ದೇರಳಕಟ್ಟೆ ಪ್ರಕರಣಕ್ಕೆ ಜಾಗೃತ ಮಹಿಳಾ ವೇದಿಕೆಯಿಂದ ಪ್ರತಿಭಟನೆ

ದಕ್ಷಿಣ ಕನ್ನಡ - 0 Comment
Issue Date : 10.01.2014


ದೇರಳಕಟ್ಟೆ ಮೇಡಿಕಲ್ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ದೌರ್ಜನ್ಯ, ಅತ್ಯಾಚಾರ, ಕಿಡ್ನಾಪ್ ಮತ್ತು ಬ್ಲಾಕ್‍ಮೇಲ್  ಘಟನೆಯನ್ನು  ವಿರೋಧಿಸಿ  ಜಾಗೃತಾ ಮಹಿಳಾ ವೇದಿಕೆಯ ವತಿಯಿಂದ  ಜ. 9 ರಂದು ಪ್ರತಿಭಟನೆ  ನಡೆಯಿತು.  

ಡಾ. ಅಂಬೆಡ್ಕರ್ ಸರ್ಕಲ್‍ನಿಂದ ಕೇಂದ್ರ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.   ಮಹಿಳಾ ಸಮಾಜಕ್ಕೆ ರಕ್ಷಣೆ ನೀಡಲಾಗದ ಮತ್ತು ಅತ್ಯಾಚಾರ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ರಕ್ಷಣಾತಂತ್ರ  ಅನುಸರಿಸುವ ಸರಕಾರವನ್ನು ಕಿತ್ತೊಗೆಯಿರಿ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ  ರಾಷ್ಟ್ರೀಯ ಉಪಾಧ್ಯಕ್ಷೆ ಮಮತ ಯಾದವ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹೊಸದಿಲ್ಲಿಯ ಘಟನೆ ನಡೆದ ನಂತರ ಒಂದು ವರ್ಷದ ಬಳಿಕ ಕರಾವಳಿಯಲ್ಲಿ ಇಂತದೇ  ಅವಮಾನಕರ ಘಟನೆ ಸಂಭವಿಸಿದೆ. ಕರ್ನಾಟಕದಲ್ಲಿ 2009ರಿಂದ 2011ರ ವರೆಗೆ ಸುಮಾರು 24,000 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಸರಕಾರವೇ ವಿವರ ನೀಡುತ್ತಿದೆ. ಅಷ್ಟು ಮಹಿಳೆಯರು ಎಲ್ಲಿ ಹೋದರು? ತನಿಖೆ ನಡೆದಿದೆಯಾ? ಉತ್ತರ ನೀಡಬೇಕಾದ ಸರ್ಕಾರ ಇದರ ಬಗ್ಗೆ ಗಮನ ಹರಿಸಲ್ಲೇ ಇಲ್ಲ. ಮಹಿಳೆಯರ ಮೇಲೆ ನಿರಂತರ ನಡೆಯುವ ಇಂತಹ ದೌರ್ಜನ್ಯಗಳ ಬಗ್ಗೆ ದ.ಕ.ಜನಪ್ರತಿನಿಧಿಗಳು ನಿರ್ಣಯ ಕೈಗೊಳ್ಳುವುದು ಬೇಡ. ಅದನ್ನು ಮಹಿಳೆಯರೇ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಜಾಗೃತ ಮಹಿಳಾ ವೇದಿಕೆ ಅಧ್ಯಕ್ಷೆ ಡಾ| ಎಸ್.ಆರ್. ಲೀಲಾ ಮಾತನಾಡಿ, ಬಹುಸಖ್ಯಾಂತರು ಹಾಗೂ ಅಲ್ಪಸಂಖ್ಯಾತರು ಎಂಬ ವಿಭಜನೆಯ ತುಷ್ಟೀಕರಣ ನೆಹರೂ ಅವರ ಕಾಲದಿಂದಲೂ ನಡೆಯುತ್ತಾ ಬಂದಿದೆ. ಈ ರಾಜಕೀಯ ನಿಲುವು ನಿರ್ನಾಮವಾಗದಿದ್ದಲ್ಲಿ ಇಂಥ ಘಟನೆಗಳಿಗೆ ಇತಿಶ್ರೀ ಬೀಳುವುದಿಲ್ಲ ಎಂದರು.

ಜಾಗೃತ ಮಹಿಳಾ ವೇದಿಕೆ ಗೌರವಧ್ಯಕ್ಷೆ ಡಾ| ಕಮಾಲಾ ಪ್ರಭಾಕರ ಭಟ್ ಖಂಡನಾ ನಿರ್ಣಯ ಮಂಡಿಸಿದರು.

ದೇರಳಕಟ್ಟೆ ಪ್ರಕರಣದ ದುಷ್ಕರ್ಮಿಗಳ ವಿರುದ್ಧ ಗೂಂಡಾ ಕಾಯ್ದೆಯಂತಹ ಕಠಿಣ ಕ್ರಮ, ಪ್ರಕರಣದ ತನಿಖೆಗೆ ವಿಶೇಷ ನ್ಯಾಯಾಲಯ ರಚನೆ, ರಾಜಕೀಯ ಹಸ್ತಕ್ಷೇಪ ರಹಿತ ತ್ವರಿತ ತನಿಖೆ, ಈ ವರೆಗೆ ಕಾಣೆಯಾದ ಹೆಣ್ಣುಮಕ್ಕಳ ಬಗ್ಗೆ ಸಮಗ್ರ ತನಿಖೆ, ನಿಷ್ಪಕ್ಷಪಾತ ತನಿಖೆಗೆ ಪೊಲೀಸರಿಗೆ ಮುಕ್ತ ಅಧಿಕಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಆರ್.ಎಸ್.ಎಸ್.ಪ್ರಮುಖರಾದ ಡಾ| ಕಲ್ಲಡ್ಕ ಪ್ರಭಾಕರ ಭಟ್, ಸಾಂಸದ ನಳಿನ್ ಕುಮಾರ್ ಕಟೀಲು, ಶಾಸಕ ಎಸ್. ಅಂಗಾರ, ವಿಧಾನ ಪರಿಷತ್ ಸದಸ್ಯರಾದ  ಮೋನಪ್ಪ ಭಂಡಾರಿ, ಕ್ಯಾ| ಗಣೇಶ್ ಕಾರ್ಣಿಕ್ , ಪದ್ಮನಾಭ ಕೊಟ್ಟಾರಿ, ಮಲ್ಲಿಕಾ ಪ್ರಸಾದ್ , ಕೆ.ಟಿ.ಶೈಲಜಾ ಭಟ್, ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷೆ ಸುಲೋಚನಾ ಜಿ. ಕೆ. ಭಟ್ ಸೇರಿದಂತೆ ಅನೇಕ ಗಣ್ಯರು, ಮಹಿಳೆಯರು, ಕಾಲೇಜು ವಿದ್ಯಾರ್ಥಿ  ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

   

Leave a Reply