ಜಗದ್ಗುರು ಭಾರತ ಭಾಗ – 8

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 09.07.2014

ವೇದಗಳಲ್ಲಿ ವೈಜ್ಞಾನಿಕ ಕಲ್ಪನೆಗಳು-5

ಕಪಿಲ ಮುನಿಯ ‘ಸಾಂಖ್ಯಶಾಸ್ತ್ರ’

ಪ್ರಾಚೀನ ವೈದಿಕ ಕಾಲದಲ್ಲಿ ನಮ್ಮ ದೇಶದಲ್ಲಿ ವಿಶ್ವಸೃಷ್ಟಿಯನ್ನು ಕುರಿತು ನಡೆದ ಊಹಾಪೋಹಗಳಲ್ಲಿ ಹಲವಾರು ಗಮನಾರ್ಹ ಬಿಂದುಗಳಿದ್ದುದನ್ನು ಕಳೆದ ಲೇಖನದಲ್ಲಿ ಪ್ರಸ್ತಾಪಿಸಲಾಗಿತ್ತು. ಅಗ್ನಿ-ಜಲಗಳ, ಉಷ್ಣ-ಬಾಷ್ಪಗಳ, ಸೂರ್ಯ-ವೃಷ್ಟಿಗಳ ಪಾರಸ್ಪರಿಕ  ಸಂಬಂಧದ ಬಗ್ಗೆ ಗಮನಿಸಬೇಕೆಂದು  ನಮ್ಮ ಪ್ರಾಚೀನರಿಗೆ ಅನ್ನಿಸಿದ್ದೂ , ಸೃಷ್ಟಿಕ್ರಿಯೆಯು ಈ ಪ್ರಭಾವಗಳನ್ನು ಅವಲಂಬಿಸಿದೆ ಎಂದು  ಅವರು ಸಾರಿದ್ದೂ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ವ್ಯಷ್ಟಿ ಮತ್ತು ಸಮಷ್ಟಿ (Micro and Macrocosm) ಗಳಲ್ಲಿ ಏಕರೂಪತೆ ಇದೆ ಎಂಬುದನ್ನು ಅವರು ಅನುಮಾನವಿಲ್ಲದಷ್ಟು ಸ್ಪಷ್ಟ ರೀತಿಯಲ್ಲಿ ಘೋಷಿಸಿದ್ದೂ1– ಅಂದಿನ ಕಾಲದ  ಹಿನ್ನೆಲೆಯಲ್ಲಿ  ಕಂಡಾಗ ಅವನ್ನು  ಮಹತ್ಸಾಧನೆಗಳು ಎಂದು ಹೇಳದಿರಲಾದೀತೆ? ಈ ಕಲ್ಪನೆಗಳ  ವೈಜ್ಞಾನಿಕ ಸ್ವರೂಪ, ಮಹತ್ವಗಳನ್ನು ಅಲ್ಲಗಳೆಯಲು ಸಾಧ್ಯವೇ?

ಹೀಗೆಂದ ಮಾತ್ರಕ್ಕೆ ಆಗಿನವರ ‘ಸೃಷ್ಟಿ’ ಚಿಂತನೆಯಲ್ಲಿ ಎಲ್ಲವ ಸರಿಯಾಗಿತ್ತು ಎಂದು ಹೇಳುವುದು ಲೇಖಕನ ಉದ್ದೇಶವೆಂದು ಯಾರೂ ಭಾವಿಸಬಾರದು. ಅವರ ಈ ಸಾರಭೂತ ಚಿಂತನೆಯ ಸುತ್ತ ಹಲವಾರು ಹಾಸ್ಯಾಸ್ಪದವೆಂದು ಇಂದು ಅನ್ನಿಸುವ ಕೆಲವು ಕಲ್ಪನೆಗಳೂ, ವೈಜ್ಞಾನಿಕ ವಿಧಾನಕ್ಕೆ ಸರಿ ಹೊಂದದ ಪ್ರತೀಕಾತ್ಮಕ ವಿವರಣೆಗಳೂ ಆವರಿಸಿ ಬೆರೆತಿದ್ದು, ವೈದಿಕ ಕಾಲದ ಚಿಂತನೆಯು ಒಟ್ಟಾರೆಯಾಗಿ  ನಗೆಪಾಟಲಿನದೆಂದು ನಾವು ತಿರಸ್ಕರಿಸುವಂತೆ ಮಾಡಿವೆ. ಉದಾಹರಣೆಗೆ, ‘ಆಕಾಶಕ್ಕೆ ಆಧಾರವಿದೆ’ ಎಂಬ ಕಲ್ಪನೆ ಭೂಮಿಯನ್ನು ಪಾಶಗಳಿಂದ ಬಂಧಿಸಿ ಸ್ಥಿರಪಡಿಸಲಾಗಿದೆ  ಎಂಬ ಕಲ್ಪನೆ ವೈದಿಕ ಸಾಹಿತ್ಯದಲ್ಲಿದೆ.  ‘ತ್ರಿಲೋಕಗಳಲ್ಲಿ ದೇವ, ಮಾನವ, ದಾನವರ ನಿವಾಸವಿದೆ’ ಎಂಬ ಕಲ್ಪನೆಯೂ, ‘ಅಧೋಲೋಕ2ಗಳಲ್ಲಿ ಮೃತಪಾಪಾತ್ಮರ ನಿವಾಸವಿದೆ’ ಎಂಬ ಕಲ್ಪನೆಯೂ ಆಧುನಿಕ ಕಾಲದಲ್ಲಿ  ನಂಬಲನರ್ಹವಾಗಿವೆ. ಪ್ರಪಂಚವು ಒಂದು ಸೌಧವೆಂಬ ವಿವರಣೆಯೂ, ಅದು ಆಮೆಯಂತಿದೆಯೆಂಬ ಮತ್ತು ಚಿಪ್ಪಿನಂತೆ ವಕ್ರವಾಗಿ ಬಾಗಿದ ಮೇಲ್ಭಾಗ ದಿವ್ಯಲೋಕ (Heaven) ಹಾಗೂ ಆಮೆಯ ಹೊಟ್ಟೆಯಂತೆ ಸಮತಟ್ಟಾದ ತಳವೇ ಭೂಲೋಕ ಎಂದು ವಿವರಿಸುವ ರೀತಿಯೂ ನಿಶ್ಚಿತವಾಗಿ  ಪ್ರತೀಕಾತ್ಮಕ. ಅಂತೆಯೇ ವಿಶ್ವವನ್ನು ಇಬ್ಭಾಗ ಮಾಡಿದ ಮೊಟ್ಟೆಗೆ ಹೋಲಿಸಿ, ಅದರಲ್ಲಿ ಚಿನ್ನದ ಬಣ್ಣದ ಭಾಗವು ಸ್ವರ್ಗವೆಂದೂ, ಬೆಳ್ಳಿಯ ಬಣ್ಣದ್ದು ಭೂಮಿಯೆಂದೂ ಛಾಂದೋಗ್ಯೋಪನಿಷತ್ತು ವರ್ಣಿಸುವುದೂ ಪ್ರತೀಕಾತ್ಮಕವೇ. ಇವುಗಳಿಗೆ ವೈಜ್ಞಾನಿಕ ಅರ್ಥ ಇರಲಾರದು.

ವಿಶ್ವವನ್ನು ಅರ್ಥೈಸುವ ಮೊದಲ

ತಾರ್ಕಿಕ ಪ್ರಯತ್ನ ಭಾರತದಲ್ಲಿ

ಸಾವಿರಾರು ವರ್ಷಗಳ ಹಿಂದೆ, ಆ ಪ್ರಾರಂಭಿಕ ದಿನಗಳಲ್ಲಿ, ‘ಸೃಷ್ಟಿ’ಯಂತಹ ಇಂದಿಗೂ ನಿಗೂಢ ವಿಷಯದ ಬಗ್ಗೆ ಮಾಡಲಾದ ಚಿಂತನೆಯಲ್ಲಿ  ಈ ಬಗೆಯ  ಗೊಂದಲವಿದ್ದರೆ ಅದು  ಸಹಜವಷ್ಟೇ. ಆದರೆ ಮುಂದೆ ಈ ಪ್ರಯತ್ನದ ಫಲವಾಗಿಯೇ ಚಿಂತನೆ ಬೆಳೆದು ಗಹನವಾಗತೊಡಗಿತು.  ಇದರ ಪರಿಣಾಮವಾಗಿಯೇ ಉತ್ಪ್ರೇಕ್ಷೆ, ಉಪಮಾನಗಳನ್ನು ಬಳಸದೇ ಅತಿಮಾನುಷ ದೇವರುಗಳ ನೆರವನ್ನವಲಂಬಿಸದೇ, ನೇರವಾದ ವೈಜ್ಞಾನಿಕ ತರ್ಕವಿಧಾನದಿಂದ ವಿಶ್ವವನ್ನು ಅರ್ಥೈಸುವ  ಪ್ರಯತ್ನವೊಂದು  ಇಡೀ ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಮಹರ್ಷಿ ಕಪಿಲನಿಂದ ನಡೆಯಿತು. ಕಪಿಲ ಋಷಿಯ ಈ ಚಿಂತನೆಯನ್ನು  ಆತನ ಪ್ರಸಿದ್ಧ ‘ಸಾಂಖ್ಯ ಸೂತ್ರಗಳು’ ಎಂಬ ಗ್ರಂಥದಲ್ಲಿ ನಾವು ನೋಡಬಹುದು.1  ಕಪಿಲನು ವಿಶ್ವವಿಕಾಸವನ್ನು  ಕುರಿತು ಬುದ್ಧಿನಿಷ್ಠ (Rational) ತಾರ್ಕಿಕ (Logical)  ರೀತಿಯಲ್ಲಿ ಕೇವಲ ಭೌತಿಕ ದೃಷ್ಟಿಕೋನದಿಂದಲೇ  ಈ ಗ್ರಂಥದಲ್ಲಿ  ಚರ್ಚಿಸುತ್ತಾನೆ.

 ಸಾಂಖ್ಯ ಶಬ್ದಾರ್ಥ

‘ಸಂಖ್ಯಾ’  ಎಂಬ ಶಬ್ದದಿಂದ ‘ಸಾಂಖ್ಯ’ ಶಬ್ದ ಹುಟ್ಟಿದೆ.  ಸಂಖ್ಯೆ ಎಣಿಕೆಗೆ ಸಂಬಂಧಿಸಿದ್ದು. ಸೃಷ್ಟಿಯಲ್ಲಿ  ಅಡಕವಾದ  ತತ್ವಗಳನ್ನು ಬಿಡಿಸಿ, ಎಣಿಸಿ ಹೇಳಿದ್ದರಿಂದ  ಈ ಶಾಸ್ತ್ರಕ್ಕೆ ‘ಸಾಂಖ್ಯಶಾಸ್ತ್ರ’ವೆಂದು ಹೆಸರಾಯಿತಂತೆ. ‘ಸಾಂಖ್ಯ’ ಎಂಬ ಶಬ್ದಕ್ಕೆ ಜ್ಞಾನ ಅಥವಾ ವಿವೇಕ ಎಂಬ ಅರ್ಥವೂ ಇದೆ.  ಈ ಅರ್ಥವನ್ನಿರಿಸಿಕೊಂಡವರು ಕಪಿಲನ ಶಾಸ್ತ್ರಕ್ಕೆ ‘ಸಾಂಖ್ಯ’ವೆಂಬ ಹೆಸರು ಬಂದದ್ದರ ಕಾರಣವನ್ನು ವಿವರಿಸುವ ರೀತಿಯೇ ಬೇರೆ. ಸಾಂಖ್ಯಶಾಸ್ತ್ರವು  ಪ್ರಕೃತಿ ಮತ್ತು ಪುರುಷ ಎಂಬ ಎರಡು ಮೂಲತತ್ವಗಳ ಸಂಯೋಗದಿಂದ ವಿಶ್ವಸೃಷ್ಟಿ ಎಂಬುದಾಗಿ  ಪ್ರತಿಪಾದಿಸಿದೆ.  ‘ವಿಶ್ವದ ಪ್ರತಿಯೊಂದು ವಸ್ತುವಿನಲ್ಲೂ ಇರುವಂತೆ ಮಾನವನಲ್ಲೂ ಈ ಪ್ರಕೃತಿ-ಪುರುಷ ತತ್ವಗಳಿವೆ.’ ಸಾಮಾವ್ಯವಾಗಿ  ಉಳಿದ ಪ್ರಾಣಿಗಳಂತೂ ಸರಿಯೇ, ಬುದ್ಧಿಯುಳ್ಳ ಪ್ರಾಣಿ ಎನಿಸಿದ ಮಾನವನೂ ಈ ಪ್ರಕೃತಿ-ಪುರುಷ ತತ್ವಗಳ ಬಗ್ಗೆ ಅಜ್ಞಾನಿಯಾಗಿದ್ದಾನೆ, ಹಾಗಿರುವವರೆಗೂ ಆತ ಜನನ-ಮರಣಗಳ ಚಕ್ರದಲ್ಲಿ  ಸಿಲುಕಿ ನರಳುತ್ತಾನೆ, ಆದರೆ ಯಾವಾಗ ವಿವೇಚನೆ ಹಾಗೂ ಸಾಧನೆಗಳ ಫಲವಾಗಿ ತಾನು ‘ಪುರುಷ’ ಅಥವಾ ಚೇತನ ‘ಜೀವ’ನೆಂಬ, ಜಡ ‘ಪ್ರಕೃತಿ’ಯಿಂದ ಭಿನ್ನನೂ  ಸ್ವತಂತ್ರನೂ ಆಗಿದ್ದೇನೆಂಬ ಜ್ಞಾನೋದಯವಾಗುವುದೋ, ಆಗ ಅವನಿಗೆ ಮೋಕ್ಷವು ಲಭಿಸುತ್ತದೆ.  ಇಂಥ ಜ್ಞಾನವನ್ನು  ಮೂಡಿಸುವುದರಿಂದ  ಈ ಶಾಸ್ತ್ರಕ್ಕೆ ಸಾಂಖ್ಯಶಾಸ್ತ್ರವೆಂದು ಹೆಸರು- ಇದು ‘ಸಾಂಖ್ಯ’1 ಎಂದರೆ ಜ್ಞಾನ ಎಂಬ ಅರ್ಥವನ್ನು  ‍ಗ್ರಹಿಸುವವರು  ‘ಸಾಂಖ್ಯಶಾಸ್ತ್ರ’ದ ಹೆಸರಿನ ಅನ್ವಯಾರ್ಥವನ್ನು  ಹೇಳುವ ರೀತಿ.

ಸಾಂಖ್ಯದರ್ಶನದ ಪ್ರಾಚೀನತೆ

ಸಾಂಖ್ಯದರ್ಶನದ ಪ್ರಾಚೀನತೆಯನ್ನು ನಾವೀಗ ನಿರ್ಧರಿಸಬೇಕು. ಈ ಕೆಲವು ಮಾಹಿತಿಗಳು ಇಲ್ಲಿ ಉಪಯುಕ್ತವೆನಿಸುತ್ತವೆ. ಅಥರ್ವವೇದದಲ್ಲಿ  ಸಾಂಖ್ಯತತ್ವದ ಪ್ರತಿಪಾದನೆ ಇದೆ.  ಅಥರ್ವವೇದದಷ್ಟೇ ಪ್ರಾಚೀನ  ಈ ದರ್ಶನ ಎಂಬುದು  ಇದರಿಂದ  ಸಿದ್ಧವಾಗುತ್ತದೆ.  ಮುಂದೆ ಉಪನಿಷತ್ತುಗಳ ಕಾಲದಲ್ಲಿ  ಮೂಡಿಬಂದ ಕಠ, ಶ್ವೇತಾಶ್ವತರ,  ಪ್ರಶ್ನ, ಮೈತ್ರಾಯಿಣಿ ಮುಂತಾದ  ಪ್ರಖ್ಯಾತ ಉಪನಿಷತ್ತುಗಳ ಮೇಲೆ ಸಾಂಖ್ಯದರ್ಶನವು ಆಳವಾಗಿ  ತನ್ನ ಮುದ್ರೆಯೊತ್ತಿರುವುದನ್ನು ನಾವು ಕಾಣಬಹುದು.  ಕಪಿಲ ಮುನಿಯ  ಮೂಲ ಸಾಂಖ್ಯದರ್ಶನವು ನಾಸ್ತಿಕವಾದಿಯಾಗಿತ್ತು.2 ಆದ್ದರಿಂದ ಅದನ್ನು  ‘ನಿರೀಶ್ವರ ಸಾಂಖ್ಯ’ ಎಂದು ಕರೆಯಲಾಗುತ್ತದೆ. ಆದರೆ ಮುಂದೆ ಉಪನಿಷತ್ಕಾಲದ ವೇಳೆಗೆ ಭಾರತದಲ್ಲಿ ‘ಬ್ರಹ್ಮ’3ವಾದಿಯಾದ ‘ವೇದಾಂತ ದರ್ಶನ’ದ ಪ್ರಭಾವವು ಜನಮಾನಸದಲ್ಲಿ ಹೆಚ್ಚಿತ್ತು. ಇದರ ಅನುಯಾಯಿಗಳಿಗೆ ‘ವೇದಾಂತಿ’ಗಳೆಂಬ ಹೆಸರು. ವೇದಾಂತಿಗಳು ಪ್ರಬಲರಾದರೂ  ಅವರಿಗೆ ಸಾಂಖ್ಯರ ವಿಜ್ಞಾನನಿಷ್ಠವಾದ ಸೃಷ್ಟಿವಾದವನ್ನು ಅಲ್ಲಗಳೆಯಲಾಗಲಿಲ್ಲ. ಹೀಗಾಗಿ ಸಾಂಖ್ಯ ಮತ್ತು ವೇದಾಂತಗಳ ಸಮನ್ವಯದ ಹೊಸ ವಿಚಾರಸರಣಿಯೊಂದು ಈ ನಾಡಿನಲ್ಲಿ  ಪ್ರಚಾರಕ್ಕೆ ಬಂದಿತು.  ಇದನ್ನು ’ಸೇಶ್ವರ ಸಾಂಖ್ಯದರ್ಶನ’ ಎಂದು ಹೆಸರಿಸಲಾಗಿದೆ.  ನಾಡಿನ ಶ್ರದ್ಧೆಗೆ ಪಾತ್ರವಾಗಿರುವ ಮಹಾಭಾರತ, ಭಗವದ್ಗೀತೆ, ಹದಿನೆಂಟು ಪುರಾಣಗಳಲ್ಲಿ ಈ ಹೊಸ ದರ್ಶನದ ಮುದ್ರೆ ಬಿದ್ದಿರುವುದನ್ನು ಕಾಣಬಹುದು. ಸಾಂಖ್ಯದರ್ಶನವು  ನಿರ್ಮಿಸಿದ ಹಿತಕರ ಬುದ್ಧಿನಿಷ್ಠ, ವೈಚಾರಿಕ ವಾತಾವರಣದಲ್ಲಿ ಅಂಕುರಿಸಿ ಬೆಳೆಯಲು  ಜೈನ, ಬೌದ್ಧರ ಅವೈದಿಕ  ದರ್ಶನಗಳಿಗೂ  ಸಾಧ್ಯವಾಯಿತು.  ಶುದ್ಧ ಬುದ್ಧಿಪ್ರಾಮಾಣ್ಯದ (Rationalism)  ಮೇಲೆ ನೆಲೆ ನಿಂತಿದೆಯೆಂಬ ಖ್ಯಾತಿಯಿಂದಾಗಿ ಭಾರತೀಯ ಜನಮಾನಸವು ಈ ಸಾಂಖ್ಯದರ್ಶನವನ್ನು ಎಷ್ಟು ವ್ಯಾಪಕವಾಗಿ ಒಪ್ಪಿಕೊಂಡಿತೆಂಬುದನ್ನು ಇದರಿಂದ ನಾವು  ಊಹಿಸಬಹುದಾಗಿದೆ.

——————————————————————————————————————————————————

  1. ‘ತತ್ವಮಸಿ’, ‘ಅಹಂ ಬ್ರಹ್ಮಾಸ್ಮಿ’, ‘ಸರ್ವಂ ಖಲ್ವಿದಂ ಬ್ರಹ್ಮ’  ಇತ್ಯಾದಿ ವೈದಿಕ ಮಹಾಕಾವ್ಯಗಳ ಅಂತರಾರ್ಥವನ್ನು ಗಮನಿಸಿ.
  2. ಭೂಮಿಯ ಮೇಲೆ ಭುವಃ, ಸ್ವಃ ಎಂಬೆರಡು ಊರ್ಧ್ವ ಲೋಕಗಳನ್ನು ಕಲ್ಪಿಸಿದ ತರ್ಕಬಲದಿಂದಲೇ ಕೆಳಗೆ ಅಧೋ ಲೋಕಗಳೆರಡು ಇವೆ ಎಂದು ಕಲ್ಪಿಸಲಾಯಿತು.  ಮುಂದೆ ಈ ತರ್ಕವೇ 7 ಊರ್ಧ್ವಲೋಕಗಳನ್ನೂ,  7 ಅಧೋಲೋಕಗಳನ್ನೂ ಕಲ್ಪಿಸಿತು.

1. ಕಪಿಲಮುನಿ ‘ತತ್ವಮಾಸ’, ‘ಸಾಂಖ್ಯಸೂತ್ರಗಳು’ ಎಂಬೆರಡು ಗ್ರಂಥಗಳನ್ನು ರಚಿಸಿದ್ದ. ಆತನು  ‘ಸಾಂಖ್ಯದರ್ಶನ’ದ ಜನಕ ಎಂಬ ಖ್ಯಾತಿಗೆ ಪಾತ್ರನಾಗಿದ್ದಾನೆ. ಸಾಂಖ್ಯದರ್ಶನವು ನಂತರ ವಿಖ್ಯಾತವಾದ ವೈದಿಕ ಆರು ದರ್ಶನಗಳಲ್ಲಿ ಒಂದಾಗಿ ಮನ್ನಿಸಲ್ಪಟ್ಟಿತು.  ಭಾರತದಲ್ಲಿನ ವೈಜ್ಞಾನಿಕ ಚಿಂತನೆಗೆ ಬಲವಾದ ಅಡಿಪಾಯವನ್ನದು ನೀಡಿತು.

1. ಭಗವದ್ಗೀತೆಯ ಎರಡನೆಯ ಅಧ್ಯಾಯಕ್ಕೆ ‘ಸಾಂಖ್ಯಯೋಗ’ವೆಂಬ ಹೆಸರು ಈ ಕಾರಣದಿಂದಲೇ ಬಂದಿತು. ಯುದ್ಧರಂಗವನ್ನು ಪ್ರವೇಶಿಸಿದ ಅರ್ಜುನನು ಬಂಧುಮೋಹಕ್ಕೀಡಾಗಿ ಕರ್ತವ್ಯಪಾಲನೆಗೆ ಹಿಂಜರಿದಾಗ ಶ್ರೀಕೃಷ್ಣನು ಆ ಮೋಹದಿಂದ ಬಿಡಿಸಿ ಆತನು ಕರ್ತವ್ಯಪರನಾಗುವಂತೆ ಮಾಡಿದ ಪ್ರಥಮೋಪದೇಶವು  ‘ಸಾಂಖ್ಯಶಾಸ್ತ್ರ’ವನ್ನು ಆಧರಿಸಿದ್ದಾಗಿತ್ತು.  ಸೃಷ್ಟಿ ವಿಜ್ಞಾನವನ್ನು ಮಾನವರ ಸಾಮಾಜಿಕ ಕರ್ತವ್ಯಜ್ಞಾನದ ಆಧಾರವಾಗಿಸುವ, ತತ್ವಶಾಸ್ತ್ರವನ್ನು  ಕೇವಲ ಪಂಡಿತರ  ಒಣಚರ್ಚೆಗೆ ಮೀಸಲಿರಿಸದೇ, ವ್ಯಾವಹಾರಿಕ  ಪ್ರಯೋಜನದ ಶಾಸ್ತ್ರವಾಗಿ ಅದನ್ನು ಬಳಸುವ ಪ್ರಯತ್ನವನ್ನು  ಪ್ರಾಚೀನ ಭಾರತೀಯರು ಮಾಡಿದ್ದರೆನ್ನಲು‍ ಇದೊಂದು  ಸುಂದರ ಸಾಕ್ಷಿ.

2. ಕಪಿಲನು  ‘ಪ್ರಕೃತಿ’ಗೆ (Nature) ಹೊರತಾದ ಯಾವ ಸೃಷ್ಟಿತತ್ವವನ್ನೂ ಒಪ್ಪಿಲ್ಲ. ಆತನಿಗಿಂತಲೂ ಬಹು ಮುಂಚಿನಿಂದ ನಾಸ್ತಿಕ ವಿಚಾರಧಾರೆಯು, ಆಸ್ತಿಕ ವಿಚಾರಧಾರೆಗೆ ಸಮಪ್ರವಾಹಿಯಾಗಿ ನಮ್ಮ ದೇಶದಲ್ಲಿ ಹಬ್ಬಿತ್ತು. ಆದರೆ ಅದು ತುಂಬ ಸ್ಥೂಲರೀತಿಯಲ್ಲಿತ್ತು.  ಅದಕ್ಕೆ ಆಗ ಯಾವ ಶಾಸ್ತ್ರೀಯ ಚೌಕಟ್ಟು, ನೆಲಗಟ್ಟುಗಳೂ ಇದ್ದಂತೆ ತೋರುವುದಿಲ್ಲ.  ಸಮಾಜಜೀವನದಲ್ಲಿ ಹರಿದುಬರುತ್ತಿದ್ದ  ಈ ‘ಇಹಲೋಕವಾದ’ಕ್ಕೆ ಶಾಸ್ತ್ರೀಯ ನೆಲಗಟ್ಟನ್ನು ಮೊದಲಿಗೆ ಒದಗಿಸಿದ್ದು ಮಹರ್ಷಿ ಕಪಿಲ ಮತ್ತು ಆತನ ಅನುಯಾಯಿಗಳಾದ ಸಾಂಖ್ಯರು. ಸಾಂಖ್ಯರಿಗಿಂತಲೂ ಮುಂಚಿನವರಾದ ‘ತಾಂತ್ರಿಕ’ರು ‘ಸ್ತ್ರೀ’ ತತ್ವವನ್ನು  ಸೃಷ್ಟಿಕಾರಣವೆಂದು ಕಲ್ಪಿಸಿದ್ದರು. ಅದಕ್ಕಾಗಿಯೇ  ‘ಮಾತೃದೇವತಾ ಪೂಜೆ’ಯನ್ನೂ, ಅದಕ್ಕೆ ಸಂಬಂಧಿಸಿದಂತೆ ವಾಮಾಚಾರದ ಮಂತ್ರ-ತಂತ್ರಗಳ ಕರ್ಮಕಾಂಡವನ್ನೂ ರೂಪಿಸಿದ್ದರು. ಆದರೆ ಸಾಂಖ್ಯರು ಈ ಕರ್ಮಕಾಂಡದಿಂದ ದೂರ ಸರಿದರು.  ತಾಂತ್ರಿಕರ ‘ಮಾತೃದೇವತೆ’ಯನ್ನು ತಮ್ಮ ದೇವತೆಯಲ್ಲದ ‘ಪ್ರಕೃತಿ’ಯಾಗಿ ಮಾರ್ಪಡಿಸಿದರು. ಮುಂದೆ ವೇದಾಂತದ ಸಂಬಂಧ ಬೆಳೆದಾಗ ಚೈತನ್ಯಶಾಲಿಯಾದ ‘ಪುರುಷ’ತತ್ವವೂ ಜೋಡಿಯಾಯಿತು. ಈ ‘ಪ್ರಕೃತಿ-ಪುರುಷ’ವಾದವು ಇನ್ನಷ್ಟು ಗಟ್ಟಿ ನೆಲದ ಮೇಲೆ ನಿಂತಿತು.  ಒಟ್ಟಿನಲ್ಲಿ ಸಾಂಖ್ಯರು ತಮ್ಮ ಕಾಲದ ಎಲ್ಲ ವೈವಿಧ್ಯಮಯ ವಿಚಾರಧಾರೆಗಳನ್ನೂ ಮುಟ್ಟಿ ಅಲುಗಾಡಿಸಿದಂತೆ ತೋರುತ್ತದೆ.

3. ಇಲ್ಲಿ ‘ಬ್ರಹ್ಮ’ ಎಂದರೆ ಪೌರಾಣಿಕ ಸೃಷ್ಟಿದೇವತೆಯಾದ ‘ಚತುರ್ಮುಖ ಬ್ರಹ್ಮ’ನಲ್ಲ. ವೇದಾಂತದ ಬ್ರಹ್ಮವು ನಿರ್ಗುಣವೂ, ನಿರಾಕಾರವೂ ಆದ ಚೇತನವಸ್ತು. ವೇದಾಂತವು “ಈ ಚೇತನವಸ್ತು  ಅಥವಾ ‘ಬ್ರಹ್ಮ’ವೇ ಜಗತ್ತಿನ  ಮೂಲವಾಗಿದೆ. ‘ಏಕ’ವಾದ ಅದು ಮಾಯೆಯು ನಿರ್ಮಿಸುವ ಭ್ರಾಂತಿಯಿಂದಾಗಿ ‘ಅನೇಕಾಕಾರ’ವಾಗಿ ಭಾಸವಾಗುತ್ತದೆ’’ ಎಂದು ಹೇಳುತ್ತದೆ.

 ——————————————————————————————————————————————————-

ಲೇಖಕರು : ಡಾ.ಉಪೇಂದ್ರ ಶೆಣೈ 

ಮುಂದುವರೆಯುವುದು

   

Leave a Reply