳಪಟ್ಟಾಗಲೇ ವ್ಯಕ್ತಿಗೂ ಹಿತ, ರಾಷ್ಟ್ರಗಳಿಗೂ ಹಿತ, ಒಟ್ಟು ಮಾನವ ಜನಾಂಗಕ್ಕೂ ಹಿತ.  ಇಂದಲ್ಲ ನಾಳೆ, ಮಾನವ ಸಮಾಜ ತನ್ನ  ಉಳಿವಿಗಾಗಿ ಅಂತಹ ಸರ್ವವ್ಯಾಪಕ ಸನಾತನ ಧರ್ಮದ ಆಶ್ರಯಕ್ಕೆ ಬರದೆ ವಿಧಿ ಇಲ್ಲ. ಧರ್ಮದ ಚೌಕಟ್ಟಿನಲ್ಲಿ ಪ್ರಜಾಸ್ವಾತಂತ್ರ್ಯಕ್ಕೆ ಅಗ್ರಪಟ್ಟವಿದ್ದರೂ, ಆ ಸ್ವಾತಂತ್ರ್ಯವು ಸ್ವೈರಾಚಾರ ಆಗದಂತೆ, ಅದರಿಂದ ಪರಪೀಡನೆಗೆ ಎಡೆಯಾಗದಂತೆ, ಐಹಿಕ ಸುಖಭೋಗವೇ ಮಾನವ ಜೀವನದ ಆದರ್ಶವೆನಿಸದಂತೆ-ಮಾನವ ಕಲ್ಯಾಣದ ಚಿರಂತನ ದೀಪವಾಗಿ ಅದು ದಾರಿ ತೋರೀತು.

ಹೊ.ವೆ.ಶೇಷಾದ್ರಿ

ಮುಂದುವರೆಯುವುದು

   

Leave a Reply