ಎಬೋಲಾ ಪರಿಹಾರಕ್ಕೆ ರೋಬೋಟ್

ಸುದ್ದಿಗಳು - 0 Comment
Issue Date : 13.10.2014

ಎಬೋಲಾ ಎಂಬ ಹೆಸರು ಕೇಳಿದರೇನೇ ಮೈಚಳಿ ಆರಂಭವಾಗುತ್ತದೆ. ಪಶ್ಚಿಮ ಆಫ್ರಿಕಾ ರಾಷ್ಟ್ರಗಳನ್ನು ತಲ್ಲಣಗೊಳಿಸಿದ ಎಬೋಲಾ ಎಂಬ ಮಾರಿ ಸದ್ಯಕ್ಕೆ ಜಾಗತಿಕ ಸವಾಲಾಗಿ ಮಾರ್ಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಎಬೋಲಾ ನಿಯಂತ್ರಣಕ್ಕಾಗಿ ಎಲ್ಲ ರಾಷ್ಟ್ರಗಳೂ ಒಂದಾಗಬೇಕೆಂಬ ಕರೆಯನ್ನೂ ನೀಡಿದೆ. ಮೊನ್ನೆ ಮೊನ್ನೆ ಅಮೆರಿಕದಲ್ಲೂ ಎಬೋಲಾ ಸೋಂಕಿನಿಂದ ಒಬ್ಬ ವ್ಯಕ್ತಿ ಸಾವಿಗೀಡಾದ ಸುದ್ದಿ ಬೆಳಕಿಗೆ ಬರುತ್ತಲೇ ಅಮೆರಿಕದಲ್ಲೂ ತಲ್ಲಣ ಆರಂಭವಾಗಿದೆ. ಬೇರೆ ಬೇರೆ ದೇಶಕ್ಕೆ ಪ್ರವಾಸ ಮಾಡುವ ಜನರಿಂದ ಈ ಸೋಂಕು ವಿಶ್ವದ ಎಲ್ಲ ರಾಷ್ಟ್ರಗಳಿಗೂ ವ್ಯಾಪಿಸುವ ಸಂಭವವಿದೆ. ಮೊದಲೆಲ್ಲ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆ ನಡೆಸುತ್ತಿದ್ದಂತೆಯೇ ಇಂದು ಭದ್ರತೆಗಿಂತ ಹೆಚ್ಚಾಗಿ ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸುವುದು ಮಾಮೂಲಾಗಿದೆ. ಎಲ್ಲಕ್ಕೂ ಕಾರಣ ಎಬೋಲಾ ಎಂಬ ಮಾರಿ!

ಗಾಳಿಯಿಂದ ಬರುವ ರೋಗವಲ್ಲ, ರೋಗ ತಗುಲಿದ ವ್ಯಕ್ತಿಯನ್ನು ಮುಟ್ಟಿದರೆ ಮಾತ್ರ ರೋಗ ಬರುವುದು ಗ್ಯಾರಂಟಿ. ಬಾವಲಿಯ ರಕ್ತದಿಂದ ಬರುವ ಈ ರೋಗ ಮನುಷ್ಯನಿಗೆ ಮಾತ್ರವೇ ಬರುತ್ತದೆ. ಬೇರೆ ಪ್ರಾಣಿಗಳು ಇದರ ಸೋಂಕನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುತ್ತವೆ ಅಷ್ಟೆ.
ಈ ರೋಗಕ್ಕೆ ಸೂಕ್ತ ಔಷಧ ಇನ್ನೂ ಪತ್ತೆಯಾಗಿಲ್ಲ. ರೋಗಿಯನ್ನು ಮುಟ್ಟುವುದಾದರೆ ಇಡೀ ದೇಹಕ್ಕೂ ಬಟ್ಟೆ ಸುತ್ತಿಕೊಳ್ಳಬೇಕು. ರೋಗಿಯನ್ನು ಸ್ಪರ್ಶಿಸುವಂತಿಲ್ಲ. ರೋಗಿಯ ಬೆವರು, ಕಣ್ಣೀರು, ರಕ್ತ ಯಾವುದಾದರೂ ಮತ್ತೊಬ್ಬರ ದೇಹಕ್ಕೆ ತಗುಲಿದರೂ ರೋಗ ಬರುತ್ತದೆ. ಯಾವುದೇ ವೈದ್ಯರು ಈ ರೋಗಕ್ಕೆ ಚಿಕಿತ್ಸೆ ನೀಡಲು ಅಂಜುವ ಕಾರಣದಿಂದಾಗಿ ಪರ್ಯಾಯ ಮಾರ್ಗವೊಂದನ್ನು ಕಂಡುಕೊಳ್ಳಲಾಗಿದೆ. ಅದೇನೆಂದರೆ ಎಬೋಲಾ ರೋಗಕ್ಕೆ ಮದ್ದು ನೀಡುವ ರೋಬೋಟ್ ಒಂದನ್ನು ತಯಾರಿಸಲಾಗಿದೆ. ಈ ರೋಬೋಟ್ ಖುದ್ದು ವೈದ್ಯರಂತೆ ಕೆಲಸ ಮಾಡಲಿದೆ. ವ್ಯಕ್ತಿಗೆ ಸೂಕ್ತವಾದ ಆರೈಕೆಯನ್ನು ಮಾಡಲಿದೆ.
ದೇಹದಲ್ಲಿರುವ ಎಬೋಲಾ ಸೋಂಕಿನ ವಿರುದ್ಧ ಹೋರಾಡುವುದು ಇದರ ಕೆಲಸ. ಈ ಪ್ರಕ್ರಿಯೆಯಲ್ಲಿ ರೋಬೋಟ್ ಅತಿ ನೇರಳೆ ಕಿರಣವನ್ನು ಬಳಸುತ್ತದೆ. ವ್ಯಕ್ತಿಯ ದೇಹಕ್ಕೆ ವಿಕಿರಣವನ್ನು ಹಾಯಿಸಿ, ದೇಹದಲ್ಲಿರುವ ರೋಗಕಾರಕಗಳನ್ನು ನಾಶ ಮಾಡುತ್ತದೆ.

ಆದರೆ ಇದರಿಂದ ದೇಹದ ಆರೋಗ್ಯವಂತ ಕಣಗಳು ನಾಶವಾಗಬಹುದಾದ ಅಪಾಯವಿರುವುದು ಸುಳ್ಳಲ್ಲ.

   

Leave a Reply