ಚಿಂತನಕ್ಷಣ – 19

ಹೊ.ವೆ.ಶೇಷಾದ್ರಿ - 0 Comment
Issue Date : 02.08.2014

ನಮ್ಮ ನಿಮ್ಮ ನಡುವೆ

ಪ್ರ : ಗುರುಕಾಣಿಕೆಯನ್ನು ಅರ್ಪಿಸಲು ಅವಿಶ್ವಾಸ ವ್ಯಕ್ತಪಡಿಸುವವರಿಗೆ ಏನೆಂದು ಉತ್ತರಿಸಬೇಕು?

-ಶ್ರೀ ಶಂಕರನಾರಾಯಣ, ಯಲ್ಲಾಪುರ

ಉ : ಮೊಟ್ಟಮೊದಲಾಗಿ ಆ ‘ಗುರು’ ವಿಶ್ವಾಸ‍ಕ್ಕೆ ಯೋಗ್ಯ, ಎಂದು ಅವರಿಗೆ ಮನಗಾಣಿಸಬೇಕು.  ತಮ್ಮ  ಕಾಣಿಕೆ ಹಿರಿದಾದ ಕಾರ್ಯಕ್ಕೆ ವಿನಿಯೋಗ ಆಗಲಿದೆ, ಎನ್ನುವ ನಂಬಿಕೆ ಮೂಡಿದಾಗ ಅರ್ಪಿಸುವುದೇ ನಿಜವಾದ ಕಾಣಿಕೆ. ‘ಪಡೆ’ಯುವುದರಲ್ಲಲ್ಲ ‘ನೀಡು’ವುದರಲ್ಲಿದೆ ಬದುಕಿನ ಸಾರ್ಥಕ್ಯದ  ಗುಟ್ಟು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಾದುದು ಎರಡನೆಯದು. ಇವೆರಡಕ್ಕಿಂತ ಮುಖ್ಯವಾದ ಸಂಗತಿಯೊಂದಿದೆ : ಆ ರೀತಿ ಇತರರಿಗೆ ತಿಳಿಸಿಕೊಡುವಂತಹರು ಆ ವಿಷಯದಲ್ಲಿ ತಮ್ಮ ಸ್ವಂತದ  ನಿಸ್ವಾರ್ಥ ಮೇಲ್ಪಂಕ್ತಿಯನ್ನು ಮೊದಲಿಗೆ ಹಾಕಿಕೊಡುವುದು.

ಪ್ರ: ಮನುಷ್ಯನನ್ನೇ ಮನುಷ್ಯನಿಗೆ ಆಹಾರವಾಗಿ ಉಣಬಡಿಸಿದ ಕಾನಪುರದ ಹೋಟೆಲ್ ಮಾಲೀಕನಿಗೆ ಅಲ್ಲಿನ ಮುಖ್ಯಮಂತ್ರಿಗಳು ಯಾವ ಶಿಕ್ಷೆ ವಿಧಿಸುತ್ತಾರೆ ?

-ಶ್ರೀ ಕೆ. ಪದ್ಮನಾಭ, ಉಜಿರೆ

ಉ : ಶಿಕ್ಷೆ ವಿಧಿಸುವುದು ಮುಖ್ಯಮಂತ್ರಿಗಳ ಕೆಲಸವಲ್ಲ, ಅದು ನ್ಯಾಯಾಲಯದ ಅಧಿಕಾರಕ್ಕೆ ಒಳಪಟ್ಟದ್ದು. ಪೋಲಿಸರ ಸಾಕ್ಷ್ಯದ ಮೇಲೆ ತೀರ್ಮಾನ ನೀಡಬೇಕಾಗುತ್ತದೆ ನ್ಯಾಯಾಲಯಗಳು. ಆದರೆ ಪೋಲಿಸರೂ ಮನುಷ್ಯರು, ಅವರಲ್ಲೂ ‘ದಯೆ ಮಯೆ’ ಇರುವಂತಹದೇ. ಅವರು ತಯಾರಿಸುವ ಸಾಕ್ಷ್ಯದಲ್ಲಿ ಆ ಎಲ್ಲ ಅಂಶಗಳು ಬೆರೆತುಕೊಂಡಿರುವುದೂ ಅಪರೂಪವೇನಲ್ಲ. ಎಂದ ಮೇಲೆ ಅದರ ಆಧಾರದ ಮೇಲೆ ಹೊರ ಬೀಳುವ ‘ಶಿಕ್ಷೆ’ಯಲ್ಲೂ ಆ ಅಂಶಗಳ ಪ್ರಭಾವ ಇದ್ದದ್ದೇ !

ಪ್ರ : ಜಪಾನಿನಲ್ಲಿ ರಾಷ್ಟ್ರನಾಯಕರು ಸಾವಿಗೀಡಾದಾಗ ಅಲ್ಲಿ ಜನ ಹೆಚ್ಚಿನ ಕೆಲಸ ಮಾಡುತ್ತಾರೆ. ಆದರೆ ನಮ್ಮಲ್ಲಿ ರಜಾ ಘೋಷಣೆ ಮಾಡಿ ಮಜಾ ಮಾಡುತ್ತಾರಲ್ಲ ?

-ಶ್ರೀ ಮುತ್ತಣ್ಣಾ, ಬನವಾಸಿ

ಉ : ಜಪಾನಿನ ಸಂಗತಿ ನನಗೆ ತಿಳಿಯದು – ಆದರೆ ನಮ್ಮಲ್ಲಿ ಕೆಲವು ‘ನಾಯಕ’ರು ತೀರಿಕೊಂಡಾಗ ಜನಕ್ಕೆ ನಿಜಕ್ಕೂ ಸಂತೋಷವೇ ಅಗುತ್ತದೆಯೋ ಏನೋ ಯಾರು ಬಲ್ಲರು?

ಪ್ರ: ವರ್ಣಾಶ್ರಮ ಧರ್ಮವನ್ನು ನಾಡಿನ ಗಣ್ಯವ್ಯಕ್ತಿಗಳೆಲ್ಲ ವಿರೋಧಿಸುತ್ತಿದ್ದಾರೆ. ನಿಮ್ಮ ಅಭಿಪ್ರಾಯ?

-ಕೆ. ಬಿದರೆ ಅನಂತು, ಕೆ. ಬಿದರೆ

 ಉ: ಇಂದು ‘ವರ್ಣ’ ಎಲ್ಲಿದೆ? ‘ಆಶ್ರಮ’ ಎಲ್ಲಿದೆ? ‘ಧರ್ಮ’ ಎಲ್ಲಿದೆ? ಅಸ್ತಿತ್ವದಲ್ಲೇ ಇಲ್ಲದ ಸಂಗತಿಯ ಬಗೆಗೆ ಅಭಿಪ್ರಾಯ ಕೊಡುವ  ಪ್ರಶ್ನೆ ಎಲ್ಲಿ ಬರುತ್ತದೆ? ಗಾಳಿಗೆ ಗುದ್ದಿ ಕೈ ನೋಯಿಸಿಕೊಂಡಂತೆ ಆ ಹವ್ಯಾಸ ಅಷ್ಟೆ.

ಪ್ರ: ನಮ್ಮ ಸಂವಿಧಾನ ಅಂಕಿತದಲ್ಲಿನ ಪ್ರಜಾತಾಂತ್ರಿಕ ಸರಕಾರವು ಪಕ್ಷ ಪ್ರಭುತ್ವವಿಲ್ಲದೆ ನಡೆಯಲು ಸಾಧ್ಯವಿಲ್ಲವೇ?

– ಶ್ರೀ ಗಣಪಯ ನಾಕ್ಮನೆ, ಅಂಕೋಲಾ

ಉ: ಒಂದೇ ಪಕ್ಷದ ಆಳ್ವಿಕೆ ಇರಬೇಕೆಂದೆನೂ ಇಲ್ಲ – ಹಲವು ಪಕ್ಷಗಳ ಸಂಯುಕ್ತ ಸರಕಾರವೂ ಇರಬಲ್ಲದು.  ಆದರೆ ಯಾವುದೇ  ಸರಕಾರವಾದರೂ ಅದು ಪಕ್ಷದ/ಪಕ್ಷಗಳದ್ದೇ ಆಳ್ವಿಕೆ ಆದೀತು.  ಜನರ ಮತ ಗಳಿಸಿ ಬರುವ  ಪ್ರತಿನಿಧಿಗಳ ಆಳ್ವಿಕೆ ಅದು. ಒಂದು ದೃಷ್ಟಿಯಿಂದ ಅವರ ನೇರವಾದ ಆಳ್ವಿಕೆಯೂ ಅಲ್ಲ, ಅವರು ಪಕ್ಷದ ಶಿಸ್ತಿಗೆ ಒಳಪಡುವುದರಿಂದ ಪಕ್ಷದ ಆಳ್ವಿಕೆ ಅದು.  ಅದೂ ಅಲ್ಲ, ಪಕ್ಷದ ನಾಯಕನ ಆಳ್ವಿಕೆಯೇ ಅದಾಗುತ್ತದೆ. ಈ ಪದ್ಧತಿ ನೇರವಾದ ಪ್ರಜಾಪ್ರಭುತ್ವ ಅಲ್ಲ, ಜನರಿಂದ ಪ್ರತಿನಿಧಿಗಳಿಗೆ , ಅವರಿಂದ ಪಕ್ಷಕ್ಕೆ, ಪಕ್ಷದಿಂದ ಅದರ ನಾಯಕನಿಗೆ ಅಧಿಕಾರ ವರ್ಗಾಯಿಸುತ್ತಾ ಹೋಗುವಂತಹ, ಪ್ರಜೆಗಳಿಗೆ ಬಹುದೂರದ ಸಂಬಂಧ ಉಳ್ಳ, ಆಳ್ವಿಕೆಯ ವಿಧಾನ ಇದು. ಇವೊತ್ತು ರೂಪಿತವಾಗಿರುವ ಚುನಾವಣಾ ಪದ್ಧತಿಯಲ್ಲಂತೂ ಜನರ ಮತಕ್ಕಿಂತ- ಹಣ, ಜಾತಿ, ಪಂಥ, ಅಧಿಕಾರ ಇವುಗಳದೇ ಮತ ಅದು ! ಎಂದೇ ಚುನಾವಣಾ ಪದ್ಧತಿಯಲ್ಲಿ ಮೌಲಿಕವಾಗಿ ಬದಲಾವಣೆ ತರಬೇಕೆಂಬ ಕೂಗನ್ನು ಅನೇಕ ಚಿಂತಕರು ಎಬ್ಬಿಸಿದ್ದಾರೆ.

ಪ್ರ: ಕರ್ನಾಟಕ ಸರಕಾರವು ದೂರವಾಣಿಯನ್ನು ಕದ್ದು ಕೇಳುವ  ದೂರವಾಣಿ ಕ್ರಮಾಂಕಗಳ ಪಟ್ಟಿಯಲ್ಲಿ ಸಂಘ ಕಾರ್ಯಾಲಯದ  ಕ್ರಮಾಂಕವೂ ಸೇರಿದೆಯಲ್ಲ?

-ಶ್ರೀ ಉದಯ, ಧಾರವಾಡ

ಉ: ಕದ್ದು ಕೇಳಲಿ,  ಬಿದ್ದು ಕೇಳಲಿ, ಸಂಘ ಕಾರ್ಯಾಲಯದ ದೂರವಾಣಿಯಿಂದ ಪೋಲಿಸರಿಗಾಗಲೀ ರಾಜಕಾರಣಿಗಳಿಗಾಗಲಿ ಆಗುವಂತಹ ಲಾಭವೇನೂ ಇಲ್ಲ ಎಂದೂ  ಅವರು ಕೇಳಲು ಅವಕಾಶ ಆಗದಂತಹ ಕೆಲವು  ಉದಾತ್ತವಾದ ಸಂಗತಿಗಳು ಅವರ ಕಿವಿಗೆ ಬಿದ್ದಾವು, ಅಷ್ಟೆ. ಆದರೆ ಸರಕಾರದ ಚಾಳಿ ಕಂಡು  ಮಾತ್ರ ಆಶ್ಚರ್ಯವೆನಿಸುತ್ತದೆ.  ಸ್ವಾತಂತ್ರ್ಯಪ್ರೇಮಿ ಸಂಘಟನೆಗಳ ಮೇಲೆ ನಿಗಾ ಇಡುತ್ತಿದ್ದ ಬ್ರಿಟಿಷ್ ಸರಕಾರದ ಪದಚಿಹ್ನೆಯಲ್ಲೆ ನಮ್ಮ ಸ್ವತಂತ್ರ ಭಾರತದ ಸರಕಾರ ಸಹ ಸಾಗುತ್ತಿರುವುದು ಎಂತಹ ಅಪಮಾನಾಸ್ಪದ ! ದೇಶಭಕ್ತ ಸಂಸ್ಥೆ ಯಾವುದು, ದೇಶವಿಘಾತಕ ಸಂಸ್ಥೆ ಯಾವುದು ಎಂಬ ಪ್ರಾಥಮಿಕ ವ್ಯತ್ಯಾಸವನ್ನೂ ಗುರುತಿಸಲಾರದಷ್ಟು ನಮ್ಮ ರಾಜಕೀಯ ನಾಯಕರು ಅಜ್ಞರಾಗಿ ಉಳಿದಿರುವುದು ಎಂತಹ ವಿಚಿತ್ರ !

ಪ್ರ : ಮುರಾರಜಿ ದೇಸಾಯಿ ಅವರಿಗೆ ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿ ನೀಡಿದ್ದನ್ನು ಕಂಡು ಕಾಂಗ್ರೆಸಿನವರು ಕೆರಳಿದರೇಕೆ?

-ಶ್ರೀ ಎಚ್. ಎಸ್. ಕಶ್ಯಪ

ಉ: ಪಾಕಿಸ್ತಾನಕ್ಕೆ ಜನ್ಮ ಕೊಡುವುದರಿಂದ ಮೊದಲ್ಗೊಂಡು ಇದುವರೆವಿಗೂ ಅದನ್ನು ಪಾಲಿಸಿ ಪೋಷಿಸಿಕೊಂಡು ಬರುತ್ತಿರುವ ತಮ್ಮ (ಕಾಂಗ್ರೆಸ್ಸಿನ ನಾಯಕ) ವರ್ಗಕ್ಕೆ ಇಂದು ವ್ಯತಿರಿಕ್ತವಾಗಿ ನಿಂತಿರುವಂತಹರೊಬ್ಬರಿಗೆ ಪಾಕಿಸ್ತಾನ ಸನ್ಮಾನ ಮಾಡುವುದೆಂದರೆ ಪಾಕಿಸ್ತಾನದ್ದು  ಎಂತಹ ಕೃತಘ್ನತೆ. ಎಂದು ಅವರಿಗೆ ಅನಿಸಿರಲಿಕ್ಕೂ ಸಾಕು !

ಪ್ರ: ಮಹಾರಾಷ್ಟ್ತದಲ್ಲಿರುವ  ಶಿವಸೇನೆಯ ಧೋರಣೆಗಳಿಗೂ ರಾ. ಸ್ವ. ಸಂಘದ ಧೋರಣೆಗಳಿಗೂ ಹೊಂದಾಣಿಕೆ ಇದೆಯೇ?

ಶ್ರೀ ಎನ್. ಎಸ್. ಚಿಟ್ಟೂರು, ಶಿಕಾರಿಪುರ

ಉ: ಸಂಘ ಒಂದು ಸೇನೆಯೂ ಅಲ್ಲ, ಶಿವಸೇನೆಯಂತೆ ರಾಜಕೀಯ ಸಂಸ್ಥೆಯೂ ಅಲ್ಲ, ಶಿವಸೇನೆಯಂತೆ ಸಿಖ್ಖರನ್ನು ಬೇರೆಯಾಗಿ ಕಾಣುವುದಾಗಲಿ ಹರಿಜನರೊಡನೆ ಘರ್ಷಣೆಗೆ ಇಳಿಯುವುದಾಗಲಿ, ತನ್ನ ಕನಸಿನಲ್ಲಿ ಎಣಿಸುವುದೂ ಇಲ್ಲ. ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಹಿಂದು ಶಬ್ದ ಬಳಸಿಕೊಳ್ಳುವ ಶಿವಸೇನೆಯೊಂದಿಗೆ ಸಂಘದಂತಹ ಪರಿಶುದ್ಧ ಅಖಿಲ ಹಿಂದು ದೇಶದ, ಸಮಸ್ತ ಹಿಂದು ಜನಾಂಗದ ರಾಷ್ಟ್ರೀಯ ಸಂಘಟನೆಯ ‘ಹೊಂದಾಣಿಕೆ’ಯನ್ನು ಕಲ್ಪಿಸಿಕೊಳ್ಳುವುದಾದರೂ ಹೇಗೆ?

  • ಹೊ.ವೆ.ಶೇಷಾದ್ರಿ                                                                                                                                                                                ಮುಂದುವರೆಯುವುದು………
   

Leave a Reply