ಜಗದ್ಗುರು ಭಾರತ ಭಾಗ -12

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 13.07.2014

ಕಪಿಲಮುನಿಯ ‘ಸಾಂಖ್ಯಶಾಸ್ತ್ರ’ -5

ಆಧುನಿಕ  ವೈಜ್ಞಾನಿಕ ಮನೋಭಾವದವರಾದ ನಾವು, ನಮ್ಮ ಇಂದಿನ  ವೈಶ್ವಿಕ ಕಲ್ಪನೆಗೆ (World-view) ಸರಿಹೊಂದದಿರುವುದರಿಂದ ಸಾಂಖ್ಯರ ಸೃಷ್ಟಿ ವಿಜ್ಞಾನವನ್ನು  ತಿರಸ್ಕರಿಸುವೆವಾದರೂ ಅದರಲ್ಲಿ ಹುದುಗಿರುವ, ಆಧುನಿಕ ವಿಜ್ಞಾನಕ್ಕೂ ಸಮ್ಮತವಾದ ಅನೇಕ ಅಂಶಗಳಿಗಾಗಿ ಅವನ್ನು ಮೆಚ್ಚುವ , ಗೌರವಿಸುವ ಅಗತ್ಯವನ್ನು  ಹಿಂದಿನ  ಲೇಖನದಲ್ಲಿ  ಪ್ರತಿಪಾದಿಸಲಾಗಿತ್ತು.  ಅದಕ್ಕೆ ಇಂಬುಕೊಡುವ  ಇನ್ನೂ ಕೆಲವು ಸಂಗತಿಗಳನ್ನು  ನಾವೀಗ  ಪರಿಶೀಲಿಸೋಣ.

ಶಕ್ತಿ ದ್ರವ್ಯ ಸ್ಥಾಯಿತ್ವ,  ಸಾಂಖ್ಯ ಅಭಿಮತ

ಪ್ರಕೃತಿಯಲ್ಲಿನ  ತ್ರಿಗುಣಗಳನ್ನು  ನಿರ್ಮಿಸಲೂ, ನಾಶಪಡಿಸಲೂ  ಸಾಧ್ಯವಿಲ್ಲ ಎಂಬುದು ಸಾಂಖ್ಯರ ಸ್ಪಷ್ಟ ಅಭಿಮತ.1 ಈ ತ್ರಿಗುಣಗಳಲ್ಲಿ ಎರಡನೆಯದಾದ ರಜೋಗುಣವು ಶಕ್ತಿ(Energy)ಗೂ, ಮೂರನೆಯದಾದ ತಮೋಗುಣವು ದ್ರವ್ಯಕ್ಕೂ (Mass) ಸಂಕೇತ ಎಂಬುದನ್ನು  ಹಿಂದಿನ ಲೇಖನವೊಂದರಲ್ಲಿ  ವಿವರಿಸಿದೆಯಷ್ಟೇ. “ವ್ಯಕ್ತ ಸೃಷ್ಟಿಯಲ್ಲಿ ಕಾಣುವ ಎಲ್ಲ ವಸ್ತುಗಳಿಗೂ ಕೂಡುವಿಕೆ, ಕಳೆಯುವಿಕೆ, ಬೆಳೆಯುವಿಕೆ, ಕೊಳೆಯುವಿಕೆಯೇ ಮುಂತಾದ ಸ್ಥಿತ್ಯಂತರಗಳು ಸತತವಾಗಿದ್ದರೂ  ಆ ವಸ್ತುಗಳ  ಮೂಲಕಾರಣಗಳಾದ ರಜೋಗುಣ (ಶಕ್ತಿ) ಹಾಗೂ ತಮೋಗುಣ (ದ್ರವ್ಯ)ಗಳ ಒಟ್ಟು ಮೊತ್ತವು ಮಾತ್ರ ವ್ಯತ್ಯಾಸ ಹೊಂದದೇ ಸ್ಥಿರವಾಗಿರುತ್ತದೆ.  ವ್ಯಕ್ತ ಸೃಷ್ಟಿ ಏನಿದ್ದರೂ ನಿರ್ದಿಷ್ಟ ಪ್ರಮಾಣದಲ್ಲಿರುವ, ಅವ್ಯಯವೂ ಆದ ತ್ರಿಗುಣಗಳ ಭಾಸಾತ್ಮಕ ಪುನರ್ರಚನೆ (illusory rearrangement)  ಅಷ್ಟೇ. ಸಾಂಖ್ಯರ  ಈ ಪ್ರತಿಪಾದನೆಯಲ್ಲಿ  ಆಧುನಿಕ ವಿಜ್ಞಾನದ ದ್ರವ್ಯ ಹಾಗೂ ಶಕ್ತಿ ಸ್ಥಾಯಿತ್ವ ಸಿದ್ಧಾಂತದ (Conservation of mass and energy) ಸತ್ವ  ಇದೆ ಎಂಬುದು ಖಚಿತವಲ್ಲವೇ?

ದ್ರವ್ಯ ಮತ್ತು ಶಕ್ತಿ ಸ್ಥಾಯಿತ್ವದ  ಸಿದ್ಧಾಂತವನ್ನು  ಪ್ರತಿಪಾದಿಸಿದ ಸಾಂಖ್ಯರು ಆ ತರ್ಕಬಲದಿಂದಲೇ ತಮ್ಮ ಕಾರ್ಯಕಾರಣ ಸಿದ್ಧಾಂತವನ್ನೂ ಪ್ರತಿಪಾದಿಸಿದರು. “ವಿಶ್ವದಲ್ಲಿನ ದ್ರವ್ಯದ, ಶಕ್ತಿಯ ಮೊತ್ತವು ನಿಶ್ಚಿತವಾಗಿದೆ. ಆದರೆ ವ್ಯಕ್ತಸೃಷ್ಟಿಯಲ್ಲಿ ವಿವಿಧ ಪ್ರಮಾಣದಲ್ಲಿ ದ್ರವ್ಯ-ಶಕ್ತಿಗಳ ಸಂಯೋಗವಾಗುವುದರಿಂದ  ಗುಣಸಾಮ್ಯಗಳಿಲ್ಲದ , ರೂಪ-ಶಕ್ತಿಗಳ ದೃಷ್ಟಿಯಿಂದ  ಅಪಾರ ಅಂತರವುಳ್ಳ ” ಬಗೆಬಗೆಯ ವಸ್ತುಗಳ  ರಚನೆಯಾಗುತ್ತಿದೆ. ಆದ್ದರಿಂದಲೇ ಈ ವ್ಯಕ್ತ ವಿಶ್ವದ ವಸ್ತುಗಳಲ್ಲಿ ಕೆಲವೊಮ್ಮೆ ಸದೃಶವಾಗಿ, ಕೆಲವೊಮ್ಮೆ  ಅಸದೃಶವಾಗಿ ಶಕ್ತ್ಯಂಶಗಳು2 ಅಂತರ್ಗತವಾಗಿರುವುದನ್ನು ನಾವು ಕಾಣುವುದು. ಸೃಷ್ಟಿಯ ಗತಿಯು  ಸತತ ಪರಿವರ್ತನೆಯೊಂದಿಗೆ, ಕ್ಷಣವೂ ಬಿಡುವಿಲ್ಲದೇ ಮುಂದುವರೆಯುತ್ತದೆ.3  ಆದರೆ ಅದು  ನಿಶ್ಚಿತ ನಿಯಮವನ್ನನುಸರಿಸಿಯೇ ಸಾಗಬೇಕಾಗುತ್ತದೆ.4  ಸೃಷ್ಟಿಯ ಈ ಪ್ರವಾಹದಲ್ಲಿ ಹೊಸದಾಗಿ  ಉಗಮಿಸುವುದು ಈವರೆಗೆ ಇಲ್ಲದ್ದೇನಲ್ಲ. ಇದ್ದುದರ  ರೂಪಾಂತರ ಅಷ್ಟೇ. ಈ  ರೂಪಾಂತರವಾದಾಗ  ಈವರೆಗೆ ಗುಪ್ತವಾಗಿದ್ದ (ಅನುದ್ರೂತ=Potential)  ಶಕ್ತಿಯು  ಬಿಡುಗಡೆ ಹೊಂದಿತು ಎಂದು (ಉದ್ರೂತ ಶಕ್ತಿ – free or Kinetic energy) ಅರ್ಥ. ಶಕ್ತಿಯ ಈ ಆವಿಷ್ಕಾರಕ್ಕೆ ಸಹಾಯಕವಾದ  (ಅನುಷಂಗಿಕ)  ಸನ್ನಿವೇಷವಿರಬೇಕು ಅಷ್ಟೇ. ಈ ಸನ್ನಿವೇಷವು  ಇಲ್ಲವಾದಲ್ಲಿ ‘ಪರಿಣಾಮ’ವೂ (ಸೃಷ್ಟಿಯಲ್ಲಿ  ಉತ್ಪಾದಿತವಾಗುವ  ವಸ್ತು) ಇರುವುದಿಲ್ಲ.’’ ತರ್ಕದ ಈ ರೀತಿಯನ್ನೂ ಅದರೊಳಗೆ ಅಡಗಿರುವ ವೈಚಾರಿಕತೆಯನ್ನೂ ಮೆಚ್ಚದಿರುವ ವೈಜ್ಞಾನಿಕ  ಮನಸ್ಸೆಂಬುದು ಇರಲು ಸಾಧ್ಯವೇ?

ಶಕ್ತಿಯೇ ಎಲ್ಲವೂ

‘’ವಸ್ತುಗಳಲ್ಲಿರುವ  ಗುಣಧರ್ಮಗಳು ಆಯಾ ವಸ್ತುಗಳ ಸಂಯೋಗದಲ್ಲಿ  ಪಾಲ್ಗೊಂಡಿರುವ ಶಕ್ತಿಯು ವಿಶಿಷ್ಟ ರೀತಿಯಲ್ಲಿ ಪ್ರವರ್ತಿಸುವುದರ ಫಲವಾಗಿದೆ.5 ಈ ವಿವಿಧ ಶಕ್ತ್ಯಂಶಗಳು ಹಲವು  ಸ್ಥಿತಿಗಳಲ್ಲಿರಬಹುದು. ಉದ್ರೂತವಾಗಿ(ಸಕ್ರಿಯವಾಗಿ=Kinetic), (ಗುಪ್ತ- Potential). ಕೆಲವೊಮ್ಮೆ ಸುಪ್ತ ಸ್ಥಿತಿಯಲ್ಲಿ (Sub latent)  ಸುಪ್ತಸ್ಥಿತಿಯಲ್ಲಿರುವವು ಇದ್ದಕ್ಕಿದ್ದಂತೆ ಸಕ್ರಿಯಗೊಳ್ಳಬಹುದು. ಸಕ್ರಿಯವಿದ್ದವು ಸುಪ್ತಸ್ಥಿತಿಗೂ ಇಳಿಯಬಲ್ಲವು. ಈ ವ್ಯತ್ಯಾಸ ಸರ್ವೇಸಾಮಾನ್ಯವಾಗಿ ಆಗುತ್ತಿರುತ್ತದೆ.6 ಆದರೆ ಈ ಸೃಷ್ಟಿಯ ಮೂಲ ಶಕ್ತಿಯು ಒಂದೇ. ಅದು ಸರ್ವವ್ಯಾಪಿಯಾಗಿದೆ.7 ಈ ಕಾರಣದಿಂದ ಆ ಶಕ್ತಿಯ ಆವಿಷ್ಕಾರಗಳೇ ಆದ ನಿರವಯವ ದ್ರವ್ಯಗಳೂ (Inorganic matters), ಸಸ್ಯಜೀವಿಗಳೂ(Vegetable Organisms)  ಹಾಗೂ ಪ್ರಾಣಿಗಳು (animal organisms)  ಅಂತಿಮವಾಗಿ  ಮತ್ತು ಸಾರರೂಪದಲ್ಲಿ  ಒಂದೇ ಆಗಿವೆ.8‘’ ಇಪ್ಪತ್ತನೇ ಶತಮಾನದ ಪಾಶ್ಚಿಮಾತ್ಯ ವಿಜ್ಞಾನವು  ಇದೀಗ ಇಂಥ ನಿಷ್ಕರ್ಷೆಗೆ ತಲುಪುತ್ತಿರುವುದರ  ಕಲ್ಪನೆಯುಳ್ಳವರು ಮಾತ್ರವೇ ಸಾಂಖ್ಯರು ಅಷ್ಟು ಪ್ರಾಚೀನ ಕಾಲದಲ್ಲಿ ಈ ನಿಷ್ಕರ್ಷೆಗೆ ತಲುಪಿದ್ದನ್ನು  ಕಂಡು ಬೆರಗಾಗಬಲ್ಲರು !

ಸಾಂಖ್ಯರ ದೇಶಕಾಲ ಚಿಂತನೆ

ಸಾಂಖ್ಯರು ದೇಶ (Space)9 ಮತ್ತು ಕಾಲ(Time)ಗಳ ಬಗ್ಗೆ ಮಾಡಿರುವ ಚಿಂತನೆಯೂ ಆಧುನಿಕರ ಗೌರವಕ್ಕೆ ಪಾತ್ರವಾಗಬೇಕಾದ ವಿಷಯವೇ. ಅವರ ಸಾಧನೆಯ ಮಹತ್ವವನ್ನು ಅರಿಯಲು  ಮೊದಲು ಆಧುನಿಕ ಭೌತವಿಜ್ಞಾನದಲ್ಲಿ ಈ ದೇಶ ಕಾಲಗಳ ಚಿಂತನೆ ಹೇಗೆ ಸಾಗಿ ಬಂದಿತೆಂಬುದನ್ನು ತಿಳಿಯುವುದು ಒಳ್ಳೆಯದು.

1.ಗುಣಾಸ್ತು ಸರ್ವಧರ್ಮಾನುಪಾತಿನಃ ನ ಪ್ರತ್ಯಸ್ತ

ಮಯಂತೇ, ನೋಪಜಾಯತೇ ವ್ಯಕ್ತಿಭಿರೇವ ಆತೀತಾsನಾಗತ

ವ್ಯಯಾಗಮವತೀಭಿಃ ಗುಣಾನ್ವಯಿನೀಭಿಃ

ಉಪಜನಾಪಾಯ ಧರ್ಮಕಾ ಇವ ಪ್ರತ್ಯವ ಭಾಸಂತೇ

                                           -ವ್ಯಾಸಭಾಷ್ಯ, ಸೂತ್ರ 19, ಪಾದ 2.

2. ಏತೇ ಗುಣಾಃ ತುಲ್ಯಜಾತೀಯಾತುಲ್ಯಜಾತೀಯ ಶಕ್ತಿ ಭೇದಾನುಪಾತಿನಃ

                                              -ವ್ಯಾಸಭಾಷ್ಯ

3. ಪ್ರಕೃತಿಃ ಪರಿಣಮನಶೀಲಾ ಕ್ಷಣಮಪ್ಯಪರಿಣಮ್ಯ ನಾವತಿಷ್ಠತೇಃ

                                                        -ಪತಂಜಲಿ

4.ಪರಿಣಾಮಕ್ರಮ ನಿಯಮಾತ್

                                                         -ವ್ಯಾಸಭಾಷ್ಯ

5.ಯೋಗ್ಯತಾವಚ್ಛಿನ್ನಾಧರ್ಮಿಣಃ ಶಕ್ತಿರೇವ  ಧರ್ಮಃ

ಸ ಚ ಫಲಪ್ರಸವಭೇದಾನುಮಿತ ಸದ್ಭಾವಃ

                                              -ವ್ಯಾಸಭಾಷ್ಯ

6.ತೇ ಖಲ್ವಮೀ ಧರ್ಮಾ ವರ್ತಮಾನಾ ವ್ಯಕ್ತಾತ್ಮಾನಃ,

ಅತೀತಾsನಾಗತಾಃ ಸೂಕ್ಷ್ಮಾತ್ಮಾನಃ ಸರ್ವಮಿದಂ

ಗುಣಾನಾಂ ಸನ್ನಿವೇಶ ಮಾತ್ರಮಿತಿ ಪರಮಾರ್ಥ

ತೋ ಗುಣಾತ್ಮನಃ

                                                        -ವ್ಯಾಸಭಾಷ್ಯ

7. ಸರ್ವಂ ಸರ್ವಾತ್ಮಕಂ

8. ಜಲಭೂಮ್ಯೋಃ ಪಾರಿಣಾಮಿಕಂ  ರಸಾದಿ ವೈಶ್ವ

ರೂಪ್ಯಂ ಸ್ಥಾವರೇಷು ದೃಷ್ಟುಂ ತಥಾ ಸ್ಥಾವರಾಣಾಂ

ಜಂಗಮೇಷು, ಜಂಗಮಾನಾಂ ಸ್ಥಾವರೇಷು.

9. ‘ದೇಶ’ ಎಂಬ ಶಬ್ದದ ಮೂಲಾರ್ಥವು ಇಂದಿನ ವಿಜ್ಞಾನದ ‘Cosmic, Infinite Space’ ಎಂಬ ಶಬ್ದಸಮೂಹದಿಂದ ಹೊರಡುವುದೇ ಆಗಿತ್ತು. ಕೊನೆಯ ಪಕ್ಷ ಸಾಂಖ್ಯರಂತೂ ಈ ಅರ್ಥದಲ್ಲಿಯೇ ಅದನ್ನು  ಬಳಸಿದ್ದಾರೆ.  ಈ ‘ದೇಶ’ ಎಂಬ ಪದದ ಅರ್ಥವು ಇಂದು ತುಂಬಾ ಬದಲಾಗಿ  ಹೋಗಿದೆ. ತದ್ವಿರುದ್ಧ  ಎನ್ನುವಷ್ಟು. ಮೂಲಾರ್ಥದಲ್ಲಿ ಬಳಸುತ್ತಿದ್ದಾಗ  ಮೇರೆ, ಮಿತಿ , ಗಡಿಗಳಿಲ್ಲದ , ಕಲ್ಪನಾತೀತ ವಿಸ್ತಾರದ ಜಾಗ ಅಥವಾ ಆಕಾಶ ಎಂಬ  ಅಭಿಪ್ರಾಯವಿರುತ್ತಿತ್ತು. ಆದರೆ ಇಂದಿನ ಎಲ್ಲ ಭಾರತೀಯ ಭಾಷೆಗಳಲ್ಲಿ ‘ದೇಶ’ ಎಂಬ ಶಬ್ದವನ್ನಾಡಿದಾಗ ಮೇರೆ, ಮಿತಿ, ಗಡಿಗಳುಳ್ಳ ನಿರ್ದಿಷ್ಟ ಪ್ರದೇಶ (Country) ಎಂಬರ್ಥ ಹೊಮ್ಮುತ್ತದೆ. ಆದರೆ ಈ ಪರಿವರ್ತನೆಯು  ಈಚಿನ ಮೂರು ನಾಲ್ಕು ಶತಮಾನಗಳಲ್ಲಿ  ಆಗಿರಬೇಕು, ಏಕೆಂದರೆ ಅದಕ್ಕೆ ಮುಂಚೆ ಮೊದಲ ಅರ್ಥವೇ ಅದಕ್ಕೆ ಇತ್ತು. ಉದಾಹರಣೆಗೆ ‘ದೇಶ’ ಎಂಬ ಸಂಸ್ಕೃತ ಶಬ್ದವನ್ನು ಕನ್ನಡದಲ್ಲಿ  ‘ಬಯಲು’ ಎಂಬ ಪಾರಿಭಾಷಿಕ ಶಬ್ದದಿಂದ ಸೂಚಿಸಲಾಗುತ್ತಿತ್ತು. ಮಿತಿ ಇಲ್ಲದ ವಿಸ್ತಾರವುಳ್ಳ ಜಾಗ (Infinite Space) ಎಂಬುದು  ಅದರ ಅರ್ಥ. ಈ ಬಯಲು ಶಬ್ದಕ್ಕೆ ‘ಆಲಯ’ವೆಂಬುದು ವ್ಯತಿರಿಕ್ತ ಶಬ್ದವಾಗಿತ್ತು. ಆಲಯವೆಂದಾಗ ಮಿತಿ ಅಥವಾ ಗಡಿಗಳುಳ್ಳ ಜಾಗ (Finite Space)  ಎಂದರ್ಥ.  ಈ ಅರ್ಥದಲ್ಲೇ ನಮ್ಮ ದೇಹವೊಂದು ಆಲಯ. ನಮ್ಮ ಮನೆಯೊಂದು ಆಲಯ.  ನಮ್ಮ ದೇವಸ್ಥಾನಕ್ಕೆ ಆಲಯವೆಂಬ ಶಬ್ದದ ಬಳಕೆಯಾದದ್ದೂ ಈ ಕಾರಣಕ್ಕಾಗಿಯೇ. ಇಂದಿಗೂ ಅದು ಮುಂದುವರೆದಿದೆ.  ಪುರಂದರದಾಸರು ತಮ್ಮೊಂದು ಕೀರ್ತನೆಯಲ್ಲಿ ‘ಬಯಲು ಆಲಯದೊಳಗೇ ಆಲಯವು ಬಯಲೊಳಗೇ?’ ಎಂದು ಪ್ರಶ್ನಿಸಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರೆ ‘ಬಯಲು’ ಅಥವಾ ‘ದೇಶ‘ ಎಂಬುದು ‘Infinite Space’  ಅಥವಾ ‘Cosmic Space’ ಎಂಬ ವ್ಯಾಪಕಾರ್ಥ ಉಳ್ಳ ಶಬ್ದವೆಂಬುದು ನಮಗೆ ಮನದಟ್ಟಾಗುತ್ತದೆ. 

   

Leave a Reply