ಜಯಲಲಿತಾ ಪ್ರಕರಣ:ಅರ್ಥವಿಲ್ಲದ ಅಪಪ್ರಚಾರ

ಕರ್ನಾಟಕ - 1 Comment
Issue Date : 06.10.2014

ತಮಿಳುನಾಡು ಪ್ರಕರಣದಲ್ಲಿ ಹೊರ ಬಿದ್ದಿರುವ ತೀರ್ಪಿನ ಬಗ್ಗೆ ಹಬ್ಬುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ -ಮೊಬೈಲ್ ಫೋನ್ ಬಳಸುವ ಅದೆಷ್ಟೋ ಜನರಿಗೆ ಬೆಂಗಳೂರು ನಗರ ಪೊಲೀಸರಿಂದ ಹೀಗೊಂದು ಎಸ್‌ಎಂಎಸ್ ಹರಿದಾಡಿದೆ.ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ಸೆರೆವಾಸ ಮತ್ತು 100 ಕೋಟಿ ರೂಪಾಯಿಗಳ ದಂಡ ವಿಧಿಸಿದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಹಿಂದೆ ಕನ್ನಡಿಗರ ಕುತಂತ್ರವಿದೆ ಎಂದು ತಮಿಳುನಾಡಿನ ಜಯಲಲಿತಾ ಅಭಿಮಾನಿಗಳು ನಡೆಸಿದ ಅಪಪ್ರಚಾರದ ಹಿನ್ನೆಲೆಯಲ್ಲಿ ಇಂತಹ ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿತ್ತು ಎನ್ನಬಹುದು.

ಜಯಲಲಿತಾ ಅವರು ಕರ್ನಾಟಕದ ಮೂಲದವರೇ ಆಗಿರುವುದರಿಂದ ಅವರ ವಿರುದ್ಧ ಕರ್ನಾಟಕದವರು ಕುತಂತ್ರ ನಡೆಸಿ ಜೈಲಿಗೆ ಅಟ್ಟುವ ಪ್ರಮೇಯವೇ ಬಾರದು ಎನ್ನುವ ವಾದವನ್ನೂ ಈಗ ಮಂಡಿಸಬಹುದಾಗಿದೆ!18 ವರ್ಷಗಳ ಕಾಲ ನಡೆದಿರುವ ಈ ಪ್ರಕರಣದ ವಿಚಾರಣೆಯಲ್ಲಿ ಕರ್ನಾಟಕಕ್ಕೆ ತಳಕು ಹಾಕಬಹುದಾದ ವಿಷಯಗಳೂ ಕೂಡಾ ಹೆಚ್ಚೇನಿಲ್ಲ.ನ್ಯಾಯಾಧೀಶರು ಕರ್ನಾಟಕ ಮೂಲದವರು ಎನ್ನುವ ಕಾರಣಕ್ಕೆ ಅವರು ತಮ್ಮ ವಿರುದ್ಧ ತೀರ್ಪು ನೀಡಿದ್ದಾರೆ ಎನ್ನುವುದೂ ಕೂಡಾ ತೀರಾ ಬಾಲಿಶ ಎನಿಸಿಕೊಳ್ಳುತ್ತದೆ.ಎಲ್ಲಕ್ಕಿಂತ ಮೇಲಾಗಿ ಜಯಲಲಿತಾ ವಿರುದ್ಧ ಇರುವ ಗಂಭೀರ ಆರೋಪಗಳನ್ನು ಗಮನಿಸಿದರೆ ಯಾವುದೇ ನ್ಯಾಯಾೀಶ ರಾದರೂ ಇಂತಹ ತೀರ್ಪು ನೀಡುತ್ತಿದ್ದರು ಎಂದೇ ಭಾವಿಸಬೇಕು.ಹೀಗಿರುವಾಗ ತೀರ್ಪಿನ ಮೇಲೆ ಕನ್ನಡಿಗರು ಪ್ರಭಾವ ಬೀರಿದ್ದಾರೆ ಎನ್ನುವ ವದಂತಿ ಹಬ್ಬಿಸುವುದು ಕನ್ನಡಿಗರು ಮತ್ತು ತಮಿಳು ಭಾಷಿಕರ ನಡುವೆ ದ್ವೇಷ ಬಿತ್ತುವ ಯತ್ನವಲ್ಲದೇ ಮತ್ತೇನೂ ಅಲ್ಲ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರುತ್ತಿರುವ ಮೊದಲ ಮುಖ್ಯಮಂತ್ರಿ ಜಯಲಲಿತಾ ಎನ್ನುವುದು ಇಲ್ಲಿ ಗಮನಾರ್ಹ.ಮೊದಲನೆಯದಾಗಿ 1996ರಿಂದ 2014ರ ವರೆಗೆ ನಡೆದಿರುವ ಅನೇಕ ಹಂತದ ವಿಚಾರಣೆಗಳಲ್ಲಿ ಸಿಕ್ಕಿರುವ ಯಾವುದೇ ಸಾಕ್ಷ್ಯಗಳು ಜಯಲಲಿತಾ ಅವರನ್ನು ಬಚಾವ್ ಮಾಡುವ ಸಾಧ್ಯತೆ ಇರಲಿಲ್ಲ.ಇಷ್ಟು ದೀರ್ಘ ಕಾಲ ವಿಚಾರಣೆ ನಡೆದಿರುವ ಕೆಲವು ಪ್ರಕರಣಗಳಲ್ಲಿ ನ್ಯಾಯಾಧೀಶರು ಬದಲಾಗಿರುವ ನಿದರ್ಶನಗಳಿವೆ.ಆದರೆ ಈ ಪ್ರಕರಣದಲ್ಲಿ ಅನೇಕ ನ್ಯಾಯವಾದಿಗಳೇ ಬದಲಾಗಿದ್ದಾರೆ. ಈ ಪ್ರಕರಣದಲ್ಲಿ ಜಯಲಲಿತಾ ಅವರನ್ನು ಬಚಾವ್ ಮಾಡುವ ಸಾಧ್ಯತೆ ಇದ್ದಿದ್ದರೆ ಅನೇಕ ಅನುಭವೀ ನ್ಯಾಯವಾದಿಗಳು ಪ್ರಕರಣವನ್ನು ಅರ್ಧಕ್ಕೆ ಕೈಬಿಡುವ ಸಾಧ್ಯತೆಗಳೂ ಇರುತ್ತಿರಲಿಲ್ಲ.ಇನ್ನು ಇಂತಹ ವಿಚಾರಗಳಲ್ಲಿ ಕನ್ನಡಿಗರು ತಮಿಳುನಾಡಿನ ಮುಖ್ಯಮಂತ್ರಿ ವಿರುದ್ಧ ಕುತಂತ್ರ ನಡೆಸಬಹುದು ಎನ್ನಲು ಇರಬಹುದಾದ ಒಂದೇ ಒಂದು ಕಾರಣವೆಂದರೆ ಅದು ಕಾವೇರಿ ನದಿ ವಿವಾದ.ಆದರೆ ಈ ಕಾರಣಕ್ಕೆ ನ್ಯಾಯಾಧೀ ಶರೇ ಪ್ರಭಾವಿತರಾಗಿದ್ದಾರೆ ಎನ್ನುವುದು ಮೂರ್ಖತನದ ಪರಮಾವಧಿ.

ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಸೌಹಾರ್ದಯುತ ಸಂಬಂಧ ಸುಧಾರಿಸಲು ಕರ್ನಾಟಕ ಮಾಡಿರುವ ಪ್ರಯತ್ನಗಳೇನೂ ಕಡಿಮೆಯಲ್ಲ.ಹಿಂದೆ ಕಾವೇರಿ ನ್ಯಾಯಾಧಿಕರಣದ ತೀರ್ಪು ಹೊರಬಿದ್ದು ಹಿಂಸಾಚಾರ ಭುಗಿಲೆದ್ದಾಗಲೂ ಕನ್ನಡಿಗರು ಸಂಯಮ ದಿಂದ ವರ್ತಿಸಿದ್ದನ್ನು ಮರೆಯುವಂತಿಲ್ಲ. ಕನ್ನಡಿಗರು ಮತ್ತು ತಮಿಳಿಗರು ಬಾಂಧವ್ಯ ವೃದ್ಧಿಸಲು ಪರಸ್ಪರ ಸಹಕರಿಸಿದ್ದಾರೆ.
ಕೆಲವು ರಾಜಕಾರಣಿಗಳು ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿರಬಹುದೇ ಹೊರತು ಜನರೇ ಸಂಬಂಧವನ್ನು ಹಾಳುಗೆಡವಲು ಯತ್ನಿಸಿರುವ ಉದಾಹರಣೆಗಳು ಇಲ್ಲ ಎಂದೇ ಹೇಳಬೇಕು. ಕಾವೇರಿ ವಿವಾದದಲ್ಲಿ ತಮಿಳು ನಾಡು, ತನಗೆ ನೀರಿನ ಅವಶ್ಯಕತೆ ಇಲ್ಲದಿದ್ದರೂ ರಾಜಕೀಯವಾಗಿ ವಿವಾದ ಸೃಷ್ಟಿಸುತ್ತಿದ್ದುದು ನಿಜ.ಅದಕ್ಕೆ ಕನ್ನಡಿಗರಿಗೆ ತಮಿಳುನಾಡಿನ ರಾಜಕಾರಣದ ಬಗ್ಗೆ ಆಕ್ರೋಶವಿದೆ. ಆದರೆ ಅದನ್ನೇ ತಮಿಳರ ವಿರುದ್ಧದ ಆಕ್ರೋಶ ಎಂದು ಹೇಳುವುದು ಸರ್ವಥಾ ಸರಿಯಲ್ಲ.

ಇನ್ನು ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ರಾಜಕಾರಣದಲ್ಲಿ ಜಯಲಲಿತಾ ಅವರು ದುರಂತ ನಾಯಕಿಯಾಗಿ ಗೋಚರಿಸುತ್ತಾರೆ.ಎಂಜಿಆರ್ ಅವರ ಜೊತೆಗಿನ ಒಡನಾಟದಿಂದಾಗಿ ಜಯಲಲಿತಾ ಅವರಿಗೆ ರಾಜಕಾರಣದ ಗೀಳು ಬೆಳೆಯಿತೇ ಹೊರತು ಅವರು ಚಾಣಾಕ್ಷತನದಿಂದೇನೂ ತಮಿಳುನಾಡು ರಾಜಕಾರಣದಲ್ಲಿ ಮೇಲೇರಲಿಲ್ಲ.ತಮಿಳುನಾಡಿನಲ್ಲಿದ್ದ ರಾಜಕೀಯ ಶೂನ್ಯವನ್ನು ಅವರು ಭರ್ತಿ ಮಾಡಿದ್ದರಷ್ಟೇ.ಇನ್ನು ಅವರು ಅಕ್ರಮ ಆಸ್ತಿ ಗಳಿಕೆಯ ವಿಷಯದಲ್ಲಿ ಸ್ವಲ್ಪವೂ ಯೋಚನೆ ಮಾಡಿರಲಿಲ್ಲ ಎನ್ನುವುದು ಸ್ಪಷ್ಟ. ಜನರ ಬೆಂಬಲದ ಮುಂದೆ ತನಗೆ ಬೇರಾವುದೂ ಮುಖ್ಯವಾಗದು ಎನ್ನುವ ಅವರ ಕಲ್ಪನೆಯೂ ತಪ್ಪು ಎನ್ನುವುದು ಅವರಿಗೆ ಈಗ ಅರ್ಥವಾಗಿದೆ.ಆದರೆ ಕಾಲ ಮಿಂಚಿಹೋಗಿದೆ.

ದೇಶದ ಬಹುತೇಕ ರಾಜಕಾರಣಿಗಳ ಬಗ್ಗೆ ಜನರಿಗೆ ಇರುವ ಭಾವನೆಯ ಪ್ರತಿಬಿಂಬವಾಗಿ ಜಯಲಲಿತಾ ಅವರ ಮೇಲಿನ ಆರೋಪಗಳು ಕಂಡುಬಂದಿದ್ದವು.ಈಗ ಅದೇ ಆರೋಪ ಸಾಬೀತಾಗಿ ಮುಖ್ಯಮಂತ್ರಿಯಾದವರು ಜೈಲಿಗೆ ಹೋಗುವಂತಾಗಿರುವುದು ನ್ಯಾಯ ವ್ಯವಸ್ಥೆಯ ಮೇಲೆ ಜನರಿಗಿರುವ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಭ್ರಷ್ಟಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರು ಹೇಗೋ ತಪ್ಪಿಸಿಕೊಳ್ಳುತ್ತಾರೆ ಎನ್ನುವ ಸಾರ್ವತ್ರಿಕ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿ ಜಯಲಲಿತಾ ಜೈಲು ಸೇರಿದ್ದಾರೆ.ನ್ಯಾಯ ವ್ಯವಸ್ಥೆಯನ್ನು ಮಾತ್ರವೇ ನಂಬಬೇಕಾದ ಇಂದಿನ ಪರಿಸ್ಥಿತಿಯಲ್ಲಿ ಈ ತೀರ್ಪನ್ನು ಗಮನಿಸಬೇಕೇ ಹೊರತು ಇಲ್ಲಿ ಭಾಷೆಯನ್ನು, ಭಾಷಿಕರನ್ನು ಎಳೆದುತರುವುದು ಕೂಡದು.ಆದ್ದರಿಂದಲೇ ಪೊಲೀಸರು ಜನರಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯದಲ್ಲಿ ತೊಡಗಿರುವುದು. ಇದು ಸ್ವಾಗತಾರ್ಹವೂ ಹೌದು.

ತಮಿಳುನಾಡು ರಾಜಕಾರಣಕ್ಕೆ ಇದೀಗ ಅನಿರೀಕ್ಷಿತ ತಿರುವು ಸಿಕ್ಕಿರಬಹುದು.ಆದರೆ ಸ್ವತಃ ಜಯಲಲಿತಾ ಅವರಿಗೂ ಇಂತಹ ತೀರ್ಪು ನಿರೀಕ್ಷೆಯಿತ್ತು.ಆದ್ದರಿಂದಲೇ ಅವರು ತಮ್ಮ ಸಂಪುಟ ಸಹೋದ್ಯೋಗಿಗಳನ್ನೂ ಬೆಂಗಳೂರಿಗೆ ಕರೆಸಿಕೊಂಡಿದ್ದರು.ಅವರೇ ನಿರೀಕ್ಷಿಸಿರುವ ತೀರ್ಪು ಬಂದ ಮೇಲೆ ಇದಕ್ಕೆ ಬೇರೆ ಯಾರೋ ಕಾರಣ ಎನ್ನುವುದರಲ್ಲಿ ಅರ್ಥವಾದರೂ ಏನಿದೆ?

ತಮಿಳುನಾಡಿಗೆ ಹೊಸ ಮುಖ್ಯಮಂತ್ರಿ ಆಯ್ಕೆಯಾದರೂ ಅವರ ಮೇಲೆ ಜಯಲಲಿತಾ ಅವರ ಪ್ರಭಾವ ಇದ್ದೇ ಇರುತ್ತದೆ.ಆದರೆ ಅದು ಈಗಿನ ಸರ್ಕಾರದ ಅವಧಿ ಮುಗಿಯುವ ತನಕ ಮಾತ್ರ.ಮುಂದಿನ ಚುನಾವಣೆಯಲ್ಲಿ ಜಯಲಲಿತಾ ಹೇಗೆ ಪ್ರಭಾವ ಬೀರಬಲ್ಲರು ಎನ್ನುವುದರ ಮೇಲೆ ತಮಿಳುನಾಡು ರಾಜಕಾರಣ ನಿಂತಿದೆ.

  • ಶಾಂತಾರಾಮ್ ಎಸ್.
   

1 Response to ಜಯಲಲಿತಾ ಪ್ರಕರಣ:ಅರ್ಥವಿಲ್ಲದ ಅಪಪ್ರಚಾರ

  1. S. N. Hebbar

    Please note this was the lady who had ordered the arrest and the prosecution of Pujya Shankaracharya of Kanchi Kamakot Peetam and the entire Mutt in 2004 framing false murder charges. The Swami was honourably acquitted of the charges after 9 years becauses the trial was conducted outside Tamil Nadu. This punishment is a divine one on this lady.

Leave a Reply