ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಅನುಷ್ಠಾನ

ಧಾರ್ಮಿಕ - 0 Comment
Issue Date : 13.10.2014

ಈವಿಷಯದಲ್ಲಿಯೇ ಒಟ್ಟು ಮೂರು ವಿಷಯಗಳು ಸೇರಿದೆ.ಹಾಗಾಗಿ ಬಲು ವಿಸ್ತಾರವಾಗಿಯೇ ವಿಚಾರಮಾಡಬೇಕಾಗುತ್ತದೆ. ಮೊದಲನೆಯದು ದೈನಂದಿನ ಜೀವನ, ಎರಡನೆಯದು ಭಗವದ್ಗೀತೆ, ಮೂರನೆಯದು ಜೀವನಕ್ಕೆ ಗೀತೆಯ ಅನುಷ್ಠಾನ. ಒಂದೊಂದೂ ವಿಷಯಗಳು ನಮಗೆ ಸರಿಯಾಗಿ ತಿಳಿದಿದ್ದರೆ ಈ ವಿಷಯವು ನಮಗೆ ಪೂರ್ಣವಾಗಿ ಅರ್ಥವಾಗಲು ಸಾಧ್ಯ.

ಕರಾಗ್ರೇವಸತೇ ಲಕ್ಷ್ಮೀ:
ಈಗ ಒಂದೊಂದೂ ವಿಷಯವನ್ನು ಸ್ಪರ್ಶಿಸುತ್ತಾ ಹೋಗೋಣ. ಮೊದಲನೆಯದಾಗಿ ನಿತ್ಯ ಜೀವನದ ಬಗ್ಗೆ ವಿಚಾರ ಮಾಡೋಣ. ನಮ್ಮ ಜೀವನವು ಬೆಳಿಗ್ಗೆ ಹಾಸಿಗೆಯಿಂದ ಏಳುವಾಗ ಆರಂಭವಾಗುತ್ತದೆ. ಸಂಸ್ಕಾರವಂತ ಮನೆಗಳಲ್ಲಿ ಸಾಮಾನ್ಯವಾಗಿ ಹಾಸಿಗೆಯಿಂದ ಏಳುವಾಗಲೇ ‘ಕರಾಗ್ರೇವಸತೇ ಲಕ್ಷ್ಮ್ಮೀ, ಕರಮಧ್ಯೇ ಸರಸ್ವತೀ, ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಮ್’ ಎಂಬ ನಮ್ಮ ಹಿರಿಯರು ಕಲಿಸಿದ ಪ್ರಾತಃಸ್ಮರಣೆ ಶ್ಲೋಕವನ್ನು ಹೇಳುತ್ತಾ ಏಳುವ ಅಭ್ಯಾಸ ಇರುತ್ತದೆ. ಇದೇ ಮಂತ್ರ ಪಠಿಸಬೇಕೆಂದಲ್ಲ, ಅವರವರ ಸಂಪ್ರದಾಯಕ್ಕನುಗುಣವಾಗಿ ಭಗವಂತನ ಸ್ಮರಣೆ ಮಾಡುತ್ತಾ ದಿನವನ್ನು ಪ್ರಾರಂಭಿಸುವುದು ಒಳಿತು, ಎಂಬುದು ಹಿರಿಯರ ನುಡಿ. ಈಗ ಟಿ.ವಿ.ಗಳಲ್ಲಿ ಬಿಗ್‌ಬಾಸ್ ಅಂತಹ ಕಾರ್ಯಕ್ರಮಗಳನ್ನು ನೋಡಿದವರು ಯಾವುದೋ ಪಾಶ್ಚಿಮಾತ್ಯ ಸಂಗೀತವನ್ನು ಕೇಳಿಕೊಂಡು ಹಾಸಿಗೆಯಿಂದ ಎದ್ದೊಡನೆಯೇ ಡ್ಯಾನ್ಸ್ ಮಾಡುತ್ತಾ ದಿನವನ್ನು ಆರಂಭಿಸಲೂಬಹುದು. ಇರಲಿ. ಹೇಗೆ ದಿನವನ್ನು ಆರಂಭ ಮಾಡಿದರೆ ದಿನಪೂರ್ಣ ನಮ್ಮ ಮನಃಸ್ಥಿತಿ ಹೇಗಿರುತ್ತದೆಂಬುದನ್ನು ಅನುಭವದಿಂದಲೇ ತಿಳಿಯಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಎಲ್ಲದನ್ನೂ ಪರೀಕ್ಷಿಸಿಯೇ ತಿಳಿಯುವುದು ಉತ್ತಮ.
ಹಾಸಿಗೆಯಿಂದೆದ್ದು,ಬೆಳಗಿನ ಶೌಚಕಾರ್ಯಗಳನ್ನು ಮುಗಿಸಿ, ಕೆಲವರು ಯೋಗಾಭ್ಯಾಸ ಮಾಡಿ, ಪತ್ರಿಕೆಗಳ ಮೇಲೆ ಕಣ್ಣಾಡಿಸಿ, ಇನ್ನು ಕೆಲವರು ವಾಕಿಂಗ್ ಮುಗಿಸಿ, ಸ್ನಾನ ಮುಗಿಸಿ, ಅಭ್ಯಾಸ ಇದ್ದವರು ದೇವರ ಪೂಜೆ ಮಾಡಿ (ಸ್ನಾನ-ಸಂಧ್ಯಾ ಎನ್ನುವ ಮಾತು ಒಂದೇ ಪದವೆನ್ನುವಂತೆ ಬಳಕೆಯಲ್ಲಿತ್ತು) ನಂತರ ಉಪಹಾರ ಮುಗಿಸಿ ತಮ್ಮ ಉದ್ಯೋಗದಲ್ಲಿ ನಿರತರಾಗಿ ಸಂಜೆಯವರೆಗೂ ದುಡಿದು ಸಂಜೆ ತಮ್ಮ ಮಿತ್ರರೊಡನೆ ಸ್ವಲ್ಪ ತಿರುಗಾಟ, ಹರಟೆ ಎಲ್ಲಾ ಮುಗಿಸಿ ಮನೆಗೆ ಬಂದು ಟಿ.ವಿ ಕಾರ್ಯಕ್ರಮಗಳನ್ನು ಸ್ವಲ್ಪ ಹೊತ್ತು ನೋಡಿ ರಾತ್ರಿ ಊಟಮಾಡಿ ನಿದ್ರೆ ಮಾಡುವುದನ್ನು ನಿತ್ಯ ಜೀವನ ಎಂದು ಹೇಳ ಬಹುದಲ್ಲವೇ?
ಹಾಗಾದರೆ ಜೀವನ ಎಂದರೆ ಇಷ್ಟೇನಾ? ದೈನಂದಿನ ಜೀವನದ ಬಗ್ಗೆ ಇನ್ನೂ ಹೆಚ್ಚು ವಿಚಾರ ಮಾಡೋಣ. ನಿತ್ಯವೂ ನಾವು ಜೀವನ ಮಾಡುವಾಗ ಹಲವಾರು ವಸ್ತುಗಳು, ಜೀವಿಗಳು ಮತ್ತು ಹಲವಾರು ಘಟನೆಗಳು ನಮ್ಮ ಜೀವನದಲ್ಲಿ ಎದುರಾಗುತ್ತವೆ. ಅವುಗಳೊಡನೆಯೇ ನಮ್ಮ ಜೀವನ ಸಾಗುತ್ತದೆ. ಜೀವನ ಅಂದರೆ ಇದೇ ಅಲ್ಲವೇ? ಇದರಿಂದ ಯಾರೂ ಹೊರತಲ್ಲ. ಅವನು ಬಡವನಿರಲಿ, ಶ್ರೀಮಂತನಿರಲಿ, ವಿದ್ಯಾವಂತನಿರಲಿ, ಅವಿದ್ಯಾವಂತನಾಗಿರಲಿ, ಸ್ಫುರದ್ರೂಪಿಯಾಗಲೀ, ಕುರೂಪಿಯಾಗಲೀ, ಒಳ್ಳೆಯವನಾಗಲೀ, ಕೆಟ್ಟವನಾಗಲೀ, ಅವನು ಯಾರಾಗಿದ್ದರೂ ಅವನ ದೈನಂದಿನ ಜೀವನದಲ್ಲಿ ವಸ್ತುಗಳು, ಪ್ರಾಣಿ-ಪಕ್ಷಿ-ಮನುಷ್ಯರು ಮತ್ತು ಹಲವಾರು ಸನ್ನಿವೇಶಗಳು, ಅನುಭವಗಳು ಇವೆಲ್ಲಾ ಎದುರಾಗಲೇ ಬೇಕು.
ಜೀವನ ಎಂದರೇನು?
ಈಗ ನಮಗೆ ಗೊತ್ತಾಗುವುದೇನೆಂದರೆ ಜೀವನ ಎಂದರೆ ಎದುರಾಗುವ ಅನುಭವಗಳ ಗ್ರಹಿಕೆ ಮತ್ತು ಅದಕ್ಕೆ ನಮ್ಮ ಪ್ರತಿಕ್ರಿಯೆ. ನಮಗೆ ಬೇಕೋ ಬೇಡವೋ, ಅಥವಾ ನಾವು ಎದುರಿಸಲು ಸಿದ್ಧರಿದ್ದೇವೋ ಇಲ್ಲವೋ ಈ ಒಂದನ್ನೂ ಲೆಕ್ಕಿಸದೆ ಅನುಭವಗಳು ಆಗುತ್ತಾ ಹೋಗುತ್ತವೆ. ನಮ್ಮ ಪ್ರತಿಕ್ರಿಯೆ ಸರಿಯೋ ತಪ್ಪೋ ಏನೇ ಇರಲಿ ಎಲ್ಲರೂ ಅನಿವಾರ್ಯವಾಗಿ ಸ್ಪಂದಿಸಲೇ ಬೇಕಾಗುತ್ತದೆ. ಇದಕ್ಕೆ ಅವನ ಶ್ರೀಮಂತಿಕೆ,ಬಡತನ, ರಾಜಕೀಯ ಪ್ರಭಾವ,ವಿದ್ಯೆ ಯಾವುದನ್ನೂ ಕೇಳುವುದಿಲ್ಲ. ಎಲ್ಲರೂ ಸ್ಪಂದಿಸಲೇಬೇಕು. ಅದು ಅನಿವಾರ್ಯ. ಜೀವನ ಅಂದರೆ ಇದೇ ಆಗಿದೆ. ವಸ್ತುಗಳು, ಮನುಷ್ಯರು,ಪ್ರಾಣಿ-ಪಕ್ಷಿಗಳು, ಹಾಗೂ ಹಲವಾರು ಘಟನೆಗಳ ಜೊತೆಗೇ ಬದುಕುವುದೇ ಜೀವನ. ಮೊದಲೇ ತಿಳಿಸಿರುವಂತೆ ನಮಗೆ ಗೊತ್ತಿದೆಯೋ,ಇಲ್ಲವೋ, ನಮಗೆ ಬೇಕೋ ಬೇಡವೋ ಅಂತೂ ನಾವು ನಿತ್ಯಬದುಕಿನಲ್ಲಿ ಎದುರಾಗುವ ಘಟನೆಗಳಿಗೆ ಸ್ಪಂದಿಸಲೇ ಬೇಕು,ಪ್ರತಿಕ್ರಿಯಿಸಲೇ ಬೇಕು. ಒಂದೇ ಘಟನೆಗೆ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ. ಹಾಗೂ ಇದೇ ಘಟನೆಗಳಿಗೆ ಬೇರೆಯವರ ಪ್ರತಿಕ್ರಿಯೆ ಬೇರೆಯೇ ಆಗಿರುತ್ತದೆ. ಕೆಲವರು ಪ್ರಬುದ್ಧರು, ಕೆಲವರು ಅಪ್ರಬುದ್ಧರು,ಕೆಲವರು ಆವೇಶಭರಿತರು. ಕೆಲವರು ಚಿಂತನನಿರತರು. ಆದ್ದರಿಂದ ಯಾವುದೇ ಸಂದರ್ಭಕ್ಕೆ ಎಲ್ಲರೂ ಒಂದೇ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿ. ಹಾಗಾಗಿ ಹಲವು ಘಟನೆಗಳು ಭಿನ್ನ ಭಿನ್ನವಾಗಿ ಕಾಣುತ್ತದೆ. ಯಾವಾಗ ಒಂದು ವಸ್ತು ಅಥವಾ ಘಟನೆಗಳ ಬಗ್ಗೆ ಇರುವ ಜ್ಞಾನ ನಮ್ಮಲ್ಲಿ ಆಳವಾಗಿ ಇಳಿದಿರುತ್ತದೆಯೋ, ಆಗ ಯಾವ ತೊಂದರೆ ಇಲ್ಲ. ಇಲ್ಲಿ ನಮ್ಮ ಜ್ಞಾನ ಮತ್ತು ಅನುಸಂಧಾನ ಎರಡೂ ಒಂದೇ ಆಗಿರುತ್ತದೆ.ಅಂದರೆ ನಮ್ಮ ಅರಿವಿನಂತೆ ನಾವು ಸ್ಪಂದಿಸುತ್ತೇವೆ. ಆದರೆ ಯಾವಾಗ ನಮ್ಮ ಜ್ಞಾನವು ನಮ್ಮೊಳಗೆ ಅಂತರ್ಗತವಾಗಿಲ್ಲವೋ ಆಗ ನಮ್ಮ ಜ್ಞಾನಕ್ಕೂ ಕ್ರಿಯೆಗೂ ಸಂಬಂಧವಿಲ್ಲದಂತಾಗುತ್ತದೆ. ಆಗ ದ್ವಂದ್ವ ಶುರುವಾಗುತ್ತದೆ. ವಿಚಾರದ ಅರಿವಿದ್ದರೂ ಜೀವನಕ್ಕೆ ಹೇಗೆ ಅಳವಡಿಸಿಕೊಳ್ಳಬೇಕೆಂಬುದು ತಿಳಿಯುವುದಿಲ್ಲ.
ಹಾಲಲ್ಲಿ ವಿಷ ಇದೆ:
ಒಂದು ಉದಾಹರಣೆ ನೋಡೋಣ. ಯಾರೋ ಕೊಟ್ಟ ಒಂದು ಲೋಟ ಹಾಲನ್ನು ಕುಡಿಯಲು ತುಟಿ ಹತ್ತಿರ ತಂದಾಗ ಮತ್ಯಾರೋ ಕೂಗುತ್ತಾರೆ ಹಾಲಲ್ಲಿ ವಿಷ ಇದೆ, ಎಂದು. ಆಗೇನು ಮಾಡುತ್ತೇವೆ? ನಮ್ಮ ಅರಿವು ಹೇಳುತ್ತೆ ಇದು ವಿಷ ಕುಡಿಯಬೇಡ. ಒಂದು ಲೋಟದಷ್ಟು ಪ್ರಮಾಣದ ಹಾಲಲ್ಲಿ ಒಂದು ಚೂರು ವಿಷ ಇದ್ದರೇನು?!1 ಎಂದು ಭಾವಿಸಿ ಕುಡಿಯಲು ಪ್ರಯತ್ನಿಸುತ್ತೀವಾ? ವಿಷದ ಹೆಸರು ಕೇಳಿದೊಡನೆಯೇ ಇದು ಹಾಲಲ್ಲ, ವಿಷ ಎಂದು ನಮ್ಮ ಬುದ್ಧಿ ತೀರ್ಮಾನಿಸಿಯಾಯ್ತು!! ಕೂಗಿದವನು ತಮಾಶೆಗೆ ಹೇಳಿದೆ, ಎಂದರೂ ನಮ್ಮ ಬುದ್ಧಿ ನಮ್ಮನ್ನು ಹಾಲು ಕುಡಿಯಲು ಬಿಟ್ಟೀತೇ?
ವಿಷ ಎಂದು ತಿಳಿದ ಕೂಡಲೇ ಮತ್ತೆ ಹಾಲಿನಲ್ಲಿ ವಿಷ ಬೆರತಿದೆಯೋ, ಇಲ್ಲವೋ, ಕುಡಿದರೇನಾಗುತ್ತದೆಂದು ಯೋಚಿಸಲು ನಿಮಗೆ ಸಮಯವೇ ಸಿಗುವುದಿಲ್ಲ. ವಿಷ-ಎಂಬ ಮಾತು ಕಿವಿಗೆ ಬಿದ್ದಕೂಡಲೇ ನಾವು ಆ ಜ್ಞಾನವನ್ನು ಜೀವನಕ್ಕೆ ಅನ್ವಯಿಸಿಕೊಂಡುಬಿಟ್ಟೆವು. ಅಲ್ಲವೇ? ಈ ಕ್ರಿಯೆ ಆಗಲು ಸಮಯವನ್ನೇ ತೆಗೆದುಕೊಳ್ಳಲಿಲ್ಲ. ತಿಳಿದ ಕೂಡಲೇ ಜೀವನಕ್ಕೆ ಅನ್ವಯಿಸಿಕೊಂಡುಬಿಟ್ಟೆವು. ಜ್ಞಾನವನ್ನು ಜೀವನಕ್ಕೆ ಅಳವಡಿಸಿಕೊಳ್ಳುವ ಬಗೆ ಇದು.ಆದರೆ ಹಲವು ವೇಳೆ ಹೀಗಾಗುವುದಿಲ್ಲ. ಸಮಸ್ಯೆ ಇರುವುದೇ ಇಲ್ಲಿ. ಭೌತಿಕ ವಸ್ತುಗಳಲ್ಲಿ ಸುಖವಿಲ್ಲವೆಂದು ಹಲವಾರು ಉಪನ್ಯಾಗಳನ್ನು ಕೇಳುತ್ತೇವೆ.ಹಲವು ಗ್ರಂಥಗಳನ್ನು ಓದುತ್ತೇವೆ. ನಮಗೇ ಅನುಭವವಾಗಿರುತ್ತದೆ. ಇಷ್ಟೆಲ್ಲಾ ಜ್ಞಾನವಿದ್ದರೂ ಮತ್ತೆ ಮತ್ತೆ ನಾವು ಅಲ್ಲೇ ಸುಖವನ್ನು ಹುಡುಕುತ್ತೇವೆ. ಈ ವಸ್ತು ಸಿಗದಿದ್ದರೆ ಮತ್ತೊಂದರಲ್ಲಿ ಸುಖ ಸಿಗುತ್ತದೆಂದು ಅಲ್ಲಿ-ಇಲ್ಲಿ ಹುಡುಕುತ್ತೇವೆ.
ಸುಖವ ಹುಡುಕುತ್ತಾ..
ಸ್ವಾಮಿ ರಾಮತೀರ್ಥರ ಒಂದು ಕಥೆ ಇದೆ. ಇವತ್ತು ರಾತ್ರಿ 10 ಗಂಟೆಗೆ ಊರಿನ ದೇವಾಲಯದಲ್ಲಿ ಪಟಾಕಿ ಹೊಡೆದು ಸಿಹಿ ಹಂಚುತ್ತಾರೆಂದು ಒಬ್ಬ ಹುಚ್ಚು ಮನುಷ್ಯ ಊರಿನ ಹುಡುಗರಿಗೆಲ್ಲಾ ಹೇಳಿದ. ಊರಿನ ಹುಡುಗರೆಲ್ಲಾ ನಿದ್ರೆಮಾಡದೆ ಖುಷಿಯಾಗಿ ರಾತ್ರಿ 10ಗಂಟೆಗೆ ದೇವಾಲಯಕ್ಕೆ ಹೋದರು. ಪಟಾಕಿಯ ಸಡಗರ ಕಾಣುತ್ತಿಲ್ಲ. ಪ್ರಮುಖರೇ ಇಲ್ಲ.
ಆದರೆ ಆ ಹುಚ್ಚ ಮಾತ್ರ ಬಂದಿದ್ದ. ಎಲ್ಲಾ ಹುಡುಗರು ಆ ಹುಚ್ಚನನ್ನು ಕೇಳಿದರು. ‘ಎಲ್ಲಿ! ಪಟಾಕಿ ಹೊಡೆಯಲೇ ಇಲ್ಲವಲ್ಲಾ!’ ಅದಕ್ಕೆ ಹುಚ್ಚ ಹೇಳಿದ ‘ಸುಮ್ಮನೆ ಹೇಳಿದೆ’. ಹುಡುಗರೆಲ್ಲಾ ಅವನನ್ನು ಮತ್ತೆ ಕೇಳಿದರು ‘ಮತ್ತೆ ನೀನ್ಯಾಕೆ ಬಂದಿದ್ದೀಯ?’ ಹುಚ್ಚ ಹೇಳಿದ ‘ಒಂದು ವೇಳೆ ನಿಜವಾಗಿ ಪಟಾಕಿ ಹೊಡೆದು ಸಿಹಿ ಹಂಚಿಬಿಟ್ಟರೆ ನನಗೆ ಇಲ್ಲದಂತಾಗುತ್ತದಲ್ಲಾ!! ಅದಕ್ಕೇ ಕಾಯ್ತಾ ಇದೀನಿ!!!’

ನಮ್ಮದೂ ಅದೇ ಸ್ಥಿತಿ!! ಇಲ್ಲದ ಸುಖಕ್ಕಾಗಿ ಹುಡುಕಾಡುತ್ತಿದ್ದೇವೆ. ನಮ್ಮ ಜ್ಞಾನವು ನಮ್ಮೊಳಗೆ ಇಳಿದೇ ಇಲ್ಲ. ಎಲ್ಲಾ ಉಪನ್ಯಾಸವನ್ನು ಕೇಳುತ್ತೇವೆ, ಅಧ್ಯಾತ್ಮದ ಪುಸ್ತಕಗಳನ್ನು ಓದುತ್ತೇವೆ. ಅದೆಲ್ಲದರಲ್ಲೂ ಹೇಳುವುದೇನು? ಭೌತಿಕ ವಸ್ತುಗಳಲ್ಲಿ ಶಾಶ್ವತ ಸುಖ ಸಿಗುವುದಿಲ್ಲವೆಂದೇ.ಆದರೂ ಆ ಜ್ಞಾನವನ್ನು ಮೈಗೂಡಿಸಿಕೊಳ್ಳುವಲ್ಲಿ ವಿಫಲರಾದ ನಾವು ಮತ್ತೆ ಮತ್ತೆ ಭೌತಿಕ ವಸ್ತುಗಳಲ್ಲೇ ಸುಖವನ್ನು ಹುಡುಕುತ್ತಲೇ ಇರುತ್ತೇವೆ.

  • ಹರಿಹರಪುರ ಶ್ರೀಧರ್
   

Leave a Reply