ಜಗದ್ಗುರು ಭಾರತ ಭಾಗ – 9

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 10.07.2014

 ಕಪಿಲಮುನಿಯ ‘ಸಾಂಖ್ಯಶಾಸ್ತ್ರ’ – 2

ಪರಿಭಾಷೆಯ ಭಿನ್ನತೆ ಅಡ್ಡಿಯಾಗದಿರಲಿ

ವಿಶ್ವಸೃಷ್ಟಿಯನ್ನು ಕುರಿತು ಸಾಂಖ್ಯರು ಏನು ಹೇಳಿದ್ದಾರೆಂಬುದನ್ನು ನಾವೀಗ ಗಮನಿಸೋಣ. ಆದರೆ ಅದಕ್ಕೆ ಮುಂಚೆ ವಾಚಕರಲ್ಲೊಂದು ವಿಜ್ಞಾಪನೆ. ಪ್ರಾಚೀನರು ಸೃಷ್ಟಿವಿವರಣೆಗೆ ತತ್ವಶಾಸ್ತ್ರದ ಪರಿಭಾಷೆಯನ್ನು (Philosophical terminology) ಸಹಜವಾಗಿ ಬಳಸಿದ್ದಾರೆ. ಆಧುನಿಕರಾದ ನಾವು ಅದನ್ನು ನಮ್ಮ ಇಂದಿನ  ವೈಜ್ಞಾನಿಕ  ಪರಿಭಾಷೆಗೆ ಬದಲಿಸಿಕೊಂಡು  ಅರ್ಥೈಸಲು ಯತ್ನಿಸಿದರೆ ಮಾತ್ರ ಅವರು ಏನು ಹೇಳುತ್ತಿದ್ದಾರೆಂಬುದರ ವಾಸ್ತವಿಕ ಅರಿವು ನಮಗಾದೀತು.  ಹೀಗೆ ಪ್ರಯತ್ನಿಸುವುದು  ಅಗತ್ಯವೆಂದು ನನಗನ್ನಿಸುತ್ತದೆ.1 ಅವರು ಬಳಸಿದ ಶಬ್ದಗಳ ನೈಜಾರ್ಥವನ್ನು  ಅರಿಯುವ  ಗೋಜಿಗೇ ಹೋಗದೇ,  ಅವು ತತ್ವಶಾಸ್ತ್ರೀಯವೆಂಬ ಕಾರಣದಿಂದ ಅವನ್ನು  ತಿರಸ್ಕರಿಸುವುದು  ಅವರಿಗೆ ಅನ್ಯಾಯ ಬಗೆದಂತಲ್ಲವೇ? ಮತ್ತು ವಿಜ್ಞಾನದ್ದು ಸತ್ಯದರ್ಶನ ನಿಷ್ಠೆ ಎಂಬ ಘೋಷಣೆಗೆ ವಿರುದ್ಧವಾಗದೇ? ಇದೇ ಸಂದರ್ಭದಲ್ಲಿ  ನೆನಪಿಗೆ ತಂದುಕೊಳ್ಳಬೇಕಾದ ಇನ್ನೊಂದು ಸಂಗತಿಯೂ ಉಂಟು. ಕೆಲವು ದಶಕಗಳ ಹಿಂದಿನವರೆಗೂ ಪಾಶ್ಚಿಮಾತ್ಯರಲ್ಲಿಯೂ ವಿಜ್ಞಾನವು ಇಂದಿನಂತೆ  ಒಂದು ಸ್ವತಂತ್ರ ಅಧ್ಯಯನದ ವಿಷಯವಾಗಿರದೆ ತತ್ವಶಾಸ್ತ್ರಾಧ್ಯಯನದ ಭಾಗವಾಗಿಯೇ ಪರಿಗಣಿಸಲ್ಪಡುತ್ತಿತ್ತು. ಆಗ ಅದಕ್ಕೆ ಇಂದಿನ ‘ಸೈನ್ಸ್’ ಎನ್ನುವ ಪ್ರತ್ಯೇಕ ನಾಮನಿರ್ದೇಶವಿರದೇ ‘ನ್ಯಾಚುರಲ್ ಫಿಲಾಸಫಿ’ (ಪ್ರಾಕೃತಿಕ ತತ್ವಜ್ಞಾನ) ಎಂಬ ಹೆಸರೇ ಇತ್ತು. ‘ಸೈನ್ಸ್’ ಎಂಬುದು ಈಚೀಚೆಗೆ ಬಳಕೆಗೆ ಬಂದ ಶಬ್ದ. ಇದು ನಮ್ಮ  ಗಮನದಲ್ಲಿದ್ದರೆ ತತ್ವಶಾಸ್ತ್ರವೆಂದೊಡನೆ ಅದನ್ನು ‘ಅವೈಜ್ಞಾನಿಕ’ವೆಂದು ಬದಿಗೊತ್ತದೆ, ಅದರಲ್ಲಿ ಅಡಗಿರುವ ವೈಜ್ಞಾನಿಕ ಅಂಶಗಳ  ಕಡೆಯೂ  ಗಮನಹರಿಸಲು ನಾವು ಪ್ರೇರಿತರಾದೇವು,  ಸಾಂಖ್ಯದರ್ಶನದ ವೈಜ್ಞಾನಿಕತೆಯನ್ನು ಕಂಡುಕೊಳ್ಳಲು ನಾವು  ಹೀಗೆ ಪ್ರೇರಿತರಾಗಬೇಕು.

ವಿಶ್ವಸೃಷ್ಟಿ ಸಾಂಖ್ಯದೃಷ್ಟಿ

ಗೋಚರ ವಿಶ್ವವು (Manifest Universe) ಅಗೋಚರ ಅಥವಾ ‘ಅವ್ಯಕ್ತ’ ಪ್ರಕೃತಿಯಿಂದ(Unmanifest Ground)  ಹೊಮ್ಮಿತು ಎನ್ನುತ್ತಾರೆ ಸಾಂಖ್ಯರು. ಅದೇ ಬುನಾದಿ . ಈ ಅವ್ಯಕ್ತ ಸ್ಥಿತಿಯಲ್ಲಿ ಪ್ರಕೃತಿ ಹೇಗಿರುತ್ತದೆ? ಅದನ್ನು ಏನೆಂದು ವರ್ಣಿಸಬಹುದು? ಸಾಂಖ್ಯರ ಈ ವಿವರಣೆ ನೋಡಿ.  ಅದರಲ್ಲವರು ಬಳಸಿರುವ  ಸಂಸ್ಕೃತ ಪಾರಿಭಾಷಿಕ ಪದಗಳ ಆಂಗ್ಲ ಭಾವಾನುವಾದವೂ ಜೊತೆಗೆ ಇದೆ :

“ಅವ್ಯಕ್ತ ಪ್ರಕೃತಿಯು ನಿರಾಕಾರ (Formless), ಅವಿಶೇಷ (Undifferentiated), ಅಮಿತ(Limitless),  ಅವಿನಾಶಿ(Indesructible), ನಿರಾಧಾರ(Ungrounded), ಅನಿಯಂತ್ರಿತ(Uncontrolled), ಅನಾದಿ (Without a beginning)   ಹಾಗೂ ಅನಂತ(Without an end)  ಎಂಬೀ ವೈಶಿಷ್ಟ್ಯಗಳನ್ನುಳ್ಳದ್ದು.2 ಇಲ್ಲಿ ಅವಿಶೇಷ (Undifferentiated) ಎಂಬ ವಿಶೇಷಣ ಬಳಸಿ ಪ್ರಕೃತಿಯನ್ನು ವರ್ಣಿಸಲಾಗಿದೆಯಾದರೂ, ವಾಸ್ತವಿಕವಾಗಿ ನೋಡಿದರೆ ಹಾಗಲ್ಲ. ಏಕೆಂದರೆ, ಬಹು ಸೂಕ್ಷ್ಮರೂಪ ಪ್ರಮಾಣಗಳಲ್ಲಿ ಈ ಅವ್ಯಕ್ತ ಪ್ರಕೃತಿಯಲ್ಲೂ ಸತ್ವ, ರಜ, ತಮಗಳೆಂಬ ಮೂರು ಭಿನ್ನ  ಗುಣಗಳು ಪ್ರತ್ಯೇಕವೇ ಆದರೂ, ಒಟ್ಟಾಗಿ ಎಂಬಂತೆ ಇದ್ದೇ ಇರುತ್ತವೆ. ಆದ್ದರಿಂದ  ಪ್ರಕೃತಿಯನ್ನು  ನಿಜಕ್ಕೂ  ನಾವು ‘ತ್ರಿಗುಣಾತ್ಮಕ ಪ್ರಕೃತಿ’ ಎಂದೇ ಕರೆಯಬೇಕಾಗುತ್ತದೆ.

ಮೂರು ಗುಣಗಳು ಸದ್ಯದ ಪರಿಭಾಷೆಯಲ್ಲಿ

ಸಾಂಖ್ಯರು ನಿರೂಪಿಸುವ  ಈ ತ್ರಿಗುಣಗಳನ್ನು ಅವುಗಳ ತಾತ್ವಿಕ  ಪರಿಭಾಷೆಯಿಂದ ಹೊರತೆಗೆದು  ಆಧುನಿಕ ರೀತಿ ಯಲ್ಲಿ ಅರ್ಥೈಸಿದಾಗ ಇಲ್ಲಿ  ಕೆಲವು  ವೈಜ್ಞಾನಿಕ ಅಂಶಗಳಿರುವುದನ್ನು  ಕಂಡು ನಾವು  ಆಶ್ಚರ್ಯಪಡಬೇಕಾಗುತ್ತದೆ.  ಒಂದೊಂದಾಗಿ ಅವುಗಳನ್ನು ತಿಳಿಯಲು ಪ್ರಯತ್ನಿಸೋಣ.

ಈ ಮೂರು ಗುಣಗಳಲ್ಲಿ ಮೊದಲನೆಯದು ‘ಸತ್ವಗುಣ’. ಇದು ಪ್ರಕೃತಿಯಲ್ಲಿ ‘ತಾನು ಅಭಿವ್ಯಕ್ತಗೊಳ್ಳಬೇಕು’ ಎನ್ನುವ ಸಹಜ ಇಚ್ಛಾಪ್ರವೃತ್ತಿ. (Tendency for mainfestation). ಈ ಅಭಿವ್ಯಕ್ತಿಯ ಬಯಕೆ ಇಲ್ಲದಿರುತ್ತಿದ್ದರೆ ಸೃಷ್ಟಿಯೇ ಇರುತ್ತಿರಲಿಲ್ಲ ! ಬಯಕೆಯು ಸಾಮಾನ್ಯವಾಗಿ ಬುದ್ಧಿಯ(Intelligence stuff)  ಅಥವಾ ಅರಿವಿನ (Cognition) ಫಲ ತಾನೇ? ಆದ್ದರಿಂದ ಸತ್ವಗುಣವನ್ನು ಬುದ್ಧಿ ಪ್ರತಿಫಲನದ  ಮಾಧ್ಯಮ ಎಂದೂ (Medium for reflection of intelligence) ನಾವು ಹೇಳಬಹುದು.  ಒಂದುಜ ರೀತಿಯಲ್ಲಿ  ಜಗತ್ತಿನಲ್ಲಿರುವ ಎಲ್ಲ ವ್ಯಕ್ತದ್ರವ್ಯಗಳಲ್ಲೂ ಸತ್ವಗುಣವು ಸಾರಭೂತ(Essence) ವಾಗಿ ಇರುವಂಥದು, ಅವುಗಳ ಸೃಷ್ಟಿ ಅಥವಾ ಅಭಿವ್ಯಕ್ತಿಯ  ಇಚ್ಛೆಯಾದುದರಿಂದ. ಆದರೆ ಸತ್ವವು ತಾನಾಗಿಯೇ ಏನನ್ನೂ  ಮಾಡಲು ಸಮರ್ಥವಲ್ಲ. ನಿಷ್ಕ್ರಿಯವಾಗಿರುವ ಅದನ್ನು ರಜೋಗುಣವು ಸಕ್ರಿಯಗೊಳಿಸಬೇಕಾಗುತ್ತದೆ.  ಅದರ ಬಯಕೆಯು ರಜೋಗುಣ ಮತ್ತು ತಮೋಗುಣಗಳ ಸಹಕಾರದಿಂದಲೇ ಫಲಕಾರಿಯಾಗಬೇಕಾಗುತ್ತದೆ.

ಎರಡನೆಯದು ‘ರಜೋಗುಣ’.  ಇದನ್ನು ಇಂದಿನ ಪರಿಭಾಷೆಯಲ್ಲಿ  ‘ಶಕ್ತಿಯ ಪರಿಕಲ್ಪನೆ’    (Concept of Energy)  ಎನ್ನಬಹುದು. ಮೂಲ ಪ್ರಕೃತಿಯಲ್ಲೂ, ವ್ಯಕ್ತ ವಸ್ತುಗಳಲ್ಲೂ ಅದರದು  ಕಾರ್ಯಕಾರಕ ಪ್ರಭಾವ. ಚಲನಶೀಲತೆ ಅದರ ಪ್ರವೃತ್ತಿ. ಅದು ಕೆಲಸವನ್ನು ಮಾಡುತ್ತದೆ, ಮಾಡಿಸುತ್ತದೆ.  ಎದುರಾದ ವಿರೋಧವನ್ನು  ಮೀರಲೆತ್ನಿಸುವುದು (Overcoming resistence) ಅದರ ಇನ್ನೊಂದು ಪ್ರವೃತ್ತಿ. ಆದ್ದರಿಂದ ಸ್ವಭಾವತಃ ಅದು ಜಡವಲ್ಲ. ಅದಕ್ಕೆ ‘ಪ್ರಮಾಣ’ (quantum)  ಹಾಗೂ ‘ಪರಿಚ್ಛಿನ್ನತೆ’ (ವಿಸ್ತಾರ=Extensity) ಗಳಿವೆ. ಕೆಲವೊಮ್ಮೆ ಅದು ‘ಅನುದ್ರೂತ’  ಸ್ಥಗಿತ- (Potential) ರೂಪದಲ್ಲಿ  ನಮಗೆ  ಕಾಣಿಸುತ್ತದೆ ನಿಜ. ಆದರೆ  ನಿಜವಾಗಿ  ಆ ಸಂದರ್ಭದಲ್ಲಿ ಅದರ ಮೂಲ  ಸ್ವಭಾವದ ಚಲನಶೀಲತೆ  ನಮಗೆ ಗೋಚರಿಸದ ರೀತಿಯಲ್ಲಿ (Motion imperceptible forms)  ಇರುವುದರಿಂದ ಅದರ ಈ ಅನುದ್ರೂತರೂಪ ಅಷ್ಟೇ.

ಮೂರನೆಯದು ತಮೋಗುಣ. ಅದರದು ಮುಖ್ಯವಾಗಿ  ಜಡಪ್ರವೃತ್ತಿ (Inertia). ಈ ಜಡತೆ ಮೂಲ ಪ್ರಕೃತಿಯಲ್ಲೂ ವ್ಯಕ್ತದ್ರವ್ಯದಲ್ಲೂ ಕಾಣಲು ಸಿಗುತ್ತದೆ.  ಸೂಕ್ಷ್ಮರೂಪದಲ್ಲಿ ಅಲ್ಲದಿದ್ದರೂ ಸ್ಥೂಲರೂಪದಲ್ಲಿ ಅದು ದ್ರವ್ಯಾತ್ಮಕವಾದುದು. ಆದರೆ ಸತ್ವ ಮತ್ತು ರಜೋಗುಣಗಳು ಎರಡೂ, ಸೂಕ್ಷ್ಮ ಹಾಗೂ ಸ್ಥೂಲ ಈ ಎರಡು ಸ್ಥಿತಿಗಳಲ್ಲೂ ದ್ರವ್ಯರಹಿತವಾದವು (Non-material).  ಜಡತೆ ಅಥ‍ವಾ ನಿಷ್ಕ್ರಿಯತೆಯ ಕಾರಣದಿಂದ ತಮೋಗುಣವು  ಪ್ರಜ್ಞಾಪೂರ್ವಕ ಅಭಿವ್ಯಕ್ತಗೊಳ್ಳಬಯಸುವ ಸತ್ವಗುಣಕ್ಕೂ ಮತ್ತು ಕಾರ್ಯಶೀಲವಾದ ರಜೋಗುಣಕ್ಕೂ ಇದಿರಾಳಿಯಾಗುತ್ತದೆ. ಅವನ್ನು ತಡೆಗಟ್ಟುತ್ತದೆ.

ಈಗ ಈ ತ್ರಿಗುಣಗಳ ಭಿನ್ನಸ್ವಭಾವಗಳನ್ನೂ,  ರೀತಿನೀತಿಗಳನ್ನೂ ಅರಿತಂತಾಯಿತು, ಇವು ಪ್ರಕೃತಿಯ ಅವ್ಯಕ್ತ,  ವ್ಯಕ್ತ ಸ್ಥಿತಿಗಳೆಲ್ಲದರಲ್ಲಿಯೂ ಶಾಶ್ವತವಾಗಿರುತ್ತವೆ.  ಇವಕ್ಕೆ ತಮ್ಮ ಪ್ರತ್ಯೇಕ ಅಸ್ತಿತ್ವವಿದೆಯಾದರೂ  ಇವು  ಸರ್ವಸ್ವತಂತ್ರವಲ್ಲ. ಪ್ರತಿಯೊಂದು ಹಂತದಲ್ಲಿ, ಪ್ರತಿ ಸ್ಥಿತಿಯಲ್ಲಿ  ಇವು ಒಟ್ಟಿಗೇ ಇರುತ್ತವೆ, ಪರಸ್ಪರ ಪ್ರಭಾವ ಬೀರುತ್ತವೆ. ದ್ರವ್ಯರಹಿತವಾದುದರಿಂದ ಸತ್ವ ಹಾಗೂ ರಜೋಗುಣಗಳಿಗೆ ತೂಕವಿಲ್ಲ.  ಆದರೆ ತಮೋಗುಣಕ್ಕೆ ವ್ಯಕ್ತ ಸ್ಥಿತಿಯಲ್ಲಿ ದ್ರವ್ಯತ್ವ  (Mass) ಇರುವುದರಿಂದ ಅದು ತೂಕವುಳ್ಳದ್ದಾಗುವುದು. ಸತ್ವ ಹಾಗೂ ತಮೋಗುಣಗಳು ಬೇರೆ ಬೇರೆ ಕಾರಣಗಳಿಂದಾಗಿ ಸ್ವತಃ ನಿಷ್ಕ್ರಿಯವಾದವು. ಆದರೆ ರಜೋಗುಣದ ಸಂಬಂಧ ಉಂಟಾದಾಗ ಎರಡೂ ಕ್ರಿಯಾಶೀಲವಾಗುವುವು. ಸತ್ವವು ಆಗ ಪ್ರಜ್ಞಾಪೂರ್ವಕ ಸ್ವನಿಯಂತ್ರಣ(Conscious regulation)  ಹಾಗೂ ಹೊಂದಾಣಿಕೆ(Adaptation)  ಈ ಕ್ರಿಯೆಗಳನ್ನು  ಪ್ರದರ್ಶಿಸುತ್ತದೆ. ತಮೋಗುಣವು ರಜೋಗುಣದ ಅಧಿಕ ಪ್ರಭಾವಕ್ಕೆ ಒಳಗಾದಾಗ ಚಲನೆಯನ್ನು  ತೋರಬಹುದು. ಹೀಗೆ ತ್ರಿಗುಣಗಳು ಉದ್ದಕ್ಕೂ ಪರಸ್ಪರ ಪೂರಕವೇ ಆಗಿರುತ್ತವೆ.

———————————————————————————————————————————————————–

1.ಡಾ|| ಬ್ರಜೇಂದ್ರನಾಥ್ ಸೀಲ್ ಅವರ “The Positive Sciences of the Ancient Hindus”  ಎಂಬ ವಿಖ್ಯಾತ  ಗ್ರಂಥದಲ್ಲಿ  ಇಂಥ ಪ್ರಯತ್ನವನ್ನು ಮಾಡಲಾಗಿದೆ.  ಲೇಖನ ಮಾಲೆಯ   ಈ ಭಾಗಕ್ಕೆ ಈ ಗ್ರಂಥದ ಋಣ ಬಹುಮಟ್ಟಿಗೆ ನನ್ನ ಮೇಲಿದೆ ಎಂಬುದನ್ನು ಇಲ್ಲಿ ಸ್ಮರಿಸುತ್ತೇನೆ.

2.ಸಾಂಖ್ಯರ ಈ ವರ್ಣನೆಯನ್ನು ಇಂದಿನ ವೈಜ್ಞಾನಿಕ  ಮನವು ಮೆಚ್ಚದಿರಲು ಸಾಧ್ಯವೇ? ಪ್ರಕೃತಿಯ  ‘ಅನಾದಿತ್ವ’, ‘ಅನಂತತ್ವ’, ‘ನಿರಾಧಾರತ್ವ’ಗಳನ್ನು  ಆಧುನಿಕ ಪಾಶ್ಚಿಮಾತ್ಯ ವೈಜ್ಞಾನಿಕರೂ ಸಾರುತ್ತಿದ್ದಾರೆ.  ಆದರೆ ಹೀಗವರು ಸ್ಪಷ್ಟವಾಗಿ ಸಾರುತ್ತಿರುವುದು ಈಚಿನ ಒಂದೆರಡು  ಶತಮಾನಗಳಿಂದ. ಅದಕ್ಕೂ ಎಷ್ಟೋ ಶತಮಾನಗಳ ಹಿಂದೆ ಸಾಂಖ್ಯರು  ಮಾಡಿದ ಈ  ಉದ್ಘೋಷವೇನು ಕಡಿಮೆಯ ಸಾಧನೆಯೇ?  ಕೊನೆಯ ಪಕ್ಷ ಭಾರತದಲ್ಲಿಯಾದರೂ  ಎಳೆಯ  ವಿದ್ಯಾರ್ಥಿಗಳು  ಈ ಕುರಿತು  ಹೆಮ್ಮೆ ತಾಳುವಂತೆ ಇಂದಿನ ನಮ್ಮ  ವೈಜ್ಞಾನಿಕ ಶಿಕ್ಷಣದಲ್ಲಿ ಪ್ರಯತ್ನ ನಡೆಯಬೇಕಲ್ಲವೇ?

———————————————————————————————————————————————————–

ಲೇಖಕರು: ಡಾ.ಉಪೇಂದ್ರ ಶೆಣೈ 

ಮುಂದುವರೆಯುವುದು

   

Leave a Reply