ಗ್ರಹಣ ಬಡಿಯದಿರಲಿ ಗುಣಗ್ರಹಣ ಪ್ರವೃತ್ತಿಗೆ !

ಕರ್ನಾಟಕ ; ಲೇಖನಗಳು - 0 Comment
Issue Date : 22.10.2014

ಶೂದ್ರಕನ ‘ಮೃಚ್ಛಕಟಿಕ’ ನಾಟಕದ ಒಂದು ಪ್ರಸಂಗ. ಶರ್ವಿಲಕನೆಂಬ ಕಳ್ಳ, ನಾಯಕನಾದ ಚಾರುದತ್ತನ ಮನೆಯಲ್ಲಿ ಗೋಡೆಗೆ ಕನ್ನ ಕೊರೆದು ಒಳಗೆ ಪ್ರವೇಶಿಸಿ ಆಭರಣಗಳನ್ನು ಕದ್ದುಕೊಂಡು ಹೋಗುತ್ತಾನೆ. ರದನಿಕೆ ಎಂಬ ಸೇವಿಕೆ ಮಲಗಿದ್ದ ಚಾರುದತ್ತನನ್ನೂ ಅವನ ಗೆಳೆಯ ಮೈತ್ರೇಯನನ್ನೂ ಏಳಿಸಿ, ಕಳ್ಳ ಮನೆಗೆ ಕನ್ನ ಕೊರೆದ ಸಂಗತಿಯನ್ನು ತಿಳಿಸುತ್ತಾಳೆ. ಕನ್ನ ಕೊರೆದ ಗೋಡೆಯನ್ನು ನೋಡಿದ ಚಾರುದತ್ತ ಹೇಳುತ್ತಾನೆ – ‘‘ಅಬ್ಬ , ಎಷ್ಟು ಸುಂದರವಾಗಿದೆ ಈ ಕನ್ನ?’’ ತನ್ನ ಮನೆಗೆ ಕನ್ನವಿಕ್ಕಿದ ಕಳ್ಳ ಆಭರಣಗಳನ್ನು ಕದ್ದೊಯ್ದ ಸಂದರ್ಭದಲ್ಲಿಯೂ ನಿರ್ಧನ ಚಾರುದತ್ತನ ಮನಸ್ಸು ಮೊದಲಿಗೆ ಗ್ರಹಿಸುವುದು ಗೋಡೆಯಲ್ಲಿ ಕೊರೆಯಲಾಗಿರುವ ಕನ್ನದ ಸೌಂದರ್ಯವನ್ನು ! ಹದನಾದ ಮನಸ್ಸೊಂದು ಎಂಥ ಪ್ರಸಂಗದಲ್ಲೂ ಗುಣವನ್ನೇ ಗ್ರಹಿಸುತ್ತದೆ ಎಂಬುದಕ್ಕೆ ಇದೊಂದು ಸುಂದರವಾದ ಉದಾಹರಣೆ.

ಇದನ್ನೇ ಪ್ರಕೃತಕಾಲಕ್ಕೆ ಒಂದಿಷ್ಟು ಅನ್ವಯಿಸಿಕೊಂಡು ನೋಡಿದರೆ, ‘ಗುಣಗ್ರಹಣ’ವೆಂಬುದು ಇಂದಿನ ದಿನಗಳಲ್ಲಿ ಅದೆಷ್ಟು ಕಡಿಮೆಯಾಗಿದೆ ಎಂಬುದು ನಮ್ಮ ಅರಿವಿಗೆ ಬಾರದಿರದು. ಇದರದ್ದೇ ಇನ್ನೊಂದು ಮುಖವಾದ ‘ದೋಷಗ್ರಹಣ’ವನ್ನು ಒಮ್ಮೆ ಪರಿಶೀಲಿಸಿದರೆ ನಮ್ಮ ಮನಸ್ಸು ಅದೆಷ್ಟು ಸುಲಭವಾಗಿ., ಅದೆಷ್ಟು ದೊಡ್ಡ ಪ್ರಮಾಣದಲ್ಲಿ ದೋಷಗಳನ್ನು ಗ್ರಹಿಸುತ್ತದೆ ಎಂಬುದು ನಮಗೇ ವಿಸ್ಮಯವನ್ನು ತರಿಸದಿರದು.

ದೋಷವನ್ನು, ಕೆಟ್ಟ ಅಂಶವನ್ನು ಗ್ರಹಿಸುವುದೋ ಗಮನಿಸುವುದೋ ತಪ್ಪೇನಲ್ಲ. ಆದರೆ ಅದನ್ನು ಗ್ರಹಿಸುವ ಭರದಲ್ಲಿ ಒಳ್ಳೆಯ ಅಂಶಗಳೆಲ್ಲ ಮರೆಯಾಗಿಬಿಡುತ್ತವೆ ಎಂಬುದು ವಿಷಾದಕರ.
ಏಕೋ ಹಿ ದೋಷೋ ಗುಣಸನ್ನಿಪಾತೇ
ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ

(ಒಂದೇ ಒಂದು ದೋಷವಿದ್ದರೆ ಅದು ಗುಣಗಳ ಸಮೂಹದಲ್ಲಿ ಮುಳುಗಿಹೋಗುತ್ತದೆ, ಅಥವಾ ಮರೆಯಾಗಿಬಿಡುತ್ತದೆ) ಎಂಬ ಮಹಾಕವಿ ಕಾಳಿದಾಸನ ಮಾತಿನ ಯಥಾರ್ಥತೆಯ ಬಗೆಗೆ ಖಂಡಿತವಾಗಿಯೂ ಸಂಶಯವಾಗುತ್ತದೆ. ಏಕೆಂದರೆ ಒಳ್ಳೆಯ ನೂರು ಅಂಶಗಳನ್ನೂ ಮರೆತು ಕೆಟ್ಟದಾದ ಒಂದೇ ಅಂಶವನ್ನು ಗುರುತಿಸುವ, ಗಮನಿಸುವ ಅಭ್ಯಾಸ ಎಲ್ಲರಲ್ಲೂ ಇರುತ್ತದೆ. ಒಳ್ಳೆಯ ಭಾಷಣವೊಂದನ್ನು ಕೇಳಿದೆವು. ಅದರ ನಡುವೆ ಭಾಷಣಕಾರರು ಒಂದು ವಚನವನ್ನೋ, ಶ್ಲೋಕವನ್ನೋ ಸ್ವಲ್ಪ ತಪ್ಪಾಗಿ ಉದ್ಧರಿಸುತ್ತಾರೆ ಎಂದಿಟ್ಟುಕೊಳ್ಳೋಣ. ನಮ್ಮ ಮನಸ್ಸು ಉಳಿದೆಲ್ಲ ಒಳ್ಳೆಯ ಅಂಶಗಳನ್ನು ಮರೆತು ಆತನು ತಪ್ಪಾಗಿ ಉದ್ಧರಿಸಿದ ಅಂಶವನ್ನೇ ಮತ್ತೆ ಮತ್ತೆ ಮೆಲುಕು ಹಾಕುತ್ತಿರುತ್ತದೆ. ಆಕರ್ಷಕ ಲೇಖನವೊಂದನ್ನು ಓದಿದೆವೆನ್ನಿ. ಅಲ್ಲಿ ಕಂಡು ಬಂದ ಒಂದು ಸಣ್ಣ ತಪ್ಪು ಇಡೀ ಲೇಖನದ ಒಳ್ಳೆಯ ಗುಣಗಳನ್ನೆಲ್ಲಾ ಮರೆಸಿ ಅದನ್ನು ಮಾತ್ರ ನೆನಪಿಡುವಂತೆ ಮಾಡುತ್ತದೆ.

ಸಂಸ್ಕೃತದಲ್ಲಿ ವಿದ್ವಾನ್ ಎಂಬುದಕ್ಕೆ ಸಮಾನಾರ್ಥಕವಾದ ಮತ್ತೊಂದು ಪದ ‘ದೋಷಜ್ಞ’ ಎಂಬುದು. (ವಿದ್ವಾನ ವಿಪಶ್ಚಿತ್ ದೋಷಜ್ಞಃ ಸನ್ ಸುಧೀಃ ಕೋವಿದೋ ಬುಧಃ – ಅಮರಕೋಷ) ಇದನ್ನೇ ಬಂಡವಾಳ ಮಾಡಿಕೊಂಡ ಅನೇಕ ಮಂದಿ ಸಂಸ್ಕೃತಪಂಡಿತರು ಇನ್ನೊಬ್ಬರ ದೋಷವನ್ನು ಗುರುತಿಸದಿದ್ದರೆ ನಾನು ಹೇಗೆ ತಾನೆ ಪಂಡಿತನಾದೇನು ಎಂದು ತಮ್ಮಲ್ಲಿಯೇ ಪ್ರಶ್ನೆ ಹಾಕಿಕೊಂಡು ಮೈಯೆಲ್ಲ ಕಣ್ಣಾಗಿ ಎದುರಿನವರ ದೋಷಗಳನ್ನು ಕಂಡು ಹಿಡಿಯುವುದರಲ್ಲಿ ನಿರತರಾಗಿರುತ್ತಾರೆ !

ಹಾಗೆಂದು ದೋಷವನ್ನು ಗುರುತಿಸುವುದೆ ತಪ್ಪೆಂದು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ಗುರುತಿಸುವುದು ಖಂಡಿತವಾಗಿಯೂ ಯೋಗ್ಯವೇ. ಆದರೆ ಗುರುತಿಸುವಾಗ ದೋಷೈಕದೃಷ್ಟಿಗಳಾಗದೆ ಗುಣಗಳನ್ನೂ ಗುರುತಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗುರುತಿಸಿದ ಮೇಲೆ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಗಮನಿಸಬೇಕಾದ ಅಂಶ. ನಿಜವಾದ ವಿದ್ವಾಂಸರು ಗುಣದೋಷಗಳಿಗೆ ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ ಎಂಬುದನ್ನು ಅಪ್ಪಯ್ಯ ದೀಕ್ಷಿತರು ತಮ್ಮ ‘ಕುವಲಯಾನಂದ’ ಗ್ರಂಥದಲ್ಲಿ ಸೊಗಸಾದ ಪದ್ಯವೊಂದರಲ್ಲಿ ಹೀಗೆ ವಿವರಿಸಿದ್ದಾರೆ –
ಗುಣದೋಷೌ ಬುಧೋ ಗೃಹ್ಣನ್ ಇಂದುಕ್ಷ್ವೇಡಾವಿವೇಶ್ವರಃ
ಶಿರಸಾ ಶ್ಲಾಘತೇ ಪೂರ್ವಂ ಪರಂ ಕಂಠೇ ನಿಯಚ್ಛತಿ ॥

(ಈಶ್ವರನು ಚಂದ್ರನನ್ನು ತಲೆಯಮೇಲೆ ಹೊತ್ತುಕೊಂಡಿದ್ದಾನೆ. ಕಾಲಕೂಟವಿಷವನ್ನು ತನ್ನ ಕಂಠದಲ್ಲೇ ಇರಿಸಿಕೊಂಡಿದ್ದಾನೆ. ಅದರಂತೆ ಪಂಡಿತನು ಗುಣವನ್ನು ಕಂಡಾಗ ಅದನ್ನು ತನ್ನ ತಲೆಯನ್ನು ಅಲ್ಲಾಡಿಸುವುದರೊಂದಿಗೆ ಶ್ಲಾಘಿಸುತ್ತಾನೆ. ದೋಷವನ್ನು ಕಂಡರೆ ಅದನ್ನು ಮಾತಿನಿಂದ ಹೊರಗೆ ಪ್ರಕಾಶಪಡಿಸದೆ ಗಂಟಲಿನಲ್ಲೇ ತಡೆಹಿಡಿಯುತ್ತಾನೆ !) ಈಗ ಪಂಡಿತ ಎಂಬ ಪದಕ್ಕೆ ಸಮಾನಾರ್ಥಕವಾಗಿ ‘ದೋಷಜ್ಞ’ ಎಂಬ ಪದವನ್ನು ಬಳಸುವುದರಲ್ಲಿ ತಪ್ಪಿಲ್ಲ ಎಂಬುವುದನ್ನು ಗಮನಿಸಬಹುದು. ಏಕೆಂದರೆ ದೋಷಜ್ಞ ಎಂಬ ಶಬ್ದಕ್ಕೆ ದೋಷವನ್ನು ತಿಳಿಯುವವನು ಎಂಬ ಅರ್ಥವೇ ಹೊರತು ದೋಷವನ್ನು ಪ್ರಚಾರ ಮಾಡುವವನು ಎಂಬ ಅರ್ಥ ಖಂಡಿತಕ್ಕೂ ಇಲ್ಲ. ಆದುದರಿಂದ ನಿಜವಾದ ಪಂಡಿತನಾದವನು ಇತರರು ಮಾಡುವ ದೋಷಗಳನ್ನು ಗುರುತಿಸುತ್ತಾನೆ, ಅದನ್ನು ಪ್ರಕಟಪಡಿಸುವ ಗೋಜಿಗೆ ಹೋಗುವುದಿಲ್ಲ, ಆದರೆ ಆ ತಪ್ಪುಗಳು ತನ್ನಿಂದ ಆಗದಂತೆ ಜಾಗರೂಕತೆ ವಹಿಸುತ್ತಾನೆ ಎಂದು ನಮ್ಮ ಗುರುಗಳು ವಿವರಿಸುತ್ತಿದ್ದುದು ನೆನೆಪಾಗುತ್ತದೆ.

(ಭಾಷಾಪ್ರಯೋಗಕ್ಕೆ ಸಂಬಂಧಿಸಿದಂತೆಯೂ ಇದನ್ನು ಅನ್ವಯಿಸಬಹುದುದಾಗಿದೆ. ಹಾಗೆಂದರೆ ಅಲ್ಲಿ ಇತರರು ಮಾಡುವ ದೋಷಗಳನ್ನು ತಿಳಿದೂ ನಾವು ಸುಮ್ಮನಿರಬೇಕು? ಅದನ್ನು ತಿದ್ದುವ ಜವಾಬ್ದಾರಿ ನಮ್ಮದಲ್ಲವೆ? ಎಂಬ ಪ್ರಶ್ನೆ ಉಳಿದುಬಿಡುತ್ತದೆ. ಖಂಡಿತವಾಗಿಯೂ ತಿದ್ದಬೇಕು. ಆದರೆ ಅದು ಯಾವ ಸಂದರ್ಭದಲ್ಲಿ ಎಂಬುದು ತುಂಬ ಮುಖ್ಯ. ಎಲ್ಲರೆದುರಿಗೂ ಅದನ್ನು ಹೇಳಿ ತಪ್ಪು ಪ್ರಯೋಗ ಮಾಡಿದವನ ಉತ್ಸಾಹವನ್ನೇ ನಾಶಮಾಡುವುದು ತರವಲ್ಲ. ಆತನಿಗೆ ನಮ್ಮ ಮೇಲೆ ಚೆನ್ನಾಗಿ ವಿಶ್ವಾಸ ಬೆಳೆದ ಮೇಲೆ, ನಾವಂದುದನ್ನು ಅನ್ಯಥಾ ಭಾವಿಸದೇ ಋಜುಬುದ್ಧಿಯಿಂದ ಅವನು ಸ್ವೀಕರಿಸಬಲ್ಲ ಎಂಬ ವಿಶ್ವಾಸ ನಮಗೂ ಬೆಳೆದ ಮೇಲೆ ನಯವಾದ ಮಾತಿನಲ್ಲಿ ತಿಳಿಸಿಕೊಟ್ಟರೆ ಆತ ಖಂಡಿತವಾಗಿಯೂ ಅದನ್ನು ಸ್ವೀಕರಿಸಿ ತನ್ನ ಭಾಷಾಪ್ರಯೋಗವನ್ನು ಇನ್ನಷ್ಟು ಸರಿಪಡಿಸಿಕೊಳ್ಳುತ್ತಾನೆ. ಮಾತ್ರವಲ್ಲ, ಹೀಗೆ ತಿಳಿಸಿಕೊಟ್ಟ ಕಾರಣಕ್ಕಾಗಿ ನಮಗೆ ಕೃತಜ್ಞನೂ ಆಗಿರುತ್ತಾನೆ.)

ಈ ಗುಣದೋಷಗಳ ಗ್ರಹಣ ಮತ್ತು ಪ್ರಕಟೀಕರಣ ಹೇಗೆ ಎಂಬುದು ಸಮೂಹ ಮಾಧ್ಯಮಗಳಿಗೊಂದು ಸವಾಲೇ ಆಗಿ ಉಳಿಯುತ್ತದೆ. ಮುದ್ರಣ ಮಾಧ್ಯಮವಾಗಲಿ, ಎಲೆಕ್ಟ್ರಾನಿಕ್ ಮಾಧ್ಯಮವಾಗಲಿ ಅವು ಮೊದಲಿಗೆ ಗುರುತಿಸುವುದು, ಗ್ರಹಿಸುವುದು ಕೆಟ್ಟ ಸುದ್ದಿಗಳನ್ನೇ. ಪರಿಚಯದ ಲೇಖಕಿಯೊಬ್ಬರು ಇತ್ತೀಚೆಗೆ ತಮ್ಮ ಅಂಕಣವೊಂದರಲ್ಲಿ ಇದನ್ನು ವಿಶ್ಲೇಷಿಸುತ್ತಾ ‘ನಮ್ಮ ಮಾಧ್ಯಮಗಳಲ್ಲಿ ಹದಿನೇಳು ಕೆಟ್ಟ ಸುದ್ದಿಗಳಿದ್ದರೆ ಒಂದು ಒಳ್ಳೆಯ ಸುದ್ದಿ ಇರುತ್ತದೆ’ ಎಂದು ಅವುಗಳ ಅನುಪಾತವನ್ನು ಲೆಕ್ಕ ಹಾಕಿದ್ದಾರೆ. ನಿಜವೇ, ಆದರೆ ಅದೂ ಮಾಧ್ಯಮದ ಒಡೆಯರ, ಸಂಪಾದಕರ ಮನೋಧರ್ಮವನ್ನು ಅವಲಂಬಿಸಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಇನ್ನು ಅದೇ ಅಂಕಣದಲ್ಲಿ ಅವರು ಬರೆದಿರುವಂತೆ ‘ಒಳ್ಳೆಯ ಸುದ್ದಿಗಳದು ಬಸವನ ಹುಳುವಿನ ವೇಗವಾದರೆ ಕೆಟ್ಟ ಸುದ್ದಿಗಳದು ಬುಲೆಟ್ ಟ್ರೈನಿನ ವೇಗ ’ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ‘ಓದುಗರು ಇದನ್ನೇ ಬಯಸುತ್ತಾರೆ, ಅದಕ್ಕೆ ಇದನ್ನೇ ಕೊಡುತ್ತೇವೆ ’ ಎಂಬ ಸ್ವಸಂರಕ್ಷಕವಾದವನ್ನು ಮುಂದಿಡುವ ಮಾಧ್ಯಮದವರಿಗೂ, ‘ನೋಡುಗರು ಇದನ್ನೇ ನೋಡಲು ಬಯಸುತ್ತಾರೆ, ಅದಕ್ಕೆ ಮಚ್ಚು -ಲಾಂಗುಗಳ ವೈಭವೀಕರಣವಿರುವ, ಕಿವಿ ಗಡಚಿಕ್ಕುವ ಸಂಗೀತವಿರುವ ಚಿತ್ರಗಳನ್ನು ನಿರ್ಮಿಸುತ್ತೇವೆ ’ ಎಂಬ ಚಲನಚಿತ್ರ ನಿರ್ಮಾಪಕರಿಗೂ ವ್ಯತ್ಯಾಸವೇನೂ ಕಂಡು ಬರುವುದಿಲ್ಲ. ಓದುಗರ, ನೋಡುಗರ ಅಭಿರುಚಿಯನ್ನು ಹೆಚ್ಚಿಸುವುದು ನಮ್ಮದೇ ಜವಾಬ್ದಾರಿ ಎಂಬುದು ಅವರಿಗೆ ಗೊತ್ತಿಲ್ಲವೆಂದಲ್ಲ. ಆದರೆ ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವ ದುಸ್ಸಾಹಕ್ಕೆ ನಾನೇ ಮುಂದಾಗಬೇಕು ಎಂಬ ಹಿಂಜರಿಕೆ ಪ್ರತಿಯೊಬ್ಬನಲ್ಲೂ ಇದ್ದೇ ಇರುವುದರಿಂದ ಯಾರೂ ಅತ್ತ ಪ್ರವೃತ್ತರಾಗುವುದಿಲ್ಲ. ಮಾಧ್ಯಮಗಳ ವಿಷಯವನ್ನು ಹೆಚ್ಚು ಬೆಳೆಸದೆ ಪಕ್ಕಕ್ಕಿರಿಸಿಬಿಡೋಣ. ನಮ್ಮನ್ನೂ, ನಮ್ಮ ಸುತ್ತಲಿನ ವಾತಾವರಣವನ್ನೂ ಒಮ್ಮೆ ಗಮನಿಸೋಣ. ಮನೆಗೆ ಹಾಲು ತಂದುಕೊಡುವ, ಪತ್ರಿಕೆ ಹಾಕುವ ಹುಡುಗ ಒಂದು ದಿನ ಯಾವುದೋ ಕಾರಣಕ್ಕಾಗಿ ತಡಮಾಡಿದನೆಂದುಕೊಳ್ಳೋಣ. ಅಂದು ಕೋಪದ ಭರದಲ್ಲಿ ಆಕಾಶ – ಪಾತಾಳಗಳನ್ನು ಒಂದು ಮಾಡುವ ರೀತಿಯಲ್ಲಿ ಅಬ್ಬರಿಸುವ ನಾವು ಉಳಿದ ಅಷ್ಟೂ ದಿನ ಅದೇ ಬಡಪಾಯಿ ಒಂದು ನಿಮಿಷವೂ ತಡಮಾಡದೆ ತಂದುಕೊಟ್ಟಿದ್ದ ಎಂಬುದನ್ನು ಮರೆತೇಬಿಟ್ಟಿರುತ್ತೇವೆ! ಹೆಚ್ಚೇಕೆ, ಮಡದಿ ಎಲ್ಲೋ ಒಂದು ದಿನ ಮಾಡಿದ ಅಡಿಗೆ ಸ್ವಲ್ಪ ಹದ ತಪ್ಪಿತೆಂದರೆ ನಮಗೆ ಆ ಕ್ಷಣಕ್ಕೆ ತಿಂಗಳಿಡೀ ಆಕೆಯೇ ಮಾಡಿದ ರುಚಿಕಟ್ಟಾದ ಅಡಿಗೆ ಇನಿತೂ ನೆನಪಾಗುವುದಿಲ್ಲ!

ಗೆಳೆಯರೊಬ್ಬರು ಮಳೆಗಾಲದ ಆರಂಭದ ದಿನಗಳಲ್ಲಿ ಮೂರುದಿನಗಳ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಮಳೆ ಬಂದುಬಿಡಬಹುದು ಎಂಬ ಸಣ್ಣ ಗುಮಾನಿಯಿದ್ದರೂ ಎರಡೂವರೆದಿನ ಮಳೆ ಬಾರದೆ ನಿರ್ವಿಘ್ನವಾಗಿ ಕಾರ್ಯಕ್ರಮ ನಡೆಯಿತು. ಆದರೆ ಅಂದು ಸಮಾರೋಪದ ಹೊತ್ತಿಗೆ ಜಡಿಮಳೆ ಸುರಿದೇ ಬಿಡಬೇಕೇ ! ‘ದರಿದ್ರ ಮಳೆ ! ಇನ್ನೊಂದೆರಡು ಘಂಟೆ ಬಿಟ್ಟು ಸುರಿದಿದ್ರೆ ಏನಾಗ್ತಾ ಇತ್ತು!’’ ಎಂದು ಶಾಪ ಹಾಕುವಾಗ ಉಪಕಾರ ನೆನಪಾಗಲೇ ಇಲ್ಲ !

ಇಂತಹ ನೂರಾರು ಉದಾಹರಣೆಗಳನ್ನು ಪ್ರತಿನಿತ್ಯ ನಾವು ನೋಡುತ್ತಲೇ ಇರುತ್ತೇವೆ. ಇದರರ್ಥ ನಾವು ಕೆಟ್ಟ ಅಂಶಗಳ ಬಗೆಗೆ ಕಣ್ಣು ಮುಚ್ಚಿಕೊಂಡು ಅವುಗಳನ್ನು ಗಮನಿಸದೇ ಇರಬೇಕು ಎಂದು ಖಂಡಿತ ಅಲ್ಲ. ಗಮನಿಸಬೇಕು, ಆದರೆ ಅದರ ಬಗೆಗೆ ಜಾಗರೂಕರಾಗಿರಬೇಕು. ಮುಖ್ಯವಾಗಿ ಒಳ್ಳೆಯ ಅಂಶಗಳನ್ನು ಗುರುತಿಸುವ, ಗಮನಿಸುವ, ಅಭಿನಂದಿಸುವ ಸ್ವಭಾವ ನಮ್ಮದಾಗಬೇಕು.
ನಮ್ಮ ಮಕ್ಕಳಿಗೆ ಗುಣವನ್ನು ಗುರುತಿಸುವ ಪ್ರವೃತ್ತಿಯನ್ನು ನಾವೇ ಕಲಿಸಿಕೊಡಬೇಕಾದ ಅಗತ್ಯ ಇಂದು ಎಂದಿಗಿಂತಲೂ ಹೆಚ್ಚಾಗಿದೆ. ಪರಮಾಣುವಿನಷ್ಟೇ ಇರಬಹುದಾದ ಪರಗುಣವನ್ನು ಪರ್ವತೀಕರಿಸಿ ಹೇಳಬೇಕಾದ, ಹೇಳಿ ಹಾಗೆ ಭಾವಿಸಲು ಕಲಿಸಿಕೊಡಬೇಕಾದ ತುರ್ತು ಇದೆ. (ಹೀಗೆ ಮಾಡುವುದರಿಂದ ಯಾವುದೇ ಹಾನಿಯಿಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ.) ಏಕೆಂದರೆ ಮಕ್ಕಳಿಗೆ ‘ ಎಲ್ಲವನ್ನೂ’ ಸಾರಾಸಗಟಾಗಿ ಕಲಿಸಿಕೊಡುವ ಇಂದಿನ ಮುದ್ರಣಮಾಧ್ಯಮಗಳೂ ಎಲೆಕ್ಟ್ರಾನಿಕ್ ಮಾಧ್ಯಮಗಳೂ ಕೆಟ್ಟ ಅಂಶಗಳನ್ನೇ ತೋರಿಸಿ, ತೋರಿಸಿ ಅವರು ಸಮಾಜದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡುತ್ತವೆ. ನಮ್ಮ ಸುತ್ತಮುತ್ತಲ ಸಮಾಜದಲ್ಲಿ, ಯಾರ ನಡುವೆ ನಾವಿರುತ್ತೇವೆಯೋ ಅವರಲ್ಲಿ ನಂಬಿಕೆ ಕಳೆದುಕೊಂಡರೆ ನಮ್ಮ ಬದುಕು ಖಂಡಿತವಾಗಿಯೂ ಸಹನೀಯವಾಗುವುದಿಲ್ಲ ಎಂಬುದನ್ನು ಮರೆಯಬಾರದು.

  • ಡಾ. ವಿಶ್ವಾಸ್ 
   

Leave a Reply