ಚಿಂತನಕ್ಷಣ – 17

ಹೊ.ವೆ.ಶೇಷಾದ್ರಿ - 0 Comment
Issue Date : 26.07.2014

‘ತಮಸ್’ ಬಗ್ಗೆ

ಮುಂಬೈ ಉಚ್ಚ ನ್ಯಾಯಾಲದಯದ ತೀರ್ಪು ಸರಿಯೇ?

1. ‘ತಮಸ್’ ಇತಿಹಾಸದ ಪುಟ ಎಂಬುದು ತೀರ್ಪಿನ ಮುಖ್ಯ ಗ್ರಹಿಕೆ. ಈ ಗ್ರಹಿಕೆ ಸರ್ವಥಾ ತಪ್ಪು. ‘ತಮಸ್’ ಒಂದು ಕಾದಂಬರಿ ಅಷ್ಟೆ. ಈ ಕಾದಂಬರಿ ಸಹ ಇತಿಹಾಸದಲ್ಲಿ ದಾಖಲೆಯಾದ ಯಾವ ಘಟನೆಯ ಮೇಲೆಯೂ ಆಧಾರಿತವಾಗಿಲ್ಲ. ಅದೊಂದು ಕಥಾಕಾರದ ಕಲ್ಪನಾಲೋಕದ ಭ್ರಾಮಕ ಸೃಷ್ಟಿ. ಕಾಲ್ಪನಿಕ ಕಥೆಯನ್ನೇ ಇತಿಹಾಸ ಎಂದು ತಪ್ಪರ್ಥಮಾಡಿಕೊಂಡಿರುವುದು ಈ ತೀರ್ಪಿನ ಮೂಲಭೂತ ದೋಷ.

2. “ತಮಸ್” ಆ ದುರಂತಮಯ ಕಾಲಖಂಡದ ಒಂದು ಒಳನೋಟ” ಎಂಬುದು ತೀರ್ಪಿನ ಇನ್ನೊಂದು ಹೇಳಿಕೆ. ಇದು ವಸ್ತುಸ್ಥಿತಿಯ ತೀರ ವಿಪರ್ಯಾಸ. ನ್ಯಾಯಾಧೀಶರು ಇತಿಹಾಸಕ್ಷೇತ್ರದಲ್ಲಿ ಕೈಯಾಡಿಸದಿದ್ದರೇ ಚೆನ್ನಾಗಿತ್ತು. ನಿಷ್ಪಕ್ಷಪಾತಿಗಳಾದ ಇತಿಹಾಸಕಾರರು, ಪತ್ರಕರ್ತರು ಮತ್ತು  ರಾಷ್ಟ್ರೀಯ ನಾಯಕರ ಹೇಳಿಕೆಗಳು ಹಾಗೂ ಬರಹಗಳ ರಾಶಿ ರಾಶಿಗಳೇ ಸಾವಿರ ನಾಲಿಗೆಗಳಿಂದ ಸತ್ಯ ಏನೆಂದು ಸಾರಿ ಹೇಳುತ್ತಿವೆ. ಪ್ರತಿಯೊಂದು ಕಡೆಯೂ ದಂಗೆಗಳನ್ನು ಪ್ರಚೋದಿಸಿದ್ದು, ಮುಸ್ಲಿಂಲೀಗ್ ನಾಯಕರೇ. ಅದರ  ಹಿಂದಿನ ಗುರಿ ತಮ್ಮ ಗುರಿ ಏನೆಂಬುದನ್ನು ಅವರು ಮುಚ್ಚುಮರೆ ಇಲ್ಲದೆ ಸಾರಿಯೂ ಇದ್ದರು. ಮತೀಯ ಆಧಾರವಾದ ಮೇಲೆ ಪಾಕಿಸ್ತಾನದ ನಿರ್ಮಿತಿಯೇ ಆ ಗುರಿ. ಕಲ್ಕತ್ತದ 1946ರ ‘ಪ್ರತ್ಯಕ್ಷ ಕ್ರಮ’ (ಡೈರೆಕ್ಟ್ ಆ್ಯಕ್ಷನ್)ದ ಭೀಷಣ ಹತ್ಯಾಕಾಂಡ, ಅದರ ಬೆನ್ನಿಗೇ ನಡೆದ ನೌಖಾಲಿ ಮತ್ತು ತಿಪ್ಪೇರಾ ದುರಂತಗಳು ಹಾಗೂ ದೇಶಾದ್ಯಂತ ನಡೆದ ರಕ್ತಪಾತ, ಇವೆಲ್ಲವೂ ಅದರದೇ ಫಲ. ತಮ್ಮ ಬೇಡಿಕೆಗಳಿಗೇ ಕಾಂಗ್ರೆಸ್ಸನ್ನು ಬಗ್ಗಿಸಲು ಲೀಗ್ ನಾಯಕರು ಕೆರಳಿಸಿದ ಉತ್ಪಾತಗಳು. 1946ರ ಚುನಾವಣೆಗಳಲ್ಲಿ ಪಾಕಿಸ್ತಾನ ಗಳಿಸಲು ಈ ರೀತಿ ರಕ್ತರಂಜಿತ ರಾಜಕೀಯದಾಟ ನಡೆಸಿದ ಮುಸ್ಲಿಂಲೀಗಿಗೆ ಅತ್ಯಧಿಕ ಸಂಖ್ಯೆಯಲ್ಲಿ ಮುಸಲ್ಮಾನರು ಮತ ನೀಡಿದ್ದರೆಂಬುದನ್ನು ಇಲ್ಲಿ ನೆನಪಿನಲ್ಲಿಡಬೇಕು.

ಆದ್ದರಿಂದ ಇದು, ಹಂದಿಯನ್ನು ಕೊಂದು ಮಸೀದಿಯ ಮುಂದೆ ಎಸೆದು ಮುಗ್ಧ ಜನತೆಯನ್ನು ಕೆರಳಿಸಿದಂತಹ ಕೆಲವು ‘ಮತಾಂಧರ’, ‘ಕೋಮುಭೂತ’ಗಳ ಚಿಲ್ಲರೆ ಸಂಚಲ್ಲ. ಸ್ವಾಮಿ, ಅದು ಅಷ್ಟು ಮಾಮೂಲಿ ದಂಗೆಯಂತಹ ಸಂದರ್ಭ ಆಗಿರಲಿಲ್ಲ. ತಮ್ಮ ರಾಷ್ಟ್ರಘಾತಕ ಉದ್ದೇಶ ಸಾಧನೆಗಾಗಿ ಒಂದು ಇಡೀ ಮತಾಂಧ ಸಮುದಾಯ, ನಮ್ಮ  ರಾಷ್ಟ್ತದ  ಮೇಲೆ, ಅದರ ಗೌರವಾನ್ವಿತ ನಾಯಕರ ಮೇಲೆ, ಸುಸಂಘಟಿತವಾಗಿ, ಸುನಿಯೋಜಿತವಾಗಿ ನಡೆಸಿದ ಆಕ್ರಮಣ ಅದು. ಅಂದಿನ ದಿನಗಳಲ್ಲಿ ಇಡೀ ಪಂಜಾಬನ್ನು ಆವರಿಸಿದುದು ಹಿಂಸೆ, ದ್ವೇಷ ಮತ್ತು ರಕ್ತಪಾತಗಳ ಈ ಭೀಷಣ ನೃತ್ಯ. ಲಕ್ಷಾಂತರ ಹಿಂದುಗಳು  ಪಶ್ಚಿಮ ಪಂಜಾಬ ಮತ್ತು ವಾಯವ್ಯ ಸರಹದ್ದು  ಪ್ರಾಂತ್ಯಗಳಿಂದ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ವಲಸೆ ಬರಲು  ಆರಂಭಿಸಿದಾಗ ಅದರ ಪ್ರತಿಕ್ರಿಯೆ ಪೂರ್ವ ಪಂಜಾಬಿನಲ್ಲಾಯಿತು ಅಷ್ಟೆ. ಹಿಂದುಗಳು ತಮ್ಮ ಅಸ್ತಿತ್ವಕ್ಕಾಗಿಯೇ ಹೆಣಗಬೇಕಾಗಿ ಬಂದಿದ್ದ ಸನ್ನಿವೇಶ ಅದು. ಇತಿಹಾಸದ ಇಂಥ ಮಹಾ ದುರ್ಘಟನೆಯನ್ನು ಕೆಲವು ಹುಚ್ಚೆದ್ದ ವ್ಯಕ್ತಿಗಳದಷ್ಟೆ ಕೃತ್ಯದ ಫಲ ಎಂದು ಸುಲಭದ ತೀರ್ಮಾನಕ್ಕೆ ಬರುವುದೆಂದರೆ ಇತಿಹಾಸದ ಬಗೆಗಿನ ಅರೆ ಜ್ಞಾನ ತೋರಿಸುತ್ತದಲ್ಲದೆ ಮತ್ತೇನೂ ಅಲ್ಲ.

3. “ತಮಸ್” ಚಿತ್ರೀಕರಣದಲ್ಲಿ ಎರಡೂ ಕೋಮುಗಳನ್ನು (ಹಿಂದು ಮತ್ತು ಮುಸ್ಲಿಂ) ಸಮಾನವಾಗಿ ಟೀಕಿಸಲಾಗಿರುವುದರಿಂದ ಅದು ನಿಷ್ಪಕ್ಷವಾಗಿದೆ ಎನ್ನುವ  ತೀರ್ಪಿನ ಮಾತು ಮತ್ತು “ಎರಡೂ ಕೋಮುಗಳಲ್ಲಿನ  ಜಾತ್ಯಂಧವಾದಿಗಳು ಮತ್ತು ಉಗ್ರವಾದಿಗಳಿಂದ ಸಿಡಿದದ್ದು ಕೋಮುಹಿಂಸೆ” ಎಂಬ ಮಾತು- ಇವೆರಡೂ ಹೇಳಿಕೆಗಳಿಂದ ಹಲ್ಲೆಕೋರರನ್ನು ಮತ್ತು ಹಲ್ಲೆಗೀಡಾದವರನ್ನು ಇಬ್ಬರನ್ನೂ ತಕ್ಕಡಿಯಲ್ಲಿಟ್ಟು ಸಮವಾಗಿ ತೂಗಿದಂತಾಗಿದೆ.  ಆಕ್ರಮಣಕಾರಿಗಳನ್ನು ಮತ್ತು ಅದರಿಂದ  ಪೀಡಿತರನ್ನು, ದೇಶರಕ್ಷಕರನ್ನು ಮತ್ತು ದೇಶಭಂಜಕರನ್ನು ಸಮಾನವಾಗಿ ಅಪರಾಧಿಗಳೆಂದು ಪರಿಗಣಿಸಿದಂತಾಗಿದೆ.  “ನೀವು ಇತಿಹಾಸವನ್ನು ಚಾಪೆಯ ಕೆಳಗೆ ತೂರಿಸಿ ಅಡಗಿಸಿಡಲು ಶಕ್ಯವಿಲ್ಲ” ಎಂದು ತೀರ್ಪು ಎಚ್ಚರಿಸುತ್ತದೆ. ಆದರೆ ದೂರದರ್ಶನದ ಈ ಧಾರಾವಾಹಿ ಮಾಡಲು ಹೊರಟಿರುವುದು ಅದನ್ನೇ.  ಚರಿತ್ರೆಯಲ್ಲಿನ  ಕ್ರೂರ ಸತ್ಯಸಂಗತಿಗಳನ್ನು ಕಾಣಲು ಕಣ್ಣಿದ್ದವರಿಗೆಲ್ಲ ನಿಚ್ಚಳವಾಗಿ ಗೋಚರಿಸುವ ಅಂಶ ಇದು.

4. “ಕೊನೆಯಲ್ಲಿ, ತಪ್ಪಿನ ಅರಿವು ಮೂಡಿ ಜಾತ್ಯಂಧರು ಮತ್ತು ಉಗ್ರವಾದಿಗಳ ಬಣ್ಣ  ಬಯಲಾಗುತ್ತದೆ; ಪರಿಪೂರ್ಣವಾದ ಸ್ನೇಹ, ಸಾಮರಸ್ಯಗಳ ವಾತಾವರಣ ಮರುಕಳಿಸುತ್ತದೆ” ಎಂದು ಧಾರಾವಾಹಿಯ ಮುಕ್ತಾಯ ದೃಶ್ಯದ ಬಗ್ಗೆ ತೀರ್ಪು ಹೊಗಳಿದೆ.  ವಿಭಜನೆಯ ನಂತರ ಪಾಕಿಸ್ತಾನದಲ್ಲಿ  ಹಿಂದುಗಳು ಪಟ್ಟ ಪಾಡಿನ ಬಗ್ಗೆ ನ್ಯಾಯಾಧೀಶರುಗಳು ಸ್ವಲ್ಪವಾದರೂ ವಿಚಾರ ಹರಿಸಿದ್ದರೆ ಎಷ್ಟೋ ಚೆನ್ನಾಗಿರುತಿತ್ತು. ಪಶ್ಚಿಮ ಪಾಕಿಸ್ತಾನದಲ್ಲಿ ಹಿಂದುಗಳನ್ನು ಒಂದೇ ಏಟಿಗೆ ನಾಮಾವಶೇಷ ಮಾಡಿದರೆ, ಈಗ ‘ಬಾಂಗ್ಲಾದೇಶ’ ಎನಿಸಿಕೊಳ್ಳುವ ಪೂರ್ವ ಪಾಕಿಸ್ತಾನದಲ್ಲಿ ಹಂತಹಂತವಾಗಿ ಅವರನ್ನು ಹಿಂಡಿ ಹೊರದಬ್ಬಲಾಗುತ್ತಿದೆ. ಇದು ಒಬ್ಬಿಬ್ಬರ, ಒಂದೆರಡು  ಸಂಸಾರಗಳ ಪಾಡಲ್ಲ. ಮಿಲಿಯಗಟ್ಟಲೆ ಜನರ  ದುರಂತ. ಇಷ್ಟೆಲ್ಲ ಆದನಂತರವೂ, ‘ಸ್ನೇಹ ಮತ್ತು ಸೌಹಾರ್ಧಗಳು ಪರಿಪೂರ್ಣವಾಗಿ ಮರುಕಳಿಸಿತು’ ಎಂಬ ಚಿತ್ರಣವನ್ನೇ ‘ಅಧಿಕೃತ ಇತಿಹಾಸ’ ಎಂಬುದಾಗಿ ತೀರ್ಪು ಸಾರಿದೆ. “ಕೊನೆಯಲ್ಲಿ ರಾಜ, ರಾಣಿ ಹಾಗೂ ಸಮಸ್ತ ಪ್ರಜೆಗಳೂ ಸುಖವಾಗಿ ನಲಿದಾಡಿಕೊಂಡಿದ್ದರು” ಎಂದು ನಾವು ಮಕ್ಕಳಾಗಿದ್ದಾಗ ಕೇಳಿದ ಅಡಗೂಲಜ್ಜಿಯ ಕತೆ ನೆನಪಾಗುತ್ತದೆ.

ಮುಖಕ್ಕೆ ರಾಚುವಂತಿರುವ ಕಟು ಸತ್ಯಸಂಗತಿಗಳು ಹೀಗಿರುವಾಗ “ಚರಿತ್ರೆಯನ್ನು ಮರೆಯುವವರು ಅದರ ಪುನರಾವರ್ತನೆಯ ದಂಡನೆಗೆ ಗುರಿ ಆಗುವುದು ಖಚಿತ” ಎನ್ನುವ  ತೀರ್ಪಿನಲ್ಲಿರುವ  ಬೋಧನೆಗೆ ಉತ್ತರವಾಗಿ “ಕಲ್ಪನೆಗಳ ಆಧಾರದ ಮೇಲೆ – ಉದ್ದೇಶಪೂರ್ವಕವಾಗಿಯೋ ಅಥವಾ ಅಜ್ಞಾನ ಮೂಲಕವಾಗಿಯೋ- ಚರಿತ್ರೆಯನ್ನು  ವಿರೂಪಗೊಳಿಸುವುದು  ಕೇವಲ ಅದರ ಮರವೆಗಿಂತ ಎಷ್ಟೋ  ಹೆಚ್ಚು ಪಾಲು ಅಪಾಯಕಾರಿ” ಎಂದು ಹೇಳಬೇಕೆನಿಸುತ್ತದೆ.

5) ‘ತಮಸ್’ ಪ್ರಕರಣದಲ್ಲಂತೂ ಚರಿತ್ರೆಯನ್ನು ತಿರುವುಮುರುವು ಮಾಡಿರುವುದು ಉದ್ದೇಶಪೂರ್ವಕವಾಗಿಯೇ ಎಂಬುದರಲ್ಲಿ ಸಂದೇಹವೇ ಇಲ್ಲ. ಚರಿತ್ರೆಯ ಒಂದೊಂದು ಪುಟವೂ ಆಕ್ರಮಣಕಾರರು ಯಾರು, ಆಕ್ರಮಣಕ್ಕೊಳಗಾದವರು ಯಾರು ಎಂಬುದನ್ನು ಸಾರಿ ಸಾರಿ ಹೇಳುತ್ತಿರಬೇಕಾದರೆ, ಈ ಧಾರಾವಾಹಿ ಚಿತ್ರದಲ್ಲಿ ಮಾತ್ರ ಈ ಪಾತ್ರಗಳನ್ನು ತಿರುವುಮುರುವು ಮಾಡಲಾಗಿದೆ. ಹಿಂದುಗಳೇ ಆರಂಭದ ಪಾತಕಿಗಳೆಂದು ಇದರಲ್ಲಿ ಚಿತ್ರಿಸಲಾಗಿದೆ. ನ್ಯಾಯಾಧೀಶರು “ಹೌದು, ಮುಖ್ಯವಾಗಿ ಮೊದಲ  ಎರಡು ಭಾಗಗಳಲ್ಲಿ ಹಿಂಸೆಯ ಚಿತ್ರಣವಿದೆ” ಎಂದು ತಮ್ಮ ತೀರ್ಪಿನಲ್ಲಿ ಒಪ್ಪಿಕೊಂಡಿದ್ದಾರೆ. “ಆದರೆ ನಂತರದ ಭಾಗಗಳಲ್ಲಿ, ಅದು ಅಷ್ಟಾಗಿ ಎದ್ದು ತೋರದು” ಎಂದು ಹೇಳಿದ್ದಾರೆ. ಆದರೆ ಮೊದಲ ಎರಡು ಭಾಗಗಳಲ್ಲಿ ಹಿಂದುಗಳನ್ನೇ ಹಿಂಸೆಯ ಖಳನಾಯಕರೆಂದು ಚಿತ್ರಿಸಿರುವುದನ್ನು ನಾವು ಗಮನಿಸಬೇಕು.

6) ಇನ್ನೊಂದು ಮಾತು. ದೂರದರ್ಶನದ ಕತೆಯಲ್ಲಿ ಮೂಲದಲ್ಲಿನ ತಮಸ್ ಕತೆಯನ್ನೂ ವಿರೂಪಗೊಳಿಸಲಾಗಿದೆ. ಮೂಲದಲ್ಲಿ ಒಬ್ಬ ಚಮ್ಮಾರನಿಂದ ಹಂದಿಯನ್ನು ಕೊಲ್ಲಿಸಿ ಮಸೀದಿಯ ಮುಂದೆಸೆಯುವ ಸಂಚು ನಡೆಸುವವನು ಓರ್ವ ಮುಸಲ್ಮಾನ. ಆದರೆ ಚಿತ್ರದಲ್ಲಿ ಅವ ಹಿಂದು ಆಗಿದ್ದಾನೆ. ಪುಸ್ತಕದಲ್ಲಿ ಹಿಂದುಗಳು ತಮ್ಮ ಆತ್ಮರಕ್ಷಣೆಯ ಮಾರ್ಗದ ಬಗ್ಗೆ ಚರ್ಚಿಸುತ್ತಿದ್ದರೆ, ಇಲ್ಲಿ ಅವರೇ ಹಿಂಸೆಯ ಪ್ರಚೋದಕರೆಂದು  ತೋರಿಸಲಾಗಿದೆ.  ಮುಸಲ್ಮಾನರನ್ನು ಕೊಲ್ಲಲು ಹುರಿದುಂಬಿಸಲ್ಪಟ್ಟ ಮುಗ್ಧ ತರುಣನನ್ನು ಖಾಕಿ ನಿಕ್ಕರಿನಲ್ಲಿ ತೋರಿಸಲಾಗಿದೆ.  ಆದರೆ ಪುಸ್ತಕದಲ್ಲಿ ವೇಷದ ಬಗ್ಗೆ ಉಲ್ಲೇಖವಿಲ್ಲ. ವೈದಿಕ ಹೋಮ ಮತ್ತು ಶಾಂತಿಮಂತ್ರ ಮುಕ್ತಾಯವಾಗುತ್ತಿದ್ದಂತೆಯೇ ಮುಸಲ್ಮಾನರ ಮೇಲೆ ಬೀಳುವಂತೆ ಹಿಂದುಗಳನ್ನು ಉದ್ರೇಕಿಸುವ ಘಟನೆಯ ಮರ್ಮ ಏನಿರಬಹುದು? ಉದ್ದೇಶಪೂರ್ವಕವಾಗಿ ಹಿಂದುಗಳೇ ಢೋಂಗಿಗಳು ಎಂದು ಕಪಟಿಗಳೆಂದು  ತೋರಿಸುವುದಲ್ಲದೆ ಬೇರೆ ಏನಾಗಿರಲು ಸಾಧ್ಯ? ಆ ಕೊಲೆಗಡುಕ ತರುಣ ಸಂಘದವನೆಂದು ತೋರಿಸಲು, ಅವನನ್ನು ಖಾಕಿ ಚಡ್ಡಿಯಲ್ಲಿ ತೋರಿಸಿರುವುದು ತೀರ ಅಸಂಬದ್ಧ. ಒಂದು ವೇಳೆ, ವಾದಕ್ಕಾಗಿ ಓರ್ವ ಸಂಘದ ಕಾರ್ಯಕರ್ತ ಅಂಥ ಕೃತ್ಯಗಳಲ್ಲಿ ತೊಡಗಿದ್ದೆನೆನ್ನೋಣ; ಆದರೆ ಆತ ಬಹಿರಂಗವಾಗಿ ತಾನು ಇಂಥವನೆಂದು ತೋರಿಸಿಕೊಂಡು ಕೊಲೆ ಮಾಡಲು ಹೋಗುತ್ತಾನೆಯೇ? ಇಂಥ ಅಸಂಬದ್ಧ ವಿಕೃತ ಕಲ್ಪನೆಯು ಆ ಚಿತ್ರ ದಿಗ್ದರ್ಶಕನು ಸಂಘ ಮತ್ತು ಹಿಂದು ವಿಚಾರಗಳ ಕುರಿತಾಗಿ ತಾಳಿರುವ ವಿರೋಧಿ ಭಾವನೆಗೇ ಇನ್ನೊಂದು ಸಾಕ್ಷಿ.

7) ಕಾಂಗ್ರೆಸ್ಸಿಗರ ಕಮ್ಯೂನಿಸ್ಟರ ಅಂದಿನ ಪಾತ್ರವನ್ನು ಹಿಂದು-ಮುಸ್ಲಿಂ ಬಾಂಧವ್ಯದ ಹಾಗೂ ಶಾಂತಿಯ ದೂತರೆಂದು ದೂ.ದ. ದಲ್ಲಿ ಬಿಂಬಿಸಿರುವುದು ಹಾಗೂ ಆರ್ಯ ಸಮಾಜಿಗಳು ಮತ್ತು ಸಂಘದವರನ್ನು ಗಲಭೆಖೋರರೆಂದು ಅವರ ಮುಖಕ್ಕೆ ಮಸಿ ಹಚ್ಚಲು ಯತ್ನಿಸಿರುವುದು ವಿಷಾಕ್ತ ರಾಜಕೀಯ ದುರುದ್ದೇಶದಿಂದ ಕೂಡಿದ ಚಿತ್ರ ಇದು ಎಂಬುದಕ್ಕೆ ಸಂಕೇತ. ಶ್ರೀ ಸಾಹನಿ ಮತ್ತು ಶ್ರೀ ನಿಹಾಲಾನಿ ಇವರಿಬ್ಬರೂ ಮುಂಚಿನಿಂದಲೂ ಕಮ್ಯೂನಿಸ್ಟ್ ಸಹಚರರು, ಅಪ್ಪಟ ಹಿಂದು ವಿರೋಧಿಗಳು ಎನ್ನುವ ಮಾತನ್ನೂ ನೆನಪಿಸಿಕೊಂಡಾಗ ಮೇಲಿನ ಅಭಿಪ್ರಾಯಕ್ಕೆ  ಪುಷ್ಟಿ ಸಿಗುತ್ತದೆ.  ಒಂದು ವಿಶಿಷ್ಟ ರಾಜಕೀಯ ತತ್ವಕ್ಕೆ ಬದ‍್ಧವಾಗಿರುವ  ಇಂಥ ಬರಹಗಾರರಿಗೆ ‘ನಿಷ್ಪಕ್ಷ ಇತಿಹಾಸಕಾರ’ರೆಂಬ ಕಾಯ್ದೆಬದ್ಧ ಪ್ರಶಸ್ತಿ ಪತ್ರ ನೀಡುವುದೆಂದರೆ ಅದನ್ನು ಕಲ್ಪಿಸುವುದೂ ಕಷ್ಟ. ಜತೆಗೆ ಇದೀಗ ತಮಸ್‍ಗೆ ದೇಶದಲ್ಲಿ ಬಲವಾದ ವಿರೋಧದ ಸ್ವರ  ಎದ್ದೊಡನೆ ಅದರ ಸಮರ್ಥನೆಗೆ ಎಲ್ಲ ಕಮ್ಯುನಿಸ್ಟ್ ಗುಂಪುಗಳೂ, ಮುಖಸಂಸ್ಥೆಗಳೂ, ಹಿಂದು ವಿರೋಧಿ ಕೋಮುವಾದಿ ಲೇಖಕರೂ ಧಾವಿಸಿ ಬಂದಿರುವುದು ಈ ‘ತಮಸ್’ ಚಿತ್ರ ಪ್ರಸಾರದ ಹಿಂದಿರುವ  ಶಕ್ತಿಗಳ್ಯಾವುವು ಎಂಬುದರ ಬಗ್ಗೆ ಎಲ್ಲರ ಕಣ್ಣುಗಳನ್ನು ತೆರೆಯಿಸಿದೆ. ಗೌರವಾನ್ವಿತ ನ್ಯಾಯಾಧೀಶರು ‘ತಮಸ್’ಗೆ ನಿಷ್ಪಕ್ಷ ಚರಿತ್ರೆಯ ಮನ್ನಣೆ ನೀಡುವ ನಿರ್ಣಯಕ್ಕೆ ಬರುವ ಮೊದಲು ತಮ್ಮ ನ್ಯಾಯ ನಿರ್ಣಯದಲ್ಲಿ ಹೆಚ್ಚು ಜಾಗರೂಕರಾಗಿರುವಂತೆ ಎಚ್ಚರಿಸಲು ಇದೊಂದೇ ಸಂಗತಿ ಸಾಕಿತ್ತು.

8) ಇಂದಿನ ಈ ಎಲ್ಲ ‘ಪ್ರಗತಿಪರ ವೇದಿಕೆ’ಗಳು ಹಾಗೂ ಬರಹಗಾರರ ಹಿಂದಿನ ಕಮ್ಯುನಿಸ್ಟರೇ ಹಿಂದೆ  ಬ್ರಿಟಿಷ್ ಸಾಮ್ರಾಜ್ಯವಾದಿಗಳ ಕೈಗೊಂಬೆಗಳಂತೆ ವರ್ತಿಸಿದ್ದವರು; ಮಹಾತ್ಮಾಗಾಂಧಿ ಮತ್ತು ಸುಭಾಷ್‍ಚಂದ್ರ ಬೋಸರನ್ನು ಹೀನಾಮಾನಾ ನಿಂದಿಸಿದ್ದವರು; 1942ರ ಚಳುವಳಿಯ ಬೆನ್ನಿಗೆ ಚೂರಿ ಹಾಕಿದ್ದವರು; ಭಾರತವನ್ನು 17 ಪ್ರತ್ಯೇಕ ಸ್ವತಂತ್ರ ರಾಷ್ಟ್ರಗಳನ್ನಾಗಿ ಒಡೆಯಬೇಕೆಂದು ಪ್ರಚಾರ ಮಾಡಿದ್ದವರು; ಮತೀಯ ಆಧಾರದ ಮೇಲೆ ಪಾಕಿಸ್ತಾನದ ಬೇಡಿಕೆಯನ್ನು ಬೆಂಬಲಿಸಿ ಅದಕ್ಕೆ ತಾತ್ವಿಕ ಸಮರ್ಥನೆಯನ್ನು ನೀಡಿದ್ದವರು; ಅಷ್ಟೆ ಅಲ್ಲದೆ, ಮುಸ್ಲಿಂ ಲೀಗ್ ‘ಪ್ರತ್ಯಕ್ಷ ಕ್ರಮ’ದ ಹೆಸರಲ್ಲಿ ಆರಂಭಿಸಿದ ರಕ್ತಪಾತದ ವಿರುದ್ಧವಾಗಿ ಚಕಾರವನ್ನೂ ಆಡದೇ ಇದ್ದವರು ; ತೀರ್ಪಿನಲ್ಲಿ – ತಮಗೆ ಅರಿವಿಲ್ಲದೆಯೇ ಇರಬಹುದು-ನ್ಯಾಯಾಧೀಶರು ಇಂಥ ಶಕ್ತಿಗಳ ಬಗ್ಗೆ, ಕೋಮಸೌಹಾರ್ದ ಮತ್ತು ಸಾಮರಸ್ಯದ ಪ್ರತಿಪಾದಕರೆಂದು ಮೆಚ್ಚಿ ನುಡಿದಿದ್ದಾರೆ ಇದಕ್ಕಿಂತ ಮಿಗಿಲಾದ ಕಾನೂನಿನ ವಿಡಂಬನೆ ಇನ್ನೊಂದು ಇರಬಹುದೇ?

9) ಕೊನೆಯದಾಗಿ, ‘ತಾವು ಕಾನೂನಿಗನುಗುಣವಾಗಿ ನಡೆದುಕೊಂಡಿದ್ದೇವೆಂಬ ನ್ಯಾಯಾಧೀಶರ ಹೇಳಿಕೆಯ ಬಗ್ಗೆ ಒಂದು ಮಾತು; ಒಂದು ಕಲ್ಪಿತ ಕಾದಂಬರಿಯು ವಸ್ತುನಿಷ್ಠ ಇತಿಹಾಸವೋ ಅಲ್ಲವೋ ಎಂಬ ಬಗ್ಗೆ ನಿರ್ಣಯ ನೀಡಲು ನ್ಯಾಯಾಧೀಶರಿಗೆ ಯಾವ ಕಾನೂನು ಅಧಿಕಾರ ನೀಡಿದೆ? ಇಂಥ ವಿಷಯಗಳಲ್ಲಿ ತಮ್ಮ ವ್ಯಕ್ತಿಗತ ಅಭಿಮತ-ಒಲವುಗಳ ಆಧಾರದ ಮೇಲೆ ತೀರ್ಪು ನೀಡಲು ನ್ಯಾಯಾಧೀಶರಿಗೆ ಯಾವ ಕಾನೂನು ಅಧಿಕಾರ ನೀಡುತ್ತದೆ? ಐತಿಹಾಸಿಕ ವ್ಯಕ್ತಿಗಳು ಹಾಗೂ ಘಟನೆಗಳ ಮೌಲ್ಯಮಾಪನ ಮಾಡುವ ಇತಿಹಾಸದ ನಿಷ್ಪಕ್ಷಪಾತ ವಿಮರ್ಶಕನ ಅಧಿಕಾರ ನ್ಯಾಯಪೀಠದಲ್ಲಿ ಕುಳಿತ ನ್ಯಾಯಾಧೀಶರಿಗಿದೆಯೆ?

ಇವುಗಳ ಬಗೆಗೆ ನ್ಯಾಯಾಧೀಶರು ಬೆಳಕು ಚೆಲ್ಲುವರೇ?

  • ಹೊ.ವೆ.ಶೇಷಾದ್ರಿ

ಮುಂದುವರೆಯುವುದು

   

Leave a Reply