ಜಗದ್ಗುರು ಭಾರತ ಭಾಗ -2

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 03.07.2014

64 ವಿದ್ಯೆಗಳು

ತಂತ್ರಜ್ಞಾನ, ವೈದ್ಯವಿಜ್ಞಾನ, ವಾಸ್ತುವಿಜ್ಞಾನ, ಗಣಿತ ಇತ್ಯಾದಿ ಐಹಿಕ ಬದುಕಿಗೆ ಅವಶ್ಯಕವಾದ ಶಾಸ್ತ್ರಗಳಂತಯೇ ವ್ಯಾಕರಣ (ಗ್ರ್ಯಾಮರ್), ಛಂದಸ್ಸು (ಪ್ರಾಸೊಡಿ), ನಿರುಕ್ತ (ಲೆಕ್ಸಿಕೋಗ್ರಫಿ), ಜ್ಯೋತಿಷ್ಯ (ಆಸ್ಟ್ರಾಲಜಿ) ಮತ್ತು ಅದಕ್ಕೆ ಆಧಾರಭೂತವಾದ ಖಗೋಳವಿಜ್ಞಾನ (ಆಸ್ಟ್ರಾನಮಿ) ಇವೇ ಮುಂತಾದ ಶಾಸ್ತ್ರಗಳು ಪ್ರಾಚೀನ ವೈದಿಕ ಕಾಲದಲ್ಲಿ ಸ್ಪಷ್ಟವಾದ ಶಾಸ್ತ್ರಶಾಖೆಗಳಾಗಿ ರೂಪುಗೊಳ್ಳತೊಡಗಿದುದನ್ನು ನಾವು ಕಾಣಬಹುದು. ಇವಾವುವೂ ಮುಕ್ತಿಯ ಅಥವಾ ಪರಲೋಕದ ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲವೆಂಬುದು ಸ್ಪಷ್ಟ. ಆಧುನಿಕ ಪಾಶ್ಚಿಮಾತ್ಯರಲ್ಲೂ ಈ ಶಾಸ್ತ್ರಗಳು ವಿಜ್ಞಾನಭಾಗಗಳೆಂದೂ, ಲೌಕಿಕ ಜ್ಞಾನದ ಅಗತ್ಯ ಶಾಖೆಗಳೆಂದೂ ಪರಿಗಣಿಸಲ್ಪಟ್ಟಿವೆ. ಈ ಹಿನ್ನೆಲೆಯಲ್ಲಿ ವೇದಗಳನ್ನು – “ಅಲೆಮಾರಿಗಳಾದವರು ಪ್ರಾಕೃತಿಕ ಆಶ್ಚರ್ಯಗಳಿಗೆ ಮನಸೋತು, ಅವುಗಳ ಹಿಂದಿರುವ ಕಾಲ್ಪನಿಕ ದೈವೀಶಕ್ತಿಗಳಿಗೆ ಬೆದರಿ ಮಾಡಿದ ಸ್ತೋತ್ರಪಾಠ”ಗಳೆಂದು ಸಾರುವವರು ತಮ್ಮ ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಬೇಕು. ಇಹ ಮತ್ತು ಪರಗಳನ್ನು ಸುಸಂಬದ್ಧಗೊಳಿಸಿ, ಸಮಗ್ರ ಜೀವನವನ್ನು ಶರೀರ, ಮನಸ್ಸು ಮತ್ತು ಚೈತನ್ಯಗಳೆಂಬ ಸರ್ವಾಂಗಗಳಲ್ಲೂ ಸುದೃಢವಾಗಿ, ಆರೋಗ್ಯಶಾಲಿಯಾಗಿ ಕಟ್ಟಿ, ಶಕ್ತಿ-ಶಾಂತಿ-ಪ್ರಗತಿ-ಆನಂದಗಳ ಗಳಿಕೆಗಾಗಿ ಅದನ್ನು ಬಳಸಿ ಬಾಳಬಯಸಿದ ವೈದಿಕ ದೂರದೃಷ್ಟಿಯನ್ನು ಗೌರವಿಸಬೇಕು.

ನಾವೀಗ ವೇದಗಳ ಕಾಲದಿಂದಲೂ ನಮ್ಮಲ್ಲಿ ವಿವಿಧ ವಿಜ್ಞಾನ ಶಾಖೆಗಳು ಹೇಗೆ ಬೆಳೆದವೆಂಬುದನ್ನು ತಿಳಿಯಲು ಪ್ರಯತ್ನಿಸೋಣ.

ವೈದಿಕ ಪಠ್ಯಕ್ರಮ

ವೇದಕಾಲದ ಪಠ್ಯಕ್ರಮದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ 12 ವರ್ಷಗಳ ಕಾಲ ಕಾಳಜಿಯಿಂದ ಅಧ್ಯಯನ ಮಾಡಬೇಕಾಗುತ್ತಿತ್ತು.

ವೇದಗಳನ್ನೂ ಅವುಗಳಿಗೆ ಸಂಬಂಧಿಸಿದ ಎಲ್ಲ ಶಾಸ್ತ್ರಗಳನ್ನೂ ಅಧ್ಯಯನ ಮಾಡಬೇಕೆಂಬ ಆಗ್ರಹವಿರುತ್ತಿತ್ತು. ನಾಲ್ಕು ವೇದಗಳು, ಆರು ಶಾಸ್ತ್ರಗಳು ಮತ್ತು ಅರವತ್ತುನಾಲ್ಕು ಕಲೆಗಳೆಂದು ಇದನ್ನು ವಿಂಗಡಿಸಲಾಗಿತ್ತು. ಅವುಗಳ ವಿವರ ಹೀಗೆ :

           4 ವೇದಗಳು :

ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಹಾಗೂ ಅವುಗಳಿಗೆ ಷಡಂಗಗಳು-ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ.

6 ಶಾಸ್ತ್ರಗಳು

ತರ್ಕ, ಮೀಮಾಂಸಾ, ವ್ಯಾಕರಣ, ಜ್ಯೋತಿಷ, ವೇದಾಂತ, ಧರ್ಮಶಾಸ್ತ್ರಗಳು.

ನಮ್ಮ  ಪ್ರಾಚೀನ ಋಷಿಗಳು ಅಸಾಧ್ಯಾದರ್ಶವಾದಿ1*ಗಳಾಗಿರಲಿಲ್ಲ, ಅವರು ಶ್ರೇಷ್ಠಮಟ್ಟದ ಜೀವನ ವಿಜ್ಞಾನಿಗಳಾಗಿದ್ದರು. ಬದುಕು ಸಾವಿನ ನಡುವಣ ಜೀವನಕ್ಕೆ ಸಂಬಂಧಿಸಿದ ಪ್ರಾಯಶಃ ಎಲ್ಲ ಅನುಭವಗಳನ್ನೂ ಅವರು ತಮ್ಮ ಸೂಕ್ಷ್ಮ ವಿವೇಚನೆಗೆ ಒಳಪಡಿಸಿದ್ದಾರೆ.  ಇವುಗಳ ಮೂಲಕ ಜೀವನದ  ಮೌಲಿಕ ಸತ್ಯಗಳನ್ನು ಕಂಡುಕೊಳ್ಳಲು ಹಾತೊರೆದು ಯತ್ನಿಸಿದ್ದಾರೆ.  ವೇದ ವೇದಾಂಗ, ಶಾಸ್ತ್ರಗಳಲ್ಲಿ ಅವರು ಪಡೆದುಕೊಂಡ ಈ ‘ಸಮಗ್ರ ಜೀವನ ವಿಜ್ಞಾನ’ ವಿಸ್ತಾರವಾಗಿ ಹರಡಿಕೊಂಡಿದೆ.

 

64 ಕಲೆಗಳು:

ಗೀತ (ಹಾಡುಗಾರಿಕೆ),  ವಾದ್ಯ (ವಾದ್ಯಗಳನ್ನು ನುಡಿಸುವಿಕೆ),  ನೃತ್ಯ, ಆಲೇಖ್ಯ (ಚಿತ್ರಗಳನ್ನು ಬಿಡಿಸುವಿಕೆ), ವಿಶೇಷ ಕಚ್ಛೇದ್ಯ (ಹಣೆಯ ಮೇಲೆ ತೊಡಲು ಆಗುವಂತೆ ವಿವಿಧ ಆಕೃತಿಗಳಲ್ಲಿ ಎಲೆ ಬಿಡಿಸುವುದು), ತಂಡುಲ ಕುಸುಮ ಬಲಿ  ವಿಕಾರ (ಪೂಜೆಗಾಗಿ ಅಕ್ಕಿ ಮತ್ತು ಹೂಗಳನ್ನು ಬಗೆಬಗೆಯಾಗಿ ಜೋಡಿಸುವುದು), ಪುಷ್ಪಾಸ್ತರಣ (ಮನೆಯನ್ನೋ, ಕೊಠಡಿಯನ್ನೋ ಹೂಗಳಿಂದ ಅಲಂಕರಿಸುವುದು), ದಶನವಸನಾಂಗ ರಾಗ (ಹಲ್ಲು, ಬಟ್ಟೆ, ಶರೀರಗಳನ್ನು ಬಣ್ಣ ಹಚ್ಚಿ ಸುಂದರಗೊಳಿಸುವುದು), ಮಣಿಭೂಮಿಕಾ ಕರ್ಮ (ರತ್ನಜಡಿತವಾಗಿ ನೆಲಗಟ್ಟು ಮಾಡುವುದು),  ಶಯನರಚನ (ಹಾಸಿಗೆಗಳನ್ನು ಮಾಡುವುದು), ಉದಕ ವಾದ್ಯ (ವೈವಿಧ್ಯಮಯ ಧ್ವನಿಗಳಿಗಾಗಿ ನೀರಿನ ಮೇಲೆ ಬಾರಿಸುವುದು), ಉದಕಾಘಾತ (ಜಲಕ್ರೀಡೆಯಲ್ಲಿ ನೀರನ್ನು ಬೊಗಸೆ ಬೊಗಸೆಯಾಗಿ ಇತರರ ಮೇಲೆ ಎರಚುವುದು), ಚಿತ್ರಾಯೋಗ (ಮದ್ದುಮೂಲಿಕೆ, ಔಷಧ, ಮಂತ್ರಗಳಿಂದ ಬೇರೆಯವರು ಕೃಶಕಾಯರೂ, ಅಕಾಲಿಕವಾಗಿ  ತಲೆ ನರೆತವರೂ,  ಹುಚ್ಚರೂ ಆಗುವಂತೆ ಮಾಡುವುದು), ಮಾಲ್ಯಗ್ರಥನ ವಿಕಲ್ಪ (ಹಲವು ಬಗೆಯ ಹೂಹಾರಗಳನ್ನು ಮಾಡುವಿಕೆ), ಶೇಖರಕಾ ಪೀಡಯೋಜನ (ಶಿರೋಭೂಷಣವಾಗಿ ಶೇಖರಕ, ಆಪೀಡಕ ಎಂಬ ಎರಡು ಬಗೆಯ ಆಭರಣಗಳನ್ನು ಧರಿಸುವುದು), ನೇಪಥ್ಯ ಪ್ರಯೋಗ (ತಾನೂ ವಸ್ತ್ರಾಲಂಕಾರ ಮಾಡಿಕೊಳ್ಳುವುದು, ಇತರರಿಗೂ ಮಾಡುವುದು), ಕರ್ಣಪತ್ರಭಂಗ (ದಂತ ಮೊದಲಾದುವುಗಳಿಂದ ಕರ್ಣಾಭರಣಗಳನ್ನು ಮಾಡುವುದು), ಗಂಧಯುಕ್ತಿ (ಪರಿಮಳ ದ್ರವ್ಯ ತಯಾರಿಕೆ), ಭೂಷಣಯೋಜನ (ಆಭರಣಗಳನ್ನು ಮಾಡುವುದು), ಐಂದ್ರಜಾಲಾಯೋಗ (ಭ್ರಮಾಸೃಷ್ಟಿ, ಇಂದ್ರಜಾಲ ವಿದ್ಯೆ), ಕೌಚುಮಾರಯೋಗ (ದೃಢದೇಹಿ, ವೀರ್ಯಶಾಲಿಯಾಗುವಂತೆ ಚಿಕಿತ್ಸಾಜ್ಞಾನ), ಹಸ್ತಲಾಘವ (ಕರಚಮತ್ಕಾರ), ವಿಚಿತ್ರ ಶಾಕ, ಯೂಷ ಭಕ್ಷ ವಿಕಾರ ಕ್ರಿಯಾ (ಬಗೆ ಬಗೆಯ ತರಕಾರಿ ಅಡುಗೆಗಳ ಸಾರು, ಹುಳಿ ಮತ್ತಿತರ ಭಕ್ಷಗಳ ತಯಾರಿ), ಪಾನಕರಸ ರಾಗಾಸವಯೋಜನ (ಪಾನಕ, ರಸ ಮೊದಲಾದ ಬಗೆ ಬಗೆಯ ಪೇಯಗಳ ತಯಾರಿ) ಸೂಚಿವಾನ ಕರ್ಮ (ಹೊಲಿಗೆ, ಕಸೂತಿಯ ಕೆಲಸ),  ಸೂತ್ರಕ್ರೀಡಾ (ದಾರದ ಆಟಗಳು, ದಾರದಿಂದ ಮನೆ, ದೇವಾಲಯ ಇತ್ಯಾದಿಗಳ ರೇಖಾಕೃತಿ ನಿರ್ಮಾಣವೆಂದೂ, ಸೂತ್ರದ ಬೊಂಬೆಯಾಟವೆಂದೂ ಅರ್ಥೈಸಬಹುದು), ಪ್ರಹೇಲಿಕಾ (ಒಗಟುಗಳು), ಪ್ರತಿಮಾಲಾ (ಅಂತ್ಯಾಕ್ಷರಿ ಆಟ), ದುರ್ವಾಚಕ ಯೋಗ (ಪ್ರತಿಯೊಬ್ಬ ಸ್ಪರ್ಧಿಯೂ ಕಠಿಣಾಕ್ಷರಗಳಿಂದ ಕೂಡಿದ ಶ್ಲೋಕಗಳನ್ನು ಹೇಳುವುದು), ಪುಸ್ತಕವಾಚನ, ನಾಟಕಾಖ್ಯಾಯಿಕಾ ದರ್ಶನ (ನಾಟಕ, ಕಥೆಗಳ ಜ್ಞಾನ), ಕಾವ್ಯ ಸಮಸ್ಯಾಪೂರಣ (ಕವಿತಾ ರಚನೆ, ಶ್ಲೋಕವೊಂದರ ಕೊನೆ ಸಾಲನ್ನು ನೀಡಿದಾಗ ಉಳಿದ ಮೂರು  ಸಾಲುಗಳನ್ನು ರಚಿಸುವುದು), ಪಟ್ಟಿಕಾವೇತ್ರ ವಾನವಿಕಲ್ಪ (ಬೆತ್ತ, ಬಿದಿರುಗಳಿಂದ ಮಂಚ, ಆಸನ ಇತ್ಯಾದಿ ತಯಾರಿ), ತಕ್ಷಕರ್ಮ(ಚಿನ್ನ, ಉಕ್ಕು, ಮರಗಳಲ್ಲಿ ಕೆತ್ತನೆ ಕೆಲಸ, ತಕ್ಷಣ (ಮರಗೆಲಸ),  ವಾಸ್ತುವಿದ್ಯೆ (ಗೃಹ ನಿರ್ಮಾಣ ವಿದ್ಯೆ), ರೂಪ್ಯರತ್ನ ಪರೀಕ್ಷಾ (ನಾಣ್ಯ ಹಾಗೂ ರತ್ನಗಳ ಪರೀಕ್ಷೆ), ಧಾತುವಾದ (ಖನಿಜ ಮಿಶ್ರಣ, ಶುದ್ಧೀಕರಣ ಇತ್ಯಾದಿ- ಮೆಟಲರ್ಜಿ), ಮಣಿರಾಗಾಕರಜ್ಞಾನ (ಹರಳುಗಳು ಮತ್ತು ರತ್ನಗಳಿಗೆ ಬಣ್ಣ ಹಾಕುವ ವಿಧಾನಗಳ ತಿಳುವಳಿಕೆ ಮತ್ತು ಸ್ಥಳ ಪರಿಜ್ಞಾನ, ಕಾರ್ಯ ಪರಿಜ್ಞಾನ- ಮೈನಿಂಗ್  ಸೈನ್ಸ್),  ವೃಕ್ಷಾಯುರ್ವೇದ (ಸಸ್ಯಗಳನ್ನೇ ಔಷಧ ನೀಡಿ ನಿರೋಗಿಯಾಗಿ ಸೊಂಪಾಗಿ ಬೆಳೆಯುವಂತೆ ಹಾಗೂ ಚಿಕ್ಕದಾಗಿ  ಎತ್ತರವಾಗಿ ಬೆಳೆಯುವಂತೆ ಮಾಡುವ ವಿಧಾನ ಜ್ಞಾನ), ಮೇಷಕುಕ್ಕುಟ ಲಾವಕ ಯುದ್ಧವಿಧಿ (ಟಗರು, ಹುಂಜ ಮತ್ತು ಲಾವಗೆಗಳು ಯುದ್ಧ ಮಾಡುವಂತೆ ಮಾಡಿಸುವ ಮೋಜು ವಿದ್ಯೆ), ಶುಕ ಸಾರಿಕಾ ಪ್ರಲಾಪನ (ಗಂಡು ಹೆಣ್ಣು ಗಿಳಿಗಳಿಗೆ ಮಾತಾಡಲು ಕಲಿಸುವುದು),  ಉತ್ಸಾದನ-ಸಂವಾಹನ, ಕೇಶಮರ್ದನ ಕೌಶಲ (ಹಸ್ತ ಪಾದಗಳನ್ನು ಬಳಸಿ ಮೈ, ತಲೆ, ಕೂದಲುಗಳನ್ನು ತಿಕ್ಕುವ ಮಸಾಜ್ ಕಲೆ),  ಅಕ್ಷರ ಮುಷ್ಟಿಕಾ ಕಥನ (ಅಕ್ಷರಶ್ರೇಣಿಗಳನ್ನು ಹೊಸದಾಗಿ ನಿರ್ಮಿಸಿ ಅರ್ಥ ಬರುವಂತೆ ಮಾಡುವುದು),  ಮ್ಲೇಚ್ಛಿತ ವಿಕಲ್ಪ (ಗೂಢಲಿಪಿ ಭಾಷಾ ಭೇದ ಜ್ಞಾನ, ಉದ್ದಿಷ್ಟ ವ್ಯಕ್ತಿಗಲ್ಲದೇ ಬೇರಾರಿಗೂ ತಿಳಿಯದಂತೆ ಅವುಗಳ ಬಳಕೆ), ದೇಶಭಾಷಾ ವಿಜ್ಞಾನ (ಎಲ್ಲ ದೇಶೀಯ ಭಾಷೆಗಳ ಅರಿವು), ಪುಷ್ಪ ಶಕಟಿಕಾ (ಗಾಡಿ, ಪಲ್ಲಕ್ಕಿ ಇತ್ಯಾದಿ ವಾಹನಗಳಿಗೆ ಪುಷ್ಪಾಲಂಕರಣ),  ನಿಮಿತ್ತಜ್ಞಾನ (ಶುಭ ಅಶುಭ ಶಕುನಗಳ ಜ್ಞಾನ), ಯಂತ್ರಮಾತೃಕಾ (ಸಂಚಾರಕ್ಕಾಗಿ, ಯುದ್ಧಗಳಿಗಾಗಿ ಯಂತ್ರ ನಿರ್ಮಾಣ), ಧಾರಣಮಾತೃಕಾ (ವಿಷಯಗಳನ್ನು  ನೆನಪಿಡುವುದು, ಸಂಪಾಠ್ಯ (ಅಪರಿಚಿತ ಶ್ಲೋಕವನ್ನು ಕೇಳಿದಾಗ ಮತ್ತೆ ಹೇಳುವ ಕಲೆ), ಮಾನಸೀ (ಅನುಸ್ವಾರ, ವಿಸರ್ಗ, ತಲೆಕಟ್ಟು, ಕೊಂಬು ಇತ್ಯಾದಿ ಚಿಹ್ನೆಗಳನ್ನಷ್ಟೇ ಅವುಗಳ ನಿರ್ದಿಷ್ಟ ಸ್ಥಾನಗಳಲ್ಲಿರಿಸಿ ಬರೆದಾಗ ಅವುಗಳಿಗೆ ಅನುಸಾರವಾಗಿ ಶ್ಲೋಕವನ್ನು ನಿರ್ಮಿಸುವುದು), ಕಾ‍ವ್ಯಕ್ರಿಯೆ (ಕಾವ್ಯರಚನಾ ವಿದ್ಯೆ), ಅಭಿಧಾನಕೋಶ ಛಂದೋವಿಜ್ಞಾನ (ಶಬ್ದಕೋಶ ಹಾಗೂ ಛಂದೋಶಾಸ್ತ್ರದ ತಿಳುವಳಿಕೆ), ಛಲಿತಕಯೋಗ (ಇತರರಿಗೆ ತನ್ನ ಸ್ವರ, ಆಕೃತಿಗಳ ಪತ್ತೆಯಾಗದಂತೆ ವಂಚಿಸುವ ಕಲೆ), ವಸ್ತುಗೋಪನ (ವಸ್ತುಗಳ ಬಳಕೆಯಲ್ಲಿ ಭ್ರಮೋತ್ಪಾದನೆ. ಉದಾ : ಬಟ್ಟೆಯ ತುಂಡುಗಳನ್ನು ತೊಟ್ಟರೂ ಅವು ತುಂಡು ಬಟ್ಟೆಯೆಂದು ಭಾವಿಸಲಾಗದಂತೆ ಮಾಡುವುದು ಇತ್ಯಾದಿ), ದ್ಯೂತ (ವಿವಿಧ ಮೋಜಿನ ಜೂಜುಗಳು), ಬಾಲಕ್ರೀಡೆಗಳು (ಮಕ್ಕಳ ಮನವನ್ನು ಮೋಹಿಸುವ ಚೆಂಡು, ಗೊಂಬೆಯ ಆಟಗಳು ಇತ್ಯಾದಿ), ವೈನಯಿಕೀಯ ವಿದ್ಯೆ (ವಿಜ್ಞಾನ-ಕಲಾ ವಿಷಯಕ ವಿದ್ಯೆಗಳು),  ವೈಜಯಿಕೀಯ ವಿದ್ಯೆ (ಎಲ್ಲ ಕಾರ್ಯಗಳಲ್ಲೂ ಜಯವನ್ನು ತಂದುಕೊಡುವ ವಿದ್ಯೆಗಳು), ವ್ಯಾಯಾಮಿಕೀಯ ವಿದ್ಯೆ (ಅಂಗಸಾಧನೆ)- ಇವೆಲ್ಲವೂ ಅರವತ್ತನಾಲ್ಕು ಕಲಾತ್ಮಕ ವಿದ್ಯೆಗಳಲ್ಲಿ ಪರಿಗಣಿಸಲ್ಪಟ್ಟಿವೆ.

ಈ ವಿವರಣೆಯಿಂದ ನಮ್ಮ ಪೂರ್ವಜರಿಗೆ ಇದ್ದ ವಿದ್ಯೆ ಅಥವಾ ಶಿಕ್ಷಣದ ಕುರಿತಾದ ವಿಶಾಲ ಕಲ್ಪನೆಯು ನಮಗೆ ತಿಳಿಯಬರುತ್ತದೆ. ಭಾರತೀಯರು ಅಂದಿನ ದಿನಗಳಲ್ಲಿ ಬದುಕಿಗೆ ಬೆನ್ನು ತಿರುಗಿಸಿ, ಕೇವಲ ವೇದಶಾಸ್ತ್ರಗಳನ್ನೋದುತ್ತಾ ಪರಲೋಕಚಿಂತನೆ ಮಾಡುತ್ತಾ ಕಾಲಕಳೆದರೆಂಬ ತಪ್ಪುಕಲ್ಪನೆಯೂ ಇದರಿಂದ ತೊಲಗುತ್ತದೆ.

  1. (ಯುಟೋಪಿಯನ್ ಥಿಂಕರ್ಸ್)
  • ಲೇಖಕರು :  ಡಾ. ಉಪೇಂದ್ರ ಶೆಣೈ  

ಮುಂದುವರೆಯುವುದು……………

   

Leave a Reply