ಜಿಹಾದಿ ಐಸಿಸ್ ತನ್ನ ಗೋರಿ ತಾನೇ ತೋಡಿಕೊಳ್ಳುತ್ತಿದೆಯಾ?

ಭಾರತ - 0 Comment
Issue Date : 25.09.2014

ಅಲ್‌ಖೈದಾದಿಂದ ಸಿಡಿದ ಗುಂಪಾಗಿರುವ ಇರಾಕ್ ಮತ್ತು ಸಿರಿಯಗಳ ಇಸ್ಲಾಮಿಕ್ ರಾಜ್ಯ (ಐಎಸ್‌ಐಎಸ್) ಈ ವರ್ಷ ಪೂರ್ವಾರ್ಧದಲ್ಲಿ ಒಮ್ಮೆಲೇ ಮುಂಚೂಣಿಗೆ ಬಂದುಬಿಟ್ಟಿತು. ಉತ್ತರ ಇರಾಕ್‌ನ ಕೆಲವು ಪ್ರದೇಶಗಳ ಸ್ವಾಧೀನ ಮತ್ತು ಇರಾಕ್‌ಗೆ ಬೆದರಿಕೆ ಒಡ್ಡುವಲ್ಲಿನ ಅವರ ಅದ್ಭುತ ಸೇನಾ ಯಶಸ್ಸೇ ಅದಕ್ಕೆ ಕಾರಣ. ಸಿರಿಯದ ಕೆಲವು ಭಾಗದಲ್ಲಿ ಅದಕ್ಕೆ ಹಿಂದೆ ಇಂಥದೇ ಯಶಸ್ಸು ಲಭಿಸಿತ್ತು. ಐಎಸ್‌ನ ಜಿಹಾದಿ ಹೋರಾಟಗಾರರು ಇರಾಕಿ ಸೇನೆಯನ್ನು ಹಂತ ಹಂತವಾಗಿ ಮಣಿಸುತ್ತಾ ಹೋದ ವೃತ್ತಿಪರ ವಿಧಾನವನ್ನು ಕಂಡು ಜಗತ್ತು ಅಚ್ಚರಿಪಟ್ಟಿತು. ಹೆಚ್ಚಿನ ಸಂದರ್ಭಗಳಲ್ಲಿ ಇರಾಕಿ ಸೇನೆ ಪಲಾಯನಗೈದಿತು. ಅಥವಾ ಬಾಲ ಮುದುರಿಕೊಂಡು ಶರಣಾಯಿತು. ಪರಿಣಾಮವಾಗಿ ಐಎಸ್‌ಗೆ ಒಂದೆಡೆ ಭೂಮಿ ಸಿಕ್ಕಿದರೆ ಇನ್ನೊಂದೆಡೆ ಬೇಕಾಗುವ ಸಂಪತ್ತು, ಬಿಟ್ಟುಹೋದ, ಮುಂದಿನ ಯುದ್ಧಕ್ಕೆ ಬೇಕಾಗುವ ಸಂಪತ್ತು, ಸಲಕರಣೆಗಳು ಕೈಸೇರಿದವು; ಅದರಲ್ಲಿ ತೈಲಬಾವಿಗಳು ಕೂಡ ಸೇರಿವೆ.

ಬಹುಬೇಗ ಅದು ಜಗತ್ತಿನ ಅತ್ಯಂತ ಶ್ರೀಮಂತ ಜಿಹಾದಿ ಭಯೋತ್ಪಾದಕ ಸಂಘಟನೆ ಎನ್ನುವ ಹೆಸರು ಗಳಿಸಿಕೊಂಡಿತು. ಅದು ತನ್ನ ಈವರೆಗಿನ ಧಣಿ ಅಲ್‌ಖೈದಾವನ್ನು ಹಿಂದಿಕ್ಕಿ ಜಾಗತಿಕ ಜಿಹಾದ್‌ನ ನಾಯಕನಾದುದಲ್ಲದೆ ಪರಿಪೂರ್ಣ ಎನ್ನಬಹುದಾದ ಆಡಳಿತ (ಸರ್ಕಾರ )ವನ್ನು ಕೂಡ ನಡೆಸಿತು. ಈ ಯಶಸ್ಸಿನಿಂದ ಉತ್ಸಾಹಗೊಂಡ ಅದರ ನಾಯಕ ಅಬೂಬಕರ್ ಅಲ್‌ಬಗ್ದಾದಿ, ಒಂದು ಖಲೀಫ್ ರಾಜ್ಯ (ಖಲಿಫೇಟ್) ವನ್ನು ಸ್ಥಾಪಿಸಿರುವುದಾಗಿ ಘೋಷಿಸಿದ. ಅವನೇ ಖಲೀಫ್. ಆತನ ಭಯೋತ್ಪಾದಕರ ಸಂಘಟನೆ ರಾತ್ರಿ ಬೆಳಗಾಗುವುದರೊಳಗೆ ಇಸ್ಲಾಮಿಕ್ ರಾಜ್ಯ ಎನ್ನುವ ಹೆಸರನ್ನು ಗಳಿಸಿಕೊಂಡಿತು. ಆರಂಭದ ಗಾಬರಿಯ ಬಳಿಕ ಇಸ್ಲಾಮಿಕ್ ಜಗತ್ತಿಗೆ ಬಗ್ದಾದಿಯ ಘೋಷಣೆಯಿಂದ ಉಂಟಾಗಬಹುದಾದ ಸಮಸ್ಯೆಗಳು ಅರಿವಿಗೆ ಬಂದವು. ಖಲೀಫ್ ಪ್ರಭುತ್ವ ಈಗ ನ್ಯಾಯಬದ್ಧವೇ ಎಂಬ ಬಗ್ಗೆ ಗುಸುಗುಸು ಆರಂಭವಾಯಿತು; ಏಕೆಂದರೆ ಜಗತ್ತಿನ ಮುಸ್ಲಿಮರಲ್ಲಿ ಹೆಚ್ಚಿನವರು ಮತ್ತೆ ಮಧ್ಯಯುಗಕ್ಕೆ ಮರಳುವಂತಹ ಮನಃಸ್ಥಿತಿಯಲ್ಲೇನೂ ಇಲ್ಲ.

ಈ ಹೊಸ ರಾಕ್ಷಸನಿಂದ ಎದುರಾದ ಬೆದರಿಕೆಯ ಬಗ್ಗೆ ಜಗತ್ತಿನ ಎಲ್ಲ ವ್ಯೆಹಕರ್ತರು ಚಿಂತಿತರಾಗಿದ್ದಾರೆ ಮತ್ತು ಹೆಚ್ಚುತ್ತಿರುವ ಅದರ ಪ್ರಭಾವವನ್ನು ಮಟ್ಟಹಾಕುವ ಕುರಿತು ಚಿಂತಿಸುತ್ತಿದ್ದಾರೆ. ಆದರೆ ಐಎಸ್ ಯೋಧರ ಯುದ್ಧ ಮುಂದುವರೆಯುತ್ತಿದ್ದು, ಉತ್ತರ ಮತ್ತು ಪೂರ್ವ ಇರಾಕ್‌ನ ಪಟ್ಟಣಗಳು ಹಾಗೂ ತೈಲಬಾವಿಗಳು ಅದರ ವಶ ಆಗುತ್ತಲೇ ಇವೆ. ಕುರ್ಡಿಶ್ ಪ್ರದೇಶಕ್ಕೆ ಅದರ ಬೆದರಿಕೆ ಎದುರಾಗಿದೆ. ಅದು ಬಹುಬೇಗ ಒಂದು ‘ಆದರ್ಶ’ ಜಿಹಾದಿ ಸಂಘಟನೆ ಎನಿಸಿದ್ದು, ಅದರ ಮುಂದೆ ಅಲ್‌ಖೈದಾದಂತಹ ಅಲ್‌ಖೈದಾವೇ ಮಂಕಾಗಿ ಕೂತಿದೆ. ಹಲವು ಪುಟ್ಟ ಪ್ರಾದೇಶಿಕ ಮತ್ತು ಜಿಹಾದಿ ಗುಂಪುಗಳು ನಿಷ್ಠೆಯನ್ನು ಬದಲಾಯಿಸಿ ಅಬೂಬಕರ್ ಅಲ್‌ಬಗ್ದಾದಿಗೆ ‘ಉಧೋ’ ಎಂದವು ಮತ್ತು ಹೊಗಳುಭಟರಾಗಿ ತಾವು ಅವನ ಬಾಣಗಳು ಮಾತ್ರ ಎಂದು ಹೇಳಿಕೊಂಡವು. ನಿಧಾನವಾಗಿ ಯುರೋಪ್, ಅಮೆರಿಕ, ಆಸ್ಟ್ರೇಲಿಯವಲ್ಲದೆ ಏಷ್ಯಾ ಮತ್ತು ಆಫ್ರಿಕದ ಜಿಹಾದಿಗಳು ಕೂಡ ಐಎಸ್‌ನ ಬಾಲಂಗೋಚಿಗಳಾದವು.

ಐಎಸ್‌ನ ಯಶಸ್ಸಿನಲ್ಲಿ ಅದರ ಹೋರಾಟಗಾರರದ್ದು ಪ್ರಮುಖ ಪಾತ್ರ. ಅವರು ಮುಖ್ಯವಾಗಿ ಸದ್ದಾಂ ಹುಸೇನರ ಬಾತ್‌ಸೇನೆಗೆ ಸೇರಿದ್ದ ಸುನ್ನಿ ಯೋಧರು. ಅವರಿಗೆ ಉತ್ತಮ ಸಶಸ್ತ್ರ ತರಬೇತಿ ಸಿಕ್ಕಿದ್ದು, ಇರಾಕಿ ಸೇನೆಗೆ ಹೋಲಿಸಿದರೆ ಅವರಲ್ಲಿ ಒಂದು ಉದ್ದೇಶಕ್ಕಾಗಿ ಕಾದಾಡುವ ಕೆಚ್ಚಿದೆ; ಇರಾಕಿ ಸೇನೆಯ ಸಮಸ್ಯೆಯೆಂದರೆ ಅದರ ಯೋಧರಿಗೆ ಉತ್ತಮ ತರಬೇತಿ ಸಿಕ್ಕಿಲ್ಲ; ಅವರು ಪೌಷ್ಟಿಕ ಆಹಾರದಿಂದ ದಷ್ಟಪುಷ್ಟರಾಗಿಲ್ಲ; ಸಾಲದೆಂಬಂತೆ ಅವರೊಳಗೆ ಶಿಯಾ-ಸುನ್ನಿ ಜಗಳ ಕೂಡ ಇದೆ. ಈ ಸುನ್ನಿ ಜಿಹಾದಿಗಳ ವಿರುದ್ಧ ಹೋರಾಡಲು ಸುನ್ನಿ ಸೈನಿಕರು ನಿರಾಕರಿಸಿದ್ದಾರೆ. ಖಲೀಫ್ ರಾಜ್ಯವು ವಹಾಬಿ ಸಿದ್ಧಾಂತ ಮತ್ತು ತಕ್‌ಫಿರಿ ತತ್ತ್ವಶಾಸ್ತ್ರವನ್ನು ಆಧರಿಸಿದ್ದು, ಈಗಾಗಲೇ ತನ್ನ ನಿಜಬಣ್ಣವನ್ನು ತೋರಿಸಲಾರಂಭಿಸಿದೆ. ಶರೀಯತ್ ಶಾಸನವನ್ನು ಹೇರಲಾಗಿದೆ; ಸಿರಿಯದ ಪಟ್ಟಣ ರಖಾ ಅಧಿಕಾರದ ಕೇಂದ್ರಸ್ಥಾನವಾಗಿದ್ದು, ಖಲೀಫ್ ಈಗಾಗಲೇ ಆದೇಶಗಳನ್ನು ಹೊರಡಿಸುತ್ತಿದ್ದಾನೆ. ಸಂದೇಶ ಬಿಗಿಯಾದದ್ದೂ ಸ್ಪಷ್ಟವಾದದ್ದೂ ಆಗಿದೆ : ‘‘ಅನುಸರಿಸಿ ಅಥವಾ ನಾಶವಾಗಿ’’.
ಎಲ್ಲ ಮುಸ್ಲಿಮರು ತನ್ನಲ್ಲಿ ನಿಷ್ಠೆಯನ್ನು ಪ್ರಕಟಿಸಬೇಕೆಂದು ಅಬೂಬಕರ್ ಅಲ್ ಬಗ್ದಾದಿ ಯಾನೆ ಖಲೀಫ್ ಇಬ್ರಾಹಿಮ್ ಕರೆ ನೀಡುತ್ತಿದ್ದಾನೆ; ಜಗತ್ತಿನ ಎಲ್ಲ ಮುಸ್ಲಿಮರಿಗೆ ತಾನೇ ಖಲೀಫ್ ಹಾಗೂ ಇಮಾಮ್ ಎನ್ನುತ್ತಿದ್ದಾನೆ. ಇದರಿಂದ ಇತರ ಅರೇಬಿಯನ್ ಆಳ್ವಿಕೆದಾರರಿಗೆ ಭಯ ಉಂಟಾಗಿದೆ. ಈ ವಹಾಬಿ ಸಿದ್ಧಾಂತ ಸೌಮ್ಯವಾದಿ ಇರಾಕಿ ಸುನ್ನಿಗಳಿಗೆ ಇಷ್ಟವಿಲ್ಲ. ಶಿಯಾಗಳಂತೂ ಇದನ್ನು ಒಪ್ಪುವವರೇ ಅಲ್ಲ; ಕುರ್ದ್‌ಗಳು ಕೂಡ ಕ್ರಮೇಣ ದೂರ ಸರಿಯುತ್ತಿದ್ದಾರೆ.

ಎದುರಾಳಿಗಳನ್ನು ಮಣಿಸುವುದಕ್ಕಾಗಿ ವಿಪರೀತ ಹಿಂಸೆಯ ಮಾರ್ಗ ತುಳಿಯುವುದಕ್ಕೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಚಲಾವಣೆ ಸಿಗಲಾರದು. ಯಾಜಿದಿಗಳ ಸಾಮೂಹಿಕ ವಧೆ, ಮಹಿಳೆ ಮತ್ತು ಕ್ರೈಸ್ತರ ವಿರುದ್ಧ ದೌರ್ಜನ್ಯ ಮತ್ತು ಧಾರ್ಮಿಕ ಸ್ಥಳಗಳನ್ನು ನಾಶಮಾಡಿದ್ದರಿಂದ ಒಂದೆಡೆ ಹಲವರ ಸಿಟ್ಟಿಗೆ ಕಾರಣವಾದರೆ ಇನ್ನೊಂದೆಡೆ ಇಸ್ಲಾಮಿಕ್ ರಾಜ್ಯದ ವಿರುದ್ಧ ದ್ವೇಷ ಕೂಡ ಬೆಳೆದಿದೆ.
ಐಎಸ್‌ನ ಆಕರ್ಷಣೆ ಬಹುಬೇಗ ಕಳೆಗುಂದಲಾರಂಭಿಸಿದೆ. ಮೋಸುಲ್‌ನಲ್ಲಿ ಅದು ಕ್ರೈಸ್ತರ ಮೇಲೆ ಜಿಜಿಯಾ (ತಲೆಗಂದಾಯ) ವಿಧಿಸಿತು. ಅದರಿಂದಾಗಿ ದೊಡ್ಡ ಸಂಖ್ಯೆಯ ಜನ ಊರು ಬಿಟ್ಟರು. ಇರಾಕಿ ಮಹಿಳೆಯರ ವಿರುದ್ಧ ಖಲಿಫೇಟ್ ಹೊರಡಿಸಿದ ಆದೇಶದಲ್ಲಿ ಸ್ತ್ರೀ ಜನನಾಂಗವನ್ನು ಊನಗೊಳಿಸುವುದು, ಪೂರ್ಣ ಬುರ್ಖಾ ಹೊಲಿಸದಿರುವ (ಆಕಾರರಹಿತ ) ಬಟ್ಟೆಗಳು ಮತ್ತು ಸುಗಂಧದ್ರವ್ಯ ಬಳಸಬಾರದು ಇತ್ಯಾದಿ ಸೇರಿವೆ. ಪ್ರಸಿದ್ಧ ವ್ಯಕ್ತಿಗಳ ಶಿಲ್ಪಗಳನ್ನು ಮತ್ತು ಪವಿತ್ರ ತಾಣಗಳನ್ನು ಧ್ವಂಸಗೊಳಿಸಲಾಗಿದೆ. ಸಾಮೂಹಿಕ ವಧೆ ಮತ್ತು ವ್ಯಕ್ತಿಗಳ ಹತ್ಯೆಯನ್ನು ಚಿತ್ರೀಕರಿಸಿದ ಈ ರಕ್ಕಸರು ಸಾಮಾಜಿಕ ಮಾಧ್ಯಮ ತಾಣಗಳಿಗೆ ಅವುಗಳನ್ನು ರವಾನಿಸಿದ್ದಾರೆ.

ಅವರು ಹಬ್ಬಿಸಬಯಸುವ ಸಂದೇಶ ಸ್ಪಷ್ಟ, ದ್ವಂದ್ವಾತೀತ ಮತ್ತು ತಾರಕಸ್ವರದ್ದು. ಅವರ ಸಿದ್ಧಾಂತಗಳನ್ನು ಒಪ್ಪದಿರುವವರಿಗೆ ಖಲೀಫ್ ರಾಜ್ಯದಲ್ಲಿ ಜಾಗವಿಲ್ಲ. ಆರಂಭದಲ್ಲಿ ಕೆಲವರ ಮೆಚ್ಚುಗೆ ಗಳಿಸಿದ್ದ ಖಲೀಫ್ ರಾಜ್ಯ ಈಗ ದ್ವೇಷದ ಪ್ರತೀಕವೆನಿಸಿದೆ. ಸುಮಾರು 300 ಜನ ಯಜಿದಿ ಮಹಿಳೆಯರನ್ನು ಅಪಹರಿಸಿ ಸಿರಿಯಕ್ಕೆ ಸಾಗಿಸಿದರು. ಅವರಲ್ಲಿ ಹಲವರನ್ನು ಬಲಾತ್ಕಾರವಾಗಿ ಮತಾಂತರಿಸಿದರೆ ಕೆಲವರನ್ನು ಐಎಸ್ ಜಿಹಾದಿಗಳಿಗೆ ಮಾರಾಟ ಮಾಡಿದರು.

ಇಸ್ಲಾಮಿಕ್ ರಾಜ್ಯದ ‘ವಧಾ ಕಾರ್ಯಸೂಚಿ’ ಇರಾಕ್‌ನ ವಶವಾದ ಪ್ರದೇಶಗಳಿಗೆ ಸೀಮಿತವಾಗಿರಲಿಲ್ಲ; ಅದು ಸಿರಿಯಕ್ಕೂ ವಿಸ್ತರಿಸಿತ್ತು. ಅಲ್ಪಸಂಖ್ಯಾತರ ವಿರುದ್ಧ ತೀವ್ರ ಸ್ವರೂಪದ ಹಿಂಸೆ ಮತ್ತು ದೌರ್ಜನ್ಯವನ್ನು ಪ್ರಯೋಗಿಸಿದ ಕಾರಣ ಅಂತಾರಾಷ್ಟ್ರೀಯ ಸಮುದಾಯ ಗಾಬರಿಗೊಂಡಿದೆ. ಉದ್ದೇಶಿತ ದೇಶಗಳ ‘ಪೂರ್ತಿ ಇಸ್ಲಾಮೀಕರಣ’ ಮಾಡಬೇಕೆಂದು ಖಲೀಫ್ ರಾಜ್ಯ ಪಂಚವಾರ್ಷಿಕ ಯೋಜನೆಯನ್ನು ಪ್ರಕಟಿಸಿರುವುದು ಕೂಡ ಕಳವಳ ಮೂಡಿಸಿದೆ. ತಮ್ಮ ಇಸ್ಲಾಮಿಕ್ ರಾಜ್ಯದ ಪ್ರಕಾರ ಯಾವೆಲ್ಲ ದೇಶಗಳು ಇಸ್ಲಾಮ್‌ನ ಶತ್ರುಗಳೆಂದು ಖಲೀಫ್ ಇಬ್ರಾಹಿಮ್ ಯಾನೆ ಅಲ್ ಬಗ್ದಾದಿ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದ್ದಾನೆ; ಅದರಲ್ಲಿ ಭಾರತದ ಹೆಸರು ಕೂಡ ಇದೆ. ಈ ದೇಶಗಳ ಮುಸ್ಲಿಮರು ದಂಗೆಯೆದ್ದು, ತಮ್ಮ ದೇಶಗಳ ವಿರುದ್ಧ ಜಿಹಾದ್ ನಡೆಸಬೇಕೆಂದು ಆತ ಆದೇಶ ಹೊರಡಿಸಿದ್ದಾನೆ.

ಈ ಜಾಗತಿಕ ಜಿಹಾದ್‌ನ ಕರೆ ತನ್ನದೇ ಪರಿಣಾಮ ಬೀರಲಾರಂಭಿಸಿದೆ. ಸೌದಿ ಸರ್ಕಾರ ಈ ಗುಂಪಿಗೆ ಬೆಂಬಲ ನೀಡುತ್ತಿತ್ತೆಂದು ನಂಬಲಾಗಿದ್ದು,ಅದು ಕಳವಳಕ್ಕೆ ಗುರಿಯಾದಂತೆ ಕಾಣಿಸುತ್ತಿದೆ. ಇತರ ಕೊಲ್ಲಿರಾಷ್ಟ್ರಗಳ ಕಥೆಯೂ ಭಿನ್ನವಲ್ಲ. ಸರ್ಕಾರವೇ ಅಲ್ಲದ ವ್ಯಕ್ತಿಗಳು ಆಳ್ವಿಕೆ ನಡೆಸುವ ಒಂದು ಇಸ್ಲಾಮಿಕ್ ರಾಜ್ಯ ತಲೆಎತ್ತಿರುವುದು ‘ರಾಷ್ಟ್ರ-ಸರ್ಕಾರ’ ಎನ್ನುವ ಪರಿಕಲ್ಪನೆಗೇ ಸವಾಲೆಸೆಯುವಂತಿದೆ. ಈ ಗುಂಪನ್ನು ತಡೆಯದಿದ್ದಲ್ಲಿ ಇರಾಕ್ ಮತ್ತು ಸಿರಿಯದಲ್ಲಿ ಏನನ್ನು ಮಾಡಿದರೋ ಅದು ಮುಂದೆ ಪಾಶ್ಚಾತ್ಯ ದೇಶಗಳ ವಿರುದ್ಧ ನಡೆಯಬಹುದೆಂದು ಸೌದಿ ಅರೇಬಿಯದ ದೊರೆ ಅಬ್ದುಲ್ಲಾ ಒಂದು ಗುಪ್ತ ಸಂದೇಶದಲ್ಲಿ ಆ ರಾಷ್ಟ್ರಗಳನ್ನು ಎಚ್ಚರಿಸಿದ್ದಾರೆ. ಒಂದು ಗುಂಪು, ಕೇವಲ ಅಲ್‌ಖೈದಾದಿಂದ ಸಿಡಿದ ಒಂದು ಗುಂಪಾಗಿದ್ದ ಅದು ಈಗ ಒಂದು ಪೆಡಂಭೂತವಾಗಿ ಎದುರಾಗಿದೆ.

ವಿದೇಶಿ ಜಿಹಾದಿಗಳಾಗಿ ಐಎಸ್ ಜೊತೆ ಸೇರಿಕೊಂಡು ಕಾದಾಡುತ್ತಿರುವ ತಮ್ಮ ದೇಶದ ನಾಗರಿಕರ ವಿಷಯದಲ್ಲಿ ಕೂಡ ವಿವಿಧ ದೇಶಗಳು ಚಿಂತಿತವಾಗಿವೆ. ಇಸ್ಲಾಮಿಕ್ ರಾಜ್ಯದ ಕ್ರೂರ ಸಿದ್ಧಾಂತದಿಂದ ‘ತಲೆ ತೊಳೆಸಿಕೊಂಡ ’ ಆ ಜಿಹಾದಿಗಳು ತಮ್ಮ ದೇಶಕ್ಕೆ ಮರಳಿದ ಮೇಲೆ ಏನು ಮಾಡಬಹುದೆಂಬುದು ದಿಗಿಲು ಮೂಡಿಸಿದೆ. ಆ ಗುಂಪನ್ನು ಮಟ್ಟ ಹಾಕಬೇಕೆಂಬ ಜಾಗತಿಕ ಅಭಿಪ್ರಾಯ ಬಲಗೊಳ್ಳುತ್ತಿದೆ. ಅಮೆರಿಕ ಸಕ್ರಿಯವಾದಂತೆ ಕಾಣಿಸುತ್ತಿದ್ದು, ಅಮೆರಿಕದ ಹಸ್ತಕ್ಷೇಪ ಇನ್ನೊಮ್ಮೆ ನಡೆಯಬಹುದೇ ಎಂಬ ಊಹೆ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ತನ್ನ ಭೂಸೇನೆಯನ್ನು ತೊಡಗಿಸಬಾರದೆನ್ನುವುದು ಅಮೆರಿಕದ ನಿರ್ಧಾರ. ಆದರೆ ಕ್ರಮ ಕೈಗೊಳ್ಳುವಲ್ಲಿ ತಡಮಾಡಬಾರದೆಂದು ಅಮೆರಿಕದ ಮೇಲೆ ಭಾರೀ ಒತ್ತಡ ಬರುತ್ತಿದೆ. ಆ ಪ್ರದೇಶದ ರಾಜಕೀಯದ ಕಾರಣದಿಂದಾಗಿ ಕೂಡ ಅಮೆರಿಕ ನೇರವಾಗಿ ಭಾಗಿಯಾಗದಿರಲು ಯೋಚಿಸುತ್ತಿದೆ ಎನ್ನಲಾಗಿದೆ.

ಇನ್ನೊಂದೆಡೆ ಐಎಸ್ ಜಿಹಾದಿಗಳು ಅಲ್ಪಸಂಖ್ಯಾತರ ವಿರುದ್ಧ ತಮ್ಮ ದೌರ್ಜನ್ಯ ವನ್ನು ಮುಂದುವರಿಸುತ್ತಲೇ ಇದ್ದಾರೆ. ಅವರ ಸಿದ್ಧಾಂತ ಒಪ್ಪಿಗೆಯಾಗದಿರುವ ಕಾರಣ ಬಹಳಷ್ಟು ಸುನ್ನಿ ಸಂಘಟನೆಗಳು ಐಎಸ್‌ನಿಂದ ದೂರ ಸರಿದಿವೆ. ಅಮೆರಿಕ ವೈಮಾನಿಕವಾಗಿ ಮಧ್ಯಪ್ರವೇಶ ಮಾಡುವ ಬಗ್ಗೆ ಆದೇಶ ಹೊರಡಿಸಿದೆ ಮತ್ತು ವೈಮಾನಿಕ ದಾಳಿಯ ಮೂಲಕ ಗುಂಪಿನ ಬೆನ್ನು ಮುರಿಯುವ ಉಪಕ್ರಮ ಆರಂಭವಾಗಿದೆ.

ಅಮೆರಿಕದ ಬಾಂಬ್ ದಾಳಿಗೆ ಪ್ರತೀಕಾರವಾಗಿ ಐಎಸ್ ತಾನು ಸೆರೆಹಿಡಿದ ಅಮೆರಿಕದ ಪತ್ರಕರ್ತ ಜೇಮ್ಸ್ ಫಾಲಿ ಅವರನ್ನು ಅತ್ಯಂತ ಕ್ರೂರವಾಗಿ ದಂಡಿಸಿದೆ. ಮುಗ್ಧ ಅಮೆರಿಕದ ಪ್ರಜೆಯನ್ನು ವಧಿಸುವುದನ್ನು ವಿಡಿಯೋದಲ್ಲಿ ಸವಿವರವಾಗಿ ಚಿತ್ರೀಕರಿಸಿದೆ. ಇದರಿಂದ ಇಡೀ ಜಗತ್ತೇ ಆಘಾತಗೊಂಡಿದೆ; ಅಮೆರಿಕವಂತೂ ಕೆಂಡಾಮಂಡಲವಾಗಿ ಹಲ್ಲು ಕಡಿಯುತ್ತಿದೆ. ಗುಂಪು ಅಮೆರಿಕಕ್ಕೆ ನೇರವಾಗಿ ಸವಾಲೊಡ್ಡುವ ಪ್ರಮುಖ ತಪ್ಪು ಮಾಡಿದೆ. ಅಲ್‌ಖೈದಾ ಅಂಥದೇ ಉಡಾಫೆ ಮಾಡಿದ್ದರ ಪರಿಣಾಮವನ್ನು ಕಂಡಾದರೂ ಗುಂಪು ತಾಳ್ಮೆ ವಹಿಸಬಹುದಿತ್ತು. ಆದರೆ ಅದಕ್ಕೆ ಅಲಕ್ಷ್ಯವೇ ಇಷ್ಟವಾಯಿತು. ಈಗ ಪೆಡಂಭೂತದ ದಮನ ಕಾರ್ಯಕ್ಕೆ ಕಾಲಕೈಗೂಡಬಹುದು ಎನಿಸುತ್ತದೆ.

‘‘ಅಮೆರಿಕಕ್ಕೆ ಮರೆವು ಎಂಬುದಿಲ್ಲ; ನಮ್ಮ ಕೈ ಸಾಕಷ್ಟು ಉದ್ದವಿದೆ. ನಾವು ತಾಳ್ಮೆ ಕೆಡುವುದಿಲ್ಲ. ನ್ಯಾಯವನ್ನು ಪಡೆಯದೆ ಇರುವುದೂ ಇಲ್ಲ’’ ಎಂದಿದ್ದಾರೆ ಒಬಾಮ. ಅಮೆರಿಕದ ಪ್ರಜೆಗಳಿಗೆ ಹಾನಿ ಎಸಗಿದವರನ್ನು ಬೆತ್ತಲು ಏನು ಮಾಡಬೇಕೋ ಅದನ್ನು ಅಮೆರಿಕ ಮಾಡಿಯೇ ತೀರುತ್ತದೆ ಎಂದವರು ಹೇಳಿದ್ದಾರೆ. ಆದರೆ ಈ ಇಸ್ಲಾಮಿಕ್ ರಾಜ್ಯವನ್ನು ಮಣಿಸಲು ಅಮೆರಿಕದ ಕಾರ್ಯತಂತ್ರ ಏನು ಎಂಬ ಗುಟ್ಟನ್ನು ಒಬಾಮ ಬಿಟ್ಟುಕೊಟ್ಟಿಲ್ಲ.


ಇರಾಕ್ ಮತ್ತು ಸಿರಿಯದಲ್ಲಿನ ಐಎಸ್‌ನ ದುಷ್ಟ ಸಂಚುಗಳನ್ನು ವಿಫಲಗೊಳಿಸುವುದು ಅನಿವಾರ್ಯ. ಸಿರಿಯದ ವಿಷಯದಲ್ಲಿ ಒಬಾಮ ಅವರಿಗೆ ದ್ವಂದ್ವ ಇರುವ ಕಾರಣ ಅಮೆರಿಕದ ಒಟ್ಟಾರೆ ಕಾರ್ಯತಂತ್ರ ಪ್ರಕಟಣೆಗೆ ಅಡ್ಡಿಯಾಗಿದೆ. ಆದರೆ ಅಮೆರಿಕದ ಅಧಿಕಾರಿಗಳು ಐಎಸ್ ವಿರುದ್ಧ ಸೆಣಸಲು ಜಾಗತಿಕ ‘ಮೈತ್ರಿಕೂಟ’ವೊಂದನ್ನು ಕಟ್ಟಲು ಶ್ರಮಿಸುತ್ತಿದ್ದಾರೆ. ಮೈತ್ರಿಸೇನೆಯ (ಮುಖ್ಯವಾಗಿ ಕೊಲ್ಲಿರಾಷ್ಟ್ರಗಳು ಮತ್ತು ಟರ್ಕಿ) ಮೂಲಕ ಇರಾಕಿ ಸೇನೆಯನ್ನು ಬಲಪಡಿಸುವುದು, ವೈಮಾನಿಕ ದಾಳಿ, ಗುಂಪಿನ ಕೆಲವು ನಾಯಕರ ವಧೆ, ವಿಶ್ವ ಸಂಸ್ಥೆ ಮೂಲಕ ದಿಗ್ಬಂಧ, ಇರಾಕ್‌ನ ಆಳ್ವಿಕೆ ಬದಲಾವಣೆ ಮುಂತಾಗಿ ಅಮೆರಿಕ ತಂತ್ರ ರೂಪಿಸುವ ನಿರೀಕ್ಷೆಯಿದೆ. ‘ಇಸ್ಲಾಮಿಕ್ ರಾಜ್ಯ’ಕ್ಕೆ ಅಂತ್ಯ ಹಾಡಲೇಬೇಕೆಂಬ ತೀರ್ಮಾನವಂತೂ ಕಾಣಿಸುತ್ತಿದೆ.

  • ಬ್ರಿಗೇಡಿಯರ್ ಅನಿಲ್ ಗುಪ್ತ( ನಿವೃತ್ತ)
  • ಅನು : ಮಂಜುನಾಥ ಭಟ್ ಎಸ್.
   

Leave a Reply