ನಮ್ಮ ನಿಮ್ಮ ನಡುವೆ
ಪ್ರ : ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿ ಪ್ರಕಾರ ಪ್ರತ್ಯೇಕ ಸ್ಥಾನಮಾನ ಕೊಡಲಾಗಿದೆ. ಇದು ಏಕೆ? ಯಾವಾಗ ಇದು ಕೊನೆಗೊಳ್ಳುವುದು ?
ಶ್ರೀ ಎನ್. ವೆಂಕಟರಮಣ, ಮುಳಬಾಗಿಲು.
ಉ : ನಮ್ಮ ರಾಜ್ಯಾಂಗ ರೂಪುಗೊಳ್ಳುವ ಮುನ್ನವೇ ಬಿತ್ತಿದ ವಿಷಬೀಜ ಅದು. 1947ರ ಅಕ್ಟೋಬರ್ನಲ್ಲಿ ಪಾಕಿಸ್ಥಾನವು ಕಾಶ್ಮೀರವನ್ನು ಕಬಳಿಸಲು ತನ್ನ ಸೈನ್ಯ ನುಗ್ಗಿಸಿತು. ಅದರಿಂದ ಪಾರಾಗಲು ಕಾಶ್ಮೀರದ ಮಹಾರಾಜರು ಭಾರತದ ಮೊರೆಹೊಕ್ಕರು. ಭಾರತಕ್ಕೆ ತಮ್ಮ ರಾಜ್ಯವನ್ನು ಸೇರ್ಪಡೆ ಮಾಡಿದರು. ಭಾರತದ ವೀರ ಸೈನಿಕರು-ಜಮ್ಮು ಕಾಶ್ಮೀರದ ಸಂಘ ಸ್ವಯಂಸೇವಕರ ಸಾಹಸದ ನೆರವಿನಿಂದ–ಕಾಶ್ಮೀರವನ್ನು ಉಳಿಸಿದರು. ಅಲ್ಲಿಗೆ ಆ ಸಮಸ್ಯೆ ಬಗೆಹರಿಯಬೇಕಾಗಿತ್ತು. ಆದರೆ ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಸಂದರ್ಭದಲ್ಲಿ ಶೇಖ್ ಅಬ್ದುಲ್ಲಾರನ್ನು ಮೇಲಕ್ಕೆ ಎತ್ತಿ ಪಟ್ಟ ಕಟ್ಟಿದರು ನಮ್ಮ ಅಂದಿನ ಕೇಂದ್ರ ಮಹಾನಾಯಕ ಪಂ. ಜವಾಹರ್ಲಾಲ್ ನೆಹರೂ ಅವರು. ಭಾರತದಿಂದ ಪ್ರತ್ಯೇಕ ಗೊಳಿಸಿ ಕಾಶ್ಮೀರವನ್ನು ಸ್ವತಂತ್ರ ರಾಜ್ಯವನ್ನಾಗಿ ಮಾಡಲು ಹವಣಿಸಿದ ವ್ಯಕ್ತಿ ಶೇಖ್ ಅಬ್ದುಲ್ಲ. ತನ್ನ ಉದ್ದೇಶಕ್ಕೆ ಪೂರಕವಾಗಿ, ಮೊದಲ ಮೆಟ್ಟಿಲಾಗಿ, ಆತ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ – ಅಧಿಕಾರಗಳಿಗಾಗಿ ಒತ್ತಾಯಿಸಿದ ಅದಕ್ಕೆ ‘ಅಸ್ತು’ ಎಂದರು ಪಂ. ನೆಹರು.
ಕಾಶ್ಮೀರಕ್ಕೆ ನೀಡಿದ ವಿಶೇಷ ಅಧಿಕಾರಗಳ ಸ್ವರೂಪ ಗಮನಿಸಿದಾಗ ತೋರಿಬರುವ ಮುಖ್ಯ ಸಂಗತಿ ಇದು : ಕಾಶ್ಮೀರದ ಜತೆಗೆ ಕೂಡಿರುವ ಜಮ್ಮುವಿನ ಮಹತ್ವ ಕಡಿತಗೊಳಿಸಿ ಸರಕಾರಿ ಆಡಳಿತದಲ್ಲಿ ಹಿಂದುಗಳಿಗೆ ಅವರ ಜನಸಂಖ್ಯೆಯ ಪ್ರಮಾಣಕ್ಕಿಂತ ಕಡಿಮೆ ಅಧಿಕಾರ ಸಿಕ್ಕುವಂತೆ ಮಾಡಿ ಕಾಶ್ಮೀರದ ಮೇಲೆ ಪೂರ್ಣವಾಗಿ ಮುಸ್ಲಿಮರ ಹತೋಟಿ ಉಳಿಸಿಟ್ಟುಕೊಳ್ಳುವಂತೆ ಮಾಡಲಾಗಿದೆ. ಕಾಶ್ಮೀರದಲ್ಲಿನ ಮತದಾರ ಕ್ಷೇತ್ರಗಳಿಗೆ ಮತದಾರರ ಸಂಖ್ಯೆ ಕಡಿಮೆಗೊಳಿಸಿ, ಜಮ್ಮೂವಿನ ಕ್ಷೇತ್ರಗಳಿಗೆ ಆ ಸಂಖ್ಯೆ ಹೆಚ್ಚಿಸಲಾಗಿರುವುದು. ಜಮ್ಮುವಿನಲ್ಲಿನ 50 ಸಾವಿರಕ್ಕೂ ಮಿಕ್ಕಿ ಹಿಂದುಗಳಿಗೆ ವಿಧಾನಸಭಾ ಚುನಾವಣೆಗಳಲ್ಲಿ ಮತದಾನದ ಹಕ್ಕನ್ನೇ ನೀಡದಿರುವುದು, ಪಾಕಿಸ್ತಾನದಿಂದ ಮರಳಿಬರುವ ಮುಸಲ್ಮಾನರಿಗೆ ಪ್ರಜಾಹಕ್ಕಿನ ಭರವಸೆ ನೀಡಿರುವುದು, ಭಾರತದ ಬೇರೆ ಭಾಗಗಳಿಂದ ಕಾಶ್ಮೀರಕ್ಕೆ ಹೋಗಿ ನೆಲೆಸಲು ಜನರಿಗೆ ಅವಕಾಶ ನೀಡದಿರುವುದು-ಇವೆಲ್ಲವೂ ಅದೇ ಉದ್ದೇಶದಿಂದ ರೂಪಿಸಲಾಗಿದೆ. ಈಚೆಗೆ ಡಾ|| ಫರೂಕ್ ಅಬ್ದುಲ್ಲಾರು”ಕಾಶ್ಮೀರದ ‘ಮುಸ್ಲಿಂ ಸ್ವರೂಪ’ಕ್ಕೆ ಯಾವ ಧಕ್ಕೆಯೂ ಬರುವಂತಿಲ್ಲ” ಎಂದು ಬಹಿರಂಗವಾಗಿ ಹೇಳಿದ್ದು ಇದೇ ಭರವಸೆಯ ಮೇಲೆ.
ಬೇರೆ ಯಾವುದೇ ಹಿಂದು ಬಹುಸಂಖ್ಯಾತ ಸಂಸ್ಥಾನವನ್ನು ಭಾರತದೊಂದಿಗೆ ವಿಲೀನಗೊಳಿಸಿಕೊಳ್ಳುವಾಗ ಅದರ ಮೂಲ ‘ಹಿಂದು ಸ್ವರೂಪ’ವನ್ನು ಉಳಿಸಿಟ್ಟುಕೊಳ್ಳುವಂತೆ ವಿಶೇಷ ಅಧಿಕಾರ ನೀಡದ ನಮ್ಮ ನಾಯಕರು ಕಾಶ್ಮೀರದ ವಿಷಯದಲ್ಲಿ ಮಾತ್ರ ಬೇರೆಯಾಗಿ ಏಕೆ ನಡೆದುಕೊಂಡರು? ಈ ಪ್ರಶ್ನೆಗೆ ಉತ್ತರ ಬಹು ಸುಲಭ. ದೇಶ ವಿಭಜನೆಗೆ ಒಪ್ಪಿಕೊಳ್ಳುವಲ್ಲಿ ನಮ್ಮ ನಾಯಕರ ಮನೋಧರ್ಮ ಏನಿತ್ತೋ, ಅದರದೇ ಮುಂದುವರೆದ ಆವೃತ್ತಿ ಇದು. ಮುಸಲ್ಮಾನರ ಸಂಖ್ಯೆ ಹೆಚ್ಚಿಗೆ ಇದ್ದಲ್ಲಿ ಅವರ ಅಧಿಪತ್ಯ ಇರಬೇಕಾದುದು ಅವರ ಹಕ್ಕು, ಎನ್ನುವ ಸೂತ್ರ ಅದು.
ಮುಸಲ್ಮಾನರೂ ಭಾರತದ ಇತರ ಎಲ್ಲ ಪ್ರಜೆಗಳಂತೆಯೇ, ಎಲ್ಲರಿಗೂ ಸಮಾನ ಹಕ್ಕು ಹಾಗೂ ಕರ್ತವ್ಯ ಇರತಕ್ಕದ್ದು-ಎನ್ನುವ ಏಕರಾಷ್ಟ್ರ – ಏಕಜನಾಂಗದ ಬುನಾದಿ ತತ್ವವನ್ನು ಒಪ್ಪಿ ನಡೆಯುವಂತಹ ನಾಯಕರು ಭಾರತದ ಕರ್ಣಧಾರರಾದಾಗ ಮಾತ್ರ ದೇಶಮುರುಕುತನದ 370ರ ಈ ವಿಧಿ ಕೊನೆಗೊಂಡೀತು.
ಪ್ರ : ಕೆಲವು ಮಂತ್ರಿಗಳು – ರಾಜಕಾರಣಿಗಳು ಬಕ್ರೀದ್-ಕ್ರಿಸ್ಮಸ್ಗಳಂತಹ ಪ್ರಸಂಗಗಳಲ್ಲಿ ವಿಶೇಷವಾಗಿ ಶುಭಾಶಯಗಳನ್ನು ಕೋರುತ್ತಾರೆ. ಅವರ ಉತ್ಸಾಹ ಹಿಂದು ಹಬ್ಬಗಳಂದು ತೋರಿಬರುವುದಿಲ್ಲವಲ್ಲ ?
-ಶ್ರೀ ನ. ಸೀತಾರಾ, ದೊಡ್ಡ ತೋಟ
ಉ : ಮುಸಲ್ಮಾನರು – ಕ್ರೈಸ್ತರಾದರೆ “ಬೇರೆ”ಯವರು, ಹಿಂದುಗಳಾದರೆ “ನಮ್ಮ”ವರೇ, ಬೇರೆಯರಿಗಾದರೆ ವಿಶೇಷವಾಗಿ ಒಲವನ್ನು ಪ್ರದರ್ಶಿಸಬೇಕಾಗುತ್ತದೆ, ನಮ್ಮವರು ತಮ್ಮವರು ಎನಿಸಿಕೊಂಡವರಿಗೆ ಆ ರೀತಿಯ ಪ್ರದರ್ಶನದ ಅಗತ್ಯವೆಲ್ಲಿ?-ಎನ್ನುವ ಅನಿಸಿಕೆ ಅಂತಹವರದಾಗಿರಬೇಕು ! ಎಂದರೆ ಮೂಲತಃ ಮುಸಲ್ಮಾನರು – ಕ್ರೈಸ್ತರು ತಮ್ಮವರಲ್ಲ ಎನ್ನುವ ಹಿನ್ನೆಲೆ ಅದಿರಬೇಕು – ಇನ್ನು ಆ ‘ಒಲವಿ’ನ ಹಿಂದಿನ ಪ್ರೇರಣೆ ಯಾವುದಿರಬಹುದು-ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು !
ಪ್ರ : ನಮ್ಮ ದೇಶದ ಮೇಲೆ ವಿದೇಶೀ ಸಾಲದ ಹೊರೆ ಹೆಚ್ಚುತ್ತಿದೆ. ಹೀಗೆಯೇ ಮುಂದುವರೆದರೆ ನಾಳೆ ನಮ್ಮ ರಾಷ್ಟ್ರ ತುಂಡಾಗಬಹುದೇ ?
-ಶ್ರೀ ಆರ್. ಕೆ. ಮಾರುತಿ, ಹುಬ್ಬಳ್ಳಿ
ಉ : ತುಂಡಾಗುವ ಅಗತ್ಯವೇನೂ ಇಲ್ಲ – ಇಡೀ ದೇಶವೇ ದಿವಾಳಿ ತೆಗೆದು ಪ್ರಬಲ ರಾಷ್ಟ್ರಗಳಿಗೆ ಒತ್ತೆಯಾಳಗಬಹುದು ! ವಿದೇಶಿ ಸಾಲದ ಪ್ರಮಾಣ ಎಷ್ಟಾಗಿದೆ ಎಂದು ಇಂದು ಜನಸಾಮಾನ್ಯರಿಗೆ ಬಹುಶಃ ತಿಳಿಯದು. ಭಾರತದ ಪ್ರತಿ ಪ್ರಜೆಯ ತಲೆಯ ಮೇಲೂ ಸುಮಾರು 8000 ರೂ. ಗಳಷ್ಟು ಅದರ ಭಾರ ಇದೆ. (ತಿ. ತಾ. ಶರ್ಮರು ಹೇಳುತ್ತಿದ್ದಂತೆ ನಾವೆಲ್ಲರೂ ‘ಬಡ್ಡಿ ಮಕ್ಕಳೇ’ ಆಗಿದ್ದೇವೆ !) ಇನ್ನು ಈಗ ತರುತ್ತಿರುವ ಸಾಲ ಹೇಗೆ ಖರ್ಚಾಗುತ್ತಿದೆ, ಬಲ್ಲಿರಾ ? ಯಾವುದೇ ಸಾಲ ತೆಗೆದಕೊಳ್ಳುವ ಉದ್ದೇಶ ಇನ್ನೂ ಹೆಚ್ಚಿನ ಉತ್ಪಾದನೆ – ಲಾಭ ಗಳಿಸುವ ಸಲುವಾಗಿ ತಾನೆ ? ಸಾಮಾನ್ಯ ವ್ಯಾಪಾರ – ವಹಿವಾಟು ನಡೆಯುವುದೆಲ್ಲ ಇದೇ ರೀತಿ. ಆದರೆ ಯಾವನಾದರೂ ವ್ಯಾಪಾರಿಯೊಬ್ಬ ತನ್ನ ವ್ಯಾಪಾರಕ್ಕೆಂದು ಸಾಲ ತಂದು ಅದರಲ್ಲಿ ಹೆಚ್ಚಿನ ಭಾಗವೆಲ್ಲ ಹಿಂದಿನ ಸಾಲದ ಬಡ್ಡಿ ತೀರಿಸಲು ಹಾಗೂ ತನ್ನ ಮನೆ ಖರ್ಚು-ಮಗಳ ಮದುವೆ-ತೀರ್ಥಯಾತ್ರೆಗಳಿಗಾಗಿ ಖರ್ಚುಮಾಡುತ್ತಾ ಹೋಗುತ್ತಾನೆನ್ನಿ. ಅದೇ ರೀತಿಯಲ್ಲಿ ನಮ್ಮ ಸರಕಾರದ್ದೂ ಸಾಲಕೊಳ್ಳುವ-ಸಾಲ ‘ತೀರಿಸುವ’, ಸಾಲದ ಹಣ ವ್ಯಯಿಸುವ, ವೈಖರಿ ಸಾಗಿದೆ. ಒಂದು ದೇಶದ ಒಳಗಾದರೆ ಅಂತಹ ವ್ಯಾಪಾರಿ ‘ದಿವಾಳಿ’ ಆದನೆಂದು ಸಾರಿಕೊಂಡರೆ ಆಯಿತು-ಮಾನಮರ್ಯಾದೆ (ಇದ್ದಲ್ಲಿ) ಹೋಗುತ್ತದೆ, ಅಷ್ಟೆ ! ಒಮ್ಮೊಮ್ಮೆ ಮಾತ್ರ ಸೆರೆಮನೆಗೆ ಹೋಗಬೇಕಾಗುತ್ತದೆ. ಆದರೆ ಹೊರನಾಡುಗಳ ವ್ಯವಹಾರದಲ್ಲಿ ಮಾತ್ರ ಸೆರೆಮನೆಗೆ ಹೋಗಬೇಕಾಗುತ್ತದೆ. ಆದರೆ ಹೊರನಾಡು ವ್ಯವಹಾರದಲ್ಲಿ ಮಾತ್ರ ‘ಸೆರೆಮನೆ’ ತಪ್ಪಿದ್ದೇ ಅಲ್ಲ-‘ದಾಸ್ಯ’ ಕಟ್ಟಿಟ್ಟದ್ದೇ.
ಇದಕ್ಕೇನು ಪರಿಹಾರ ? ನಿಮ್ಮಂತಹ ವಿಚಾರವಂತರಿಗೆ ಬರೆಯುವ ಅಗತ್ಯವೆಲ್ಲಿ ?
ಪ್ರ : ಹಿಂದುಗಳ ಈಗಿನ ಪರಿಸ್ಥಿತಿಗೆ ಯಾವ ದೌರ್ಬಲ್ಯ ಕಾರಣ ?
-ಶ್ರೀ ದಯಾನಂದ ಮುಪ್ಪಯ್ಯನವರ ಮಠ, ಬೈಲಮಂಗಲ
ಉ : ತಾವು ಮೊದಲಿಗೆ ಹಿಂದುಗಳು, ಈ ನಾಡಿನ ಮಕ್ಕಳು, ಎಂಬ ಸತ್ಯದ ಅರಿವನ್ನೇ ಕಳೆದುಕೊಂಡು ತಮ್ಮ ಸ್ವಂತದ ಸ್ವಾರ್ಥವನ್ನೋ, ಜಾತಿಯನ್ನೋ, ಮತವನ್ನೋ ಪುಢಾರಿಯನ್ನೋ ತಲೆಯ ಮೇಲೆ ಏರಿಸಿಕೊಂಡು ಕೂಡಿರುವುದರ ಫಲ-ಇಂದಿನ ಅವರ ಸ್ಥಿತಿ ನಾವೆ ಬಿಟ್ಟು ಕಲ್ಲು ಕಟ್ಟಿಕೊಂಡು ಈ ಜಗತ್ತಿನ ಸಾಗರದಲ್ಲಿ ಈಜಲು ಹೊರಟಂತೆ ಅದು. ಆದರೆ ಈಗೀಗ ನಮಗೆ ಈ ಆತ್ಮನಾಶಕ ತಪ್ಪಿನ ಅರಿವು ಆಗತೊಡಗಿದೆ. ಕಲ್ಲನ್ನು ಕಳಚಿಕೊಂಡು ನಾವೆಯತ್ತ ಕೈಚಾಚುವ ಯತ್ನ ಸಾಗಿದೆ. ನಿಮ್ಮ ಪ್ರಶ್ನೆಯೇ ಇದಕ್ಕೊಂದು ಸಾಕ್ಷಿ ಅಲ್ಲವೇ ?
ಪ್ರ : ಫಿಜಿಯಲ್ಲಿನ ಭಾರತ ಮೂಲದವರ ಕೈಯಲ್ಲಿನ ಲೋಕತಾಂತ್ರಿಕ ಅಧಿಕಾರವನ್ನು ಕಸಿದುಕೊಂಡ ರಬೂಕನ ವಿರುದ್ಧ ಭಾರತ ಅಂತರ ರಾಷ್ಟ್ರೀಯ ಸ್ತರದಲ್ಲಿ ಉಗ್ರವಾಗಿ ಏಕೆ ಪ್ರತಿಭಟಿಸುತ್ತಿಲ್ಲ ?
-ಶ್ರೀ ಕೆ. ಎಂ. ಕುಲಕರ್ಣಿ, ಆಳಂದ
ಉ : ತನ್ನ ಸ್ವಂತ ಮನೆಯಲ್ಲಿನ ಸ್ವಂತ ಮಂದಿಯ ಬಗೆಗೇ ಕಾಳಜಿ ವಹಿಸದಂತಹವರು ಹೊರಗಡೆ ನೆಲೆಸಿರುವ ತನ್ನ ಬಂಧು ಭಗಿನಿಯರ ಬಗೆಗೆ ಚಿಂತಿಸಿಯಾರೇ ? ಹೊರನಾಡುಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತರೂ ತಮ್ಮ ಸ್ವಂತ ಬಾಂಧವರೇ ಎನ್ನುವ ಕಳಕಳಿ ಇದ್ದಾಗಲೇ ಅಲ್ಲವೇ ಉಗ್ರ ಪ್ರತಿಭಟನೆ ಮಾತ್ರ ಅಲ್ಲ, ಹಿತರಕ್ಷಣೆಗಾಗಿ ಸಾಧ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದು ?
ಪ್ರ : ಇಂದಿನ ಶಿಕ್ಷಣದ ಮಟ್ಟದಲ್ಲಿ ಕುಸಿತ-ಆ ಕ್ಷೇತ್ರದಲ್ಲಿ ರಾಜಕೀಯ ಕೈವಾಡಕ್ಕೆ ಹೊಣೆ ಯಾರು?
-ಶ್ರೀ ರಾಜು ಭಂಡಾರಿ, ಕೊಪ್ಪ
ಉ : ಯಾರು ತಾನೆ ಹೊಣೆ ಅಲ್ಲ ? ಅದು ಮೊದಲು ಹೇಳಿ. ಶಿಕ್ಷಕ-ಪಾಲಕ-ಶಾಸಕ-ಬಾಲಕ-ಯಾರು ತಾನೆ ಇದರಿಂದ ಹೊರತು ? ಆದರೆ ಶಾಸಕರ ‘ಕೊಡುಗೆ’ ಹೆಚ್ಚು ಎಂಬುದರಲ್ಲಿ ಸಂದೇಹವಿಲ್ಲ-ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ ಎಂಬಂತೆ ಸ್ಥಿತಿ ಆಗಿದೆ. ಆದರೆ ಅವರನ್ನು ನಮ್ಮ ತಲೆಯ ಮೇಲೆ ಕೂಡಿಸಿಕೊಂಡಿರುವವರೂ ನಾವೇ ಅಲ್ಲವೇ ?
ಪ್ರ : ಈಚೆಗೆ ಜಮಶೆಡ್ಪುರದಲ್ಲಿ ಭಾಜಪವು ಭಾರತವನ್ನು ‘ಹಿಂದು ರಾಷ್ಟ್ರ’ವೆಂದು ಸಾರಲು ತನ್ನ ವಿರೋಧ ವ್ಯಕ್ತಪಡಿಸಿದೆ – ಇದು ನ್ಯಾಯವೇ ?
-ಶ್ರೀ ಚಿದಂಬರ ದೇಶಪಾಂಡೆ, ಪಾಚ್ಛಾಪುರ
ಉ : ಆ ಪಕ್ಷದ ಅಧ್ಯಕ್ಷರು ಮತ್ತು ಇತರೇ ಅನೇಕ ಪ್ರಮುಖರು ಸಂಘದ ಕಟ್ಟಾ ಸ್ವಯಂಸೇವಕರು ಎಂಬುದನ್ನು ನೀವು ಜ್ಞಾಪಿಸಿಕೊಂಡಿದ್ದಲ್ಲಿ ಈ ಪ್ರಶ್ನೆಯೇ ನಿಮಗೆ ಏಳುತ್ತಿರಲಿಲ್ಲ. ಆ ರೀತಿ ಅವರು ಹೇಳಲು ಸಾಧ್ಯವೇ ಇಲ್ಲ, ಪತ್ರಿಕೆಗಳಲ್ಲಿ ವಿಕೃತವಾಗಿ ವರದಿ ಆಗಿರಬೇಕು, ಎನ್ನುವ ನಿಷ್ಕರ್ಷೆಗೆ ನೀವೇ ಬರುತ್ತಿದ್ದಿರಿ. ಹಿಂದುರಾಷ್ಟ್ರ, ಹಿಂದುರಾಜ್ಯ-ಭಾರತೀಯ ರಾಷ್ಟ್ರ-ಭಾರತದ ರಾಷ್ಟ್ರೀಯತೆ-ಈ ಶಬ್ದಗಳ ನಿಜಸ್ವರೂಪ ಏನು ಎಂಬುದರ ತಲೆಬಾಲ ತಿಳಿಯದಂತಹ ಪತ್ರಿಕಾ ವರದಿಗಾರನೇ ಆ ರೀತಿ ವರದಿ ಮಾಡಿರಬೇಕು ಎಂಬುದು ಸ್ವಯಂವೇದ್ಯ. ನಿಷ್ಠಾವಂತ ಸಂಘ ಸ್ವಯಂಸೇವಕರಿಗಿಂತ ಮಿಗಿಲಾಗಿ ವರದಿಗಾರನೊಬ್ಬನ ಮಾತಿನ ಮೇಲೆ ನಂಬುಗೆ ಇಡುವುದು ಯಾವ ನ್ಯಾಯ ?
ಪ್ರ : ಜನತಾ ಪಕ್ಷದಲ್ಲಿದ್ದುಕೊಂಡು ಶಹಾಬುದ್ದೀನರು ರಾಮಜನ್ಮಭೂಮಿಯ ಬಗೆಗೆ ಮುಸಲ್ಮಾನರ ಪಕ್ಷ ವಹಿಸುವಾಗ ಆ ಪಕ್ಷದಲ್ಲಿನ ಹಿಂದು ನಾಯಕರು ಹಿಂದುಗಳ ಪರವಾಗಿ ಧ್ವನಿ ಏಕೆ ಎತ್ತುವುದಿಲ್ಲ ?
-ಶ್ರೀ ಸೋಮಶೇಖರ ಶೆಟ್ಟಿ ದೇವಶ್ಯ, ಗುರುವಾಯನಕೆರೆ
ಉ : ಹಿಂದು ರಾಜಕಾರಣಿಗಳಲ್ಲಿ ಒಂದು ದೊಡ್ಡ ಭ್ರಾಂತಿ ಇದೆ. ತಮ್ಮ ನಾಯಕತ್ವದ ಪಟ್ಟ ಉಳಿಸಿಕೊಳ್ಳಲು ಶಹಾಬುದ್ದೀನರಂತಹ ಅಗತ್ಯವಿದೆ, ಎನ್ನುವ ಭ್ರಾಂತಿ. ಆದರೆ ವಾಸ್ತವಿಕವಾಗಿ, ತಮಗೆ ಮುಖ್ಯ ಬೆಂಬಲ ಇರುವುದು-ಅಥವಾ ಇಲ್ಲದಿರುವುದು-ಹಿಂದುಗಳಿಂದ ಎನ್ನುವುದನ್ನೇ ಅವರು ಮರೆತಿದ್ದಾರೆ. ಕೇವಲ ಜನತಾ ಪಕ್ಷದವರೇನು, ಬಹುತೇಕ ಹಿಂದು ರಾಜಕಾರಣಿಗಳ ಪಾಡೇ ಅದಾಗಿದೆ. ಆದರೆ ಇವರೆಲ್ಲರ ಭ್ರಮೆಯನ್ನು ಕಳೆಯುವ ಅಸ್ತ್ರ ಹಿಂದುಗಳ ಕೈಯಲ್ಲೇ ಇದೆ. ಬರೇ ಹಿಂದು ನಾಯಕರದೇ ಅಲ್ಲ, ‘ತಮ್ಮನ್ನು ಬಿಟ್ಟರೆ ಇವರಿಗೆ ಗತಿ ಇಲ್ಲ’ ಎನ್ನುವಂತಹವರ ಶಹಾಬುದ್ದೀನರಂತಹವರ ಗೀಳನ್ನೂ ಅವರೇ ಗುಣಪಡಿಸಬಲ್ಲರು. ಇವರೆಲ್ಲರ ರಾಜಕೀಯ ಭವಿಷ್ಯವನ್ನು ತಿದ್ದುವ ಶಕ್ತಿ ತಮ್ಮ ಕೈಯಲ್ಲೇ ಇದೆ ಎನ್ನುವ ಮಾತು ಅವರಿಗೆ ನೆನಪಾಗಬೇಕು-ತಮ್ಮ ಓಟನ್ನು ಪೆಟ್ಟಿಗೆಗೆ ಹಾಕುವ ಗಳಿಗೆಯಲ್ಲಿ, ಅಷ್ಟೆ !
ಪ್ರ : ಕೋಮುವಾದಿಗಳು ಎಂದರೆ ಯಾರು ?
-ಶ್ರೀ ವಿಜಯಕೃಷ್ಣ, ದೊಡ್ಡತೋಟ
ಉ : ಕೋಮುವಾದ’, ‘ಕೋಮುವಾದಿ’ ಈ ಶಬ್ದಗಳನ್ನು ಬೇರೆಯವರನ್ನು ಖಂಡಿಸುವ ನೆಪದಲ್ಲಿ, ಪದೇ ಪದೇ ಉಚ್ಛರಿಸುವಂತಿರುವಂತಹವರು ಅವರು. ಮನೋವಿಜ್ಞಾನದ ಸಿದ್ಧಾಂತವೇ ಹಾಗಿದೆ. ಯಾವ ಮಾತನ್ನು ಮತ್ತೆ ಮತ್ತೆ ಹೇಳುತ್ತಿರುವೆವೋ, ಮತ್ತೆ ಮತ್ತೆ ಚಿಂತಿಸುತ್ತಿರುವೆವೋ ನಮ್ಮ ಮನಸ್ಸೂ ಅದರಂತೆಯೇ ಆಕಾರ ತಾಳುತ್ತದೆ. ವಿರೋಧದ ರೀತಿಯಲ್ಲಿ ನೆನೆಸಿಕೊಂಡರೂ ಸರಿಯೇ ಪರಿಣಾಮ ಮಾತ್ರ ಅದೇ. ಸದಾ ರಾಮನ ವಿರೋಧದಿಂದ ಮನಸ್ಸು ಕುದಿಯುತ್ತಿದ್ದ ರಾವಣ ಸಾಯುವಾಗ ‘ಶ್ರೀರಾಮ’ ಎಂದು ಉಚ್ಛರಿಸಿ ತನ್ನ ಕೊನೆಯುಸಿರು ಎಳೆದದ್ದನ್ನು ಹಾಗೂ ಅವನ ಆತ್ಮತೇಜ ಶ್ರೀರಾಮನ ತೇಜದೊಂದಿಗೆ ಒಂದಾಗಿದ್ದನ್ನೂ ದೂರದರ್ಶನದಲ್ಲಿ ನೀವು ಕಾಣಲಿಲ್ಲವೇ ? ರಾವಣ ಶ್ರೀರಾಮನಂತಹ ದೇವಪುರುಷನ ‘ವಿರೋಧಭಕ್ತಿ’ಯಿಂದ ಉದ್ಧಾರವಾದ. ಆದರೆ ಕೋಮುವಾದದ ಭೂತವನ್ನು ನಿತ್ಯ ಸ್ಮರಿಸಿದಾಗ ಅದೇ ಭೂತ ಬಂದು ಮೆಟ್ಟಿಕೊಳ್ಳುವುದೂ ಸ್ವಾಭಾವಿಕ.
ಪ್ರ : ತಂದೆತಾಯಿಗಳಿಂದಾಗಿಯೇ ಮಕ್ಕಳು ಬೀದಿಗೆ ಬೀಳುವಂತಾದರೆ ?
-ಶ್ರೀ ರವಿರಾಜ ಹೊನವಾಡ, ಗಜೇಂದ್ರಗಡ
ಉ : ನಾಳೆ ಮಕ್ಕಳು ದೊಡ್ಡವರಾದ ಮೇಲೆ ಅವರ ತಂದೆತಾಯಿಗಳು ಬೀದಿಗೆ ಬೀಳುವಂತಾದಾರು ! ಆದ್ದರಿಂದ ಕೊನೆಪಕ್ಷ ಈಗ ಮಕ್ಕಳಾಗಿರುವವರಾದರೂ ಎಚ್ಚರ ವಹಿಸಲಿ-ಆ ರೀತಿಯ ಅನಾಹುತಕ್ಕೆ ಗುರಿಯಾಗದಿರುವಂತೆ !
ಹೊ.ವೆ.ಶೇಷಾದ್ರಿ ಮುಂದುವರೆಯುವುದು