ಜಗದ್ಗುರು ಭಾರತ ಭಾಗ – 11

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 12.07.2014

ಕಪಿಲಮುನಿಯ ‘ಸಾಂಖ್ಯಶಾಸ್ತ್ರ’- 3

ಪ್ರಕೃತಿಯು ‘ತ್ರಿಗುಣಾತ್ಮಕ’ ಎಂಬ ಸಾಂಖ್ಯ ಕಲ್ಪನೆಯನ್ನು  ಆಧುನಿಕ ಪರಿಭಾಷೆಯಲ್ಲಿಡಲು ಹಿಂದಿನ ಲೇಖನದಲ್ಲಿ ಪ್ರಯತ್ನಿಸಲಾಗಿತ್ತು.  ಅಂತೆಯೇ ಈ ತ್ರಿಗುಣಾತ್ಮಕ ಪ್ರಕೃತಿಯು  ಸೃಷ್ಟಿಗೆ ಮುನ್ನ ಅವ್ಯಕ್ತ ಸ್ಥಿತಿಯಲ್ಲಿರುವುದೆಂದೂ, ಸೃಷ್ಟಿಕ್ರಿಯೆಯು ಆರಂಭಗೊಂಡಾಗ ಅದು ತನ್ನ ಅವ್ಯಕ್ತ ಸ್ಥಿತಿಯನ್ನು ತೊರೆದು , ವ್ಯಕ್ತಗೊಳ್ಳುವುದೆಂದೂ ಸಾಂಖ್ಯರು ಪ್ರತಿಪಾದಿಸುತ್ತಿದ್ದರೆಂದು ತಿಳಿಸಲಾಗಿತ್ತು. ಈಗ, ಪ್ರಕೃತಿಯು ತನ್ನ ಅವ್ಯಕ್ತ ಸ್ಥಿತಿಯನ್ನು   ತೊರೆದು  ಸೃಷ್ಟಿಕ್ರಿಯೆಯನ್ನು  ಪ್ರಾರಂಭಿಸುವುದೇಕೆ? ಮತ್ತು ವೈವಿಧ್ಯಮಯ ವಸ್ತುಗಳ ವರ್ಣರಂಜಿತ  ವಿಶ್ವವು ಈ ಪ್ರಕೃತಿಯಿಂದ ಹೊಮ್ಮಿಬರುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಸಾಂಖ್ಯರು  ನೀಡಿರುವ ತರ್ಕಬದ್ಧ  ಉತ್ತರಗಳನ್ನು ತಿಳಿಯೋಣ.

ತ್ರಿಗುಣಗಳ ಸಾಮ್ಯಾವಸ್ಥೆ

ಮೊದಲಾಗಿ, ಪ್ರಕೃತಿಯ ಅವ್ಯಕ್ತ ಸ್ಥಿತಿಯನ್ನು  ಕುರಿತ ಸಾಂಖ್ಯಕಲ್ಪನೆಯೇ ಎಷ್ಟು ಸ್ವಾರಸ್ಯಕರವೆಂಬುದನ್ನು ನೋಡಿ. ಈ ಸ್ಥಿತಿಯಲ್ಲಿ ಅದು ನಿರಾಕಾರವಾಗಿ (Formless), ಆದ್ದರಿಂದಲೇ ಅಗೋಚರವೂ  ಅವ್ಯಕ್ತವೂ ಅಗಿ (Unseen, Unmanifest)  ತೋರಲು  ಕಾರಣ, ಅದರಲ್ಲಿರುವ ತ್ರಿಗುಣಗಳ ‘ಸಾಮ್ಯಾವಸ್ಥೆ’ ಅಥವಾ ಸಮತೋಲಸ್ಥಿತಿ (Condition of equilibrium or equipoise). ಸತ್ವದ ಅಭಿವ್ಯಕ್ತಿಯ ಇಚ್ಛೆ (Tendency to manifest), ರಜದ ಕ್ರಿಯಾಶೀಲತೆ (Kinetic  energy) ಇವುಗಳು ತಮದ ಜಡತೆಯಿಂದ (Inertia) ಸರಿಗಟ್ಟಲ್ಪಟ್ಟ ಸ್ಥಿತಿ ಅದು.1  ಈ ಸ್ಥಿತಿಯಲ್ಲಿ  ಸೃಷ್ಟಿಕ್ರಿಯೆ ಅಡಗುತ್ತದೆ, ಸ್ಥಗಿತಗೊಳ್ಳುತ್ತದೆ ಎನ್ನುವ  ಸಾಂಖ್ಯರ  ಈ ತರ್ಕಬದ್ಧತೆ ಮೆಚ್ಚಬೇಕಾದದ್ದು ತಾನೇ?

ಈ ಸಾಮ್ಯಾವಸ್ಥೆಯ ಭಂಗ ‘ಪುರುಷ’ ಪ್ರಭಾವದಿಂದ

 ಈ ತರ್ಕದಂತೆ, ಸತ್ವ, ರಜ, ತಮಗಳ ಈ ಸಮತೋಲ ಸ‍್ಥಿತಿಯು  ಭಂಗಗೊಳ್ಳದೇ  ಸೃಷ್ಟಿಕ್ರಿಯೆಯು ಆರಂಭಗೊಳ್ಳಲು ಸಾಧ್ಯವಿಲ್ಲ.  ಈ ಸಾಮ್ಯಾವಸ್ಥೆಯನ್ನು ಭಂಗಿಸಿ  ಪ್ರಕೃತಿಯು ಸೃಷ್ಟಿಕ್ರಿಯೆಯಲ್ಲಿ  ತೊಡಗುವಂತೆ  ಮಾಡಲು ಆ ಪ್ರಕೃತಿಗೆ ಹೊರತಾದ ಇನ್ನೊಂದು ಪ್ರಚೋದಕ ಪ್ರಭಾವ ಬೇಕು. ಆ ಪ್ರಭಾವವೇ ‘ಪುರುಷ’ ಎಂಬ ಪ್ರಕೃತಿಗೆ ಅತೀತವಾದ ತತ್ವ ಎನ್ನುತ್ತಾರೆ ಸಾಂಖ್ಯರು. ಅವರು ಹೇಳುವಂತೆ ಈ ಪುರುಷತತ್ವವು ನಿರಾಕಾರವಾದುದು(Formless). ಪ್ರಕೃತಿಯು ತ್ರಿಗುಣಾತ್ಮಕವಾದರೆ ಪುರುಷ ತತ್ವವು ನಿರ್ಗುಣವಾದುದು (Without attributes). ಆದ್ದರಿಂದಲೇ ಅದು ಅಗೋಚರ(Unseen). ಅದು ಪ್ರಕೃತಿಯಂತೆಯೇ  ನಿತ್ಯ (Eternal)ವಾದರೂ, ಸೃಷ್ಟಿಕ್ರಿಯೆಯಲ್ಲಿ ನಾನಾ ಆಕಾರಗಳನ್ನು ಧರಿಸುವ ಪ್ರಕೃತಿಯಂತಲ್ಲದಿರುವುದರಿಂದ ಅದು ಅವಿಕಾರಿ(Unchanging).  ಪ್ರಕೃತಿಗೆ  ಸೃಷ್ಟಿಕ್ರಿಯೆಯಲ್ಲಿ ತೊಡಗಲು ಬೇಕಾದ  ಪ್ರಚೋದನೆಯನ್ನು  ನೀಡುವ (Catalystic) ಕೆಲಸ ಬಿಟ್ಟರೆ, ಅದಕ್ಕೆ ಸೃಷ್ಟಿಕ್ರಿಯೆಯಲ್ಲಿ ಇನ್ನಾವ ಪಾತ್ರವೂ ಇಲ್ಲ. ಜಗದ್ವಿಲಾಸ, ದೃಶ್ಯವೈಭವಗಳೆಲ್ಲವನ್ನೂ ಸೃಷ್ಟಿಸುವುದು  ಕೇವಲ ಪ್ರಕೃತಿಯ ಕೆಲಸ.  ಪುರುಷ ತತ್ವವೇನಿದ್ದರೂ ಈ ಸಂತೆಯಲ್ಲಿ ತಾನಿಲ್ಲದಂತಿದ್ದು, ಅದನ್ನು  ‘ಸಾಕ್ಷಿ’ಯಾಗಿ ನೋಡುತ್ತದೆ, ಅಷ್ಟೇ.

ಸೃಷ್ಟಿಯ ಆರಂಭ

ಪ್ರಕೃತಿಗೆ ಅತೀತವಾದ ಈ ‘ಪುರುಷ’ ಪ್ರಭಾವದಿಂದ ತ್ರಿಗುಣಗಳ ಸಾಮ್ಯಾವಸ್ಥೆ  ಭಂಗಿಸಲ್ಪಡುತ್ತದೆ.  ಈ ಭಂಜನೆಯು  ವಾಸ್ತವಿಕವಾಗಿ ಹೇಗೆ ನಡೆಯುತ್ತದೆಂಬುದನ್ನು ಸಾಂಖ್ಯರು ವಿವರಿಸಿಲ್ಲ. ಪ್ರಾಯಶಃ ಪ್ರತಿಯೊಂದು  ತಾತ್ವಿಕ ಅಥವಾ ವೈಜ್ಞಾನಿಕ ಶಾಸ್ತ್ರದಲ್ಲಿಯೂ  ಇರುವ ಅನುತ್ತರಿತ ’ಶೇಷಪ್ರಶ್ನೆ’ಗಳಂತೆ ಇದೂ ಒಂದು. ಈ ಸಿಕ್ಕನ್ನು ಬಿಟ್ಟರೆ, ಮುಂದಿನದೆಲ್ಲವೂ  ಸುಲಲಿತವಾಗಿ ಸಾಗುತ್ತದೆ. ಸಾಮ್ಯಾವಸ್ಥೆಯು ಕೊನೆಗೊಂಡಾಗ ಸೃಷ್ಟಿಯ ಆರಂಭ. ಅದು ಮುಂದುವರೆಯುವುದು  ತ್ರಿಗುಣಗಳಿಂದ. ಸತ್ವದ ಅಭಿವ್ಯಕ್ತಿಯ ಬಯಕೆಯು ರಜದ ಕ್ರಿಯಾಶೀಲತೆಯ ಸಹಾಯದಿಂದಾಗಿ ತಮೋಜನ್ಯವಾದ ಪದಾರ್ಥ(Mass)ದಲ್ಲಿ  ಪ್ರವರ್ತಿಸುವುದರಿಂದ ಹಂತಹಂತವಾಗಿ  ಜಗತ್ತು ಗೋಚರಿಸತೊಡಗುತ್ತದೆ. ತ್ರಿಗುಣಗಳಿಗೆ ಸದಾ ಪರಸ್ಪರ ಬೆರೆಯುವ, ಬೇರ್ಪಡುವ, ತಿರುಗಿ ಬೆರೆಯುವ ಸ್ವಭಾವವಿದೆ2. ಇದರಿಂದಾಗಿ ವಿವಿಧ ಪ್ರಮಾಣಗಳಲ್ಲಿ  ಅವುಗಳ ವಿಚಿತ್ರ ಸಂಯೋಗಗಳು ಸಾಧ್ಯವಾಗುತ್ತವೆ. ವಿಶ್ವದಲ್ಲಿನ ಪ್ರತಿಯೊಂದು  ವಸ್ತುವೂ  ಈ ತ್ರಿಗುಣಗಳು(Intelligent essence, Kinetic energy and Mass)   ನಿರ್ದಿಷ್ಟ ಪ್ರಮಾಣದಲ್ಲಿ  ಸಾಧಿಸಿದ  ಸಮ್ಮಿಶ್ರಣ, ಪರಸ್ಪರಾವಲಂಬನೆ (Interdependence), ಪರಸ್ಪರ ಪ್ರಭಾವ (Mutual interaction)  ಹಾಗೂ ವಿಚಿತ್ರ ಸಂಯೋಗ (Peculiar Combination)ಗಳ ಫಲವಾಗಿ ಮೈತಾಳುತ್ತದೆ.  ಮೂಲದ ಸಮತೋಲವು ಹದಗೆಟ್ಟಾಗ ಪ್ರಕೃತಿ ವ್ಯವಸ್ಥೆಯ (Nature System)  ವಿವಿಧ ಭಾಗಗಳಲ್ಲಿ  ಅಸಮಾನ  ಒತ್ತಡಗಳು  ಏರಲ್ಪಡುತ್ತವೆ.  ಆಗ ಸತ್ವ, ರಜ, ತಮಗಳು ವಿವಿಧ  ಪ್ರಮಾಣದಲ್ಲಿ  ಜತೆಗೂಡಿ  ರಚನೆಗೆ ತೊಡಗುತ್ತವೆ.  ಇದರಿಂದಾಗಿ ಮೂಡಿಬರುವ  ರಚಿತ ವಸ್ತುಗಳಿಗೆ ‘ಸಮುದಯ’ ಎಂದು ಹೆಸರು. ಅವು ಮೂಡಿಬರುವ  ವೇಳೆಯಲ್ಲಿ  ಯಾವುದಾದರೊಂದು  ಗುಣವು  ಪ್ರಧಾನವಾಗಿಯೂ, ಉಳಿದೆರಡು ಸಹಕಾರಿಗಳಾಗಿಯೂ ಇರುತ್ತವೆ.

ಸೃಷ್ಟಿವಿಕಾಸವನ್ನು (Evolution) ಸಾಂಖ್ಯರು ‘ಪರಿಣಾಮ’ ಎಂಬ ಪಾರಿಭಾಷಿಕ ಶಬ್ದದಿಂದ  ಕರೆದಿದ್ದಾರೆ. ‘ಪರಿಣಾಮ’ವು ಮೊದಲು ಅಖಂಡವಾಗಿದ್ದ (integrated)  ಪ್ರಕೃತಿಯಲ್ಲಿ  ಈಗ ಉಂಟಾದ  ಭೇದದ ಫಲವೆಂದೂ, ಸಾಮ್ಯಾವಸ್ಥೆಯಲ್ಲಿದ್ದುದು  ಈಗ ವೈಷಮ್ಯಾವಸ್ಥೆಗೆ ತಲುಪಿತೆಂದೂ, ಅವಿಶೇಷವಾಗಿದ್ದುದು (undifferentiated)  ಈಗ ವಿಶಿಷ್ಟವಾಯಿತೆಂದೂ (differentiated), ಅಸಂಗತವಾದದ್ದು (‘ಅಯುತಸಿದ್ಧ’=incoherent) ಈಗ ಸಂಗತವಾಯಿತೆಂದೂ (ಯುತಸಿದ್ಧ=coherent), ಅವರು ಪ್ರತಿಪಾದಿಸುತ್ತಾರೆ.

“ಈ ಸೃಷ್ಟಿವಿಕಾಸವು ಅನುಲ್ಲಂಘ್ಯವಾದ ಒಂದು ನಿರ್ದಿಷ್ಟ ನಿಯಮವನ್ನು  ಅನುಸರಿಸಿ  ಸಾಗಿರುವ  ಪ್ರಕ್ರಿಯೆ” ಎಂದು ಸಾಂಖ್ಯರು  ಸ್ಪಷ್ಟವಾಗಿ ಸೂಚಿಸಿದ್ದಾರೆ.  ಇದನ್ನು ಅವರು3 ‘ಪರಿಣಾಮಕ್ರಮ ನಿಯಮ’ ಎಂದು ಹೆಸರಿಸಿದ್ದಾರೆ. ವಾಸ್ತವಿಕವಾಗಿ ವಿಜ್ಞಾನಶಾಸ್ತ್ರದ ಅಡಿಪಾಯವು  ಈ ನಿಯಮವನ್ನು ಸಾರಿದಾಗಲೇ ಬಿತ್ತು ಎಂದು ಹೇಳುವುದು ಉತ್ಪ್ರೇಕ್ಷೆಯಾಗದು. ಏಕೆಂದರೆ ಸೃಷ್ಟಿಯು  ನಿಯಮಬದ್ಧವಾಗಿದೆ ಎಂದು  ಒಪ್ಪಿ, ಆ ನಿಯಮಗಳ ಅನ್ವೇಷಣೆಗೆ ಮಾವವನು ಹೊರಟಂದೇ ವಿಜ್ಞಾನ ಹುಟ್ಟಿತೆಂಬುದು  ತರ್ಕಸಂಗತವಾಗುತ್ತದೆ.  ಸಾಂಖ್ಯರಿಗೂ ಮುಂಚೆ  ಜಗತ್ತಿನ ಇತರೆಡೆಗಳಲ್ಲಿ  ಈ ‘ಅನುಲ್ಲಂಘ್ಯ ಸೃಷ್ಟಿ ನಿಯಮ’ದ ಬಗ್ಗೆ ಇತರರು  ಮಾತನ್ನಾಡಿದ  ಪುರಾವೆಗಳಿಲ್ಲ. ಆದುದರಿಂದ ಈ ಸೀಮಿತ   ಅರ್ಥದಲ್ಲಿ  ‘ವಿಜ್ಞಾನದ ಅಡಿಪಾಯವು ಭಾರತದಲ್ಲೇ  ಬಿತ್ತು’ ಎಂದು ಹೇಳುವುದು ತಪ್ಪಾಗದು.

ಸಾಂಖ್ಯರ ತಾರ್ಕಿಕತೆಯ  ಪ್ರೌಢಿಮೆಯನ್ನು ನಿದರ್ಶಿಸುವ  ಇನ್ನೊಂದು ಸಾಕ್ಷ್ಯವನ್ನು ನೋಡಿ. “ಸೃಷ್ಟಿಯು ಅನುಕ್ರಮ ವಿಕಾಸದ (Orderly succession) ಫಲ ಆದರೆ ಒಂದು  ಸಮಗ್ರ ಅಸ್ತಿತ್ವವು  ವಿಕಸಿತಗೊಳ್ಳುತ್ತಾ ತನ್ನ   ವಿಭಿನ್ನ ಅಂಗಗಳನ್ನು  ಸ್ಪಷ್ಟವಾಗಿ  ಅಭಿವ್ಯಕ್ತಪಡಿಸುತ್ತಾ ಮುನ್ನಡೆದಿದೆ (from the whole to the parts) ಎಂದಾಗಲೀ  ಅಥವಾ ವಿಭಿನ್ನ ಅಂಗಗಳೇ  ರೂಪುಗೊಂಡು  ಒಂದು ಸಮಗ್ರತೆಯತ್ತ ವಿಕಾಸ  ಹೊಂದುತ್ತಿದೆ ಎಂದಾಗಲೀ (from the parts towards the whole)  ಈ ಅನುಕ್ರಮವು  ಸೂಚಿಸುತ್ತಿಲ್ಲ. ಅದರ  ಬದಲಾಗಿ, ಕಡಿಮೆ  ವೈಲಕ್ಷಣ್ಯ, ಕಡಿಮೆ  ನಿರ್ದಿಷ್ಟತೆ, ಕಡಿಮೆ ಸಂಬದ್ಧತೆಗಳ (Less differentiated, less determined and less coherent)  ಸ್ಥಿತಿಯಲ್ಲಿರುವ  ಸಮಗ್ರ ಅಸ್ತಿತ್ವವು  ಹೆಚ್ಚು  ವೈಲಕ್ಷಣ್ಯ, ಹೆಚ್ಚು  ನಿರ್ದಿಷ್ಟತೆ  ಹೆಚ್ಚು ಸಂಬದ್ಧತೆಗಳ ಸಮಗ್ರ ಅಸ್ತಿತ್ವವಾಗುವತ್ತ ಮುನ್ನಡೆದಿದೆ’’- ಇದು ಸಾಂಖ್ಯರ ಅಭಿಮತ. ಕಾಲದ  ತಕ್ಕಡಿಯಲ್ಲಿ  ಬೆಲೆ ಕಳೆದುಕೊಳ್ಳದೇ ತೂಗುವ  ಪ್ರೌಢ ವಿಚಾರವಿದು ಎಂಬುದನ್ನು  ಹೇಳದಿರಲು ಆದೀತೇ?

ಕಾರ್ಯಕಾರಣವಾದ

ಸಾಂಖ್ಯರು ‘ಕಾರ್ಯಕಾರಣವಾದ’ದಲ್ಲಿ  ಶ್ರದ್ಧೆ (Cause and effect theory) ಇರಿಸುವವರು. ಇದೂ ವೈಜ್ಞಾನಿಕ  ಮಹತ್ವದ  ವೈಶಿಷ್ಟ್ಯವೇ ಎಂಬುದನ್ನು  ಗಮನಿಸಬೇಕು . ಸಾಂಖ್ಯರ ಈ ಕಾರ್ಯಕಾರಣವಾದವನ್ನು  ‘ಸತ್ಕಾರ್ಯವಾದ’ ಎಂದು ಹೇಳುವುದೂ ಉಂಟು. “ಕಾರಣದಲ್ಲಿರುವುದೇ ಕಾರ್ಯರೂಪವನ್ನು ತಳೆಯುತ್ತದೆ. ಬೀಜ ದಲ್ಲಿ ಅವ್ಯಕ್ತವಾಗಿ  ಅಡಗಿರುವುದೇ ಮೊಳಕೆಯಾಗಿ  ವ್ಯಕ್ತವಾಗುತ್ತದೆ.  ಮೊಳಕೆಯಲ್ಲಿದ್ದರೂ   ಆ ಸ್ಥಿತಿಯಲ್ಲಿ  ಗೋಚರಿಸದಿರುವುದು ಮರವಾದಾಗ ಅಭಿವ್ಯಕ್ತವಾಗುತ್ತದೆ.  ಮುಖ್ಯವಾಗಿ ಅದು ಬೀಜದಲ್ಲಿರಬೇಕು, ಅಷ್ಟೇ. ಕಾರಣದಲ್ಲಿ ಇಲ್ಲದಿರುವುದನ್ನು  ಯಾವ  ಬ್ರಹ್ಮನೂ  ಕಾರ್ಯರೂಪದಲ್ಲಿ  ತರಲಾರ.  ಇಷ್ಟೇ  ಅಲ್ಲ,   ಇಂಥ ಕಾರ್ಯಕ್ಕೆ ಇಂತಹುದೇ  ಕಾರಣವೆಂಬುದೂ  ಸ್ಪಷ್ಟ. ಎಳ್ಳೆಣ್ಣೆ ಎಂಬ ಕಾರ್ಯವನ್ನು ಪಡೆಯಲು  ಎಳ್ಳೆಣ್ಣೆ ಅರೆಯಬೇಕು. ಮರಳನ್ನು  ಅರೆದು ಎಣ್ಣೆ ತೆಗೆಯಲು ಆಗದು.’’ ಇವೆಲ್ಲವೂ  ಸಾಂಖ್ಯರ ವಾದ ವೈಖರಿ. ಈ ಕಾರ್ಯ-ಕಾರಣವಾದದ ಅಧೀನವಾಗಿಯೇ ವಿವಿಧ ಹಂತಗಳಲ್ಲಿ ಸೃಷ್ಟಿಯು ಗೋಚರಿಸಿತು. ಅವ್ಯಕ್ತದಲ್ಲಿ ಬೀಜರೂಪದಲ್ಲಿದ್ದುದು ಸೃಷ್ಟಿಯ ವೈಭವವಿಲಾಸವಾಗಿ ಗೋಚರಿಸಿ ವಿಸ್ತರಿಸಿತು. ವಿಸ್ತರಿಸುತ್ತಲೇ ಇದೆ’’ ಎಂಬುದು ಸಾಂಖ್ಯರ ಸುಸ್ಪಷ್ಟ ಅಭಿಮತ.

———————————————————————————————————————————————————

1.ಸತ್ವರಜಸ್ತಮಸಾಂ ಸಾಮ್ಯಾವಸ್ಥಾ – ಅನ್ಯೂನಾನತಿ ರಿಕ್ತಾವಸ್ಥಾ – ಅನ್ಯೂನಾಧಿಕ ಭಾವೇನ ಅಸಂಹತಾವಸ್ಥಾ- ಅಕಾರ್ಯಾವಸ್ಥಾ ಇತಿ ನಿಷ್ಕರ್ಷಃ – ವಿಜ್ಞಾನ ಭಿಕ್ಷು,  ಪ್ರವಚನ ಭಾಷ್ಯ, ಅಧ್ಯಾಯ 1, ಸೂತ್ರ 61.

2.ಏತೇ ಗುಣಾಃ ಪರಸ್ಪರೋಪರಕ್ತಪ್ರವಿಭಾಗಾಃ ಸಂಯೋಗ ವಿಭಾಗ  ಧರ್ಮಾಣಃ ಇತರೇತರೋಪಾಶ್ರಯೇಣ ಉಪಾರ್ಜಿತ ಮೂರ್ತಯಃ – ವ್ಯಾಸ ಭಾಷ್ಯ.

3.ಅವರಿಗೆ ಮುಂಚೆ ಋಗ್ವೇದದ ಋಷಿಗಳು ‘ಋತ’ ಎಂಬ ಹೆಸರಿನಿಂದ ಸೃಷ್ಟಿಯನ್ನು  ನಿಯಂತ್ರಿಸುವ  ನಿಯಮವನ್ನು  ಹೆಸರಿಸಿದ್ದರೆಂಬುದನ್ನು ಲೇಖನಮಾಲೆಯಲ್ಲಿ ಈ ಹಿಂದೆ ಸ್ಪಷ್ಟಪಡಿಸಲಾಗಿದೆ.

 ——————————————————————————————————————————————————-

ಲೇಖಕರು: ಡಾ. ಉಪೇಂದ್ರ ಶೆಣೈ

ಮುಂದುವರೆಯುವುದು

 

   

Leave a Reply