ಜಗದ್ಗುರು ಭಾರತ – 14

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 17.07.2014

ಕಪಿಲಮುನಿಯ‘ಸಾಂಖ್ಯಶಾಸ್ತ್ರ’-7

 ಪ್ರಾಚೀನ ಭಾರತೀಯ ಕಾಲಚಿಂತನೆ

 ಕಳೆದ ಲೇಖನದಲ್ಲಿ ಆಧುನಿಕ ವೈಜ್ಞಾನಿಕರು ‘ದೇಶ’ ಮತ್ತು ‘ಕಾಲ’ಗಳ ಕುರಿತಾಗಿ ವ್ಯಕ್ತಪಡಿಸಿರುವ ಕಲ್ಪನೆಗಳನ್ನು ಸ್ಥೂಲವಾಗಿ ತಿಳಿಸಲು ಪ್ರಯತ್ನಿಸಲಾಗಿತ್ತು.  ವಿಜ್ಞಾನ ಕ್ಷೇತ್ರದಲ್ಲಿ ಎರಡು ಯುಗಗಳನ್ನು ಕಲ್ಪಿಸುವುದು ಈಗ ವಾಡಿಕೆಯಾಗಿದೆ.     ಕ್ರಿ. ಶ.  17 ಮತ್ತು 18ನೆಯ ಶತಮಾನಗಳನ್ನು ‘ನ್ಯೂಟನ್ ಯುಗ’ವೆಂದೂ, ಐನ್‍ಸ್ಟೀನ್ ಮಹಾಶಯನ  ಪ್ರತಿಭಾಸ್ಪರ್ಶದ ಫಲವಾಗಿ  ಹಳೆಯ ಜಾಡನ್ನು  ತೊರೆದು ಹೊಸ ದಿಕ್ಕಿಗೆ ವಿಜ್ಞಾನವು ತಿರುಗಿದ್ದರಿಂದಾಗಿ , 19ನೇ ಶತಮಾನವನ್ನು ‘ಐನ್‍ಸ್ಟೀನೋತ್ತರ ಯುಗ’ವೆಂದೂ ವಿಂಗಡಿಸಲಾಗುತ್ತದೆ.  ಐನ್‍ಸ್ಟೀನ್ ಪೂರ್ವದ ಭೌತಶಾಸ್ತ್ರೀಯ ಕಲ್ಪನೆ ಮತ್ತು ಸಿದ್ಧಾಂತಗಳಿಗೆ ‘ಸಾಂಪ್ರದಾಯಿಕ ಭೌತಶಾಸ್ತ್ರ’ (Classical physics) ಎಂದೂ, ಐನ್‍ಸ್ಟೀನ್ ನಂತರದಲ್ಲಿ ಕ್ರಾಂತಿಕಾರಿ  ಮಾರ್ಪಾಟನ್ನು ಹೊಂದಿದ  ಹೊಸ ಚಿಂತನ ರೀತಿಗಳಿಗೆ ಆಧುನಿಕ ಭೌತಶಾಸ್ತ್ರ (Modern physics) ಎಂದೂ ಕರೆಯುತ್ತಾರೆ. ಸಾಂಪ್ರದಾಯಿಕ ಭೌತಶಾಸ್ತ್ರದಲ್ಲಿ ಸ್ವತಂತ್ರ ಅಸ್ತಿತ್ವ ಹಾಗೂ ಅಧಿಕಾರಗಳನ್ನು ಹೊಂದಿದ ‘ವಿಭುವಸ್ತು’ಗಳೆಂದು(absolute things) ತಿಳಿಯಲ್ಪಟ್ಟ ‘ದೇಶ-ಕಾಲ’ಗಳು ಆಧುನಿಕ ಭೌತಶಾಸ್ತ್ರದಲ್ಲಿ ತಮ್ಮ ವಿಭುತ್ವವನ್ನು  ಕಳೆದುಕೊಂಡು, ಪರಸ್ಪರ ಸಾಪೇಕ್ಷ ಸಂಬಂಧವುಳ್ಳ ಅಸ್ಥಿರ ವಸ್ತುಗಳಾಗಿ  ಪರಿಗಣಿಸಲ್ಪಡಲಾರಂಭಿಸಿದ್ದನ್ನು  ಕಳೆದ ಲೇಖನದಲ್ಲಿ ಕಂಡೆವು.

ದೇಶ-ಕಾಲಗಳ ಅವಿಚ್ಛಿನ್ನ ಸಂಬಂಧ

ಇದನ್ನು ಇನ್ನೂ ಒಂದಿಷ್ಟು ಸ್ಪಷ್ಟೀಕರಿಸಲು (ಆಧುನಿಕ ಭೌತಶಾಸ್ತ್ರದ ನಿಲುವಿನಂತೆ)  ಹೀಗೆ ಹೇಳಬಹುದು: “ಉದ್ದ, ಅಗಲ ಮತ್ತು ಗಾತ್ರಗಳೆಂಬ ಮೂರು ದಿಕ್ಕಿನ ಅಳತೆಗಳುಳ್ಳ ‘ದೇಶ’ವು  ಸಮಯದ ಅಳತೆಯಾದ ಕಾಲದೊಂದಿಗೆ ನಿಕಟ ಸಂಬಂಧ ಪಡೆದಿದೆ.  ಅವೆರಡೂ ಪರಸ್ಪರ ಬೆಸೆದುಕೊಂಡಿವೆಯೇ  ಹೊರತು ಸ್ವತಂತ್ರವಲ್ಲ. ಆದ್ದರಿಂದ  ವಸ್ತುವೊಂದನ್ನು  ವಿವರಿಸಲು  ಹಿಂದಿನ  ಸಾಂಪ್ರದಾಯಿಕ ಭೌತಶಾಸ್ತ್ರವು  ಹೇಳುತ್ತಿದ್ದಂತೆ ಉದ್ದ, ಅಗಲ, ಗಾತ್ರಗಳ ಪ್ರಮಾಣವನ್ನು (Three Dimensions) ಸೂಚಿಸಿದರಷ್ಟೇ ಸಾಲದು.  ಜೊತೆಗೆ ನಾಲ್ಕನೆಯದಾದ ಕಾಲದ ಪ್ರಮಾಣವನ್ನು (Fourth Dimension  of time) ಸೂಚಿಸಬೇಕು.  ಕಾಲ ದೇಶಗಳ ಸಂಬಂಧ ಅವಿಚ್ಛಿನ್ನವಾದುದರಿಂದ ಜಗತ್ತೂ ಮತ್ತು ಅದರೊಳಗಿನ  ವಸ್ತುಗಳೂ  ದೇಶದಲ್ಲಿರುವಂತೆ ಅದೇ ಕ್ಷಣದಲ್ಲಿ  ಕಾಲದಲ್ಲಿಯೂ ಇವೆ.’’ ಆಧುನಿಕ ಭೌತಶಾಸ್ತ್ರವು ಈ ನಿಲುವು  ತಾಳಿದ್ದರಿಂದಾಗಿ ಸಾಂಪ್ರದಾಯಿಕ ಭೌತಶಾಸ್ತ್ರದ ‘ನಿರಂತರ ಕಾಲ’ (Time Continuum) ಮತ್ತು ‘ನಿರಂತರ ದೇಶ’ (Space Continuum)ಗಳ ಪ್ರತ್ಯೇಕತೆಯ  ಪರಿಭಾಷೆಯನ್ನು ತೊರೆದು ‘ನಿರಂತರ ದೇಶ-ಕಾಲ’ (Space-time Continuum) ಎನ್ನುವ  ಹೊಸ ಶಬ್ದವನ್ನು ಸೃಷ್ಟಿಸಿತು.

ದೇಶ-ಕಾಲಗಳ ಅಸ್ಥಿರತೆ

ಸಾಂಪ್ರದಾಯಿಕ ಭೌತಶಾಸ್ತ್ರವು ಸ್ಥಿರ ಹಾಗೂ  ಸಾರ್ವಭೌಮವೆಂದು ಪರಿಗಣಿಸಿದ ‘ದೇಶ-ಕಾಲ’ಗಳು ಆಧುನಿಕ ಭೌತಶಾಸ್ತ್ರದಲ್ಲಿ  ಅಸ್ಥಿರವಾದದ್ದೂ ಗಮನಾರ್ಹ. ಐನ್‍ಸ್ಟೀನನ ಸಾಪೇಕ್ಷ ಸಿದ್ಧಾಂತವು  “ಚಲಿಸುತ್ತಿರುವ ವೇಗಕ್ಕನುಗುಣವಾಗಿ ಚಲಿಸುತ್ತಿರುವುದೆಲ್ಲವೂ ಸಂಕುಚಿತವಾಗುತ್ತದೆ” ಎಂದು ತರ್ಕಿಸಿದ್ದನ್ನೂ,  ನಂತರ ಈವ್ಸ್ ಎಂಬ ವಿಜ್ಞಾನಿಯು ಜಲಜನಕದ ಅಣುವಿನ ಮೇಲೆ ಪ್ರಯೋಗ ನಡೆಸಿ, ಈ ತರ್ಕದ ಸತ್ಯವನ್ನು  ಸಾಬೀತುಪಡಿಸಿದ್ದನ್ನೂ ಹಿಂದಿನ ಲೇಖನದಲ್ಲಿ  ತಿಳಿಸಲಾಗಿತ್ತಷ್ಟೇ. ಅದನ್ನು ಇನ್ನೊಂದಿಷ್ಟು  ವಿಶ್ಲೇಷಿಸೋಣ.

ಈವರೆಗೆ ನಮಗೆ ತಿಳಿದಿರುವಂತೆ ಒಂದು ಸೆಕೆಂಡಿಗೆ 1,86,284 ಮೈಲಿಗಳಷ್ಟು  ಸಾಗುವ ಬೆಳಕಿನ ಕಿರಣದ ವೇಗಕ್ಕಿಂತ ಹೆಚ್ಚಿನ ವೇಗ ಜಗತ್ತಿನಲ್ಲಿಲ್ಲ. ಬೆಳಕಿನ ವೇಗದ ನಿಜವಾದ ಕಲ್ಪನೆ ಸಾಮಾನ್ಯರಿಗೆ ನಿಲುಕುವುದು ಕಷ್ಟ. ನಾವು ನಡೆಯುತ್ತೇವೆನ್ನಿ.  ಘಂಟೆಗೆ ಹೆಚ್ಚೆಂದರೆ 4 ಅಥವಾ 5 ಮೈಲಿ ನಡೆದೇವು. ಓಡಿದಾಗ ಹನ್ನೆರಡು ಮೈಲಿ ಸಾಗಿದರೆ ಅದು ‘ವಿಕ್ರಮ’ ಎನಿಸೀತು ! ಕಾರಿನಲ್ಲಿ ಪಯಣಿಸುವುದಾದಲ್ಲಿ  150 ಮೈಲಿಯ ಅಪ್ರತಿಮ ವೇಗದ  ಸಾಧನೆ ಮಾಡಲಾದೀತು. ಜಂಬೋ ವಿಮಾನದಲ್ಲಿ ಸಾಗಿದಲ್ಲಿ  600-700 ಮೈಲಿ ಸಾಗಿಯೇವು.  ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿರುವ ಗಗನಯಾತ್ರಿಗಳು 25 ಸಾವಿರ ಮೈಲಿ ವೇಗವನ್ನು ಸಾಧಿಸಿದ್ದಾರಂತೆ. ಈಗ ಕಲ್ಪಿಸಿಕೊಳ್ಳಲು ಸಾಧ್ಯವಾಗಿರುವಂತೆ,  ಮಾನವನು ಅತಿ ಹೆಚ್ಚೆಂದರೆ 40 ಸಾವಿರ ಮೈಲಿ ವೇಗವನ್ನು ಸಾಧಿಸಬಹುದಂತೆ. ಆದರೆ ನೆನಪಿರಲಿ, ಇದಿಷ್ಟೂ ಒಂದು ಘಂಟೆಯಲ್ಲಿ  ನಾವು ಸಾಧಿಸುವ  ಪ್ರಯಾಣದ ವೇಗ. ಆದರೆ ಬೆಳಕಿನ ಕಿರಣದ್ದು  ಒಂದು ಸೆಕೆಂಡಿಗೇ ಒಂದೂಮುಕ್ಕಾಲು ಲಕ್ಷ ಮೈಲಿಗಳು !  ಅಂದರೆ ಮಾನವನು ಸಾಧಿಸುವ ವೇಗಕ್ಕಿಂತ 16,200 ಪಟ್ಟು ಹೆಚ್ಚು ಇದು !

ಈಗ ಐನ್‍ಸ್ಟೀನನ ತರ್ಕಕ್ಕೆ ಹಿಂದಿರುಗೋಣ. ಬೆಳಕಿನ ವೇಗದ ಸುಮಾರು ಶೇ. 90 ರಷ್ಟು ವೇಗವನ್ನು ಸಾಧಿಸುವ ವಸ್ತುವು ಉದ್ದದಲ್ಲಿ  ತನ್ನ ಅರ್ಧದಷ್ಟಾಗುವುದಂತೆ.  ಅಂದರೆ ಆರಡಿಯ ಹಾವೊಂದು ಮೂರು ಅಡಿಯಷ್ಟಾಗುತ್ತದೆ  ಎಂದಿದರ ಅರ್ಥ. ಅದು ತನ್ನ ವೇಗವನ್ನು  ಹೆಚ್ಚಿಸಿ ಬೆಳಕಿನ ವೇಗದಷ್ಟೇ ಮುಟ್ಟಿದಲ್ಲಿ  ಈ ಉದ್ದವು ‘ಶೂನ್ಯ’ವೆನಿಸುವಷ್ಟು ಸಂಕುಚಿತಗೊಳ್ಳುವುದಂತೆ. ಇದು ಐನ್‍ಸ್ಟೀನ್ ಮೊದಲು ಮಾಡಿದ ಊಹೆ. ನಂತರ ಈವ್ಸ್‍ನಿಂದ ಸಾಬೀತುಗೊಂಡ ‘ಸತ್ಯ.’

ಈಗ  ‘ದೇಶ-ಕಾಲ’ಗಳ ದೃಷ್ಟಿಯಿಂದ ಈ ಹೊಸ ಅರಿವು ಏನು ಬೆಳಕು ಬೀರುವುದೆಂಬುದನ್ನು  ನೋಡೋಣ.  ನಾಗರಹಾವಿನಂತೆಯೇ ಜಗತ್ತು ಅಥವಾ  ಅದು ನೆಲೆಗೊಂಡಿರುವ  ‘ದೇಶ’ವೂ ಸಹಾ.  ಅದು ಬೆಳಕಿನ ಕಿರಣದ ವೇಗ ಪಡೆದರೆ ಗ್ರಹಿಸಲಾಗದಷ್ಟು  ಸಂಕುಚಿತವಾಗಬಹುದಾದದ್ದು.  ಆಗ ಅದರದು ಹೆಚ್ಚು ಕಡಿಮೆ ಶೂನ್ಯ ಸ್ಥಿತಿಯೇ. ದೇಶವೇ ಇಲ್ಲ ಎನ್ನುವ ಸ್ಥಿತಿಯಲ್ಲಿ  ಕಾಲದ ಗಣನೆಯೂ  ಸಾಧ್ಯವಿಲ್ಲವಾಗುತ್ತದೆ.  ಏಕೆಂದರೆ ‘ದೇಶ’ದಲ್ಲಿನ ಅಂತರವನ್ನು ಕ್ರಮಿಸುವುದು ‘ಕಾಲ’ ತಾನೇ? ಅಂದರೇನಾಯಿತು? ‘ಸಾಮಾನ್ಯ ಸಂದರ್ಭಗಳಲ್ಲಿ ಸ್ಥಿರವೆಂದು ಭಾಸವಾಗುವ ಕಾಲ ದೇಶಗಳು ನಿಜವಾಗಿ ನೋಡಿದರೆ ಅಸ್ಥಿರ’ ಎಂದಂತಾಯಿತು.

ವಿಜ್ಞಾನ ‍ಇದೀಗ ಇಲ್ಲಿಗೆ ನಿಂತುಬಿಟ್ಟಿದೆ. ಆದರೆ ಇಲ್ಲೊಂದು ಸ್ವಾರಸ್ಯಕರ ಪ್ರಶ್ನೆ ಉದ್ಭವಿಸುತ್ತದೆ.  ಒಂದು ವಸ್ತುವೋ ಅಥವಾ ಅಂಥ ವಸ್ತುಗಳನ್ನು ತನ್ನಲ್ಲಿ  ಅಡಗಿಸಿಕೊಂಡ ಜಗತ್ತೋ ಬೆಳಕಿನ  ವೇಗವನ್ನು  ದಾಟಿತೆನ್ನಿ.  ಆಗ ದೇಶ ಕಾಲಗಳು  ಗ್ರಹಿಸಲಾಗದ ಸ್ಥಿತಿಗೆ ಹೋದರೂ, ಅದರಿಂದ  ಜಗತ್ತಿನ ಅಸ್ತಿತ್ವಕ್ಕೆ ಸಂಚಕಾರ ಬಂತು ಎಂದು ಹೇಳಲು ಸಾಧ್ಯವೇ? ಸ್ವಲ್ಪ ಯೋಚಿಸಿದರೂ, ಮನಸ್ಸು ಗ್ರಹಿಸಲಾರದ ಅಗೋಚರ ಸ್ಥಿತಿಯನ್ನದು ತಲುಪಿತೆಂದು ಹೇಳಬಹುದೇ ವಿನಹ, ‘ಅದು ಇಲ್ಲವಾಯಿತು’ ಎಂದು ಹೇಳಲಾಗದೆಂಬುದು ಸ್ಪಷ್ಟವಾಗುತ್ತದೆ.  ‘ಹಾಗಿದ್ದರೆ, ತತ್ವಶಾಸ್ತ್ರಗಳು ಅದರಲ್ಲೂ  ವಿಶೇಷವಾಗಿ ಭಾರತೀಯ ದರ್ಶನಗಳು ‘ದೇಶಕಾಲಾತೀತ ಅಸ್ತಿತ್ವ’ ಎಂದು ಹೇಳುವ ಸ್ಥಿತಿ ಇದೇ ಇರಬಹುದೇ? ಎಂಬುದು ಇಲ್ಲಿ ಉದ್ಭವಿಸುವ ಪ್ರಶ್ನೆ. ಆದರೆ ಆಧುನಿಕ ವಿಜ್ಞಾನ ಈ ಪ್ರಶ್ನೆಗೆ ಉತ್ತರಿಸಲು  ಒಪ್ಪದೇ ಮೌನ ವಹಿಸುತ್ತದೆ !

ಈ ಹಿನ್ನೆಲೆಯಲ್ಲಿ ನಾವೀಗ ಪ್ರಾಚೀನ ಭಾರತೀಯರು ಮಾಡಿದ ದೇಶಕಾಲ ಚಿಂತನೆಯತ್ತ ಗಮನ ಹರಿಸೋಣ.

ಪ್ರಾಚೀನ ಭಾರತೀಯರ ಕಾಲ ಚಿಂತನೆ

ಇಂದು ನಾವು ವೈಜ್ಞಾನಿಕ  ಎನ್ನುವ ರೀತಿಯಲ್ಲಿ ‘ಕಾಲ’ವನ್ನು  ನಮ್ಮ  ಹಿರಿಯರು  ಅಧ್ಯಯನ   ಮಾಡಿದ್ದರೆನ್ನಲು  ಯಾವ   ಸಾಕ್ಷ್ಯಾಧಾರಗಳು  ಇಲ್ಲವಾದರೂ,  ಅವರು ತಾತ್ವಿಕವಾಗಿ ಅದನ್ನು ಗಮನಿಸಿದ ರೀತಿ ಅದ್ಭುತವಾಗಿತ್ತು. ಅವರ ‘ಭೌತಕಾಲದ’ ಅರಿವು (Knowledge of Physical time) ವಿಕಾಸಗೊಂಡ ರೀತಿಯೂ ಅದ್ಭುತವೇ. ಆದಿವೈದಿಕ ಯುಗದ ಮಾನವ ಮನಸ್ಸು ಮೊದಲು ಸೂರ್ಯೋದಯ ಹಾಗೂ ಸೂರ್ಯಾಸ್ತ ಸಂದರ್ಭದ ರಮ್ಯ ಮೋಹಕ  ನೋಟಗಳಿಂದ  ಚಕಿತಗೊಂಡಿರಬೇಕು.  ಸೂರ್ಯೋದಯದೊಂದಿಗೆ ಅರಳುವ ಹೂಗಳ, ಉಲಿಯುವ ಪಕ್ಷಿಗಳ, ಚಟುವಟಿಕೆಯಲ್ಲಿ ತೊಡಗುವ   ಜೀವಜಂತುಗಳತ್ತ ಗಮನ ಹರಿಸಿ ಸೂರ್ಯನಲ್ಲಿ  ಸೃಷ್ಟಿಗೆ ಆಧಾರಭೂತವಾದ ಯಾವುದೋ ಶಕ್ತಿ ಇದೆ ಎಂಬುದನ್ನು  ಊಹಿಸಿರಬೇಕು.  ಆದ್ದರಿಂದಲೇ ಆ ಸೂರ್ಯಬಿಂಬದಲ್ಲಿ  ‘ಸವಿತೃನಾರಾಯಣ’ ಶಕ್ತಿಯನ್ನು ಕಲ್ಪಿಸಿ, ಉದಯಾಸ್ತಮಾನಗಳ ಸಂದರ್ಭದಲ್ಲಿ ಅದನ್ನು ಧ್ಯಾನಿಸಿ, ಅರ್ಚಿಸುವ ಪದ್ಧತಿ ಪ್ರಾರಂಭಗೊಂಡಿರಬೇಕು. ಸೂರ್ಯಾಸ್ತದ ನಂತರ ಕೋಟ್ಯಂತರ ತಾರೆಗಳಿಂದ, ಗ್ರಹನೀಹಾರಿಕೆಗಳಿಂದ ಕೂಡಿ ಕಂಡ ಗಗನವೂ ಅವರ ಗಮನ ಸೆಳೆದಿರಬೇಕು.  ಆ ಗಗನದಲ್ಲಿ ಹದಿನೈದು  ದಿನ ಬೆಳೆದು  ಹದಿನೈದು ದಿನ ಕ್ಷೀಣಿಸುವ , ತಂಪು ಕಿರಣಗಳಿಂದ ಆಹ್ಲಾದದಾಯಕನೂ ಆದ ಚಂದ್ರನೂ ಅವರ ಆಲೋಚನಾ ಪರ ಮನಸ್ಸಿಗೆ ಇನ್ನಷ್ಟು ಚಾಲನೆ ನೀಡಿರಬೇಕು.  ಸೂರ್ಯ-ಚಂದ್ರರ, ಗ್ರಹ-ನಕ್ಷತ್ರಗಳ ವ್ಯವಸ್ಥಿತ ಗತಿಯೂ,  ಹಗಲು-ರಾತ್ರಿಗಳ ನಿಯಮಿತ ಪುನರಾವರ್ತನೆಯೂ ಅವರ ಕಾಲಜ್ಞಾನದ ಆಧಾರಗಳಾಗಿದ್ದುದರಿಂದ, ನಂತರ ಕ್ರಮವಾಗಿ ದಿನ, ತಿಥಿ, ನಕ್ಷತ್ರ, ವಾರ, ಪಕ್ಷ, ಮಾಸ, ಆಯನ, ವರ್ಷ ಇತ್ಯಾದಿ ಕಾಲಮಾಪನೆಯ ಸಾಧನಗಳು ವಿಕಾಸ ಹೊಂದಿದವೆನ್ನ ಬಹುದು. ಈ ಜ್ಞಾನದ ಗಳಿಕೆಗೆ ಎಷ್ಟು ಅವ್ಯಾಹತ ಪ್ರಯತ್ನ ನಡೆದಿರಬಹುದೆಂಬುದನ್ನು  ನೀವೇ ಊಹಿಸಿ, ಪ್ರಾಯಶಃ ನಮ್ಮಲ್ಲಿ ಅನೇಕರಿಗೆ ಕಷ್ಟಸಾಧ್ಯ ವಿಷಯವಿದು ಎಂಬುದು ಸ್ಪಷ್ಟ.

ಕಾಲಜ್ಞಾನ  ವಿಕಾಸ

ಈ ಜ್ಞಾನದ ವಿಕಾಸ ಹೇಗೆ ಆಗಿದ್ದಿರಬಹುದು? ಮೊದಲು ನಮ್ಮ ಪೂರ್ವಿಕರಿಗೆ ಸಹಜವೂ ಸುಲಭವೂ ಆದ ಹಗಲು – ರಾತ್ರಿಗಳ ಕಲ್ಪನೆ ಬಂದಿತೆನ್ನಲು ಊಹೆ ಅನವಶ್ಯಕ. ಆದರೆ ನಂತರ ಪಕ್ಷದ ಕಲ್ಪನೆ ಚಂದ್ರವೀಕ್ಷಣೆಯಿಂದಾಗಿ  ಬಂದಿರಬೇಕು.  ನಂತರ ಋತುಗಳ ಹವಾಮಾನವು ವ್ಯವಸ್ಥಿತವಾಗಿ ಬದಲಾಗುತ್ತಾ ಚಳಿ, ಸೆಖೆ ಮತ್ತು ಮಳೆಗಾಲಗಳು ಪುನರಾವರ್ತಿತವಾಗುವುದನ್ನು  ಕಂಡು ಸಂವತ್ಸರದ ಕಲ್ಪನೆ ಬಂದಿರಬೇಕು. ಪಕ್ಷದ ಕಲ್ಪನೆಯನ್ನು ಚಂದ್ರವೀಕ್ಷಣೆಯಿಂದ ಗೊತ್ತು ಮಾಡಿಕೊಂಡಂತೆ, ಸೂರ್ಯ ವೀಕ್ಷಣೆಯಿಂದ ಸಂವತ್ಸರದ ಕಲ್ಪನೆ ಬಂದಿತೆಂಬುದೂ ಸ್ಪಷ್ಟ. ‘ವರ್ಷಾ’ ಎಂಬ ಸಂಸ್ಕೃತ ಶಬ್ದಕ್ಕೆ  ‘ಮಳೆ’ ಎಂದರ್ಥ. ಮಳೆಗಾಲದೊಂದಿಗೆ ಮುಕ್ತಾಯಗೊಳ್ಳುವುದರಿಂದ ‘ವರ್ಷ’ ಎಂಬ ಅನ್ವರ್ಥ ಹೆಸರು ಬಂದಿತು. ಅಂತೆಯೇ ‘ಸಂವಸಂತಿ ಋತವೋ ಯಸ್ಮಿನ್’– ಅಂದರೆ ‘ಸರ್ವ ಋತುಗಳೂ ವ್ಯವಸ್ಥಿತವಾಗಿ ಯಾವುದರಲ್ಲಿ ನೆಲೆಗೊಂಡಿರುವವೊ  ಅದು’ ಎಂಬ ಅರ್ಥದಲ್ಲಿ  ಋತುಗಳ ಆವರ್ತನವೊಂದು ಪೂರೈಸುವ ಅವಧಿಗೆ ‘ಸಂವತ್ಸರ’ ಎಂಬ ಹೆಸರಿಟ್ಟರು. ಈ ಕಲ್ಪನೆಗಳು ನಿಶ್ಚಿತವಾದ ನಂತರ ಲೆಖ್ಖಾಚಾರ ನಡೆದು ಸಂವತ್ಸರದಲ್ಲಿ 12 ‘ಮಾಸ’ಗಳನ್ನೂ, 24 ‘ಅರ್ಧಮಾಸ’ಗಳನ್ನೂ ಕೂಡಿಸುವ ಪ್ರಯತ್ನವಾಗಿರಬೇಕು.  ಇದರಲ್ಲಿ ‘ಮಾಸ’ ಕಲ್ಪನೆಯೇ ಮೊದಲಿನದಿರಬೇಕು. ಏಕೆಂದರೆ ತೈತ್ತರೀಯೋಪನಿಷತ್ತಿನಲ್ಲಿ ಸ್ಪಷ್ಟವಾದ ‘ಅರ್ಧಮಾಸ’  ಎಂಬ ಶಬ್ದಪ್ರಯೋಗ ಇದೆ.  ಅಂದರೆ ಆ ವೇಳೆಗೆ ಆಗಲೇ  ‘ಮಾಸ’ ಶಬ್ದದ ಬಳಕೆ   ವ್ಯಾಪಕವಾಗಿರಬೇಕು.  ಆನಂತರ ನಕ್ಷತ್ರಗಳ ಜ್ಞಾನ ನಿಶ್ಚಿತವಾಗಿರಬಹುದು. ಏಕೆಂದರೆ ಇದಕ್ಕೆ  ಇನ್ನೂ ಹೆಚ್ಚು ದೀರ್ಘ ಅವಲೋಕನ ಅವಶ್ಯಕವಾಗಿತ್ತೆಂದು ಸುಲಭವಾಗಿ ಊಹಿಸಬಹುದು.  ಸದ್ಯದಲ್ಲಿ  ಪ್ರಚಲಿತವಾಗಿರುವ  ಚೈತ್ರಾದಿ ಮಾಸನಾಮಗಳು ನಕ್ಷತ್ರ ಜ್ಞಾನದಿಂದ ಬಂದವು.  ನಕ್ಷತ್ರಜ್ಞಾನದ ನಂತರ ತಿಥಿಗಳ ಕಲ್ಪನೆ ಎಟುಕಿರಬೇಕು. ಮೊದಲು ಮಾಸವು  ‘ಪೌರ್ಣಮಿ’ಯಂದು  ಮುಕ್ತಾಯವಾಗುತ್ತಿದ್ದಿರಬಹುದು. ಆದ್ದರಿಂದಲೇ ‘ಪೂರ್ಣೋಮಾಸೋ ಅಸ್ಯಾಂ’– ‘ಮಾಸವು  ಆ ರಾತ್ರಿ ಪೂರೈಸುತ್ತದೆ’ ಎಂಬರ್ಥದ ‘ಪೌರ್ಣಮಿ’ ಶಬ್ದವನ್ನು  ಬಳಸಲಾಗಿದೆ. ಆದ್ದರಿಂದ ಅಮಾವಾಸ್ಯೆಗೆ ಮಾಸವು ಪೂರ್ಣಗೊಳ್ಳುವ ಪ್ರಚಲಿತ  ‍ಕ್ರಮ ನಂತರ ಬಂದಿರಬಹುದಾಗಿದೆ. ನಮ್ಮಲ್ಲಿ ಈಗ ಬಹುತೇಕ ವ್ಯವಹಾರಗಳಿಗೆ ‘ತಿಥಿ’ಯೇ ಪ್ರಧಾನವಾಗಿದೆ. ಆದರೆ ಮುಂಚೆ ನಕ್ಷತ್ರಗಳನ್ನು  ಉಲ್ಲೇಖಿಸಿ  ಕಾಲ ನಿರ್ಣಯಿಸುವ, ಮುಹೂರ್ತ ಸಾಧಿಸುವ  ಪದ್ಧತಿಯೇ ಪ್ರಚಲಿತವಾಗಿತ್ತೆಂದು ಸಂಶೋಧಕರು ತಿಳಿಸುತ್ತಾರೆ. ಲಿಖಿತ ಪಂಚಾಂಗಗಳು  ಬಂದ ನಂತರ ತಿಥಿ ನಿರ್ಣಯ ಸುಲಭವಾಗಿ  ಅದಕ್ಕೆ ಪ್ರಾಶಸ್ತ್ಯ ಲಭಿಸಿತೆಂದೂ, ಅದಕ್ಕೆ ಮುಂಚೆ ರಾತ್ರಿಯ  ಆಕಾಶದಲ್ಲಿ  ಸರ್ವರಿಗೂ ಸರ್ವಸ್ಥಾನಗಳಲ್ಲೂ  ನಕ್ಷತ್ರಲೋಕದ ‘ತೆರೆದ ಪಂಚಾಂಗ’ ಸುಲಭವಾಗಿ  ಸಿಗುತ್ತಿದ್ದುದರಿಂದ ನಕ್ಷತ್ರಮಾನಕ್ಕೆ ಪ್ರಾಶಸ್ತ್ಯವಿತ್ತೆಂದೂ  ಅವರ ಅಂಬೋಣ.

ಒಟ್ಟಿನಲ್ಲಿ ‘ಭೌತಕಾಲ’ ನಿರ್ಣಯಕ್ಕೆ ಅಗತ್ಯವಾದ ಎಲ್ಲ ಅವಲೋಕನ, ಅಧ್ಯಯನ, ನಿರ್ಣಯಗಳು ಏನಿಲ್ಲೆಂದರೂ  ಏಳೆಂಟು ಸಾವಿರ ವರ್ಷಗಳಿಗೂ  ಹಿಂದೆ ನಮ್ಮ ದೇಶದಲ್ಲಿ ಆಗಿದ್ದವು ಎನ್ನಲು  ಸಾಕಷ್ಟು ಆಧಾರಗಳಿವೆ. ಈ ಪ್ರಯತ್ನ ಹಾಗೂ ಶೋಧನೆಗಳನ್ನು  ವೈಜ್ಞಾನಿಕವೆನ್ನಬೇಕೋ ಇಲ್ಲವೋ ಎಂಬುದು ಆ ಕುರಿತು ಯೋಚಿಸುವವರ ಮನಸ್ಸಿನ ಪ್ರವೃತ್ತಿಯನ್ನು  ಅವಲಂಬಿಸಿದೆ. ಅಲ್ಲವೇ?

  • ಡಾ.ಉಪೇಂದ್ರ ಶೆಣೈ

ಮುಂದುವರೆಯುವುದು

   

Leave a Reply