ಜಗದ್ಗುರು ಭಾರತ -16

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 19.07.2014

ಪ್ರಾಚೀನ ಹಿಂದೂ ಕಾಲಜ್ಞಾನ-3

ವೈದಿಕಯುಗದ ಪ್ರಜ್ಞಾಚಕ್ಷು ಋಷಿಗಳು  ಕಾಲದ ಬಗ್ಗೆ   ಹೊಂದಿದ್ದ ಕಲ್ಪನೆಯನ್ನು  ಕುರಿತು ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಲಾಗಿತ್ತು.  ಪ್ರತೀಕಾತ್ಮಕ (Metaphoric)ಭಾಷೆಯನ್ನು  ಬಳಸಿ ಕಾಲದ ನಿರಂತರ ಗತಿಯನ್ನೂ, ಶಾಶ್ವತತೆಯನ್ನೂ ಅವರು ಸೂಚಿಸಿದ್ದರೆಂದು  ತಿಳಿಸಲಾಗಿತ್ತು. ಅಷ್ಟೇ ಅಲ್ಲ,  ಸಾಮಾನ್ಯ ಸ್ಥಿತಿಯಲ್ಲಿ  ತಾನು ಮೀರಲಾಗದ ಕಾಲವನ್ನು,  ಪ್ರಜ್ಞೆ ಮತ್ತು ಪ್ರಯತ್ನ ಬಲದಿಂದ ಮೀರಿ,  ಮಾನವನು  ಕಾಲಾತೀತ ಸ್ಥಿತಿಯನ್ನು  ಮುಟ್ಟಲು  ಸಾಧ್ಯವೆಂಬ  ಸೂಚನೆಯೂ  ಅಥರ್ವಮಂತ್ರವೊಂದರಲ್ಲಿರುವುದನ್ನು  ವಾಚಕರ ಗಮನಕ್ಕೆ ತರಲಾಗಿತ್ತು. ಅಲ್ಲಿಂದ ಮುಂದುವರೆಯೋಣ.

 ಕಾಲದ ಕುಂಭ

ಅಥರ್ವವೇದದಲ್ಲಿ  ‘ಕಾಲ’ದ ಮೇಲ್ಗಡೆಯಲ್ಲಿ  ತುಂಬಿತುಳುಕುವ  ಪಾತ್ರೆಯೊಂದಿದೆ ಎಂದು  ರೂಪಕ ಶೈಲಿಯಲ್ಲಿ  ಹೇಳುವ ಒಂದು ಮಂತ್ರವಿದೆ.  ಕಾಲವು  ತಾನು ಸಾಗಿ ಸವೆದಂತೆ ತನ್ನನ್ನು ಭರ್ತಿಮಾಡಿಕೊಳ್ಳಲು ಈ ಗಡಿಗೆಯನ್ನೇ ಆಶ್ರಯಿಸುವುದಂತೆ. ಸದಾ ತುಂಬಿಯೇ ಇರುವುದರಿಂದ, ಎಷ್ಟೇ ಪ್ರಯತ್ನಿಸಿದರೂ ಆ ಪಾತ್ರೆಯನ್ನು  ಬರಿದು ಮಾಡಲು ಕಾಲಕ್ಕೆಂದಿಗೂ ಸಾಧ್ಯವಿಲ್ಲವಂತೆ! ”ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ” ಎನ್ನುವ ಈಶಾವಾಸ್ಯ ಉಪನಿಷತ್ತಿನ ಅರ್ಥಗರ್ಭಿತ ಘೋಷಣೆಯಷ್ಟೇ  ಈ ಬರಿದಾಗದ ‘ಕಾಲಕುಂಭ’ದ ಕಲ್ಪನೆಯೂ ಅರ್ಥಗರ್ಭಿತ.  ಕಾಲವೆಂಬುದು ಎಂದಿಗೂ ಮುಗಿಯದ ಮೂಲವಿರುವ ಶಾಶ್ವತ ವಸ್ತುವೆಂಬುದೇ ಇದರ ವೈಜ್ಞಾನಿಕ ಅಂತರಾರ್ಥ.  ವೈದಿಕ ಋಷಿಯಲ್ಲಿನ ಕವಿ- ವಿಜ್ಞಾನಿ  ಈ ವೈಜ್ಞಾನಿಕ ಕಲ್ಪನೆಗೊಂದು ಮೋಹಕ  ರೂಪಕದ ಉಡುಗೆಯನ್ನು ತೊಡಿಸಿದ್ದಾನೆ, ಅಷ್ಟೆ. ಕಾಲ-ದೇಶಾಧ್ಯಯನಕ್ಕೆ ಸಂಬಂಧಿಸಿದಂತೆ ಭೌತಶಾಸ್ತ್ರ  ಇತಿಹಾಸದಲ್ಲಿ  ಈ ಪ್ರಾಚೀನ ಘೋಷಣೆ ಒಂದು ಮಹತ್ವದ ಮೈಲಿಗಲ್ಲು ಎಂಬುದನ್ನು ನಿರಾಕರಿಸಲಾಗದು.

ಕಾಲದ ವಿಭುತ್ವ

ಅಥರ್ವವೇದದಲ್ಲಿನ ಮಂತ್ರಗಳು1 ಕಾಲದ ವಿಭುತ್ವವನ್ನು  ಆಧುನಿಕ ವೈಜ್ಞಾನಿಕರಿಗಿಂತಲೂ2 ಸ್ಪಷ್ಟವಾಗಿ, ಸಮರ್ಥವಾಗಿ  ವರ್ಣಿಸಿವೆ. ಅಲ್ಲಿನ  ವರ್ಣನೆಯು  ಕಾವ್ಯಮಯವಾಗಿರುವುದರಿಂದ ಅದನ್ನು ಮೂಲದಲ್ಲೇ ಸವಿಯುವುದೊಳ್ಳೆಯದು.  ಇಲ್ಲಿ ಕೇವಲ ಅದರ ಭಾವಾರ್ಥವನ್ನು  ಸಂಗ್ರಹಿಸಲಾಗಿದೆ :

“ಕಾಲ ಏಳು ಲಗಾಮುಗಳ ಕುದುರೆ.3 ಸಾವಿರ ಕಣ್ಣುಗಳ ಚಿರಯೌವನದ ಅಶ್ವ. ಪ್ರಾಜ್ಞರು, ದ್ರಷ್ಟಾರರು ಅದನ್ನೇರಿ ಸವಾರಿ ಮಾಡುತ್ತಾರೆ. (ಉಳಿದ) ಜೀವಿಗಳು ಅದರ ರಥದ ಚಕ್ರಗಳಾಗಿಬಿಡುತ್ತಾರೆ. ಏಳು ಚಕ್ರಗಳ ಈ ಮಹಾರಥವನ್ನು ಕಾಲವೇ ಮುಂದೆ ಸಾಗಿಸುತ್ತಿದೆ.  ಅದರ ಗುಂಭಗಳ(hubs) ಸಂಖ್ಯೆಯೂ ಏಳು. ಅಮರತ್ವವೇ ಅದರ ಅಚ್ಚು.  ಸರ್ವ ದೇವತೆಗಳಲ್ಲೂ  ಕಾಲಪುರುಷನೇ ಪ್ರಥಮ. ಎಡಬಿಡದೇ ಸಾಗಿರುವ   ಈ ಜೀವರಥೋತ್ಸವದಲ್ಲಿ  ಅವನೇ ಮುಂಚೂಣಿಯಲ್ಲಿದ್ದು  ಸಾಗಿದ್ದಾನೆ. ಕಾಲವು ಅಲ್ಲಿ, ಇಲ್ಲಿ, ಎಲ್ಲೆಲ್ಲಿಯೂ ಇದೆ.  ಒಂದೇ ಕ್ಷಣದಲ್ಲಿ ಸರ್ವತ್ರ ವ್ಯಾಪಿಸಿದೆ.  ಎಲ್ಲ ಅಸ್ತಿತ್ವಗಳಿಗೂ ಮುಖಾಮುಖಿಯಾಗುತ್ತದೆ.  ಅದು ಸರ್ವೋಚ್ಚ ಸಿಂಹಾಸನದಲ್ಲಿ ಆರೂಢವಾಗಿದೆ (ಅಧಿಕಾರ ಉಳ್ಳದ್ದಾಗಿದೆ ಎಂಬ ಅರ್ಥದಲ್ಲಿ). ಜಗತ್ತಿನ ಜೀವಿಗಳೆಲ್ಲವೂ ಅದರ ಕೈಚಳಕದಿಂದಲೇ ಬಂದಿರುವುದು. ಈವರೆಗೆ ಮೂಲಕ ಹಾದು ಬಂದಿದೆ.  ಆದ್ದರಿಂದ  ಮೊದಲಿಗೆ ತಂದೆಯಾದುದೇ ನಂತರ ಮಗನೂ ಆಯಿತು. ಆ ಕಾಲಪುರುಷನಿಗಿಂತ ಕೀರ್ತಿಶಾಲಿಗಳಾದವರಿಲ್ಲ. ಮೇಲಿನ ಆಕಾಶವನ್ನೂ ಈ ವಿಶಾಲ ಭೂಮಿಯನ್ನೂ  ಸೃಷ್ಟಿಸಿದ್ದು ಈ ಕಾಲವೇ. ಗತಿಸುತ್ತಿರುವ ಕ್ಷಣವನ್ನೂ, ಭೂತ-ಭವಿಷ್ಯಗಳನ್ನೂ  ಅದೇ ತೊನೆದಾಡಿಸುತ್ತಿರುವುದು. ಕಾಲದ ಕೃಪೆಯನ್ನೇ ಅದೃಷ್ಟ ಅಥವಾ ಅವಕಾಶ ಎನ್ನುವುದು.   ಸೂರ್ಯನು ಬೆಳಗುವುದು, ಹೊತ್ತಿ ಉರಿಯುವುದು ಕಾಲದಲ್ಲಿ. ಜಗತ್ತಿನ ಅಸ್ತಿತ್ವವಿರುವುದೂ ಕಾಲದಲ್ಲಿ. ಪ್ರಜ್ಞೆ ಮತ್ತು ಜೀವನಗಳಿರುವುದೂ ಕಾಲದಲ್ಲಿ. ರೂಪ, ಆಕೃತಿಗಳಿರುವುದು ಕಾಲದಲ್ಲಿ. ಕಾಲವೇ ಎಲ್ಲದಕ್ಕೂ ಪ್ರಭು, ಪಿತ, ಸೃಷ್ಟಿಕರ್ತ. ಇಲ್ಲಿರುವುದೆಲ್ಲವೂ ಅವನಿಂದಲೇ ಕಳಿಸಲ್ಪಟ್ಟಿದ್ದು. ಅವನಿಂದಲೇ ಮೂಡಿಬಂದದ್ದು.  ನೆಲೆನಿಂತಿರುವುದೂ ಅವನ ಮೇಲೆಯೇ.’’

ಈ ಕಾವ್ಯಮಯ ವಿವರಣೆಯು ಓಘದಲ್ಲಿ ಸಮರಸವಾಗಿ  ಸಾಗುವಾಗಲೇ  ನಿಮ್ಮ ಮನಸ್ಸು  ‘ಕಾಲದ ವಿಭುತ್ವ’ವನ್ನು  ಗಮನಿಸಲಿ. ಕಾಲಕ್ಕೂ ಒಟ್ಟು ಸೃಷ್ಟಿಗೂ  ಮತ್ತು ಕಾಲಕ್ಕೂ  ಸೃಷ್ಟಿಯೊಳಗಿನ ಬಿಡಿವಸ್ತುಗಳಿಗೂ  ಇಲ್ಲಿ ವಿವರಿಸಲಾಗಿರುವ ಸಂಬಂಧವನ್ನು  ವೈಜ್ಞಾನಿಕವಾಗಿ  ವಿಶ್ಲೇಷಿಸಲು ಮರೆಯಬೇಡಿ. ಅಧ್ಯಾತ್ಮ ಮತ್ತು ವಿಜ್ಞಾನಗಳನ್ನು  ರಮ್ಯ ರೀತಿಯಲ್ಲಿ ತಳಕು ಹಾಕಿಸುವ ಭಾರತೀಯ ವಿಧಾನ ಇದು. ಆಧುನಿಕ ವಿಜ್ಞಾನಕ್ಕೆ ಹೊರತಾದದ್ದು. ಆಧುನಿಕ ವಿಧಾನದಲ್ಲಿಲ್ಲವೆಂಬ  ಕಾರಣದಿಂದ ಈ ‘ದರ್ಶನ’ವನ್ನೂ ಅದರಲ್ಲಿರುವ ವಿಜ್ಞಾನಾಂಶವನ್ನೂ ಅಸಡ್ಡೆಯಿಂದ ಕಾಣಲಾಗದು.

ಕಾಲದ ಎರಡು ಮುಖಗಳು

ಹಿಂದಿನ ಒಂದು ಲೇಖನದಲ್ಲಿ4 ಹಗಲು–ರಾತ್ರಿ-ದಿನ-ಪಕ್ಷ-ಮಾಸ-ವರ್ಷ ಇತ್ಯಾದಿ ಮಾಪಕಗಳಿಂದ ಅಳೆಯಲಾಗುವ, ನಿತ್ಯಜೀವನ ಲೀಲೆಯ  ಭಾಗವಾಗಿರುವುದರಿಂದ ಎಲ್ಲರಿಗೂ ಸುಲಭವಾಗಿ   ಅರಿವಿಗೆ ನಿಲುಕುವ  ‘ಭೌತಕಾಲ’ವನ್ನು(Physical time)  ನಮ್ಮ ಹಿರಿಯರು ಹೇಗೆ ಕಂಡರೆಂಬುದನ್ನು ವಿವರಿಸಲಾಗಿತ್ತು. ಇಲ್ಲಿ, ನಾವೀಗ ಸಾಮಾನ್ಯ ಮಾನವನ ಮತಿಗೆ ಮೀರಿದ, ಆತನಿಂದ ಅಳೆಯಲಾಗದ,  ವಿಶ್ವನಿಯಾಮಕವಾಗಿ – ವಿಶ್ವವ್ಯಾಪಿಯಾಗಿ –ಆದಿ ಅಂತ್ಯಗಳಿಲ್ಲದೇ – ವಿಭುವಾಗಿ ಮೆರೆಯುವ ಅದರ ವೈಶ್ವಿಕರೂಪ (Cosmic time)ದ ಅರಿವು ಅವರಿಗೆ ಇತ್ತೆಂಬುದನ್ನು  ಕಾಣುತ್ತಿದ್ದೇವೆ.  ಈ ಎರಡು ಮುಖಗಳನ್ನು  ಬೇರೆಯಾಗಿಡಲು  ‘ಸಮಯ’ ಮತ್ತು ‘ಕಾಲ’ಗಳೆಂಬ ಎರಡು ವಿಶಿಷ್ಟ ಶಬ್ದಗಳನ್ನು  ಅವರು ಬಳಕೆಗೆ ತಂದಿರಬಹುದೇ? ಭೌತಿಕ ಕಾಲವನ್ನು  ‘ಸಮಯ’ವೆಂದೂ, ಅದರ ವೈಶ್ವಿಕ ಮುಖವನ್ನು ‘ಕಾಲ’5ವೆಂದೂ ಅವರು ಕರೆದಿದ್ದರೆಂದು ನನಗೆ ಅನ್ನಿಸುತ್ತದೆ.  ಅದೇನೇ ಇರಲಿ, ಒಟ್ಟಿನಲ್ಲಿ  ಅವರ ಸೂಕ್ಷ್ಮ ನಿರೀಕ್ಷಣೆ ಹಾಗೂ ವ್ಯಾಪಕ ಚಿಂತನೆಗಳ  ನಿದರ್ಶನವಿದು ಎಂಬುದನ್ನು  ಅಲ್ಲಗಳೆಯುವುದು ಸುಲಭವಲ್ಲ ಮತ್ತು ಅವುಗಳಲ್ಲಿರುವ ವೈಜ್ಞಾನಿಕಾಂಶಗಳನ್ನು ತಿರಸ್ಕರಿಸುವುದೂ ಉಚಿತವಲ್ಲ.

ದರ್ಶನ, ಉಪನಿಷತ್ತುಗಳಲ್ಲಿ ಕಾಲ

ವೇದಗಳಲ್ಲಿ ‘ಕಾಲ’ದ ಕುರಿತಾಗಿರುವ ಚಿಂತನೆಯ  ಪ್ರೌಢಿಮೆಯನ್ನು  ಕಂಡೆವು.  ಮುಂದೆ ಉಪನಿಷತ್ತು ಹಾಗೂ  ದರ್ಶನಗಳ ಕಾಲದಲ್ಲಿಯೂ ‘ಕಾಲಾಧ್ಯಯನ’ದ ಈ ಪರಂಪರೆ ಆಳವೂ, ಸೂಕ್ಷ್ಮವೂ ಆಗಿ ಮುಂಬರಿಯುವುದನ್ನು ನಾವು ಕಾಣಬಹುದು. ಅಥರ್ವವೇದವು ‘ಕಾಲದ ಕುಂಭ’ವನ್ನು  ವರ್ಣಸಿತಷ್ಟೇ.  ಆ ಗಡಿಗೆಯಲ್ಲಿ  ಇನ್ನಷ್ಟು ಇಣಿಕಿನೋಡುವ, ಸಾಧ್ಯವಿದ್ದರೆ ಆ ಗಡಿಗೆಯನ್ನೇ ವಶಪಡಿಸಿಕೊಳ್ಳುವ  ಮಹದಾಸೆಯ ಪ್ರಯತ್ನ ಉಪನಿಷ‍ತ್ಕಾರರದು. ಅವರ ಚಿಂತನೆಯು  ಆಧ್ಯಾತ್ಮಿಕವಾಗಿಯೂ, ವೈಜ್ಞಾನಿಕವಾಗಿಯೂ  ಮಹತ್ವದ್ದೇ ಸೈ.  ಆದರೆ ಕಾಲಜಯಿಗಳಾಗುವ ಪರಮ ಸಾಹಸದ  ಕ್ಷೇತ್ರಕ್ಕೆ ಕೈ ಹಾಕಿದರೆಂಬ ಕಾರಣದಿಂದ  ಮಾನವೇತಿಹಾಸದ ದೃಷ್ಟಿಯಿಂದಲೂ  ಅದು ಮಹತ್ವಪೂರ್ಣವಾದುದೆಂಬುದರಲ್ಲಿ  ಸಂದೇಹವಿಲ್ಲ.

ಶ್ವೇತಾಶ್ವತರ ಉಪನಿಷತ್ತು  ಅಥರ್ವವೇದದಂತೆ ಕಾಲದ ವಿಭುತ್ವವನ್ನು ಮಾನ್ಯಮಾಡಿಲ್ಲ. ಕಾಲಕ್ಕೂ ಮಿಗಿಲಾದ, ‘ಕಾಲವನ್ನು ಸೃಷ್ಟಿಸಿರುವ ಬ್ರಹ್ಮನೇ  ಸ್ವಯಂವಿಭು ವಸ್ತು’ ಎಂದು ಅದರ ಪ್ರತಿಪಾದನೆ. ಮೈತ್ರಿ ಉಪನಿಷತ್ತು. , ಸಮಸ್ಯೆಯನ್ನು  ಇನ್ನೊಂದು ರೀತಿ ಕಂಡಿದೆ.  ಕಾಲವು ಸ್ವಯಂ ವಿಭುವೋ ಅಲ್ಲವೋ ಎಂಬ ವಾದದಲ್ಲಿ ಅದು ಎರಡೂ ದೃಷ್ಟಿಗಳವರನ್ನು ಬೆಸೆಯಲು  ನೋಡಿದೆ.  “ಅಂತಿಮ  ಸತ್ಯ-ಬ್ರಹ್ಮ. ಅದಕ್ಕೆ ಎರಡು ರೂಪಗಳು. ಅಶಾಶ್ವತವೂ, ಸೃಷ್ಟಿಗೊಂಡದ್ದೂ ಆದ ವೈಶ್ವಿಕರೂಪವೊಂದು (Cosmological existence). ಚಂದ್ರ, ಸೂರ್ಯರುಗಳಂತೆ, ಕಾಲವೂ ಈ ವೈಶ್ವಿಕ ರೂಪದ ಭಾಗವೇ. ಆದರೆ ಈ ವೈಶ್ವಿಕ ರೂಪ,  ‘ಬ್ರಹ್ಮ’ದ ಕೇವಲ ಕಾಲುಭಾಗವಷ್ಟೇ. ಅದರಿಂದಾಚೆಗೆ  ಇಂದ್ರಿಯಗಳಿಗೆ ಅಗೋಚರವಾದ ಬ್ರಹ್ಮದ ಶಾಶ್ವತ ಭಾಗವಿದೆ (Transcendental existence). ಈ ಸ್ಥಿತಿಯಲ್ಲಿ  ‘ಕಾಲ’ವೆಂಬುದಿಲ್ಲ. ಅದು ‘ಕಾಲಾತೀತ’. ಆದರೆ ವೈಶ್ವಿಕ ಸ್ಥಿತಿಯಲ್ಲಿ  ಅದೇ ‘ಕಾಲ’ವಾಗುತ್ತದೆ” – ಇದು ಮೈತ್ರಿ ಉಪನಿಷತ್ತಿನ ದೃಷ್ಟಿ.

ನ್ಯಾಯ ವೈಶೇಷಿಕ ಮತ್ತು ಪೂರ್ವಮೀಮಾಂಸ ದರ್ಶನಗಳು ಕಾಲವನ್ನು ವರ್ಣಿಸುವ  ರೀತಿ ಹೀಗೆ- “ಅದು ಶಾಶ್ವತ, ಸರ್ವವ್ಯಾಪಿ, ಏಕಕಾಲದಲ್ಲಿ  ಎಲ್ಲೆಡೆ ಇರುವಂಥದು. ಅದು ಅವಿಭಾಜ್ಯ, ಅಖಂಡ ಹಾಗೂ  ಅಂತಿಮ  ಪದಾರ್ಥ. ಅದು ಪದಾರ್ಥವೇ ಆದರೂ ಬಣ್ಣ, ರುಚಿ ಮುಂತಾದ ಪದಾರ್ಥಲಕ್ಷಣಗಳಿಲ್ಲದ್ದು.” ಬಣ್ಣ ರುಚಿಗಳಿಲ್ಲದ, ಕಣ್ಣಿಗೂ  ಕಾಣಿಸದ ‘ಕಾಲ’ದ ಅರಿವು ನಮಗಾಗುವುದು ಹೇಗೆ? ಈ ಪ್ರಶ್ನೆಗೆ ಎರಡೂ ದರ್ಶನಗಳೂ- “ಮುಂಚೆ ಮತ್ತು ನಂತರ ನಡೆಯುವ ಘಟನೆಗಳಿಂದ, ಏಕಕಾಲದಲ್ಲಿ  ಸಂಭವಿಸುವ ಅನೇಕ ಘಟನೆಗಳಿಂದ ಅಥವಾ ಘಟನೆಯೊಂದರ ವೇಗದಲ್ಲಿನ  ತೀವ್ರತೆ ಅಥವಾ ಮಂದತೆಯ ಕಾರಣದಿಂದ ನಮಗೆ ಕಾಲದ ಕಲ್ಪನೆ ಬರುತ್ತದೆ”- ಎಂದು ಉತ್ತರಿಸಿವೆ. ತಾನು  ನಿಶ್ಚಲವಾಗಿದ್ದೂ ಎಲ್ಲ ವಸ್ತುಗಳ ಚಲನೆಗೆ ‘ಕಾಲ’ವೇ ಕಾರಣವಾಗುವುದಂತೆ. ಪ್ರತಿಯೊಂದು ವಸ್ತುವಿನ ಹುಟ್ಟು-ಇರುವಿಕೆ-ನಾಶಗಳು ಸಂಭವಿಸುವುದು ಕಾಲದಲ್ಲಂತೆ. ಎಲ್ಲ ಬದಲಾವಣೆಗಳಿಗೆ ಕಾರಣ ಕಾಲವಂತೆ. ಅರಬ್ ಪಂಡಿತ ಆಲ್ಬರೊನಿಗೆ  ಕೇವಲ ವಿಷ್ಣುಧರ್ಮೋತ್ತರ ಪುರಾಣವಲ್ಲದೇ,  ನ್ಯಾಯವೈಶೇಷಿಕ ಹಾಗೂ ಮೀಮಾಂಸ ದಾರ್ಶನಿಕರ ‘ಕಾಲ’ವನ್ನು ಕುರಿತ ವಿಚಾರಗಳ ಅರಿವಿದ್ದಿದ್ದರೆ ಹಿಂದುಗಳ ಕಾಲಜ್ಞಾನವನ್ನು  ಗ್ರೀಕರದ್ದಕ್ಕೆ ಹೋಲಿಸಿ ಅದನ್ನು ಹೀಗಳೆಯುವ  ಪ್ರಸಂಗವೇ ಆತನಿಗೆ ಬರುತ್ತಿದ್ದಿಲ್ಲ ಎನಿಸುತ್ತದೆ. ಏಕೆಂದರೆ, ಗ್ರೀಕರಂತೆಯೇ ನ್ಯಾಯವೈಶೇಷಿಕರೂ,  ಮೀಮಾಂಸಕರೂ ಕಾಲವು ಶಾಶ್ವತವೂ, ಅಮೂರ್ತ(abstract)ವೂ ಆದುದೆಂದು ಬಗೆದಿದ್ದರು. ಅವರಂತೆಯೇ ಇವರೂ ಕಾಲ(Time)  ಮತ್ತು ಅವಧಿ (duration)ಗಳನ್ನು ವಿಂಗಡಿಸಲು ಮತ್ತು ಕಾಲವನ್ನು  ಆದ್ಯಂತರಹಿತವಾದುದೆಂದೂ, ಅವಧಿಯು ಆದಿಯೂ ಅಂತ್ಯವೂ ಉಳ್ಳದ್ದೆಂದೂ ಕಲ್ಪಿಸಲು  ಸಮರ್ಥರಾದರು. ಗ್ರೀಕ್  ದಾರ್ಶನಿಕರುಗಳಿಗಿಂತಲೂ, ನ್ಯಾಯವೈಶೇಷಿಕರು ಮತ್ತು ಮೀಮಾಂಸಕರು ಶತಮಾನಗಳಷ್ಟು ಪೂರ್ವಿಕರಾಗಿದ್ದುದರಿಂದ ಇವರ ಸಾಧನೆಯು  ಚಾರಿತ್ರಿಕವಾಗಿ ಇನ್ನಷ್ಟು ಮಹತ್ವದ್ದೆನಿಸುತ್ತದೆ ಎಂಬುದೂ ನಮ್ಮ ಗಮನದಲ್ಲಿರಬೇಕು.

 ——————————————————————————————————————————————————-

  1. ಅಥರ್ವವೇದ -19-53.54
  2. ಈ ಲೇಖನಮಾಲೆಯ 13ನೇ ಕಂತು ನೋಡಿ.
  3. ಈ ‘ಏಳು’ ಸಂಖ್ಯೆ ಸಪ್ತವರ್ಣಗಳಿಗೋ ಅಥವಾ ದೇಶದಲ್ಲಿ ಕಲ್ಪಿಸಲಾಗುವ  ಸಪ್ತಲೋಕಗಳಿಗೋ ಸಂಬಂಧಪಟ್ಟಿರಬಹುದೇ?
  4. ಈ ಲೇಖನಮಾಲೆಯ  14ನೇ ಕಂತು ನೋಡಿ.
  5. ಕಾಲದ ಈ ವೈಶ್ವಿಕ  ಸ್ವರೂಪವನ್ನು  ಭಗವದ್ಗೀತೆಯೂ ವರ್ಣಿಸಿದೆ.  ವಿಭೂತಿಯೋಗಾಧ್ಯಾಯದಲ್ಲಿ ಲೋಕವನ್ನು ಧರಿಸಿರುವ ತಾನು ‘ಅಕ್ಷಯಕಾಲ’ವೆಂದೂ, ನಂತರ ಅದರ ಮುಂದಿನ  ವಿಶ್ವರೂಪ ದರ್ಶನಾಧ್ಯಾಯದಲ್ಲಿ ‘ಲೋಕಸಂಹಾರಕನಾದ ಕಾಲ’ನೇ ತಾನು  ಎಂದೂ  ಶ್ರೀಕೃಷ್ಣ ಹೇಳಿಕೊಂಡಿದ್ದಾನೆ.  ಅದಕ್ಕೂ ಮುಂಚೆ ಎರಡನೆ ಅಧ್ಯಾಯದಲ್ಲಿ  ಸೃಷ್ಟಿಕರ್ತನಾದ  ತಾನೂ  ಮತ್ತು ಸೃಷ್ಟಿಗೊಂಡ ಜೀವಿಗಳೂ ಇರಲಿಲ್ಲ ಎನ್ನುವ  ಯಾವ ಕಾಲವೂ ಇಲ್ಲ ಎಂದೂ ಹೇಳಿದ್ದಾನೆ.  ಈ ಉಲ್ಲೇಖಗಳೆಲ್ಲವೂ ಕಾಲದ  ವೈಶ್ವಿಕತೆಗೇ ಸಂಬಂಧಿಸಿದವೆನ್ನಬಹುದಲ್ಲವೇ?

 ——————————————————————————————————————————————————–

ಡಾ:ಉಪೇಂದ್ರ ಶೆಣೈ

ಮುಂದುವರೆಯುವುದು

 

   

Leave a Reply