ಜಗದ್ಗುರು ಭಾರತ – 13

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 16.07.2014

ಭೌತಶಾಸ್ತ್ರದಲ್ಲಿ ಕಾಲ ದೇಶಾಧ್ಯಯನ

ಕಪಿಲಮುನಿಯ ‘ಸಾಂಖ್ಯಶಾಸ್ತ್ರ’-6

ಭೌತಶಾಸ್ತ್ರದಲ್ಲಿ  ಕಾಲ-ದೇಶಗಳ ಅಧ್ಯಯನವು (Study of time and space) ಅತಿ ಮುಖ್ಯ ವಿಷಯಗಳಲ್ಲೊಂದು. ಬೆಳಕು, ಶಬ್ದ, ವಿದ್ಯುತ್ ಮುಂತಾದವು ಸೃಷ್ಟಿಯಲ್ಲಿನ ಶಕ್ತಿಯ ವಿವಿಧ ರೂಪಗಳು. ಆದರೆ ಅವು ವಿವಿಧವಾದರೂ ಅವೆಲ್ಲದಕ್ಕೂ ಸಾಮಾನ್ಯವಾದ ಗುಣವೊಂದಿದೆ.  ಅದೇ ವೇಗ(Speed). ಭೂಮಿಯ ಗುರುತ್ವಾಕರ್ಷಣೆಯೂ ಒಂದು ವೇಗವೇ.  ಈ ‘ವೇಗ’ವನ್ನರಿಯಲು ‘ಕಾಲ’ ಮತ್ತು ‘ದೇಶ’ಗಳೆರಡರ ಅರಿವೂ ಬೇಕಾಗುತ್ತದೆ. ಏಕೆಂದರೆ, ದೇಶದಲ್ಲಿ ಕಲ್ಪಿಸಲಾಗುವ ನಿರ್ದಿಷ್ಟ ಅಂತರವನ್ನು  ನಿರ್ದಿಷ್ಟ ಸಮಯದಲ್ಲಿ ಕ್ರಮಿಸುವ  ಕ್ರಿಯೆಯನ್ನೇ ‘ವೇಗ’ ಎನ್ನುವುದು. ಎಂದರೇನಾಯಿತು? ವೇಗವನ್ನರಿಯಲು ಒಂದೆಡೆ ‘ದೇಶ’ದ  ಅಳತೆಯೂ, ಇನ್ನೊಂದೆಡೆ ‘ಕಾಲ’ದ ಅಳತೆಯೂ ಬೇಕಾಯಿತು. ಹೀಗಾಗಿಯೇ ದೇಶವನ್ನಳೆಯುವ   ಇಂಚು-ಅಡಿ-ಫರ್ಲಾಂಗು-ಮೈಲುಗಳ ಅಥವಾ ಮೀಟರ್ ಕಿಲೋಮೀಟರುಗಳ ‘ಕೋಷ್ಟಕ’ವೂ ವಿಕಾಸ ಹೊಂದಬೇಕಾಯಿತು.  ಈ ಕಾಲ-ದೇಶಗಳ ಅರಿವಿಲ್ಲದಿರುತ್ತಿದ್ದರೆ ವಿಜ್ಞಾನದ ಯಾವ  ಪ್ರಗತಿಯೂ ಸಾಧ್ಯವಾಗುತ್ತಿರಲಿಲ್ಲ.  ಇದರಿಂದ ಇದೆಷ್ಟು ಮೌಲಿಕ ಅಧ್ಯಯನದ ಕ್ಷೇತ್ರವೆಂಬುದು ಸ್ಪಷ್ಟವಾಗುತ್ತದೆ.  ಉದಾಹರಣೆಗೆ, ಮಾನವನು ಗುರುತ್ವಾಕರ್ಷಣೆಯ ವೇಗವನ್ನರಿತಿದ್ದರಿಂದಲೇ ಅದನ್ನು ದಾಟಲು ಯತ್ನಿಸಿ ಯಶಸ್ವಿಯಾದ. ಆದ್ದರಿಂದಲೇ  ಚಂದ್ರನ ಮೇಲೆ ನಡೆದಾಡಲೂ ಆತ ಸಫಲನಾದ. ಆದರೆ ಇದೊಂದು ಚಮತ್ಕಾರಿಕ ಕಥೆಯ ಭಾಗವೇ ನಿಜವಾದರೂ, ಮುಖ್ಯವಾಗಿ ಇದು ದೇಶ-ಕಾಲಗಳ ಕುರಿತಾದ ಆತನ ಜ್ಞಾನ ಸಮನ್ವಯದಿಂದಲೇ ಸಾಧ್ಯವಾಗಿದ್ದು ಎಂಬುದನ್ನು  ಗಮನದಲ್ಲಿರಿಸಬೇಕು.

ವೈಜ್ಞಾನಿಕ ಕಾಲ ಚಿಂತನೆ

ಕಾಲ-ದೇಶಗಳ ಮಹತ್ವವು ಬಹು ಹಿಂದೆಯೇ ವಿಜ್ಞಾನಿಗಳ  ಗಮನ ಸೆಳೆದಿತ್ತು. 1 ಆದ್ದರಿಂದ ಅವುಗಳ ಬಗ್ಗೆ ಅಧ್ಯಯನಕ್ಕೆ  ಬಹು ಮೊದಲೇ ನಾಂದಿಯಾಗಿತ್ತು. ಕಾಲದ ಶುದ್ಧ ಸ್ವರೂಪ, ಅದರ ಗುಣಗಳ ಬಗ್ಗೆ ಚಿಂತಿಸಿದ ಆಧುನಿಕ ವಿಜ್ಞಾನಿಗಳಲ್ಲಿ  ಸರ್ ಐಸಾಕ್ ನ್ಯೂಟನ್ ಅಗ್ರಗಣ್ಯನೆನ್ನಬೇಕು. ಗುರುತ್ವಾಕರ್ಷಣ ಶಕ್ತಿಯ ರೂಪುರೇಷೆಗಳನ್ನು  ಅಚ್ಚುಕಟ್ಟಾಗಿ ನೀಡಿದ ಮೊದಲಿಗ, ಬೆಳಕು ಎನ್ನುವ  ಶಕ್ತಿಯ ಸ್ವರೂಪವನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದ  ಮೇಧಾವಿ,  ಪ್ರಚಂಡ ಚಿಂತಕ  ನ್ಯೂಟನ್  ಕಾಲದ ವಿಷಯವಾಗಿ  ವ್ಯಕ್ತಪಡಿಸಿದ ಅಭಿಪ್ರಾಯ ಹೀಗಿತ್ತು : “ಅತಿ ಶುದ್ಧವೂ, ಸತ್ಯವೂ ಮತ್ತು ಗಣಿತ ಶಾಸ್ತ್ರಾಧ್ಯಯನದ ವಿಷಯವೂ ಆದ  ಕಾಲವು ಇತರ ಯಾವುದೇ ಸಂಗತಿಗಳ ಪ್ರಭಾವಕ್ಕೆ ಒಳಪಡದೇ, ಸರ್ವಸ್ವತಂತ್ರ ರೀತಿಯಲ್ಲಿ, ತನ್ನದೇ ಆದ ಸ್ವಭಾವ-ನಿಯಮಾನುಸಾರವಾಗಿ, ನಿರ್ದಿಷ್ಟ  ಗತಿಯಲ್ಲಿ ಸಾಗಿದೆ.” 2

ಆದರೆ, ವಿಜ್ಞಾನಿಗಳಲ್ಲದ ಇತರ ಚಿಂತಕರು ಆಗಲೇ ಹೇಳಿದ್ದಕ್ಕಿಂತ ಭಿನ್ನವಾದದ್ದೇನನ್ನೂ ನ್ಯೂಟನ್  ಇಲ್ಲಿ ಹೇಳಿದಂತಾಗಿರಲಿಲ್ಲ ಎಂಬುದನ್ನು ಗಮನಿಸಿ : ‘ಕಾಲವು ಒಂದು ಅನಂತ ವಾಹಿನಿ.  ಮುಂದೆ ಮುಂದೆ ಹರಿಯುತ್ತಲೇ ಇರುತ್ತದೆ. ಅದರ ಗತಿಯನ್ನು  ನಿಲ್ಲಿಸಲಾಗಲೀ, ಹಿಂದಿರುಗಿಸಲಾಗಲೀ ಸಾಧ್ಯವೇ ಇಲ್ಲ. ಅದರ ಆರಂಭ, ಅಂತ್ಯಗಳೆರಡೂ ಊಹೆಗೆ ನಿಲುಕದ ಸಂಗತಿಗಳು.  ಅದು ನಿರಂಕುಶ- ಎಂಬ ಪ್ರಾಚೀನ ದಾರ್ಶನಿಕ ಚಿಂತಕರ ಮಾತನ್ನೇ ನ್ಯೂಟನ್ ಪುನರುಚ್ಚರಿಸಿದ್ದ. ‘ಹಣ ಕಳೆದುಕೊಂಡರೆ ಮರಳಿ ಪಡೆಯಬಹುದು, ಆದರೆ ಕಾಲವನ್ನಲ್ಲ’ ಎನ್ನುವ ಅಥವಾ, ‘ಕಾಲವೂ ತೆರೆಯೂ ಯಾರಿಗಾಗಿಯೂ ಕಾಯುವುದಿಲ್ಲ ’- ಎಂಬ ಜಾಣ್ಣುಡಿಗಳ ಧ್ವನಿಗೆ ಸರ್  ನ್ಯೂಟನ್, ವಿಜ್ಞಾನದ ಶಬ್ದಚೌಕಟ್ಟನ್ನು ನೀಡಿದ ಎನ್ನಬಹುದು.

 ವೈಜ್ಞಾನಿಕ ದೇಶ ಚಿಂತನೆ

ಕಾಲದಂತೆ ‘ದೇಶ’ದ್ದೂ ಒಂದು ‘ಸ್ಥಿರ’ ಅಸ್ತಿತ್ವವೆಂಬ ಕಲ್ಪನೆ ಅನೂಚಾನವಾಗಿ ಬಂದಿದೆ.  ಸಾಮಾನ್ಯ ಜನರ ಅನುಭವವೂ ಹಾಗೆಯೇ ಇರುತ್ತದೆ. ಈ ಶತಮಾನದ ಆದಿಯವರೆಗೂ  ಭೌತವಿಜ್ಞಾನವೂ ಜನಸಾಮಾನ್ಯರ ಈ ನಂಬಿಕೆಗೆ ಆಧಾರವೊದಗಿಸುವಂತೆ, ಕಾಲದಂತೆ ದೇಶವೂ ಸ್ವತಂತ್ರ (absolute), ಅಪರಿಮಿತ (infinite) ಹಾಗೂ ಶಾಶ್ವತ (eternal) ಎಂದು ಅದು ಘೋಷಿಸಿತ್ತು. ಕಾಲದಂತೆ ದೇಶದ ಸ್ವತಂತ್ರ ಅಸ್ತಿತ್ವವನ್ನು ತರ್ಕಬದ್ಧವಾಗಿ ಮಂಡಿಸಿದ ಮೊದಲ ವಿಜ್ಞಾನಿ ನ್ಯೂಟನ್ನನೇ ಎನ್ನಬಹುದು. ಪ್ರೋಬರ್ಟ್ ಎಂಬುವವನೂ – “ಜಗತ್ತೆಂಬುದು ದೇಶ-ಕಾಲಗಳಲ್ಲಿ  ಯಾಂತ್ರಿಕವಾಗಿ ಚಲಿಸುವ ವಸ್ತುಗಳ ಸಾಮ್ರಾಜ್ಯ” 3 ಎಂದು ವರ್ಣಿಸುವ ಮೂಲಕ ದೇಶ ಕಾಲಗಳ  ವಿಭುತ್ವವನ್ನು(absoluteness)  ಒಪ್ಪಿಕೊಂಡ. ಆದರೆ ಲೀಬ್ನಿಜ್  ಎಂಬ ಚಿಂತಕನು ಇದನ್ನೊಪ್ಪಲಿಲ್ಲ. ಅವನಿಗೆ ದೇಶ ಕಾಲಗಳು ಕೇವಲ ಅನುಭವಕ್ಕೆ ನಿಲುಕುವ ಸಂಗತಿಗಳೆಂಬ ಭಾವನೆ ಇದ್ದಿತಲ್ಲದೇ, ನೈಜವಸ್ತುಗಳ ಪರಸ್ಪರ ಸಂಬಂಧದ ಬಗ್ಗೆ ನಮ್ಮ ಭ್ರಮಾತ್ಮಕ ಗ್ರಹಿಕೆಯ ಪರಿಣಾಮಗಳು4 ಎಂಬ ನಂಬಿಕೆಯೂ ಇತ್ತು.  ಪ್ರಸಿದ್ಧ ತತ್ವಜ್ಞಾನಿ  ಕಾಂಟನೂ ಈ ಅಭಿಪ್ರಾಯಕ್ಕೆ ಪುಷ್ಟಿ ಕೊಡಲೆಂಬಂತೆ, “ದಾರ್ಶನಿಕವಾಗಿ ಸತ್ಯವೆಂದು ಹೇಳಲು  ಆಗದಿದ್ದರೂ, ನಮ್ಮ ಪಂಚೇಂದ್ರಿಯಗಳು ಗ್ರಹಿಸುವ ಬದಲಾವಣೆಯ ಕಾರಣದಿಂದಾಗಿ ಕಾಲ ದೇಶಗಳನ್ನು  ನಿಜವೆಂದು  ಒಪ್ಪಬೇಕಾಗುತ್ತದೆ”5  ಎಂದುಬಿಟ್ಟ.  ಕೆಲವು ದಾರ್ಶನಿಕರಲ್ಲಿ ಹೀಗೆ ದೇಶ-ಕಾಲಗಳ ಸ್ವತಂತ್ರ ಅಸ್ತಿತ್ವದ ಬಗ್ಗೆ ಸಂದೇಹವಿದ್ದರೂ, ನ್ಯೂಟನ್ನನ ಪ್ರಭಾವದಿಂದಾಗಿ ಭೌತವಿಜ್ಞಾನಿಗಳೆಲ್ಲರೂ ಅವುಗಳ ಸ್ವತಂತ್ರ ಸಾರ್ವಭೌಮ ಅಸ್ತಿತ್ವವನ್ನು  ಒಪ್ಪಿಕೊಂಡಿದ್ದರು. ಈ ಸ್ಥಿತಿ ಈ ಶತಮಾನದ ಆರಂಭದವರೆಗೂ  ಇತ್ತು.

ಕಲ್ಪನೆ ಬದಲಾಯಿತು

ಕಳೆದ ಶತಮಾನದ ಕೊನೆಯಲ್ಲಿ  ಮಿಚಲ್‍ಸನ್ ಮತ್ತು ಮಾರ್ಲೇ ಎಂಬಿಬ್ಬರು ಜೊತೆಗೂಡಿ  ನಡೆಸಿದ  ಬೆಳಕಿನ ಕಿರಣಕ್ಕೆ ಸಂಬಂಧಿಸಿದ  ಒಂದು ಅಧ್ಯಯನವು  (1887) ಅದುವರೆಗೆ ಭೌತಶಾಸ್ತ್ರವು ಹೊಂದಿದ್ದ  ಕಾಲದೇಶಗಳ ಕುರಿತಾದ ಕಲ್ಪನೆಯನ್ನೇ ಸಂದೇಹದ ಸುಳಿಗೆ ಸಿಕ್ಕಿಸಿಬಿಟ್ಟಿತು. ಲೋರೆಂಟ್ಸ್ ಎಂಬ ಭೌತವಿಜ್ಞಾನಿ 1900 ರಲ್ಲಿ ತನ್ನ ‘ಪರಿವರ್ತನ ನಿಯಮ’ (Transformation rule) ಎನ್ನುವ ಭೌತಸೂತ್ರವೊಂದನ್ನು  ಮಂಡಿಸಿದ. ಅತಿ ವೇಗದಲ್ಲಿ  ಚಲಿಸುವ ವಸ್ತುಗಳು  ಚಲನೆಯ ವೇಗವು ಹೆಚ್ಚಾದಂತೆ ಸಂಕುಚಿತಗೊಳ್ಳುತ್ತವೆ ಎಂಬುದು  ಈತನ ಸೂತ್ರದ  ನಿಷ್ಕರ್ಷೆಯಾಗಿ  ಮೂಡಿಬಂತು.  1905ರಲ್ಲಿ  ಸುಪ್ರಸಿದ್ಧ ವಿಜ್ಞಾನಿ ಐನ್‍ಸ್ಟೀನನು  ಈ ಸೂತ್ರವನ್ನು ಗಣಿತಶಾಸ್ತ್ರದ ಆಧಾರದ ಮೇಲೆ  ಅತ್ಯಮೋಘವಾಗಿ ಬಳಸಿಕೊಂಡು  ತನ್ನ ಜಗದ್ವಿಖ್ಯಾತವಾದ ‘ಸಾಪೇಕ್ಷತಾವಾದ’ (Theory of relativity)ಯನ್ನು ಮುಂದಿಟ್ಟನು. ಮಿಚಲ್‍ಸನ್ ಮಾರ್ಲೇ ಪ್ರಯೋಗದ  ಫಲಿತಾಂಶಗಳು ಚರ್ಚಿಸಲ್ಪಟ್ಟಾಗ, ಕಾಲ ಮತ್ತು ದೇಶಗಳು  ಸ್ವತಂತ್ರ ಅಸ್ತಿತ್ವಗಳೆಂಬ  ನಂಬಿಕೆಗೆ ಪೆಟ್ಟುಬಿದ್ದು, ಅವು ಬೇರ್ಪಡಿಸಲಾಗದಂತೆ ಬೆಸೆದುಕೊಂಡ ಸಂಗತಿಗಳಿರಬಹುದೇ ಎಂಬ ಶಂಕೆಗೆ ಆಸ್ಪದವಾಗಿತ್ತು.  ಲೋರೆಂಟ್ಸನ  ಸೂತ್ರವು  ಈ ದಿಕ್ಕಿನಲ್ಲಿ  ಚಿಂತಿಸಲು  ಇನ್ನಷ್ಟು  ಸೂಚನೆ ನೀಡಿತಾದರೆ ಐನ್‍ಸ್ಟೀನ್ ಗಣಿತಶಾಸ್ತ್ರದ ಆಧಾರದ ಮೇಲೆ ಮುಂದುವರೆದು ಮಾಡಿದ ಸಾಧನೆಯಿಂದ ಉದ್ಭವಿಸಿದ  ಸಂದೇಹಗಳಿಗೆ ಪರಿಹಾರ ಸಿಕ್ಕಂತಾಯಿತು. ಐನ್‍ಸ್ಟೀನನ ಸಿದ್ಧಾಂತದಿಂದ  ಹೊಮ್ಮಿದ  ಮುಖ್ಯಾಂಶಗಳು ಎರಡು.  ನಮ್ಮ ಬ್ರಹ್ಮಾಂಡದಲ್ಲಿ ಬೆಳಕಿನ ವೇಗಕ್ಕಿಂತ   ಹೆಚ್ಚಿನ ವೇಗವಿರಲು  ಸಾಧ್ಯವಿಲ್ಲ,  ಎಂಬುದು ಒಂದು. ಮತ್ತು ಚಲಿಸುತ್ತಿರುವುದೆಲ್ಲವೂ, ಚಲಿಸುತ್ತಿರುವ  ದಿಕ್ಕಿನಲ್ಲಿ, ಚಲಿಸುತ್ತಿರುವ ವೇಗಕ್ಕೆ ಅನುಗುಣವಾಗಿ  ಸಂಕುಚಿತವಾಗುವುವು ಎಂಬುದು ಮತ್ತೊಂದು. ಈ ‘ಸಾಪೇಕ್ಷತಾವಾದ’ದಂತೆ ಕಾಲ ದೇಶಗಳು ಚಲನೆಯ ವೇಗವನ್ನು  ಹೊಂದಿಕೊಂಡಿವೆ, ಬದಲಾಗುತ್ತವೆ ಎಂದಿದರ ಅರ್ಥವಾಗುತ್ತದೆ. ಆದರೆ ಐನ್‍ಸ್ಟೀನ್ ಇದನ್ನು ಕೇವಲ ಗಣಿತಶಾಸ್ತ್ರದ ಆಧಾರದ ಮೇಲೆ ಮಂಡಿಸಿದನಷ್ಟೇ.  ಅದರ ಅಧಿಕೃತ ಸತ್ಯತೆ ಸಿದ್ಧವಾದದ್ದು 1936 ರಲ್ಲಿ.  ಬೆಲ್ಸ್ ಲ್ಯಾಬೊರೇಟರಿಯ ವಿಜ್ಞಾನಿ  ಹೆಚ್. ಇ.  ಈವ್ಸ್ ಎಂಬಾತನಿಂದ. ಹೈಡ್ರೋಜನ್ ಕಣಗಳ ಮೇಲೆ ಆತ ನಡೆಸಿದ  ಪ್ರಯೋಗವೊಂದು ಆತನ ಲೆಕ್ಕಾಚಾರದ ಸತ್ಯವನ್ನು  ಪ್ರಸ್ತಾಪಿಸಿತು. ಇದರಿಂದಾಗಿ ಕಾಲ ದೇಶ ಜಗತ್ತುಗಳ ಬಗ್ಗೆ ಇದ್ದ ಭೌತಶಾಸ್ತ್ರೀಯ ಕಲ್ಪನೆಯೇ ಎಂದೆಂದಿಗೂ  ಬದಲಾಗಿಬಿಟ್ಟಿತು. ಸ್ವತಂತ್ರ ಅಸ್ತಿತ್ವದ ಕಾಲ ದೇಶಗಳು  ಕೇವಲ ಸಾಪೇಕ್ಷ ಸಂಬಂಧದ ಅಸ್ತಿತ್ವಗಳಾಗಿಬಿಟ್ಟವು !

  1. ಕಾಲ ದೇಶಗಳ ಮಹತ್ವದ ಅರಿವು ಮೊದಲು  ಮೂಡಿದ್ದು ಹಿಂದುಸ್ಥಾನದಲ್ಲಿ. ವೇದಾಂಗ ಜ್ಯೋತಿಷ ಮತ್ತು ಜ್ಯೋತಿರ್ಗಣಿತದ ವಿಕಾಸದ ಇತಿಹಾಸವನ್ನರಿತವರಿಗೆ ಇದು ಸ್ಪಷ್ಟವಾಗಿ ಗೊತ್ತು. ಕಾಲ-ದೇಶಗಳ ಪರಿಜ್ಞಾನವಿಲ್ಲದೇ ಈ ಶಾಸ್ತ್ರಗಳು ಉದಯಿಸಲಾರವೆಂಬುದನ್ನು  ಯಾರೂ ತಿಳಿಯಬಹುದು. ಇಂದು ಜಗತ್ತಿನಾದ್ಯಂತ ಜಾರಿಯಲ್ಲಿರುವ ಘಂಟೆ-ನಿಮಿಷಗಳ ಕಾಲಮಾಪನ ಕೋಷ್ಟಕವೂ ಹಿಂದೂ ಪ್ರತಿಭೆಯ ಕೊಡುಗೆಗಳಲ್ಲಿ ಒಂದು.  ಕಾಲ ವಿಜ್ಞಾನ ಶಾಸ್ತ್ರದ ವಿಕಾಸದಲ್ಲಿ  ಭಾರತದ್ದು ತಳಹದಿ (Basic) ಸ್ವರೂಪದ ಕೊಡುಗೆ ಎನ್ನಬಹುದು.
    1. Absolute true and mathematical time, of itself and from its own nature. flows equally, without relation to anything external.                                                   – In Principia
    2. “World is a realm of bodies moving mechanically in space and time.”
    3. Space and time are empirical concepts, abstracted from  our confused sense perceptions of the relations of real things.
    4. While we cannot tell whether time is meta-physically real, the consciousness of time, in our apprehension of change, is certainly real”.

ಲೇ: ಉಪೇಂದ್ರ ಶೆಣೈ

ಮುಂದುವರೆಯುವುದು………..

   

Leave a Reply