ಗಡಿ ವಿಚಾರದಲ್ಲಿ ದೇಶ ಸದಾ ಜಾಗೃತ: ತರುಣ್‌ವಿಜಯ್

ಬೆಂಗಳೂರಿನ ಸುದ್ದಿಗಳು - 0 Comment
Issue Date : 22.09.2014

ಬೆಂಗಳೂರು: ಪ್ರಧಾನಿ ಮೋದಿ ಹಾಗೂ ಚೀನಾ ಪ್ರಧಾನಿ ಜಿನ್ ಪಿಂಗ್‌ಭೇಟಿಯಿಂದ ದೇಶಕ್ಕೆ ಆತಂಕವಿಲ್ಲ. ಗಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಸದಾ ಎಚ್ಚರದಲ್ಲಿರುತ್ತದೆ ಎಂದು ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಹೇಳಿದ್ದಾರೆ.
ಇಂಡಿಯಾ ಈಸ್ಟ್ ಏಷ್ಯಾ ರಿಸರ್ಚ್ ಫೌಂಡೇಶನ್ ಮತ್ತು ಮಂಥನ ಸೆ.14ರಂದು ಮಿಥಿಕ್ ಸೊಸೈಟಿಯಲ್ಲಿ ಏರ್ಪಡಿಸಿದ್ದ ‘ಮೋದಿ – ಜಿನ್‌ಪಿಂಗ್ ಸಮಿಟ್’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಸಬಲವಾಗಿರುವ ಚೀನಾ ಬಂಡವಾಳ ಹೂಡಲು ಆಸಕ್ತಿ ತೋರಿದ್ದು, ಮರೆಮಾಚಿರುವ ಗುರಿಗಳ ಈಡೇರಿಕೆಗೂ ಮುಂದಾಗಿದೆ. ಗಡಿ ವಿಚಾರ ಬಂದರೆ ಕೇಂದ್ರ ಸರ್ಕಾರ ಎಚ್ಚರಿಕೆಯಲ್ಲಿರುತ್ತದೆ.
ಭಾರತೀಯರಿಗೆ ಚೀನಾದ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಆಸಕ್ತಿ ಇಲ್ಲ. ಹೀಗಾಗಿ ಪ್ರವಾಸ, ಜ್ಞಾನ, ಶಿಕ್ಷಣ ಸೇರಿದಂತೆ ವಿವಿಧ ಅಗತ್ಯಗಳಿಗೆ ಚೀನಾ ಹೊರತುಪಡಿಸಿದ ಪ್ರದೇಶಗಳನ್ನೇ ಆರಿಸಿಕೊಳ್ಳಲಾಗುತ್ತಿದೆ. ಚೀನಾ ಎಂದಾಕ್ಷಣ ಕೇವಲ ಗಡಿ ವಿವಾದ ಮಾತ್ರ ಪರಿಗಣಿಸಲಾಗುತ್ತಿದೆ. ಗಡಿ ವಿವಾದಕ್ಕೆ ಹೊರತಾದ ಕುತೂಹಲಕರ ಅಂಶಗಳೂ ಚೀನಾದಲ್ಲಿದೆ ಎಂದರು.
ಮಣಿಪಾಲ್ ಗ್ಲೋಬಲ್ ಎಜ್ಯುಕೇಶನ್ ಸಂಸ್ಥೆಯ ಮುಖ್ಯಸ್ಥ ಟಿ.ವಿ.ಮೋಹನ್‌ದಾಸ್ ಪೈ ಮಾತನಾಡಿ, ಜನಸಂಖ್ಯೆ, ಆರ್ಥಿಕತೆ, ಸಾರಿಗೆ ವ್ಯವಸ್ಥೆ, ಸ್ವದೇಶಿ ವಸ್ತುಗಳ ಮಾರಾಟಗಳಿಗೆ ಹೋಲಿಸಿದರೆ ಚೀನಾ ಮುಂಚೂಣಿಯಲ್ಲಿದೆ. ನಮ್ಮ ದೇಶದಲ್ಲಿ ಎಕರೆ ಭೂಮಿಯನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿದರೆ, ಚೀನಾ ತನ್ನ ಜಿಲ್ಲೆಗಳನ್ನೇ ಎಸ್‌ಇಝೆಡ್ ಎಂದು ಘೋಷಿಸಿ ಅಭಿವೃದ್ಧಿ ಮಾಡಿದೆ. ಭವಿಷ್ಯದಲ್ಲಿ ಬಲಿಷ್ಠ ರಾಷ್ಟ್ರವಾಗಲಿರುವ ಚೀನಾದೊಂದಿಗೆ ಭಾರತ ಸ್ನೇಹ ಬೆಳೆಸಬೇಕು ಎಂದರು.
ಚಿಂತಕ ಆರ್. ಕೆ. ಮಿಶ್ರಾ ಮಾತನಾಡಿ, ದೇಶಕ್ಕೆ ಬಂಡವಾಳ ಹೂಡಿಕೆ ಅಗತ್ಯವಿದೆ. ಉತ್ತರಪ್ರದೇಶವೊಂದರಲ್ಲೇ ಇಬ್ಬರು ಯುವಕರಲ್ಲಿ ಒಬ್ಬ ನಿರುದ್ಯೋಗಿಯಾಗಿದ್ದಾರೆ. 25ಕೋಟಿ ಯುವಜನರಿಗೆ ಉದ್ಯೋಗ ನೀಡುವ ಹೊಣೆ ಸರ್ಕಾರದ ಮೇಲಿದೆ ಎಂದರು.
ಪ್ರೊ. ಶ್ರೀಕಾಂತ ಕೊಂಡಪಳ್ಳಿ ಮಾತನಾಡಿ, ಚೀನಾ ಕೇವಲ ಬಂಡವಾಳ ಹೂಡಿಕೆ ದೃಷ್ಟಿಯಿಂದ ಸ್ನೇಹ ಬೆಳೆಸುತ್ತಿಲ್ಲ. ಚೀನಾದ ಆರ್ಥಿಕತೆ ಕುಸಿಯುತ್ತಿದ್ದು, ನೆರೆ ರಾಷ್ಟ್ರಗಳೊಂದಿಗೆ ವ್ಯವಹಾರ ಬೆಳೆಸುವುದು ಅನಿವಾರ್ಯವಾಗಿದೆ ಎಂದರು.

 

 

   

Leave a Reply