ದೇಗುಲಗಳ ಮೇಲೆ ಸರ್ಕಾರದ ನಿಯಂತ್ರಣ ಸಂವಿಧಾನಬಾಹಿರ : ಡಾ.ಸ್ವಾಮಿ

ಬೆಂಗಳೂರಿನ ಸುದ್ದಿಗಳು - 0 Comment
Issue Date : 22.09.2014

ಬೆಂಗಳೂರು: ದೇವಸ್ಥಾನಗಳನ್ನು ಸರ್ಕಾರ ಸದಾಕಾಲ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಂವಿಧಾನಬಾಹಿರ ಪ್ರಕ್ರಿಯೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ತಿಳಿಸಿದರು.

ಹಿಂದು ದೇವಾಲಯಗಳು ಮತ್ತು ಸರ್ಕಾರಿ ನಿಯಂತ್ರಣ ಎಂಬ ವಿಚಾರ ಕುರಿತು ಹಿಂದು ಧರ್ಮ ಆಚಾರ್ಯ ಸಭಾ ಹಾಗೂ ಜಿಜ್ಞಾಸಾ ಸಂಸ್ಥೆಯು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಸೆ.7ರಂದು ಮಾತನಾಡಿದರು.
ದೇಗುಲಗಳ ಆಡಳಿತ ಮಂಡಳಿಗಳ ವಿರುದ್ಧ ಅರೋಪ ಬಂದಾಗ ಅದನ್ನು ವಶಕ್ಕೆ ಪಡೆದು ಆರೋಪಮುಕ್ತವಾದ ಬಳಿಕ ಸರ್ಕಾರ ತನ್ನ ಸ್ವಾಧೀನದಿಂದ ಬಿಡುಗಡೆಗೊಳಿಸಬೇಕು. ಅದನ್ನು ಬಿಟ್ಟು ದೇವಸ್ಥಾನಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಳಂಬಮಾಡಿ ತನ್ನ ಅಧೀನದಲ್ಲಿಯೇ ಇಟ್ಟುಕೊಳ್ಳುವುದು ಸರಿಯಲ್ಲ ಎಂದರು.
ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ
ತಮಿಳುನಾಡಿನ ನಟರಾಜ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2013ರಲ್ಲಿ ನೀಡಿರುವ ತೀರ್ಪಿನ ಪ್ರಕಾರ ದೇಗುಲದ ಮೇಲಿನ ಆರೋಪದ ತನಿಖೆ ಮುಗಿದು ದೋಷಮುಕ್ತವಾದರೆ ಅಂತಹ ದೇಗುಲವನ್ನು ಸರ್ಕಾರ ತನ್ನ ಹಿಡಿತದಿಂದ ಹಿಂದಿರುಗಿಸಬೇಕು. ಆದರೆ, ತಿರುಪತಿ ಬಾಲಾಜಿ ದೇವಸ್ಥಾನ ಸೇರಿದಂತೆ ಹಲವಾರು ದೇವಾಲಯಗಳ ಮೇಲೆ ಇಂದಿಗೂ ಸರ್ಕಾರ ತನ್ನ ಹಿಡಿತ ಸಾಧಿಸಿದೆ. ಅದರಲ್ಲಿಯೂ ತಿರುಪತಿ ಬಾಲಾಜಿ ದೇಗುಲದಲ್ಲಿ 1931 ರಿಂದಲೂ ಸರ್ಕಾರವೇ ಆಳ್ವಿಕೆ ನಡೆಸುತ್ತಿದೆ ಎಂದು ಆರೋಪಿಸಿದರು.
4.5 ಲಕ್ಷ ದೇಗುಲಗಳ ಮೇಲೆ ಹಿಡಿತ
ಇದಿಷ್ಟೇ ಅಲ್ಲದೆ, ರಾಷ್ಟ್ರದಲ್ಲಿನ ಸುಮಾರು 4.5 ಲಕ್ಷ ದೇವಸ್ಥಾನಗಳನ್ನು ತನ್ನ ಹಿಡಿತದಲ್ಲಿಯೇ ಇಟ್ಟುಕೊಂಡಿರುವ ಸರ್ಕಾರ, ಇಂದಿಗೂ ಅವುಗಳನ್ನು ಆಡಳಿತವರ್ಗಕ್ಕೆ ಬಿಟ್ಟುಕೊಟ್ಟಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ದೇವಸ್ಥಾನ ಅಥವಾ ಆಡಳಿತ ವರ್ಗದ ಮೇಲೆ ಆರೋಪ ಹೊರಿಸಿ ಸ್ವಾಧೀನಪಡಿಸಿಕೊಂಡದ್ದೇ ಹೆಚ್ಚು. ಇಂತಹ ದೇಗುಲಗಳ ಮೇಲಿನ ಆರೋಪದ ಕುರಿತು ತ್ವರಿತವಾಗಿ ತನಿಖೆ ನಡೆಸದೆ ಬೇಕೆಂದೇ ವಿಳಂಬ ಮಾಡುತ್ತಿದೆ. ಹೀಗಾಗಿ ಅನೇಕ ವರ್ಷಗಳಿಂದ ಲಕ್ಷಾಂತರ ದೇಗುಲಗಳು ಸರ್ಕಾರದ ಹಿಡಿತದಿಂದ ಹೊರಬರಲಾಗಿಲ್ಲ ಎಂದು ಕಿಡಿಕಾರಿದರು.
ದೇಗುಲಗಳ ಪುನರುತ್ಥಾನ ಆಗಬೇಕು
ದೇವಸ್ಥಾನಗಳ ಮೇಲೆ ಕೇವಲ ಹಿಡಿತ ಸಾಧಿಸಿರುವುದಷ್ಟೇ ಅಲ್ಲದೆ, ಅನೇಕ ವಿಚಾರದಲ್ಲಿ ಸರ್ಕಾರ ತಲೆ ಹಾಕುತ್ತಿದೆ. ತಿರುಪತಿ ದೇವಸ್ಥಾನದ ಇತಿಹಾಸ ತಿಳಿಸಲು ಇರುವ ಶಿಲಾಶಾಸನದ ಮೇಲೆಯೇ ಬಂಗಾರದ ಬಾಗಿಲು ಅಳವಡಿಸಲು ಸರ್ಕಾರ ಚಿಂತಿಸಿತ್ತು. ಇನ್ನೂ ಕೆಲವೆಡೆ ಐತಿಹಾಸಿಕ ದೇವಸ್ಥಾನಗಳ ವಾಸ್ತ್ತುವನ್ನೇ ಬದಲಿಸಲಾಗಿದೆ. ಸಾಲದ್ದಕ್ಕೆ ಕೆಲ ಆಚರಣೆಗಳನ್ನೂ ನೆರವೇರಿಸಲು ಅಧಿಕಾರಿಗಳು ಕಡಿವಾಣ ಹಾಕಿದ್ದಾರೆ. ಹಿಂದು ಧರ್ಮೀಯರು ಒಗ್ಗಟ್ಟಿನಿಂದ ದೇವಸ್ಥಾನಗಳ ಪುನರುತ್ಥಾನ ಮಾಡಿದರೆ ಮಾತ್ರ ಭಾರತವೂ ಪುನಶ್ಚೇತನಗೊಳ್ಳುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಹಿಂದು ಧರ್ಮ ಆಚಾರ್ಯ ಸಭಾದ ಸಂಚಾಲಕರಾದ ಶ್ರೀದಯಾನಂದ ಸರಸ್ವತಿ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೂಡಲಿ ಶೃಂಗೇರಿ ಮಠದ ಶ್ರೀವಿದ್ಯಾಭಿನವ ಶಂಕರ ಸ್ವಾಮೀಜಿ, ವಿರಕ್ತಮಠದ ಶ್ರೀ ಶಿವಯೋಗಿ ಸ್ವಾಮೀಜಿ, ರಂಭಾಪುರಿ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಪ್ರೊ.ಪಿ.ವಿ. ಕೃಷ್ಣಭಟ್, ನ್ಯಾ.ಎಂ. ರಾಮಾಜೋಯಿಸ್, ಅರನ್ಮುಳ ದೇಗುಲದ ಕೃಷ್ಣಮೂರ್ತಿ, ದೇವಾಲಯಗಳ ರಕ್ಷಣಾ ಚಳವಳಿ ಸಂಚಾಲಕ ಪ್ರೊ.ಎಂ.ವಿ. ಸೌಂದರರಾಜನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

   

Leave a Reply