ಜಗದ್ಗುರು ಭಾರತ – 19

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 24.07.2014

ಪ್ರಾಚೀನ ಹಿಂದೂ ಕಾಲಜ್ಞಾನ-6

ಕಳೆದ ಲೇಖನದಲ್ಲಿ ಪ್ರಾಚೀನ ಭಾರತದ ಗಣ್ಯ ಚಿಂತಕರಾದ ಸಾಂಖ್ಯರು ‘ಕಾಲ’ದ ಕುರಿತಾಗಿ ಮಾಡಿದ ಚಿಂತನೆಯ ವೈಶಿಷ್ಟ್ಯಗಳನ್ನು ವಾಚಕರ ಗಮನಕ್ಕೆ ತರಲಾಗಿತ್ತು. ವೈದಿಕ ಋಷಿಗಳೂ, ಉಪನಿಷತ್ ಕಾಲದ ದ್ರಷ್ಟಾರರೂ ‘ಕಾಲ’ಕ್ಕೆ ದೈವಸ್ವರೂಪ ನೀಡಿದಂತೆ ಸಾಂಖ್ಯರು ನೀಡಲಿಲ್ಲವೆಂಬುದನ್ನು ಗಮನಿಸಿದೆವು. ಅಂತೆಯೇ ವೈಶೇಷಿಕ ಹಾಗೂ ಜೈನ ದಾರ್ಶನಿಕರು ಮಾಡಿದಂತೆ ‘ಕಾಲ’ವನ್ನು  ಸೃಷ್ಟಿಯ ಮೂಲತತ್ವಗಳಲ್ಲೊಂದು ಎಂದು ಸಾಂಖ್ಯರು ಪರಿಗಣಿಸಲಿಲ್ಲವೇಕೆ ಎಂಬುದನ್ನೂ ಕಂಡೆವು. “ಕಾಲವು ಬರಿಯ ಬುದ್ಧಿಯ ಕಲ್ಪನೆಯಿಂದ  ಹುಟ್ಟಿಕೊಂಡ ವಸ್ತುವೇ ವಿನಹ ಅದು ನೈಜ ಸತ್ಯವಲ್ಲ” ಎಂದು ವಾದಿಸಿದ್ದೂ ನಮ್ಮ ಗಮನಕ್ಕೆ ಬಂದಿತ್ತು. ಅಲ್ಲಿಂದ ಮುಂದುವರೆಯೋಣ.

 ತನ್ಮಾತ್ರಕ್ಕೆ ದೇಶ-ಕಾಲ-ನಿಮಿತ್ತ ಸಂಬಂಧ

‘ಕಾಲ’ವನ್ನು ವಾಸ್ತವಿಕ ತತ್ವವೆಂದು ಮನ್ನಿಸಲು ಸಾಂಖ್ಯರು ನಿರಾಕರಿಸಿದರಾದರೂ ಲೌಕಿಕ ವ್ಯವಹಾರದಲ್ಲಿ ಅವುಗಳಿಗಿರುವ ಉಪಯುಕ್ತತೆಯನ್ನು ಅವರು ಅಲ್ಲಗಳೆಯಲಿಲ್ಲ. ಬದಲಿಗೆ ಈ ಭಾಸಿಕ ಸಂಗತಿಗಳನ್ನು(illusory things)  ಈ ಭಾಸಿಕವೂ ಇಂದ್ರಿಯಗ್ರಾಹ್ಯವೂ ಆದ (illusory but perceptible universe) ಜಗತ್ತಿನ ಅಧ್ಯಯನ ಅಥವಾ ಅನುಭವ ಗಳಿಕೆಗಳಿಗೆ ಬಳಸಿಕೊಂಡರು1. ಅದು ಹೇಗೆ ಎಂಬುದನ್ನು  ನಾವರಿಯಲು  ಅವರ ಮೂಲ ಸಿದ್ಧಾಂತವನ್ನು  ಮತ್ತೆ ಇಲ್ಲಿ ನೆನಪಿಸಿಕೊಳ್ಳಬೇಕು2.

ಸೂಕ್ಷ್ಮ ಹಾಗೂ ಅವ್ಯಕ್ತ ಸ್ಥಿತಿಯಲ್ಲಿರುವ  ಪ್ರಕೃತಿಯು ಪುರುಷ ಪ್ರಭಾವಕ್ಕೆ ಒಳಪಟ್ಟು ಸೃಷ್ಟಿ ಅಥವಾ ನಿರ್ಮಾಣದ ಇಚ್ಛೆಯನ್ನು  ತಳೆಯುತ್ತದೆ. (urge to manifest)  ತನ್ನೊಳಗಿನ ಸತ್ವ-ರಜ-ತಮ ಈ ತ್ರಿಗುಣಗಳ ಕಾರಣದಿಂದ ವ್ಯಕ್ತವೂ ಸ್ಥೂಲವೂ ಆಗುತ್ತಾ ವಿವಿಧ ಹಂತಗಳನ್ನು  ದಾಟಿ ‘ತನ್ಮಾತ್ರಾವ್ಯವಸ್ಥೆ’ಯನ್ನು  (ಇಂದಿನ ಪರಿಭಾಷೆಯಲ್ಲಿ  ಇದನ್ನು  infra-atomic potential ಎಂದು ಸೂಚಿಸುವ ಮೂಲಕ ಅರ್ಥಮಾಡಿಕೊಳ್ಳಬಹುದು. ಏಕೆಂದರೆ ಇದರ ಮುಂದಿನ ಹಂತವೇ ವ್ಯಕ್ತ ಜಗತ್ತಿನ ಮೂಲತತ್ವಗಳಾದ  ಪಂಚಭೂತಗಳು.) ತಲುಪುತ್ತದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ  ಐದು ತನ್ಮಾತ್ರಗಳಿಂದ ಮುಂದಿನ ಹಂತದಲ್ಲಿ ಕ್ರಮವಾಗಿ  ಆಕಾಶ-ವಾಯು-ಅಗ್ನಿ-ಜಲ-ಪೃಥ್ವಿಗಳೆಂಬ ಐದುಭೂತಗಳ  ಸೃಷ್ಟಿಯಾಗುತ್ತದೆ. ಆದ್ದರಿಂದಲೇ ಇದನ್ನು ಪಾಂಚಭೌತಿಕ ಸೃಷ್ಟಿ ಎನ್ನುವುದು. ಇವುಗಳ ಹಿಂದಿನದಾದ ‘ತನ್ಮಾತ್ರಾವಸ್ಥೆಯವರೆಗೂ  ದೇಶ-ಕಾಲಗಳಿಲ್ಲ. ದೇಶ-ಕಾಲಗಳ ಕಲ್ಪನೆ ಪ್ರಸ್ತುತವೆನಿಸುವುದು ಏನಿದ್ದರೂ  ತನ್ಮಾತ್ರಾವಸ್ಥೆಯ ನಂತರ’ ಎಂದು ಸಾಂಖ್ಯರು ವಾದಿಸಿದರೆಂದು ನೋಡಿದ್ದೇವೆ.  ವಸ್ತುವಿನ  ಭೌತಿಕ ಅಸ್ತಿತ್ವವಿಲ್ಲದೇ ದೇಶವು  ಗಮನಕ್ಕೂ ಬಾರದು. ದೇಶವು ಇರುವಾಗ ಅದರಲ್ಲಿ ಉಂಟಾಗುವ  ಕ್ರಿಯಾ ಪರಿಣಾಮಗಳ ಫಲವಾಗಿ  ಕಾಲವನ್ನು  ಬುದ್ಧಿ ಕಲ್ಪಿಸುತ್ತದೆ ಎಂಬುದು ತಾತ್ಪರ್ಯ.

ತನ್ಮಾತ್ರಗಳಿಗೆ ಮೂರು ಬಗೆಯ – ‘ದೇಶಾವಚ್ಛಿನ್ನ-ಕಾಲಾವಚ್ಛಿನ್ನ ಹಾಗೂ ನಿಮಿತ್ತಾವಚ್ಛಿನ್ನ’ ಸಂಬಂಧಗಳಿವೆ ಎನ್ನುತ್ತಾರೆ ಸಾಂಖ್ಯರು. ಇಲ್ಲಿ ಅವಚ್ಛಿನ್ನ ಎಂಬ ಶಬ್ದಾರ್ಥ ಇಂದಿನ ವೈಜ್ಞಾನಿಕ ಅರಿವಿನ ದೃಷ್ಟಿಯಿಂದ ಗಮನಾರ್ಹವಾದುದು. ‘ಅತ್ಯಂತ ನಿಕಟ ಹಾಗೂ  ಅವಿಭಾಜ್ಯವಾದ ಸಂಬಂಧ’ (an intimate and inseperable relationship) ಎಂಬ  ಅರ್ಥ ಈ ಶಬ್ದದ್ದು.  ಇದರಿಂದಾಗಿ ದೇಶ-ಕಾಲ-ನಿಮಿತ್ತ (ಅಥವಾ ಬ್ರಹ್ಮಾಂಡದ ಮೂಲ ಕಾರಣ-original cause)ದೊಂದಿಗೆ ತನ್ಮಾತ್ರದ ಸಂಬಂಧ ಅತಿ ನಿಕಟವಾಗಿದೆ, ಬಿಡಿಸಲಾಗದಂತೆ ಅದು ಪರಸ್ಪರ ಬೆಸೆದುಕೊಂಡಿದೆ ಎಂದು ಸ್ಪಷ್ಟೀಕರಿಸಿದಂತಾಯಿತು. ಈ ತ್ರಯೀ ಸಂಬಂಧ ಇಲ್ಲದಿದ್ದರೆ ತನ್ಮಾತ್ರವನ್ನು ಗ್ರಹಿಸಲು ಸಾಧ್ಯವಿಲ್ಲ  ಎಂದಂತೆಯೂ ಆಯಿತು.

ಆಧುನಿಕ ಕಲ್ಪನೆಗೆ ಇದು ನಿಕಟ

ಈಗ ಇದರಲ್ಲಿ ಆಧುನಿಕ ವಿಜ್ಞಾನದ ಕಲ್ಪನೆಯೊಂದು  ಹೇಗೆ ಸ್ಪರ್ಶಿಸಲ್ಪಟ್ಟಿದೆ ಎಂಬುದನ್ನು ನೋಡಿ ! ನ್ಯೂಟನ್ ಮಹಾಶಯನ ಕಾಲದಿಂದ ಕಾಲ-ದೇಶಗಳನ್ನು ಪ್ರತ್ಯೇಕ ಹಾಗೂ ಸ್ವತಂತ್ರ ವಿಭುವಸ್ತುಗಳೆಂದು (Independent and absolute) ಪರಿಗಣಿಸಲ್ಪಡುತ್ತಿದ್ದ ರೆಂಬುದನ್ನು ಹಿಂದೆ ಗಮನಿಸಿದ್ದೇವೆ.  ಮೇರುವಿಜ್ಞಾನಿ ಐನ್‍ಸ್ಟೀನ್ ತನ್ನ ಸಾಪೇಕ್ಷ ಸಿದ್ಧಾಂತವನ್ನು ಮಂಡಿಸಿದ್ದರಿಂದಾಗಿ ಈ ಕಲ್ಪನೆ ಹೇಗೆ ತಲೆಕೆಳಗಾಯಿತೆಂಬುದನ್ನೂ ಗಮನಿಸಿದ್ದೇವೆ.3 ಆವರೆಗೆ ನಿರಂತರ ಕಾಲ  ಮತ್ತು ನಿರಂತರ ದೇಶಗಳ ಪ್ರತ್ಯೇಕ ಕಲ್ಪನೆ (Conception that continuums of time and space as seperate) ಇದ್ದದ್ದು ಹೋಗಿ ಹೊಸದಾಗಿ Concept of relative spacetime continuum)  ಅಥವಾ ಸಾಪೇಕ್ಷವಾದ ‘ನಿರಂತರ ಕಾಲ ದೇಶ‘ಗಳ ಕಲ್ಪನೆ ಮೂಡಿತು ಎಂಬುದನ್ನು  ಇಲ್ಲಿ ನೆನಪಿಸಿಕೊಳ್ಳಬೇಕು. ಈ ನಿರಂತರ ಕಾಲ-ದೇಶ-ಕಲ್ಪನೆ ಮೂಡುವುದಕ್ಕಿಂತಲೂ ಕನಿಷ್ಟ 20-30 ಶತಮಾನಗಳ  ಹಿಂದಿನ ಸಾಂಖ್ಯರು ಪದಾರ್ಥ ಅಥವಾ ದ್ರವ್ಯವು ತನ್ನ ಅತಿ ಸೂಕ್ಷ್ಮ ಸ್ಥಿತಿಯಲ್ಲಿಯೂ ಕಾಲ-ದೇಶಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಆ ಸಂಬಂಧ ಅವಿಭಾಜ್ಯವಾದುದು ಎಂದು ಹೇಳಿದ್ದು ಆಶ್ಚರ್ಯಕರವಲ್ಲವೇ? ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೂ ಇದೆ.  ಪಾಶ್ಚಿಮಾತ್ಯ ವಿಜ್ಞಾನಿಗಳು ಕೇವಲ ಕಾಲ-ದೇಶಗಳ ಸಾಪೇಕ್ಷ ಸಂಬಂಧ ಗಮನಿಸಿದ್ದಾರೆ. ಆದರೆ ಸಾಂಖ್ಯರು ಕಾಲ-ದೇಶಗಳ ಜೊತೆಗೆ ನಿಮಿತ್ತ(Original cause of universe)ವನ್ನು  ಸಾಪೇಕ್ಷ ಸಂಬಂಧದಲ್ಲಿ ಜೋಡಿಸಿದ್ದಾರೆ. ಐನ್‍ಸ್ಟೀನನ ಕಲ್ಪನೆಯಷ್ಟು  ಹರಿತವಾಗಿ  ಹಾಗೂ ವ್ಯಾವಹಾರಿಕ ಪ್ರಯೋಜನಕ್ಕಾಗಿ  ಉಪಯೋಗ ಬೀಳುವಂತೆ ಬೀಳುವಂತೆ ಈ ಸಾಪೇಕ್ಷ ಸಿದ್ಧಾಂತವು  ಸಾಂಖ್ಯರಿಂದ  ಕಲ್ಪಿಸಪಡಲಿಲ್ಲವೆಂಬುದು ನೂರಕ್ಕೆ ನೂರು  ನಿಜ. ಅದು ಅತಿ ಸ್ಥೂಲರೂಪದಲ್ಲಿ ಸಾಪೇಕ್ಷತೆಯನ್ನು  ಗುರುತಿಸಿದೆ. ಎಂದಮಾತ್ರಕ್ಕೆ ಅದಕ್ಕೆ ವೈಜ್ಞಾನಿಕ ಮಹತ್ವ  ಇಲ್ಲವೇ ಇಲ್ಲ ಎನ್ನಲು  ಬರುತ್ತದೆಯೇ?

ಜ್ಞಾನದ ಎರಡು ರೀತಿಗಳು

ಇಲ್ಲಿ ಆಧುನಿಕ ವಿಜ್ಞಾನ ಗಮನಿಸಬೇಕಾದ ಮತ್ತೊಂದು ಮಾತನ್ನು  ಉಲ್ಲೇಖಿಸಬೇಕಾಗು ತ್ತದೆ. ಅದಕ್ಕೆ ಮುಂಚೆ ಪೀಠಿಕೆಯಾಗಿ  ನಾಲ್ಕಾರು ಸಾಲುಗಳು.  ಕಾಲ ದೇಶಗಳ ಅಧ್ಯಯನವಾಗಲೀ ಅಥವಾ ಇನ್ನಾವುದೇ ಬಗೆಯ ಜ್ಞಾನವಾಗಲೀ ಅದನ್ನು ಗ್ರಹಿಸಲು ಬುದ್ಧಿಯ ಸಹಾಯ ಬೇಕು.  ಕಂಡು ಕೇಳಿದ್ದನ್ನು, ಅನುಭವಿಸಿದ್ದನ್ನು  ಬುದ್ಧಿಯು ಕಡೆದು ವಿಚಾರ ಅಥವಾ  ಜ್ಞಾನದ ಬೆಣ್ಣೆಯನ್ನು ಹೊರತೆಗೆಯುತ್ತದೆ. ಪ್ರಾಣಿಗಳಿಗೆ ಬುದ್ಧಿಯ ನೆರವು ಅಷ್ಟಾಗಿ  ಇಲ್ಲದ್ದರಿಂದ ಅವು ಸೃಷ್ಟಿ ಕ್ರಮದ ಕೆಳಹಂತಗಳಲ್ಲಿ  ಉಳಿದವು.  ಮಾನವ ಅದರ ಬಲದಿಂದ ಇಂದು ಶಿಖರದಲ್ಲಿ  ಮೆರೆಯುತ್ತಿದ್ದಾನೆ. ಜಗತ್ತಿನ ಜ್ಞಾನ ಆತನಿಗೆ ಸಾಧ್ಯವಾದದ್ದು, ವಿವಿಧ ವಿಜ್ಞಾನಶಾಸ್ತ್ರಗಳನ್ನೂ  ತಂತ್ರಜ್ಞಾನದ  ಪ್ರಾಕಾರಗಳನ್ನೂ  ಆತ ಆವಿಷ್ಕರಿಸಿ ಬೆಳೆಸಿದ್ದು  – ಆತನ  ಬುದ್ಧಿಬಲದ  ಸಾಧನೆಯೇ  ಎಂಬುದು ಸಾಮಾನ್ಯವಾಗಿ ಎಲ್ಲರೂ ಒಪ್ಪುವ ಮಾತು.

ಆದರೆ ಭಾರತದ ಪ್ರಾಚೀನ ಚಿಂತನ  ಮಹರ್ಷಿಗಳು ತಮ್ಮ ಅಧ್ಯಯನ ಹಾಗೂ  ಸಾಧನೆಯ  ಬಲದಿಂದ  ಇನ್ನೂ ಒಂದು ಹೆಜ್ಜೆ ಮುಂದೆ ಹೋದರು.  ಮನುಷ್ಯನು ಕೇವಲ  ಬುದ್ಧಿಬಲದಿಂದಷ್ಟೇ ಅಲ್ಲ,  ತನ್ನ ಅಂತಸ್ಫೂರ್ತಿಯಿಂದಲೂ ಜ್ಞಾನವನ್ನು ಪಡೆಯಬಲ್ಲ ಎಂಬುದನ್ನು ಅವರು ತೋರಿಸಿಕೊಟ್ಟರು. ಧ್ಯಾನ-ಸಮಾಧಿಗಳ ಯೋಗ ವಿಧಾನಗಳನ್ನು  ಈ ಎರಡನೆಯ ಬಗೆಯ  ಜ್ಞಾನದ ಗಳಿಕೆಗಾಗಿ  ಪರಿಷ್ಕರಿಸಿ ನೀಡಿದರು.  ಬುದ್ಧಿಗೆ ಜ್ಞಾನವನ್ನು ನಿರ್ಮಿಸಿ ಒದಗಿಸಲು ಕಣ್ಣು,  ಕಿವಿ ಇತ್ಯಾದಿ ಪಂಚೇಂದ್ರಿಯಗಳ ನೆರವು ಬೇಕೇ ಬೇಕು.   ಈ ಇಂದ್ರಿಯಗಳ ಅನುಭವವನ್ನೇ ಅದು ನೆಚ್ಚಿಕೊಂಡಿದೆ.  ಈ ಇಂದ್ರಿಯಾನುಭವ ಕಡಿಮೆಯಾದಲ್ಲಿ  ಜ್ಞಾನ ಕುಂಠಿತವಾಗುತ್ತದೆಂಬುದು ಪ್ರತ್ಯಕ್ಷ ಸತ್ಯ. ಆದರೆ ಧ್ಯಾನಮಗ್ನ ಸ್ಥಿತಿಯಲ್ಲಿ  ಇರುವಾತ ತನ್ನ ಇಂದ್ರಿಯಗಳ ನೆರವಿಲ್ಲದೆಯೇ ಜ್ಞಾನ ಪಡೆಯುತ್ತಾನೆ.  ಆದ್ದರಿಂದ ಇಂದ್ರಿಯಗಳ ಮೂಲಕ ಪಡೆಯುವ  ಜ್ಞಾನವೊಂದು, ಅವುಗಳ  ನೆರವಿಲ್ಲದೇ ಪಡೆಯುವುದು ಇನ್ನೊಂದು- ಹೀಗೆ ಜ್ಞಾನದಲ್ಲಿ  ಎರಡು ಭಾಗಗಳಾದವು. ಮೊದಲನೆಯ  ರೀತಿಗೆ ‘ಸವಿಕಲ್ಪಜ್ಞಾನ’ವೆಂದೂ (conceptual knowledge)  ಎರಡನೆಯದಕ್ಕೆ ‘ನಿರ್ವಿಕಲ್ಪಜ್ಞಾನ’ವೆಂದೂ (intuitive knowledge)  ಭಾರತೀಯ ಋಷಿಗಳು ಕರೆದಿದ್ದಾರೆ.

ಆಧುನಿಕ ವಿಜ್ಞಾನವು ಸವಿಕಲ್ಪಜ್ಞಾನದ(conceptual knowledge)  ಆಧಾರವನ್ನು  ಮಾತ್ರ ಸ್ವೀಕರಿಸಲು  ಒಪ್ಪುತ್ತದೆ. ನಿರ್ವಿಕಲ್ಪಜ್ಞಾನದ(intuitive knowledge)  ಅಸ್ತಿತ್ವವನ್ನೂ, ಅಗತ್ಯವನ್ನೂ  ಅದು ಒಪ್ಪುವುದಿಲ್ಲ. ಇದರಿಂದ ಅದು ಏನನ್ನು ಕಳೆದುಕೊಂಡಿತೆಂಬುದನ್ನು  ಅದೇ ಯೋಚಿಸಬೇಕು ಅಷ್ಟೇ.  ಅದರ ಈ ಸೀಮಿತ ಆಸಕ್ತಿಯು  ಸರಿಯೋ ತಪ್ಪೋ ಎಂಬ ಚರ್ಚೆ ನಮಗಿಲ್ಲಿ ಅಪ್ರಾಸಂಗಿಕ. ಆದರೆ ಜ್ಞಾನದ  ಗಳಿಕೆಗೆ ಎರಡು ಮಾರ್ಗಗಳಿವೆ.  ಈ ಎರಡು ಬಗೆಯ ಜ್ಞಾನದಲ್ಲಿಯೂ ಮಾನವನಿಗೆ  ಪ್ರಯೋಜನಕಾರಿಯಾದ ಊರುಗೋಲು ಸಿಗುತ್ತದೆ ಎಂಬ ನಮ್ಮ ಪ್ರಾಚೀನರ ಅಭಿಪ್ರಾಯವನ್ನು ಸ್ಪಷ್ಟಪಡಿಸುವದು ಮುಂದೆ ಹೇಳಲಿರುವ  ಅಂಶಕ್ಕಾಗಿ ಪ್ರಾಸಂಗಿಕವಾಯಿತು.

ನಿರ್ವಿಕಲ್ಪ ಪ್ರಜ್ಞೆಯ ಹಂತದಲ್ಲಿ ಕಾಲ-ದೇಶಗಳಿಲ್ಲ

ಸವಿಕಲ್ಪ ಜ್ಞಾನವನ್ನು ನೀಡುವ  ಬುದ್ಧಿಯ ಸ್ಥಿತಿಗೆ ‘ಸವಿಕಲ್ಪ ಪ್ರಜ್ಞೆ’ ಎಂದೂ ನಿರ್ವಿಕಲ್ಪಜ್ಞಾನವನ್ನು  ನೀಡುವುದಕ್ಕೆ ‘ನಿರ್ವಿಕಲ್ಪಪ್ರಜ್ಞೆ’ ಎಂದೂ ಹೇಳುತ್ತಾರೆ. ಸಾಂಖ್ಯರು ಸವಿಕಲ್ಪ ಪ್ರಜ್ಞೆಯ ಹಂತದಲ್ಲಿ   ಮಾತ್ರ ಕಾಲ-ದೇಶ-ನಿಮಿತ್ತಗಳು ವಾಸ್ತವಿಕ, ನಿರ್ವಿಕಲ್ಪ ಪ್ರಜ್ಞೆಯ ಹಂತದಲ್ಲಿ  ಅಲ್ಲ ಎಂದು ಸೂಚಿಸುತ್ತಾರೆ;  ನಿರ್ವಿಕಲ್ಪ ಪ್ರಜ್ಞಾಸ್ಥಿತಿಯಲ್ಲಿ ನಮಗೆ ಉಂಟಾಗುವ ಅರಿವು ಭಾಸಿಕ ವಸ್ತುಗಳದ್ದಲ್ಲ ನೈಜ ಸತ್ಯದ್ದು ಎನ್ನುತ್ತಾರೆ. ಈ ನೈಜ ಸತ್ಯವು ದೇಶ-ಕಾಲಾತೀತ ಎಂಬ ಅನುಭವ  ನಮಗಾಗುತ್ತದೆ ಎನ್ನುತ್ತಾರೆ. ಈ ಮಾತಿನ ಆಳ ಹಾಗೂ ವಾಸ್ತವಿಕತೆಯನ್ನು ಆಧುನಿಕ ವಿಜ್ಞಾನವು  ಇನ್ನೂ ಪರಿಶೀಲಿಸಿಯೇ ಇಲ್ಲ. ಹಾಗೆ ಪರಿಶೀಲಿಸದಿರುವುದು ಉಚಿತವಲ್ಲ. ಪರಿಶೀಲಿಸದೆಯೇ ನಿರ್ವಿಕಲ್ಪ ಪ್ರಜ್ಞೆಯ ಸಾಧ್ಯತೆಗಳನ್ನು (possibilities of intuitive knowledge) ಅಲ್ಲಗಳೆಯುವುದು, ಅದನ್ನು  ಲೆಖ್ಖಕ್ಕೇ ಹಿಡಿಯದಿರುವುದು ಅದಕ್ಕೆ ಶೋಭಿಸದು ಎಂದಿಷ್ಟೇ ಹೇಳಬೇಕಾಗುತ್ತದೆ.  ಹಾಗೆ ಪರಿಶೀಲಿಸಿದಾಗ ಅದರ ಕಾಲ-ದೇಶಗಳ ಕಲ್ಪನೆಯೂ ಗಮನಾರ್ಹವಾಗಿ  ವ್ಯತ್ಯಾಸ ಹೊಂದುವ ಸಾಧ್ಯತೆ ಇದೆ ಎನ್ನಬಹುದಲ್ಲವೇ

———————————————————————————————————————————————————

  1. 1.ಜಗತ್ತು ‘ಭಾಸಿಕ’ ಎಂಬ ಕಲ್ಪನೆಯ ವೈಶಿಷ್ಟ್ಯ ‘ವೇದಾಂತದರ್ಶನ’ದ್ದು ‘ಮಾಯೆ’ಯ ಕಾರಣದಿಂದ ಕಾಣುವ ನೋಟ ಈ ಜಗತ್ತು ಎಂಬ ಅದರ ಪ್ರತಿಪಾದನೆಗೂ ಇಂದಿನ (Sub-atomic physics) ಕಲ್ಪನೆಗಳಿಗೂ ಇರುವ  ಸ್ಥೂಲಸಾಮ್ಯಗಳು ಈಚೆಗೆ ಬೆಳಕಿಗೆ ಬರತೊಡಗಿವೆ.  ಸಾಂಖ್ಯರು ಜಗತ್ತನ್ನು  ‘ಭಾಸಿಕ’ ಎಂದಿಲ್ಲ, ಆದರೆ ಕಣ್ಣಿಗೆ ಕಾಣುವುದು ಪ್ರಕೃತಿಯಲ್ಲಿನ ಸತ್ವ-ರಜ-ತಮ ಈ ತ್ರಿಗುಣಗಳ ವಿವಿಧ ಪ್ರಮಾಣದ ‘ಸಂಘಾತ ಮತ್ತು ಪರಿಣಾಮ(Combination and effective change)ದ ಫಲ ಎಂದು ಹೇಳಿ, ಅವ್ಯಕ್ತದಿಂದ ವ್ಯಕ್ತದೆಡೆಗೆ ಸಾಗಿಬಂದದ್ದು ಸಾಗುತ್ತಿರುವುದು ಅವ್ಯಕ್ತದೆಡೆಗೆ ಎಂದೂ ಹೇಳುವ  ಮೂಲಕ ಕಣ್ಣಿಗೆ ಕಾಣುವುದು ಸ್ಥಿರವಲ್ಲ ಎಂದು ಪ್ರತಿಪಾದಿಸುತ್ತಾರೆ.
  2. 2. ಲೇಖಾಂಕ 11 ನೋಡಿ.

————————————————————————————————————————————————————

  • ಡಾ. ಉಪೇಂದ್ರ ಶೆಣೈ
   

Leave a Reply