ಹೈಕಮಾಂಡಿಗೆ ಹಠಾತ್ ನೆನಪಾದ ಸಿಎಂ ಪರಮಾಧಿಕಾರ !

ಕರ್ನಾಟಕ - 0 Comment
Issue Date : 22.09.2014

ಪ್ರದೇಶ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇದೆ ಎಂದು ತೋರಿಸುವ ಯತ್ನಗಳೆಲ್ಲಾ ಒಂದೊಂದಾಗಿ ವಿಫಲವಾಗುತ್ತಿರುವಂತೆ ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವಿನ ಶೀತಲ ಸಮರಕ್ಕೆ ತೆರೆ ಎಳೆಯುವುದು ಈಗ ಹೈಕಮಾಂಡಿಗೂ ಸಾಧ್ಯವಾಗುತ್ತಿಲ್ಲ.ಹೀಗಾಗಿ ಇನ್ನೇನು ಸಚಿವ ಸಂಪುಟ ವಿಸ್ತರಣೆಯಾಯಿತು ಎನ್ನುವಷ್ಟರಲ್ಲಿ ಅನಿರ್ದಿಷ್ಟ ಕಾಲ ಮುಂದಕ್ಕೆ ಹೋಗಿದೆ. ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವುದೂ ಕಷ್ಟವಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಬೇಕಾದರೆ ಸಂಪುಟ ವಿಸ್ತರಣೆ ಮಾಡುತ್ತಾರೆ ಬೇಡ ಎನಿಸಿದರೆ ಸುಮ್ಮನಾಗುತ್ತಾರೆ. ಈಗ ಅವರು ಈ ವಿಚಾರದಲ್ಲಿ ಸುಮ್ಮನಾಗಿದ್ದಾರೆ. ಅದರರ್ಥ ಕೆಪಿಸಿಸಿ ಹಾದಿಯೇ ಬೇರೆ, ಸರ್ಕಾರದ ಹಾದಿಯೇ ಬೇರೆ ಎನ್ನುವುದು ಸ್ಪಷ್ಟವಾಗಿದೆ.ಸಂಪುಟ ವಿಸ್ತರಣೆಯ ವಿಷಯವೇ ಕಗ್ಗಂಟಾಗಿರುವಾಗ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸರ್ಕಾರ ಮತ್ತು ಆಡಳಿತ ಪಕ್ಷ ಒಟ್ಟಾಗಿ ಶ್ರಮಿಸುತ್ತವೆ ಎಂದು ಭಾವಿಸುವುದು ಕಷ್ಟವೇ.

ಇನ್ನೂ ಅತ್ಯಾಶ್ಚರ್ಯದ ಸಂಗತಿ ಎಂದರೆ ರಾಜ್ಯದ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರತಿನಿಧಿ ದಿಗ್ವಿಜಯ ಸಿಂಗ್, ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆಯ ಬಗ್ಗೆ ಕೈಗೊಳ್ಳುವ ತೀರ್ಮಾನವೇ ಅಂತಿಮ, ಇದರಲ್ಲಿ ಹೈಕಮಾಂಡ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳುವ ಮೂಲಕ ಸಚಿವಾಕಾಂಕ್ಷಿಗಳಿಗೆ ನಿರಾಸೆ ಉಂಟು ಮಾಡಿದ್ದಾರೆ. ಸದಾ ಮುಖ್ಯಮಂತ್ರಿಗಳನ್ನು ಓಲೈಸಲೇಬೇಕಾದ ಅನಿವಾರ್ಯ ಸಂದರ್ಭ ಅನೇಕರಿಗೆ ಎದುರಾಗಿದೆ. ಹೈಕಮಾಂಡ್ ಮೂಲಕವಾದರೂ ಪ್ರಭಾವ ಬೀರಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಕಾದಿದ್ದ ಮುಖಂಡರು ಅಕ್ಷರಷಃ ದಿಗಿಲುಗೊಂಡಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಉತ್ತಮ ಬಾಂಧವ್ಯ ಇಲ್ಲದೇ ಮಂತ್ರಿ ಸ್ಥಾನ ಒಲಿಯುವುದು ಇನ್ನು ಕಷ್ಟವೇ. ಹೀಗಾಗಿ ಈಗ ದಿಗ್ವಿಜಯ ಸಿಂಗ್ ಅವರಿಗೆ ಹಿಡಿ ಶಾಪ ಹಾಕುವುದು ಬಿಟ್ಟರೆ ಅನೇಕ ಕಾಂಗ್ರೆಸ್ ಶಾಸಕರಿಗೆ ಬೇರೆ ದಾರಿಯೇ ಇಲ್ಲವಾಗಿದೆ.

ಅದಕ್ಕಿಂತ ಅಚ್ಚರಿಯ ಸಂಗತಿ ಎಂದರೆ ಇದೇ ಮೊದಲ ಬಾರಿ ಕಾಂಗ್ರೆಸ್ ಹೈಕಮಾಂಡ್, ರಾಜ್ಯವೊಂದರ ಮುಖ್ಯಮಂತ್ರಿ ಆಡಿದ ಮಾತಿಗೆ ತಲೆ ಅಲ್ಲಾಡಿಸಬೇಕಾದ ದಯನೀಯ ಸ್ಥಿತಿಗೆ ತಲುಪಿದೆ. ಮಂತ್ರಿ ಮಂಡಲ ವಿಸ್ತರಣೆಯ ವಿಚಾರದಲ್ಲಿ ಮುಖ್ಯಮಂತ್ರಿಗಿರುವ ಪರಮಾಧಿಕಾರವನ್ನು ಇದೇ ಮೊದಲ ಬಾರಿಗೆ ಕಾಂಗ್ರೆಸ್ ವರಿಷ್ಠರು ಗುರ್ತಿಸಿಬಿಟ್ಟಿದ್ದಾರೆ!

ಮುಖ್ಯಮಂತ್ರಿಯನ್ನೇ ಮೊಹರಾದ ಲಕೋಟೆಯ ಮೂಲಕ ನಿರ್ಧರಿಸುವುದು ಕಾಂಗ್ರೆಸ್ ಜಾಯಮಾನ.ಇನ್ನು ಮುಖ್ಯಮಂತ್ರಿಗೆ ಮುಕ್ತ ಸ್ವಾತಂತ್ರ್ಯ ನೀಡುತ್ತದೆ ಎಂದು ನಂಬುವುದು ಭಾರೀ ಕಷ್ಟವೇ. ಮಂತ್ರಿಯಾರಾಗಬೇಕು ಎಂದು ನಿರ್ಧರಿಸುವ ವಿಷಯದಲ್ಲಿ ಹೈಕಮಾಂಡ್ ಕೈಯಾಡಿಸಿದರೆ ಮುಂದೆ ಎದುರಾಗುವ ಅನಾಹುತದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ಭಯವಿದ್ದಂತೆ ಕಾಣುತ್ತದೆ.ಆದ್ದರಿಂದಲೇ ಪಕ್ಷದಲ್ಲಿ ಹಠಾತ್ತನೆ ಪ್ರಜಾತಂತ್ರ ಮಾದರಿಯ ಆದರ್ಶ ವ್ಯವಸ್ಥೆ ಅನುಷ್ಠಾನಗೊಂಡಿದೆ ಎನ್ನುವ ಭ್ರಮೆ ಮೂಡಿದೆ.ಮುಖ್ಯಮಂತ್ರಿಯನ್ನು ಪ್ರಶ್ನಿಸಬೇಕಾದ ತಾಕತ್ತು ಕಡೇ ಪಕ್ಷ ಸಿದ್ದರಾಮಯ್ಯ ವಿಷಯದಲ್ಲಿ ಹೈಕಮಾಂಡಿಗೆ ಉಳಿದಿಲ್ಲ ಎನ್ನುವುದೇ ನಿಜವಾದ ಕಾಂಗ್ರೆಸ್ ಸ್ಥಿತಿ.

ಹೈಕಮಾಂಡ್ ಕೂಡಾ ಸಿದ್ದರಾಮಯ್ಯ ಅವರ ಕೈಗೊಂಬೆಯಾಗುತ್ತಿದೆ ಎನ್ನುವುದು ಅರ್ಥವಾದ ಕೂಡಲೇ ಅನೇಕ ಸಚಿವ ಸ್ಥಾನಾಕಾಂಕ್ಷಿಗಳು ಈಗ ಸಿದ್ದರಾಮಯ್ಯ ಅವರ ನೇತೃತ್ವವನ್ನು ಹಾಡಿ ಹೊಗಳಲಾರಂಭಿಸಿದ್ದಾರೆ.ಜಾತಿಯ ಆಧಾರದ ಮೇಲೆ ಕೆಲವು ಸಚಿವ ಸ್ಥಾನಗಳನ್ನು ಇಂದಲ್ಲ, ನಾಳೆ ಭರ್ತಿ ಮಾಡುವುದು ಸಿದ್ದರಾಮಯ್ಯ ಅವರಿಗೂ ಅನಿವಾರ್ಯ. ಆಗ ತಮ್ಮ ನಿಷ್ಠೆ ಉಪಯೋಗಕ್ಕೆ ಬಂದೀತು ಎನ್ನುವ ಕಾರಣಕ್ಕೆ ಶಾಸಕರಾದ ಬಸವರಾಜ ರಾಯರೆಡ್ಡಿ, ಉಗ್ರಪ್ಪ ಮುಂತಾದವರು ಸಿದ್ದು ಪರ ನಿಂತಿದ್ದಾರೆ. ಅನೇಕ ಮಂತ್ರಿ ಸ್ಥಾನದ ಆಕಾಂಕ್ಷಿಗಳು ಹೈಕಮಾಂಡ್ ಮುಂದೆ ತಮ್ಮ ಶಕ್ತಿ ಪ್ರದರ್ಶಿಸಿ ವಾಪಸಾಗಿದ್ದಾರೆ.

ಆದರೆ ಅವರೆಲ್ಲರೂ ಮುಖ್ಯಮಂತ್ರಿಗಳ ವಕ್ರದೃಷ್ಟಿಗೆ ಗುರಿಯಾಗುವುದು ಬಿಟ್ಟರೆ ಬೇರೇನೂ ಆಗಿಲ್ಲ.ಈಗ ಅದೇ ಮುಖ್ಯಮಂತ್ರಿಗಳ ಮುಂದೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸುವ ಶಕ್ತಿಯೇ ಇವರಲ್ಲಿ ಉಳಿದಿಲ್ಲ. ಇದು ಅರ್ಥವಾಗಿರುವ ಅನೇಕ ತಟಸ್ಥರು ಈಗ ಇದ್ದಕ್ಕಿದ್ದಂತೆ ಜಾಗೃತರಾಗಿದ್ದಾರೆ.ಸಿದ್ದರಾಮಯ್ಯ ಅವರ ಬಗ್ಗೆ ಮೆಚ್ಚುಗೆಯ ಮಾತಾಡಿದರೆ ಸಾಕು, ಅದು ಸಹಜವಾಗಿ ಅಪೇಕ್ಷಿತ ಫಲಿತಾಂಶ ನೀಡೀತು ಎನ್ನುವುದು ಕೆಲವರ ಯೋಚನೆ.

ಮಂತ್ರಿ ಸ್ಥಾನ ಸಿಗದಿದ್ದವರು ಈಗ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿಪಡಲೂ ಸಿದ್ದರಾಗಿದ್ದಾರೆ.ಆದರೆ ಈ ವಿಚಾರದಲ್ಲೂ ಕಾರ್ಯಕರ್ತರು ಮತ್ತು ಶಾಸಕರ ಕೋಟಾ ನಿಗದಿಯೇ ಗೊಂದಲ ಸೃಷ್ಟಿಸಿದೆ. ಪಕ್ಷ ನಿಷ್ಠರನ್ನು ಹೆಚ್ಚು ಭರ್ತಿ ಮಾಡಬೇಕೋ, ಮುಖ್ಯಮಂತ್ರಿ ನಿಷ್ಠರು ಹೆಚ್ಚಿರಬೇಕೋ ಎನ್ನುವುದು ವಿವಾದಕ್ಕೆ ಆಸ್ಪದ ನೀಡಿದೆ.ಇದೇ ಕಾರಣಕ್ಕೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಪಕ್ಷ ಹೇಳಿದಂತೆ ಮುಖ್ಯಮಂತ್ರಿ ಕೇಳಬೇಕು ಎನ್ನುವುದು ಪರಮೇಶ್ವರ್ ನಿಲುವು.ಮಂತ್ರಿಮಂಡಲ ರಚನೆಯಲ್ಲಿ ಮುಖ್ಯಮಂತ್ರಿಗಳದೇ ಪರಮಾಧಿಕಾರ ಎನ್ನುವುದು ಅರ್ಥವಾದ ನಂತರ ನಿಗಮ ಮಂಡಳಿಗಳ ನೇಮಕಾತಿಯಲ್ಲಾದರೂ ತಮ್ಮ ಕೈ ಮೇಲಾಗಬೇಕು ಎನ್ನುವುದು ಪರಮೇಶ್ವರ್ ನಿಷ್ಠರ ನಿಲುವು.ಆದರೆ ಸರ್ಕಾರವೇ ಆ ನೇಮಕಾತಿಯನ್ನೂ ಮಾಡಬೇಕಿರುವುದರಿಂದ ಈ ಅಧಿಕಾರ ಬಿಟ್ಟುಕೊಡಲು ಮುಖ್ಯಮಂತ್ರಿ ನಿಷ್ಠರು ಸಿದ್ಧರಿಲ್ಲ. ಇದು ಹೊಸ ಸಮಸ್ಯೆ ಸೃಷ್ಟಿಸಿದೆ.

-ಶಾಂತಾರಾಮ್ ಎಸ್

   

Leave a Reply