ಗಣ್ಯರೇಕೆ ವೃದ್ಧಾಶ್ರಮಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಬಾರದು?

ಕರ್ನಾಟಕ - 0 Comment
Issue Date : 13.10.2014

ಪ್ರಧಾನಿ ನರೇಂದ್ರ ಮೋದಿ ಅವರೇನೋ ಕಾಶ್ಮೀರದಲ್ಲಿ ಉಂಟಾದ ಭೀಕರ ನೆರೆ ಹಾನಿ ಹಿನ್ನಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಬಾರದೆಂದು ಕೇಂದ್ರದಲ್ಲಿ ಆಡಳಿತ ಪಕ್ಷವಾದ ಬಿಜೆಪಿಗೆ ಸ್ಪಷ್ಟ ಸೂಚನೆ ನೀಡಿದ್ದರು.ಅದರಂತೆ ಮೋದಿ ಅವರ ಹುಟ್ಟುಹಬ್ಬದ ದಿನ ಯಾವುದೇ ರೀತಿಯ ಸಂಭ್ರಮದ ಸಮಾರಂಭ ನಡೆದಿದ್ದು ಎಲ್ಲೂ ವರದಿಯಾಗಲಿಲ್ಲ . ಸರಳತೆಯನ್ನು ಸದಾ ಅನುಸರಿಸುತ್ತಿರುವ ಪ್ರಧಾನಿ ಮೋದಿ ದೇಶದ ಇತರ ರಾಜ್ಯಗಳಲ್ಲೂ ತಮ್ಮ ಸೂಚನೆಯ ಮೂಲಕ ಪ್ರಭಾವ ಬೀರಿರಲೂ ಸಾಕು. ಆದರೆ ಕರ್ನಾಟಕದಲ್ಲಿ ಮಾತ್ರ ಮೋದಿ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದರೇನು, ನಾವಂತೂ ವಿಜೃಂಭಣೆಗೆ ಬ್ರೇಕ್ ಹಾಕುವುದಿಲ್ಲ ಎಂದು ರಾಜ್ಯದ ಕೆಲವು ಸಚಿವರು ಪ್ರತಿಜ್ಞೆ ಮಾಡಿದಂತೆ ಕಾಣುತ್ತಿದೆ.

ಕಳೆದ ಕೆಲವು ದಿನಗಳಿಂದ ರಾಜಧಾನಿಯ ಅನೇಕ ಕಡೆಗಳಲ್ಲಿ ಸಚಿವರೊಬ್ಬರ ಹುಟ್ಟುಹಬ್ಬದ ಫ್ಲೆಕ್ಸ್‌ಗಳು,ಕಟೌಟ್‌ಗಳು, ಬ್ಯಾನರ್‌ಗಳು ರಾರಾಜಿಸುತ್ತಿವೆ.ಸಚಿವರಿಗೆ ಸರಳ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳದಂತೆ ಅದಾರು ಸಲಹೆ ನೀಡಿದ್ದಾರೋ ಗೊತ್ತಿಲ್ಲ.ತಮ್ಮ ಹುಟ್ಟುಹಬ್ಬ ದೊಡ್ಡ ಸಮಾರಂಭದ ಮೂಲಕವೇ ಆಚರಣೆಯಾಗಬೇಕು ಎಂದು ಸಚಿವರು ಅದ್ಯಾಕೆ ಬಯಸುತ್ತಾರೋ ಗೊತ್ತಿಲ್ಲ.
ಇರಲಿ, ಪ್ರಧಾನಿ ಬಿಜೆಪಿಗೆ ಸೇರಿದವರು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಪ್ರತಿನಿಧಿಸುವ ಮಂತ್ರಿಗಳು ಪ್ರಧಾನಿ ಕರೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ನಿಸ್ಸಂಶಯವಾಗಿಯೂ ಹೇಳಬಹುದು.ಏಕೆಂದರೆ ಪ್ರಧಾನಿ ಕಾಂಗ್ರೆಸ್ ಪಕ್ಷದವರೇ ಆಗಿದ್ದರೆ ಇಂತಹ ವಿಜೃಂಭಣೆ ಕಾಣುತ್ತಿತ್ತೇನು? ಪ್ರಧಾನಿ ಕರೆ ಕೊಡದೇ ಇದ್ದರೂ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ ಇತರರಿಗೆ ಮಾದರಿಯಾಗುವ ಮನಸ್ಸು ನಮ್ಮ ಸಚಿವರಿಗೇಕೆ ಇಲ್ಲ ಎನ್ನುವುದೇ ಪ್ರಶ್ನೆ.ಮಂತ್ರಿಯೊಬ್ಬರು ಹುಟ್ಟುಹಬ್ಬ ಆಚರಿಸಿದರೆ ಅದರಿಂದ ಅವರನ್ನು ಆಯ್ಕೆ ಮಾಡಿದ ಕ್ಷೇತ್ರಕ್ಕೆ ಏನಾದರೂ ಲಾಭವಾಗುತ್ತದೆಯೇ? ಅಥವಾ ಮತದಾರರರು ಹುಟ್ಟುಹಬ್ಬದ ಕಾಣಿಕೆಯಾಗಿ ಏನನ್ನಾದರೂ ಪಡೆಯುತ್ತಾರೆಯೇ? ಇದಾವುದೂ ಇಲ್ಲವೆಂದಾದರೆ ಹುಟ್ಟುಹಬ್ಬದ ವಿಜೃಂಭಣೆಯಿಂದ ಪ್ರಯೋಜನವಾದರೂ ಏನು?
ಇಂದು ರಾಜಕೀಯ ಕ್ಷೇತ್ರ ಹೊರತುಪಡಿಸಿ ಇತರರು ತಮ್ಮ ಹುಟ್ಟುಹಬ್ಬದ ಸಂದರ್ಭವನ್ನು ಅನಾಥಾಲಯಗಳಲ್ಲೋ,ವಿಕಲಚೇತನರ ವಿದ್ಯಾರ್ಥಿ ನಿಲಯಗಳಲ್ಲೋ ಆಚರಿಸುವುದು ಈಗೀಗ ಹೆಚ್ಚುತ್ತಿದೆ.ಕೆಲವು ಸಾಮಾನ್ಯ ಜನರೂ ಕೂಡಾ ವೃದ್ಧಾಶ್ರಮಗಳಲ್ಲಿ ಒಂದು ಹೊತ್ತಿನ ಊಟ ನೀಡುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸುವುದೂ ಇದೆ.ಇದರಿಂದಾಗಿ ಸಮಾಜದಲ್ಲಿ ತಮ್ಮ ಬಗ್ಗೆ ಕಾಳಜಿ ಹೊಂದಿರುವ ಜನರಿದ್ದಾರೆ ಎನ್ನುವ ಸಮಾಧಾನವಾದರೂ ಅಶಕ್ತರಿಗೆ ಮೂಡುತ್ತದೆ.ಇದಕ್ಕಿಂತ ಮಿಗಿಲಾಗಿ ಸಮಾಜಕ್ಕೆ ಏನನ್ನಾದರೂ ನೀಡಬೇಕು ಎನ್ನುವ ಮನೋಭಾವ ನಮ್ಮಲ್ಲಿ ಜಾಗೃತವಾಗುತ್ತದೆ.
ಈಚಿನ ದಿನಗಳಲ್ಲಿ ಕೆಲವು ವೃದ್ಧಾಶ್ರಮಗಳು ಉತ್ತಮ ಆರ್ಥಿಕ ಸ್ಥಿತಿವಂತರ ಕುಟುಂಬದ ವೃದ್ಧರಿಗೂ ಆಶ್ರಯ ನೀಡುತ್ತಿರುವ ವಿಲಕ್ಷಣ ಸನ್ನಿವೇಶಗಳೂ ಗಮನಕ್ಕೆ ಬರುತ್ತಿದೆ.ಇದಕ್ಕೆ ಕಾರಣವೆಂದರೆ ವೃದ್ಧರು ಹೊರೆ ಎಂದು ಭಾವಿಸಿಯೋ,ತಂದೆ ತಾಯಿಯನ್ನು ನೋಡಿಕೊಳ್ಳುವ ಮನಸ್ಸಿಲ್ಲದೆಯೋ ವೃದ್ಧಾಶ್ರಮಕ್ಕೆ ಸೇರಿಸುವ ದುರದೃಷ್ಟಕರ ಬೆಳವಣಿಗೆಗೆ ಸಮಾಜ ಮೂಕ ಸಾಕ್ಷಿಯಾಗುತ್ತಿದೆ.ಹಣ ನೀಡಿದರೆ ವೃದ್ಧರನ್ನು ವೃದ್ಧಾಶ್ರಮಗಳಲ್ಲಿ ಚೆನ್ನಾಗಿಯೇ ನೋಡಿಕೊಳ್ಳಬಹುದು.ಆದರೆ ಅಂತಹವರಿಗೆ ಕುಟುಂಬದ ಸದಸ್ಯರಿಂದ ಸಿಗುವ ಪ್ರೀತಿ ಅಲ್ಲಿ ಸಿಗಲು ಸಾಧ್ಯವಿಲ್ಲ.ಸಮಾಜದ ಭಾಗವಾಗಿರುವ ನಾವು ಅಂತಹ ವೃದ್ಧಾಶ್ರಮಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರೆ ಕುಟುಂಬದ ಪ್ರೀತಿಯಿಂದ ವಂಚಿತವಾಗಿರುವ ವೃದ್ಧರಿಗೆ ಸ್ವಲ್ಪ ಮಟ್ಟಿನ ನೆಮ್ಮದಿಯಾದರೂ ಸಿಕ್ಕೀತು.
ಗಣ್ಯ ವ್ಯಕ್ತಿಗಳಂತೂ ಇಂದು ತಮ್ಮ ಹುಟ್ಟುಹಬ್ಬಗಳಿಗೆ ಮಾಡುವ ದುಂದುವೆಚ್ಚವನ್ನು ತಗ್ಗಿಸಿ ಅಶಕ್ತರ ಸಲುವಾಗಿ ಅದೇ ಹಣವನ್ನು ವೆಚ್ಚ ಮಾಡಿದರೆ ನಿಶ್ಚಿತವಾಗಿಯೂ ಸಮಾಜಕ್ಕೆ ಒಂದು ರಚನಾತ್ಮಕ ಸಂದೇಶ ರವಾನೆಯಾಗುತ್ತದೆ.ಇದರಿಂದ ದೊಡ್ಡವರು ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಬೇರೆ ರೀತಿಯಲ್ಲೂ ಆಚರಿಸಲು ಸಾಧ್ಯ ಎಂದು ಯೋಚಿಸಲು ಅವಕಾಶವಾಗುತ್ತದೆ.
ಹಿಂದೆಲ್ಲಾ ಹುಟ್ಟುಹಬ್ಬ , ಮನೆಗಳಲ್ಲಿ ದೀಪ ಬೆಳಗಿ ದೇವರಲ್ಲಿ ಆಯುಷ್ಯ ಕೋರುವ ಸಾಂಪ್ರದಾಯಿಕ ಆಚರಣೆಯಾಗಿತ್ತು.ಆದರೆ ಇಂದು ಹೋಟೆಲುಗಳಲ್ಲಿ ಸಂತೋಷ ಕೂಟವಾಗಿ ಹುಟ್ಟುಹಬ್ಬಗಳು ಬದಲಾವಣೆಯಾಗಿವೆ.ಆಹ್ವಾನಿತರು ಉತ್ತಮ ಭೋಜನ ಸವಿದು ಹೋದರೆ ಅದೇ ಸಾಕು ಎನ್ನುವ ಭಾವನೆ ಸಮಾಜದಲ್ಲಿ ಹೆಚ್ಚುತ್ತಿದೆ.ಆದ್ದರಿಂದ ಸಮಾಜದಲ್ಲಿ ಗಣ್ಯ ವ್ಯಕ್ತಿಗಳ ಸ್ಥಾನದಲ್ಲಿರುವವರ ಜವಾಬ್ದಾರಿ ಇಂದು ಜಾಸ್ತಿಯಾಗಿದೆ.ಆದರೆ ಇದನ್ನು ಅರ್ಥೈಸಿಕೊಂಡು ಇದಕ್ಕೆ ಸ್ಪಂದಿಸುವ ಗಣ್ಯ ವ್ಯಕ್ತಿಗಳ ಸಂಖ್ಯೆಯನ್ನು ಹೆಚ್ಚಿಸುವುದಾದರೂ ಹೇಗೆ ಎಂದು ನಾವು ಗಂಭೀರವಾಗಿ ಚಿಂತಿಸಿಬೇಕಿದೆ.
ದೃಶ್ಯ ಮಾಧ್ಯಗಳು ಹೆಚ್ಚಿದಂತೆಲ್ಲಾ ಕೇವಲ ಪ್ರಚಾರಕ್ಕಾಗಿ ಸಾಮಾನ್ಯ ಸಂಗತಿಯನ್ನೂ ವೈಭವೀಕರಿಸುವ ಪ್ರವೃತ್ತಿ ಬೆಳೆಯುತ್ತಲೇ ಇದೆ.ಗಣ್ಯರ ಹುಟ್ಟುಹಬ್ಬವೂ ಇದಕ್ಕೆ ಹೊರತಾಗಿಲ್ಲ.ಆದರೆ ಗಣ್ಯರು ತಮ್ಮ ಹುಟ್ಟುಹಬ್ಬದ ಆಚರಣೆಯ ವಿಧಾನ ಬದಲಿಸಿಕೊಂಡರೆ ಅದಕ್ಕೂ ಪ್ರಚಾರ ಸಿಗುವುದು ಖಚಿತ.ಇದರಿಂದ ಇತರರೂ ಕೂಡಾ ತಮ್ಮ ಹುಟ್ಟುಹಬ್ಬ ಆಚರಿಸುವಾಗ ಭಿನ್ನವಾಗಿ ಯೋಚಿಸುವುದು ಸಾಧ್ಯವಾಗುತ್ತದೆ.
ಗಣ್ಯ ವ್ಯಕ್ತಿಗಳು ಇತರರಿಗೆ ಮೇಲ್ಪಂಕ್ತಿಯಾಗಬೇಕಾದರೆ ತಮ್ಮ ಹುಟ್ಟುಹಬ್ಬವನ್ನೇ ಇದಕ್ಕೆ ಬಳಸಿಕೊಳ್ಳುವಂತಾಗಬೇಕು.ಇದಕ್ಕೆ ಕರ್ನಾಟಕವೇ ನಾಂದಿ ಹಾಡಲಿ.

  • ಶಾಂತಾರಾಮ್ .ಎಸ್
   

Leave a Reply