ಜಗದ್ಗುರು ಭಾರತ – 18

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 23.07.2014

 ಪ್ರಾಚೀನ ಹಿಂದೂ ಕಾಲಜ್ಞಾನ-5

ಹಿಂದಿನ ಲೇಖನದಲ್ಲಿ ಬೌದ್ಧ ಹಾಗೂ ಜೈನ ದಾರ್ಶಗಳನ್ನು  ಕಂಡೆವು. ಅದರಲ್ಲೂ ವಿಶೇಷವಾಗಿ  ಜೈನ  ಚಿಂತನೆಯಲ್ಲಿ ಆಧುನಿಕ ವಿಜ್ಞಾನಿಗಳಾದ ನ್ಯೂಟನ್ ಮತ್ತು ಐನ್‍ಸ್ಟೀನರ ಕಲ್ಪನೆಗಳಿಗೆ ಹೆಚ್ಚು ಕಡಿಮೆ ಹೋಲುವ  ಕೆಲವು  ಪರಿಕಲ್ಪನೆಗಳನ್ನು  ಗಮನಿಸಿದೆವು. ಈ ವಿಷಯದ ಕುರಿತಾಗಿ ಪ್ರಾಚೀನ ಭಾರತದ ಮಹತ್ವಪೂರ್ಣ ಚಿಂತಕರಲ್ಲಿ  ಗಣ್ಯರಾದ ಸಾಂಖ್ಯದಾರ್ಶನಿಕರ ಅಭಿಪ್ರಾಯವೇನು ಎಂಬುದನ್ನು ನಾವೀಗ ಗಮನಿಸೋಣ.1

ಸಾಂಖ್ಯರ ಕಾಲಚಿಂತನೆ

ಸಾಂಖ್ಯರು  ‘ಕಾಲವು ಶಾಶ್ವತ’ ಎಂಬ ವೈದಿಕ ಋಷಿಗಳ ಸಿದ್ಧಾಂತವನ್ನು  ಮನ್ನಿಸುವವರಾಗಿರಲಿಲ್ಲ. ಆಧುನಿಕ ವಿಜ್ಞಾನಿಗಳಂತೆ ಪ್ರಕೃತಿಯ ಹೊರತಾಗಿ ಬೇರಾವ ಸೃಷ್ಟಿತತ್ವವೂ ಇಲ್ಲ ಎಂದು ತಾವು ನಂಬಿದ್ದರಿಂದ, ಕೆಲವು ಉಪನಿಷತ್ಕಾರರ “ಶಾಶ್ವತ ವಸ್ತುವಾದ ‘ಪರಬ್ರಹ್ಮ’ದ ವ್ಯಕ್ತವೂ ವೈಶ್ವಿಕವೂ ಆದ ರೂಪದ (Cosmological aspect of Brahman) ಭಾಗ ಕಾಲ’’  ಎಂಬ ಸಿದ್ಧಾಂತವನ್ನೂ  ಸ್ವೀಕರಿಸಲಿಲ್ಲ ಅಥವಾ ಜೈನರು ಹಾಗೂ ವೈಶೇಷಿಕ ದಾರ್ಶನಿಕರು ಪರಿಗಣಿಸಿದಂತೆ ಕಾಲವನ್ನು ’ಸೃಷ್ಟಿಯ ಮೂಲದ್ರವ್ಯಗಳಲ್ಲೊಂದು’ ಎಂಬುದಾಗಿ ಪರಿಗಣಿಸಲೂ ಇಲ್ಲ.  ಬದಲಿಗೆ “ಕಾಲಕ್ಕೆ ಪ್ರತ್ಯೇಕ ವಸ್ತುವಿನ ರೂಪವೇ ಇಲ್ಲ. (has no separate identity) ಅದೇನಿದ್ದರೂ  ಕಾರಣಗಳ  ‘ಸ್ಪಂದನ’ ಅಥವಾ ನಿರಂತರ ಚಟುವಟಿಕೆಯ ಪರಿಣಾಮವಷ್ಟೇ’’ ಎಂದು ವಾದಿಸಿದ್ದು ಕಂಡುಬರುತ್ತದೆ2. ಆದ್ದರಿಂದ ಈ ನಿರುಪಾಧಿಕವಲ್ಲದ  ಸ್ವತಂತ್ರವೂ ಅಲ್ಲದ (one which is not attributeless, nor the one which is not independent) ‘ಕಾಲ’ವು ವಿಶ್ವಸೃಷ್ಟಿಯ ಕಾರಣ ಖಂಡಿತ ಆಗಲಾರದು ಎಂದು ಅವರು ನಂಬಿದ್ದಂತೆ ತೋರುತ್ತದೆ. 

ಕಾಲದ ಅಪ್ರಾಮುಖ್ಯತೆ

ಸಾಂಖ್ಯರು ಇತರ ದಾರ್ಶನಿಕರು ನೀಡುವಂತೆ  ಕಾಲಕ್ಕೆ ವಿಶೇಷ ಮಹತ್ವವನ್ನು  ನೀಡದಿರುವುದೇಕೆ? ಎಂಬ ಪ್ರಶ್ನೆಗೆ ಉತ್ತರ, “ಸೃಷ್ಟಿಯ ಮೂಲ ತ್ರಿಗುಣಾತ್ಮಕ ಪ್ರಕೃತಿ” ಎಂಬ ಅವರ ಸಿದ್ಧಾಂತದಲ್ಲಿದೆ. ವಿಶ್ವದ ಎಲ್ಲ ಚಟುವಟಿಕೆಗಳನ್ನೂ  ಅವರು ಸತ್ವ, ರಜ, ತಮಗಳೆಂಬ ಮೂರು ಗುಣಗಳ ಆಧಾರದಿಂದ ವಿವರಿಸುವವರು3. ಈ ತ್ರಿಗುಣಗಳ ವಿವಿಧ ರೀತಿಯ  “ಸಂಘಾತ ಮತ್ತು ಪರಿಣಾಮ” (combinations effective change)ಗಳಿಂದಾಗಿಯೇ ವೈವಿಧ್ಯಮಯ ವ್ಯಕ್ತ ಜಗತ್ತು  ಅಸ್ತಿತ್ವಕ್ಕೆ ಬಂದಿತೆನ್ನುವವರು. ಅವರು ಹೇಳುವಂತೆ – “ಮೊದಲು ಅಗೋಚರವಾಗಿದ್ದ ಪ್ರಕೃತಿಯು  ಈ ತ್ರಿಗುಣಗಳ ಪ್ರಭಾವದಿಂದ ಸೃಷ್ಟಿ ನಿರ್ಮಾಣದ ಹಲವು  ಮಜಲುಗಳಲ್ಲಿ ಮುನ್ನಡೆದ ನಂತರ ಈ ದೃಶ್ಯ ವಿಶ್ವವು (Manifest Universe) ಗೋಚರಿಸುವುದು. ಈ ದೃಶ್ಯ ವಿಶ್ವದ ಪೂರ್ವಾವಸ್ಥೆಯು (immediately preceding stage) ‘ಪಂಚತನ್ಮಾತ್ರ’4 (nfra-atomic potential)ಗಳದ್ದು. ಈ ತನ್ಮಾತ್ರಗಳದ್ದು  ಅಗೋಚರ ಸ್ಥಿತಿಯೇ, ಆದರೂ ಅತಿ ಸೂಕ್ಷ್ಮದ್ದಲ್ಲ. ಆದರೆ ತನ್ಮಾತ್ರಗಳಿಂದ ಉದಯಿಸುವ ‘ಪಂಚಮಹಾಭೂತ’5ಗಳು ಮಾತ್ರ ಅಗೋಚರವಲ್ಲ. ಅವು ಸ್ಥೂಲ (gross)ವಾಗಿವೆ. ಕಂಡು ಕೇಳಿ ಅನುಭವಿಸಬಹುದಾದಷ್ಟು ‘ಇಂದ್ರಿಯಗ್ರಾಹ್ಯ’ಗಳಾಗಿವೆ.  ಪ್ರಕೃತಿಯು ತನ್ನ ಸೂಕ್ಷ್ಮ ಅವ್ಯಕ್ತ ಸ್ಥಿತಿಯನ್ನು ತೊರೆದು  ಪಂಚಭೂತಗಳ ಈ ಸ್ಥೂಲಾವಸ್ಥೆಯನ್ನು  ತಲುಪುವವರೆಗೂ  ‘ಕಾಲ’,  ‘ದೇಶ’ಗಳಿಗೆ ಅಸ್ತಿತ್ವವಿಲ್ಲ. ಅನಂತರವೇ ಅವು ಸಂಗತ (relevant)ಎನಿಸುವುದು. ಅನಾದಿಯಾದ ತ್ರಿಗುಣಾತ್ಮಕ ಪ್ರಕೃತಿಯಲ್ಲಿನ  ‘ಸಂಘಾತ’, ‘ಪರಿಣಾಮ’ಗಳಿಂದ ಉತ್ಪತ್ತಿಗೊಳ್ಳುವ, ಸಾಮಾನ್ಯ ಅರಿವಿಗೆ ನಿಲುಕುವ, ಅಳೆಯಲು ಆಗುವ , ಕೇವಲ ಇಂದ್ರಿಯಗೋಚರ ದೃಶ್ಯಗಳಷ್ಟೇ ಆಗಿರುವ(phenomenal appearances) ‘ಕಾಲ’ ‘ದೇಶಗಳಿಗೆ’,  ಈ ಕಾರಣದಿಂದಾಗಿ, ‘ತತ್ವ’ದ(Ultimate principles) ಪ್ರಾಮುಖ್ಯತೆ ಇಲ್ಲ, ಇರಲಾರದು’’.  ಹೇಗಿದೆ ಸಾಂಖ್ಯರ ಈ ತರ್ಕ?

ಸಾಂಖ್ಯರು ಕಾಲ-ದೇಶಗಳನ್ನು  ಬುದ್ಧಿಯ ಪ್ರವೃತ್ತಿ, ಪ್ರಕ್ಷೇಪಗಳ (projections of intellect) ಫಲವೆಂದು ಬಗೆಯುವುದೂ ವೈಜ್ಞಾನಿಕವಾಗಿ ಗಮನಾರ್ಹವಾಗುತ್ತದೆ. ಪ್ರಕೃತಿ ಹಾಗೂ ಪುರುಷ6ರಿಬ್ಬರೂ  ಅನಾದಿಯಾಗಿರುವುದರಿಂದ ನೈಜವೂ ಸ್ವತಂತ್ರವೂ ಆದ ‘ಕಾಲ’ವೆಂಬುದು ಇರಲು ಸಾಧ್ಯವಿಲ್ಲ ಎಂಬುದು ಅವರ ವಾದ. ‘ವ್ಯಾಸಭಾಷ್ಯ’ ಎಂಬ  ಸಾಂಖ್ಯ-ಪಾತಂಜಲಿ  ಗ್ರಂಥದಲ್ಲಿ ಇದರ ವರ್ಣನೆ ಇದೆ. ಅದು ಹೀಗೆ – “ಕಾಲವು ಬುದ್ಧಿಯ ಕಲ್ಪನೆಯಿಂದ ಉಂಟಾದದ್ದು. ಮುಹೂರ್ತ, ದಿನ, ರಾತ್ರಿ ಮುಂತಾದ ರೂಪಗಳಲ್ಲಿ ಅದು ಅನುಭವಕ್ಕೆ ನಿಲುಕುತ್ತದೆ. ಇದಕ್ಕೆ ವಾಸ್ತವಿಕ ಅಸ್ತಿತ್ವವಿಲ್ಲ. ಏಕೆಂದರೆ ಅದು ಬುದ್ಧಿಯ ಕಲ್ಪನೆ7. ಲೋಕದ ವಿವಿಧ ದೃಶ್ಯಗಳಂತೆ ಕಾಣುವುದರಿಂದ ತಾನೂ ವಸ್ತುವಿನಂತೆ ಭಾಗವಾಗುತ್ತದೆ8, ‘ಕ್ಷಣ’ ಮತ್ತು ‘ಕ್ರಮ’ ಇವು ಅದರ ರೂಪಗಳು.  ‘ಕ್ಷಣ’ವು ವ್ಯತ್ಯಾಸ ಹೊಂದುವ ‘ಕ್ರಮ’ವನ್ನು ಅವಲಂಬಿಸಿದೆ. ಎರಡು ಕ್ರಮಗಳೂ, ಎರಡು ಕ್ಷಣಗಳೂ ಒಟ್ಟಿಗಿರಲು ಸಾಧ್ಯವಿಲ್ಲ. ಮೊದಲು ಮತ್ತು ನಂತರ ಎಂದೇ ಅವು ಇರಬೇಕಾಗುತ್ತವೆ. ವಾಸ್ತವಿಕವಾಗಿ ಇರುವುದು ‘ವರ್ತಮಾನ’ ಎಂಬುದೊಂದೇ ಕ್ಷಣ. ಹಿಂದಿನ ಮತ್ತು ಮುಂದಿನ ಕ್ಷಣಗಳಿಗೆ ಅಸ್ತಿತ್ವವಿಲ್ಲ9. ಹಿಂದೆ ಆದದ್ದು ಎಂದು ಭಾವಿಸಲ್ಪಡುವ  ಕ್ಷಣವು ಅದರ ಪರಿಣಾಮದಿಂದ ತಿಳಿಯಲ್ಪಟ್ಟದ್ದಾಗಿರುತ್ತದೆ. ಕ್ಷಣದ ಕಾರಣದಿಂದಲೇ ಲೋಕವು ಪರಿಣಾಮದ ಅನುಭವವನ್ನು  ಪಡೆಯುತ್ತದೆ. ದ್ರವ್ಯವನ್ನು (Matter) ಕಟ್ಟಕಡೆಯವರೆಗೆ ವಿಭಜಿಸಿದಾಗ ‘ಪರಮಾಣು’ವು ದೊರೆಯುವಂತೆ, ಕಾಲವನ್ನು  ಕಟ್ಟಕಡೆಯವರೆಗೆ ವಿಭಜಿಸಿದಾಗ ‘ಕ್ಷಣ’ ದೊರೆಯುತ್ತದೆ10, ಪರಮಾಣುವು ಯಾವ ಕಾಲದಲ್ಲಿ  ಚಲಿಸುವುದೋ, ಹಿಂದೆ ಇದ್ದ  ದೇಶವನ್ನು (Space) ತೊರೆದು ಮುಂದಿನ ದೇಶವನ್ನು ಹೊಂದುವುದೋ ಆ ಕಾಲವೇ ಕ್ಷಣ11. ಅಂತಹ ಚಲನೆಯು ವಿಚ್ಛೇದಿಸಲಾಗದ ಪ್ರವಾಹದೋಪಾದಿಯಲ್ಲಿದೆ. ಇದೇ ಅದರ ಕ್ರಮ12.”

ಸಾಂಖ್ಯರ ಈ ವಿವರಣೆಯನ್ನು ಆಧುನಿಕ ವಿಜ್ಞಾನವಾದಿಗಳು ಮೆಚ್ಚದಿರಲು  ಸಾಧ್ಯವೇ? ಗೌರವಿಸದಿರಲಾದೀತೇ? ಕಾಲ ದೇಶಗಳು ವಾಸ್ತವಿಕವಾಗಿರದೆ  ಕೇವಲ ಇಂದ್ರಿಯಾನುಭವ ಗಳಾಗಿವೆ ಎಂಬ ಸಾಂಖ್ಯ ವಿವರಣೆಯು  ಅವುಗಳ ಭಾಸಿಕ(illusory) ಹಾಗೂ ಸಾಪೇಕ್ಷ (reiative)  ಸ್ವರೂಪಕ್ಕೆ ನಿದರ್ಶಕವಲ್ಲವೇ? ಹಿಂದಿದ್ದ ದೇಶವನ್ನು  ತೊರೆದು  ಮುಂದಿನ ದೇಶವನ್ನು ಹೊಂದುವ  ಪರಮಾಣುವಿನ  ಹಾಗೂ ಅದರ ಮಾರ್ಗಕ್ರಮಣಕ್ಕೆ ಅಗತ್ಯವಾದ  ‘’ಪರಮಾಣು ಕಾಲ’ ಅಥವಾ ‘ಕ್ಷಣ’ದ ಸಾಂಖ್ಯ ಕಲ್ಪನೆಯು  ಯಾವ ಮಾನದಿಂದ ಅಳೆದರೂ  ಕಡಿಮೆಯ ಸಾಧನೆ ಎನ್ನಲು  ಸಾಧ್ಯವಾದೀತೆ? ಪೂರ್ವಾಗ್ರಹರಹಿತ ಮನದಿಂದ ಇದನ್ನು  ನಾವು  ವಿಮರ್ಶಿಸಬೇಕಾಗುತ್ತದೆ.

ತನ್ಮಾತ್ರ ಹಾಗೂ  ಕಾಲ ದೇಶಗಳು:

ಸಾಂಖ್ಯರು ದೇಶ-ಕಾಲಗಳನ್ನು  ವಾಸ್ತವಿಕ ತತ್ವಗಳಲ್ಲವೆಂದು  ತಿರಸ್ಕರಿಸಿದ್ದರೂ  ಇಂದ್ರಿಯಗ್ರಾಹ್ಯ ಜಗತ್ತಿನಲ್ಲಿ ಅವುಗಳ ಉಪಯುಕ್ತತೆಯನ್ನು  ಅಲ್ಲಗಳೆಯಲಿಲ್ಲ. ಬದಲಿಗೆ ಈ ಭಾಸಿಕ ಜಗತ್ತಿನ (illusory world) ಅಧ್ಯಯನಕ್ಕೆ ಈ ಭಾಸಿಕ ಸಂಗತಿಗಳನ್ನೇ ಬಳಸಿಕೊಂಡಿದ್ದಾರೆ. ಅದರಲ್ಲಿಯೂ  ಒಂದು ಆಶ್ಚರ್ಯಕರ ವೈಜ್ಞಾನಿಕ ಅಂಶವಿದೆ. ಅದೇನೆಂಬುದನ್ನು ಮುಂದಿನ ಲೇಖನದಲ್ಲಿ ವಿವರಿಸುವೆ.

  —————————————————————————————————————————————————–

 1. ಸಾಂಖ್ಯಶಾಸ್ತ್ರದಲ್ಲಿನ  ವೈಜ್ಞಾನಿಕ ಅಂಶಗಳನ್ನು  ಗುರುತಿಸಲು  ಹೊರಟ ಸಂದರ್ಭದಲ್ಲೇ ನಾವು ‘ಪ್ರಾಚೀನ ಹಿಂದು ಕಾಲಚಿಂತನೆ’ಯ ಈ ಪ್ರಕರಣದತ್ತ ಹೊರಳಿಬರಬೇಕಾಗಿ ಬಂತೆಂಬುದನ್ನು  ವಾಚಕರಿಗೆ ನೆನಪಿಸುವೆ.  (12ನೇ ಲೇಖನ ನೋಡಿ.) ಈವರೆಗೆ ಹಿಂದಿನ ನಾಲ್ಕು ಲೇಖನಗಳಲ್ಲಿ, ಆಧುನಿಕ ವೈಜ್ಞಾನಿಕರು ಹಾಗೂ ಪ್ರಾಚೀನ ಭಾರತದ ವಿವಿಧ ದಾರ್ಶನಿಕ ಚಿಂತಕರು  ಕಾಲವನ್ನು ಕುರಿತು ಹೊಂದಿದ್ದ ವಿಚಾರಗಳನ್ನು  ಸಂಗ್ರಹಿಸಿ ನೀಡಿರುವುದರ ಹಿನ್ನೆಲೆಯಲ್ಲಿ ಸಾಂಖ್ಯರ ‘ಕಾಲಚಿಂತನೆ’ಯು ನಮಗೆ ಸುಲಭವಾಗಿ  ಗ್ರಾಹ್ಯವಾದೀತೆಂದು  ಅನ್ನಿಸುತ್ತದೆ.
 2. ಈ ಪ್ರತಿಪಾದನೆಯು ‘ಯುಕ್ತಿದೀಪಿಕಾ’ ಎಂಬ ವಿಖ್ಯಾತ ಸಾಂಖ್ಯಗ್ರಂಥದ್ದು. ಸಾಂಖ್ಯಶಾಸ್ತ್ರದ ಪ್ರವರ್ತಕನಾದ ಮಹರ್ಷಿ ಕಪಿಲನ ನಂತರ, ಮುಂದೆ ಇನ್ನೊಬ್ಬ ವಿಖ್ಯಾತ ಸಾಂಖ್ಯ ಚಿಂತಕ ಈಶ್ವರಕೃಷ್ಣನು  ಉದಯಿಸುವವರೆಗೂ  ನಡುವೆ ಇದ್ದ ಸುದೀರ್ಘ ಅವಧಿಯಲ್ಲಿ  ಈ ‘ಯುಕ್ತಿದೀಪಿಕಾ’ ಗ್ರಂಥ ರಚನೆಯಾಗಿತ್ತು. ಸಾಂಖ್ಯಶಾಸ್ತ್ರ ವಿಕಾಸದ ಪ್ರಾರಂಭದ ಹಂತಗಳನ್ನು ಗುರುತಿಸಲು ನೆರವಾಗುವ ಆಧಾರಭೂತ ಗ್ರಂಥವೆಂಬ ಖ್ಯಾತಿ  ಇದರದು.
 3. ವಿವರಕ್ಕೆ – ಲೇ. 9, 10 ನೋಡಿ.
 4. ಶಬ್ದ, ಸ್ಪರ್ಶ, ರೂಪ, ರಸ, ಗಂಧ – ಈ ಐದು ತನ್ಮಾತ್ರಗಳು – ಲೇ. 11 ನೋಡಿ.
 5. ಶಬ್ದದಿಂದ  ‘ಆಕಾಶ’, ಸ್ಪರ್ಶದಿಂದ  ‘ವಾಯು’, ರೂಪದಿಂದ ‘ಅಗ್ನಿ’, ರಸದಿಂದ ‘ಅಪ್’, ಗಂಧದಿಂದ ‘ಪೃಥ್ವೀ’ ಈ ಐದು ಸ್ಥೂಲ ಮಹಾಭೂತಗಳು- ಲೇ. 11 ನೋಡಿ.
 6. ಲೇ. 9 ನೋಡಿ.
 7. ವಸ್ತುಶೂನ್ಯೋ ಬುದ್ಧಿ ನಿರ್ಮಾಣಃ | ಮುಹೂರ್ತಾ ಅಹೋರಾತ್ರಾದಯಃ, ಸಖಲ್ವಯಂ ಕಾಲಃ, ನಾಸ್ತಿವಸ್ತು ಸಮಾಹಾರ ಇತಿ.
 8. ಲೌಕಿಕಾನಾಂ ವ್ಯುತ್ಥಿತ ದರ್ಶನಾನಾಂ ವಸ್ತುರೂಪ ಇವ ಅವಭಾಸತೇ
 9. ನ ಚ ದ್ವೌ ಕ್ಷಣೌ ಸಹಭವತಃ ಕ್ರಮಶ್ಚ ನ ದ್ವಯೋಃ, ಪೂರ್ವಸ್ಮಾತ್ ಉತ್ತರ ಭಾವಿನೋ ಯದ್ ಅನಂತರ್ಯಂ, ಕ್ಷಣಸ್ಯ  ಸ ಕ್ರಮಃ, ತಸ್ಮಾತ್ ವರ್ತಮಾನ ಏವೈಕಃ ಕ್ಷಣಃ ನ ಪೂರ್ವೋತ್ತರ ಕ್ಷಣಾ ಸಂತೀತಿ
 10. ಯಥಾsಪಕರ್ಷಪರ್ಯಂತಂ ದ್ರವ್ಯಂ ಪರಮಾಣುಃ, ಏವಂ ಪರಮಾಕರ್ಷ ಪರ್ಯಂತಂ ಕಾಲಃ ಕ್ಷಣಃ
 11.  ಯಾವತಾ ವಾ ಸಮಯೇನ ಚಲಿತಃ ಪರಮಾಣುಃ ಪೂರ್ವದೇಶಂ ಜಹ್ಯಾತ್, ಉತ್ತರದೇಶಂ ಉಪ-ಸಂಪದ್ಯೇತ ಸಕಾಲಃ ಕ್ಷಣಃ
 12. ತತ್‍ಪ್ರವಾಹ ಅವಿಚ್ಛೇದಸ್ತು ಕ್ರಮಃ

                                                 ವ್ಯಾಸಭಾಷ್ಯ – ಸೂತ್ರ 52, ಪಾದ 3

 

 ———————————————————————————————————————————————————

 • ಡಾ. ಉಪೇಂದ್ರ ಶೆಣೈ

ಮುಂದುವರೆಯುವುದು

 

 

   

Leave a Reply