ಹಿಂದೂ ಸಾಮ್ರಾಜ್ಯವೇ ಏಕೆ?

ಯಾದವ್ ರಾವ್ ಜೋಷಿ - 0 Comment
Issue Date : 11.10.2014

ಪ್ರಾಯಃ ಮಾನವ ನಾಗರಿಕತೆಯ ಇತಿಹಾಸದಲ್ಲಿ ಹಿಂದೆಂದೂ ಇಂದಿನಂತಹ ತೀವ್ರ ಆಂತರಿಕ ಸಂಘರ್ಷ ಸಂಭವಿಸಿರಲಿಲ್ಲ. ಒಂದೆಡೆ ಉಚ್ಚಸ್ವರದ ವಿಶ್ವಶಾಂತಿಯ ಘೋಷಣೆ, ಮತ್ತೊಂದೆಡೆ ವಿಶ್ವನಾಶದ ಭಯಂಕರ ಅಸ್ತ್ರಗಳ ಸಂಶೋಧನೆ; ಒಂದೆಡೆ ಕ್ರೂರರೀತಿಯಲ್ಲಿ ನಿರ್ಬಲರ ಕತ್ತು ಹಿಚಕುವ ದೃಶ್ಯ, ಇನ್ನೊಂದೆಡೆ ‘ಭ್ರಾತೃತ್ವ’ ‘ವಿಮೋಚನೆ’ ಇತ್ಯಾದಿ ದೊಡ್ಡ ಶಬ್ದಗಳ ಆರ್ಭಟ; ಮಾನವೀಯ ಮೌಲ್ಯ – ಸಂತುಷ್ಟಿಗಳಿಗೆ ಸಂಬಂಧವಿಲ್ಲದ ವಿಜ್ಞಾನ – ಕೈಗಾರಿಕೆಗಳ ಮಿತಿಮೀರಿದ ಮುನ್ನಡೆ; ಹೀಗೆ ಹಿಂದೆಂದೂ ನಡೆದುದಿಲ್ಲ. ಬುದ್ಧಿ – ಹೃದಯ ,ತತ್ವ – ಆಚರಣೆಗಳ ನಡುವೆ ಮೊದಲೆಂದೂ ಇಂದಿರುವಷ್ಟು ಅಂತರವಿರಲಿಲ್ಲ. ‘ಆಧುನಿಕ ಪ್ರಗತಿಪರ ನಾಗರಿಕತೆ’ಯ ಭಸ್ಮಾಸುರನ ಕಪಿಮುಷ್ಟಿಗೆ ಸಿಲುಕಿ ಮಾನವನ ‘ದೀನ ಅಂತರ್ದನಿ’ ಉಸಿರುಕಟ್ಟಿ ಉಡುಗಿ ಹೋಗುವಂತಾಗಿದೆ.

ಪಶುತ್ವದ್ದೇ ಪ್ರೇರಣೆ
ಇಷ್ಟೆಲ್ಲ ಭೀಭತ್ಸದ ನಿರ್ಮಾತ ನಿಶ್ಚಯವಾಗಿ ಮಾನವನೇ ಹೌದು. ಆದರೆ ಅವರನ್ನು ಅದಾವ ಪ್ರವೃತ್ತಿ ಈ ಸಂಕಟದಲ್ಲಿ ಸಿಲುಕಿಸಿತು? ಅವನ ಕ್ರಿಯೆಗಳಿಗೆ ಹಿನ್ನಲೆಯಾದ ಸುಪ್ತಪ್ರೇರಣೆಯೇ ಇದರ ಮೂಲಕಾರಣವಾಗಿರಬೇಕು.
ಹಸಿವು ಇತ್ಯಾದಿ ಇಂದ್ರಿಯಕ್ಷುಧೆಗಳೇ ಪ್ರಾಣಿಗಳ ಎಲ್ಲ ಕ್ರಿಯೆಗಳಿಗೂ ಮೂಲಪ್ರೇರಣೆಯಾಗಿವೆ. ಆದಿ ಮಾನವನ ಸ್ಥಿತಿ ಸಹ ಅದೇ ಆಗಿತ್ತು. ತಾನೆಂದರೆ ಕೇವಲ ದೇಹ, ಸಂಪೂರ್ಣ ಜಗತ್ತು ತನ್ನ ಉಪಭೋಗಕ್ಕಾಗಿ ಎಂದು ಭಾವಿಸಿದ್ದ. ಹೊಟ್ಟೆ ತುಂಬಿಸಿಕೊಳ್ಳಲು ಇತರ ಪ್ರಾಣಿಗಳನ್ನು, ಒಮ್ಮೊಮ್ಮೆ ಮನುಷ್ಯರನ್ನೇ ಕೊಂದು ಭಕ್ಷಿಸುತ್ತಿದ್ದ. ಆದರೆ ಹೆಚ್ಚಿನ ಶಕ್ತಿಯ ಕ್ರೂರಮೃಗಗಳಿಂದ ಅವನ ಅಸ್ತಿತ್ವಕ್ಕೆ ಅಪಾಯ ತಾಗಿದಾಗ ಸ್ವಾರ್ಥರಕ್ಷಣೆಯ ಸಲುವಾಗಿ ಕ್ರಮೇಣ ಕುಟುಂಬ, ನಂತರ ಸಣ್ಣ ಸಮೂಹಗಳಾಗಿ ನಿಂತ. ಅವನ ಮೂಲಪ್ರೇರಣೆಯಾದರೋ ಮೊದಲಿನಂತೆಯೇ ಉಳಿಯಿತು. ಅವನಿಗೆ ಸಹಮಾನವನೊಡನೆ ಶುದ್ಧ ಪ್ರೀತಿ ಅಥವಾ ಸಹಾನುಭೂತಿ ಲವಲೇಶವೂ ಇದ್ದಿಲ್ಲ.
ಇಂಥದೇ ಇತರ ಪಂಗಡಗಳ ಭಯದಿಂದ ಈ ಸಣ್ಣ ಜನಸಮೂಹಗಳು ದೊಡ್ಡ ಜನವಸತಿಗಳಾದವು. ಸಮಾನ ಹಿತ ಹಾಗೂ ಸಮಾನ ಭೀತಿಯಿಂದ ಒಟ್ಟುಗೂಡಿದುದರಿಂದ ಅವರಲ್ಲಿ ಸಮಾನ ಗುಣನಡತೆಗಳು ಬೆಳೆದವು; ಅದೊಂದು ರಾಷ್ಟ್ರವೆನಿಸಿತು. ಆದರೆ ಉಳಿದ ಪ್ರಪಂಚದ ಬಗೆಗೆ – ಸ್ವಾರ್ಥ ಪೋಷಣೆಗಾಗಿ ಅನ್ಯರ ಶೋಷಣೆಯ – ವಿಚಾರ ಅಂತೆಯೇ ಉಳಿಯಿತು. ಮಾನವನೆಂದೆರೆ ದೇಹ ಮಾತ್ರ, ಜಗತ್ತು ಅದರ ಬಯಕೆಗಳ ಪೂರ್ತಿಗಾಗಿ ಎಂಬ ಭಾವನೆಯಿಂದಲೇ ಆ ರಾಷ್ಟ್ರಗಳಿಗೆ ಸಾಮ್ರಾಜ್ಯದಾಹವುಂಟಾಯಿತು. ಅದರಿಂದಾಗಿ ವಿಶ್ವದ ಎಲ್ಲ ಸಾಮ್ರಾಜ್ಯಗಳೂ ಮಾನವನಲ್ಲಿಯ ಈ ಪಶುಪ್ರವೃತ್ತಿಯ ಬೃಹದ್ರೂಪಗಳೇ ಆಗಿವೆ.

ಸಿಹಿಘೋಷಣೆ – ಅನ್ಯರ ಶೋಷಣೆ
ಇತ್ತೀಚಿನ ಬ್ರಿಟಿಷ್ ಸಾಮ್ರಾಜ್ಯಶಾಹಿಯದೇ ಸ್ವಾನುಭವ ನಮಗಿದೆ. ಅಧಿಕ ಶಕ್ತಿ ಹಾಗೂ ಕುಯುಕ್ತಿಯಿಂದ ಸಣ್ಣ ಇಂಗ್ಲಂಡ್ ‘ಸೂರ್ಯಮುಳುಗದ ಸಾಮ್ರಾಜ್ಯ’ದ ಜಂಭ ಕೊಚ್ಚಿತು. ಇಂಗ್ಲಿಷಿನವ ಚತುರನೂ ಆಗಿದ್ದ. ‘ಸುಲಿಗೆ’ ಹಾಗೂ ‘ದಬ್ಬಾಳಿಕೆ’ಯನ್ನು ಸೂಚಿಸುವ ‘ಸಾಮ್ರಾಜ್ಯವಾದ’ವೆಂಬ ಶಬ್ದ ಭಯಹುಟ್ಟಿಸುವುದೆಂದರಿತು, ಹಿಂದುಳಿದವರ ಹಾಗೂ ವರ್ಣೀಯರ ಉದ್ಧಾರವು ಬಿಳಿಯರ ಜವಾಬ್ದಾರಿ Whiteman’s burden – ಎಂಬ ಸಿಹಿಘೋಷಣೆಯಿಂದ ನಿರಾತಂಕವಾಗಿ ಶೋಷಣೆ ಪ್ರಾರಂಭಿಸಿದ. ಹೀಗೆ ವೈಚಾರಿಕ ವ್ಯಭಿಚಾರದಿಂದ ಕುಟಿಲತೆಯನ್ನು ಮೋಹಕ ಶಬ್ದಗಳಿಂದ ಮುಚ್ಚಿದ ಇಂಗ್ಲಿಷ್ ಜನಾಂಗದ ಪ್ರತಿಭೆಯು ಮಾನವನಲ್ಲಿನ ಪಶುಪ್ರವೃತ್ತಿಯ ದಾಸ್ಯಕ್ಕೊಳಗಾಗಿತ್ತು. ಆದರೆ ಆಗ ನಮ್ಮ ಸ್ವಾತಂತ್ರ್ಯ ಹೋರಾಟದ ನೇತಾಗಳೆನಿಸಿಕೊಂಡಿದ್ದವರೇ ಬ್ರಿಟಿಷರ ಆಡಳಿತವನ್ನು ಒಂದು ಪವಿತ್ರ ದೈವೀವರ (A divine dispensation) ಎಂದು ಹೇಳುತ್ತಿದ್ದುದು ಮಹದಾಶ್ಚರ್ಯ!

ಬಂಡವಾಳಶಾಹಿ – ಸ್ವಾರ್ಥದ ಪೋಷಣೆ
ಇಂದು ಬ್ರಿಟಿಷ ಸಾಮ್ರಾಜ್ಯದ ಸೂರ್ಯ ಮುಳುಗಿದಂತೆ ಕಾಣುತ್ತಿದೆ. ಆದರೆ ಅದರ ಸ್ಥಾನದಲ್ಲಿ ಅಮೆರಿಕ ತಲೆಯೆತ್ತುತ್ತಿದೆ. ಮೊದಲ ನೋಟಕ್ಕೆ ಅದರ ಸಾಮ್ರಾಜ್ಯದಾಹ, ಆಕ್ರಮಣ, ಅರ್ಥಶೋಷಣೆ ಕಾಣುವುದಿಲ್ಲ. ‘ಪ್ರಜಾಪ್ರಭುತ್ವ’, ‘ವ್ಯಕ್ತಿ ಸ್ವಾತಂತ್ರ್ಯ’ ಇತ್ಯಾದಿಗಳ ರಕ್ಷಕನಾಗಿ ನಮಗದು ತೋರುತ್ತದೆ. ಆದರೆ ಅದರ ಆರ್ಥಿಕ ಹಾಗೂ ಸೇನಾ ನೆರವುಗಳು ಪ್ರಭಾವ ಮತ್ತು ಅಧಿಕಾರಗಳನ್ನು ವಿಸ್ತರಿಸಲು ವಿಧಾನಗಳೇ ಆಗಿವೆ. ಅದರಲ್ಲಿ ಮಾನವೀಯತೆಯ ಬಗ್ಗೆ ಶುದ್ಧ ಪ್ರೇಮವೆಲ್ಲಿದೆ? ಅಮೆರಿಕವು ಜಪಾನಿನ ಮೇಲೆ ಆಟಂ ಬಾಂಬ್‌ಗಳನ್ನೆಸೆದ ಆ ದುರ್ದಿನವನ್ನು ಮರೆಯುವುದೆಂತು? ವಿಶ್ವದ ಇತರೆಡೆಗಳಲ್ಲಿ ಅಮೆರಿಕನರ ಲಕ್ಷಾಂತರ ‘ಮಾನವ ಸೋದರರು’ ಬರಿ ಹೊಟ್ಟೆಯಿಂದ ಸಾಯುತ್ತಿರುವಾಗ, ಕೇವಲ ಬೆಲೆಯ ಮಟ್ಟವನ್ನು ಸ್ಥಿರವಾಗಿಡಲು ಅವರು ಲಕ್ಷಾಂತರ ಮಣ ಗೋಧಿಯನ್ನು ಸಮುದ್ರಕ್ಕೆ ಸುರಿಯುವ ಸುದ್ದಿ ಪತ್ರಿಕೆಗಳಲ್ಲಿ ಆಗಾಗ್ಗೆ ಬರುತ್ತದಲ್ಲವೆ? ಧನದ ಪ್ರಭಾವದಿಂದ ಜಗತ್ತನ್ನಾಳಬೇಕೆಂಬ ಐಹಿಕ ಆಕಾಂಕ್ಷೆಯಿಂದ ಅಮೆರಿಕವೂ ಧನಪಿಶಾಚಿಯ ಗುಲಾಮನಾಗಿಯೇ ಉಳಿದಿದೆ.

ಕಮ್ಯುನಿಸಂ- ಮೃಗತ್ವದ ಪ್ರಕಟೀಕರಣ
ಇವೆಲ್ಲವನ್ನೂ ಮೀರಿಸುವ ಮತ್ತೊಂದು ರಾಕ್ಷಸೀ ಸಾಮ್ರಾಜ್ಯವಾದವೂ ಇಂದು ಮೇಲೆದ್ದಿದೆ; ಅದೇ ಕಮ್ಯೂನಿಸಂ. ದೀನದಲಿತರ ಹೆಸರಿನಲ್ಲಿ ಸಮತಾವಾದಿ ಅಧಿಕಾರಕ್ಕೆ ಬಂದ. ಒಮ್ಮೆ ಅಧಿಕಾರ ದೊರೆತುದೇ ತಡ, ಅಧಿಕಾರೋನ್ಮತ್ತ ಕಮ್ಯುನಿಸ್ಟ್ ಸರ್ವಾಧಿಕಾರಿಗಳು ಸಾಮೂಹಿಕ ಸಂಹಾರ, ವ್ಯಕ್ತಿತ್ವದ ನಾಶ ಪ್ರಾರಂಭಿಸಿದ್ದಾರೆ. ಸ್ಟಾಲಿನ್ ಹೋಗಬಹುದು, ಖ್ರುಶ್ಚೇವ್ ಬರಬಹುದು; ಆದರೆ ಈ ದುರಂತ ನಾಟಕ ಸತತವಾಗಿ ಸಾಗುತ್ತದೆ.
ಖ್ರುಶ್ಚೇವರ ‘ಗುಂಪುನಾಯಕತ್ವ’ದ ಪ್ರತಿಪಾದನೆ, ಸ್ಟಾಲಿನ್ನರ ‘ಖಂಡನೆ ’ ಮತ್ತು ಮಾವೋರ ‘ಶತ ಪುಷ್ಪಗಳರಳಲಿ’ ಎಂಬ ಘೋಷಣೆ, ಇವೆಲ್ಲ ಏನಾಯಿತು? ಗುಂಪು ಕರಗಿ ‘ಒಬ್ಬ’ ಮಾತ್ರ ಉಳಿದ; 99 ಹೂಗಳು ಅವರ ‘ಕೃಪೆಗೆ’ ಸಿಲುಕಿ ಕೆಳಗೆ ಉದುರಿಹೋದವು. ಟಿಬೆಟನರನ್ನು ‘‘ಧಾರ್ಮಿಕ ಪಾಳೇಗಾರರ ಶತಮಾನಗಳ ದಬ್ಬಾಳಿಕೆಯಿಂದ ‘ಮುಕ್ತಿ’ ಗೊಳಿಸಲು’’ ಚೀನಾ ಕಮ್ಯುನಿಸ್ಟರು ಗೈದ ಇತ್ತೀಚಿನ ಕೃತಿಯನ್ನೇ ನೋಡಿ! ‘ಸುತ್ತಿಗೆ ಮತ್ತು ಕುಡುಗೋಲು’ ಧ್ವಜದಡಿಯಲ್ಲಿ ‘‘ವಿಶ್ವದ ರೈತ, ಕಾರ್ಮಿಕರೇ ಒಂದಾಗಿ’’, ‘‘ದಾಸ್ಯವನ್ನಲ್ಲದೆ ನೀವು ಮತ್ತೇನನ್ನೂ ಕಳೆದುಕೊಳ್ಳಬೇಕಾದುದಿಲ್ಲ’’ ಎಂಬ ಘೋಷಣೆಗಳೊಡನೆಯೇ ರಷ್ಯಾದ ದಮನಚಕ್ರದಡಿಯಲ್ಲಿ ಹಂಗೆರಿಯ ಸಹಸ್ರಾವಧಿ ರೈತರು ಹಾಗೂ ಕಾರ್ಮಿಕರ ಭಯಾನಕ ಹತ್ಯಾಕಾಂಡ ನಡೆದುದು ಎಂಥ ವಿರೋಧಾಭಾಸ ! ರಾಜಕೀಯ ಅಧಿಕಾರದೊಡನೆ ಆರ್ಥಿಕ ಅಧಿಕಾರವನ್ನೂ ಹಿಡಿತದಲ್ಲಿಟ್ಟುಕೊಂಡಿರುವ ಒಬ್ಬ ಖ್ರುಶ್ಚೇವ್ ಅಥವಾ ಒಬ್ಬ ಮಾವೋ ಲಕ್ಷೋಪಲಕ್ಷ ಮಾನವರ ಬೆವರು, ರಕ್ತಗಳಿಂದ ಸಜ್ಜಾದ ರಕ್ತ ಪಿಪಾಸು ಸಮರ ಯಂತ್ರವನ್ನು ಮನಬಂದಂತೆ ವಿನಾಶಕ್ಕೆ ಬಳಸುತ್ತಾರೆ. ಅಂತಹರನ್ನು ಮೃಗಗಳೆಂದರೆ ಮೃಗಕ್ಕೇ ಅಪಮಾನವಾದೀತು!

ಸ್ವಭಾವವಿನ್ನೂ ಬದಲಾಗಿಲ್ಲ
ಮಾನವನ ಪ್ರಗತಿಯ ಹೆಸರಿನಲ್ಲೆ ಹೆಚ್ಚು ಹೆಚ್ಚು ಭಯಾನಕವಾದ ದೌರ್ಜನ್ಯ, ದಬ್ಬಾಳಿಕೆಗಳ ಹೊಸಹೊಸ ಯುಗ ಪ್ರಾರಂಭವಾಗುತ್ತಿರುವುದು ಎಂಥ ದುರ್ದೈವ, ಆದರೂ ಅದೆಷ್ಟು ಸತ್ಯ! ಹಿಂದಿನ ಅನಾಗರಿಕರಾದ ಶಕರು, ಹೂಣರು ಮತ್ತು ಮುಸ್ಲಿಮರಿಂದ ಇಂದಿನ ಆಧುನಿಕರವರೆಗೂ ಮಾನವನಲ್ಲಿನ ಮೃಗತೃಷ್ಣೆ ಏರುತ್ತಲೇ ಬಂದಿದೆ. ತನ್ನ ಅಥವಾ ತನ್ನವರ ಐಹಿಕ ಸುಖಲಾಲಸೆ, ಐಶ್ಚರ್ಯ, ಅಧಿಕಾರಗಳಿಗಾಗಿ ಸಮಸ್ತ ಸೃಷ್ಟಿಯನ್ನೂ ಆಹಾರವಾಗಿ ಕಾಣುವ ಪ್ರವೃತ್ತಿ ಬೆಳೆದಿದೆ. ಮನುಷ್ಯನೆಂದರೆ ಕೇವಲ ಜಡದೇಹ ಮಾತ್ರ ಎಂದು ತಿಳಿದುದರ ದುಷ್ಪರಿಣಾಮ ಇದು. ಅವನ ಆ ಪ್ರಾಚೀನ ನರಭಕ್ಷಣ ಸ್ವಭಾವ ಇನ್ನೂ ಬದಲಾಗಿಲ್ಲವೆಂದೇ ಇದರ ಅರ್ಥ.

‘‘ವಯಂ ಸಾಮ್ರಾಜ್ಯವಾದಿನಃ’’ – ಹೀಗೆ
ವಿಶ್ವದ ವಿವಿಧ ಸಾಮ್ರಾಜ್ಯವಾದಗಳನ್ನು ವೀಕ್ಷಿಸಿದ ನಂತರ – ನಮ್ಮ ರಾಷ್ಟ್ರದ ಬಗ್ಗೆ ಏನು? ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ನಮ್ಮ ಪೂರ್ವಜರು ಸಾಗರಗಳನ್ನು ಹಾದು ಸಾಮ್ರಾಜ್ಯಗಳನ್ನು ಕಟ್ಟಿರಲಿಲ್ಲವೆ? ನಮ್ಮ ಗ್ರಂಥಗಳಲ್ಲಿ ‘‘ವಯಂ ಸಾಮ್ರಾಜ್ಯವಾದಿನಃ’’, ‘‘ಕೃಣೃಂತೋ ವಿಶ್ವಮಾರ್ಯಂ’’ ಎಂಬ ಅಭಿಮಾನ ಪೂರ್ಣ ಘೋಷಣೆಗಳಿಲ್ಲವೆ? ಹಾಗಿದ್ದಲ್ಲಿ ಅದಕ್ಕೂ, ಇದಕ್ಕೂ ವ್ಯತ್ಯಾಸವೆಲ್ಲಿದೆ?
ಇದೆ, ಅತ್ಯಂತ ಮಹತ್ವದ ಹಾಗೂ ಮೂಲಭೂತ ವ್ಯತ್ಯಾಸವಿದೆ. ಅದೆಂದರೆ – ಹಿಂದೂ ಸಾಮ್ರಾಜ್ಯದಲ್ಲಿ ತತ್ವವು ಅಕ್ಷರಶಃ ಸಾಕ್ಷಾತ್ಕಕರಿಸಲ್ಪಟ್ಟಿತ್ತು. ಇನ್ನಿತರ ಸಾಮ್ರಾಜ್ಯವಾದಗಳ ಭಯಾನಕ ಹೆದ್ದೆರೆಗಳ ಗದ್ದಲದಲ್ಲಿ ಹಿಂದೂ ಸಾಮ್ರಾಜ್ಯದ ಈ ಅಸಮ, ಅದ್ವಿತೀಯ ವೈಶಿಷ್ಟ್ಯವೇ ಏಕೈಕ ದಾರಿದೀಪವೆಂದು ಇತಿಹಾಸದಲ್ಲಿ ಅಂಕಿತವಾಗಿದೆ. ಹಿಂದುವಿನ ಈ ಅದ್ಭುತ ಯಶಸ್ಸಿನ ಕಾರಣವಾದರೂ ಏನಿದ್ದೀತು? ಕಾರಣವಿಲ್ಲದ ಕಾರ್ಯವಿಲ್ಲ. ಇತರರು ಮನುಷ್ಯನೆಂದರೆ ಜಡ ಶರೀರ ಎಂಬ ವಿಚಾರದಿಂದ ಹೊರಟರು; ಅದರಿಂದಲೇ ಶರೀರದ ಮೃಗೇಚ್ಛೆಯನ್ನು ತಣಿಸಲು ಉಳಿದ ಸೃಷ್ಟಿಯನ್ನು ಶೋಷಿಸುವ ಮಾನವವಿನಾಶದ ಅನಿವಾರ್ಯ ಮಾರ್ಗವನ್ನನುಸರಿಸಬೇಕಾಯಿತು !

ಆದರೆ…
ನಮ್ಮ ಋಷಿಮುನಿಗಳಾದರೋ ಉಗ್ರ ತಪಸ್ಸಿನಿಂದ ಪಶುಪ್ರವೃತ್ತಿಗಳನ್ನೆಲ್ಲ ತೊಡೆದುಹಾಕಿ, ಮನ ಬುದ್ಧಿಗಳನ್ನು ಸಂಪೂರ್ಣ ಶುದ್ಧಗೊಳಿಸಿಕೊಂಡು ಸೃಷ್ಟಿಯ ಚಿರಂತನ, ಶ್ರೇಷ್ಠ ರಹಸ್ಯಗಳನ್ನು ಕಂಡುಕೊಂಡರು. ಸಮಸ್ತ ಚರಾಚರ ಸೃಷ್ಟಿಯಲ್ಲಿ ವಿದ್ಯಮಾನನಾಗಿರುವ ಏಕಮೇವ ದೇವನನ್ನು ಗುರುತಿಸಿದರು. ಮಾನವ ಮೂಲತಃ ಆತ್ಮ; ಆತ್ಮವನ್ನು ವಿಕಸಿತಗೊಳಿಸುತ್ತಾ ಸೀಮಿತ ದೇಹದ ಬಂಧನಗಳನ್ನು ಕಳಚಿಕೊಂಡು ಆ ಅಗೋಚರ ಅನಂತ ಶಕ್ತಿಯೊಡನೆ ಲೀನವಾಗುವುದೇ ಮಾನವ ಜೀವನದ ಪರಮ ಪುರುಷಾರ್ಥ ವೆಂಬ ಅರಿವಿನ ಅನುಭವದ ಸಿದ್ಧಿ ಅವರಿಗಾಯಿತು, ಹೀಗೆ ಐಹಿಕ ಭೋಗದ ಅತೃಪ್ತ ಆಗ್ನಿಯನ್ನು, ಶುದ್ಧ ಆತ್ಮಾನಂದಕ್ಕಾಗಿ ತವಕಿಸುವ ದೈವೀ ದಾಹವನ್ನಾಗಿ ಮಾರ್ಪಡಿಸಿದರು. ಜೀವನ ಸತ್ಯದ ಈ ಅಡಿಗಲ್ಲಿನಿಂದಲೇ ಮಾನವತೆಯ – ಅಷ್ಟೇ ಏಕೆ, ಸಮಸ್ತ ಸೃಷ್ಟಿಯ ಆಲಿಂಗನಕ್ಕಾಗಿ ಶುದ್ಧ ಪ್ರೇಮದ ಚಿರಂತನ ಸ್ರೋತ ಹೊರಹೊಮ್ಮುತ್ತದೆ. ಆಗ ಕೊಲೆ, ಸುಲಿಗೆ ಮಾಡುವುದಾದರೂ ಯಾರನ್ನ? ಅನ್ಯರ ಸೇವೆಗಾಗಿ ತನ್ನ ಸರ್ವಸ್ವವನ್ನೂ ಹೋಮಗೈಯಲು ಮಾನವ ಸ್ವಸಂತೋಷದಿಂದ ಸಿದ್ಧನಾಗುತ್ತಾನೆ.
ಸಮರ್ಥ ದೈವೀಸಾಮ್ರಾಜ್ಯ
ಆತ್ಮಸಾಮ್ರಾಜ್ಯದ ಆ ಪಥಾನ್ವೇಷಕರಿಗೆ ಅನವರತ ಇದೇ ಪ್ರೇರಣೆಯಾಗಿತ್ತು –
‘‘ನತ್ವಹಂ ಕಾಮಯೇ ರಾಜ್ಯಂ
ನ ಸ್ವರ್ಗಂ ನಾಪುನರ್ಭವಂ/
ಕಾಮಯೇ ದುಃಖತಪ್ತಾನಾಂ
ಪ್ರಾಣಿನಾಂ ಆರ್ತಿ ನಾಶನಂ’’//
ಇಹದಲ್ಲಾಗಲಿ ಪರದಲ್ಲಾಗಲಿ ಅಧಿಕಾರ ಅಥವಾ ಭೋಗದ ಲಾಲಸೆಯಿಲ್ಲ; ಜಗತ್ತಿನ ನೋವು, ದುಃಖಗಳನ್ನು ದೂರಗೊಳಿಸಿ ಶಾಂತಿ, ಸಂತುಷ್ಟಿಗಳನ್ನೆರೆಯುವುದೇ ಅವರ ಏಕೈಕ ಆಕಾಂಕ್ಷೆಯಾಗಿತ್ತು. ವಿನಾಶವಲ್ಲ, ಪರಿಪೂರ್ಣತೆಯೆಡೆಗೊಯ್ಯುವುದೇ ಅವರ ಜೀವನದ ಜ್ವಲಂತ ಧ್ಯೇಯವಾಗಿತ್ತು. ಇದೇ ಅದಮ್ಯ ದಿವ್ಯದಾಹದಿಂದ ಪ್ರೇರಿತರಾದ ಅವರು ಒಂದು ಆದರ್ಶ ಸಾಮಾಜಿಕ ಜೀವನವನ್ನು ನಮ್ಮದೇ ಭೂಮಿಯಲ್ಲಿ ಎತ್ತಿ ನಿಲ್ಲಿಸಿ ಇಡೀ ವಿಶ್ವಕ್ಕೆ ಕರೆಕೊಟ್ಟರು-
‘ಏತದ್ದೇಶ ಪ್ರಸೂತಸ್ಯ ಸಕಾಶಾದಗ್ರ ಜನ್ಮನಃ/
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವ ಮಾನವಾಃ//’
ಅದೊಂದು ಕೇವಲ ದುರ್ಬಲನೊಬ್ಬನ ಒಣಹರಟೆ ಆಗಿರಲಿಲ್ಲ. ಹತ್ತಾರು ಶತಮಾನಗಳ ಎಲ್ಲ ದುರಾಕ್ರಮಣಗಳಿಂದ ಆ ಆದರ್ಶವನ್ನು ಸಂರಕ್ಷಿಸಲು ಒಂದು ಸುಸಂಘಟಿತ ಜೀವನದ ಅಭೇದ್ಯ ರಾಷ್ಟ್ರಶಕ್ತಿ ಬೆಂಗಾವಲಾಗಿ ನಿಂತಿತ್ತು. ಆಗ ಅದ್ವಿತೀಯ ಸಾಮರ್ಥ್ಯ, ಸಮೃದ್ಧಿಗಳಿಂದ ತುಂಬಿದ್ದ ನಮ್ಮ ರಾಷ್ಟ್ರವು ವಿಶುದ್ಧ ದೈವೀಪ್ರೇಮದಿಂದ ಸಂಪೂರ್ಣ ಮಾನವತೆಯನ್ನೇ ಆಲಂಗಿಸಿಕೊಳ್ಳಲು ತನ್ನ ಶಕ್ತಿ ಸಂಪನ್ನ, ಸ್ನೇಹಸಂಪನ್ನ ಹಸ್ತ ಚಾಚಿತು. ‘ಏಕೋsಹಂ ಬಹುಸ್ಯಾಮ’ -ಈ ಆಕಾಂಕ್ಷೆ ಪೂರ್ಣರೂಪೇಣ ಪ್ರಸ್ಫುಟಿತಗೊಂಡಿತು; ಪೂತಾತ್ಮರಾದ ಆ ನಮ್ಮ ಪೂರ್ವಜರು ಭೂ ಮಂಡಲದ ಮೇಲೆ ತಾವು ಕಾಲನ್ನಿಟ್ಟಲ್ಲೆಲ್ಲ ಆತ್ಮ ಸಾಮ್ರಾಜ್ಯವನ್ನು , ಧರ್ಮ ಸಾಮ್ರಾಜ್ಯವನ್ನು ಸಂಸ್ಥಾಪಿಸಿದರು.

ಶೋಷಣೆಯಲ್ಲ, ಪೋಷಣೆ
ಇತರೆಲ್ಲ ಸಾಮ್ರಾಜ್ಯವಾದಿ ಪ್ರಭುತ್ವಗಳು ಹೆಚ್ಚೆಂದರೆ ಒಂದೆರೆಡು ಶತಮಾನಗಳು ಬಾಳಿ ಮಣ್ಗೂಡಿದವು. ಆದರೆ ಭಾರತದ ಪುನೀತ ಸಾಂಸ್ಕೃತಿಕ ಪತಾಕೆ ಇನ್ನೂ ವಿಸ್ತಾರ ಪ್ರದೇಶಗಳ ಮೇಲೆ ಹದಿನಾಲ್ಕು ಶತಮಾನಗಳಿಗಿಂತ ಹೆಚ್ಚು ಕಾಲ ಗೌರವದಿಂದ ಹಾರಾಡಿತು. ಜಗತ್ತಿನ ಇತಿಹಾಸದಲ್ಲಿ ಇಂತಹ ಮತ್ತೊಂದು ಸಾಧನೆ ಅಲಭ್ಯ. ಇದೆಲ್ಲವೂ ಆತ್ಮ ಬಲದಿಂದಲೇ ಸಾಧ್ಯವಾಯಿತೆಂಬುದನ್ನು ನಾವು ಮರೆಯಬಾರದು. ಆ ವೈಭವಯುತ ಸಾಮ್ರಾಜ್ಯದ ಪಥ ಪ್ರದರ್ಶಕರಾದರೂ ಎಂಥವರು? ಕಂಭೂ ಎಂಬೊಬ್ಬ ಸಾಮಾನ್ಯ ಭಾರತೀಯನು ಸಮುದ್ರ ಹಾದುಹೋಗಿ ಕಾಂಭೋಜ (ಈಗೀನ ಕಾಂಭೋಡಿಯಾ) ರಾಜ್ಯದ ಮೂಲ ಪುರುಷನಾದ. ಕೌಂಡಿನ್ಯನೆಂಬ ಅರೆನಗ್ನ ಬ್ರಾಹ್ಮಣ ಸಯಾಮಿಗೆ ಹೋದ. ಪರಿಣಾಮವೇನಾಯಿತು? ಆ ಜನರ ಜೀವನ ಸಮೃದ್ಧವಾಗಿ ಶಾಂತಿ, ಸಂತುಷ್ಟಿಗಳು ಅಲ್ಲಿ ಹೊರಸೂಸಿದವು. ಕಾರಣ, ಹಿಂದುವಿಗೆ ‘ಸರ್ವೇಪಿ ಸುಖಿನಃ ಸಂತು’ ಎಂಬುದು ವಿಶ್ವವಂಚನೆಯ ಮಿಥ್ಯ ಘೋಷಣೆಯಾಗಿರಲಿಲ್ಲ, ಅದವನ ಜೀವನದ ಉಸಿರಾಗಿತ್ತು. ಅಷ್ಟೇಕೆ, ಕೇವಲ 3 ಶತಮಾನಗಳ ಕೆಳಗೆ ಶಿವಛತ್ರಪತಿಯ ರಾಜ ಮುದ್ರೆಯಲ್ಲಿ ಸಹ ‘ಮುದ್ರಾ ಭದ್ರಾಯ ರಾಜತೇ’ – ‘ಎಲ್ಲರ ಮೇಲೂ ಪಾವಿತ್ರ್ಯ ವರ್ಷಿಸಲು’ ಎಂದಿತ್ತು. ಕೇವಲ ಭೌತಿಕ ಪ್ರಗತಿಯಲ್ಲಿ ಮಾತ್ರವಲ್ಲ, ಆದರೆ, ಸಂಸ್ಕೃತಿ ಹಾಗೂ ಶೀಲ, ಕಲೆ ಹಾಗೂ ಕೈಗಾರಿಕೆ ಮತ್ತು ಭೌತಿಕ, ಬೌದ್ಧಿಕ, ಆಧ್ಯಾತ್ಮಿಕ ಇತ್ಯಾದಿ ಎಲ್ಲ ರಂಗಗಳಲ್ಲೂ ಆ ದೇಶಗಳು ಆಗಿನ ನಮ್ಮ ತಾಯ್ನಾಡಿನ ಉತ್ಕೃಷ್ಟ ಜೀವನ ಪದ್ಧತಿಯನ್ನು ಪ್ರತಿಬಿಂಬಿಸುತ್ತಿದ್ದವು. ಇಂದಿಗೂ ಅಲ್ಲಿನ ಮುಗಿಲು ಮುಟ್ಟುವ ಮಂದಿರಗಳು ಹಾಗೂ ಅವುಗಳ ಮೇಲಿನ ರಾಮಾಯಣ, ಮಹಾಭಾರತಗಳ ಭಿತ್ತಿಚಿತ್ರಗಳು ಹಿಂದೂ ಸಾಮ್ರಾಜ್ಯದ ಭವ್ಯ ಕುರುಹುಗಳಾಗಿ ನಿಂತಿವೆ. ಜಾವ, ಸುಮಾತ್ರಾ, ಬಾಲಿ, ಇಂಡೊನೇಷಿಯಾ, ಸಯಾಂ ಮತ್ತು ಕಾಂಬೋಡಿಯಾಗಳಲ್ಲಿನ ಜನರು ಇಂದಿಗೂ ತಮ್ಮನ್ನು ಮನುಷ್ಯರನ್ನಾಗಿಸಿ ದೇವತ್ವದ ದಾರಿ ತೋರಿದ ನಮ್ಮ ಮನು, ಅಗಸ್ತ್ಯರಂತಹ ಅನೇಕ ಜ್ಞಾನಿಗಳನ್ನು ಗೌರವ, ಕೃತಜ್ಞತೆಗಳಿಂದ ಸ್ಮರಿಸುವುದರಲ್ಲೇನಾಶ್ಚರ್ಯ? ಸಯಾಂನ ಲೋಕಸಭಾ ಭವನದಲ್ಲಿ ಇತ್ತೀಚೆಗೆ ಮನುವಿನ ದೊಡ್ಡ ಪ್ರತಿಮೆಯೊಂದನ್ನು ಪ್ರತಿಷ್ಠಾಪಿಸಿ – ‘‘ವಿಶ್ವದ ಪ್ರಪ್ರಥಮ ಹಾಗೂ ಮಹಾನ್ ಧರ್ಮದಾತ’’ ಎಂದು ಹೆಸರಿಸಿದ್ದಾರೆ.

ನಾವು ಆ ದೇಶಗಳೊಡನೆ ಸಂಪರ್ಕಕ್ಕೆ ಬಂದಂದಿನಿಂದ ಯಾವುದೇ ಸಂಘರ್ಷ, ಕ್ರಾಂತಿ ನಡೆದುದಿಲ್ಲ. ಬದಲು ಅವರಿಗೆ ಭಾರತೀಯರ ಹಾಗೂ ಭಾರತದ ಬಗ್ಗೆ ಅಪಾರ ಪೂಜ್ಯತೆ, ಕೃತಜ್ಞತೆಗಳಿದ್ದವು. ಭಾರತವೇ ಅವರ ಪಾವನ ದೇವಭೂಮಿಯಾಗಿತ್ತು. ದೂರಪ್ರಾಚ್ಯದ ಪ್ರಬಲ ಶೈಲೇಂದ್ರ ಸಾಮ್ರಾಜ್ಯವು ಚೀನೀಯರ ದುರಾಕ್ರಮಣಗಳ ( ಇಂದು ಸಹ ನಮಗೆ ಅದರ ರುಚಿ ತಾಗಿದೆ) ವಿರುದ್ಧ ಅನೇಕ ಶತಮಾನಗಳು ನಮ್ಮ ಪೂರ್ವದ ಗಡಿಗಳನ್ನು ರಕ್ಷಿಸುತ್ತಿತ್ತು. ದಾಸ್ಯಕ್ಕೊಳಗಾದ ಜನತೆಯ ಕ್ರಾಂತಿಗಳನ್ನು ಹತ್ತಿಕ್ಕಿ ತಮ್ಮ ಪ್ರಭುತ್ವವನ್ನುಳಿಸಿಕೊಳ್ಳಲು ಸೈನಿಕ ಶಕ್ತಿಯ ಮೇಲೆ ನಿರ್ಭರವಾಗಿದ್ದ ಇತರ ರಾಕ್ಷಸೀ ಸಾಮ್ರಾಜ್ಯಗಳಿಗೂ ಇದಕ್ಕೂ ಎಂಥ ವ್ಯತ್ಯಾಸ!

ಈ ರೀತಿ ಮಾನವನ ಬಗ್ಗೆ ಮೂಲ ವಿಚಾರ ಹಾಗೂ ದಿನದಿನದ ವ್ಯವಹಾರಿಕ ಜೀವನದಲ್ಲಿ ಅದರ ಸಾಕ್ಷಾತ್ಕಾರ, ಎರಡೂ ವಿಧದಲ್ಲೂ ಹಿಂದೂ ಜೀವನಪದ್ಧತಿ ಸತ್ವ ಪರೀಕ್ಷೆಗೊಳಗಾಗಿ ಯಶಸ್ವಿಯಾಗಿತ್ತು. ಮನುಷ್ಯನೆಂದರೆ ದೇಹ, ಕೇವಲ ಜಡವಸ್ತು ಎಂದು ತಿಳಿದು ಆರಾಧಿಸುವುದರಿಂದ ಒಳಿತಾಗದು; ಮಾನವ ಮೂಲತಃ ಆತ್ಮ ಎಂದು ಅರಿಯುವುದರಿಂದಲೇ ಭೌತಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಈ ಜೀವನ ಏರಬಲ್ಲುದು ಎಂಬ ಸತ್ಯ ಪ್ರಮಾಣಿತವಾಗಿತ್ತು. ಮೊದಲನೆಯದು ಅನ್ಯರ ಶೋಷಣೆಯ ಮಾರ್ಗ, ಎರಡನೆಯದು ತ್ಯಾಗ ಹಾಗೂ ಪೋಷಣೆಯ ಮಾರ್ಗ. ಇದು ಕೆಳಗಿನ ಶ್ಲೋಕದಲ್ಲಿ ಅದೆಷ್ಟು ಸುಂದರವಾಗಿ ಚಿತ್ರಿತವಾಗಿದೆ!
‘‘ವಿದ್ಯಾ ವಿವಾದಾಯ ಧನಂ ಮದಾಯ
ಶಕ್ತಿಃ ಪರೇಷಾಂ ಪರಪೀಡನಾಯ
ಖಲಸ್ಯ ಸಾಧೋರ್ವಿಪರೀತಮೇತತ್
ಜ್ಞಾನಾಯ ದಾನಾಯ ಚ ರಕ್ಷಣಾಯ’’॥

ಮತ್ತೊಮ್ಮೆ ಸತ್ಯಸೃಷ್ಟಿಗಿಳಿಸೋಣ

ಆದ್ದರಿಂದ ಆತ್ಮದ ಆ ಅಮರ ಸತ್ವದ ಅಧಿಕಾರಿಗಳಾದ ನಮ್ಮ ಮೇಲೆಯೇ ಅದನ್ನು ಪುನರುತ್ಥಾನಗೊಳಿಸುವ ಹಾಗೂ ಜಗತ್ತಿನ ಎಲ್ಲ ಜನಾಂಗಗಳಿಗೂ ಈ ರೀತಿ ಕರೆಕೊಡುವ ದಾಯಿತ್ವವಿದೆ – ‘‘ಆತ್ಮದ ದಿವ್ಯ ದೇದೀಪ್ಯ ಮಾನ ಪ್ರಭೆಯಿಂದ ವಂಚಿತರಾಗುಳಿದಿರುವ ದುರ್ಭಾಗ್ಯ ಹಸುಳೆಗಳೇ, ನಿರ್ಜೀವ ಜಡವಸ್ತುವಿನ ಆರಾಧನೆಯನ್ನು ತೊರೆಯಿರಿ; ಬನ್ನಿರಿಲ್ಲಿಗೆ; ಆತ್ಮ ಚೇತನದ ಮೂಲಸ್ರೋತದಲ್ಲಿ – ಭಾರತಮಾತೆಯ ಪಾವನ ಪದತಲದಲ್ಲಿ – ಶಾಶ್ವತ ಸುಖದ ಸುಧೆಯನ್ನಾಸ್ವಾದಿಸಲು ಬನ್ನಿ’’
ನಾವು ಇಂದಿನ ಜಲಜನಕ ಬಾಂಬು, ಸಿ.ಬಿ.ಕ್ಷಿಪಣಿಗಳ ಸವಾಲನ್ನು ಎದುರಿಸೋಣ; ಪರಾನುಕರಣೆ ಹಾಗೂ ಸೋಲಿನ ಭಾವನೆಯನ್ನು ಹೃದಯದಿಂದ ಕಿತ್ತೊಗೆದು ಹಿಂದೂಕುಲದ ಚಿರಂತನ ವಿಜಗೀಷು ಪ್ರವೃತ್ತಿಯನ್ನು ಪುನರಪಿ ಆವಾಹಿಸಿಕೊಂಡು ಮಾನವಶಿಶುವನ್ನು ಆತ್ಮದ ದೈವೀವಾತಾವರಣದಲ್ಲಿ ಪೂರ್ಣಪುರುಷತ್ವ ಹಾಗೂ ದೇವತ್ವಕ್ಕೇರಿಸುವ ಹೊಸ ವಿಶ್ವಕುಟುಂಬವನ್ನು, ದೇವತೆಗಳಿಗೂ ಅಸೂಯೆ ಹುಟ್ಟಿಸುವ ಯಾಥಾರ್ಥ ಸ್ವರ್ಗವನ್ನು – ಪರಮ ವೈಭವಪೂರ್ಣ ಹಿಂದೂ ಸಾಮ್ರಾಜ್ಯವನ್ನು – ಜಗತ್ತಿನಲ್ಲಿ ಎಲ್ಲೆಡೆಯೂ ನಿರ್ಮಿಸೋಣ; ಮತ್ತೊಮ್ಮೆ ನಮ್ಮ ಭವ್ಯ ರಾಷ್ಟ್ರದ ಜೀವನ ಧ್ಯೇಯವನ್ನು ಸತ್ಯಸೃಷ್ಟಿಗಿಳಿಸೋಣ.

 ‘ಕೃಣ್ವಂತೋ ವಿಶ್ವಮಾರ್ಯಮ್’

1959

   

Leave a Reply