ಹೊಸ ರುಚಿ ಹುಡುಕಾಟ: ಭಾರತೀಯರದೇ ಮೇಲುಗೈ!

ವಿಶೇಷ ಸುದ್ದಿಗಳು - 0 Comment
Issue Date : 11.08.2014

ಈಗೆಲ್ಲ ಅಡುಗೆ ಮಾಡೋದು ಕಷ್ಟದ ವಿಷಯವಲ್ಲ. ಬೇಕಾದ ಅಡುಗೆಯ ಹೆಸರನ್ನು ಗೂಗಲ್‌ನಲ್ಲಿ ಹುಡುಕಿದರೆ ಐದಾರು ಸೆಕೆಂಡ್‌ಗಳಲ್ಲಿ ಆ ಖಾದ್ಯಕ್ಕೆ ಬೇಕಾದ ಸಾಮಗ್ರಿಗಳು, ಮಾಡುವ ವಿಧಾನ, ಆರೋಗ್ಯದ ಮೇಲೆ ಸದರಿ ಖಾದ್ಯದ ಪರಿಣಾಮ ಮುಂತಾಗಿ ಎಲ್ಲವೂ ಕಂಪ್ಯೂಟರ್ ಪರದೆಯ ಮೇಲೆ ಪ್ರತ್ಯಕ್ಷವಾಗುತ್ತವೆ. ಈಗೀಗ ಹೀಗೆ ಕಂಪ್ಯೂಟರ್ ಮಾಹಿತಿ ನೋಡಿಕೊಂಡೇ ಅಡುಗೆ ಮಾಡುವ ಜನರ ಸಂಖ್ಯೆ ಸಾಕಷ್ಟಿದೆ. ಮತ್ತೊಬ್ಬರನ್ನು ಕೇಳಿ ಅವರಿಗೂ ತೊಂದರೆ ಕೊಟ್ಟು, ಅವರು ಹೇಳಿದ್ದು ಅರ್ಥವಾಗದೆ ಒಂದು ಮಾಡುವುದಕ್ಕೆ ಹೋಗಿ ಮತ್ತೊಂದು ಮಾಡಿ, ಸಕ್ಕರೆಯ ಬದಲು ಉಪ್ಪು ಹಾಕಿ… ಏನೇನೋ ಆಗುವ ಬದಲು ಕಂಪ್ಯೂಟರ್‌ನಲ್ಲಿ ಸಿಗುವ ನಿಖರ ಮಾಹಿತಿಯಿಂದ ಅಡುಗೆ ಮಾಡುವುದೇ ಸುಲಭ ಎನ್ನಿಸಿದೆ.

ಹೀಗೆ ವಿವಿಧ ಜಾಲತಾಣಗಳಿಂದ ಹೊಸ ಹೊಸ ಖಾದ್ಯಗಳನ್ನು ತಯಾರಿಸಲು ಉತ್ಸುಕರಾಗಿರುವವರಲ್ಲಿ ಭಾರತೀಯರು ಮೊದಲಿಗರಂತೆ! ಹೌದು, ಬಗೆ ಬಗೆಯ ಖಾದ್ಯಗಳನ್ನು ಮಾಡಿಕೊಂಡು ತಿನ್ನುವುದಕ್ಕೆ ಭಾರತೀಯರಿಗೆ ಎಲ್ಲಿಲ್ಲದ ಖುಷಿಯಂತೆ. ಅಡುಗೆಯೂ ಒಂದು ಕಲೆ ಎಂಬ ಮಾತಿದೆ. ರುಚಿ, ಶುಚಿ. ಮಿತವಾದ ಅಡುಗೆ ಮನಸ್ಸನ್ನೂ ಸಂತೃಪ್ತಿಯಿಂದಿಡುತ್ತದೆ ಎಂಬುದನ್ನು ಸಹ ನಮ್ಮ ಪೂರ್ವಜರು ಹೇಳಿದ್ದಾರೆ. ಇದೀಗ ವಿಶ್ವದೆಲ್ಲ ರಾಷ್ಟ್ರಗಳಿಗಿಂತ ಹೆಚ್ಚಾಗಿ ಭಾರತೀಯರೇ ಪಾಕಶಾಸ್ತ್ರದ ಬಗ್ಗೆ ಆಸಕ್ತಿ ಮತ್ತು ಪರಿಣತಿಯನ್ನೂ ಹೊಂದಿರುವುದನ್ನು ನೋಡಿದರೆ ಅಡುಗೆ ಎಂಬ ಕಲೆಗೆ ಭಾರತೀಯರ ಕೊಡುಗೆ ಹೆಚ್ಚೇ ಇದೆ ಎಂಬುದು ಸಾಬೀತಾಗುತ್ತದೆ.
ಇತ್ತೀಚೆಗೆ ಯೂ ಟ್ಯೂಬ್ ನಡೆಸಿದ ಸಮೀಕ್ಷೆಯೊಂದರಲ್ಲಿ ರುಚಿ ರುಚಿ ಖಾದ್ಯಗಳ ಜಾಲತಾಣಗಳನ್ನು ಅತೀ ಹೆಚ್ಚು ಸಾರಿ ಹುಡುಕಾಡಿದ್ದು ಭಾರತೀಯರೇ ಎಂಬುದು ದೃಢವಾಗಿದೆ. ಅಷ್ಟೇ ಅಲ್ಲ, ಭಾರತೀಯ ಬಾಣಸಿಗರ ಬಗ್ಗೆಯೂ ವಿದೇಶಗಳಲ್ಲಿ ಹೆಚ್ಚಿನ ಗೌರವವಿದೆ. ಭಾರತೀಯರು ತಯಾರಿಸುವ ಅಡುಗೆಯ ಹದ, ರುಚಿ ವಿದೇಶಿಯರಿಗೆ ಸಾಧ್ಯವಿಲ್ಲ ಎಂಬುದು ಹಲವರ ಅಭಿಪ್ರಾಯ.

   

Leave a Reply