ಚಿಂತನಕ್ಷಣ – 16

ಹೊ.ವೆ.ಶೇಷಾದ್ರಿ - 0 Comment
Issue Date : 25.07.2014

ಅತ್ತೆ ಸೊಸೆಯ’ ಆ ದೃಶ್ಯದ ಅರ್ಥವೇನು?

ಮಧ್ಯಾಹ್ನ ಮೂರರ ಸಮಯ. ದಿಲ್ಲಿಯ ಸಂಘ ಕಾರ್ಯಾಲಯದಲ್ಲಿದ್ದೆ. ದೂರವಾಣಿ ಗಂಟೆ ಬಾರಿಸಿತು. ಪ್ರಾಂತ ಸಂಘಚಾಲಕ ಪ್ರಕಾಶದತ್ತ ಭಾರ್ಗವರ ಮನೆಯಿಂದ ಸುದ್ದಿ ಮುಟ್ಟಿತು. ಖಾಯಿಲೆಯಲ್ಲಿದ್ದ ಅವರ ಮಗ ರವೀಂದ್ರದತ್ತರ ಸ್ಥಿತಿ ಉಲ್ಬಣಗೊಂಡಿದೆ ! ಕೂಡಲೇ ನಾವು ನಾಲ್ಕಾರು ಮಂದಿ ಆಸ್ಪತ್ರೆಗೆ ಧಾವಿಸಿದೆವು. ವಾರ್ಡ್ ಬಳಿ ತಲುಪುತ್ತಿದ್ದಂತೆ ಭಾರ್ಗವರು “ಸಾರಾ ಖೇಲ್ ಸಮಾಪ್ತ ಹೋಗಯಾ” ಅಂದರು-ನನ್ನ ಕೈ ಹಿಡಿದುಕೊಂಡು. ತಡೆದುಕೊಳ್ಳಲು ಯತ್ನಿಸಿದಷ್ಟೂ ಒಳಗಿನಿಂದ ಒತ್ತರಿಸಿಕೊಂಡು ಬರುತ್ತಿದ್ದ ಕಣ್ಣೀರಿನಿಂದ ಒದ್ದೆಯಾದ ಮುಖ. ಎಂಭತ್ತರ ಸನಿಹಕ್ಕೆ ಮುಟ್ಟಿರುವ ವೃದ್ಧರು ಅವರು. ತೀರಿಕೊಂಡಿದ್ದ ಅವರ ಮಗನೇ ಹಿರಿಯವ. ಇನ್ನೂ ನಲವತ್ತೊಂದರ ಹರೆಯ. ಒಂದು ತಿಂಗಳ ಹಿಂದೆ ಗಟ್ಟಿಮುಟ್ಟಾಗಿದ್ದಾತ. ಇದ್ದಕ್ಕಿದ್ದಂತೆ ಜ್ವರವೇರಿ, ಡಾಕ್ಟರರ ಗುಳಿಗೆ ನುಂಗಿ, ಜ್ವರವಿಳಿದು ಆನಂತರ ಕಾಲಿನಿಂದ ಪ್ರಾರಂಭವಾದ ಲಕ್ವದ ಹೊಡೆತ ಒಂದೇ ಸಮನೆ ಮೇಲೇರುತ್ತಾ ಕೊನೆಗೆ ತಲೆಗೂ ಮುಟ್ಟಿ ಆತನನ್ನು ಆಹುತಿ ತೆಗೆದುಕೊಂಡಿತ್ತು.

ರವೀಂದ್ರರ ತಾಯಿ, ಹೆಂಡತಿ ಎಲ್ಲರೂ ಆಸ್ಪತ್ರೆಗೆ ಧಾವಿಸಿದ್ದರು. ತಾಯಿ ಎಪ್ಪತ್ತು ದಾಟಿದ್ದ ಮುದುಕಿ. ಹತ್ತಿರದ ಸಂಬಂಧಿಯೊಬ್ಬ ಆಕೆಯನ್ನು ಭದ್ರವಾಗಿ ಹಿಡಿದುಕೊಂಡು ನಿಂತಿದ್ದ. ಆಕೆಯ ಮುಖ ಶೋಕದ ಬೆಂಕಿಯಲ್ಲಿ ಕಮರಿಹೋಗಿತ್ತು. ಒಮ್ಮೊಮ್ಮೆ ಅಷ್ಟೆ ಬಾಯಿಂದ ರವೀಂದ್ರ ಎನ್ನುವ ಶಬ್ದ ಹೊರಬೀಳುತ್ತಿತ್ತು ಕೇಳಿದವರ ಎದೆ ಸೀಳುವಂತೆ. ಸ್ವಲ್ಪ ದೂರದಲ್ಲಿ ಹೆಂಡತಿ. ಇನ್ನೂ ಮುವತ್ತೈದರ ನಡುಹರೆಯ. ಗಂಡನ ಪ್ರಾಣದೊಂದಿಗೆ ಅವಳ ಪ್ರಾಣ ಹೋದಂತೆಯೇ ಇತ್ತು. ಮುಖದಲ್ಲಿ, ಶರೀರದಲ್ಲಿ, ಯಾವ ಚೈತನ್ಯದ ಲಕ್ಷಣವೂ ಇಲ್ಲ. ಕಣ್ಣು ಬಿಟ್ಟಿದ್ದರೂ ಅದರಲ್ಲಿ ನೋಟವಿಲ್ಲ. ಭಾವಮೈದ ಅವಳನ್ನು ಹೆಗಲ ಮೇಲೆ ಒರಗಿಸಿಕೊಂಡಿದ್ದ ಎಳೆ ಮಗುವಿನಂತೆ. ಅಷ್ಟೊತ್ತಿಗೆ ಬಿಳಿ ಬಟ್ಟೆಯಿಂದ ಮೈಯೆಲ್ಲ ಬಿಗಿದಿದ್ದ ರವೀಂದ್ರರ ಶವ ಸ್ಟ್ರೆಚರ್ ಮೇಲೆ ಹೊರಗೆ ಬಂತು. ಒಮ್ಮೆಗೆ ಮೈಮೇಲೆ ಹಾವು ಹರಿದಂತೆ ಎಲ್ಲರೂ ಬೆಚ್ಚಿದರು, ಬಿಕ್ಕಿದರು. ಬೇಗ ಬೇಗನೆ ಎಂಟನೆ ಅಂತಸ್ತಿನಿಂದ ಕೆಳಗೆ ಕೊಂಡೊಯ್ದದ್ದೂ ಆಯಿತು. ಮನೆಗೆ ನಮ್ಮ ಕಾರಿನಲ್ಲೆ ಸಾಗಿಸಿದ್ದೂ ಆಯಿತು.

ಇತ್ತ ತಂದೆ, ಎರಡನೆ ಮಗ, ನಾವುಗಳು ಮುಂದಿನ ಕೆಲಸಗಳಲ್ಲಿ ತೊಡಗಿದೆವು. ದೂರ ದೂರದ ಪ್ರಾಂತಗಳಲ್ಲಿದ್ದ ಅವರ ಬೇರೆ ಬೇರೆ ಮಕ್ಕಳಿಗೆ ಸುದ್ದಿ ಕೊಡುವುದು. ರಾತ್ರಿ ಎಲ್ಲ ಶವ ಕೊಳೆಯದಂತೆ ಮಂಜುಗಡ್ಡೆಗೆ ಏರ್ಪಾಡು ಮಾಡುವುದು-ಈ ಕೆಲಸ ನಡೆದಿತ್ತು.

ಅತ್ತ, ನಮ್ಮೆದುರಿಗೆ ಅಗಲವಾದ ಬೆಂಚು. ಅದರ ಮೇಲೆ ಹೆಂಡತಿ ಮಲಗಿದ್ದಾಳೆ. ನೆಲದ ಮೇಲೆ ಕೂತಿದ್ದಾರೆ ತಾಯಿ. ಹೆಂಡತಿ ಬಿಟ್ಟ ಕಣ್ಣು ಮುಚ್ಚಿಲ್ಲ. ಶೂನ್ಯ ದೃಷ್ಠಿ. ಆ ಶೂನ್ಯದಲ್ಲಿ ಹಿಂದಿನ ಯಾವ ಯಾವ ಸುಖ ಸಂತಸಗಳ ಗಳಿಗೆಗಳು ಬರಿದಾಗಿದ್ದವೋ ? ಯಾವ ಯಾವ ಕರಾಳ ಭವಿಷ್ಯದ ಹೊಂಗನಸುಗಳಾಗಿ ಕರಗಿ ಮಾಯವಾಗಿದ್ದವೋ ? ಅವುಗಳ ಜಾಗದಲ್ಲಿ ಬೇರೆ ಯಾವ ಯಾವ ಭವಿಷ್ಯದ ದುಃಸ್ವಪ್ನಗಳು ಮೇಲೇಳುತ್ತಿದ್ದವೋ ? ಯಾರು ಬಲ್ಲರು ? ಅಥವಾ ಅವಾವುದೂ ಇಲ್ಲದೆ ಪೂರ್ತಿ ಮನಸ್ಸು ಮರಗಟ್ಟಿ ಹೋದ ಸ್ಥಿತಿಯೋ ? ಆ ಹೆಣ್ಣು ಜೀವದ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದು ತನ್ನ ತಲೆಯನ್ನು ಅವಳ ಎದೆಯಲ್ಲಿ ಹುದುಗಿಸಿ ಕೂತಿದ್ದಾರೆ ತಾಯಿ. ಒಮ್ಮೊಮ್ಮೆ ಕೈ ಝಾಡಿಸಿಕೊಂಡು ಒಳಗಿದ್ದ   ಗಂಡನ  ಶವದ ಬಳಿಗೆ ಎದ್ದು ಹೋಗಲು ಹೆಂಡತಿ ಚಡಪಡಿಸುವುದನ್ನು ತಡೆಯಲೆಂದು ತಾಯಿಯ ಆ ಸಾಹಸ. ಇಬ್ಬರ   ಬಾಯಿಂದಲೂ ಚಕಾರವಿಲ್ಲ. ಎಷ್ಟೋ ಹೊತ್ತು ಅದೇ ನೀರವ. ಬಿಕ್ಕಿ ಬಿಕ್ಕಿ ಅಳುವುದನ್ನಾದರೂ ನೋಡಬಹುದಾಗಿತ್ತು, ಆದರೆ ಅದು ಮಾತ್ರ ನೋಡಲಾಗದ ನೋಟ. ಹೃದಯವನ್ನು ಹಿಂಡಿ ಕರುಣಾರಸದ ಕೋಡಿಯನ್ನೇ ಹರಿಸುವಂತಹ ದೃಶ್ಯ.

ತನ್ನ ಇಳಿವಯಸ್ಸಿನಲ್ಲಿ ತನ್ನ ಕಣ್ಣೆದುರಿಗೇ ತನ್ನ ಚೊಚ್ಚಲ ಮಗನನ್ನು ಕಳೆದುಕೊಂಡ ತಾಯಿ ಜೀವ. ಭಾಗ್ಯದ ಲಕ್ಷ್ಮಿಯಾಗಿ ಮನೆಗೆ ಬಂದ ಸೊಸೆ ವಿಧವೆಯಾದಂತಹ ದಾರುಣ ಸನ್ನಿವೇಶ. ಆ ಮಾತೃಹೃದಯ ಹೇಗೆ ಸಿಡಿದು ಹೋಳಾಗಿರಬೇಕೋ ! ಆದರೆ ಆಕೆ ಮಾತ್ರ ತನ್ನ ಸೊಸೆಯ ಹೃದಯಕ್ಕೆ ತಂಪೆರೆಯಲು ಯತ್ನಿಸುತ್ತಿದ್ದಾಳೆ ! ಸ್ವತಃ ಬೇಯುತ್ತಿರುವ ಹೃದಯವೊಂದು  ಇನ್ನೊಂದು ಬೆಂದ ಹೃದಯಕ್ಕೆ ಸಾಂತ್ವನ ನೀಡಲು ಯತ್ನಿಸುವ ವೈಚಿತ್ರ್ಯ !

ಪ್ರೀತಿಯ ನಿಜ ವೈಭವ ಮೈದೋರಿದ ಗಳಿಗೆ ಅದು. ಆ ತಾಯಿ ಜೀವ ಆಸ್ಪತ್ರೆಯಿಂದ ಮನೆಗೆ ತಲುಪುತ್ತಿದ್ದಂತೆ  ತನ್ನ ಕೋಣೆಗೆ ಹೋಗಿ ಗರಬಡಿದವಳಂತೆ ಕೂತಿತ್ತು. ಆಕೆಯನ್ನು ಸಾಂತ್ವನಗೊಳಿಸುತ್ತಾ ಕೂತಿದ್ದ ಓರ್ವ ಸಂಬಂಧಿ. ಆದರೆ ಸೊಸೆಯ ಬಿಕ್ಕುವಿಕೆ ಕಿವಿಗೆ ಬಿದ್ದೊಡನೆ ಆಕೆ ಎದ್ದು ಬಂದಿತು. ತನ್ನ ಹೃದಯದ ಮೇಲೆ ಕಲ್ಲು ಹೇರಿಕೊಂಡು, ಆ ಎಳೆ ಹೆಣ್ಣು ಜೀವದ ಹೃದಯಕ್ಕೆ ಹತ್ತಿದ್ದ ಬೆಂಕಿ ಆರಿಸಲು ಮುಂದಾಯಿತು. ತನ್ನ ಅಳಲಿಗಿಂತ ಮಿಗಿಲಾಗಿ ತನ್ನ ಪ್ರೀತಿಯ ಇನ್ನೊಂದು ಜೀವಿಯ ಅಳಲಿಗಾಗಿ ಮರುಗಿತು ಮತ್ತು ಅದರಲ್ಲೆ ತನ್ನ ದುಃಖವನ್ನೂ ಮರೆಯಿತು. ಅದರ ಹೀಗಿನ ಚಿಂತೆ ಒಂದೇ-ಸೊರಗಿ ಬೆಂಡಾದ ಆ ಇನ್ನೊಂದು ಜೀವಕ್ಕೆ  ಅಲ್ಪಸ್ವಲ್ಪವಾದರೂ ಜೀವ ತುಂಬುವುದು ಹೇಗೆ ?

ಪ್ರೀತಿಯ ಅತ್ಯಂತ ಪರಿಣಾಮಕಾರಿಯಾದ ಭಾಷೆ ಅದು. ಮಾತಿಗೂ ಮೀರಿದ ಆಳದಲ್ಲಿ, ಆ ಮನದಾಳದಲ್ಲಿ, ಸಲ್ಲಿಸುವ ಸೇವೆ. ಒಂದು ಜೀವ ತನ್ನ ಸುಖ-ದುಃಖ ಭಾವನೆಗಳನ್ನೆಲ್ಲ ಬದಿಗಿರಿಸಿ  ಇನ್ನೊಂದು ಜೀವದಲ್ಲಿ ಒಂದಾಗಿ ಹೋಗುವ ಪರಿ. ತನ್ನ ಸಣ್ಣ ಸಂಕುಚಿತ ವ್ಯಕ್ತಿತ್ವದ ಅಸ್ತಿತ್ವವನ್ನೇ ಅಳಿಸಿಕೊಂಡು ಬೇರೊಂದು ಜೀವದಲ್ಲಿ ಕರಗಿಹೋಗಿ ವಿಕಾಸಗೊಳ್ಳುವ ಬಗೆ. ಆತ್ಮವಿಕಾಸದ ಹೆದ್ದಾರಿ.

ಬದುಕಿನಲ್ಲಿ ಬರುವ ಬವಣೆಗಳಿಗೆ ಕೊನೆಮೊದಲಿಲ್ಲ. ಸುಖದ ಗಳಿಗೆಗಳು ಹತ್ತಾದರೆ, ಚಿಂತೆ-ಶೋಕಗಳ ಸಂದರ್ಭಗಳು ನೂರಾರು. ನೆಮ್ಮದಿಯ ಅನುಭವ ಹಿಡಿಯಷ್ಟಾದರೆ ಕೋಪ ತಾಪಗಳು, ಮಾನ-ಅಪಮಾನಗಳು ಗುಡ್ಡದಷ್ಟು. ಸುಖ ಸೌಕರ್ಯಗಳನ್ನು ಸವಿಯುವ ಅವಕಾಶ ಅಲ್ಪವಾದಲ್ಲಿ, ಅದನ್ನು ಕೂಡಿಟ್ಟುಕೊಳ್ಳುವ ಹವ್ಯಾಸ-ಪ್ರಯಾಸಗಳಿಗೆ ಕೊನೆಮೊದಲೇ ಇರದು. ನಮ್ಮ ಬದುಕಿನ ಆನಂದವನ್ನು ವಿಷಾದವಾಗಿ ಮಾಡಿಕೊಳ್ಳುವ ವೈಖರಿಯೇ ಉದ್ದಕ್ಕೂ. ಅಮೃತತ್ವದ ಮಕ್ಕಳಾದವರು ವಿಷವನ್ನೇ ಚಪ್ಪರಿಸುವ ಚಪಲ. ಬದುಕಿನ ಹಾದಿಯೇ ತಿರುವುಮುರುವಾದ ರೀತಿ.

ಪ್ರೀತಿಯಲ್ಲಿ ನೋವೂ ಇದೆ, ನಿಜ. ಪ್ರೀತಿಸುವ ಜೀವ ಅಗಲಿದಾಗ ತಟ್ಟುವ ನೋವು ಬೆಂಕಿ ಸೋಕಿದಂತೆ. ಈ ಪ್ರೀತಿಯೂ ಸಾಕು. ಅಗಲಿಕೆಯ ಈ ನೋವೂ ಸಾಕು, ಯಾರನ್ನೂ ಯಾವುದನ್ನೂ ಹಚ್ಚಿಕೊಳ್ಳದಿರುವುದೇ ಮೇಲು, ತನ್ನದಾಯಿತು, ತನ್ನ ಪಾಡಾಯಿತು, ಅನ್ಯರೊಂದಿಗೆ ಎಷ್ಟೋ ಅಷ್ಟು ಎನ್ನುವ  ಸ್ಮಶಾನ ವೈರಾಗ್ಯ ಬರುವಷ್ಟು ತೀವ್ರತೆ ಅದರದು. ಆದರೆ ಅದನ್ನು ಗೆದ್ದುಕೊಳ್ಳುವ ಗುಟ್ಟೂ ಅದರೊಳಗೇ ಅಡಗಿದೆಯಲ್ಲ, ತನಗಿಂತ ಮಿಗಿಲಾಗಿ ನೋವಿಗೆ ಒಳಗಾದ ಇನ್ನೊಂದು ಜೀವಿಗಾಗಿ ಹರಿಸುವ  ಕಣ್ಣೀರಿನಲ್ಲಿದೆ, ಅದು  ಆ ಇನ್ನೊಂದು ಜೀವಿಯ ಬೇಗೆಗಿಂತ ಮಿಗಿಲಾಗಿ ತನ್ನ ಬೇಗೆಯನ್ನೇ ಆರಿಸುವ ತಂಪು ಜಲ – ಆ ಕಣ್ಣೀರು.

ತ್ಯಾಗದ ಈ ಮರ್ಮ ಮನುಷ್ಯ ಅರಿಯನೆಂದೇ ಆ ಶಬ್ದಕ್ಕೇ ಅಂಜುತ್ತಾನೆ.  ತ್ಯಾಗದಿಂದ ತನ್ನ ಸುಖಕ್ಕೆ ಎಲ್ಲಿ ಕಲ್ಲು ಬೀಳುತ್ತದೋ ಎಂದು ಹಿಂಜರಿಯುತ್ತಾನೆ. ತನ್ನ ಸ್ವಂತಕ್ಕಾಗಿ ಕಣ್ಣೀರಿಡುವುದರಲ್ಲೇ ತನ್ನ ಸುಖ ಸರ್ವಸ್ವವೂ ಇದೆ ಎನ್ನುವ  ಗೀಳಿಗೆ ತುತ್ತಾಗುತ್ತಾನೆ. ತನ್ನ ಸ್ವಂತಕ್ಕಾಗಿ ಮಾಡುವ  ಕರ್ಮಗಳಲ್ಲಲ್ಲ, ತನ್ನ ಸ್ವಂತದ ಸುಖಭೋಗಗಳಲ್ಲಲ್ಲ. ಹಣ ಗಳಿಕೆಯಲ್ಲಲ್ಲ- ಆದರೆ ತ್ಯಾಗದಲ್ಲಿದೆ. ಅಮೃತತ್ವದ ರಹಸ್ಯ ಎನ್ನುವ  ಉಪನಿಷತ್ತಿನ ವಚನ-ಅವನಿಗೆ  ಒಣ ಉಪದೇಶ ಎನಿಸುತ್ತದೆ.  “ನಾನು ಎರಡೂ ಕೈಯೆತ್ತಿ ಕೂಗಿ ಹೇಳುತ್ತಿರುವೆನಲ್ಲ- ಧರ್ಮದಿಂದ ನಡೆಯಿರಪ್ಪ, ಅದರಿಂದ ನಿಮಗೆ ಜೀವನದ ಸಕಲ ಸುಖ ಭಾಗ್ಯಗಳೂ, ಆಸೆಗಳೂ ಕೈಗೂಡುವುವು-ಆದರೆ ಯಾರೂ ನನ್ನ ಮಾತು ಕೇಳಲೊಲ್ಲರೇಕೆ?” ಎಂದು, ವೇದವ್ಯಾಸರೇ ಹಳಹಳಿಸುವಂತಾಯಿತು. ಇದಕ್ಕೂ ಕಾರಣ ಇಷ್ಟೆ. ಪ್ರೀತಿಯ ನಿಜವಾದ  ಮಹಿಮೆಯನ್ನೇ ಅರಿಯದ ಅಜ್ಞಾನ.

ತನ್ನ ಪ್ರೀತಿಗೆ ಪ್ರತಿಫಲ ನಿರೀಕ್ಷಿಸುವುದಕ್ಕಿಂತ ದೊಡ್ಡ ತಪ್ಪು ಇನ್ನೊಂದು ಇರಲಾರದು-ಬೇರೊಬ್ಬರ ಮೇಲಿನ ಪ್ರೀತಿ ತನ್ನ ಸುಖಕ್ಕಾಗಿ ಎನ್ನುವುದಕ್ಕಿಂತ ಬೇರೊಂದು ಮನೋಧರ್ಮ  ಇರಲಾರದು-ತನ್ನ ಸುಖಕ್ಕೆ ಕಲ್ಲುಹಾಕಿಕೊಳ್ಳಲು. ಸ್ವಾರ್ಥದ ಸೋಂಕೂ ಇರದ ಪ್ರೀತಿಯೇ ಒಂದು ಸುಖದ ಅನುಭವ. ಅದು ಸ್ವಯಂಪರಿಪೂರ್ಣ.  ‘ಸ್ವಯಂಫಲರೂಪತೇತಿ’. ಅದೇ ಬೀಜ, ಅದೇ ವೃಕ್ಷ, ಅದೇ ಫಲ. ಬೇರೊಂದು ಫಲದ ನಿರೀಕ್ಷೆಯ ವಿಷಕ್ರಿಮಿ ಅದಕ್ಕೆ ಹತ್ತಿದೊಡನೆ ಆ ಬೀಜವೇ ಹಾಳು, ಗಿಡವೇ ಹುಟ್ಟದು, ಹಣ್ಣೂ ಲಭಿಸದು.

ಪ್ರೀತಿಯದು ಹೂವು ಅರಳುವ  ರೀತಿ. ಕೋಗಿಲೆ ಹಾಡುವ  ರೀತಿ, ಮುಂಗಾರು ಹನಿ ಬಿದ್ದೊಡನೆ ತನ್ನ ರೆಕ್ಕೆ ಬಿಚ್ಚಿ ನರ್ತಿಸುವ  ನವಿಲಿನ ರೀತಿ.  ಅನ್ಯರು ಬರಲಿ, ಮೆಚ್ಚಲಿ, ಎನ್ನುವ  ಕಲ್ಪನೆಗೆ ಅಲ್ಲಿ ಎಡೆ ಎಲ್ಲಿ? ಪ್ರೀತಿಯ ಪರಿಯೂ ಅಂತೆಯೇ. ತನ್ನ ಆಹ್ಲಾದಕರ ಕಂಪು, ಇನಿದನಿಯ ಸುತ್ತೆಲ್ಲ ಆನಂದ ಬಿತ್ತರಿಸುತ್ತದೆ. ಆದರೆ ಅದಕ್ಕೆ ಅದರ ಪರಿವೆಯೇ ಇಲ್ಲ, ಕಾಳಜಿಯೇ ಇಲ್ಲ. ಯಾವ ಕೃತಕತೆಯೂ ಅಲ್ಲಿಲ್ಲ- ಪ್ರೀತಿಯ ನಿಜಸ್ವಭಾವೇ ಅದು.

  •  ಹೊ.ವೆ.ಶೇಷಾದ್ರಿ                                                                                                                             ಮುಂದುವರೆಯುವುದು
   

Leave a Reply