ಜಗದ್ಗುರು ಭಾರತ – 17

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 20.07.2014

ಪ್ರಾಚೀನ ಹಿಂದೂ ಕಾಲಜ್ಞಾನ-4

ವೈದಿಕ, ಉಪನಿಷತ್ಕಾಲದ ಹಾಗೂ ವಿವಿಧ ದರ್ಶನಗಳ ಅನುಯಾಯಿಗಳು ‘ಕಾಲ’ವನ್ನು ಕಂಡು ವಿಶ್ಲೇಷಿಸಿದ ಬಗೆಯನ್ನು ಕುರಿತು ಹಿಂದಿನ ಲೇಖನದಲ್ಲಿ ಸ್ಥೂಲವಾಗಿ ತಿಳಿಸಲಾಯಿತು.  ಅವೈದಿಕ ಹಾಗೂ ಜೈನ ಹಾಗೂ ಬೌದ್ಧ ಚಿಂತಕರೂ ಈ ಕುರಿತು ವಿಶಿಷ್ಟ ರೀತಿಯಲ್ಲಿ ಚಿಂತಿಸಿದ್ದಾರೆ.  ಈ ವಿವಿಧ ಆಲೋಚನಾ ರೀತಿಗಳ(different approaches)  ಬಗ್ಗೆಯೇ ಒಂದು ಮಾತು. ಕೆಲವೊಮ್ಮೆ ಅವು ಪರಸ್ಪರ ವಿರುದ್ಧವಾಗಿ ತೋರುವುದರಿಂದ ಅವನ್ನು ಅವ್ಯವಸ್ಥಿತ ಚಿಂತನೆಯ (chaotic thinking)  ಫಲವೆಂದು ಬಗೆಯಬಾರದು. ಬದಲಿಗೆ ನಮ್ಮ ದೇಶದ  ಸುದೀರ್ಘ ಇತಿಹಾಸದಲ್ಲಿ, ವಿವಿಧ ಕಾಲಖಂಡಗಳಲ್ಲಿ,  ಅವು ಬೆಳೆದುಬಂದವೆಂಬುದನ್ನು  ಮರೆಯಬಾರದು.  ಇತರ ಭೌತವಸ್ತುಗಳಂತಲ್ಲದೇ  ಅಮೂರ್ತವಾದ (Formeless) ಕಾಲವನ್ನು ಕುರಿತು ಚರ್ಚಿಸುವುದು ಅವರಿಗೆ ಸುಲಭದ ಕೆಲಸವಾಗಿರಲಿಲ್ಲವೆಂಬುದನ್ನು ನೆನಪಿಡಬೇಕು.  ಪರಸ್ಪರ ಖಂಡನ-ಮಂಡನಗಳ (disputations) ಸಂದರ್ಭಗಳಲ್ಲಿ ಅವು ಚಿಂತನೆಗೆ ಗ್ರಾಸವನ್ನೊದಗಿಸಿವೆಯೆಂಬುದೂ ಪರಸ್ಪರ ವಿರುದ್ಧವಾದರೂ ಪರಸ್ಪರ ಪ್ರಭಾವಿಸಿವೆಯೆಂಬುದೂ ಗಮನದಲ್ಲಿಡತಕ್ಕ ಅಂಶ. ಆ ಕಾರಣದಿಂದ  ವಿಜ್ಞಾನ ಚರಿತ್ರೆಯ ದೃಷ್ಟಿಯಿಂದಲೂ  ಅವು ಮಹತ್ವದ್ದಾಗಿವೆ ಎಂಬುದನ್ನು  ಕಡೆಗಣಿಸುವಂತಿಲ್ಲ.

ಜೈನ-ಬೌದ್ಧ ಚಿಂತನೆಯಲ್ಲಿ ‘ಕಾಲದ ಕಲ್ಪನೆ’ ಹೇಗಿದೆಯೆಂಬುದನ್ನು ನಾವೀಗ ನೋಡೋಣ.

ಬೌದ್ಧರ ಕಾಲಚಿಂತನೆ

ಬೌದ್ಧಮತದ ಪ್ರಾರಂಭಿಕ ಹಂತದ ಚಿಂತನೆಯಲ್ಲಿ ಏಕಾತ್ಮಕವೂ (unitary), ಅಖಂಡವೂ, ನಿರುಪಾಧಿಕವೂ, ಸ್ವತಂತ್ರವೂ, ವಿಕಾರ-ವ್ಯತ್ಯಾಸಗಳಿಲ್ಲದ್ದೂ(immutable) ಆದ ಕಾಲವೆಂಬುದರ ಜೊತೆಯಲ್ಲಿ  ನಿಯಮಬದ್ಧವೂ, ನಿರ್ದಿಷ್ಟವೂ, ಆದುದರಿಂದಲೇ ಸೋಪಾಧಿಕವೂ  ಆದ (Conditioned empirical time) ಬೇರೊಂದು ಕಾಲವೂ ಇದೆ ಎಂಬ ಕಲ್ಪನೆ ಇದ್ದಿತು. ಅಸ್ಥಿರ ಹಾಗೂ ಅಶಾಶ್ವತ (impermanent) ವಾದ ಜೈವಿಕ(living) ಹಾಗೂ ಅಜೈವಿಕ (non-living) ಅಸ್ತಿತ್ವಗಳ(entities) ಸರಮಾಲೆಯ ಸೃಷ್ಟಿಗೆ ಕಾಲವೇ ಕಾರಣವಾಗಿದೆ ಎನ್ನುವ ವಾದವನ್ನು  ಆದಿ ಬೌದ್ಧ ಗ್ರಂಥದಲ್ಲಿ  ನಾವು ಕಾಣಬಹುದು. ಬೌದ್ಧರಲ್ಲಿನ  ವೈಭಾಷಿಕ ಪಂಗಡದವರು ’ಕಾಲವು ಅಶಾಶ್ವತ’ ಎಂದು ವಾದಿಸಿದರು. ‘ಭವಿಷ್ಯ, ವರ್ತಮಾನ ಮತ್ತು ಭೂತಗಳೆಂಬ  ಮೂರು ವಿಭಾಗಗಳನ್ನು  ಅಡಕಗೊಳಿಸಿಕೊಂಡ ಕೋಶದಂತಿದೆ ಕಾಲ. ಅಶಾಶ್ವತ ವಸ್ತುಗಳು ಈ ಕಾಲಕೋಶದ ಭವಿಷ್ಯಭಾಗದಿಂದ ಹೊರಬಿದ್ದು ವರ್ತಮಾನಕ್ಕೂ, ನಂತರ ವರ್ತಮಾನದಿಂದ ಹೊರಬಿದ್ದು, ಭೂತದೆಡೆಗೂ ಸಾಗುತ್ತಲಿವೆ’ ಎಂಬುದು ಅವರ ಪ್ರತಿಪಾದನೆ. ಈ ‘ವೈಭಾಷಿಕ ಬೌದ್ಧ’ರು ಕಾಲವು ಅವಿಕಾರಿಯೆಂಬ (immutable and unchangeable) ವಾದವನ್ನು ತಿರಸ್ಕರಿಸಿ ಭೂತ, ವರ್ತಮಾನ, ಭವಿಷ್ಯಗಳೆಂಬ ‘ತ್ರಿಕಾಲ’ಗಳನ್ನು ಮನ್ನಿಸಿದರಾದರೆ, ‘ಸೌತ್ರಾಂತಿಕ’ರೆಂಬ ಬೌದ್ಧ ಪಂಗಡದವರು ‘ಭೂತ ಮತ್ತು ಭವಿಷ್ಯಗಳಿಗೆ ಅಸ್ತಿತ್ವವೇ ಇಲ್ಲವಾದುದರಿಂದ ಆ ಕಾಲಭಾಗಗಳೇ ಇಲ್ಲ.  ಇದ್ದರೆ ‘ವರ್ತಮಾನ’ವೆಂಬ ‘ಕಾಲ ಸ್ವರೂಪ’ವೇ ಎಂಬ ತಾತ್ವಿಕ ನಿಲುವನ್ನು ತಾಳಿದ್ದರು. ‘ಶೂನ್ಯವಾದಿ’ಗಳು ಮತ್ತು ‘ವಿಜ್ಞಾನವಾದಿ’ಗಳೆಂಬ ಮತ್ತೆರಡು ಬೌದ್ಧ ಪಂಗಡಗಳವರು ‘ಕಾಲಕ್ಕೆ ಸ್ವತಂತ್ರ ಅಸ್ತಿತ್ವವೆಂಬುದೇ ಇಲ್ಲ’ ಎಂಬ ವಾದವನ್ನು  ಪುರಸ್ಕರಿಸುವವರಾಗಿದ್ದರು.  ಒಟ್ಟಿನಲ್ಲಿ ಗ್ರೀಕರಂತೆ, ಬೌದ್ಧರಲ್ಲೂ ಕಾಲವು ಸ್ವತಂತ್ರ ಅಸ್ತಿತ್ವವುಳ್ಳ ವಸ್ತುವೆಂಬ  ಮತ್ತು ಹಾಗಲ್ಲವೆಂಬ ಎರಡು ವಾದಗಳಿಗೂ ಬೆಂಬಲಿಗರಿದ್ದಂತೆ ತೋರುತ್ತದೆ.

 ಜೈನರ ಕಾಲಚಿಂತನೆ

ಜೈನದರ್ಶನವು ಕಾಲದ ಕುರಿತಾದ ತನ್ನ ವಿಶಿಷ್ಟ ವಿಚಾರವನ್ನು ಈ ರೀತಿ ಪ್ರಕಟಿಸಿದೆ. “ವಿಶ್ವವು ಜೀವ ಮತ್ತು ಅಜೀವಗಳೆಂಬ ಎರಡು  ಭಿನ್ನ ವರ್ಗಗಳಿಗೆ ಸೇರಿದ  ಒಟ್ಟು ಆರು ದ್ರವ್ಯಗಳಿಂದ ರಚಿತವಾಗಿವೆ. ಇವೆಲ್ಲ ಒಂದೊಂದಕ್ಕೂ  ‘ಅಸ್ತಿಕಾಯ’ವೆಂದು ಹೇಳಬಹುದು. ಜೀವಾಸ್ತಿ ಕಾಯವೂ ಒಂದು ದ್ರವ್ಯವೇ. ಆದರೆ ಅಜೀವವರ್ಗದ ಉಳಿದ ಐದು ಅಸ್ತಿಕಾಯಗಳಿಂದ ತನ್ನ ಚೈತನ್ಯ ಲಕ್ಷಣದಿಂದಾಗಿ  ಅದು ಬೇರೆ ವರ್ಗಕ್ಕೆ ಸೇರಿಕೊಂಡಿದೆ. ಅಜೀವ ವರ್ಗಕ್ಕೆ ಸೇರುವ  ಉಳಿದ  ಐದು  ದ್ರವ್ಯಗಳೂ ಜಡತ್ವವೇ ಪ್ರಧಾನ ಲಕ್ಷಣವುಳ್ಳವಾಗಿರುವವು. ಈ ಪಂಚಾಸ್ತಿ ಕಾರ್ಯಗಳು ಯಾವುವು ಎಂದರೆ-

1.ಪುದ್ಗಲ(Matter)  2.ಧರ್ಮ(Principle of motion)1 3.ಅಧರ್ಮ(Principle of rest)2 4.ಆಕಾಶ(Space) 5.ಕಾಲ(Time).

ಕೊನೆಯ ದ್ರವ್ಯವಾದ  ಕಾಲವನ್ನು  ಜೈನದರ್ಶನ ಒಂದು ವೈಷಯಿಕ ಸತ್ಯವೆಂದು (objective reality) ಸಾರಿದೆ.  ವಿಶ್ವದಲ್ಲಿ ಕಂಡುಬರುವ  ವೃದ್ಧಿ ಕ್ಷಯಗಳಿಗೆ, ಸಂಕೋಚ-ವಿಕಾಸಗಳಿಗೆ  ಕಾಲವು ಒಂದು ಅವಶ್ಯಕ ನೆಲೆಯೆಂದೂ, ಕಾಲವೆಂಬುದಿಲ್ಲದೆಯೇ ವಸ್ತುಗಳಲ್ಲಿನ  ಈ ಬದಲಾವಣೆಗಳನ್ನು  ಕುರಿತು ಚಿಂತಿಸಲೂ, ಗ್ರಹಿಸಲೂ ಸಾಧ್ಯವಾಗದೆಂದೂ ಜೈನ ಚಿಂತಕರ ವಾದ.”

ಜೈನದರ್ಶನವು ಕಾಲವನ್ನು  ‘ವ್ಯಾವಹಾರಿಕ ಕಾಲ’ವೆಂದೂ(Relative time) ಮತ್ತು ಪಾರಮಾರ್ಥಿಕ ಕಾಲವೆಂದೂ (absolute time)ವಿಂಗಡಿಸುತ್ತದೆ. ಅದು ಕಾಲವನ್ನು ನಿರಾಕರಿಸದೇ, ಅದರ ನಿತ್ಯತೆ, ಸತ್ಯತೆಗಳನ್ನು  ಮಾನ್ಯಮಾಡಿದೆ.  ಆದರೆ ಸ್ವಭಾವತಃ ಅದು ಚಲನಶೀಲವಾದುದರಿಂದ ಬದಲಾಗುತ್ತಲೇ ಇರುವ ‘ಕ್ಷಣ’ ಅಥವಾ ‘ಸಮಯ’ಗಳ ರೂಪದಲ್ಲಿ  ಅನುಭವಕ್ಕೆ ನಿಲುಕುವುದೆಂದು  ಪ್ರತಿಪಾದಿಸುತ್ತದೆ.  ಆದರೆ,  ನಿರಂತರತೆಯೂ  ಕಾಲದ ಸ್ವಭಾವ ಎನ್ನುತ್ತದೆ.  ಸದಾ  ಬದಲಾಗುವ  ಜಗತ್ತಿನಲ್ಲಿ  ಕಾಲ ಎಡೆಬಿಡದೇ ಸಾಗುತ್ತದೆ. ಈ ನಿರಂತರತೆಯ ಸ್ಥಿರತ್ವದ ಕಾರಣದಿಂದಲೇ ನಮಗೆ ವಸ್ತುಗಳ ಉದಯ(Origination), ಬೆಳವಣಿಗೆ(growth), ಕೊಳೆಯುವಿಕೆ(decay), ವಿನಾಶ(destruction)  ಇತ್ಯಾದಿ  ಪರಿವರ್ತನೆಗಳನ್ನು  ತಿಳಿಯಲಾಗು ವುದು. ಕಾಲದ ಸ್ಥಿರತ್ವವು ಇಲ್ಲದಿದ್ದರೆ, ಇವನ್ನು ತಿಳಿಯಲು ಅಸಾಧ್ಯವಾಗುತ್ತಿತ್ತು. ಈ ಸ್ಥಿರತೆಯಿಂದಾಗಿಯೇ ನಮಗೆ ಮುಂಚಿನದು ಮತ್ತು ನಂತರದ್ದೆಂಬ ಸಂಬಂಧಗಳನ್ನು ಗುರುತಿಸಲೂ ಸಾಧ್ಯವಾಗುವುದು ಎಂಬುದು ಜೈನ ಚಿಂತಕರ ಪ್ರತಿಪಾದನೆ.

ಜೀವ, ಪುದ್ಗಲ, ಧರ್ಮ, ಅಧರ್ಮ, ಆಕಾಶ,  ಕಾಲಗಳೆಂಬ ಆರು ಮೂಲದ್ರವ್ಯ ಅಥವಾ ಅಸ್ತಿಕಾಯಗಳನ್ನು ಜೈನದರ್ಶನವು ಪರಿಗಣಿಸುತ್ತದೆ ಎಂದು ಹೇಳಲಾಯಿತಷ್ಟೇ.- ಕಾಲವು ತಾನು ಸ್ವತಂತ್ರ ವಸ್ತುವಾಗಿದ್ದೂ ಉಳಿದ 5 ಅಸ್ತಿಕಾಯಗಳಂತಲ್ಲದೇ, ಆ ಎಲ್ಲದರ ಭಾಗವಾಗಿಯೂ ಇರಬಲ್ಲದೆಂದು ಜೈನ ಚಿಂತಕರು ಭಾವಿಸುತ್ತಾರೆ. ಕಾಲವು ‘ಒಂದು ಮತ್ತು ಹಲವು’ ಎನ್ನುವ, ಹಾಗೂ ‘ಶಾಶ್ವತ ಮತ್ತು ನಶ್ವರ’ ಎನ್ನುವ ಪರಸ್ಪರ ವಿರುದ್ಧ ತರ್ಕಸರಣಿಗಳನ್ನು  ಸಾಮಂಜಸ್ಯ ಪೂರ್ವಕವಾಗಿ ಜೋಡಿಸುವ ಮಹಾಪ್ರಯತ್ನವನ್ನು ಅವರು ಮಾಡಿದರೆಂದು ವಿದ್ವಾಂಸರು ಹೇಳಿದ್ದಾರೆ. ಕ್ರಿಯಾತ್ಮಕವಾಗಿಯೂ(Modally)  ಮತ್ತು ಯಥಾರ್ಥವಾಗಿಯೂ (Substantially) ಕಾಲವನ್ನು ಅಧ್ಯಯನ ಮಾಡಲು ಹೊರಟ ಅವರು, ಇನ್ನಿತರ ಭಾರತೀಯ ದರ್ಶನಗಳ ಚಿಂತನೆಯ ಸಾರವನ್ನು ಸಂಗ್ರಹಿಸಿ, ತಮ್ಮ ವಿಶಿಷ್ಟ ಚಿಂತನೆಯನ್ನು  ಅದಕ್ಕೆ ಬೆರೆಸಿದ್ದರಿಂದಲೇ ಜೈನ ಚಿಂತಕರಿಗೆ ಬಹು ದೊಡ್ಡ ಪ್ರಗತಿಯನ್ನು  ಮಾಡಲು ಸಾಧ್ಯವಾಯಿತೆಂದು ಅನೇಕರು ಹೊಗಳಿದ್ದಾರೆ.  ಈ ಪ್ರಗತಿಯಿಂದಾಗಿಯೇ ಜೈನ ಚಿಂತನೆಯಲ್ಲಿ ಕಾಲವು ಅವಧಿ (duration), ನಿರಂತರತೆ(continuity), ಚಲನೆ(motion), ಅನುಕ್ರಮ(sequence)  ಇವೇ ಮುಂತಾದ ಲಕ್ಷಣಗಳಿಂದೊಡಗೂಡಿದ ಜ್ಞೇಯಸತ್ಯವಾಗಿ (objective reality) ರೂಪು ಗೊಂಡಿತು. ಇದು ಅವರ ಭೌತಿಕ ಕಾಲದ ಕಲ್ಪನೆಯಾದರೆ, ಅದರ ‘ಪಾರಮಾರ್ಥಿಕ’ ಅಥವಾ ‘ವೈಶ್ವಿಕ’ ಸ್ವರೂಪವೂ ಅವರಿಗೆ ನಿಲುಕಿತು. ಜೈನ ಚಿಂತಕರ ಈ ಪಾರಮಾರ್ಥಿಕ ಕಾಲಕಲ್ಪನೆಯು ನ್ಯೂಟನ್ನನ ಕಾಲ ಕಲ್ಪನೆಯನ್ನು  ಸರ್ವಾಂಗವಾಗಿ ಹೋಲುವುದನ್ನು  ನಾವು ಕಾಣಬಹುದು. ಆದರೆ, ಇನ್ನೂ ಆಶ್ಚರ್ಯದ ಮಾತೆಂದರೆ ‘ಆಕಾಶ ಅಥವಾ ದೇಶ’ವೂ ಸೇರಿದಂತೆ ಉಳಿದ ಐದು ತಮ್ಮ  ಮೂಲದ್ರವ್ಯಗಳಲ್ಲಿ ಅಂತರ್ಮಯಗೊಳ್ಳುವ  ಕಾಲದ ತಮ್ಮ ಕಲ್ಪನೆಯಿಂದಾಗಿ ಐನ್‍ಸ್ಟೀನನ ‘ನಿರಂತರ ಕಾಲ-ದೇಶಗಳ’(Time-space continuum)  ಕಲ್ಪನೆಯನ್ನು ಅವನಿಗಿಂತಲೂ ಮೊದಲೇ ಒಂದಿಷ್ಟು ಸ್ಪರ್ಶಿಸಲು ಅವರಿಗೆ ಸಾಧ್ಯವಾಗಿದ್ದು. ಐನ್‍ಸ್ಟೀನನ ಕಲ್ಪನೆಗಿಂತ ಜೈನ ಕಲ್ಪನೆಗೆ ಭಾರಿ ವ್ಯತ್ಯಾಸವಿದೆಯಾದರೂ, ಸೀಮಿತ ರೀತಿಯಲ್ಲಾದರೂ ಆಗುವ ಈ ಸ್ಪರ್ಶ ನಗಣ್ಯವಲ್ಲ ಆದರೆ ಐನ್‍ಸ್ಟೀನ್ ಹಾಗೂ ಅವನ ಅನುಯಾಯಿಗಳಂತೆ ಜೈನ ಚಿಂತಕರು ಕಾಲ –ದೇಶಗಳನ್ನು ಸಮೀಕರಿಸಲು ತಯಾರಾಗದಿದ್ದುದು ಗಮನಿಸಬೇಕಾದ ಸಂಗತಿಯಾಗುತ್ತದೆ.  ಹೀಗೆ ಸಮೀಕರಿಸದಿರಲು ಕಾರಣವೂ ವಿಶಿಷ್ಟವಾದದ್ದೇ. “ದೇಶವು ಕಾಲದಂತೆ ಇತರ ವಸ್ತುಗಳಲ್ಲಿನ ಅತಿ ಸೂಕ್ಷ್ಮ ಬದಲಾವಣೆಗಳಿಗೆ ಎಂದಿಗೂ ಸಹಾಯಕ ಕಾರಣ(auxiliary cause) ಆಗಲಾರದು” ಎಂಬುದು. ಈ ಪ್ರತಿಪಾದನೆಯಲ್ಲಿನ ವೈಜ್ಞಾನಿಕತೆಯು ಚರ್ಚೆಗೆ ಅರ್ಹವಲ್ಲವೇ?

————————————————————————————————————————————————-

1-2 : ಈ ‘ಧರ್ಮ’ ಮತ್ತು ‘ಅಧರ್ಮ’ ಎಂಬ ಶಬ್ದಗಳಿಗೆ ಜೈನದರ್ಶನದಲ್ಲಿ  ಸಾಮಾನ್ಯ ರೂಢಾರ್ಥಕ್ಕಿಂತಲೂ ಭಿನ್ನವಾದ ತಾಂತ್ರಿಕ (Technical) ಅರ್ಥವಿರುವುದನ್ನು ಗಮನಿಸಬೇಕು. ಈ ಶಬ್ದಗಳನ್ನು ‘ಚಲನೆ’  ಹಾಗೂ ‘ಸ್ಥಿರತೆ’ಗಳೆಂಬ, ವಿಜ್ಞಾನದ ದೃಷ್ಟಿಯಿಂದ ಮಹತ್ವದ್ದೆನಿಸುವ, ವಿಶಿಷ್ಟಾರ್ಥದಲ್ಲಿ  ಬಳಸುವುದೇ ಜೈನದರ್ಶನದ ವೈಶಿಷ್ಟ್ಯ- “ಜೀವ ಮತ್ತು ಪುದ್ಗಲಗಳಿಗೆ ಸ್ವತಃ ಚಲಿಸುವ ಶಕ್ತಿ ಇದೆ. ಆದರೆ, ಇಡೀ ವಿಶ್ವವನ್ನು  ಧರ್ಮಾಧರ್ಮಗಳು  (ಚಲನೆ-ಸ್ಥಿರತೆಗಳು) ವ್ಯಾಪಿಸಿರುವುದರಿಂದ, ಅವೆರಡೂ ನಿಯಂತ್ರಿತವಾಗಿವೆ’’. ಧರ್ಮ(ಚಲನೆ) ಮತ್ತು ಅಧರ್ಮ(ಸ್ಥಿರತೆ)ಗಳು ಹೇಗೆ ಕೆಲಸ ಮಾಡುವುವೆಂಬುದನ್ನು ಜೈನ ದಾರ್ಶನಿಕರು ನೀರಿನಲ್ಲಿ  ಈಜುವ  ಮೀನು ಮತ್ತು ಆಕಾಶದಲ್ಲಿ  ಹಾರುವ ಹಕ್ಕಿಯ ದೃಷ್ಟಾಂತಗಳ ಮೂಲಕ ಹೃದಯಂಗಮವಾಗಿ  ವಿವರಿಸುತ್ತಾರೆ’’. ಮೀನು ಸ್ವಶಕ್ತಿಯಿಂದಲೇ ಈಜುವುದಾದರೂ, ನೀರಿನ ಒತ್ತಡದ ಅಭಾವವಿದ್ದಲ್ಲಿ ಅದು ಈಜಲಾರದು.  ಇಲ್ಲಿ ಮೀನಿನ ಈಜುವಿಕೆಗೆ ನೀರು ಕಾರ್ಯಕಾರಿ ಕಾರಣವಲ್ಲ (effective cause)ಎಂಬುದು ನಿಜ. ಆದರೆ ಅದು ಸಹಕಾರಿ ಕಾರಣ (supporting cause)ಎಂಬುದನ್ನು ಅಲ್ಲಗಳೆಯುವಂತಿಲ್ಲ.  ಇದು ಹೇಗೋ, ಹಾಗೇ ಜೀವ  ಮತ್ತು ಪುದ್ಗಲಗಳಿಗೆ(Living principle and matter) ಸ್ವಾಭಾವಿಕ ಚಲನಶೀಲತೆ ಇದೆ. ಆದರೂ ‘ಧರ್ಮ’ವೆಂಬ  ಚಲನ ತತ್ವಕ್ಕೆ  ಅವು ಬದ್ಧವಾಗಿವೆ. ವಸ್ತುಗಳು ಚಲನೆಯಿಂದ ವಿರಾಮ ಸ್ಥಿತಿಗೆ ಬರುವಾಗ ‘ಧರ್ಮ’ದ ವಿರುದ್ಧವಾದ ‘ಅಧರ್ಮ’ ತತ್ವದ ನೆರವಿಲ್ಲದೇ ಹಾಗೆ ಮಾಡಲಾರವು.  ಇಲ್ಲೂ ಅಷ್ಟೇ. ಆಕಾಶದಲ್ಲಿ  ಸ್ವಶಕ್ತಿಯಿಂದ ಹಾರುವ ಹಕ್ಕಿಯು ಸ್ವಶಕ್ತಿಯಿಂದಲೇ ವಿರಮಿಸುವುದಾದರೂ, ಅದರ ಚಲನೆ ನಿಲ್ಲಿಸಲು ಮರದ ಕೊಂಬೆಯೆಂಬ ಸಹಕಾರಿ ಕಾರಣ ಅಗತ್ಯ. ಕೊಂಬೆ ಇಲ್ಲಿ ಕಾರ್ಯಕಾರಣವಲ್ಲ. ಕ್ರಿಯಾ ವಿರಾಮಕ್ಕೆ ಬರಿಯ ಸಹಕಾರಿ. ಹೀಗೆ ಚಲನೆ-ಸ್ಥಿರತೆಗಳು ಎರಡೂ ಸುವ್ಯವಸ್ಥಿತ ಜಗತ್ತಿನ ಪರಮಾವಶ್ಯಕ ತತ್ವಗಳು’’. ಈ ಜೈನ ದಾರ್ಶನಿಕ ವಿವರಣೆಯು  ವೈಜ್ಞಾನಿಕ ಅಳತೆಗೋಲಿನಿಂದ ಅಳೆಯಲ್ಪಡಲು  ಅರ್ಹವಾಗಿದೆಯಲ್ಲವೇ?

 —————————————————————————————————————————————————

 ಡಾ. ಉಪೇಂದ್ರ ಶೆಣೈ

ಮುಂದುವರೆಯುವುದು

 

   

Leave a Reply