ಈ ರಾಷ್ಟ್ರ ಮೃತ್ಯುಂಜಯಿ ! ಈ ರಾಷ್ಟ್ರ ಅಮರ !!

ಯಾದವ್ ರಾವ್ ಜೋಷಿ ; ಲೇಖನಗಳು - 0 Comment
Issue Date : 14.10.2014

ನಮ್ಮ ರಾಷ್ಟ್ರವು ಮೃತ್ಯುಂಜಯಿ. ಇಲ್ಲಿಯ ಜೀವನ ಚಿರಂತನ. ಇಲ್ಲಿಯ ಸಂಸ್ಕೃತಿಯು ಅಮರವಾದುದು. ಇದೇನೋ ಕೇವಲ ಶಬ್ದ ಜಾಲವಲ್ಲ. ಸಮಗ್ರ ಜಗತ್ತಿನ ಇತಿಹಾಸವನ್ನು ಅವಲೋಕಿಸಿದರೆ ಈ ಸತ್ಯಸಂಗತಿ ಮನದಟ್ಟಾದೀತು. ಜಗತ್ತು ಅನೇಕ ರಾಷ್ಟ್ರಗಳು ಮತ್ತು ಸಂಸ್ಕೃತಿಗಳ ನಿರ್ಮಾಣವನ್ನೂ ಕಂಡಿದೆ. ಅವೆಲ್ಲವೂ ಇಂದು ಬಹುಮಟ್ಟಿಗೆ ನಷ್ಟಪ್ರಾಯ ಹಾಗೂ ನಾಮಶೇಷವಾಗಿವೆ. ಕೆಲವು ರಾಷ್ಟ್ರಗಳ ಹೆಸರುಗಳು ಇಂದಿಗೂ ಕೇಳಿ ಬರುತ್ತಿವೆ. ಆದರೆ ಅಲ್ಲಿಯ ಮೂಲ ಸಂಸ್ಕೃತಿಗಳು ನಾಶ ಹೊಂದಿರುವಂತೆ ತೋರುತ್ತದೆ. ಆದರೆ ನಮ್ಮ ಸಂಸ್ಕೃತಿಯು ಅನೇಕ ಸಂಘರ್ಷಗಳ ನಡುವೆಯೂ ಸ್ಥಿರವಾಗಿ ಉಳಿದುಬಂದಿದೆ. ಆದ್ದರಿಂದ ಅದರ ವಿಶೇಷತೆ ಏನಾದರೂ ಇರಬೇಕು.

ಒಮ್ಮೆ ಗ್ರೀಕ್ ವಿದುಷಿಯೊಬ್ಬಳು ಭಾರತದ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಳು. ಆನಂತರ ಪ್ರತ್ಯಕ್ಷ ಅನುಭವ ಪಡೆಯಲು ಭಾರತದಲ್ಲಿ ಸಂಚಾರ ಮಾಡಿ ಹೀಗೆ ಹೇಳಿದಳು : ಪೂರ್ವಕಾಲದ ಯಾವ ವರ್ಣನೆಯನ್ನು ನಾನು ಗ್ರಂಥಗಳಲ್ಲಿ ಓದಿದೆನೋ, ಅದೇ ರೀತಿಯ ಜನಜೀವನವು ಇಂದಿಗೂ ಇಲ್ಲಿ ಉಳಿದುಬಂದಿದೆ. ನಾನು ಓದಿದ್ದ ಕುಂಭಮೇಳದ ವರ್ಣನೆಯನ್ನು ಇಲ್ಲಿ ಪ್ರತ್ಯಕ್ಷ ಕಂಡೆ, ಅನುಭವಿಸಿದೆ. ಇಲ್ಲಿಯ ಈ ಚಿರಂತನ ಸಂಸ್ಕೃತಿಯಿಂದ ಪ್ರಭಾವಿತಳಾದ ಆ ವಿದುಷಿಯು ಆನಂತರ ಹಿಂದುವಾಗಿ ಪರಾವರ್ತನಗೊಂಡು, ತನ್ನನ್ನು ನಮ್ಮ ರಾಷ್ಟ್ರಕ್ಕೆ ಸಮರ್ಪಿಸಿಕೊಂಡಳು.
ಗ್ರೀಸ್‌ನ ಸಂಸ್ಕೃತಿಯ ಗತ ವೈಭವವನ್ನು ವರ್ಣಿಸುವ ಅಗತ್ಯವಿಲ್ಲ. ಪಾಶ್ಚಾತ್ಯ ದೇಶಗಳ ಜ್ಞಾನದ ಮೂಲವು ಅರಿಸ್ಟಾಟಲ್, ಪ್ಲೇಟೋ ಮುಂತಾದ ಗ್ರೀಕ್ ವಿದ್ವಾಂಸರ ಚಿಂತನೆಯಲ್ಲಿ ಅಡಗಿದೆ ಎಂದು ಹೇಳಲಾಗುತ್ತದೆ. ಆದರೆ ಇಂದು ಆ ಸಂಸ್ಕೃತಿಯ ಪ್ರಭಾವವಿಲ್ಲ. ಇಂದಿನ ಗ್ರೀಸ್ ಮತ್ತು ಪ್ರಾಚೀನ ಗ್ರೀಸ್ ಇವುಗಳೊಳಗೆ ಯಾವ ಸಂಬಂಧವೂ ಇಲ್ಲ. ರೋಮನ್ ಸಂಸ್ಕೃತಿಯ ಪಾಡು ಅದೇ ಆಗಿದೆ, ಪ್ರಸಿದ್ಧ ಇತಿಹಾಸಕಾರ ಟಾಯನ್‌ಬೀ ಹೇಳುವಂತೆ, ಅಂತಹ 62 ರಾಷ್ಟ್ರಗಳು ಮತ್ತು ಸಂಸ್ಕೃತಿಗಳ ನಿರ್ಮಾಣ ಮತ್ತು ಪತನಗಳು ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿವೆ, ಚಿರಂತನವಾದ ಹಾಗೂ ತನ್ನ ಸಂಸ್ಕೃತಿಯು ಅಮರವಾಗಿ ಕಂಡುಬರುವ ರಾಷ್ಟ್ರ ಅಂದರೆ ಭಾರತವೊಂದೇ ಎಂಬುದು ಅವರ ಅಭಿಪ್ರಾಯ.
ಈ ಚಮತ್ಕಾರಕ್ಕೆ ಕಾರಣವೇನು? ಭಾರತವು ಸುವರ್ಣಭೂಮಿ ಎಂದು ಕರೆಯಲ್ಪಡುತ್ತಿತ್ತು. ಸುಜಲಾಮ್, ಸುಫಲಾಮ್, ಸಸ್ಯಶ್ಯಾಮಲಾಮ್ ಎಂದು ಅದರ ವರ್ಣನೆಯಿದೆ. ಆದರೆ ಇಂತಹ ವೈಭವವು ಜಗತ್ತಿನ ಇತರ ರಾಷ್ಟ್ರಗಳಲ್ಲೂ ಇತ್ತು. ಇಂದಿನ ಅಮೆರಿಕವೂ ಆರ್ಥಿಕ ಸಮೃದ್ಧಿಯ ಶಿಖರದಲ್ಲಿದೆ. ಎಂದರೆ ಕೇವಲ ಆರ್ಥಿಕ ಸಮೃದ್ಧಿಯು ಭಾರತದ ವಿಶೇಷತೆಯಲ್ಲ. ಇತರ ರಾಷ್ಟ್ರಗಳ ಸಂಸ್ಕೃತಿಗೆ ಅವುಗಳ ರಾಜ್ಯಶಕ್ತಿಯು ಆಧಾರವಾಗಿತ್ತು ಎಂದು ಬಲ್ಲವರು ಹೇಳತ್ತಾರೆ. ಗ್ರೀಕ್ ಸಂಸ್ಕೃತಿಯು ರಾಜ್ಯದ ಆಧಾರದಿಂದ ವಿಕಾಸಗೊಂಡಿತ್ತು. ಆದರೆ ರೋಮನ್ ಆಕ್ರಮಣವಾದಾಗ ಅದು ನಾಶಗೊಂಡಿತು. ರೋಮ್‌ಗೂ ಅದೇ ಗತಿಯಾಯಿತು. ಅಲ್ಲಿ ಸಾಮ್ರಾಜ್ಯ ಅಳಿಯುತ್ತಲೇ ಸಂಸ್ಕೃತಿಯೂ ಅಳಿದು ಹೋಗಿರುವಂತೆ ತೋರುತ್ತದೆ.
ಆದರೆ ನಮ್ಮ ದೇಶದ ಮೇಲೆ ಅನೇಕ ಆಕ್ರಮಣಗಳಾದುವು. ನಾವು ಅನೇಕ ಬಾರಿ ಪರಾಭವಗೊಂಡದ್ದೂ ಇದೆ. ಇಲ್ಲಿ ಗ್ರೀಕರು, ಹೂಣರು, ಮುಸಲ್ಮಾನರು, ಡಚ್ಚರು, ಫ್ರೆಂಚರು, ಪೋರ್ಚುಗೀಸರು ಮುಂತಾದವರು ಒಂದೊಂದು ಕಾಲದಲ್ಲಿ ಕೆಲವು ಪ್ರದೇಶಗಳ ಮೇಲೆ ತಮ್ಮ ಅಧಿಪತ್ಯ ನಡೆಸಿದ್ದರು. ಮುಸ್ಲಿಂ ರಾಜ್ಯಗಳೂ ದೀರ್ಘಕಾಲ ಇಲ್ಲಿ ಇದ್ದುವು. ಆಂಗ್ಲರು ಇನ್ನೂರು ವರ್ಷ ರಾಜ್ಯವಾಳಿದರು. ಆದರೂ ರಾಷ್ಟ್ರವು ಸುಭದ್ರವಾಗಿ ಉಳಿದುಕೊಂಡಿತು. ಈ ಚಮತ್ಕಾರ ನಡೆದುದಾದರೂ ಹೇಗೆ ? ಇದನ್ನು ವಿವೇಚಿಸಿದರೆ ಒಂದು ಅಂಶ ನಿಚ್ಚಳವಾಗುತ್ತದೆ : ಈ ಭೂಮಿಯನ್ನೂ ಅದರ ಸಂಸ್ಕೃತಿಯನ್ನೂ ಧಾರಣೆ ಮಾಡಿದವರು ಕೇವಲ ರಾಜರು ಅಥವಾ ಚಕ್ರವರ್ತಿಗಳಲ್ಲ. ಅವರು ಬಂದರು ಹೋದರು. ಆದರೆ ರಾಷ್ಟ್ರವು ಮೃತ್ಯುಂಜಯವಾಗಿ, ಅಮರವಾಗಿ ಉಳಿಯಿತು. ಅದರ ಮೂಲದಲ್ಲಿರುವ ಕಲ್ಪನೆಯೆಂದರೆ, ಸಂತೋ ಭೂಮಿಂ ತಪಸಾ ಧಾರಯಂತಿ. ಧಾರಣ ಮಾಡುವ ಸಾಮರ್ಥ್ಯವು ಸಂತರಲ್ಲಿದೆ. ರಾಜರುಗಳಲ್ಲಿ ಅಲ್ಲ. ಋಷಿ, ಮಹರ್ಷಿಗಳು, ಸಂತ-ಮಹಂತರು, ಸಾಧು ಸನ್ಯಾಸಿಗಳ ದೇಶ ಇದು. ಹಾಗೆಂದೇ ಇದು ಅಮರವಾಗಿದೆ; ಅಂತಹ ತ್ಯಾಗಿಗಳು ್ಫ ತಪಸ್ವಿಗಳು ಇರುವವರೆಗೂ ಅಮರವಾಗಿಯೇ ಇರುವುದು.
ಸಮಾಜದಿಂದ ಅತ್ಯಲ್ಪ ಪಡೆಯುತ್ತಾ ಸರ್ವಸ್ವವನ್ನೂ ಸಮಾಜಕ್ಕೆ ಅರ್ಪಿಸುವವರೇ ಸಂತರು. ಇನ್ನೊಂದು ದೃಷ್ಟಿಯಿಂದ ನೋಡಿದರೆ, ಸ್ವದ ಬಗ್ಗೆ ಅತ್ಯಲ್ಪ ವಿಚಾರ ಮಾಡುವವರು, ಒಮ್ಮೊಮ್ಮೆ ಕಿಂಚಿತ್ತೂ ವಿಚಾರ ಮಾಡದಿರುವವರು, ಆದರೆ ಸಮಾಜದ ಬಗ್ಗೆ ಗಾಢವಾಗಿ ಚಿಂತನೆ ಮಾಡುವವರನ್ನು ಋಷಿ, ಮಹರ್ಷಿ, ಸಂತರು ಎಂದು ಹೇಳಬಹುದು. ಇಲ್ಲಿ ಇಂತಹ ಪರಂಪರೆಯು ಸುಭದ್ರವಾಗಿರುವುದು ಈ ದೇಶದ ಸದ್ಭಾಗ್ಯವಾಗಿದೆ.
ಈ ಸಂತರು ಶುಚಿತ್ವ, ಪಾವಿತ್ರ್ಯ, ಪೌರುಷ, ಸಾಮರ್ಥ್ಯ ಇತ್ಯಾದಿಗಳನ್ನು ಸಮಾಜದಲ್ಲಿ ಮೂಡಿಸುತ್ತ ಸರ್ವತ್ರ ಸಂಚಾರ ಮಾಡುತ್ತಿರುತ್ತಾರೆ. ಇದು ರಾಮ ಕೃಷ್ಣರ ಭೂಮಿ, ರಾಕ್ಷಸರದ್ದಲ್ಲ ಎಂಬ ಸಂಗತಿಯನ್ನೂ ಜನರಿಗೆ ತಿಳಿಸುತ್ತಾರೆ. ಇಲ್ಲಿ ಸತ್ಯಕ್ಕೇ ವಿಜಯ ಲಭಿಸುತ್ತದೆ ಎಂಬ ವಿಚಾರವನ್ನು ನೆಲೆಗೊಳಿಸುತ್ತಿದ್ದವರೂ ಸಂತರೇ. ಶತಮಾನಗಳ ನಂತರ ಶಿವಾಜಿ ಮಹಾರಾಜರು ಹಿಂದೂ ರಾಜ್ಯವನ್ನು ಸ್ಥಾಪಿಸಿದರು. ಆದರೆ ಅದರ ಹಿಂದೆ ಜ್ಞಾನೇಶ್ವರನಿಂದ ತುಕಾರಾಮರವರೆಗಿನ ಸಂತ ಪರಂಪರೆಯ ಶಾಂತ ತಪಶ್ಚರ್ಯೆಯಿತ್ತು. ಸಮರ್ಥ ರಾಮದಾಸರೂ ಒಮ್ಮೊಮ್ಮೆ ನಿರಾಶರಾದಾಗ ಈ ಸಂತರು ಪ್ರಜೆಗಳಲ್ಲಿ ಸತ್ಯಕ್ಕೆ ವಿಜಯವಾಗುವ ವಿಶ್ವಾಸವನ್ನು ದೃಢಗೊಳಿಸಿದ್ದರು. ಈ ರೀತಿ ಶಾಂತ, ಮೂಕ ತಪಸ್ಸಿನ ಮೂಲಕ ಸ್ವಾಭಿಮಾನದ ಭಾವನೆಯನ್ನು ಜಾಗೃತಗೊಳಿಸುತ್ತಿದ್ದವರೇ ನಮ್ಮ ರಾಷ್ಟ್ರದ ತಳಪಾಯ ಹಾಕಿದ್ದರಿಂದ, ಅದರ ಆಧಾರದ ಮೇಲೆಯೇ ಶಿವಾಜಿ ಮಹಾರಾಜರು ಭವ್ಯ ಪ್ರಾಸಾದವನ್ನು ನಿರ್ಮಿಸಿದರು. ಆದ್ದರಿಂದಲೇ ಭಾರತ ಮತ್ತು ಭಾರತೀಯ ಸಂಸ್ಕೃತಿ ಎರಡೂ ಇತಿಹಾಸದ ಕಠಿಣ ಪರೀಕ್ಷೆಯಲ್ಲೂ ಉತ್ತೀರ್ಣವಾಗಿ ಉಳಿದಿವೆ. ಈ ಸಂಸ್ಕೃತಿಯನ್ನು ಮೃತ್ಯುಂಜಯಿ ಎಂದು ಹೇಳಲಾಗುತ್ತದೆ. ಈ ದೇಶದ ಅಪರಿಗ್ರಹಿ, ತ್ಯಾಗಿ, ಸಮರ್ಪಿತ ಋಷಿಮುನಿಗಳು ಮತ್ತು ಸಂತರ ಪ್ರತಾಪದಿಂದಲೇ ಅದು ಮುಂದಕ್ಕೂ ಮೃತ್ಯುಂಜಯಿಯಾಗಿ ಉಳಿಯಲಿದೆ.

(ರಾಷ್ಟ್ರೀಯ ಸ್ವಯಂಸೇವಕ ಸಂಘದ ದಿವಂಗತ ಅ. ಭಾ. ವ್ಯವಸ್ಥಾ ಪ್ರಮುಖ ದಿ. ಶ್ರೀ ಲಕ್ಷ್ಮಣರಾವ್ ಇನಾಮದಾರರ ಜೀವನದ ಕುರಿತ ಸೇತುಬಂಧ ಎಂಬ ಪುಸ್ತಕವನ್ನು 1986 ರ ಸೆಪ್ಟೆಂಬರ್ 22 ರಂದು ಅಹ್ಮದಾಬಾದಿನಲ್ಲಿ ಬಿಡುಗಡೆ ಮಾಡುತ್ತಾ ಮಾಡಿದ ಭಾಷಣದಿಂದ)

1990

   

Leave a Reply