ಹಿಂದು ಸಂಘಟನೆಗಳನ್ನು ಬಲಗೊಳಿಸಬೇಕು

ಬೆಂಗಳೂರಿನ ಸುದ್ದಿಗಳು - 0 Comment
Issue Date : 05.08.2014


ಬೆಂಗಳೂರು: ಭಾರತದ ಸನಾತನ ಸಂಸ್ಕೃತಿಯನ್ನು ಕಾಪಾಡುವುದು ಎಲ್ಲರ ಕರ್ತವ್ಯ. ನಮ್ಮ ಧರ್ಮ ಮತ್ತು ಕರ್ತವ್ಯನಿಷ್ಠೆಯನ್ನು ಮರೆಯದೆ ಹಿಂದು ಸಂಘಟನೆಗಳನ್ನು ಬಲಗೊಳಿಸಬೇಕು ಎಂದು ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಪ್ರತಿಪಾದಿಸಿದರು.

ಜು. 27ರಂದು ಇಲ್ಲಿನ ಜೈನ್ ಕಾಲೇಜಿನ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಯೋತ್ಪಾದನೆ ಹೆಸರಲ್ಲಿ ದೇಶ ಮತ್ತು ಸಂಸ್ಕೃತಿಯನ್ನು ಹಾಳುಗೆಡವುವವರಿಗೆ ಎಂದಿಗೂ ಕ್ಷಮೆ ನೀಡಬಾರದು. ಭಾಷೆಯಲ್ಲಿನ ಅಭಿಮಾನವೇ ಪ್ರಾಂತದ ಭಾಷೆಯನ್ನು ಕಾಪಾಡುತ್ತದೆ. ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ದಿನೇದಿನೇ ಇಂಗ್ಲಿಷ್ ಭಾಷೆಗೆ ಗುಲಾಮರು ಹೆಚ್ಚಾಗುತ್ತಿದ್ದು ದೇಶದಲ್ಲಿನ ವಿವಿಧ ಭಾಷೆಗಳನ್ನು ಪ್ರಪಾತಕ್ಕೆ ನೂಕುತ್ತಿದೆ. ಈ ಕುರಿತು ನಾವೆಲ್ಲರೂ ಚಿಂತಿಸಬೇಕಾಗಿದೆ. ಭಾಷೆಗಳ ಕುರಿತು ಅನ್ವೇಷಣೆ, ಸಂಶೋಧನೆಗಳು ನಡೆಯಬೇಕಾಗಿದೆ. ಇದಕ್ಕೆ ಜನರ ಪ್ರೋತ್ಸಾಹ ಅತೀ ಅಗತ್ಯ ಎಂದವರು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಟಿ.ವಿ. ಮೋಹನದಾಸ ಪೈ ಮಾತನಾಡಿ, ದೇಶದ ಮುಂದಿನ ಭವಿಷ್ಯವಾಗಿರುವ ಇಂದಿನ ಯುವಪೀಳಿಗೆಗೆ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸಬೇಕು. ಶಿಕ್ಷಣ ಸಂಸ್ಥೆಗಳು ಯುವಕರನ್ನು ಸುಶಿಕ್ಷಿತರನ್ನಾಗಿಸುವುದರೊಂದಿಗೆ ಉದ್ಯೋಗಾವಕಾಶದೆಡೆಗೂ ಹೆಚ್ಚಿನ ಗಮನ ಕೊಡಬೇಕು. ದೇಶದಲ್ಲಿ ಕೇವಲ 71 ಪ್ರತಿಶತದಷ್ಟು ಜನರು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಚೀನಾ ಮತ್ತಿತರ ದೇಶಗಳಲ್ಲಿ ಈ ಪ್ರಮಾಣ ಶೇ. 91ರಷ್ಟು. ಹೀಗಾಗಿ ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ ಎಂದರು.

ಜಗತ್ತಿನ ಯಾವುದೇ ದೇಶದಲ್ಲಿ ದೇವಾಲಯಗಳನ್ನು ಸರ್ಕಾರ ನಡೆಸುವ ಪದ್ಧತಿ ಇಲ್ಲ. ದೇವಾಲಯಗಳನ್ನು ಸಂಬಂಧಪಟ್ಟ ಪಂಗಡದವರೇ ನೋಡಿಕೊಳ್ಳುವಂತಾಗಬೇಕು. ಸರ್ಕಾರ ಎಂದಿಗೂ ಧರ್ಮದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದ ಅವರು, ಈಗಿರುವ ಹಲವಾರು ಸಮಸ್ಯೆಗಳ ವಿರುದ್ಧ ಒಗ್ಗಟ್ಟಾಗಿ ದನಿಗೂಡಿಸುವ ಅಗತ್ಯವಿದೆ. ಹಿಂದು ಸಂಘಟನೆಗಳು ಬಲವಾದರಷ್ಟೆ ಬದಲಾವಣೆ ಸಾಧ್ಯ ಎಂದರು.

   

Leave a Reply