ದೇವರಾಯನ ದುರ್ಗ

ಪ್ರವಾಸ - 0 Comment
Issue Date : 05.04.2014

ರಾಜ್ಯದಲ್ಲಿ ಶ್ರೀನರಸಿಂಹ ದೇವಾಲಯಗಳಲ್ಲಿ ಪ್ರಸಿದ್ಧವಾಗಿರುವ ದೇವರಾಯನ ದುರ್ಗವು ತುಮುಕೂರಿಗೆ ಸುಮಾರು 14 ಕಿ.ಮೀ. ದೂರದಲ್ಲಿದೆ. ‘ಕರಿಗಿರಿ ಕ್ಷೇತ್ರ’ವೆಂದೂ ಇದನ್ನು ಕರೆಯುತ್ತಾರೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 4,154 ಅಡಿ ಎತ್ತರದಲ್ಲಿದೆ. ಇದೊಂದು ಆರೋಗ್ಯ ಧಾಮವೂ ಹೌದು. ಕ್ಷಯರೋಗಕ್ಕೆ ಈ ಪರ್ವತದ ಗಾಳಿಯು ಬಹಳ ಒಳ್ಳೆಯದೆನ್ನುತ್ತಾರೆ. ಸುತ್ತಲೂ ನಿಬಿಡವಾದ ಅರಣ್ಯವಿದ್ದು ಶ್ರೀಗಂಧದ ಮರಗಳು ಹೇರಳವಾಗಿವೆ.

ಇಲ್ಲಿ ಜಯಮಂಗಳಾ ನದಿಯ ಉಗಮಸ್ಥಾನವಾದ ‘ಜಯಮಂಗಲಿ’ ಎಂಬ ಪುಷ್ಕರಣಿಯಿದೆ. ಜಯಮಂಗಲಿಯಿಂದ 150 ಅಡಿ ಎತ್ತರದಲ್ಲಿ  ನೆಲಪಟ್ಟಣವಿದೆ. ಇಲ್ಲಿ ಭೋಗಾನರಸಿಂಹನ ದೇವಾಲಯ, ದೇವಾಲಯದ ಹಿಂದೆ ಪುಷ್ಕರಣಿ, ಮುಂಭಾಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಛತ್ರಗಳೂ ಇವೆ.

ಶ್ರೀ ಭೋಗಾನರಸಿಂಹನ ದೇವಾಲಯಕ್ಕೆ ಪೂರ್ವ ದಿಕ್ಕಿನಲ್ಲಿ ಬಂಗಲೆ ಬೆಟ್ಟ ಇದೆ. ಇಲ್ಲಿ ರಾಮದೇವರ ಗುಹೆ ಮತ್ತು ಬಿಲ್ದೋಣೆ, ರಾಮತೀರ್ಥಗಳೆಂಬ ಪುಷ್ಕರಣಿಗಳೂ ಇವೆ. ಪಕ್ಕದಲ್ಲೇ ಕುಂಭಿ ಬೆಟ್ಟವಿದೆ. ಇದೇ ಪ್ರಧಾನವಾದುದು. ಇಲ್ಲಿ ಯೋಗಾನರಸಿಂಹಸ್ವಾಮಿ ದೇವಾಲಯವಿದೆ. ಅದರ ಮುಂದೆ ಶ್ರೀ ನೃಸಿಂಹತೀರ್ಥ ಮತ್ತು ಅಡಿಯಲ್ಲಿ  ಪಾದತೀರ್ಥವೆಂಬ ಗುಹಾಂತರ್ಗತ ಪುಷ್ಕರಣಿ ಇವೆ. ದೇವಾಲಯದ ಸುತ್ತಲೂ ಪವಿತ್ರ ತೀರ್ಥಗಳಿವೆ.

ಎರಡು ಬೆಟ್ಟಗಳಲ್ಲಿಯೂ ಲಕ್ಷ್ಮೀ ದೇವಿಯ ಗುಡಿಗಳಿವೆ. ಫಾಲ್ಗೂಣ ಮಾಸದಲ್ಲಿ ಕಾಮನ ಹಬ್ಬದ ದಿನ ಅಥವಾ ಮುಂದಿನ ದಿನದಲ್ಲಿ ಬರುವ ಪುಬ್ಬಾ ನಕ್ಷತ್ರದಲ್ಲಿ ನರಸಿಂಹಸ್ವಾಮಿಯ ಬ್ರಹ್ಮರಥೋತ್ಸವ ನಡೆಯುತ್ತದೆ. ಹಸ್ತಾ ನಕ್ಷತ್ರದ ದಿವಸ ಜಯಮಂಗಲಿಯಲ್ಲಿ ಅವಭೃಥ ಸ್ನಾನವೂ ನಡೆಯುತ್ತದೆ. ಪಾಂಚರಾತ್ರ ಆಗಮದಂತೆ ಪೂಜಾ ಕೈಂಕರ್ಯಗಳು ನಡೆಯುತ್ತವೆ.

ಸ್ಥಳ ಪುರಾಣ

ಶ್ರೀಮನ್ನಾರಾಯಣನು ಭಕ್ತರ ಉದ್ಧಾರಕ್ಕಾಗಿ ಶ್ರೀನರಸಿಂಹರೂಪದಿಂದ ಭೂಲೋಕದಲ್ಲಿ ಆವಿರ್ಭವಿಸಬೇಕೆಂದು ಯೋಚಿಸಿ ಬ್ರಹ್ಮನನ್ನು ಕರೆದು,  “ನಾನು ಭೂಲೋಕದಲ್ಲಿ ಆವಿರ್ಭವಿಸಲು ಮನಸ್ಸು ಮಾಡಿದ್ದೇನೆ. ಆದ್ದರಿಂದ ನೀನು ಕರಿಗಿರಿ ಕ್ಷೇತ್ರದಲ್ಲಿ ತಪಸ್ಸು ಮಾಡು. ನಾನು ಅಲ್ಲಿಗೆ ಬಂದು ನಿನಗೆ ದರ್ಶನ ಕೊಡುತ್ತೇನೆ” ಎಂದು ಹೇಳಿದನಂತೆ. ಅದರಂತೆ ಬ್ರಹ್ಮದೇವರು ಭೂಲೋಕಕ್ಕೆ ಬಂದು, ತಪಸ್ಸು ಮಾಡಿದಾಗ ನರಸಿಂಹ ರೂಪದಲ್ಲಿ ನಾರಯಣನು ದರ್ಶನ ನೀಡಿದ. ಆಗ ಬ್ರಹ್ಮನು ಸಂತೋಷದಿಂದ ಯಥೋಚ್ಛವಾಗಿ ಪೂಜಿಸಿ, ಸ್ತುತಿಸಿದ.

ನಾಮದ ಚಿಲುಮೆ

ವನವಾಸದ ಕಾಲದಲ್ಲಿ ಶ್ರೀರಾಮನು ಇಲ್ಲಿಗೆ ಬಂದಿದ್ದಾಗ, ಆತನಿಗೆ ನಾಮ ಧರಿಸಲು ನೀರು ಬೇಕಾಯಿತು. ಸುತ್ತಲೂ ಪರ್ವತ ಇದ್ದುದರಿಂದ ನೀರು ಕಾಣದೆ ನೆಲವನ್ನು ಗುದ್ದಿದಾಗ ಚಿಲುಮೆಯೊಂದು ಚಿಮ್ಮಿತಂತೆ. ಆ ಜಲದ ಸಹಾಯದಿಂದ ರಾಮನು ತಿಲಕ ಧರಿಸಿದನಂತೆ. ಆದ್ದರಿಂದ ಈ ಚಿಲುಮೆಗೆ ‘ನಾಮದ ಚಿಲುಮೆ’ ಎಂದು ಹೆಸರು ಬಂದಿತೆಂದೂ ಸ್ಥಳ ಪುರಾಣ ಹೇಳುತ್ತದೆ.

 

   

Leave a Reply