ಚಿಂತನಕ್ಷಣ – 14

ಹೊ.ವೆ.ಶೇಷಾದ್ರಿ - 0 Comment
Issue Date : 23.07.2014

‘ಆಪರೇಶನ್ ಬ್ಲಾಕ್ ಥಂಡರ್’- ತರಂಗಗಳು

ಪ್ರ: ಹಿಂದೆ ‘ಬ್ಲೂಸ್ಟಾರ್’ ಕ್ರಮದಂತೆಯೇ ಈ ಸಲದ ‘ಬ್ಲಾಕ್ ಥಂಡರ್’ ಸಹ ಅಮೃತಸರ ಮಂದಿರದಲ್ಲಿನ ಉಗ್ರವಾದಿಗಳನ್ನು ಹೊಡೆದುಹಾಕುವ ಪ್ರಯತ್ನ ನಡೆಯಿತಲ್ಲವೇ? ಆದರೆ ಅಂದು ಸಿಖ್ಖರಲ್ಲಿ ತೋರಿಬಂದಷ್ಟು ತೀವ್ರ ಪ್ರತಿಕ್ರಿಯೆ ಈ ಸಲ ತೋರಿಬಂದಿಲ್ಲವೇಕೆ?

ಉ: ಹಿಂದಿನ ಕಟು ಅನುಭವದಿಂದ ಸರಕಾರವೂ ಒಂದಷ್ಟು ಪಾಠ ಕಲಿತಿರಬೇಕು. ಈ ಸಲ ಇಡೀ ಜಗತ್ತಿನ ಕಣ್ಣೆದುರು ಪೋಲಿಸರು ತಮ್ಮ ಕಾರ್ಯಾಚರಣೆ ನಡೆಸಿದರು. ಸ್ವರ್ಣಮಂದಿರದ ಪಾವಿತ್ರ್ಯ ಕಾಯ್ದುಕೊಂಡು ಕಾರ್ಯಾಚರಣೆ ನಡೆಸಲು  ಅವರು ಯಾವ ರೀತಿ ಎಚ್ಚರಿಕೆ ವಹಿಸಿದರು. ನಿರಪರಾಧಿಗಳಿಗೆ ಗಾಸಿ ಆಗದಂತೆ ಯಾವ ಯಾವ  ಕ್ರಮಗಳನ್ನು  ಕೈಗೊಂಡರು. ಕೊನೆಗೆ  ಉಗ್ರವಾದಿಗಳಿಗೂ ಪ್ರಾಣ ಉಳಿಸಿಕೊಳ್ಳಲು  ಅವಕಾಶ ನೀಡಿದರು-ಇವೆಲ್ಲವನ್ನೂ ನೂರಾರು  ಸ್ವದೇಶಿ ವಿದೇಶಿ ಪತ್ರಕಾರರು, ಬಾನುಲಿ ಬಾತ್ಮೀದಾರರು, ದೂರದರ್ಶನದ  ಚಿತ್ರಕಾರರು ಪ್ರಪಂಚದ ಜನಕ್ಕೆಲ್ಲ  ಕಣ್ಣಿಗೆ ಕಟ್ಟುವಂತೆ ವರದಿ ಮಾಡಿದರು, ಕಣ್ಣಾರೆ ತೋರಿಸಿದರು. ಹೀಗಾಗಿ ಹಿಂದೆ ಬ್ಲೂಸ್ಟಾರ್‍ನಂತರ ಯದ್ವಾತದ್ವಾ ಊಹಾಪೋಹಗಳ  ಸುಂಟರಗಾಳಿ ಎದ್ದಂತೆ  ಈ ಸಲ ಏಳಲು ಅವಕಾಶ ಆಗಲಿಲ್ಲ

ಪ್ರ: ಹಿಂದೆ  ಸ್ವರ್ಣಮಂದಿರದಲ್ಲಿ ಆಹುತಿಯಾದ  ಭಿಂಡ್ರನವಾಲಾ ಮತ್ತಿತರ ಉಗ್ರವಾದಿಗಳ ಬಗೆಗೆ ಹಳ್ಳಿ ಹಳ್ಳಿಗಳಲ್ಲಿನ ಮುಗ್ಧ ಸಿಖ್ಖರಲ್ಲಿ ಸಿಖ್ಖರಲ್ಲಿ “ಸಿಖ್ ಧರ್ಮಕ್ಕಾಗಿ ಹುತಾತ್ಮ”ರಾದವರೆಂಬ ಶ್ರದ್ಧೆ ಹಬ್ಬಿತ್ತೆಂದು ಕೇಳಿದ್ದೇವೆ. ಆ ರೀತಿ ಈ ಸಲವೂ ಆಗಿರಬಹುದಲ್ಲ?

ಉ: ಈ ವಿಷಯದಲ್ಲಿಯೂ ನಮ್ಮ ಸುರಕ್ಷಾಧಿಕಾರಿಗಳು  ತುಂಬ ದೂರದೃಷ್ಟಿಯಿಂದ ವರ್ತಿಸಿದರು. ಉಗ್ರವಾದಿಗಳು ಸ್ವರ್ಣಮಂದಿರದಲ್ಲಿ ನಡೆಸಿದ   ಭ್ರಷ್ಟಾಚಾರ-ಅನಾಚಾರಗಳೆಲ್ಲವನ್ನೂ ಎಲ್ಲರ ಕಣ್ಣೆದುರು  ಬರುವಂತೆ ಮಾಡಿದರು. ಮಂದಿರದ ಪರಿಕ್ರಮದ ಕೋಣೆಗಳ ಒಳಗೆ ಸಿಕ್ಕ ಸ್ತ್ರೀಯರ ಬಟ್ಟೆಬರೆಗಳು, ಅಲ್ಲಿನ ತಿಪ್ಪೆರಾಶಿಯಲ್ಲಿ  ಒಂದೊಂದಾಗಿ ತೆಗೆಯಲಾದ ಯುವತಿಯರ ಶರೀರ ಅವಶೇಷಗಳು-ಅಸ್ಥಿಪಂಜರಗಳು ಇವು ಎಂಥ ಕಟ್ಟಾ ‘ಖಲಿಸ್ತಾನೀ’ ಸಮರ್ಥಕನ ಎದೆಯನ್ನೂ ಸೀಳುವಂತಹ ದೃಶ್ಯಗಳಾಗಿದ್ದವು.  ಇದುವರೆಗೆ ತೆಗೆಯಲಾದ ಅಂತಹ ಹನ್ನೆರಡು ಯುವತಿಯರ ಅವಶೇಷಗಳಲ್ಲದೆ ಇಪ್ಪತ್ತಕ್ಕೂ ಮಿಕ್ಕಿ ಪುರುಷರ ಅವಶೇಷಗಳು ದೊರಕಿವೆ. ಇದಲ್ಲದೆ ಮಂದಿರದಲ್ಲಿ  ಉಗ್ರವಾದಿಗಳು ಮಲಮೂತ್ರಗಳನ್ನೆಲ್ಲ ಮಾಡಿ ಇಡೀ ದೇವಸ್ಥಾನವನ್ನು ಹೊಲಸು ಮಾಡಿಟ್ಟಿದ್ದ ದೃಶ್ಯವನ್ನೂ ಜನ ಕಣ್ಣಾರೆ ಕಂಡರು. ಅಮೃತಸರದ ಹಲವು ಸಾರ್ವಜನಿಕ ಸೇವಾಸಂಸ್ಥೆಗಳು-ಕಾರಸೇವಾ ಭಕ್ತರು ಮಂದಿರವನ್ನು ಸ್ವಚ್ಛಗೊಳಿಸಲು ಹೋದಾಗಿನ ಅನುಭವಗಳನ್ನೆಲ್ಲ ಪತ್ರಿಕೆಗಳೂ ವರ್ಣಿಸಿದವು. ಇದರಿಂದಾಗಿ ಉಗ್ರವಾದಿಗಳ ‘ಸಿಖ್‍ನಿಷ್ಠೆ’ಯ ಬಣ್ಣ ಬಯಲಾಯಿತು. ಮಂದಿರಕ್ಕೆ ಬಂದ ಭಕ್ತಾದಿಗಳ  ಪೈಕಿ  ಯುವತಿಯರನ್ನು  ಎಳೆದುಕೊಂಡು  ಹೋಗಿ ಅತ್ಯಾಚಾರ ನಡೆಸಿ ಹತ್ಯೆ ಮಾಡಬಲ್ಲಂತಹರು, ಅಮಾಯಕ ಜನರನ್ನು  ಚಿತ್ರಹಿಂಸೆಗಳಿಗೆ ಗುರಿಪಡಿಸಿ ಕೊಲೆ ಮಾಡಬಲ್ಲಂತಹರು, ಪರಮ ಪವಿತ್ರ ದೇವಮಂದಿರವನ್ನು ನರಕದ ಸ್ಥಾನವಾಗಿ ಮಾಡಿದಂತಹರು ಈ ತಥಾಕಥಿತ ‘ಖಲಿಸ್ತಾನಿ’ಗಳು ಎಂಬುದು  ಜಗಜ್ಜಾಹೀರಾಯಿತು.  ಅಂತಹವರನ್ನು  ‘ಹುತಾತ್ಮ’ರೆಂದು ಭಾವಿಸುವಷ್ಟು ಮೂಢರೇನೂ ಅಲ್ಲ, ಸಿಖ್ ಬಂಧುಗಳು.

ಪ್ರ: ಪಂಜಾಬಿನ ಸಾಮಾನ್ಯ ಸಿಖ್ಖರ ಮನಸ್ಸಿಗೆ ಹೇಗನಿಸುತ್ತಿರಬಹುದು?

ಉ : ಹಿಂದೆ  ‘ಬ್ಲೂಸ್ಟಾರ್’ನಂತರ ಅಕಾಲಿ ಪತ್ರಿಕೆಗಳು, ಸಾಮಾನ್ಯ  ಸಿಖ್ಖರು  ಸರಕಾರದ  ಕ್ರಮದ  ವಿರುದ್ಧ ಒಂದೇ ಸಮನೆ ಕೂಗೆಬ್ಬಿಸಿದರು. ತಮ್ಮ  ಮಂದಿರವನ್ನು ಭ್ರಷ್ಟಗೊಳಿಸಲಾಯಿತೆಂದು  ಅವರಲ್ಲಿ ಇಂದಿರಾಗಾಂಧಿ ವಿರುದ್ಧ ತೀವ್ರವಾದ  ಆಕ್ರೋಶ ಕೆರಳಿತ್ತು. ಪೋಲಿಸ್ ಕಾರ್ಯಾಚರಣೆಯಲ್ಲಿ ಸತ್ತ ಉಗ್ರವಾದಿಗಳೆಲ್ಲರೂ ಮಂದಿರದ  ಪಾವಿತ್ರ್ಯಕ್ಕಾಗಿ , ಸಿಖ್ ಪಂಥದ ಮರ್ಯಾದೆ ಕಾಯುವ  ಸಲುವಾಗಿ  ಪ್ರಾಣ ಕೊಟ್ಟವರೆಂದೂ ಅವರು ಭಾವಿಸಿದರು.  ಅಲ್ಲಿಂದಾಚೆಗೆ ಸಿಖ್ಖರಲ್ಲಿ  ಉಗ್ರವಾದಿಗಳ ಬಗೆಗೆ ಸಹಾನುಭೂತಿ ಹೆಚ್ಚಲೂ ಅದು ಕಾರಣವಾಯಿತು. ಆದರೆ ಈ ಸಲ ಸ್ಥಿತಿ ತಿರುವುಮುರುವಾಯಿತು. ಪೋಲಿಸರು ಮಂದಿರದ ಪಾವಿತ್ರ್ಯವನ್ನು ಕಾಯ್ದವರು, ಉಗ್ರವಾದಿಗಳು ಭ್ರಷ್ಟಗೊಳಿಸಿದವರು ಎನ್ನುವುದು ಕಣ್ಣಿಗೆ ಹೊಡೆಯುವಂತೆ ಪ್ರಮಾಣಿತವಾಯಿತು ಎಂದೇ ಅಕಾಲಿಗಳು ಪತ್ರಿಕೆಗಳು ಸಹ ಮಂದಿರದಲ್ಲಿ ಉಗ್ರವಾದಿಗಳಿಂದ ನಡೆಸಲಾಗಿದ್ದ ಎಲ್ಲ ಹೊಲಸು-ಅನಾಚಾರಗಳ ವರದಿಗಳನ್ನೂ  ಯಥಾವತ್ತಾಗಿ ಪ್ರಕಟಿಸಿದವು. ಸರಕಾರದ  ಕ್ರಮವನ್ನು  ಯಾವ ರೀತಿಯಲ್ಲಿ ಖಂಡಿಸಬೇಕೆಂಬುದೇ  ಅವರಿಗೆ ತೋಚದಾಯಿತು.

ಓರ್ವ ವೃದ್ಧ ಸಿಖ್ ಮಹನೀಯರು ಸಂಪಾದಕರಿಗೆ ಬರೆದ ಪತ್ರ ಎಲ್ಲ ಪಂಜಾಬೀ ಪತ್ರಿಕೆಗಳಲ್ಲೂ ಪ್ರಕಟವಾಯಿತು.  “ಚಿಕ್ಕ ವಯಸ್ಸಿನಿಂದ ಒಂದು ದಿನವೂ ತಪ್ಪದೆ ಹರಮಂದಿರಕ್ಕೆ  ಹೋಗಿ ತಲೆಬಾಗಿ  ಬರುತ್ತಿದ್ದೆ. ಆದರೆ ಅಲ್ಲಿ ನಡೆದಿರುವ   ಹೊಲಸು ವ್ಯವಹಾರಗಳನ್ನು ಕೇಳಿ, ಓದಿ, ನನ್ನ ಶ್ರದ್ಧೆಯೇ ಭಂಗವಾಗಿದೆ. ಇನ್ನುಮುಂದೆ ಎಂದೆಂದಿಗೂ ಅಲ್ಲಿಗೆ ಕಾಲಿಡಬಾರದೆಂದು ತೀರ್ಮಾನಿಸಿದೇನೆ. ಇಲ್ಲೇ ಮನೆಯಲ್ಲೇ ಗುರುಗ್ರಂಥ ಸಾಹೇಬಗೆ ತಲೆಬಾಗಿ ನನ್ನ  ಪ್ರಣಾಮ ಸಲ್ಲಿಸುವೆ”. ಇದು ಸಾಮಾನ್ಯ ಶ್ರದ್ಧಾಳು ಸಿಖ್ಖನ ಮನಸ್ಸಿನ ಆಳವಾದ ವೇದನೆಯ ಸಂಕೇತ.

ಪ್ರ: ಮಂದಿರದಲ್ಲಿ ಅಡಗಿದ್ದ ಉಗ್ರವಾದಿಗಳು ಶರಣುಬಂದರಲ್ಲ. ಅದರ ಬಗೆಗೆ ಪ್ರತಿಕ್ರಿಯೆ?

ಉ : ಅವರ  ಈ ಕೃತ್ಯದಿಂದಲೂ  ಅವರ  ನಿಜವಾದ ಸ್ವರೂಪ ಬಯಲಾಯಿತು. ಒಂದು ಧ್ಯೇಯಕ್ಕಾಗಿ  ಹೋರಾಡುವಂತಹರಾಗಿದ್ದರೆ ಅವರು ಈ ರೀತಿ ಎಂದಿಗೂ  ಹೇಡಿಗಳಂತೆ  ಕೈಗಳೆತ್ತಿ ಶರಣು ಬರುತ್ತಿರಲಿಲ್ಲ. ನಿರಪರಾಧಿ ಗಂಡಸರು – ಹೆಂಗಸರನ್ನು  ಬಲಿತೆಗೆದುಕೊಳ್ಳುವಂತಹ ಗೂಂಡಾಗಳೇ  ಹೊರತು  ಅವರೇನೂ ವೀರರಲ್ಲ, ಎಂಬುದು ಜನಮಾನಸಕ್ಕೆ ಅರಿವಾದಂತೆ ತೋರುತ್ತದೆ.

ಪ್ರ: ಈ ಸಲ ಸೈನ್ಯದಲ್ಲೂ ಯಾವ ಪ್ರತಿಕ್ರಿಯೆಯೂ ತೋರಿಬಂದ ಸುದ್ದಿ ಬೆಳಕಿಗೆ ಬಂದಿಲ್ಲ.

ಉ : ಇದಕ್ಕೆ ಎರಡು ಕಾರಣಗಳಿವೆ.  ‘ಬ್ಲಾಕ್ ಥಂಡರ್’ ಕಾರ್ಯಾಚರಣೆಯ ಕುರಿತಾದ ನಿಜಸ್ಥಿತಿಯ ಅರಿವು. ಎರಡನೆಯದಾಗಿ, ಹಿಂದಿನ ಸಲ ಕೆಲವು ಸಿಖ್ ಸೈನಿಕರು  ತಮ್ಮ  ಹುಚ್ಚು ಆವೇಶದ  ಕೃತ್ಯದ ಪರಿಣಾಮವಾಗಿ  ಅನುಭವಿಸಬೇಕಾಗಿ ಬಂದ ಪಾಡು. ಅಲ್ಲದೆ ಹಿಂದಿನ ಅನುಭವದಿಂದ ಸೇನಾಧಿಕಾರಿಗಳೂ ಹೆಚ್ಚಿನ  ಜಾಗರೂಕತೆ ವಹಿಸಿರಲೇಬೇಕು  ಹಿಂದಿನ ಸಲ ಸಹ ಒಟ್ಟು ಸಿಖ್ ಸೈನಿಕರ ಸಂಖ್ಯೆಯ ಹೋಲಿಕೆಯಲ್ಲಿ  ಬಂಡಾಯ ಎದ್ದವರು  ಹಿಡಿಯಷ್ಟು  ಮಂದಿ  ಸಹ ಇರಲಿಲ್ಲ. ಇವೆಲ್ಲದರ ಅರ್ಥ ಇಷ್ಟೆ : ಸಾಮಾನ್ಯ ಸಿಖ್ಖರು, ಉಗ್ರವಾದಿಗಳ ಸಮರ್ಥಕರೇನೂ ಅಲ್ಲ. ದಿಲ್ಲಿ ಸರಕಾರದ  ಕುತಂತ್ರ-ಅಕಾಲಿಗಳ ರಾಜಕಾರಣಿಗಳ  ಪ್ರತ್ಯೇಕತಾವಾದ ಇವುಗಳ  ಸುಳಿಯಲ್ಲಿ ಸಿಕ್ಕಿ  ಅವರು ಕಂಗಾಲಾಗಿದ್ದಾರೆ. ಇದರ  ಲಾಭ ಉಗ್ರವಾದಿಗಳು ಪಡೆದುಕೊಳ್ಳುತ್ತಿದ್ದಾರೆ, ಅಷ್ಟೆ.

ಪ್ರ: ‘ಬ್ಲಾಕ್ ಥಂಡರ್’ ಕ್ರಮ ಕೈಗೊಂಡಾಗ ಜಾಣತನದ ರೀತಿ ಉಗ್ರವಾದಿಗಳ ಶರಣಾಗತಿ, ಅನಂತರದ ಪರಿಣಾಮ ಪ್ರತಿಕ್ರಿಯೆಗಳು ಇವುಗಳಿಂದ  ಒಟ್ಟಿನಲ್ಲಿ  ಹೊರತೆಗೆಯಬಹುದಾದ ನಿಷ್ಕರ್ಷೆಗಳೇನು? ಉಗ್ರವಾದ ಇನ್ನು  ಮುಂದಾದರೂ ತಣ್ಣಗಾಗುವ ಲಕ್ಷಣಗಳು ತೋರಿಬರುತ್ತಿವೆಯೇ?

ಉ: ಸದ್ಯಕ್ಕೆ, ಇಷ್ಟು ಹೇಳಬಹುದು : ಉಗ್ರವಾದಿಗಳ  ಬಗೆಗೆ ಸಾಮಾನ್ಯ ಸಿಖ್ ಮಾನಸದಲ್ಲಿ ಹುಟ್ಟಿರುವ ಜಿಗುಪ್ಸೆ- ಹೇಸಿಗೆ, ಉಗ್ರವಾದಿಗಳಿಗೆ ಇದುವರೆಗೆ ಬಹಿರಂಗವಾಗಿ ಸಮರ್ಥನೆ  ನೀಡುತ್ತಾ  ಬಂದಿದ್ದ ಅಕಾಲಿ ರಾಜಕಾರಣಿಗಳ ಸ್ವರ ಮೆತ್ತಗಾಗಿರುವುದು, ಇದಿಷ್ಟು ಕಾಣಬರುತ್ತದೆ. ಆದರೆ ಉಗ್ರವಾದಿಗಳ ಶಕ್ತಿ ಏಕಾಏಕಿ ಕಡಿಮೆ ಆಗಿದೆ ಎನ್ನುವ  ಮಾತು ಮಾತ್ರ ಸುಳ್ಳು. ಅವರೀಗ ತಮ್ಮ ಚದುರಿಹೋದ ಶಕ್ತಿ ಸಂಘಟನೆಗಳನ್ನು  ಮತ್ತೆ ಜೋಡಿಸಿಕೊಳ್ಳುತ್ತಿದ್ದಾರೆ. ಕೆಲ ಕಾಲಾನಂತರ  ದೊಡ್ಡ ಪ್ರಮಾಣದಲ್ಲಿ ಆಕ್ರಮಣ-ಹತ್ಯೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ  ಮಾಡದೆ ಇರಲಾರರು. ತಾವು  ಕಳೆದುಕೊಂಡಿರುವ  ಪ್ರತಿಷ್ಠೆಯನ್ನು  ಮತ್ತೆ  ಗಳಿಸಿಕೊಳ್ಳಲು  ಸರ್ವರೀತಿಯಲ್ಲೂ ಅವರು ಹವಣಿಸಿಯಾರು.

ಪ್ರ: ಕೇಂದ್ರ ಸರಕಾರದ  ನೀತಿಯಲ್ಲಿ ಏನಾದರೂ ಬದಲಾವಣೆಯ ಲಕ್ಷಣ ಕಣ್ಣಿಗೆ ಬೀಳುತ್ತಿದೆಯೇ?

ಉ: ಕೇಂದ್ರ ಸರ್ಕಾರಕ್ಕೆ ‘ನೀತಿ’ ಎಂಬುದೊಂದಿದೆ ಎಂಬುದೇ ಸಂದೇಹಾಸ್ಪದ ! ಇಂದು ಕೈಗೊಂಡ  ನಿರ್ಣಯವನ್ನು  ನಾಳೆಯೇ ಬದಲಾಯಿಸುವ   ಅಭ್ಯಾಸ ಕೇಂದ್ರದ್ದು.  ಇಂದು ಒಂದು ಒಳ್ಳೆಯ ಕ್ರಮ ಕೈಗೊಂಡರೂ ನಾಳೆ ಅದಕ್ಕೆ ವಿರುದ್ಧವಾದ ಕ್ರಮ ಕೈಗೊಂಡು ಹಿಂದಿನ ಕ್ರಮದ ಪರಿಣಾಮಗಳನ್ನೆಲ್ಲ ತೊಳೆದುಹಾಕುವಂತಹ  ಹವ್ಯಾಸ ಅದರದು. ಆದ್ದರಿಂದ ಸದ್ಯದ  ಒಳ್ಳೆಯ ಕ್ರಮದ ನಂತರ ಮುಂದೆ ಯಾವ ಕ್ರಮ ದಿಲ್ಲಿ ಕೈಗೊಳ್ಳಲಿದೆ ಎಂದು ಹೇಳುವುದು ಯಾರಿಗೂ ಸಾಧ್ಯವಿಲ್ಲ. ಏಕೆಂದರೆ ಅವರ ಯೋಚನೆ ಇಂದು ಇದ್ದದ್ದು, ನಾಳೆ ಬದಲಾಗುತ್ತದೆ ! ಈ ಮಧ್ಯೆ ನಿಶ್ಚಿತವಾಗಿ  ತೋರಿಬರುವ  ಕೇಂದ್ರದ ಒಂದೇ ಸೂತ್ರವೆಂದರೆ ಕಾಂಗ್ರೆಸ್ಸಿನ  ರಾಜಕೀಯ ಬೇಳೆಬೇಯಿಸಿಕೊಳ್ಳಲು ಯಾವ ಕ್ರಮ ಅನುಕೂಲವಾದೀತೋ ಅದರ ಅನ್ವಯ.  ಬಹುಶಃ ಮುಂದಿನ ಮಹಾ ಚುನಾವಣೆಗೆ ಮುಂಚೆ ಏನಾದರೂ ಪರಿಹಾರದ ಕ್ರಮ ಕೈಗೊಂಡರೂ ಆಶ್ಚರ್ಯವಿಲ್ಲ.

ಪ್ರ: ಜನಸಾಮಾನ್ಯರ ಮಟ್ಟದಲ್ಲಿ ಉಗ್ರವಾದಿಗಳ ವಿರುದ್ಧವಾಗಿ ಪ್ರತಿಭಟನೆ-ಪ್ರತೀಕಾರಗಳ ಸ್ವರ ಬಲವಾಗುತ್ತಿದೆಯೇ?

ಉ: ಅಹುದು, ಸಂಘದ ಸ್ವಯಂಸೇವಕರಿಂದ, ಹಾಗೂ ಅವರ ಪ್ರಯತ್ನದ  ಪ್ರಭಾವದಿಂದ ಇತರ ಜನರಲ್ಲೂ ನಾಲ್ಕಾರು ಕಡೆ ಬಲವಾದ ಪ್ರತೀಕಾರದ ಕ್ರಮಗಳು ಜರುಗಿವೆ. ಆಕ್ರಮಣಕ್ಕೆ ಬಂದ ಉಗ್ರವಾದಿಗಳನ್ನು  ಹಿಡಿದು ಹೊಡೆದುಹಾಕಿರುವ ಪರಾಕ್ರಮದ  ನಿದರ್ಶನಗಳು ತೋರಿಬಂದಿವೆ. ಅಲ್ಲದೆ ಸಿಖ್ಖರು-ಸಿಖ್ಖೇತರ ಹಿಂದುಗಳ ನಡುವಣ ಬಾಂಧವ್ಯಕ್ಕಾಗಿ ಬಲಿಯಾಗುವಂತಹ ಉದಾಹರಣೆಗಳೂ ತೋರಿಬಂದಿವೆ. ಪಂಜಾಬಿನ ಪರಿಸ್ಥಿತಿಯಲ್ಲಿ ಆಸೆ-ಭರವಸೆ ನೀಡುವ ಶುಭಚಿಹ್ನೆ ಇದು.

 ಹೊ.ವೆ.ಶೇಷಾದ್ರಿ

ಮುಂದುವರೆಯುವುದು

   

Leave a Reply