ಚಿಂತನಕ್ಷಣ – 18

ಹೊ.ವೆ.ಶೇಷಾದ್ರಿ - 0 Comment
Issue Date : 30.07.2014

ಶ್ರೀರಾಮಜನ್ಮಭೂಮಿ : ಇತ್ಯರ್ಥ ಹೇಗೆ?

ಪ್ರ : ರಾಮಜನ್ಮಭೂಮಿಯ ವಿಷಯವನ್ನು  ಒಂದು ವಿವಾದವಾಗಿ ಕೆರಳಿಸಿರುವುದು ‘ಇಸ್ಲಾಮೀ ರಾಜಕಾರಣ’ ಎಂಬುದಕ್ಕೆ ಪುರಾವೆಗಳೇನಿವೆ?

ಉ: ರಾಮಜನ್ಮಭೂಮಿಗೆ ‘ಬಾಬರೀ ಮಸೀದಿ’ ಎನ್ನುವ ಹೆಸರಲ್ಲಿ ರಚಿಸಿರುವ ಕ್ರಿಯಾ ಸಮಿತಿಯ ಮುಖ್ಯ ಸೂತ್ರಧಾರ ಶ್ರೀ ಶಹಾಬುದ್ದೀನ್ – ಪಕ್ಕಾ ರಾಜಕಾರಣಿ. ಆ ಪ್ರಶ್ನೆಯನ್ನು ತನ್ನ ಚುನಾವಣಾ ಪ್ರಚಾರದ ಬಂಡವಾಳವಾಗಿ ಮಾಡಿಕೊಂಡು ಮುಸಲ್ಮಾನರ ಮತೀಯ ಭಾವನೆಗಳನ್ನು ಬಡಿದೆಬ್ಬಿಸಿ ಲೋಕಸಭೆಗೆ ಗೆದ್ದು ಬಂದ ಜನತಾ ಪಕ್ಷದ ಹಿರಿಯ ಮುಂದಾಳು. ಮುಸ್ಲಿಂ ಮೌಲವಿಗಳನ್ನೆಲ್ಲ ಹಿಂದಕ್ಕೆ ಹಾಕಿ ತಾನೇ ಆ ಕ್ರಿಯಾ ಸಮಿತಿಯ ವಕ್ತಾರನಾಗಿರುವಾತ.

ಹಿಂದುಗಳ ಕಡೆಯಾದರೋ ಶ್ರೀರಾಮಜನ್ಮಭೂಮಿ ಮುಕ್ತಿ ಯಜ್ಞ ಸಮಿತಿಯಲ್ಲಿ ಮುಖ್ಯಸ್ಥರಾಗಿರುವವರೆಲ್ಲ ಸಾಧು-ಸಂನ್ಯಾಸಿಗಳು ಮತ್ತು ಸೇವಾ ನಿವೃತ್ತ ಹಿರಿಯ ಸರಕಾರಿ ಅಧಿಕಾರಿಗಳು. ಅವರ ಪೈಕಿ ಯಾರೊಬ್ಬರಿಗೂ ರಾಜಕೀಯದ ಸಂಬಂಧ ಇಲ್ಲ.

ಪ್ರ: ಹಿಂದು ಧರ್ಮಗ್ರಂಥಗಳಲ್ಲಂತೂ ಅಯೋಧ್ಯೆಯ ಬಗೆಗೆ, ಶ್ರೀರಾಮ ಜನ್ಮಭೂಮಿಯ ಬಗೆಗೆ, ಹೇರಳವಾಗಿ ಉಲ್ಲೇಖಗಳಿವೆ, ಸರಿಯೆ. ಆದರೆ ಆ ಬಗೆಗೆ ಸರಕಾರಿ ದಾಖಲೆಗಳೇನಾದರೂ ಇವೆಯೇ?

ಉ: ಅವೂ ಈಗಾಗಲೇ ಸಾಕಷ್ಟು ಪ್ರಸಿದ್ಧಗೊಂಡಿವೆ. ಅಯೋಧ್ಯೆ ಇರುವ ಫೈಜಾಬಾದ್ ಜಿಲ್ಲೆಯ ಡಿಸ್ಟ್ರಿಕ್ಟ್ ಗೆಜಟಿಯರ್‍ನ 1928ರ ಪರಿಷ್ಕೃತ ಆವೃತ್ತಿಯಲ್ಲಿ ನಮೂದಿಸಿರುವ  ದಾಖಲೆ ಇದು : “ರಾಮಕೋಟದಲ್ಲಿ ನೆಲಸಿದ್ದ ಶ್ರೀರಾಮ ದೇವಾಲಯವನ್ನು ಬಾಬರನ ಸೇನೆಯು ಧ್ವಂಸಗೊಳಿಸಿ ಅದರ ಜಾಗದಲ್ಲಿ ಕಟ್ಟಿಸಿದ ಮಸೀದಿಗೇ ಬಾಬರಿ ಮಸೀದಿ ಎಂದು ಹೆಸರು ಬಿದ್ದಿವೆ. ಈ ಮಸೀದಿಯ ಅನೇಕ ಕಂಬಗಳು ಇವೊತ್ತಿಗೂ ಬಲವಾಗಿ ನಿಂತಿದ್ದು ಅವು ದೇವಾಲಯದ ಕಂಬಗಳು ಎಂಬುದನ್ನೂ ಸಾರಿ ಹೇಳುತ್ತಿವೆ. ”

1889ರಲ್ಲಿ  ಭಾರತ ಸರಕಾರದ ಸರ್ವೆ ಆಫ್ ಇಂಡಿಯಾ ಇಲಾಖೆಯು ಪ್ರಸಿದ್ಧಪಡಿಸಿದ ವರದಿಯಲ್ಲಿಯೂ ಇದೇ ಮಾತು ಬಂದಿದೆ: “ಮೀರ ಬಾಕಿಯು ಮಸೀದಿಯನ್ನು ಕಟ್ಟಿಸಿದ್ದು ಶ್ರೀರಾಮಚಂದ್ರನ ದೇವಾಲಯವಿದ್ದ ಜಾಗದಲ್ಲೇ.”

ಪ್ರ: ಈ ವಿವಾದವನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಎಂದು ಒತ್ತಾಯಪಡಿಸುತ್ತಿದಾರಲ್ಲ, ಶಹಾಬುದ್ದೀನರು? ಇದರಿಂದ ಪುರಾವೆಗಳ ಬಲ ಅವರ ಕಡೆಗೆ ಇದೆ ಎಂದು ಭಾಸವಾಗುವುದಿಲ್ಲವೆ?

ಉ: ಅದೂ ಒಂದು ನಾಟಕ. ನ್ಯಾಯಾಲಯದ ನಿರ್ಣಯಗಳನ್ನು ಒಪ್ಪಿಕೊಳ್ಳುವ ಜಾಯಮಾನವೇ ಅವರದಲ್ಲ. ಈಗ ಮೂರು ವರ್ಷಗಳಿಗೆ ಹಿಂದೆ ಹಿಂದುಗಳಿಗೆ ಆ ಜಾಗ ಒಪ್ಪಿಸುವ  ತೀರ್ಮಾನವನ್ನು ನೀಡಿದ್ದು ನ್ಯಾಯಾಲಯವೇ. ಆದರೆ ಅದನ್ನೆಲ್ಲಿ  ಅವರು ಒಪ್ಪಿಕೊಂಡರು? ಶಾಬಾನೋ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು, ನ್ಯಾಯಾಧೀಶರನ್ನು ಸಹ ಅವಹೇಳನ ಮಾಡಿದರಲ್ಲ ಮುಸ್ಲಿಂ ಮತಾಂಧರು? ಮುಂದೆ ಸರ್ಕಾರವು ಕಾನೂನನ್ನೇ ಬದಲಾಯಿಸುವಂತೆ ಒತ್ತಾಯವನ್ನೂ ಅವರು ಹೇರಲಿಲ್ಲವೇ? ತಮಗೆ ಭಾರತದ ರಾಜ್ಯಾಂಗದಲ್ಲಿ, ಕಾನೂನಿನಲ್ಲಿ, ನಂಬಿಕೆ ಉಳಿದಿಲ್ಲ ಎಂದು ಘೋಷಿಸಿದವರೇ ಶಹಾಬುದ್ದೀನರಲ್ಲವೇ?

 ಮೊದಲನೆಯದಾಗಿ, ಇಂತಹ ಸ್ಫೋಟಕ ವಾತಾವರಣದಲ್ಲಿ ಎಂದಿಗೂ ಸರಕಾರ ಅಂತಹ ನ್ಯಾಯಾಂಗ ಆಯೋಗವನ್ನು ರಚಿಸುವುದಿಲ್ಲ ಎನ್ನುವ  ಭರವಸೆ ಅವರಿಗಿದೆ. ಎಂದೇ, ತಮ್ಮದು ನ್ಯಾಯದ ಪಕ್ಷ ಎಂದು ತೋರಿಸಿಕೊಳ್ಳುವುದಷ್ಟೇ ಅವರ ಉದ್ದೇಶ, ಎಂಬುದರಲ್ಲಿ ಯಾವ  ಸಂಶಯವೂ ಇಲ್ಲ.

ಪ್ರ: ಅವರ ಉದ್ದೇಶ ಏನೇ ಇರಲಿ, ಹಿಂದುಗಳು ಅದಕ್ಕೆ ಏಕೆ ಸಮ್ಮತಿಸಬಾರದು?

ಉ: ಅದರ ಅರ್ಥ ಏನಾಗುತ್ತದೆ ಗೊತ್ತೇ? ತಮ್ಮ ಶ್ರದ್ಧೆಯ ಸ್ಥಾನವೊಂದು ತಮ್ಮ ಸ್ವತಂತ್ರ ದೇಶದಲ್ಲಿಯೇ ವಿವಾದದ ವಿಷಯ. ಎಂದು ಒಪ್ಪಿಕೊಂಡಂತೆ ಆಗುತ್ತದೆ. ಹಿಂದುಗಳ ದೃಷ್ಟಿಯಿಂದ ಅದೊಂದು ತಾತ್ವಿಕ ಶರಣಾಗತಿ ಅಷ್ಟೇ ಅಲ್ಲ, ರಾಷ್ಟ್ರೀಯ ಅಪಮಾನ ಸಹ. ವಿವಾದವೇ ಇಲ್ಲದ ಕಡೆ ತಮ್ಮ ಪುಂಡಾಟಿಕೆ ಹಾಗೂ ರಾಜಕೀಯ ಗತ್ತುಗಾರಿಕೆಗಳಿಂದ ವಿವಾದವನ್ನು ಸೃಷ್ಟಿಸುವ ತಮ್ಮ ತಂತ್ರಕ್ಕೆ ಸಿಕ್ಕ ಮೊದಲ ವಿಜಯ ಎಂದೇ ಮುಸಲ್ಮಾನ ಪುಢಾರಿಗಳು ಎನಿಸಿಯಾರು.

ಪ್ರ: 1947ರ ಆಗಸ್ಟ್ 15ರ ಮುಂಚೆ ಇದ್ದ ಸ್ಥಿತಿಯನ್ನೇ ಎಲ್ಲರೂ ಒಪ್ಪಿಕೊಳ್ಳಬೇಕು, ಎಂದು ಜನತಾ ಪಕ್ಷ ಕರೆ ಕೊಟ್ಟಿತಲ್ಲ?

ಉ: ಆ ನಿರ್ಣಯವನ್ನು ಜನತಾ ಪಕ್ಷದ ಬಾಯಿಂದ ಹೊರಡಿಸಿದಾತ, ಶಹಾಬುದ್ದೀನರು, ಎಂಬುದರಲ್ಲಿ ಸಂದೇಹವೆಲ್ಲಿ? ಮುಸ್ಲಿಂ ಮುಖಂಡರು ಇನ್ನೂ ಹಿಂದೆ ಹೋಗಿ “ಬ್ರಿಟಿಷರು ಬರುವ ಮುಂಚಿನ ಸ್ಥಿತಿಗೆ ಮರಳಬೇಕು. ಬ್ರಿಟಿಷರು ಹಿಂದುಸ್ಥಾನವನ್ನು ಕಸಿದುಕೊಂಡದ್ದು ಮುಸಲ್ಮಾನರ ಕೈಯಿಂದ. ಆದ್ದರಿಂದ ”ಅವರ ಕೈಗೇ ಹಿಂದುಸ್ಥಾನವನ್ನು  ಒಪ್ಪಿಸಬೇಕು” ಎನ್ನುವವರೆಗೂ ಹೋಗುತ್ತಾರೆ. (ಬ್ರಿಟಿಷರು ಬರುವ ಮುಂಚೆ ಆಗಲೇ ಮುಸ್ಲಿಂ ಸಾಮ್ರಾಜ್ಯದ ಗೋರಿ ಇಲ್ಲಿ ಕಟ್ಟಿಯಾಗಿತ್ತು, ದಿಲ್ಲಿಯ ಮೊಗಲ ಬಾದಶಹ ಮರಾಠಾ ಸರದಾರ ಮಹದಾಜಿ ಸಿಂಧ್ಯೆಯ ಪಿಂಚಣಿದಾರನಾಗಿದ್ದ, ಎಂಬುದನ್ನು ಮರೆಮಾಚಲು ಮುಸ್ಲಿಂ ಮುಖಂಡರು ಎಷ್ಟೇ ಪ್ರಯತ್ನಿಸಿದರೂ, ಇತಿಹಾಸ ಮಾತ್ರ ನೂರು ನಾಲಿಗೆಗಳಿಂದ ಆ ಸತ್ಯವನ್ನು ಉದ್ಘೋಷಿಸುತ್ತಿದೆ!) ಅದಕ್ಕೆ ಹಿಂದುಗಳ ಉತ್ತರವೂ ಅಸಂದಿಗ್ಧ. ಹಿಂದಕ್ಕೆ ಹೋಗುವುದೇ ಆದರೆ ಬ್ರಿಟಿಷ್ ಮತ್ತು ಮುಸ್ಲಿಂ ಈ ಇಬ್ಬರು ಆಕ್ರಮಣಕಾರಿಗಳೂ ನಮ್ಮ ನೆಲದ ಮೇಲೆ ಕಾಲಿಡುವುದಕ್ಕೆ ಮುಂಚಿನ ಸ್ಥಿತಿಗೆ ಹೋಗುವುದೇ ಸರಿ.

ಪ್ರ: ಈ ಎಲ್ಲ ವಿವಾದ ತರ್ಕ-ಚರ್ಚೆಗಳಿಗೆ ಹಿಂದುಗಳ ಉತ್ತರವೇನು?

ಉ: ಅವರು ಉತ್ತರ ಕೊಡುವ   ಗೋಜಿಗೆ ಏಕೆ ಹೋಗಬೇಕು? ಶ್ರೀರಾಮಜನ್ಮಭೂಮಿ ಎಂದಿನಿಂದಲೂ ನಡೆದುಬಂದ ಕೋಟಿ ಕೋಟಿ ಹಿಂದುಗಳ ಶ್ರದ್ಧಾಸ್ಥಾನ. ರಾಷ್ಟ್ರದ ಮಾನಬಿಂದು. ಯಾವುದೇ ಚರ್ಚೆ-ತರ್ಕ-ಕಾನೂನು-ನ್ಯಾಯಾಲಯಗಳ ಚೌಕಟ್ಟಿಗೂ ಒಳಪಡುವ ವಿಷಯವೇ ಅದಲ್ಲ. ಅದೊಂದು ವಾದಾತೀತ ಸತ್ಯ. ಅದು ರಾಮಜನ್ಮಭೂಮಿಯಾಗಿಯೇ ಉಳಿದೀತು. ಇಂದಲ್ಲ ನಾಳೆ ಅಲ್ಲೊಂದು ಲೋಕೋತ್ತರವಾದ ರಾಮ ದೇವಾಲಯ ತಲೆಎತ್ತಿ ನಿಂತೀತು. ಇದರಲ್ಲಿ  ಸಂದೇಹವೇಕೆ?

ಪ್ರ: ಅಲ್ಪಸ್ವಲ್ಪ ಹಿಂದುತ್ವದ ಅಭಿಮಾನ, ರಾಷ್ಟ್ರೀಯತೆಯ ಅರಿವು ಉಳ್ಳಂತಹನೂ ಸಹ ಅರ್ಥ ಮಾಡಿಕೊಳ್ಳಬಹುದಾದ ಸಂಗತಿ ಇದು, ಸಂಶಯವಿಲ್ಲ. ಆದರೆ ಸರ್ಕಾರ ಮಾತ್ರ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ, ನಡೆದುಕೊಳ್ಳುತ್ತಿದೆಯಲ್ಲ?

ಉ: ಅಂತಹ ಅಭಿಮಾನ-ಅರಿವುಗಳಿಗಿಂತ ಹೆಚ್ಚಾಗಿ ಕೇಂದ್ರ ನಾಯಕರಿಗೆ ಇರುವ ಅಭಿಮಾನ-ಅರಿವು ‘ವೋಟಿ’ನ ಮೇಲೆ. ಅವರೀಗ ತಕ್ಕಡಿಯಲ್ಲಿಟ್ಟು ತೂಗಿ ನೋಡುತ್ತಿದ್ದಾರೆ. ಯಾರನ್ನು ಖುಷಿಪಡಿಸಿದಲ್ಲಿ ತಮ್ಮ ಬುಟ್ಟಿಗೆ  ಹೆಚ್ಚು ಓಟು ಬಿದ್ದೀತು, ಎಂದು. ಉ.ಪ್ರ.ದಲ್ಲಿ ಶೇಕಡ 85ಕ್ಕೂ ಹೆಚ್ಚಿಗೆ ಇರುವ ಹಿಂದುಗಳನ್ನು ಈ ವಿಷಯದಲ್ಲಿ ಎದುರುಹಾಕಿಕೊಳ್ಳುವ ಹುಚ್ಚುತನ ಅವರು ಎಂದಿಗೂ ಮಾಡಲಾರರು, ಎಂಬುದಂತೂ ನಿಜ.

ಪ್ರ: ಹಿಂದುಗಳಿಗೇ ಪೂರ್ತಿಯಾಗಿ ಒಪ್ಪಿಸಿದಲ್ಲಿ ಮುಸಲ್ಮಾನರು ದಂಗೆ ಎದ್ದಾರು, ದೇಶದಾದ್ಯಂತ ಹಿಂಸೆಯ ಜ್ವಾಲೆ ಹಬ್ಬಿಸಿಯಾರು ಎನ್ನುವ ಅಂಜಿಕೆ ಸರಕಾರಕ್ಕೆ ಇರಬಹುದಲ್ಲವೇ?

ಉ: ಸರಕಾರಕ್ಕೆಂತಹ ಹಿಂಸೆಯ ಅಂಜಿಕೆ? ಅವರಿಗಿರುವ ಅಂಜಿಕೆ ವೋಟಿನದಷ್ಟೆ ಸರಕಾರ ಒಮ್ಮೆ ಬಲವಾದ ನಿಲುವು ತಾಳಿತೆಂದರೆ ಮುಸಲ್ಮಾನರೂ ತೆಪ್ಪಗಾದಾರು. ಸರಕಾರ ಬೆದರಿಕೆಗೆ ಬಗ್ಗುತ್ತದೆ, ಎಂದು ಮುಸಲ್ಮಾನ ಮುಖಂಡರಿಗೆ ಭರವಸೆ ಇರುವುದೇ ಅವರ ಪುಂಡಾಟಿಕೆಗೆ ಕಾರಣ. ಹಿಂದೆ ಸೋಮನಾಥದ ಮಂದಿರದ ಜಾಗದಲ್ಲಿ ಮಸೀದಿ ಮತ್ತು ಇತರೇ ಗೋರಿಗಳನ್ನೆಲ್ಲ ತೆಗೆದುಹಾಕಿ ಸೋಮನಾಥ ಮಂದಿರದ ಜೀರ್ಣೋದ್ಧಾರದ ನಿರ್ಣಯವನ್ನು ಭಾರತ ಸರಕಾರ ಕೈಗೊಂಡಾಗ, ಯಾವ ಒಬ್ಬ ನರಪಿಳ್ಳೆಯೂ ಅಪಸ್ವರ ಎತ್ತುವ ಸಾಹಸ ಮಾಡಲಿಲ್ಲ. ಸರದಾರ ಪಟೇಲರು ಗೃಹಮಂತ್ರಿಯಾಗಿದ್ದಾಗಿನ ಕಾಲ ಅದು. ಎಂದೇ ಮುಸಲ್ಮಾನರಿಗೆ ನಿಜವಾದ ಜ್ಞಾನೋದಯವಾಗಿತ್ತು.

ಪ್ರ:  ಆದರೆ ಈಗ ಕೇಂದ್ರದಲ್ಲಿ ಅಂತಹ ಮನೋಬಲ ಉಳ್ಳ ನಾಯಕ ವರ್ಗ ಇಲ್ಲವಲ್ಲ, ಹೀಗಾಗಿ ಹಿಂಸೆಯ ಭುಗಿಲನ್ನು ಮುಸಲ್ಮಾನರು ಎಬ್ಬಿಸಬಲ್ಲರಲ್ಲವೇ? ಅಕ್ಟೋ.14 ರಂದು ದೇಶದಾದ್ಯಂತದಿಂದ ಮುಸಲ್ಮಾನರ ತಂಡಗಳು ಅಯೋಧ್ಯೆಗೆ ಕೂಚು ಮಾಡಿ ‘ಬಾಬರಿ ಮಸೀದಿ’ಯನ್ನು  ಬಿಡುಗಡೆ ಮಾಡುವುದಾಗಿ ಅದರ ಸಮಿತಿಯ ಮುಖಂಡರು ಬೆದರಿಕೆ ಹಾಕಿದಾರಲ್ಲವೇ?

ಉ: ವಾಸ್ತವಿಕವಾಗಿ ಹೆದರಿಕೆ ಇರುವುದು ಅವರಿಗೆ. ಕಳೆದ ತಿಂಗಳು ಅವರು ಸಾಂಕೇತಿಕವಾದ ಕೂಚು ಘೋಷಿಸಿದ್ದರಷ್ಟೇ. ಆದರೆ ವಿ.ಹಿಂ.ಪ.ನ ಬಜರಂಗದಳವರು ಅಯೋಧ್ಯೆಯ ಸುತ್ತಮುತ್ತಲ  ಮೂರು ಜಿಲ್ಲೆಗಳಲ್ಲಿ ಸರ್ಪಕಾವಲು ಹಾಕಿ, ಅಂದು ಯಾವೊಬ್ಬ ಮುಸಲ್ಮಾನನೂ ಬಸ್‍-ರೈಲುಗಳಲ್ಲಿ ಅಯೋಧ್ಯೆಗೆ  ಕಾಲಿಡದಂತೆ ಬಂದೋಬಸ್ತು ಮಾಡಿದರು.  ಹತ್ತಿರದ ಹಳ್ಳಿಗಳಿಂದ ಕಾಲುನಡಿಗೆಯಲ್ಲಿ ಫೈಜಾಬಾದಿನಲ್ಲಿ ಸೇರಿದ್ದ 200-250 ಮಂದಿಗೂ ಅಯೋಧ್ಯೆಯತ್ತ ಹೆಜ್ಜೆ ಹಾಕುವ ಸಾಹಸವಾಗಲಿಲ್ಲ.

ಅದಕ್ಕೂ ಮುಂಚೆ, ಆ ದಾಳಿಯನ್ನು ಕೈಗೊಳ್ಳಬೇಕೋ ಬೇಡವೋ ಎನ್ನುವ ಬಗೆಗೆ ಬಾಬರಿ ಸಮಿತಿಯಲ್ಲಿಯೇ ಭಿನ್ನಾಭಿಪ್ರಾಯವಾಯಿತು.  ಎಲ್ಲ ಪ್ರಮುಖ ಮೌಲವಿಗಳೂ “ನಿಶ್ಶಸ್ತ್ರರಾದ ಮುಸಲ್ಮಾನರನ್ನು  ಸಶಸ್ತ್ರ ಪೋಲಿಸ್ ಪಡೆಗಳು ಹಾಗೂ ಹಿಂದು ವಿರೋಧದ ಬಾಯೊಳಕ್ಕೆ ತಳ್ಳುವುದು ಇಸ್ಲಾಂಮತದ ಆದೇಶಕ್ಕೆ ವಿರುದ್ಧವಾದುದು” ಎಂದು ಹೇಳಿಕೆ  ಇತ್ತರು. ಮೀರತ್‍ನಲ್ಲಿ ಕೈಸುಟ್ಟುಕೊಂಡನಂತರ ಅನೇಕ ಮುಸ್ಲಿಂ ಲೇಖಕರು ಮುಸ್ಲಿಂಮರಿಗೆ  ಆಕ್ರಮಣದ ಹಾದಿ ಬಿಟ್ಟು ಹಿಂದುಗಳೊಂದಿಗೆ ಹೊಂದಿಕೊಂಡು ನಡೆಯುವಂತೆ ಹಿತ ನುಡಿದದ್ದೂ ಇದೇ ಹಿನ್ನೆಲೆಯಲ್ಲಿ.

ವಿ.ಹಿಂ.ಪ. ಮುಖಂಡರಂತೂ ಸ್ಪಷ್ಟಪಡಿಸಿದ್ದಾರೆ- ಅಕ್ಟೋ. 14 ರಂದು ಯಾವುದೇ ದಾಳಿಕಾರನೂ ಅಯೋಧ್ಯೆಗೆ ಕಾಲಿಡದಂತೆ ತಡೆಗಟ್ಟಲಾಗುವುದು, ಅಕಸ್ಮಾತ್ ಒಳಕ್ಕೆ ನುಸುಳಿ ಬಂದಲ್ಲಿ ಅಂತಹವರು ಯಾರೂ ಮತ್ತೆ ವಾಪಸಾಗಲಾರರು. ದೇಶದ ಬೇರೆ ಕಡೆಗಳಿಂದ ಮುಸಲ್ಮಾನರು ಹೊರಟಲ್ಲಿ ಅಲ್ಲಲ್ಲೇ ಅವರನ್ನು  ತಡೆಗಟ್ಟಲಾಗುವುದು, ರೈಲಿನಿಂದ ಇಳಿಸಲಾಗುವುದು, ಎಂದೂ ಪರಿಷತ್ತು ಸ್ಪಷ್ಟಪಡಿಸಿದೆ. ಉ.ಪ್ರ.ದಲ್ಲಿ ಬಜರಂಗದಲ ಇರುವಂತೆ ಎಲ್ಲ ಪ್ರಾಂತಗಳಲ್ಲಿಯೂ ಹಿಂದು ಮುನ್ನಣಿ, ಹಿಂದು ಜಾಗರಣ ವೇದಿಕೆಯಂತಹ ಯುವಕ ತಂಡಗಳು ಪ್ರಭಾವಿಯಾಗಿ ಮೈತಳೆದಿವೆ. ಅಲ್ಲಲ್ಲಿನ ಪೋಲಿಸ್ ಅಧಿಕಾರಿಗಳೂ ಸಹ ಮುಸಲ್ಮಾನರ ಇಂತಹ ಅತಿರೇಕದ ಹುಚ್ಚಾಟವನ್ನು ಸಹಿಸುವ  ಮನಸ್ಥಿತಿಯಲ್ಲಿಲ್ಲ, ಎಂದೂ ಹೇಳಬಹುದು.

ಪ್ರ: ಹಾಗಾದರೆ ಈ ಪ್ರಶ್ನೆ ಅಂತಿಮವಾಗಿ ಇತ್ಯರ್ಥವಾಗುವುದು ಎಂದಿಗೆ? ಯಾವ ರೀತಿ?

ಉ : ಬರಲಿರುವ  ಚುನಾವಣೆ ಮುಂಚೆ ಅಥವಾ ಹೆಚ್ಚೆಂದರೆ ಇನ್ನೊಂದು ಚುನಾವಣೆಗೆ ಮುನ್ನ ! ಈಗ ಮೇಲೇಳುತ್ತಿರುವ ಹಿಂದು ಜಾಗೃತಿಯ ಹೆದ್ದರೆ ಇಂತಹ ಎಲ್ಲ ವಿಧ ಹಿಂದು ವಿರೋಧಿ, ರಾಷ್ಟ್ರ ವಿರೋಧಿ ರಾಜಕೀಯ ಗತ್ತುಗಾರಿಕೆಗಳನ್ನು ಅರಗಿಸಿಕೊಳ್ಳಲಿದೆ, ಎಂಬುದರಲ್ಲಿ ಸಂದೇಹ ಬೇಡ.

  • ಹೊ.ವೆ.ಶೇಷಾದ್ರಿ                                                                                                                               ಮುಂದುವರೆಯುವುದು
   

Leave a Reply