ಜಗದ್ಗುರು ಭಾರತ ಭಾಗ – 5

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 06.07.2014

ವೇದಗಳಲ್ಲಿ ವೈಜ್ಞಾನಿಕ ಕಲ್ಪನೆಗಳು-2

 ಕಣಾದನ ಅಣು-ವಸಿಷ್ಠರ

ಪ್ರಪಂಚ ಲಹರಿ

ವೈದಿಕ ದ್ರಷ್ಟಾರರು  ತಮ್ಮ ಅಂತರರ್ಬೋದದಿಂದ (ಇಂಟ್ಯೂಷನ್)ಅನೇಕ ಸತ್ಯಗಳ ಅನುಭವ ಪಡೆದರು. ಆದರೆ ಅಷ್ಟಕ್ಕೇ  ತೃಪ್ತರಾಗದೆ,  ತಮ್ಮ ಅನುಭವವನ್ನು ತರ್ಕದ ಒರೆಗಲ್ಲಿಗೆ ತಿಕ್ಕಿ ಸ್ಥಿರಪಡಿಸಲೂ ಯತ್ನಿಸಿದರು.  ಪ್ರಾಚೀನ ಭಾರತದಲ್ಲಿ ವಿಜ್ಞಾನವು ಉದಿಸಿ ಬಂದದ್ದೇ ಹೀಗೆ. ಅವರು ಅಂದು ಅನುಭವದಿಂದ  ಕಂಡುಕೊಂಡ ಕೆಲವು ಮೂಲ ಸತ್ಯಗಳನ್ನು ಇಂದಿನ ಆಧುನಿಕ ಪರಮಾಣು ವಿಜ್ಞಾನವೂ ಶೋಧಮುಖದಿಂದ ಸ್ಥಿರಪಡಿಸುತ್ತಲಿದೆ. ‘ಪದಾರ್ಥದ ಮೂಲ ಘಟಕ ಅಣು’ ಎಂಬ ಸಿದ್ಧಾಂತವನ್ನು ಆಧುನಿಕ ವಿಜ್ಞಾನವು ನೀಡುವ ಎಷ್ಟೋ ಶತಮಾನಗಳ ಹಿಂದೆ ವೈಶೇಷಿಕರು ಅಣು ಸಿದ್ಧಾಂತವನ್ನು  ಮಂಡಿಸಿದ್ದು ಮತ್ತು ಮುಂದೆ ಜೈನ ತತ್ವಶಾಸ್ತ್ರವು ಅದನ್ನು ವಿಕಸಿತಗೊಳಿಸಿದ್ದು ಅದ್ಭುತವೆಂದರೆ ತಪ್ಪಾದೀತೆ?

ಹಿಂದುಗಳಾದ ನಮ್ಮಲ್ಲಿ ಎಲ್ಲ ವಿಜ್ಞಾನಶಾಸ್ತ್ರಗಳ ಮೂಲವನ್ನೂ ಸಾಮಾನ್ಯವಾಗಿ ವೇದಗಳಲ್ಲೇ ಗುರುತಿಸುವುದು ವಾಡಿಕೆ. ‘ಆಯುರ್ವೇದ’, ‘ಧನುರ್ವೇದ’, ‘ಗಾಂಧರ್ವವೇದ’, ‘ಸ್ಥಾಪತ್ಯವೇದ’ಗಳೆಂಬ ಈ ಉಪದೇಶಗಳ ವೈಜ್ಞಾನಿಕ ಸ್ವರೂಪವನ್ನು ಈಗಾಗಲೇ ನಾವು ಗಮನಿಸಿದ್ದೇವೆ. ಇವಲ್ಲದೆ ಖಗೋಳಶಾಸ್ತ್ರ (ಅಸ್ಟ್ರಾನಮಿ), ಗಣಿತಶಾಸ್ತ್ರ (ಮ್ಯಾಥೆಮಾಟಿಕ್ಸ್),  ಸೃಷ್ಟಿಶಾಸ್ತ್ರ (ಕಾಸ್ಮಾಲಜಿ) ಇತ್ಯಾದಿ ವಿಜ್ಞಾನಗಳ ಮೂಲವನ್ನೂ ನಾವು ವೇದಗಳಲ್ಲಿ ಅರಸಬಹುದು. ಉದಾಹರಣೆಗೆ ಖಗೋಳಶಾಸ್ತ್ರದ ಬಗ್ಗೆ ಹೇಳಬೇಕೆಂದರೆ ಸೂರ್ಯನ ದೈನಂದಿನ ಗತಿಯನ್ನು ಅನುಸರಿಸಿ ನಡೆಯುವ ವಿವಿಧ ಕಾಲಾವಧಿಯ ‘ಗವಾಂ ಅಯಣ’ ಹಾಗೂ ‘ಸತ್ರ’ಗಳನ್ನು ಸಾಮವೇದದಲ್ಲಿ ವರ್ಣಿಸಿರುವುದರಿಂದ ಯಾವುದೋ ಒಂದು ಬಗೆಯ ‘ಪಂಚಾಂಗ ವಿಜ್ಞಾನ’ ಅಂದು ಅಸ್ತಿತ್ವದಲ್ಲಿತ್ತು ಎಂದು ತರ್ಕಿಸುವುದು ಕಷ್ಟವೇನಲ್ಲ. ಯಜುರ್ವೇದವೂ ಹಿಂದು ಖಗೋಳಶಾಸ್ತ್ರ ಇತಿಹಾಸದ ಅಧ್ಯಯನದ ದೃಷ್ಟಿಯಿಂದ ಮಹತ್ವದ್ದಾಗಿದೆ. ಋಗ್ವೇದದಲ್ಲಿ ನಕ್ಷತ್ರಗಳನ್ನು ಹೆಸರಿಸಲಾಗಿದೆಯಾದರೂ, ಯಜುರ್ವೇದದಲ್ಲಿ ಮೊಟ್ಟಮೊದಲ ಬಾರಿಗೆ  ‘ಕೃತ್ತಿಕಾ’ ನಕ್ಷತ್ರವೇ ಆದಿಯಾಗಿ ಉಳ್ಳ 27 ಅಥವಾ 28 ನಕ್ಷತ್ರಗಳ ಮಾಲೆಯ ವರ್ಣನೆ  ನಮಗೆ ಸಿಗುತ್ತದೆ. ‘ವೇದಾಂಗ ಜ್ಯೋತಿಷ’ ಎಂಬುದು ಸ್ವತಃ ಪ್ರಖ್ಯಾತವಾಗಿರುವ ಖಗೋಳವಿಜ್ಞಾನ ಭಾಗ. ಅದರಲ್ಲಿ ಇರುವ ಯಜ್ಞಯಾಗಾದಿಗಳು, ವಿಧಿಗಳು, ಅವುಗಳ ಆಚರಣೆಗೆ ಒತ್ತು ನೀಡಲೆಂದೇ ವೇದಗಳು ಮೂಡಿಬಂದವು. ಈ ವಿಧಿಗಳು ನಿಯತಕಾಲದಲ್ಲೇ ನಡೆಯಬೇಕೆಂಬುದು ನಿಯಮ. ಆದ್ದರಿಂದ ‘ಯಾರಿಗೆ ಜ್ಯೋತಿಷ, ಅಂದರೆ ಕಾಲನಿರ್ಣಯದ ಜ್ಞಾನವಿದೆಯೋ ಆತನು ಯಜ್ಞಯಾಗಾದಿಗಳನ್ನು ಬಲ್ಲವನೂ ಆಗುತ್ತಾನೆ’ ಎಂಬ ಹೇಳಿಕೆಯು ಖಗೋಳವಿಜ್ಞಾನದ  ಮೂಲವು ವೇದವೆಂಬುದನ್ನು ಸಿದ್ಧಪಡಿಸುತ್ತದೆ.

‘ಕಾಣ್ಕೆ’1ಯಾಗಿ ಮೂಡಿಬಂದ ವೈದಿಕ ಋಚೆಗಳ ಅರ್ಥವನ್ನು ಅನುಸಂಧಾನ ಮಾಡುತ್ತಿದ್ದಂತೆ ಕಾಲಾನುಕ್ರಮದಲ್ಲಿ ‘ಪ್ರಸ್ಥಾನತ್ರಯ’ ಎಂದು ಪ್ರಖ್ಯಾತಿ ಪಡೆದ ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆಗಳೂ ಮತ್ತು ಷಡ್ದರ್ಶನಗಳೆಂದು ಮನ್ನಿಸಲ್ಪಟ್ಟ ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ,  ಮೀಮಾಂಸಾ ಮತ್ತು ವೇದಾಂತಗಳೆಂಬ ತತ್ವಜ್ಞಾನ ವಿಭಾಗಗಳೂ ರೂಪುಗೊಂಡವು. ಜಗತ್ತಿನ ಸೃಷ್ಟಿಯನ್ನು ಕುರಿತು ಇವುಗಳಲ್ಲಿ ಕಾಣಸಿಗುವ ಚಿಂತನೆಯು ಕೇವಲ ಊಹಾಪೋಹಗಳಂತಿರದೆ, ವ್ಯವಸ್ಥಿತ ವೈಜ್ಞಾನಿಕ ಸ್ವರೂಪದಲ್ಲಿದ್ದು ವೇದಮೂಲವಾದ ಕಲ್ಪನೆಗಳೇ ಅಲ್ಲಿ ಮುಂದಿನ ವಿಕಸಿತ ಹಂತಗಳಲ್ಲಿರುವುದನ್ನು ಕಾಣುತ್ತೇವೆ.

ಕಣಾದನ ಅಣು

‘ಪದಾರ್ಥದ ಅತಿಸೂಕ್ಷ್ಮ ಘಟಕ ಅಣು’ ಎಂಬ ಕಲ್ಪನೆಯು ಕೇವಲ ಆಧುನಿಕ ವಿಜ್ಞಾನದ್ದಲ್ಲ. ಸಾವಿರಾರು ವರ್ಷಗಳ ಹಿಂದೆಯೇ ಈ ಅಣುನಿರ್ಮಿತ ಜಗತ್ತಿನ ಕಲ್ಪನೆಯನ್ನು ಮನುಕುಲಕ್ಕೆ ನೀಡಿದವನು ಮಹರ್ಷಿ ಕಣಾದ. ಅಣುವು ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವೆಂದೂ, ಅದರ ಕರ್ಮವೂ ಕಣ್ಣಿಗೆ ಕಾಣಿಸದೆಂದೂ2 ಆತ ಸಾರಿದ್ದಾನೆ.  ‘ದೃಗ್ಗೋಚರ ವಿಶ್ವವು ಅಣುಗಳ ಅಗೋಚರ ಕಾರ್ಯದ ಪರಿಣಾಮ’ ಎನ್ನುವ  ಆತನ ಕಲ್ಪನೆಯಲ್ಲಿ ಭಾರತದ ವೈಶಿಷ್ಟ್ಯವಾದ ‘ಕರ್ಮಸಿದ್ಧಾಂತ’ದ ಬೇರೂ ಇರುವುದನ್ನು ಗಮನಿಸಬೇಕು. ‘ಕರ್ಮ’ದಿಂದಲೇ ಸೃಷ್ಟಿ. ‘ಕರ್ಮ’ದಂತೆ ಫಲ. ‘ದೃಗ್ಗೋಚರ ವಿಶ್ವವು ಅಣುವಿನ ಕರ್ಮದ ಫಲ’ ಎಂದಾಗ ಮೂಲದಲ್ಲೇ ಕರ್ಮಕ್ಕೆ ವೈಶ್ವಿಕತೆ (ಕಾಸ್ಮಿಕ್ ನೇಚರ್) ಬಂದಂತೆ. ಈ ದೃಷ್ಟಿಯಿಂದ ನೋಡಿದಾಗ ಜಗತ್ತಿನ ಮೊದಲ ಅಣುವಿಜ್ಞಾನಿ ‘ಕಣಾದ’ನೆಂಬುದು ಅತ್ಯಂತ ಸ್ಪಷ್ಟ.

ಭೌತದ್ರವ್ಯದ ಆವಿಷ್ಕಾರ ವಸಿಷ್ಠ ವಿಚಾರ

ಮಹರ್ಷಿ ವಸಿಷ್ಠರು ‘ಪ್ರಪಂಚಲಹರಿ’ ಎಂಬ ಒಂದು ಗ್ರಂಥವನ್ನು ಬರೆದಿದ್ದರೆಂಬ  ಉಲ್ಲೇಖ ಪ್ರಾಚೀನ ಸಾಹಿತ್ಯದಲ್ಲಿ ಸಿಗುತ್ತದೆ.  ಇಂದು ಈ ಗ್ರಂಥವು ಸಿಗುತ್ತಿಲ್ಲವಾದರೂ ಅದರಲ್ಲಿದ್ದ ಕೆಲವು ಮೌಲಿಕ ವಿಚಾರಗಳು ಬೇರೆಡೆ ಸಿಕ್ಕಿವೆ. ಇಲ್ಲಿ ಈ ಗ್ರಂಥದ ಹೆಸರೇ ವೈಶಿಷ್ಟ್ಯಪೂರ್ಣ ಎಂಬುದನ್ನು ಗಮನಿಸಬೇಕು. ‘ಲಹರಿ’ ಎಂಬ ಶಬ್ದಕ್ಕೆ ‘ಅಲೆ’ ಎಂದರ್ಥ. ಆದ್ದರಿಂದ ಈ ‘ಪ್ರಪಂಚಲಹರಿ’ ಶಬ್ದಕ್ಕೆ ಈ ಪ್ರಪಂಚವು ಅಲೆ ಅಲೆಯಾಗಿ ಸೃಷ್ಟಿಯಾಯಿತು, ಅಲೆಯಂತೆ ಅದು ಮುಂದುವರೆಯುತ್ತಿದೆ (ಕ್ರಿಯೇಷನ್ ಇನ್ ವೇವ್ಸ್) ಎಂದರ್ಥವಾಗುತ್ತದೆ.  ಇಂಥ ಅರ್ಥಗರ್ಭಿತ ಶಬ್ದಪ್ರಯೋಗಗಳು ತಮ್ಮ ಹಿಂದಿರುವ ವೈಜ್ಞಾನಿಕ ಅರಿವನ್ನು ಊಹಿಸುವಂತೆ ಸವಾಲೆಸೆದು ನಿಂತಿವೆ.

1. ಚಿತ್ತೈಕಾಗ್ರತೆಯ ’ಸಮಾಧಿ’ಸ್ಥಿತಿಯಲ್ಲಿದ್ದಾಗ ಋಷಿಯ ಮನೋಭೂಮಿಕೆಯಲ್ಲಿ ಉದಿಸಿದ  ಜ್ಞಾನವು  ‘ಕಾಣ್ಕೆ’ಯಾಗುತ್ತದೆ. ಸಾಮಾನ್ಯ ಮನಸ್ಸಿನ ತಾರ್ಕಿಕ  ಬಲದಿಂದ ಅರ್ಥೈಸಲಾಗುವ  ಸತ್ಯವು  ಪೂರ್ಣಾಂಶದ್ದಲ್ಲವೆಂದೂ, ಪರಾ ಮನಸ್ಸಿನ ಅದ್ಭುತಶಕ್ತಿಯು ಸತ್ಯವನ್ನು  ಸಾಂಗೋಪಾಂಗವಾಗಿ ಗ್ರಹಿಸುವುದೆಂದೂ ನಮ್ಮ ನಂಬಿಕೆ. ಆದ್ದರಿಂದ ‘ಕಾಣ್ಕೆ’ಯು  ‘ಶೋಧನೆ’ಗಿಂತ ಹೆಚ್ಚು ವಸ್ತುನಿಷ್ಠ.

2. ಅಣೂನಾಂ ಕರ್ಮ ಅದೃಷ್ಟ ಕಾರಿತಂ.

ಈ ‘ಪ್ರಪಂಚಲಹರಿ’ ಗ್ರಂಥದಲ್ಲಿ ವಸಿಷ್ಠರು ಭೌತ ಜಗತ್ತಿನ ಹಾಗೂ ದ್ರವ್ಯದ ಮೂಲವನ್ನು ಕುರಿತು ಚರ್ಚಿಸುತ್ತಾರೆ. ‘ಸೃಷ್ಟಿಯು ಸೃಷ್ಟಿಕರ್ತನ ಕ್ರಿಯೆಯೋ ಅಥವಾ ಅಣುಗಳ ಪರಿಣಾಮವೋ?’ ಎಂಬ ಪ್ರಶ್ನೆಯನ್ನು  ಮುಂದಿಟ್ಟುಕೊಂಡು, ಸೃಷ್ಟಿ ಕಾರಣವನ್ನು ಅವರು ಹುಡುಕಲು  ಹೊರಡುತ್ತಾರೆ.  ಈ ಪ್ರಶ್ನೆಯು ಅದೆಷ್ಟು ಪ್ರಾಚೀನಕಾಲದಿಂದಲೂ ಮನುಷ್ಯನ ಮನಸ್ಸನ್ನು  ಕಾಡಿದೆ ಎಂಬುದರ ಸ್ಪಷ್ಟ  ನಿದರ್ಶನ ಇದು ! ಈ ಕುರಿತು ನಿಷ್ಕರ್ಷೆಗೆ ಬರುವಾಗ  ವಸಿಷ್ಠರು ತರ್ಕಿಸುವ ರೀತಿಯೇ ಸ್ವಾರಸ್ಯಕರ. ಅವರೊಂದು ಗೋಡೆಯ ಉದಾಹರಣೆಯನ್ನು ಎತ್ತಿಕೊಳ್ಳುತ್ತಾರೆ. “ಗೋಡೆಯಂತೆಯೇ ಪ್ರಪಂಚವೂ ಕೂಡಾ. ಗೋಡೆಯನ್ನು  ನಾವು ಕಾಣಬಲ್ಲೆವು. ಆದ್ದರಿಂದ ‘ಅದು ಇದೆ’ ಎಂಬುದು  ನಮಗೆ ಖಚಿತ . ಅಂತೆಯೇ, ಇಂದ್ರಿಯಗಮ್ಯ ಅನುಭವವೇ ಪ್ರಪಂಚದ ಇರುವಿಕೆಯನ್ನು ನಮಗೆ ಖಚಿತಪಡಿಸುತ್ತದೆ. ಈ ಗೋಡೆ ತಾನೊಂದು ಭೌತಿಕ ವಸ್ತುವಾಗಿ ನಿಂತಿರಲು ಇದರಲ್ಲಿನ ಇಟ್ಟಿಗೆಗಳೇ ಕಾರಣ. ಗೋಡೆಯಲ್ಲಿ  ಇಟ್ಟಿಗೆಗಳ ಪಾತ್ರ ಹೇಗೋ, ಹಾಗೆ ವ್ಯಕ್ತ ಪ್ರಪಂಚದಲ್ಲಿ ‘ಅಣು’ಗಳ ಪಾತ್ರವಿದೆ. ಆದರೆ  ಇದು ಭೌತಿಕ ಕಾರಣ ಅಷ್ಟೇ.  ‘ಇಟ್ಟಿಗೆ’ ಎನ್ನುವ ಭೌತಿಕ ಕಾರಣವಲ್ಲದೇ ಗೋಡೆಯು ಅಸ್ತಿತ್ವಕ್ಕೆ ಬಂದಿರಲು  ಇನ್ನೊಂದು ಕಾರಣವೂ ಇದೆ.  ಅದು ಬಹುಮಟ್ಟಿಗೆ ನಿಗೂಢವಾದದ್ದು. ಕೇವಲ  ಯೋಚಿಸುವ ಮನಸ್ಸಿಗಷ್ಟೇ ನಿಲುಕುವಂಥದ್ದು . ಅದು ಇಟ್ಟಿಗೆಯಲ್ಲಿ ಇಲ್ಲ.  ಅದರ  ಆಚೆಗಿದೆ.  ಗೋಡೆಯ ಆಕಾರದಲ್ಲಿ  ಇಟ್ಟಿಗೆಗಳನ್ನು  ಪೇರಿಸಿದ  ಮೇಸ್ತ್ರಿಯ  ಮನಸ್ಸು   ಎಂಬುದೇ  ಆ ಕಾರಣ. ಆ ಕಾರಣವು ಗೋಡೆಯಲ್ಲಿನ ಇಟ್ಟಿಗೆಗಳಿಗಿಂತ ಮೇಲ್ಪಟ್ಟಿದ್ದು . ಅಮೂರ್ತವಾದದ್ದೂ ಕೂಡಾ. ಗೋಡೆಯೊಳಗೆ  ಕೆದಕಿ  ನೀವು  ಅದನ್ನು ಕಾಣಲಾರಿರಿ. ಏಕೆಂದರೆ ಅದು ಭೌತವಸ್ತುವಿನಾಚೆಗೆ ಯಾವುದೋ ಮೇಲಿನ  ಹಂತದಲ್ಲಿದೆಯಾದುದರಿಂದ ನಿಮಗದು ಗೋಡೆಯಲ್ಲಿ ಸಿಗುವುದಿಲ್ಲ.  ಈ ಪ್ರಪಂಚವೂ  ಹಾಗೆಯೇ. ಅಣುಗಳೆಂಬ  ಇಟ್ಟಿಗೆಗಳನ್ನು  ಪೇರಿಸಿ ಕಟ್ಟಿದ ಭವ್ಯ ಭವನ   ಇದಾದರೂ,  ಇದರ ನೈಜ ಕಾರಣ ಭೌತ ಅಣುವಲ್ಲ. ಮೇಲಿನ   ಹಂತದಲ್ಲೆಲ್ಲೋ  ಇರುವ  ‘ಪರಬ್ರಹ್ಮ’ದ ಮನಸ್ಸು.’’

ಹೇಗಿದೆ ಮಹರ್ಷಿ ವಸಿಷ್ಠರ ಈ ತರ್ಕ? ಇದು ವೈಜ್ಞಾನಿಕ ರೀತಿಯದೋ? ಕುರುಡು ಮನಸ್ಸು ಎಸೆದ ಮಾತಿನ  ದಾಳವೋ?

ಅಣುವನ್ನು ಕುರಿತ ಭಾರತೀಯ ಸಿದ್ಧಾಂತಕ್ಕೆ ಪ್ರಯೋಗಾನುಭವದ ಆಧಾರ (Experimental) ಇರದೇ  ಕೇವಲ  ತರ್ಕ (Logic) ಅಥವಾ ಯಾವುದೋ ಅಂತರ್ದೃಷ್ಟಿ (intution)ಯ ಪರಿಣಾಮವಾಗಿ  ಅದು  ಮೂಡಿಬಂದಿತ್ತು ಎಂಬುದು ನಿಜವೆ.  ಆದರೆ ಆ ಕಾರಣದಿಂದ ಈ ಕಲ್ಪನೆಯಲ್ಲಿನ ಪ್ರತಿಭೆ ಕಡಿಮೆಯಾದೀತೆ? ಆಧುನಿಕ ಭೌತಶಾಸ್ತ್ರದ  ಪ್ರತಿಪಾದನೆಗಳನ್ನು  ಸ್ಪಷ್ಟವಾಗಿ ಮಂಡಿಸಿದ ಈ ಪ್ರಾಚೀನ  ಸೂತ್ರಗಳು ಭಾರತದ ವೈಜ್ಞಾನಿಕ  ವೈಭವದ  ಹೆಗ್ಗುರುತುಗಳಲ್ಲವೆ?

   

Leave a Reply