ಜಗದ್ಗುರು ಭಾರತ ಭಾಗ-4

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 05.07.2014

ವೇದಗಳಲ್ಲಿ ವೈಜ್ಞಾನಿಕ ಕಲ್ಪನೆಗಳು

ಭಾರತದ ವೈದಿಕ  ವಾಙ್ಮಯವು ಜಗತ್ತಿನ ಮಿಕ್ಕ ದೇಶಗಳಲ್ಲಿ ಲಭಿಸುವ ವಾಙ್ಮಯಕ್ಕಿಂತಲೂ ಎಷ್ಟೋ ಪ್ರಾಚೀನವಾದುದೆಂದು ತಜ್ಞರು ನಿರ್ಧರಿಸಿದ್ದಾರೆ.  ಜಗತ್ತಿನ  ಬೇರೆಲ್ಲ ಮತಗಳ ಗ್ರಂಥಗಳು ಚಾರಿತ್ರಿಕವಾಗಿ ಯಾವ ನಿರ್ದಿಷ್ಟ ಕಾಲದಲ್ಲಿ, ಯಾರ ಬೋಧನೆಯ ಸಾರವಾಗಿ ರೂಪುಗೊಂಡವೆಂಬುದನ್ನು ಹೇಳಲು ಸಾಧ್ಯವಿದೆ.  ಆದರೆ ವೈದಿಕ ವಾಙ್ಮಯವು ಎಂದು ಮತ್ತು ಯಾರಿಂದ ರೂಪುಗೊಂಡಿತೆಂಬುದು ಎಂದೂ ಒಡೆಯಲಾಗದ ಒಗಟಿನ ಮಾತಾಗಿಬಿಟ್ಟಿದೆ.  ಹಿಂದುಗಳು ಸೃಷ್ಟಿಯ  ಆದಿಯಲ್ಲೇ ತಮ್ಮ ಪೂರ್ವಜರಿಗೆ ವೇದಗಳು ಲಭಿಸಿದವೆಂದು ನಂಬುತ್ತಾರೆ.  ಅವು ಅಪೌರುಷೇಯವೆಂದೂ, ಮಾನವನಿರ್ಮಿತವಲ್ಲವೆಂದೂ ನಂಬುತ್ತಾರೆ. ಮಾನವ ಕಲ್ಯಾಣದ ಬಯಕೆಯಿಂದ ಗಹನ ಚಿಂತನೆಯಲ್ಲಿ ಮಗ್ನರಾದ ಮಹರ್ಷಿಗಳಿಗೆ ‘ಕಾಣ್ಕೆ’ಯಾಗಿ ಎಟುಕಿ ಅವು ಮೂಡಿಬಂದವೆಂದು ನಮ್ಮ ಪರಂಪರೆ ಸಾರುತ್ತದೆ.  ಈ ಕಲ್ಪನೆಯ ಗಹನತೆ, ಗಾಂಭೀರ್ಯಗಳನ್ನು ಅರ್ಥೈಸಹೊರಟಾಗ ಇಂಥ ಗಹನ ವಿಚಾರಗಳಿಗೆ ಆಧಾರವಾದ ಆ ಪ್ರಾಚೀನ ಪೂರ್ವಜರ ಮನಸ್ಸು ವಿಜ್ಞಾನದ ಆವಿಷ್ಕಾರಕ್ಕೆ ಅಗತ್ಯವಾದ ಸತ್ಯನಿಷ್ಠೆ, ತರ್ಕಬದ್ಧತೆ ಹಾಗೂ ಪ್ರಯೋಗಶೀಲತೆಯ ಪ್ರವೃತ್ತಿಗಳಿಂದ ಕೂಡಿತ್ತೆಂಬುದೂ ನಮ್ಮ ಅರಿವಿಗೆ  ನಿಲುಕುತ್ತದೆ.

 ವೇದಮಂತ್ರಗಳಲ್ಲಿ ಅಲ್ಲಲ್ಲಿ ಮಾಡಲಾಗಿರುವ ಅರ್ಥಗರ್ಭಿತ ಶಬ್ದ ಪ್ರಯೋಗಗಳಿಂದ ವೈದಿಕ ಕಾಲದ ಜನರಿಗೆ ಇದ್ದ ವೈಜ್ಞಾನಿಕ ತಿಳಿವಳಿಕೆಯನ್ನು ಊಹಿಸಬಹುದಾಗಿದೆ. ಇಂದಿನ ಪ್ರಗತ ಭೌತ ವಿಜ್ಞಾನದ ಪರಿಕಲ್ಪನೆಗಳಿಗೆ ಸ್ಪಷ್ಟವಾಗಿಯೋ, ನಿಕಟವಾಗಿಯೋ ಹೋಲುವ ಕೆಲವು ವೈದಿಕ ಕಲ್ಪನೆಗಳಂತೂ ನಮ್ಮನ್ನು ಚಕಿತಗೊಳಿಸದಿರಲಾರವು. ‘ಅಪ್ರಕೇತಂ ಸಲಿಲಂ’ ಎಂಬುದು ಅಂಥದೊಂದು ಕಲ್ಪನೆ. ಸೃಷ್ಟಿಯ ಆದಿಯಲ್ಲಿದ್ದ ವೈಶ್ವಿಕ ದ್ರವ್ಯ (ಕಾಸ್ಮಿಕ್ ಮಾಸ್)ದ ಅತ್ಯಂತ ಪೂರ್ವರೂಪ ಈ ಅಪ್ರಕೇತ ಸಲಿಲ. ಆಧುನಿಕ ಭೌತವಿಜ್ಞಾನದ ‘ಪ್ರೈಮಿವಲ್ ನ್ಯೂಕ್ಲಿಯಸ್’ನ ಕಲ್ಪನೆಗೆ ಇದು ನಿಕಟ ಎನ್ನುತ್ತಾರೆ ಶಾಸ್ತ್ರಜ್ಞರು.

ತೈತ್ತರೀಯ ಬ್ರಾಹ್ಮಣದಲ್ಲಿ ನಕ್ಷತ್ರಗಳು ಮೊದಲು ‘ಅಪ್’ ಭೂತದಲ್ಲಿ (ಹೈಡ್ರೋಜಿನಸ್ ಗ್ಯಾಸ್) ಗುಳ್ಳೆಗಳಂತೆ ಉದ್ಭವಿಸುತ್ತವೆ ಎಂದೂ, ವಿಶ್ವವಿಕಾಸದಲ್ಲಿ (ಕಾಸ್ಮಿಕ್ ಎಕ್ಸ್‍ಪ್ಯಾನ್ಷನ್) ಇವೇ ಮುಂದೆ ನಕ್ಷತ್ರರೂಪವನ್ನು ಧರಿಸುವವೆಂದೂ ಕಲ್ಪನೆ ಇದೆ ! ಋಗ್ವೇದವು ತನ್ನೊಂದು ಮಂತ್ರದಲ್ಲಿ ಸೃಷ್ಟಿಕರ್ತನು ಹಿಂದಿನ ಕಲ್ಪದಲ್ಲಿದ್ದಂತೆ ಸೂರ್ಯ, ಚಂದ್ರ, ಪೃಥ್ವಿ ಮುಂತಾದುವನ್ನು ತಿರುಗಿ ನಿರ್ಮಿಸಿದನೆಂದು ಘೋಷಿಸಿದೆ. ವಿಶ್ವವು ಸೃಷ್ಟಿ, ಲಯಗಳ ನಿಯಮಕ್ಕೆ ಒಳಪಟ್ಟಿದೆ ಎಂಬ ಮತ್ತು ಸೃಷ್ಟಿಯ ಚಕ್ರಗತಿಯಲ್ಲಿ ಆವರ್ತಿತವಾಗುವುದೆಂಬ (ಸೈಕ್ಲಿಕ್ ಕ್ರಿಯೇಷನ್) ವೈಜ್ಞಾನಿಕ ದರ್ಶನ  ಇದರ ಹಿಂದಿದೆ.

ವೇದಗಳಲ್ಲಿನ ‘ಋತ’ದ ಪರಿಕಲ್ಪನೆಯೂ ಅತ್ಯಮೋಘವಾದುದು. ವಿಶ್ವದ ಎಲ್ಲ ಕ್ರಿಯೆಗಳೂ ನಿಯಮಿತವಾಗಿವೆ; ಆ ಕ್ರಿಯೆಗಳ ಹಿಂದಿರುವ ಶಕ್ತಿಗಳೂ ನಿಯಮಬದ್ಧವಾಗಿವೆ; ಈ ನಿಯಮಗಳು ದೇವತೆಗಳಿಗೂ ಅನುಲ್ಲಂಘ್ಯ; ಈ ಕಾರಣದಿಂದಲೇ ವಿಶ್ವದಲ್ಲಿ ಒಂದು ವ್ಯವಸ್ಥೆಯು (ಕಾಸ್ಮಿಕ್ ಆರ್ಡರ್) ಉಂಟಾಗಿದೆ ಎಂಬುದೇ ವೈದಿಕ ಋಷಿಗಳ ಸ್ಪಷ್ಟ ಮತ,  ಈ ವೈಶ್ವಿಕ ನಿಯಮವನ್ನೇ ಅವರು ‘ಋತ’  ಎಂದು ಹೆಸರಿಸಿರುವುದು. ವೈದಿಕ ದೇವತೆಗಳು ಈ ನಿಯಮಕ್ಕೆ ಒಳಪಟ್ಟವರು. ಅದರ ಸಂರಕ್ಷಣೆಗೆ ನಿಯಮಿತರಾದವರು ಎಂಬುದು ವೇದಗಳ ವಿಶ್ಲೇಷಣೆಯಿಂದ ಸ್ಥಿರಪಡುತ್ತದೆ. ವಿಶ್ವದ ಚಟುವಟಿಕೆಗಳನ್ನು  ಕ್ರಮಬದ್ಧಗೊಳಿಸುವ ಈ ಸಾರ್ವಭೌಮ ತತ್ವದ ಕಲ್ಪನೆಯು ಅತ್ಯಂತ ಮಹತ್ವಪೂರ್ಣವಾದುದು. ಏಕೆಂದರೆ ವೈಜ್ಞಾನಿಕ ಮನೋಭೂಮಿಕೆಗೆ ಇದೇ ಅಡಿಗಲ್ಲಾಗಿ ಪರಿಣಮಿಸುತ್ತದೆ.

ಆಧುನಿಕ ವಿಜ್ಞಾನವು ಇನ್ನೂ ಒಪ್ಪಿಕೊಳ್ಳದಿರುವ, ಆದರೆ ಹೆಜ್ಜೆ ಹೆಜ್ಜೆಯಾಗಿ ಅತ್ತಲೇ ಸಾಗುತ್ತಿರುವ ಇನ್ನೊಂದು ವೈದಿಕ ಸತ್ಯದರ್ಶನ- ‘ವೈವಿಧ್ಯಮಯವಾಗಿ ಕಂಗೊಳಿಸುವ ಈ ಸೃಷ್ಟಿಯ ಹಿಂದೆ ಏಕ ಮೂಲವಸ್ತು ಅಡಗಿದೆ’- ಎಂಬುದು. ಆಧುನಿಕರ ಗಮನ ಸೆಳೆಯಲೇಬೇಕಾದ ಈ ತಾರ್ಕಿಕ ಚಿಂತನೆಯು ‘ನಾಸದೀಯ ಸೂಕ್ತ’ ಎಂಬ ಋಗ್ವೇದ ಭಾಗದಲ್ಲಿದೆ.  ಆದರೆ ವೈದಿಕ ಋಷಿಗಳಿಗೆ ಇದೊಂದು ಬರಿಯ ಕಲ್ಪನೆಯಾಗಿರದೆ,  ಅವರು ಅನುಭವಿಸಿದ ಸತ್ಯವಾಗಿತ್ತೆಂಬುದನ್ನೂ ಅವರ ಸ್ಪಷ್ಟ ಉದ್ಘೋಷಗಳಿಂದ ನಾವು ತಿಳಿಯಬಹುದು.* ‘ವಿಶ್ವವು ನಿಯಮಾಧೀನವಾಗಿದೆ’ ಎಂಬ ಸತ್ಯದರ್ಶನವೂ, ಸೃಷ್ಟಿಯ ಮೂಲವಸ್ತು ಒಂದೇ ಎಂಬ ಅನುಭವವೂ ಹಿಂದು ದರ್ಶನವನ್ನು (ಹಿಂದೂ ಫಿಲಾಸಫಿ) ಬಿಟ್ಟರೆ ಪ್ರಾಚೀನಕಾಲದ ಬೇರಾವ ದೇಶಗಳ ದರ್ಶನಗಳೂ ಸ್ಫುಟವಾಗಿ ನಿರೂಪಿಸುವುದಿಲ್ಲ ಎಂಬುದನ್ನು ಹಿಂದುಧರ್ಮದ ಟೀಕಾಕಾರರು ಗಮನದಲ್ಲಿಡಬೇಕು.

ಅರ್ಥಗರ್ಭಿತ ಶಬ್ದಪ್ರಯೋಗಗಳು

ವೇದಗಳು ಸೂರ್ಯನನ್ನು ‘ಅಶ್ಮಪ್ರಶ್ನಿಃ’ ಎಂಬ ಅರ್ಥಗರ್ಭಿತ ಹೆಸರಿನಿಂದ ಸೂಚಿಸಿವೆ.  ಸೂರ್ಯನ ಕಿರಣಗಳಲ್ಲಿ ಒಂದು ವರ್ಣಪಟಲವಿದೆ ಎಂಬುದು ಇದರ ಸೂಚ್ಯಾರ್ಥ. (ಪ್ರಿಸಂನ ಮೂಲಕ ಕಿರಣಗಳನ್ನು ಹಾಯಿಸಿದಾಗ ವಕ್ರೀಭವನ ಕ್ರಿಯೆಯಿಂದ ‘ವರ್ಣಪಟಲ’ ಉಂಟಾಗುತ್ತದೆ ಎಂಬುದನ್ನು ಆಧುನಿಕ ವಿಜ್ಞಾನವು ಸಿದ್ಧಪಡಿಸಿದ್ದು ಈಚಿನ ಶತಮಾನಗಳಲ್ಲಷ್ಟೇ) ವೇದಗಳು ಸೂರ್ಯನನ್ನು ‘ಸಂವ‍ತ್ಸರ’ ಎಂಬುದಾಗಿಯೂ  ಹೆಸರಿಸಿವೆ. ‘ಸಂವತ್’ ಮತ್ತು ‘ಸರ’ಗಳೆಂಬ ಎರಡು ಶಬ್ದಗಳು ಕೂಡಿ ಆಗಿರುವ ಸಂಯುಕ್ತವಿದು. ಆಧುನಿಕ ಪರಿಭಾಷೆಯಲ್ಲಿನ ‘ಪಿನಂಬ್ರ’ (ಸೂರ್ಯ ಕಳಂಕದ ಸುತ್ತಣ ನಸುಬೆಳಕಿನ ಹೊರಭಾಗ) ಹಾಗೂ ‘ಅಂಬ್ರ’ (ಸೂರ್ಯ ಕಳಂಕದ ಕಪ್ಪನೆಯ ಮಧ್ಯಭಾಗ) ಈ ಶಬ್ದಗಳಿಗೆ ‘ಸಂವತ್’ ಮತ್ತು ‘ಸರ’ಗಳೆಂಬ ಈ ಎರಡು ಶಬ್ದಗಳು ಕ್ರಮವಾಗಿ ಸಂವಾದಿಯಾಗಿವೆಯೆಂದು ವಿದ್ವಾಂಸರು ಹೇಳುತ್ತಾರೆ ! ಸೂರ್ಯ ಗರ್ಭದಲ್ಲಿ ‘ಅಪ್ ಭೂತ’ವಿದೆ ಎಂದು (ಹೈಡ್ರೊಜನ್) ವೇದಗಳ  ಇನ್ನೊಂದು ಅಂಬೋಣ ! ಸೂರ್ಯನ ಶಾಖ, ಬೆಳಕುಗಳಿಗೆ ಅದು ಕಾರಣವಂತೆ. ವೈದಿಕ ಋಷಿಗಳ ಈ ಕಲ್ಪನೆ ಆಧುನಿಕ ವಿಜ್ಞಾನಕ್ಕೆ ನಿಕಟವಾಗಿದೆ ! ಪ್ರಪಂಚದ ಬಗ್ಗೆ ಬಳಸಲಾಗಿರುವ ಮತ್ತು ಇಂದು ಜನಸಾಮಾನ್ಯರ ಆಡುಮಾತಿನಲ್ಲೂ ನುಸುಳುವ ‘ಜಗತ್ತು’ ಎಂಬ ಪಾರಿಭಾಷಿಕ ಶಬ್ದವೂ  ‘ಸದಾ ಚಲನಸ್ಥಿತಿಯಲ್ಲಿದೆ’ ಎಂಬ ಅರ್ಥವನ್ನು ಹೊಮ್ಮಿಸುವ ಮೂಲಕ ಅದರ ಹಿಂದಿರುವ ವೈಜ್ಞಾನಿಕ ಚಿಂತನೆಗೆ ಕನ್ನಡಿ ಹಿಡಿಯುತ್ತದೆ.  ನಮ್ಮ ಪ್ರಾಚೀನ  ಸಾಹಿತ್ಯದಲ್ಲಿ ಹೆಜ್ಜೆ ಹೆಜ್ಜೆಗೂ ಸಿಗುವ ಇಂಥ ಅರ್ಥಗರ್ಭಿತ ಶಬ್ದ ಪ್ರಯೋಗಗಳನ್ನು ಕುರಿತು ಇಂದು ವಿಶೇಷ ಅಧ್ಯಯನವನ್ನು ನಡೆಸಬೇಕಾದ ಅಗತ್ಯವಿದೆ.

ಲೇಖಕರು : ಡಾ. ಉಪೇಂದ್ರ ಶೆಣೈ

ಮುಂದುವರೆಯುವುದು

   

Leave a Reply